ಯಶಸ್ಸಿನ ಮೊದಲ ಅವಶ್ಯಕತೆ ಆತ್ಮಶ್ರದ್ಧೆ

3-685c3b72440d1
Published on
ವೇದೋತ್ತರ ಭಾರತೀಯ ಚಿಂತನೆಗಳನ್ನು ನೋಡಿದವರಿಗೆ ತಾನೇಕೆ ಭಾರತದಲ್ಲಿ ಹುಟ್ಟಲಿಲ್ಲ ಎಂಬ ವ್ಯಥೆ ಕಾಡದಿರದು. ಮಹತ್ತರವಾದದ್ದೊಂದರಿಂದ ವಂಚಿತನಾದೆ ಎಂಬ ನೋವು ಕಾಡದಿರದು. ಹಾಗೇನಾದರೂ ಆಗದಿದ್ದಲ್ಲಿ ಒಂದೋ ಅವರು ಪೂರ್ವಗ್ರಹ ಎಂಬ ಭದ್ರಕೋಟೆಯಲ್ಲಿ ಬಂಧಿತರಾಗಿರುವುದು ಇಲ್ಲವೇ ಭಾರತವನ್ನು ಕುರಿತ ವಿಕೃತ ಪರಿಚಯವಷ್ಟೇ ಅವರ ಪಾಲಿನದ್ದಾಗಿದೆ.

ಸುಪ್ರಸಿದ್ಧ ಚಿಂತಕ, ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸರಾದ ಬ್ರಹ್ಮಲೀನ ಶ್ರೀಮತ್ ಸ್ವಾಮಿ ರಂಗನಾಥಾನಂದಜಿ ತಮ್ಮ ಸ್ಪಷ್ಟ ಮಾತುಗಳಲ್ಲಿ ಪದೇಪದೆ ಹೇಳುತ್ತಿದ್ದುದು, ‘ಭಾರತೀಯ ಚಿಂತನೆಯಲ್ಲಿ ಉದ್ಧಾರದ ಹಾದಿಯನ್ನು ಕುರಿತ ಒಂದೊಂದು ಇಂಚು ಅತ್ಯಂತ ಸ್ಪಷ್ಟವಾಗಿ ರೂಪಿಸಲ್ಪಟ್ಟಿದೆ’ ಎಂದು. ಅವರ ಕೃತಿಶ್ರೇಣಿ ಅಥವಾ ಧ್ವನಿಮುದ್ರಿತ ಉಪನ್ಯಾಸಗಳಲ್ಲಿ ಇದನ್ನು ಸ್ಪಷ್ಟವಾಗಿ ನೋಡಬಹುದು. ಅವೆಲ್ಲ ವಿಶಾಲ, ವೈಜ್ಞಾನಿಕ, ಸ್ಪಷ್ಟ ಮತ್ತು ನೇರ.

