ನಮ್ಮ ಸುತ್ತಮುತ್ತ ಯುಎಸ್​ಎಐಡಿ ಭೂತ ಕುಣಿತ

3-67d071b639024
Published on
ತಮಗೆ ಸಮ್ಮತವಲ್ಲದ ವಿದೇಶಿ ಸರ್ಕಾರಗಳನ್ನು ಕೆಳಗಿಳಿಸಲು ಅಥವಾ ರಾಜಕಾರಣಿಗಳನ್ನು ಮರೆಗೆ ತಳ್ಳಲು ಯುಎಸ್​ಎಐಡಿ ಮತ್ತದರ ಸಹಯೋಗಿ ಸಂಸ್ಥೆಗಳ ಹಿಂದೆ ತೆರೆಯ ಮರೆಯಲ್ಲಿರುವ ಶಕ್ತಿಗಳು ಹಾಗೂ ‘ಆಗಾಗ’ (ಡೆಮೋಕ್ರಾಟಿಕ್ ಪಕ್ಷದ ಆಡಳಿತಗಳಿರುವ ದಿನಗಳಲ್ಲಿ) ತೆರೆಯ ಮುಂದೆಯೇ ಬಂದು ನಿಲ್ಲುವ ಶಕ್ತಿಗಳು ಒಂದು ಸಿದ್ಧಮಾದರಿಯನ್ನು ಅನುಸರಿಸುತ್ತವೆ.

ಆ ದೇಶದ ಸರ್ಕಾರದ ವಿರುದ್ಧ ಅಂತೆಕಂತೆಗಳಿಂದ ಕೂಡಿದ ಲೇಖನಗಳನ್ನು ರಚಿಸಲಾಗುತ್ತದೆ ಮತ್ತು ಸೂಕ್ಷ್ಮ ಸಂದರ್ಭಗಳಲ್ಲಿ ಅವು ‘ನ್ಯೂಯಾರ್ಕ್ ಟೈಮ್ಸ್​ ’, ‘ವಾಷಿಂಗ್​ಟನ್ ಪೋಸ್ಟ್’, ‘ಗಾರ್ಡಿಯನ್’ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ, ಅದೇ ವಿಷಯದ ‘ಡಾಕ್ಯುಮೆಂಟರಿಗಳು’ ಸಿಎನ್​ಎನ್, ಬಿಬಿಸಿ, ಅಲ್-ಜಝೀರಾ ಮಂತಾದ ವಾರ್ತಾವಾಹಿನಿಗಳಲ್ಲಿ ಪ್ರಸಾರವಾಗುತ್ತವೆ ಮತ್ತು ಆ ಮೂಲಕ ಆ ಸರ್ಕಾರವನ್ನು ಕೆಟ್ಟ ರೀತಿಯಲ್ಲಿ ನೋಡಲು ಜಗತ್ತನ್ನೇ ಪ್ರಚೋದಿಸಲಾಗುತ್ತದೆ.

ಇದಕ್ಕಾಗಿಯೇ ಯುಎಸ್​ಎಐಡಿ ಜಗತ್ತಿನಾದ್ಯಂತ ಸುಮಾರು 6,800 ಪತ್ರಕರ್ತರನ್ನೂ, 297 ಮಾಧ್ಯಮಗಳನ್ನೂ ಸಾಕಿಕೊಂಡಿತ್ತು! ಈ ಮಾರ್ಗಗಳಿಂದ ನಿರ್ದಿಷ್ಟ ಬಡಪಾಯಿ ಸರ್ಕಾರದ ವಿರುದ್ಧ ಜಗತ್ತನ್ನು ಕೆರಳಿಸಿ, ಅದರ ವಿರುದ್ಧದ ಆಂದೋಲನಗಳಿಗೆ ಜಾಗತಿಕ ಬೆಂಬಲವನ್ನು ಸೃಷ್ಟಿಸಲಾಗುತ್ತದೆ. ಹಾಲಿವುಡ್ ನಟ-ನಟಿಯರು, ಜಾಗತಿಕವಾಗಿ ಜನಪ್ರಿಯರಾಗಿರುವ ಸಂಗೀತಗಾರರು ಹಾಗೂ ಪರಿಸರವಾದಿ ಕಾರ್ಯಕರ್ತರು ಆಂದೋಲನದ ಪರವಾಗಿ ಹೇಳಿಕೆ ನೀಡುವ ವ್ಯವಸ್ಥೆಯಾಗುತ್ತದೆ. ಅದಕ್ಕಾಗಿ ಯುಎಸ್​ಎಐಡಿ ಅವರಿಗೆ ಮಿಲಿಯನ್​ಗಟ್ಟಲೆ ಡಾಲರ್​ಗಳನ್ನು ನೀಡುತ್ತದೆ (ನಮ್ಮಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ತಥಾಕಥಿತ ರೈತ ಆಂದೋಲನವನ್ನು ನೆನಪಿಸಿಕೊಳ್ಳಿ).

