

| ಬಸವರಾಜ ಶಿವಪ್ಪ ಗಿರಗಾಂವಿ ಬಾಗಲಕೋಟೆ
‘ಅನ್ನ ಹಾಕಿದ ಮನೆ ಕೆಡದು, ಗೊಬ್ಬರ ಹಾಕಿದ ಹೊಲ ಕೆಡದು’ ಎಂಬುದು ಗಾದೆ. ಇದು ಗೊಬ್ಬರದ ಮಹತ್ವವನ್ನು ತಿಳಿಸುತ್ತದೆ. ಆದರೆ, ಇಂದು ಕಾಲ ಬದಲಾಗಿದೆ. ಮಾನವನ ಅತಿಯಾಸೆಗೆ ಸಾಂಪ್ರದಾಯಿಕ ಕೃಷಿ ಮಹತ್ವ ಕಳೆದುಕೊಳ್ಳುತ್ತಿದೆ. ರಾಸಾಯನಿಕಯುಕ್ತ ಕೃಷಿ ಅಳವಡಿಸಿಕೊಂಡ ಪರಿಣಾಮ ಭೂಮಿಯ ಫಲವತ್ತತೆ ದಿನೇದಿನೆ ನಾಶವಾಗುತ್ತಿದೆ. ಕೃಷಿಯಲ್ಲಿ ಬಳಕೆಯಾಗುವ ಮಣ್ಣು ಬಹುತೇಕ ತೀವ್ರ ನಿಗಾ ಘಟಕದಲ್ಲಿದೆ! ಇಂಥ ಹೊತ್ತಲ್ಲಿ ಕೊಟ್ಟಿಗೆ ಗೊಬ್ಬರ ಮಹತ್ವ ಪಡೆದುಕೊಳ್ಳುತ್ತಿದೆ. ಅದರಲ್ಲೂ ಕೋಳಿ ಗೊಬ್ಬರ ಮಣ್ಣಿನ ಸಂರಕ್ಷಣೆಗೆ ಸಂಜೀವಿನಿಯಾಗಿದೆ ಎಂದೇ ಹೇಳಬಹುದು. ನಮ್ಮ ಪೂರ್ವಿಕರು ಸಾವಯವ ಕೃಷಿ, ನೈಸರ್ಗಿಕ ಕೃಷಿ ಹಾಗೂ ಸಹಜ ಕೃಷಿಗಳೆಂಬ ಮನುಕುಲದ ಆರೋಗ್ಯಕ್ಕೆ ಸಹಕಾರಿಯಾದ ಹಲವಾರು ಕೃಷಿಯ ವಿವಿಧತೆಗಳನ್ನು ಅಳವಡಿಸಿಕೊಂಡು ಆರೋಗ್ಯವಾಗಿದ್ದರು. ಆದರೆ, ಕೃಷಿಯಲ್ಲಿ ಹೆಚ್ಚಿನ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಅಧಿಕ ಇಳುವರಿ ಪಡೆಯಬಹುದು ಎಂಬ ಭ್ರಮೆ ರೈತರನ್ನು ಹಾಳುಮಾಡಿತು. ಕಾಲ ಮಿಂಚುವ ಮುನ್ನವೇ ಎಚ್ಚೆತ್ತುಕೊಳ್ಳುತ್ತಿರುವ ರೈತಾಪಿ ವರ್ಗ ಸಾವಯವ ಗೊಬ್ಬರಗಳಿಗೆ ಮೊರೆ ಹೋಗುತ್ತಿದೆ. ಕೊಟ್ಟಿಗೆ ಗೊಬ್ಬರ, ಕುರಿ/ಮೇಕೆ ಗೊಬ್ಬರ, ಕೋಳಿ ಗೊಬ್ಬರ, ಹಂದಿಯ ಗೊಬ್ಬರ, ಎರೆಹುಳು ಗೊಬ್ಬರ, ಜೈವಿಕ ರಸಸಾರ ಇತ್ಯಾದಿಗಳನ್ನು ಬಳಸಿ ಮಣ್ಣಿನಲ್ಲಿ ಪೋಷಕಾಂಶ ಹಾಗೂ ಜೀವಾಣುಗಳನ್ನು ಹೆಚ್ಚಿಸಿವುದರೊಂದಿಗೆ ಮಣ್ಣನ್ನು ಫಲವತ್ತತೆಗೊಳಿಸಿ ಸ್ಥಿರವಾದ ಆದಾಯ ಪಡೆಯಬಹುದಾಗಿದೆ.