ಉದ್ಧಾರದ ಹಾದಿಯಲ್ಲಿ ನಡೆದು ಗುರಿ ಮುಟ್ಟಬೇಕೆಂಬ ಮನುಷ್ಯನಿಗೆ ಮೊದಲ ಅವಶ್ಯಕತೆ ಶ್ರದ್ಧೆ. ಶ್ರದ್ಧೆ ಪ್ರತಿಯೊಬ್ಬ ಮನುಷ್ಯನೂ ಬೆಳೆಸಿಕೊಳ್ಳಬೇಕಾದ- ಎಷ್ಟೇ ಪ್ರಯತ್ನಪಟ್ಟಾದರೂ ಸರಿಯೇ- ಒಂದು ಲಕ್ಷಣ, ಗುಣ. ಎಲ್ಲ ಧೀರತೆಯ ಬುನಾದಿ ಇದು. ಶ್ರದ್ಧೆಯಿಂದಾಗುವ ಪ್ರಯೋಜನವೇನು ಮತ್ತು ಅದಿಲ್ಲದಿದ್ದರೆ ಆಗುವ ಪ್ರಮಾದಗಳೇನು, ನಷ್ಟಗಳೇನು ಎಂಬುದನ್ನು ಶ್ರೀಕೃಷ್ಣ, ಶ್ರೀಶಂಕರ ಮತ್ತು ಸ್ವಾಮಿ ವಿವೇಕಾನಂದರು ಹತ್ತು ರೀತಿಯಲ್ಲಿ ಹತ್ತು ದೃಷ್ಟಿಕೋನಗಳಿಂದ ಸ್ಪಷ್ಟಪಡಿಸಿದ್ದಾರೆ. ಶ್ರದ್ಧೆಯೇ ರಾಜಮಾರ್ಗ, ಯಾರ ಶ್ರದ್ಧೆ ಎಷ್ಟೋ ಅವರ ಮಟ್ಟವೂ, ಸಾಧನೆಯೂ ಅಷ್ಟೇ ಎಂದಿದ್ದಲ್ಲದೆ ಕೃಷ್ಣ ಈ ಮೂರು ಜನ ಉದ್ಧಾರವಾಗುವ ಸಂಭವವೇ ಇಲ್ಲ ಎಂದು ಹೇಳಿ ಅಜ್ಞಾನಿ, ಶ್ರದ್ಧಾಹೀನ ಮತ್ತು ಸಂಶಯಗ್ರಸ್ತ ಇವರೇ ಅವರು ಎನ್ನುತ್ತಾನೆ.

ಸ್ವಾಮಿ ವಿವೇಕಾನಂದರು ಶ್ರದ್ಧೆಯನ್ನು ಕುರಿತು ಹೇಳ್ತಾರೆ, ‘ಈ ಜಗತ್ತಿನ ಚರಿತ್ರೆ ಆತ್ಮಶ್ರದ್ಧೆಯನ್ನು ಹೊಂದಿದ್ದ ಕೆಲವೇ ಜನರ ಚರಿತ್ರೆಯಾಗಿದೆ’. ಇಲ್ಲಿ ವ್ಯತ್ಯಾಸ ಎಷ್ಟು ಗಾಢವಾಗಿದೆ ಗಮನಿಸಿ. ಚರಿತ್ರೆಯನ್ನು ನಿರ್ವಿುಸಿದವರಿಗೂ ಹಾಗೆ ನಿರ್ವಿುತವಾದ ಚರಿತ್ರೆಯನ್ನು ಕೇವಲ ಒದುವುದರಲ್ಲೇ ತೃಪ್ತಿ ಪಡುವವರಿಗೂ ಇರುವ ಏಕಮೇವ ವ್ಯತ್ಯಾಸ ತಮ್ಮ ಶಕ್ತಿಗಳಲ್ಲಿ ಅವರಿಟ್ಟ ಭರವಸೆ. ವ್ಯಕ್ತಿ ಅಥವಾ ತತ್ವದಲ್ಲಿಡುವ ಭರವಸೆಯನ್ನೇ ಶ್ರದ್ಧೆ ಎಂದು ಕರೆಯುವುದು. ಈ ಶ್ರದ್ಧೆ ಪ್ರಧಾನವಾಗಿ ಎರಡು ರೂಪದಲ್ಲಿರುತ್ತದೆ. ಒಂದು ಆತ್ಮಶ್ರದ್ಧೆ ಮತ್ತೊಂದು ಭಗವತ್ ಶ್ರದ್ಧೆ. ತಾನು ಆತ್ಮನೇ ಆಗಿದ್ದೇನೆ ಎಂಬ ಸಂಶಯಕ್ಕೆಡೆಯಿಲ್ಲದ ಭರವಸೆ ಮತ್ತು ತಾನು ಆತ್ಮನೇ ಆಗಿರುವುದರಿಂದ ತನಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬ ಗಾಢನಂಬಿಕೆ ಆತ್ಮಶ್ರದ್ಧೆಯಾದರೆ, ತಾನು ನಿಷ್ಠೆಯಿಂದಿರುವ, ತಾನು ನೆಚ್ಚಿಕೊಂಡ ಪರಮಾತ್ಮಅಸಾಧಾರಣ ಶಕ್ತಿವಂತ, ಸರ್ವಶಕ್ತ ಅವನು ನನ್ನನ್ನು ಎಂದಿಗೂ ಸೋಲಲು ಬಿಡುವುದಿಲ್ಲ ಎಂಬ ದೃಢನಂಬಿಕೆಯೇ ಭಗವತ್ ಶ್ರದ್ಧೆ. ಮೊದಲನೆಯದಕ್ಕೆ ಕಠೋಪನಿಷತ್ತಿನ ನಚಿಕೇತ ಉದಾಹರಣೆಯಾದರೆ ಎರಡನೆಯದಕ್ಕೆ ಹನುಮಂತ ಉದಾಹರಣೆ.