ಎಲ್ಲವೂ ಯುಎಸ್​ಎಐಡಿ ಯೋಜನೆಯ ಪ್ರಕಾರವೇ ನಡೆದು ಕಬ್ಬಿಣ ಸರಿಯಾಗಿ ಕಾದಿದೆ ಎನಿಸಿದರೆ ಅಮೆರಿಕಾ ಸರ್ಕಾರ (ಸಾಮಾನ್ಯವಾಗಿ ಡೆಮೋಕ್ರಾಟಿಕ್ ಪಕ್ಷದ ಸರ್ಕಾರಗಳು) ಕಾರ್ಯಪ್ರವೃತ್ತವಾಗುತ್ತವೆ. ಬಡಪಾಯಿ ವಿದೇಶಿ ಸರ್ಕಾರದ ವಿರುದ್ಧ ವಾಷಿಂಗ್​ಟನ್ ಆರ್ಥಿಕ ದಿಗ್ಬಂಧನಗಳನ್ನು ವಿಧಿಸುತ್ತದೆ, ಹಾಗೆ ಮಾಡಲು ತನ್ನ ಪಶ್ಚಿಮ ಯೂರೋಪಿಯನ್ ಸಹಯೋಗಿಗಳನ್ನೂ ಪ್ರೇರೇಪಿಸುತ್ತದೆ. ಅಂತಿಮವಾಗಿ ಅಗತ್ಯ ಕಂಡುಬಂದರೆ ಸೇನಾ ಕಾರ್ಯಾಚರಣೆಗೇ ಮುಂದಾಗುತ್ತದೆ! 14-15 ವರ್ಷಗಳ ಹಿಂದೆ ಉತ್ತರ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆದ ‘ಅರಬ್ ವಸಂತ’ ಆಂದೋಲನಗಳು ಮತ್ತು ಅದರಿಂದಾದ ಪರಿಣಾಮಗಳನ್ನು ನೆನಪಿಸಿಕೊಳ್ಳಿ. ಅವು ಘಟಿಸಿದ್ದು ಹೀಗೆಯೇ.

ಯುಎಸ್​ಎಐಡಿಯ ಇತ್ತೀಚಿನ ಒಂದೆರಡು ಕುಕೃತ್ಯಗಳತ್ತ ನೋಡೋಣ. ಕರೊನಾ ವೈರಸ್ ಅನ್ನು ಜಗತ್ತಿಗೆ ಹರಡಿದ ವೂಹಾನ್ ಇನಸ್ಟಿಟ್ಯೂಟ್ ಆಫ್ ವೈರಾಲಜಿಗೆ ಯುಎಸ್​ಎಐಡಿ ಒಂದು ಮಿಲಿಯನ್ ಡಾಲರ್ ನೀಡಿದ್ದಲ್ಲದೆ ಇಸ್ಲಾಮಿಕ್ ಭಯೋತ್ಪಾದಕರಿಗೂ ಧನಸಹಾಯ ಒದಗಿಸಿದ್ದುಂಟು. ಅನ್ವರ್ ಅಲ್-ಅವ್​ಲಾಕಿ ಎನ್ನುವುದು ಜಾಗತಿಕ ಇಸ್ಲಾಮಿಕ್ ಭಯೋತ್ಪಾದನೆಯಲ್ಲಿ ದೊಡ್ಡ ಹೆಸರು. ಮೊದಲಿಗೆ ಇಸ್ಲಾಮಿಕ್ ಧಾರ್ವಿುಕ ಉಪನ್ಯಾಸಕಾರನಾಗಿದ್ದ ಈತನಿಗೆ ಕೊಲರ್ಯಾಡೋ ಸ್ಟೇಟ್ ಯೂನಿವರ್ಸಿಟಿಯಲ್ಲಿ ಅಧ್ಯಯನ ನಡೆಸಲು 1990ರಲ್ಲಿ ಯುಎಸ್​ಎಐಡಿ ವಿದ್ಯಾರ್ಥಿವೇತನ ನೀಡಿತ್ತು. ನಂತರ ಆತ ಅಲ್-ಖಯಿದಾ ಸೇರಿ ಸಾಕಷ್ಟು ದಾಂಧಲೆ ನಡೆಸಿದ. ಅಂತಿಮವಾಗಿ ಅಮೆರಿಕಾದ ಡ್ರೋನ್ ದಾಳಿಗೆ ಬಲಿಯಾದ.

ಯುಎಸ್​ಎಐಡಿ ದೂರದ ದೇಶಗಳಲ್ಲಷ್ಟೇ ರಾಡಿ ಎಬ್ಬಿಸಲಿಲ್ಲ, ಅದು ಭಾರತಕ್ಕೆ ಬಹಳ ಹತ್ತಿರವೇ ಬಂದಿತ್ತು, ಭಾರತದೊಳಗೂ ದಶಕಗಳ ಕಾಲ ಕಿತಾಪತಿ ಮಾಡಿತ್ತು. ನಮ್ಮ ಸುತ್ತಮುತ್ತಲೂ ಅದು ಎಬ್ಬಿಸಿದ ರಾಡಿಯ ಒಂದೆರಡು ಉದಾಹರಣೆಗಳನ್ನು ನೋಡೋಣ.

