ಹಾಸನಾಂಬೆ ಮಹಿಮೆ ಅಪಾರ

Hasananbe
Published on

ಪ್ರತಿ ವರ್ಷ ಆಶ್ವೀಜ ಮಾಸದ ಹುಣ್ಣಿಮೆ ನಂತರ ಬರುವ ಗುರುವಾರ ಅತಿ ವಿಶೇಷವಾದದ್ದು. ಅದು ಹಾಸನಾಂಬೆ ದೇವಿಯ ದೇವಾಲಯದ ದರ್ಶನ ಆರಂಭವಾಗುವ ದಿನ. ಅಂದಿನಿಂದ ದೇವಿಯ ದರ್ಶನದ ಭಾಗ್ಯ 8ರಿಂದ 9 ದಿನಗಳು ಮಾತ್ರ. ಈ ಬಾರಿ ಅ. 28ರಿಂದ ನ. 6ವರೆಗೆ ದರ್ಶನ ಇರಲಿದೆ. ಅಂದರೆ ಬಲಿ ಪಾಡ್ಯಮಿ ದಿನದವರೆಗೆ. ಅಂದು ದೇವಾಲಯದ ಬಾಗಿಲು ಮುಚ್ಚಿದರೆ ಮುಂದಿನ ವರ್ಷದ ಆಶ್ವೀಜ ಮಾಸದ ಹುಣ್ಣಿಮೆ ನಂತರ ಬರುವ ಗುರುವಾರದಂದೇ ಮತ್ತೆ ಬಾಗಿಲು ತೆರೆಯುತ್ತದೆ.

| ಮಂಡಗದ್ದೆ ಪ್ರಕಾಶ ಬಾಬು ಕೆ.ಆರ್.

ಕಲ್ಲು ಕೂಡ ಕಥೆ ಹೇಳುತ್ತದೆ ಎಂಬುದಕ್ಕೆ ಹಾಸನಾಂಬೆ ದೇವಾಲಯದಲ್ಲಿರುವ ಕಲ್ಲುಗಳೇ ಸಾಕ್ಷಿ. ಈ ಊರಿನ ಅತ್ತೆಯೊಬ್ಬಳು ಪ್ರತಿ ನಿತ್ಯ ಸೊಸೆಗೆ ತೊಂದರೆ ಕೊಡುತ್ತಿದ್ದಳಂತೆ. ಆ ಸೊಸೆಯು ನಿತ್ಯವೂ ಹಾಸನಾಂಬೆ ದೇವಿ ಬಳಿ ಬಂದು ತನ್ನ ಕಷ್ಟ ಪರಿಹರಿಸುವಂತೆ ಪ್ರಾರ್ಥಿಸುತ್ತಿದ್ದಳು. ಒಮ್ಮೆ ಅತ್ತೆ ಸೊಸೆಯನ್ನು ಹಿಂಬಾಲಿಸಿದಾಗ ಆಕೆ ದೇವಿಯ ಮುಂದೆ ಪ್ರಾರ್ಥಿಸುತ್ತಿದ್ದುದನ್ನು ಕಂಡಳು. ಆಗ ಅತ್ತೆ ಸಿಟ್ಟಿನಿಂದ ಸೊಸೆಯ ತಲೆಗೆ ಹೊಡೆದಳು. ತಕ್ಷಣ ಸೊಸೆ ದೇವಿಯನ್ನು ಪ್ರಾರ್ಥಿಸಿದಳು. ದೇವಿಯು ಭಕ್ತೆಯ ಕಷ್ಟವನ್ನು ನೋಡಲಾರದೆ ತನ್ನ ಸನ್ನಿಧಿಯಲ್ಲಿ ಯಾವಾಗಲೂ ಎದುರಿಗೆ ಕಾಣುವಂತೆ ಇರು ಎಂದು ಹರಸಿ ಆಕೆಯನ್ನು ಕಲ್ಲಾಗಿ ನೆಲೆಸುವಂತೆ ಮಾಡಿದಳು. ಪ್ರತಿವರ್ಷವೂ ಒಂದು ಭತ್ತದ ಕಾಳಿನ ಗಾತ್ರದಷ್ಟು ದೇವಿಯ ಕಡೆ ಈ ಭಕ್ತೆ ಚಲಿಸುವಳೆಂಬ ಪ್ರತೀತಿಯಿದೆ.