ನಚಿಕೇತ, ಯಮರ ನಡುವಿನ ಸಂಭಾಷಣೆಯಲ್ಲಿ ಇದು ಸ್ಪಷ್ಟವಾಗುತ್ತದೆ. ‘ರಾಮನಾಮದ ಶಕ್ತಿಯಲ್ಲಿ ಹನುಮಂತನಿಗೆ ಇಂಥ ದೃಢವಿಶ್ವಾಸ! ಅದನ್ನು ಒಮ್ಮೆ ಉಚ್ಚರಿಸಿಯೇ ಅವನು ಸಮುದ್ರ ದಾಟಿಬಿಟ್ಟ. ಆದರೆ ಸ್ವಯಂ ರಾಮನೇ ಸಮುದ್ರವನ್ನು ದಾಟಬೇಕಾದರೆ ಸೇತುವೆ ಕಟ್ಟಬೇಕಾಯ್ತು’ ಎಂದು ಶ್ರೀರಾಮಕೃಷ್ಣರು ಪದೇಪದೆ ಹೇಳುತ್ತಿದ್ದರು. ಒಂದರ್ಥದಲ್ಲಿ ಆತ್ಮಶ್ರದ್ಧೆ ಮತ್ತು ಭಗವತ್ ಶ್ರದ್ಧೆ ಬೇರೆ ಬೇರೆಯೇನೂ ಅಲ್ಲ ಮತ್ತು ಆತ್ಮಶ್ರದ್ಧೆಯಿಲ್ಲದವನಿಗೆ ಭಗವತ್ ಶ್ರದ್ಧೆ ಮೂಡುವುದೂ ಕಷ್ಟ. ಈ ಆತ್ಮಶ್ರದ್ಧೆ ಅಹಂಕಾರಕ್ಕೆ ತಿರುಗಿ ಭಕ್ತಿಗೆ ಧಕ್ಕೆಯುಂಟಾದರೆ ಎನ್ನುವ ಭಕ್ತರಿಗೆ ಶ್ರೀರಾಮಕೃಷ್ಣರು ಉಪಾಯಗಳನ್ನು ಸೂಚಿಸುತ್ತಾರೆ.

ಅವು ಭಕ್ತಿಯೋಗದ ಹಲವು ಸೂಕ್ಷ ್ಮ ಸಂವಹನಗಳೇ. ಭಗವತ್ ಶ್ರದ್ಧೆಯನ್ನು ನಾಸ್ತಿಕರೂ, ಆಜ್ಞೇಯತಾವಾದಿಗಳೂ ಒಪ್ಪದಿರಬಹುದು ಆದರೆ ಆತ್ಮಶ್ರದ್ಧೆ ಅವರಿಗೆ ಸಮ್ಮತವೇ! ಇತಿಹಾಸದುದ್ದಕ್ಕೂ ಭಾರತ ಇನ್ನಿಲ್ಲದ ರೀತಿಯಲ್ಲಿ ನಲುಗಿದ್ದು ಈ ಆತ್ಮಶ್ರದ್ಧೆಯ ಕೊರತೆಯಿಂದಲೇ. ಅಲೆಕ್ಸಾಂಡರನ ಎರಡು ಲಕ್ಷ ಸೈನಿಕರನ್ನು ಪೋರಸ್​ನ ಇಪ್ಪತ್ತು ಸಾವಿರ ಸೈನಿಕರು ಅನಾಯಾಸವಾಗಿ ಎದುರಿಸಿದ್ದು, ಹಣ್ಣುಗಾಯಿ ನೀರುಗಾಯಿ ಮಾಡಿದ್ದು ಅವರ ಆತ್ಮಶ್ರದ್ಧೆಯ ಬಲದಿಂದಾಗಿ. ಆಕಸ್ಮಾತ್ತಾಗಿ ಮಳೆ ಬಂದಿರಲಿಲ್ಲ ಎಂದರೆ ಅಲೆಕ್ಸಾಂಡರ್ ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂದಿರುಗಬೇಕಾಗಿತ್ತು.