ಬೃಹತ್ ಉದ್ಯಮ: ದೇಶದಲ್ಲಿ ಕೋಳಿ ಸಾಕಾಣಿಕೆ ಬೃಹತ್ ಉದ್ದಿಮೆಯಾಗಿ ಪರಿವರ್ತನೆಯಾಗುತ್ತಿದೆ. ಈ ಉದ್ದಿಮೆಯು ಕೃಷಿಗೆ ಪೂರಕವಾದ ಇನ್ನಿತರ ಉಪಕಸುಬುಗಳಿಗಿಂತ ಉತ್ತಮ ಲಾಭ ನೀಡುತ್ತದೆ. ಸಾಮಾನ್ಯವಾಗಿ ರೈತರು ತಾವು ಬೆಳೆಯುವ ಗೋವಿನಜೋಳ, ಅಕ್ಕಿ, ಗೋಧಿ, ರಾಗಿ ಹಾಗೂ ಇನ್ನಿತರ ಸಿರಿಧಾನ್ಯಗಳನ್ನು ಕೋಳಿಗಳಿಗೆ ಆಹಾರವನ್ನಾಗಿ ನೀಡುವ ಮೂಲಕ ಕೃಷಿ ಉತ್ಪನ್ನಗಳನ್ನು ಅತ್ಯಂತ ಸರಳ ರೀತಿಯಲ್ಲಿ ಮೌಲ್ಯವರ್ಧಿತ ವಸ್ತುಗಳನ್ನಾಗಿ ಮಾರ್ಪಡಿಸಿ ಮರಳಿ ಉಪಯೋಗಿಸಬಹುದಾಗಿದೆ. ಕೋಳಿ ಸಾಕಣೆಯಿಂದ ಮಾಂಸ, ಮೊಟ್ಟೆ ಹಾಗೂ ಕೋಳಿ ಹಿಕ್ಕೆಗಳನ್ನು ವರ್ಷಪೂರ್ತಿ ಮಾರಾಟ ಮಾಡುತ್ತ, ನಿರಂತರ ಆದಾಯ ಪಡೆಯಬಹುದಾಗಿದೆ.
ಶೀತ ವಾತಾವರಣಕ್ಕೆ ಉತ್ತಮ ಮದ್ದು: ಕೋಳಿ ಸಾಕಾಣಿಕೆ ಕೇಂದ್ರದಿಂದ ಗೊಬ್ಬರವನ್ನು ತಂದ ಕೂಡಲೆ ನೇರವಾಗಿ ಬೆಳೆಗಳಿಗೆ ಉಪಯೋಗಿಸಬಾರದು. ಕೆಲವು ದಿನಗಳ ಕಾಲ ನೆರಳಿರುವ ತಂಪಾದ ಸ್ಥಳದಲ್ಲಿ ಶೇಖರಣೆ ಮಾಡಿ ಉಪಯೋಗಿಸುವುದರಿಂದ ಗೊಬ್ಬರದಲ್ಲಿ ಮತ್ತಷ್ಟು ಜೀವಾಣುಗಳು ರಚನೆಯಾಗಿ ಬೆಳೆಗಳ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಸಾಧ್ಯವಾದಷ್ಟು ಬೆಳೆಗಳ ಆರಂಭಿಕ ಹಂತದಲ್ಲಿ ಉಪಯೋಗಿಸದೆ, ಬೆಳೆಗಳ ಶೇ.25 ಬೆಳವಣಿಗೆ ಮುಗಿದ ನಂತರ ಹಾಗೂ ಜುಲೈನಿಂದ ಜನವರಿವರೆಗಿನ ತಂಪಾದ ವಾತಾವರಣದಲ್ಲಿ ಉಪಯೋಗಿಸಿದರೆ ಬಹಳ ಪರಿಣಾಮಕಾರಿಯಾಗಿ ಈ ಗೊಬ್ಬರ ಕೆಲಸ ನಿರ್ವಹಿಸುತ್ತದೆ. ವಿಶೇಷವಾಗಿ ಶೀತ ಹವಾಮಾನದಲ್ಲಿ ಯಾವುದೇ ಬೆಳೆಗಳು ಅತ್ಯಂತ ಕನಿಷ್ಠ ವೇಗದಲ್ಲಿ ಬೆಳವಣಿಗೆ ಹೊಂದುತ್ತಿರುತ್ತವೆ. ಇಂತಹ ಶೀತಕರ ಋತುಮಾನದಲ್ಲಿ ಕೋಳಿ ಗೊಬ್ಬರ ಉಪಯೋಗಿಸಿದಲ್ಲಿ ಬೆಳೆಗಳು ಉತ್ತಮವಾಗಿ ಬೆಳವಣಿಗೆ ಹೊಂದುತ್ತವೆ.