ಮೊದಲಿಗೆ ಅಫ್ಘಾನಿಸ್ತಾನದ ಒಂದೆರಡು ಕಥೆ ಕೇಳೋಣ. ಕಳೆದ ನಾಲ್ಕೂವರೆ ದಶಕಗಳಿಂದಲೂ ಅಶಾಂತಿಯಲ್ಲಿ ಬೇಯುತ್ತಿರುವ ಆ ನತದೃಷ್ಟ ದೇಶದಲ್ಲಿ ತಾನು ಸಾಕುತ್ತಿದ್ದ ಮಾಧ್ಯಮಗಳು ಮತ್ತು ಪತ್ರಕರ್ತರ ಮೂಲಕ ಸೋವಿಯತ್ ಪರವಾದ ಸರ್ಕಾರಗಳ ವಿರುದ್ಧ ಜಾಗತಿಕವಾಗಿ ದುಷ್ಪ್ರಚಾರ ನಡೆಸಿದ್ದು ಹಳೆಯ ಕಥೆ. 2001ರಲ್ಲಿ ಅಮೆರಿಕನ್ ಸೇನೆಯೇ ತಾಲಿಬಾನ್ ಸರ್ಕಾರವನ್ನು ಉರುಳಿಸಿ ಹಮೀದ್ ಕರ್ಜಾಯ್ ನೇತೃತ್ವದ ‘ಜನಪ್ರಿಯ’ ಸರ್ಕಾರವನ್ನು ಎತ್ತಿನಿಲ್ಲಿಸಿದ ಮೇಲೆ ಆ ದೇಶದಲ್ಲಿ ಅಫೀಮು ಕೃಷಿಗೆ ಮತ್ತು ಮಾದಕದ್ರವ್ಯ ದಂಧೆಗೆ ನೂರಾರು ಮಿಲಿಯನ್ ಡಾಲರ್​ಗಳನ್ನು ಯುಎಸ್​ಎಐಡಿ ಸುರಿದಿದೆ.

ಇದರಿಂದ ಲಾಭವಾದದ್ದು ತಾಲಿಬಾನ್​ಗೆ. ಜತೆಗೆ ಪಾಕಿಸ್ತಾನದ ಸರ್ಕಾರಿಭಯೋತ್ಪಾದಕ ಸಂಸ್ಥೆ ಐಎಸ್​ಐಗೂ ಸಹ. ಅವೆರಡೂ ಸೇರಿ ಅಮೆರಿಕನ್ ಸೇನೆಯ ವಿರುದ್ಧವೇ ಕಾರ್ಯಾಚರಣೆ ನಡೆಸಲು ಹೇರಳ ಹಣ ಸಿಕ್ಕಿದ್ದು ಯುಎಸ್​ಎಐಡಿ ಪೋ›ತ್ಸಾಹಿಸಿದ ಅಫೀಮು ಬೆಳೆ. ಅಂದರೆ ಅಮೆರಿಕನ್ ಸೇನೆಯ ವಿರುದ್ಧವೇ ಯುಎಸ್​ಎಐಡಿ ಕೆಲಸ ಮಾಡಿತ್ತು! ಇದರರ್ಥ ಆಗಿನ ಅಧ್ಯಕ್ಷ ಕಿರಿಯ ಜಾರ್ಜ್ ಬುಷ್​ರ ರಿಪಬ್ಲಿಕನ್ ಸರ್ಕಾರದ ಹತೋಟಿಯಾಚೆ ಯುಎಸ್​ಎಐಡಿ ಹೊರಟುಹೋಗಿತ್ತು! ಆಮೇಲೆ ಬಂದ ಬರಾಕ್ ಹುಸೇನ್ ಒಬಾಮ ಆಡಳಿತ ಯುಎಸ್​ಎಐಡಿಯ ಕೃತ್ಯಗಳಿಗೆ ಮುಕ್ತ ಅವಕಾಶವನ್ನೇ ನೀಡಿರಲಿಕ್ಕೂ ಸಾಕು. ಅಗಾಧ ಸೇನಾಶಕ್ತಿಯಿದ್ದಾಗ್ಯೂ ತಾಲಿಬಾನ್​ಗೆ ಅಧಿಕಾರವನ್ನು ಬಿಟ್ಟುಕೊಟ್ಟು ಅಮೆರಿಕಾ ಕಾಬೂಲ್​ನಿಂದ ಕಾಲುತೆಗೆದದ್ದರ ಮರ್ಮ ಇದು.