ಸೋತ ಪೋರಸ್​ನನ್ನು ಅಲೆಕ್ಸಾಂಡರ್, ‘ನಿನ್ನನ್ನು ಯಾವ ರೀತಿ ಕಾಣಬೇಕೆಂದು ಬಯಸುತ್ತೀಯೇ?’ ಎಂದು ಕೇಳಿದಾಗ ‘ಒಬ್ಬ ರಾಜ ಇನ್ನೊಬ್ಬ ರಾಜನನ್ನು ಹೇಗೆ ಕಾಣುತ್ತಾನೋ ಹಾಗೆ ಕಾಣು’ ಎಂದ ಪೋರಸ್​ನ ಧೀರ ನಡೆ ಆತ್ಮಶ್ರದ್ಧೆಯ ನೇರ ವ್ಯಕ್ತತೆ. ಆತ್ಮಶ್ರದ್ಧೆಯ ಸ್ಪಷ್ಟ ಪರಿಣಾಮವೇ ನಿರ್ಭಯತೆ. ಆತ್ಮಗೌರವ ಮತ್ತು ಸೋಲೊಪ್ಪಿಕೊಳ್ಳದಿರುವುದು. ಪ್ರಾಚೀನ ಭಾರತದಲ್ಲಿ ಈ ಶ್ರದ್ಧೆಯ ಹೇರಳತೆಯನ್ನು ವಿಸ õತರೂಪದಲ್ಲಿ ಕಾಣುತ್ತೇವೆ. ಕಾರಣವಿಷ್ಟೇ! ಅಂದಿನ ಗುರುಕುಲಗಳಲ್ಲಿ ವಿದ್ಯಾರ್ಥಿಗಳಿಗೆ ಹೇಳಿ ಕೊಡುತ್ತಿದ್ದ ಮೊದಲ ಪಾಠವೇ ಆತ್ಮಶ್ರದ್ಧೆಯನ್ನು ಕುರಿತು! ಒಂದು ಜುಟ್ಟು ಮತ್ತು ಸಿಟ್ಟನ್ನು ಮಾತ್ರ ಆಸ್ತಿಯನ್ನಾಗಿ ಹೊಂದಿದ್ದ ಚಾಣಕ್ಯ ಪ್ರಬಲ ಧನನಂದನನ್ನು ಉರುಳಿಸಿ ಸಾಮಾನ್ಯ ಚಂದ್ರಗುಪ್ತನನ್ನು ಚಕ್ರವರ್ತಿಯನ್ನಾಗಿಸಿದಲ್ಲಿ ಅವನಿಗೆ ನೆರವಾಗಿದ್ದು ಕೇವಲ ಅವನ ಆತ್ಮಶ್ರದ್ಧೆ.