ಭಕ್ತರಿಗೆ ವ್ಯವಸ್ಥೆ ಏನು?

ದೇವಾಲಯದ ಎಂಟು ಕಡೆ ಶಾಮಿಯಾನ, ಆಸನದ ವ್ಯವಸ್ಥೆ, ಎಲ್​ಇಡಿ ಪರದೆಗಳಲ್ಲಿ ಭಕ್ತರು ಪೂಜಾ ಕಾರ್ಯ ವೀಕ್ಷಿಸಲು ಅವಕಾಶವಿರುತ್ತದೆ. ಹೊರ ಊರಿನಿಂದ ಬರುವ ಭಕ್ತರ ಅನುಕೂಲಕ್ಕೆ ಆನ್​ಲೈನ್ ವೀಕ್ಷಣೆಗೂ ವ್ಯವಸ್ಥೆ ಇರುತ್ತದೆ. ಹಾಸನಾಂಬೆ ನಾನಾ ರೂಪಗಳಲ್ಲಿ, ಆಕಾರಗಳಲ್ಲಿ, ವರ್ಣಗಳಲ್ಲಿ ನೆನೆದವರ ಮನದಲ್ಲಿ, ಬೇಡಿದವರ ಕರದಲ್ಲಿ, ಭಕ್ತಿಯಿಂದ ಪೂಜಿಸಿದವರ ಬದುಕಿನಲ್ಲಿ ನೆಲೆಸಿ ಭಕ್ತರ ಸಂಕಷ್ಟಗಳನ್ನು ಪರಿಹರಿಸುತ್ತಿದ್ದಾಳೆ.

ಗರ್ಭಗುಡಿಯಲ್ಲಿರುವ ದೀಪ, ಹೂವು, ನೈವೇದ್ಯದ ವಿಶೇಷ

ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚುವ ದಿವಸ ಹಚ್ಚಿದ ದೀಪ ಮುಂದಿನ ವರ್ಷ ಬಾಗಿಲು ತೆಗೆಯುವವರೆಗೂ ಆರದೆ ಬೆಳಗುತ್ತಿರುವುದು ಇಲ್ಲಿನ ವಿಶೇಷ. ಕೊನೆಯ ದಿನ ಪೂಜಿಸಿದ ಹೂಗಳು ಕೂಡ ಒಂದು ವರ್ಷ ಬಾಡದೆ ಇರುತ್ತವೆ. ಅಷ್ಟೇ ಅಲ್ಲ, ಅಂದು ಮಾಡಿದ ನೈವೇದ್ಯವೂ ವರ್ಷ ಕಾಲ ಹಾಳಾಗದೆ ಹಾಗೆಯೇ ಇರುವುದು ಆಶ್ಚರ್ಯವಾದರೂ ಸತ್ಯ. ಇದನ್ನು ನೋಡಲು ಅಂದು ಸಹಸ್ರಾರು ಭಕ್ತರು ಸೇರುತ್ತಾರೆ. ಕ್ಷೇತ್ರದ ಧಾರ್ವಿುಕ ಸಂಪ್ರದಾಯದ ಪ್ರಕಾರ, ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಹಾಸನಾಂಬೆ ದೇವಾಲಯದ ಗರ್ಭ ಗುಡಿಯ ಬಾಗಿಲು ತೆರೆಯಲಾಗುತ್ತದೆ. ನಂತರ 9 ದಿನಗಳ ಕಾಲ ಭಕ್ತರಿಗೆ ದರ್ಶನದ ಭಾಗ್ಯ ಲಭಿಸುತ್ತದೆ. ನವೆಂಬರ್ 6ರಂದು ಮಧ್ಯಾಹ್ನ 12 ಗಂಟೆಗೆ ಗರ್ಭ ಗುಡಿಯ ಬಾಗಿಲು ಮುಚ್ಚಲಾಗುತ್ತದೆ. ಆ 9 ದಿನಗಳ ಕಾಲ ಹಾಸನಾಂಬೆಯ ಹಾಗೂ ಸಿದ್ಧೇಶ್ವರ ಸ್ವಾಮಿಯ ಜಾತ್ರೆ ನಡೆಯುತ್ತದೆ. ಆ ಸಮಯದಲ್ಲಿ ನಮ್ಮ ರಾಜ್ಯದ ಭಕ್ತರಲ್ಲದೆ ಹೊರ ರಾಜ್ಯಗಳ ಭಕ್ತರು ಕೂಡ ಬಂದು ದೇವಿಯ ದರ್ಶನವನ್ನು ಪಡೆಯುತ್ತಾರೆ. ಈಗಂತೂ ಕೋವಿಡ್-19 ಸಾಂಕ್ರಾಮಿಕದ ಭಯ ಇರುವುದರಿಂದ ಅದಕ್ಕೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ಪಾಲಿಸಿಯೇ ಎಲ್ಲ ಕಾರ್ಯಕ್ರಮಗಳು ನಡೆಯುತ್ತವೆ.

