

ಬಹಳಷ್ಟು ಬಾರಿ ನಾವು ಅಡುಗೆಯಲ್ಲಿ ರುಚಿಗೆ ಎಂದು ಹಾಕುವ ಪದಾರ್ಥಗಳು ನಮ್ಮ ಆರೋಗ್ಯವನ್ನು ಹೆಚ್ಚಿಸಲು ತುಂಬಾ ಸಹಕಾರಿಯಾಗಿರುತ್ತವೆ. ಅವುಗಳಲ್ಲಿ ವಿಶೇಷವಾಗಿರುವುದು
ಚಕ್ಕೆ. ಆಯುರ್ವೇದದಲ್ಲಿ ಹೇಳಿದ ಪ್ರಮುಖ ಔಷಧಗಳಲ್ಲಿ ಇದೂ ಒಂದು. ಭಾರತ ಮಧುಮೇಹದ ರಾಜಧಾನಿಯಾಗಿರುವ, ಬಹಳಷ್ಟು ನಗರವಾಸಿಗಳು ಬೊಜ್ಜಿನಿಂದ ಬಳಲುತ್ತಿರುವ
ಮತ್ತು ಕರೊನಾದ ನಾಲ್ಕನೇ ಅಲೆ ಸುದ್ದಿ ಮಾಡುತ್ತಿರುವ ಈ ಸಂದರ್ಭದಲ್ಲಿ ಚಕ್ಕೆಯ ವಿಶೇಷತೆಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳೋಣ. ಜೊತೆಗೆ ಚಕ್ಕೆ ಮತ್ತು ಜೇನುತುಪ್ಪದ ಮಿಶ್ರಣದಿಂದ ಆಗುವ ಲಾಭಗಳ ಬಗ್ಗೆಯೂ ತಿಳಿದುಕೊಳ್ಳೋಣ.
ಆಯುರ್ವೇದದ ಸಂಹಿತೆಗಳಲ್ಲಿ ಇದರ ಬಗ್ಗೆ ಹೇಳುವಾಗ ಶುಕ್ರಲಾ ಬಲ್ಯಾ ವರ್ಣ್ಯಾ ಎಂದು ಹೇಳಿದ್ದಾರೆ. ಅಂದರೆ ವೀರ್ಯದ ಗುಣವನ್ನು, ಲೈಂಗಿಕ ಶಕ್ತಿಯನ್ನು, ದೇಹದ ಬಲವನ್ನು ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಎಂದರ್ಥ. ಮಧುಮೇಹ ಮತ್ತು ಬೊಜ್ಜಿನಿಂದ ಬಳಲುತ್ತಿರುವವರಿಗೆ ಚಕ್ಕೆ ಒಂದು ವರದಾನವೇ ಸರಿ. ಇನ್ಸುಲಿನ್ ಅನ್ನು ದೇಹ ಬಳಸಿಕೊಳ್ಳುವಂತೆ ಮಾಡಿ ಮಧುಮೇಹವನ್ನು ಇದು ಹತೋಟಿಯಲ್ಲಿಡುತ್ತದೆ. ಅಷ್ಟೇ ಅಲ್ಲದೆ ಗ್ಲೂಕೋಸನ್ನು ದೇಹ ಹೀರಿಕೊಳ್ಳುವ ವೇಗವನ್ನು ನಿಯಂತ್ರಿಸುತ್ತದೆ. ಈ ಕಾರಣದಿಂದ ದಿನವಿಡೀ ನಮ್ಮ ದೇಹದಲ್ಲಿ ಸಕ್ಕರೆಯ ಮಟ್ಟ ಸರಿಯಾಗಿ ಇರುವಂತೆ ನೋಡಿಕೊಳ್ಳುತ್ತದೆ. ಹೀಗಾಗಿ ಮಧುಮೇಹ ಮತ್ತು ಮಧುಮೇಹದ ಅಡ್ಡ ಪರಿಣಾಮವಾಗಿ ಕಣ್ಣು, ಕಿಡ್ನಿ ಮತ್ತು ನರಗಳಿಗೆ ಸಮಸ್ಯೆಯಾಗುವುದನ್ನು ತಡೆಯುತ್ತದೆ.