ಕೈಯಲ್ಲಿ ಬಿಡಿಗಾಸಿಲ್ಲದೆ ಕೇವಲ ಮೂರೂವರೆ ವರ್ಷದಲ್ಲಿ ಅರ್ಧಪ್ರಪಂಚವನ್ನು ಗೆದ್ದು ಜೈತ್ರಯಾತ್ರೆ ಮಾಡಿದ ಸ್ವಾಮಿ ವಿವೇಕಾನಂದರಲ್ಲಿದ್ದುದು ಆತ್ಮವಿಶ್ವಾಸ ಅಥವಾ ಆತ್ಮಶ್ರದ್ಧೆ. ಭಾರತದ ಉದ್ದಗಲಕ್ಕೂ ಮೂರು ಸಲ ಪಯಣಿಸಿದ ಹದಿನಾರು ವರ್ಷದ ಯುವಕ ಅಂದಿನ ಧರ್ಮಗ್ಲಾನಿಯನ್ನು ಕಿತ್ತೊಗೆದು ಸ್ಪಷ್ಟ, ಸತ್ವಯುತ ವೇದಾಂತ ತತ್ವಗಳನ್ನು ಪ್ರಚುರ ಪಡಿಸಿದ ಶಂಕರಾಚಾರ್ಯರಲ್ಲಿದ್ದುದು ಅದೇ ಆತ್ಮವಿಶ್ವಾಸ ಅಥವಾ ತಮ್ಮ ಆತ್ಮನ ವೈಭವವನ್ನು ಅವರು ಜಾಗೃತಗೊಳಿಸಿಕೊಂಡಿದ್ದುದರ ವಿಪುಲತೆ.

ವೇದಾಂತದ ಜ್ಞಾನಯೋಗ ಮತ್ತು ಅದ್ವೈತಗಳ ದೃಷ್ಟಿಯಲ್ಲಿ ಆತ್ಮನ ಕುರಿತ ಶ್ರದ್ಧೆಯೇ ‘ಭಕ್ತಿ’ ಎಂದೆನಿಸಿಕೊಳ್ಳುತ್ತದೆ. ತನ್ನಾತ್ಮನನ್ನೇ ಭಗವಂತನೆಂದು ಪರಿಗಣಿಸಿ ತನ್ನ ಉದ್ಧಾರ ತನ್ನ ಕೈಯಲ್ಲೇ ಇದೆ ಎಂದು ಭಾವಿಸುವುದು ಮನುಷ್ಯನನ್ನು ಹೆಚ್ಚೆಚ್ಚು ಪ್ರಯತ್ನಶೀಲನನ್ನಾಗಿಸುತ್ತದೆ. ಜವಾಬ್ದಾರಿ ವ್ಯಕ್ತಿಯನ್ನಾಗಿಸುತ್ತದೆ. ನೈತಿಕ ಪ್ರಜ್ಞೆಯುಳ್ಳವನ್ನಾಗಿಸುತ್ತದೆ. ‘ಆತ್ಮ’ ಎಂಬುದನ್ನು ಹೊರತು ಪಡಿಸಿ ಮೇಲಿನ ಗುಣಗಳನ್ನೇ ಬೌದ್ಧಧರ್ಮ ಒತ್ತು ಕೊಟ್ಟು ಬೋಧಿಸಿದ್ದು. ಬುದ್ಧನ ನಂತರದ ಸಾವಿರಾರು ವರ್ಷಗಳು ಭಾರತದ ನೈತಿಕತೆಯ ಉಚ್ಛಾ›ಯ ಸ್ಥಿತಿ.

‘ನನ್ನ ದೇವರು ನಾನೇನು ಮಾಡಿದರೂ ಮನ್ನಿಸುತ್ತಾನೆ. ನನಗೆ ಬಡ್ತಿ ಕಟ್ಟಿಟ್ಟ ಬುತ್ತಿ. ನಮ್ಮ ದೇವರ, ನಮ್ಮ ಗುರುಗಳ ಭಕ್ತರಾಗದೇ ಯಾರಿಗೂ ಬಿಡುಗಡೆಯೇ ಇಲ್ಲ’ ಎಂಬ ಧರ್ಮಗಳೇ ಇಂದು ಪ್ರಪಂಚದ ಮುಕ್ಕಾಲು ಅವಘಡಗಳಿಗೆ ಕಾರಣವಾಗಿರುವುದು. ಕ್ರೂರ ಹೃದಯದ ಕಟುಕನೂ ಒಂದು ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಬಿಟ್ಟರೆ ದಯಾರ್ದ್ರ ಹೃದಯವಂತನಾಗಿಬಿಡುತ್ತಾನೆ. ‘ಜವಾಬ್ದಾರಿ ಮನುಷ್ಯನನ್ನು ಸಂಯಮಶೀಲನನ್ನಾಗಿಸುತ್ತದೆ’ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು. ಅದೆಷ್ಟು ಸದ್ಗುಣಗಳು ಆತ್ಮಶ್ರದ್ಧೆಯನ್ನು ತಮ್ಮ ಬುನಾದಿಯನ್ನಾಗಿಸಿಕೊಂಡಿವೆ ಎಂಬುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ.