ದರ್ಶನಕ್ಕೆ ಬರುವ ಭಕ್ತರು ಗಮನಿಸಿ

ಈ ಸಲ ಹಾಸನಾಂಬೆ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಆಧಾರ್ ಅಥವಾ ವೋಟರ್ ಐಡಿ ಹಾಗೂ ಎರಡೂ ಡೋಸ್ ಕರೊನಾ ನಿರೋಧಕ ಲಸಿಕೆ ಪಡೆದಿರುವ ಪ್ರಮಾಣಪತ್ರ ಕಡ್ಡಾಯಗೊಳಿಸಲಾಗಿದೆ. ಭಕ್ತರು ಸರದಿ ಸಾಲಿನಲ್ಲಿ ನಿಲ್ಲುವ ಮುಂಚೆ ಆರೋಗ್ಯ ಇಲಾಖೆಯ ಕೌಂಟರ್​ನಲ್ಲಿ ತಮ್ಮ ಗುರುತಿನ ಚೀಟಿ ಹಾಗೂ ಪ್ರಮಾಣಪತ್ರ ನೀಡಿ ಒಪ್ಪಿಗೆ ಪಡೆದುಕೊಳ್ಳಬೇಕು. ಧರ್ಮದರ್ಶನದ ಜತೆಗೆ, ದೇವಾಲಯದ ಹಿಂಭಾಗದಿಂದ ಪ್ರವೇಶ ನೀಡುವ ವಿಶೇಷ ದರ್ಶನದ 300 ರೂ. ಹಾಗೂ ರಾಜಗೋಪುರದ ಮೂಲಕ ಪ್ರವೇಶ ನೀಡುವ ನೇರ ದರ್ಶನದ 1000 ರೂ. ಮೊತ್ತದ ಟಿಕೆಟ್ ವ್ಯವಸ್ಥೆ ಕಲ್ಪಿಸಲಾಗಿದೆ. ದೀರ್ಘ ಸಮಯದವರೆಗೆ ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ಬಂದಲ್ಲಿ ಕುಳಿತುಕೊಳ್ಳಲು ನಿರೀಕ್ಷಣಾ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ.

ದರ್ಶನೋತ್ಸವ ಆರಂಭ

ಹಾಸನಾಂಬೆ ದರ್ಶನೋತ್ಸವಕ್ಕೆ ಅ. 28ರ ಮಧ್ಯಾಹ್ನ 12.30ಕ್ಕೆ ಚಾಲನೆ ದೊರೆಯಲಿದೆ. ಅ. 28 ಹಾಗೂ ನ. 6ರಂದು ಸಾರ್ವಜನಿಕ ದರ್ಶನಕ್ಕೆ ಅವಕಾಶವಿಲ್ಲ. ಉಳಿದ ದಿನಗಳಲ್ಲಿ ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ದೇವಿಯ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್ ನಿಯಂತ್ರಣ ದೃಷ್ಟಿಯಿಂದ ವಯೋವೃದ್ಧರು ಹಾಗೂ ಮಕ್ಕಳನ್ನು ದೇವಾಲಯಕ್ಕೆ ಕರೆತರಬಾರದು ಎಂದು ಹಾಸನ ಜಿಲ್ಲಾಡಳಿತ ಸಲಹೆ ನೀಡಿದೆ.

(ಲೇಖಕರು ಅಧ್ಯಾತ್ಮ ಚಿಂತಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net