ಇಲ್ಲಿ ಇನ್ನೊಂದು ಕಿತಾಪತಿಯೂ ಉಲ್ಲೇಖಾರ್ಹ. ಅಫ್ಘನ್ ಪುರುಷರಿಗೆ ಕಾಂಡೋಂಗಳನ್ನು ಹಂಚಲು ಯುಎಸ್​ಎಐಡಿ 1.5 ಬಿಲಿಯನ್ ಡಾಲರ್​ಗಳನ್ನು ಖರ್ಚುಮಾಡಿದೆ! 45 ವರ್ಷಗಳ ಯುದ್ಧಗಳಿಂದ ಜಝುರಿತವಾಗಿರುವ ಆ ನತದೃಷ್ಟ ದೇಶಕ್ಕೆ ಯಾವುದಕ್ಕಾಗಿ ಹಣ ಬೇಕಾಗಿತ್ತು ಎನ್ನುವುದು ಯುಎಸ್​ಎಐಡಿಗೆ ಗೊತ್ತಾಗಲೇ ಇಲ್ವೇ? ಅಥವಾ ಅಫ್ಘನ್ ಜನಸಂಖ್ಯೆಯನ್ನು ಕುಗ್ಗಿಸುವ ಸಂಚೇ ಇದು? ಹೇಳಿಕೇಳಿ ಅಫ್ಘಾನಿಸ್ತಾನ ನಿಶ್ಚಿತ ‘ವಾರಸುದಾರ’ರಿಲ್ಲದ ಖನಿಜಸಂಪತ್ತಿನ ಆಗರ. ಆ ಸಂಪತ್ತು ದೇಶದೊಳಗೆ ಖರ್ಚಾಗದೆ ಅಮೆರಿಕಾದ ಪಾಲಾಗಲು ಮಾಡಿದ ವ್ಯವಸ್ಥೆಯೇ ಈ ಕಾಂಡೋಮ್ ಕಥೆ? ಈ ಸಾಧ್ಯತೆಯ ಪುರಾವೆ ಆಫ್ರಿಕಾದಲ್ಲಿ ಸಿಗುತ್ತದೆ.

ಶೀತಲಸಮರ ಮುಕ್ತಾಯವಾದ ನಂತರದ ಹದಿನೈದು ವರ್ಷಗಳಲ್ಲಿ ಅಮೆರಿಕಾ ಮತ್ತದರ ಪಶ್ಚಿಮ ಯೂರೋಪಿಯನ್ ಸಹಯೋಗಿ ದೇಶಗಳು ಆಫ್ರಿಕಾದಲ್ಲಿ ಗರ್ಭನಿರೋಧಕಗಳನ್ನು ಹಂಚಲು ಆರು ಬಿಲಿಯನ್ ಡಾಲರ್​ಗಳನ್ನು (ಆ ದಿನಗಳ ಲೆಕ್ಕದಲ್ಲಿ ಸುಮಾರು ಇಪ್ಪತ್ತಾರು ಸಾವಿರ ಕೋಟಿ ರೂಪಾಯಿಗಳು!) ಸುರಿದವು! ಆಫ್ರಿಕಾ ಪ್ರಾಕೃತಿಕವಾಗಿ ಸಂಪದ್ಭರಿತ ನಾಡು. ಅಲ್ಲಿ ಜನಸಂಖ್ಯೆ ಕಡಿಮೆಯಾದಷ್ಟೂ ಸಂಪನ್ಮೂಲಗಳು ಆಂತರಿಕವಾಗಿ ಬಳಕೆಯಾಗದೆ ಉಳಿಯುತ್ತವೆ. ಅದನ್ನೆಲ್ಲವನ್ನೂ ತಾವು ಕೊಳ್ಳೆಹೊಡೆಯಬಹುದಲ್ಲ! ಇದನ್ನೇ ಯುಎಸ್​ಎಐಡಿ ಅಫ್ಘಾನಿಸ್ತಾನದಲ್ಲೂ ಮಾಡಿತ್ತು. ‘ಅಮೆರಿಕಾದ ನೆರವು’ ಅಂದರೆ ಹೀಗೆಯೇ! ಮಾರಿ ಕಣ್ಣು ಹೋರಿ ಮೇಲೆ ಎನ್ನುವಂತೆ ಯುಎಸ್​ಎಐಡಿಯನ್ನು ತೆರೆಯ ಹಿಂದೆ ಮತ್ತು ಆಗಾಗ ತೆರೆಯ ಮುಂದೆ ನಿಯಂತ್ರಿಸುವ ಶಕ್ತಿಗಳ ಕಣ್ಣು ಅಫ್ಘಾನಿಸ್ತಾನದ ಅಗಾಧ ಲಿಥಿಯಂ, ತಾಮ್ರ, ಬಾಕ್ಸೈಟ್ ಅದಿರುಗಳ ಮೇಲೆ.