ಭಾರತದ ಆಧುನಿಕ ಶಿಕ್ಷಣ ಪದ್ಧತಿಯಲ್ಲಿರುವ ಕೊರತೆಯೆಂದರೆ ಭಾರತೀಯ ಮಗುವಿನ ಆತ್ಮವಿಶ್ವಾಸವನ್ನು ಬುಡಸಮೇತ ಕಿತ್ತು ಹಾಕುವುದಕ್ಕೆ ನಡೆದಿರುವ ಆಳವಾದ ಪ್ರಯತ್ನ. ವಿವೇಕಾನಂದರ ಭಾಷೆಯಲ್ಲಿ ಹೇಳುವುದಾದರೆ, ‘ನಿನ್ನ ತಂದೆ ಮೂರ್ಖ; ನಿನ್ನ ತಾತ ಅರೆ ಹುಚ್ಚ’ ಮುಂತಾದ ನಕಾರಾತ್ಮಕ ಚಿಂತನೆಗಳ ಮೂಟೆಯೇ ಭಾರತೀಯ ವಿದ್ಯಾರ್ಥಿಯ ಬೆನ್ನ ಮೇಲೆ ಪ್ರತಿನಿತ್ಯ ಸವಾರಿ ಮಾಡುವ ವಸ್ತು. ಪರಂಪರೆಯ ಅವಹೇಳನವಲ್ಲದೆ ಚರಿತ್ರೆಯಲ್ಲಿ ಏನನ್ನು ನೋಡುತ್ತೇವೆ? ಜಗತ್ತಿನ ಮೂಲೆಮೂಲೆಯಲ್ಲೂ ಕಾಣುವ ಯಾವುದೇ ಸಮಸ್ಯೆಯ ಮೂಲವೇ ಐರೋಪ್ಯರು ವಿಶೇಷವಾಗಿ ಇಂಗ್ಲೆಂಡ್ ನಡೆಸಿದ ರಾಕ್ಷಸೀ ಕೃತ್ಯಗಳು ಮತ್ತು ವಂಚನೆಗಳು.

ಆದರೆ ಅವರ ಚರಿತ್ರೆಯಲ್ಲಿ ಆ ದೇಶದ ಮಕ್ಕಳಿಗೆ ಇದನ್ನು ಬೋಧಿಸುವುದಿಲ್ಲ. ಥಾಮಸ್ ಆಳ್ವಾ ಎಡಿಸನ್​ನಿಂದ ಸ್ಥಾಪಿತವಾದ ಜನರಲ್ ಎಲೆಕ್ಟ್ರಿಕಲ್ ಕಂಪನಿಯ ಮುಖ್ಯಸ್ಥರು ಭಾರತಕ್ಕೆ ಆಗಮಿಸಿದಾಗ, ‘ನಿಮ್ಮ ಸೇವೆಯಲ್ಲಿರುವ ಭಾರತೀಯ ಮತ್ತು ಅವರ ಸಹೋದ್ಯೋಗಿ ಅಮೆರಿಕನ್ ಇಂಜಿನಿಯರುಗಳ ನಡುವಿನ ವ್ಯತ್ಯಾಸವೇನು’ ಎಂದು ಪ್ರಶ್ನಿಸಿದಾಗ ಅವರು ಹೇಳಿದ್ದು, ‘ಭಾರತೀಯ ಇಂಜಿನಿಯರ್ ತನ್ನ ಅಮೆರಿಕನ್ ಸಹೋದ್ಯೋಗಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ಕೆಲವೊಂದು ವಿಷಯಗಳಲ್ಲಿ ಮುಂದೆಯೇ ಇದ್ದಾನೆ. ಆದರೆ ಅವನ ಆತ್ಮವಿಶ್ವಾಸ ಇನ್ನೂ ಬೆಳೆಯಬೇಕು’ ಎಂದು. ಈಗ ಎಷ್ಟೋ ಬದಲಾವಣೆಯಾಗಿದೆ ಎನ್ನುವುದು ಬೇರೆ ವಿಷಯ. ನಮ್ಮ ನೀತಿ ನಿರ್ವಪಕರು ವಿವೇಕಾನಂದರ ಚಿಂತನೆಯ ಬೆಳಕಿನಲ್ಲಿ ಶಿಕ್ಷಣ ನೀತಿಗಳನ್ನು ರೂಪಿಸಿದ್ದರೆ ‘ಆತ್ಮನಿರ್ಭರತೆ’, ‘ಸೂಪರ್ ಪವರ್’ ಭಾರತ ಎಂದೋ ಆಗಿರುತ್ತಿತ್ತು.