ಕೋಳಿ ಹಿಕ್ಕೆಯ ಮಹತ್ವ: ಸಾಮಾನ್ಯವಾಗಿ ಕೋಳಿಗಳಲ್ಲಿ ಜೀರ್ಣಾಂಗ ಮತ್ತು ಮೂತ್ರ ಜನಕಾಂಗವು ಶರೀರದ ಒಂದೆ ಭಾಗದಲ್ಲಿ ಸೇರುವುದರಿಂದ ಮಲ ಮತ್ತು ಮೂತ್ರಗಳೆರಡು ಬೆರೆತು ಹೊರಬರುತ್ತವೆ. ಹಾಗಾಗಿ ಇತರ ಪ್ರಾಣಿಗಳ ಮಲ- ಮೂತ್ರಗಳಿಗಿಂತ ಇದು ಉತ್ತಮ ಗುಣಮಟ್ಟದ ಪರಿಣಾಮಕಾರಿ ಗೊಬ್ಬರವಾಗಿರುತ್ತದೆ. ಕೋಳಿ ಗೊಬ್ಬರದಲ್ಲಿ ಇತರ ಪ್ರಾಣಿಗಳ ಗೊಬ್ಬರಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ, ರಂಜಕ ಮತ್ತು ಪೋಟ್ಯಾಷಿಯಂನಂಥ ಪ್ರಧಾನ ಪೋಷಕಾಂಶ ಲಭ್ಯವಿರುತ್ತದೆ. ಇವುಗಳೊಂದಿಗೆ ಲಘು ಪೋಷಕಾಂಶಗಳಾದ ಕಬ್ಬಿಣ, ಮ್ಯಾಂಗನೀಸ್, ಕಾಫರ್, ಕೋಬಾಲ್ಟ್, ಮ್ಯಾಲಿಬ್ಡಿನಂ ಸೇರಿ ಹಲವಾರು ಖನಿಜಗಳಿವೆ. ಕೋಳಿ ಗೊಬ್ಬರವನ್ನು ವ್ಯವಸ್ಥಿತವಾಗಿ ಶೇಖರಣೆ ಮಾಡುವ ಮುಖಾಂತರ ಬೆಳೆಗಳ ಮೇಲೆ ಗೊಬ್ಬರದಿಂದ ಪರಿಣಾಮಕಾರಿ ಮೌಲ್ಯವನ್ನು ಹೆಚ್ಚಿಸಬಹುದು. ಕೋಳಿ ಗೊಬ್ಬರವನ್ನು ನೇರವಾಗಿ ಬಿಸಿಲಲ್ಲಿ ಶೇಖರಿಸಿದರೆ ಬಿಸಿಲ ಪ್ರಖರತೆಯಿಂದ ಗೊಬ್ಬರದಲ್ಲಿನ ಪೋಷಕಾಂಶಗಳು ನಾಶವಾಗಿ ಗುಣಮಟ್ಟ ಕಡಿಮೆಯಾಗುತ್ತದೆ. ವ್ಯವಸ್ಥಿತವಾಗಿ ನೆರಳಲ್ಲಿ, ತಂಪಾದ ಸ್ಥಳದಲ್ಲಿ ಹಾಗೂ ಗುಂಡಿಗಳಲ್ಲಿ ಶೇಖರಿಸಿಡುವುದರಿಂದ ಅದರ ಮೌಲ್ಯ ವೃದ್ಧಿಸಬಹುದು. ಅದರಂತೆ ಯಾವುದೇ ಸಾವಯವ ಗೊಬ್ಬರವಿದ್ದರೂ ಅದನ್ನು ಕಡ್ಡಾಯವಾಗಿ ನೆರಳಲ್ಲಿ ಶೇಖರಣೆ ಮಾಡಬೇಕು.