ಯುಎಸ್​ಎಐಡಿ ಪಾಕಿಸ್ತಾನದಲ್ಲಿ ಎಸಗಿದ ಕರಾಳ ಕಾಂಡಗಳಿಗೆ ಲೆಕ್ಕವೇ ಇಲ್ಲ. ತೀರಾ ಇತ್ತೀಚಿನದೆಂದರೆ ಇಮ್ರಾನ್ ಖಾನ್​ರನ್ನು ಅವಮಾನಕರವಾಗಿ ಪ್ರಧಾನಮಂತ್ರಿ ಸ್ಥಾನದಿಂದ ಇಳಿಸಿದ್ದು. ಈಗ ಬಂಧನದಲ್ಲಿರುವ ಅವರ ಮೇಲೆ 150ಕ್ಕೂ ಹೆಚ್ಚಿನ ಆಪಾದನೆಗಳನ್ನು ಹೊರಿಸಲಾಗಿದೆ. ಆ ಪ್ರಕಾರ ಅವರು ಜೀವನಪೂರ್ತಿ ಒಂದಲ್ಲ ಒಂದು ಕಾರಣಕ್ಕಾಗಿ ಕಾರಾಗೃಹದಲ್ಲೇ ಇರುವ ಸಂಚು ನಡೆಯುತ್ತಿದೆ.

ಬೈಡೆನ್ ಆಡಳಿತ ಹಾಗೆಲ್ಲ ಮಾಡಿದ್ದು ಮತ್ತು ತನ್ನ ಕೈಗೊಂಬೆ ಪಾಕ್ ಸೇನೆ ಮತ್ತು ಶೆಹ್​ಬಾಜ್ ಶರೀಫ್ ಸರ್ಕಾರದಿಂದ ಮಾಡಿಸಿದ್ದಕ್ಕೆ ಕಾರಣ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕಾವನ್ನು ಬಹಿರಂಗವಾಗಿ ಟೀಕಿಸಿದ್ದು ಮತ್ತು ರಷ್ಯಾ ಜತೆ ಸ್ನೇಹವರ್ಧನೆಗೆ ಪ್ರಯತ್ನ ಆರಂಭಿಸಿದ್ದು. ಈಗ ಯುಎಸ್​ಎಐಡಿ ಕಚೇರಿಗೆ ಬೀಗ ಹಾಕಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ವಿಷಯದಲ್ಲಿ ತುಸು ಆಸಕ್ತಿ ತೋರಿ, ಇಮ್ರಾನ್ ಖಾನ್​ರನ್ನು ಕಾರಾಗೃಹಮುಕ್ತ ಮಾಡುವಂತೆ ಶರೀಫ್ ಸರ್ಕಾರಕ್ಕೆ ಹೇಳಿದ್ದಾರೆ. ಪರಿಣಾಮಕ್ಕಾಗಿ ಕಾದುನೋಡಬೇಕು.

ಇಮ್ರಾನ್ ಖಾನ್ ಪ್ರಕರಣಕ್ಕೂ ತುಸು ಹಿಂದೆ ಹೋದರೆ ನಮಗೆ ಆಕ್ರೋಶ ಉಂಟುಮಾಡುವ ವಿಷಯವೊಂದು ಕಾಣಸಿಗುತ್ತದೆ. ಮುಂಬೈ ದಾಳಿಗಳಿಗೆ ಕಾರಣವಾದ ಲಷ್ಕರ್-ಎ-ತೋಯ್ಬಾ ಭಯೋತ್ಪಾದಕ ಸಂಘಟನೆಯ ನಾಗರಿಕ ಮುಖ ಫಲಾ-ಎ-ಇನ್ಸಾನೀಯತ್​ಗೆ ಯುಎಸ್​ಎಐಡಿ ಧನಸಹಾಯ ಒದಗಿಸುತ್ತಿದ್ದದ್ದು. ಇದು 26/11 ದಾಳಿಗಳ ನಂತರವೂ ಮುಂದುವರಿಯಿತು. 9/11 ದಾಳಿಗಳಿಗೆ ಕಾರಣವಾದ ಒಸಾಮಾ ಬಿನ್ ಲಾಡೆನ್ ಪಾಕ್ ರಾಜಧಾನಿಗೆ ಹತ್ತಿರದ ಅಬ್ಬೊಟಾಬಾದ್​ನಲ್ಲೇ ಪಾಕ್ ಸೇನೆಯ ರಕ್ಷಣೆಯಲ್ಲೇ ಇದ್ದದ್ದು ತಿಳಿದ ಮೇಲೂ ಆ ದೇಶಕ್ಕೆ ವಾರ್ಷಿಕ 1.5 ಬಿಲಿಯನ್ ಡಾಲರ್​ಗಳ ನೆರವನ್ನು ಮುಂದುವರಿಸಿದ ಒಬಾಮ ಆಡಳಿತದಿಂದ ನಾವು ಇನ್ನೇನನ್ನು ನಿರೀಕ್ಷಿಸಲು ಸಾಧ್ಯ?