ಪ್ರೊ.ಮ್ಯಾಡಿಸನ್ನರ ಪ್ರಾಚೀನ ಭಾರತದ ಆರ್ಥಿಕ ಸಾಧನೆಗಳ ವಿವರ, ಖ್ಯಾತ ಗಾಂಧಿವಾದಿ ಧರ್ಮಪಾಲನ the beautiful tree, ಪ್ರೊ.ನೀಲಕಂಠ ಶಾಸ್ತ್ರಿಗಳ ಮತ್ತು ಡಾ. ಬ್ರಜೇಂದ್ರನಾಥ್ ಸೀಲ್​ರವರ ಮತ್ತು ಇಂಥ ಅದೆಷ್ಟೋ ಮಹಾತ್ಮರ ಚಿಂತನೆಗಳು ಈ ನೀತಿ ನಿರ್ವಪಕರ ಗಮನಕ್ಕೇ ಬರಲಿಲ್ಲ. ಟ್ರಿನಿಡಾಡ್ ಟೊಬ್ಯಾಗೋ, ಆಫ್ರಿಕಾದ ರಾಷ್ಟ್ರಗಳು, ಭಾರತ ಇಲ್ಲೆಲ್ಲ ಬ್ರಿಟಿಷರು ಕೈಗೊಂಡ ಮೊದಲ ಕೆಲಸ ಅದರ ಚರಿತ್ರೆಯನ್ನು ತಿರುಚಿ ಕೀಳರಿಮೆಯನ್ನು ಸೃಷ್ಟಿಸಿದ್ದು. ಪ್ರಾಚೀನ ಭಾರತದಲ್ಲಿ ಜನಸಾಮಾನ್ಯರನ್ನು ಶಿಕ್ಷಣದಿಂದ ವಂಚಿಸಲಾಗಿತ್ತು ಎನ್ನುವ ಅಜ್ಞಾನಿ, ಅವಿವೇಕಗಳ ಸಂಘ ಧರ್ಮಪಾಲರ ಪುಸ್ತಕವನ್ನೊದಲಿ! ಇದಕ್ಕೆಲ್ಲ ಪರಿಹಾರವೇ ವಿವೇಕಾನಂದರು ಮತ್ತೆ ಮತ್ತೆ ಮೊಳಗಿಸುತ್ತಿದ್ದ "Re- educate the educated' ಎನ್ನುವ ಮಂತ್ರ. ‘ಈ ವಿಶ್ವದಲ್ಲೇ ಹುಟ್ಟಿದ ಹೆಮ್ಮೆಯ ಮನುಷ್ಯರಲ್ಲಿ ನಾನೊಬ್ಬ.