ಇಂದು ನಾವು ವಿಶೇಷವಾಗಿ ಚಕ್ಕೆ ಮತ್ತು ಜೇನುತುಪ್ಪದ ಮಿಶ್ರಣದ ಬಳಕೆಯ ಬಗ್ಗೆ ತಿಳಿದುಕೊಳ್ಳೋಣ. ಚೆಕ್ಕೆ ಮತ್ತು ಶುದ್ಧ ಜೇನುತುಪ್ಪಗಳ ಮಿಶ್ರಣವು ಒಂದಕ್ಕೊಂದು ಪೂರಕವಾಗಿ ನಮ್ಮ ದೇಹದ ಹಲವಾರು ಕಾಯಿಲೆಗಳನ್ನು ಗುಣಪಡಿಸಲು ಸಹಾಯಮಾಡುತ್ತದೆ. ಅರ್ಧ ಟೀ ಚಮಚದಷ್ಟು ಚಕ್ಕೆ ಪುಡಿ ಮತ್ತು ಒಂದು ಚಮಚದಷ್ಟು ಜೇನುತುಪ್ಪವನ್ನು ದಿನಕ್ಕೆರಡು ಬಾರಿ ಆಹಾರದ ಮೊದಲು ಸೇವಿಸಬೇಕು. ಇದರಿಂದ ಮೂತ್ರಪಿಂಡದ ಕಾರ್ಯವು ಸರಿಯಾಗಿ ಆಗಿ ರಕ್ತದಲ್ಲಿನ ಕ್ರಿಯಾಟಿನಿನ್ ಪ್ರಮಾಣವು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೇ ಗಾಯ ಬೇಗ ಗುಣವಾಗಲು ಮತ್ತು ತುರಿಕೆಯಂತಹ ಚರ್ಮದ ಸಮಸ್ಯೆಗಳು ನಿವಾರಣೆಯಾಗಲೂ ಸಹಾಯವಾಗುತ್ತದೆ. ಈ ಮಿಶ್ರಣದಿಂದ ಆಗುವ ಇನ್ನೊಂದು ದೊಡ್ಡ ಲಾಭವೆಂದರೆ ಬೊಜ್ಜು ಕಡಿಮೆಯಾಗುತ್ತದೆ.
ಚಕ್ಕೆ ಮತ್ತು ಜೇನುತುಪ್ಪ ಎರಡಕ್ಕೂ ಹೆಚ್ಚಾದ ಕೊಬ್ಬನ್ನು ಕರಗಿಸುವ ಗುಣವಿದೆ. ಹೀಗಾಗಿ ಇವುಗಳ ಮಿಶ್ರಣವನ್ನು ಸೇವಿಸಿದಾಗ ದುಪ್ಪಟ್ಟು ವೇಗದಲ್ಲಿ ಬೊಜ್ಜು ಕಡಿಮೆಯಾಗುತ್ತದೆ. ಈ ಮಿಶ್ರಣವನ್ನು ನಿಯಮಿತವಾಗಿ ಬಳಸುವವರಿಗೆ ಅಲರ್ಜಿ, ಅಸ್ತಮಾ, ನೆಗಡಿ, ಸೈನಸೈಟಿಸ್ನಂತಹ ಸಮಸ್ಯೆಗಳು ಕಾಡುವ ಸಾಧ್ಯತೆ ತುಂಬಾ ಕಡಿಮೆ. ಆದರೆ ಇವೆರಡಕ್ಕೂ ಉಷ್ಣ ಗುಣವಿರುವ ಕಾರಣ ಪಿತ್ತದ ಸಮಸ್ಯೆಯಿಂದ ಬಳಲುತ್ತಿರುವವರು, ಗರ್ಭಿಣಿಯರು, ಮುಟ್ಟಿನ ಸಮಯದಲ್ಲಿ ಮತ್ತು ಪ್ರಖರ ಬೇಸಿಗೆಯಲ್ಲಿ ಇದನ್ನು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಚಕ್ಕೆಯನ್ನು ಅಂಗಡಿಗಳಲ್ಲಿ ಖರೀದಿಸುವಾಗ ಕಾಳಜಿ ತೆಗೆದುಕೊಳ್ಳಬೇಕು. ಯಾವುದೋ ಮರದ ತೊಗಟೆಗೆ ಕೃತ್ರಿಮ ಪರಿಮಳವನ್ನು ಸೇರಿಸಿ ಚಕ್ಕೆ ಎಂದು ಮಾರಾಟ ಮಾಡುವವರೂ ಇದ್ದಾರೆ. ಸಾಧ್ಯವಾದರೆ ಹಳ್ಳಿಗಳಲ್ಲಿ ಬೆಳೆದಿರುವ ಚಕ್ಕೆಯ ಮರದ ತೊಗಟೆಯನ್ನು ಬಳಸಿದರೆ ಒಳ್ಳೆಯದು.
(ಪ್ರತಿಕ್ರಿಯಿಸಿ: vvsudina@gmail.com)