ಬಾಂಗ್ಲಾದೇಶದಲ್ಲಿ ಯುಎಸ್​ಎಐಡಿ ಜತೆಗೆ ಅದರ ಕರಾಳ ಸಂತಾನಗಳಾದ ‘ಇಂಟರ್​ನ್ಯಾಷನಲ್ ರಿಪಬ್ಲಿಕನ್ ಇನಸ್ಟಿಟ್ಯೂಟ್’ ಮತ್ತು ‘ನ್ಯಾಷನಲ್ ಡೆಮೋಕ್ರಾಟಿಕ್ ಇನಸ್ಟಿಟ್ಯೂಟ್’ಗಳು ಸೇರಿ ಮಾಡಿದ್ದನ್ನು ನೋಡುತ್ತಲೇ ಇದ್ದೀರಿ. ಈ ಲೇಖನಸರಣಿಯ ಮೊದಲ ಭಾಗದಲ್ಲಿ ಕನ್​ಸೋರ್ಷಿಯಂ ಆಫ್ ಎಲೆಕ್ಷನ್ಸ್ ಆಂಡ್ ಪೊಲಿಟಿಕಲ್ ಪೋ›ಸೆಸ್ ಸ್ಟೆಂಥನಿಂಗ್ (ಸಿಇಪಿಪಿಎಸ್) ಬಗ್ಗೆ ಹೇಳಿದ್ದೆ. ಯುಎಸ್​ಎಐಡಿ ಕೊಟ್ಟ 480 ಮಿಲಿಯನ್ ಡಾಲರ್​ಗಳಲ್ಲಿ 21 ಮಿಲಿಯನ್ ಡಾಲರ್​ಗಳನ್ನು ಈ ಸಂಸ್ಥೆ ಭಾರತದಲ್ಲಿ ಮತದಾನವನ್ನು ಹೆಚ್ಚಿಸುವ ಕಾರ್ಯಯೋಜನೆಗಳಿಗಾಗಿ ಬಳಸಿದ್ದು ಈಗಿಲ್ಲಿ ದೊಡ್ಡ ಸುದ್ದಿಯಾಗಿದೆಯಷ್ಟೆ. ಅದೇ ಸಂಸ್ಥೆ ಬಾಂಗ್ಲಾದೇಶದಲ್ಲಿ ರಾಜಕೀಯ ವ್ಯವಸ್ಥೆಯನ್ನು ‘ಉತ್ತಮ’ಗೊಳಿಸಲು 29 ಮಿಲಿಯನ್ ಡಾಲರ್​ಗಳನ್ನು ಖರ್ಚುಮಾಡಿದೆ! ಬಾಂಗ್ಲಾದೇಶದ ರಾಜಕೀಯ ವ್ಯವಸ್ಥೆ ಅದೆಷ್ಟು ಉತ್ತಮಗೊಂಡಿದೆ ಎನ್ನವುದನ್ನೀಗ ಜಗತ್ತೇ ನೋಡಿ ಬೆರಗಾಗುತ್ತಿದೆ.

ನೇಪಾಳದ ವಿಷಯದಲ್ಲಿ ಆ ಸಂಸ್ಥೆ ಇನ್ನಷ್ಟು ಧಾರಾಳತನ ತೋರಿ 39 ಮಿಲಿಯನ್ ಡಾಲರ್​ಗಳನ್ನು ಚೆಲ್ಲಿದೆ! ನೇಪಾಳ ತನ್ನ ಹಿಂದೂ ಆಸ್ಮಿತೆಯನ್ನು ಬದಿಗೊತ್ತಿ ಎಡಪಂಥದ ದಾರಿ ಹಿಡಿದದ್ದರ ಹಿಂದೆ ಇದ್ದದ್ದು ಈ ಹಣ ಮತ್ತು ಆ ಯೋಜನೆಗಳಿಗೆ ಸಹಕರಿಸಿದ ಭಾರತದ ಯುಪಿಎ ಸರ್ಕಾರ.