ನನ್ನ ಹೆಮ್ಮೆಗೆ ಕಾರಣ ನನ್ನ ಪರಂಪರೆ’ ಎಂಬ ಸ್ವಾಮೀಜಿಯ ಮಾತಲ್ಲಿ, ಭಾರತ ಮಾತೆಯನ್ನು ಮತ್ತೊಮ್ಮೆ ತನ್ನ ಸಿಂಹಾಸನದಲ್ಲಿ ಕೂರಿಸೋಣ ಎನ್ನುವ ಮಾತಿನಲ್ಲಿ ಭೂತಕಾಲದ ಭಾರತ ಅದ್ಭುತವೋ, ಕಳಪೆಯೋ? ಭಾರತದ ಇತಿಹಾಸವನ್ನು ಪುನರ್ ರಚಿಸುವ ಕಾರ್ಯ. ಭಾರತದ ಸಾಧನೆಗಳನ್ನು ಪ್ರತಿಯೊಂದು ಮನೆ ಬಾಗಿಲಿಗೂ ತಲುಪಿಸುವ ಕಾರ್ಯಕ್ಕಿಂತ ರಾಷ್ಟ್ರಸೇವೆಯೂ ಬೇರೊಂದಿಲ್ಲ. ಸಮಾಜಸೇವೆಯೂ ಬೇರೊಂದಿಲ್ಲ!

ಕುರಿಯಂತೆ ಬದುಕುತ್ತಿರುವ ಸಿಂಹದ ಮರಿಯನ್ನು ಬಹುದೊಡ್ಡ ಕುರಿಯನ್ನಾಗಿಸುವುದರಲ್ಲಿಲ್ಲ ಅದರ ಉದ್ಧಾರ. ಅದು ನಿಜಕ್ಕೂ ಸಿಂಹವೇ ಆಗಿದೆ. ಸಿಂಹಜೀವನ ತನ್ನ ಜನ್ಮಸಿದ್ಧ ಹಕ್ಕು ಎಂದು ಹೇಳುವುದರಲ್ಲಿ ಅದರ ಕುರಿತು ಸಿಂಹದ ಮರಿಗೆ ಯಾವ ಸಂಶಯವೂ ಇಲ್ಲದಂತೆ ಸಾಬೀತು ಪಡಿಸುವುದರಲ್ಲಿದೆ ಅದಕ್ಕೆ ನಾವು ಸಲ್ಲಿಸುವ ನಿಜವಾದ ಸೇವೆ. ಸ್ವಾವಲಂಬನೆ, ಸ್ವಾಭಿಮಾನಗಳೇ ಉದ್ಧಾರದ ಮೊದಲ ಲಕ್ಷಣ. ಇವೆಲ್ಲ ಆತ್ಮಶ್ರದ್ಧೆಯ ಕೆಲವು ಫಲಗಳು ಮಾತ್ರ!

ಆತ್ಮಶ್ರದ್ಧೆ ಎಂದರೆ ‘ನಾವು ಎಂದೆಂದಿಗೂ ಆತ್ಮನೇ, ಆತ್ಮನ ಸಾಮರ್ಥ್ಯಗಳು, ಸದ್ಗುಣಗಳು ನಮ್ಮ ಸ್ವಭಾವವೇ ಆಗಿದೆ. ನಾವು ನಂಬಲಿ, ಬಿಡಲಿ ನಮಗೆ ಬೇಕಿರಲಿ, ಬೇಡದಿರಲಿ ನಮ್ಮ ಸಾಮರ್ಥ್ಯಗಳಂತೂ ನಮ್ಮನ್ನ ಬಿಟ್ಟು ಒಂದು ಸೆಕೆಂಡೂ ದೂರವಿರಲಾರದು’ ಎಂದು ಹಗಲು ರಾತ್ರಿ ಚಿಂತಿಸುತ್ತ ಅಪಾರ ಶಕ್ತಿ, ಶೌರ್ಯ, ಭವ್ಯತೆ, ದಿವ್ಯತೆಗಳನ್ನು ಸ್ವಭಾವವನ್ನಾಗಿಸಿಕೊಳ್ಳುವುದು. ವಿಜಯಶಾಲಿ, ಚರಿತ್ರೆಯ ನಿರ್ವತೃ, ಯುಗ ಪ್ರವರ್ತಕ ವ್ಯಕ್ತಿಗಳಲ್ಲಿ ನಾವು ಸಾಮಾನ್ಯವಾಗಿ ಕಾಣುವ ಗುಣಗಳೇ ಇವು. ಇವೇ ಅವರನ್ನು ಅಸಾಮಾನ್ಯರನ್ನಾಗಿಸಿದ್ದು.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net