ಗುಣಮಟ್ಟ ಹೆಚ್ಚಳ ವಿಧಾನ, ಪ್ರಯೋಜನ: ಸೂಪರ್ ಫಾಸ್ಪೇಟ್ ಮತ್ತು ಸುಣ್ಣದ ಅಂಶವನ್ನು ಸೂಕ್ತ ಪ್ರಮಾಣದಲ್ಲಿ ಕೋಳಿ ಗೊಬ್ಬರದ ಜತೆ ಬೆರೆಸಿದರೆ ಅದರ ಗುಣಮಟ್ಟ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಬಹುದು. ಕೋಳಿ ಗೊಬ್ಬರದಲ್ಲಿರುವ ಸೋಡಿಯಂ ಮತ್ತು ಮೆಗ್ನೇಶಿಯಂ ಅಂಶವು ಭೂಮಿಯೊಳಗೆ ರಂಧ್ರಗಳನ್ನು ಹೆಚ್ಚಿಸುವುದರಿಂದ ಮಣ್ಣಿನಲ್ಲಿ ನೀರು ಹಿಡಿದಿಡುವ ಶಕ್ತಿ ಹೆಚ್ಚಳವಾಗುತ್ತದೆ. ಕೋಳಿಹಿಕ್ಕೆಯು ಸಾವಯವ ಪದಾರ್ಥವಾಗಿದ್ದು ಮಣ್ಣಿನ ಸವಕಳಿ ತಡೆಯುತ್ತದೆ. ಕೋಳಿಹಿಕ್ಕೆಯು ಭೂಮಿಯಲ್ಲಿ ಸೂಕ್ಷ್ಮಾಣುಜೀವಿಗಳ ಸಂಖ್ಯೆ ಕೂಡಾ ಹೆಚ್ಚಿಸುತ್ತದೆ. ಶೇಖರಿಸಿಟ್ಟ ಒಂದು ಟನ್ ದಪ್ಪ ಸತ್ತೆಯ ಗೊಬ್ಬರವು ಸುಮಾರು 160 ಕಿ.ಗ್ರಾಂ ಅಮೋನಿಯಂ ಸಲ್ಪೇಟ್, 150 ಕಿ.ಗ್ರಾಂ ಸೂಪರ್ ಫಾಸ್ಪೇಟ್, 50 ಕಿ.ಗ್ರಾಂ ಪೋಟ್ಯಾಶಿಯಂ ಸಲ್ಪೇಟ್, 30 ಕಿ.ಗ್ರಾಂ ಸುಣ್ಣ, 7 ಕಿ.ಗ್ರಾಂ ಮೆಗ್ನೇಶಿಯಂ, 7 ಕಿ.ಗ್ರಾಂ ಸೋಡಿಯಂಗೆ ಸರಿಸಮನಾಗಿರುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಹೊಲದಲ್ಲಿ ಕೋಳಿ ಗೊಬ್ಬರವನ್ನು ಬಳಸಿದಾಗ ಮೊದಲ ವರ್ಷದಲ್ಲಿ ಸುಮಾರು 1:2ರಿಂದ 2:3 ಭಾಗದಲ್ಲಿ ಉಪಯೋಗವಾಗಿ, ಉಳಿದದ್ದು ಮುಂದಿನ ವರ್ಷ ಬಳಸಲ್ಪಡುತ್ತದೆ. ಯಾವುದೇ ಸಾವಯವ ಗೊಬ್ಬರವು ರಾಸಾಯನಿಕ ಗೊಬ್ಬರಗಳಂತೆ ಬಳಸಿದ ತಕ್ಷಣ ತನ್ನ ಪ್ರಭಾವ ತೋರಿಸುವುದಿಲ್ಲ.