ಯುಪಿಎ ಆಡಳಿತದಂತೆ ತನ್ನ ತಾಳಕ್ಕೆ ಎನ್​ಡಿಎ ಸರ್ಕಾರ ಕುಣಿಯುವುದಿಲ್ಲ ಎಂದರಿವಾದದ್ದೇ ಒಬಾಮ ಆಡಳಿತ ಯುಎಸ್​ಎಐಡಿಯನ್ನು ಉಪಯೋಗಿಸಿಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಪಿತೂರಿ ಮಾಡಿದ್ದು ಈಗ ಇತಿಹಾಸ. ಮೋದಿ ಯಾವುದೇ ಪ್ರಮಖ ವಿದೇಶಿ ರಾಜಧಾನಿಗೆ ಭೇಟಿ ನೀಡುವ ದಿನದಂದೇ ಅಥವಾ ಅಹ್ಮದಾಬಾದ್ ಹಾಗೂ ದೆಹಲಿಗಳಲ್ಲಿ ವಿದೇಶಿ ಹೂಡಿಕೆದಾರರ ಸಮಾವೇಶ ಜರುಗುವ ದಿನದಂದೇ ಪಶ್ಚಿಮದ ಪ್ರಮುಖ ಪತ್ರಿಕೆಗಳಲ್ಲಿ ಮೋದಿಯವರ ವಿರುದ್ಧ, ಅವರ ಸರ್ಕಾರದ ನೀತಿಗಳ ವಿರುದ್ಧ, ಹಿಂದುತ್ವದ ವಿರುದ್ಧ, ಭಾರತದಲ್ಲಿ ಅಲ್ಪಸಂಖ್ಯಾತರ ‘ದಯನೀಯ’ (!) ಸ್ಥಿತಿಯ ಕುರಿತಾಗಿ ಲೇಖನಗಳು ಪ್ರಕಟವಾಗುತ್ತಿದ್ದುದು ನೆನಪಿದೆಯೇ? ಅವುಗಳ ಹಿಂದೆ ಇರುತ್ತಿದ್ದುದು ಯುಎಸ್​ಎಐಡಿ ಹಣ! ಜಗತ್ತಿನಾದ್ಯಂತ ತನಗೆ ಒಗ್ಗದ ರಾಜಕಾರಣಿಗಳ ವಿರುದ್ಧ ಅಪಪ್ರಚಾರಕ್ಕೆಂದೆ ಆ ಸಂಸ್ಥೆ ಸುಮರು 6,800 ಪತ್ರಕರ್ತರನ್ನೂ, 297 ಮಾಧ್ಯಮ ಸಂಸ್ಥೆಗಳನ್ನೂ ಹಣ ಕೊಟ್ಟು ಸಾಕುತ್ತಿತ್ತು.

ಯುಎಸ್​ಎಐಡಿಯಿಂದ ಹಣ ತೆಗೆದುಕೊಳ್ಳುವ ಮಾಧ್ಯಮ ಸಂಸ್ಥೆಗಳಲ್ಲಿ ಬಿಬಿಸಿ ಸಹ ಸೇರಿದೆ! ಗೋಧ್ರೋತ್ತರ ಕೋಮು ಹಿಂಸಾಚಾರದ ಬಗ್ಗೆ ಬಿಬಿಸಿಯ ದೆಹಲಿ ಕಚೇರಿ ತಯಾರಿಸಿದ ‘ಡಾಕ್ಯುಮೆಂಟರಿ’ಯನ್ನು ಎರಡು ವರ್ಷಗಳ ಹಿಂದೆ ಲೋಕಸಭೆಯ ಬಜೆಟ್ ಅಧಿವೇಶಕ್ಕೆ ಮೊದಲು ಬಿಬಿಸಿ ಪ್ರಸಾರ ಮಾಡಿದ್ದು ನೆನಪಿದೆಯೇ? ಮೋದಿಯವರ ವಿರುದ್ಧ ಮಾಡಲಾದ ಆಪಾದನೆಗಳೆಲ್ಲವೂ ಹುರುಳಿಲ್ಲದವು ಎಂದು ಸವೋಚ್ಚ ನ್ಯಾಯಾಲಯ ನೇಮಿಸಿದ ವಿಶೇಷ ತನಿಖಾ ದಳ ಹೇಳಿ, ಅದನ್ನು ನ್ಯಾಯಾಲಯ ಒಪ್ಪಿಕೊಂಡ ದಶಕದ ನಂತರ, ಮೋದಿಯವರ ವಿರುದ್ಧದ ದುಷ್ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತೀಸ್ತಾ ಸೇತಲ್ವಾಡ್​ರ ಆಪಾದನೆಗಳನ್ನು ಸವೋಚ್ಚ ನ್ಯಾಯಾಲಯ ತಿರಸ್ಕರಿಸಿದ್ದೂ ಅಲ್ಲದೆ ಆಕೆಯ ಹಿನ್ನೆಲೆಯನ್ನು ಶೋಧಿಸಬೇಕು ಎಂದು ಹೇಳಿದ ಏಳು ತಿಂಗಳುಗಳ ತರುವಾಯ ಆ ಮಿಥ್ಯಾಪೂರ್ಣ ‘ಡಾಕ್ಯುಮೆಂಟರಿ’ಯನ್ನು ಒಂದುಕಾಲದಲ್ಲಿ ವಸ್ತುನಿಷ್ಠ ವರದಿಗಾರಿಕೆಗೆ ಪ್ರಖ್ಯಾತವಾಗಿದ್ದ ಬಿಬಿಸಿ ಪ್ರಸಾರ ಮಾಡಿದ್ದರ ಹಿಂದೆ ಬೈಡೆನ್ ಅಧಿಕಾರಾವಧಿಯಲ್ಲಿ ಯುಎಸ್​ಎಐಡಿ ನೀಡಿದ ಹಣ ಇತ್ತು ಎಂದು ಇದರಿಂದ ಊಹಿಸಬಹುದಾಗಿದೆ.

ಭಾರತೀಯ ಮತದಾರರಿಗೆ ಸಮ್ಮತವೆನಿಸಿದ, ಒಬಾಮ ಆಡಳಿತಕ್ಕೆ ಸಮ್ಮತವಾಗದ ಮೋದಿ ಸರ್ಕಾರದ ವಿರುದ್ಧ ಯುಎಸ್​ಎಐಡಿ ತಾನು ಸಾಕಿದ್ದ ವಿವಿಧ ತಥಾಕಥಿತ ಮಾನವಹಕ್ಕುಗಳ, ಪರರಿಸರವಾದದ ಸಂಸ್ಥೆಗಳನ್ನು ಬಳಸಿಕೊಂಡು ದಾಳಿಯೆಸಗಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು. ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಸರ್ಕಾರವಿದ್ದಾಗ ಅವರು ಒಂದಕಿಂತ ಹೆಚ್ಚು ಪ್ರಜಾಪ್ರಭುತ್ವವಿರೋಧಿ ಕೃತ್ಯಗಳನ್ನೆಸಗಿದ್ದರು.

ತಮ್ಮದೇ ‘ನ್ಯಾಷನಲ್ ಅಡ್ವೆ ೖಸರಿ ಕೌನ್ಸಿಲ್’ ಎಂಬ ಅಸಾಂವಿಧಾನಿಕ ಸಂಸ್ಥೆಯನ್ನು ಕಟ್ಟಿಕೊಂಡು ಅದು ಚುನಾಯಿತ ಸರ್ಕಾರದ ಮೇಲೆ ಸವಾರಿ ಮಾಡುವಂತೆ ವ್ಯವಸ್ಥೆ ಮಾಡಿಕೊಂಡಿದ್ದರು. ತಮ್ಮ ವಿರುದ್ಧ ಬರೆದರು ಎಂದು ಐಟಿ ಕಾಯಿದೆಯ 66ಎ ಕಲಮನ್ನು ಬಳಸಿ ಸುಮಾರು 300 ಟ್ವಿಟರ್ ಹ್ಯಾಂಡಲ್​ಗಳನ್ನು ಬಂದ್ ಮಾಡಿಸಿದ್ದರು. ಇನ್ನು ಯುಪಿಎ ಸರ್ಕಾರದಲ್ಲಿನ ಭ್ರಷ್ಟಾಚಾರದ ಕಥೆಯನ್ನು ಕೇಳಲೇಬೇಡಿ. ಆದರೆ ಯುಎಸ್​ಎಐಡಿಗೆ ಭಾರತದಲ್ಲಿ ಯಾವುದೇ ಕೆಟ್ಟದ್ದು ಕಾಣಲಿಲ್ಲ. ಅದೆಲ್ಲ ಕಾಣಲು ಶುರುವಾಗಿದ್ದು ಹನ್ನೊಂದು ವರ್ಷಗಳ ಹಿಂದೆ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೇ.

ಜಗತ್ತಿನಾದ್ಯಂತ ಇಂತಹ ಕುಕೃತ್ಯಗಳಿಗಾಗಿ ಯುಎಸ್​ಎಐಡಿಗೆ ಅಮೆರಿಕಾ ಸರ್ಕಾರದಿಂದ ದೊರೆಯುತ್ತಿದ್ದು ಅರವತ್ತರಿಂದ ಎಪ್ಪತ್ತೆರಡು ಬಿಲಿಯನ್ ಡಾಲರ್​ಗಳ ಅಗಾಧ ಮೊತ್ತ! ಇದರಲ್ಲಿ ಒಂದು ಭಾಗ ಯುಎಸ್​ಎಐಡಿ ಅಧಿಕಾರಿಗಳೇ ಗುಳುಂ ಮಾಡುತ್ತಿದ್ದಿರಬಹುದಾದ ಸೂಚನೆಗಳಿವೆ. ಆ ಸಂಸ್ಥೆಯ ನಿರ್ದೇಶಕಿಯಾಗಿದ್ದ ಸಮಾಂತಾ ಪರವ್ ಅವರ ವಾರ್ಷಿಕ ಪಗಾರ 1,80,000 ಡಾಲರ್​ಗಳು. ಆದರೆ ಈಗ ಆಕೆಯ ಸಂಪತ್ತಿನ ಮೌಲ್ಯ 30 ಮಿಲಿಯನ್ ಡಾಲರ್​ಗಳು! ಈ ಹಿನ್ನೆಲೆಯೊಂದಿಗೆ ಭಾರತದಲ್ಲಿ ಯುಎಸ್​ಎಐಡಿ ಕಾರಸ್ಥಾನಗಳ ಪರಿಚಯ ಮುಂದಿನವಾರ ಸರಣಿಯ ನಾಲ್ಕನೆಯ ಹಾಗೂ ಅಂತಿಮ ಭಾಗದಲ್ಲಿ ಮಾಡಿಕೊಳ್ಳೋಣ. (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net