4000 ಕಿ.ಗ್ರಾಂ ದಪ್ಪ ಸತ್ತೆಯ ಕೋಳಿ ಗೊಬ್ಬರದಲ್ಲಿ (ನೆಲದ ಮೇಲೆ ಸಾಕಾಣಿಕೆ ಮಾಡಿದ ಕೋಳಿ ಗೊಬ್ಬರ) 300 ಕಿ.ಗ್ರಾಂ ಸೂಪರ್ ಫಾಸ್ಪೇಟ್ ಮತ್ತು 110 ಕಿ.ಗ್ರಾಂ ಮ್ಯೂರಿಟ್ ಆಫ್ ಪೋಟ್ಯಾಷ್ ಪ್ರಮಾಣವನ್ನು ಸೇರಿಸಿದರೆ 4:10:10 ಗೊಬ್ಬರವಾಗುತ್ತದೆ. ಹೀಗೆ ಉತ್ಕೃಷ್ಠ ಗುಣಮಟ್ಟದಿಂದ ಕೂಡಿರುವ ಈ ಕೋಳಿಗೊಬ್ಬರವು ಎಲ್ಲ ಬೆಳೆಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ. ಸಂಶೋಧನೆ ಪ್ರಕಾರ 1 ಟನ್ ದಪ್ಪ ಸತ್ತೆ ಕೋಳಿ ಗೊಬ್ಬರವನ್ನು ಮಣ್ಣಿನ ಗುಣಧರ್ಮ ಆಧರಿಸಿ 0.7 ಹೆಕ್ಟೇರ್ ದೀರ್ಘಾವಧಿಯ ಅರಣ್ಯ ಕೃಷಿ ಬೆಳೆಗಳಿಗೆ, 0.4 ಹೆಕ್ಟೇರ್ ಅಲ್ಪಾವಧಿಯ ಗೋವಿನ ಜೋಳ, ಗೋಧಿ, ಭತ್ತದ ಬೆಳೆಗಳಿಗೆ, 10 ಹೆಕ್ಟೇರ್ ಬಹುವಾರ್ಷಿಕ ಬಾಳೆ, ಕಬ್ಬಿನ ಬೆಳೆಗಳಿಗೆ ಬಳಸಬಹುದು. ಕೋಳಿ ಗೊಬ್ಬರ ಹಾಕಿದರೆ ಬೆಳೆಗಳು ಸುಟ್ಟು ಹೋಗುತ್ತವೆ ಎಂಬ ತಪ್ಪು ಕಲ್ಪನೆ ತೆಗೆದು ಹಾಕಿ ಮೇಲಿನ ಶಿಫಾರಸಿನಂತೆ ವಿವಿಧ ಬೆಳೆಗಳಿಗೆ ಬಳಸಿ ಮಣ್ಣಿನ ಫಲವತ್ತತೆ ಕಾಪಾಡುವುದರೊಂದಿಗೆ ಸ್ಥಿರ ಆದಾಯ ಪಡೆಯಬಹುದು.
(ಲೇಖಕರು- ಕೃಷಿ ತಜ್ಞರು)