ಮುಂಗಾರಿನ ಮೊದಲ ಹಬ್ಬ

edite 3
Published on

ಭಾರತದೇಶ ಹಬ್ಬ ಹರಿದಿನಗಳ ನಾಡು. ಇಲ್ಲಿ ಸಂಸ್ಕೃತಿ ಸಂಸ್ಕಾರಗಳು ಸಂಪ್ರದಾಯಗಳ ನೆಲೆಯಲ್ಲಿ ನಾವೆಲ್ಲ ಕಲ್ಲು-ಮಣ್ಣಿನಲ್ಲಿ, ಪ್ರಕೃತಿಯಲ್ಲಿ ದೈವತ್ವವನ್ನು ಕಾಣುತ್ತೇವೆ. ಹಬ್ಬಗಳನ್ನು ರೂಪಿಸಿ ಆಚರಿಸುತ್ತೇವೆ. ಹಾಗೆ, ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯವೊಂದಿದೆ. ಅದುವೇ ಮುಂಗಾರಿನ ಆರಂಭದ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ.

| ಗುರುಶಾಂತಸ್ವಾಮಿ ಹಿರೇಮಠ, ನೆಗಳೂರ

ಕಾರ ಹುಣ್ಣಿಮೆ ನಂತರ ಬರುವ ಮಣ್ಣೆತ್ತಿನ ಅಮಾವಾಸ್ಯೆ ಕೇವಲ ಅಮಾವಾಸ್ಯೆಯಲ್ಲ. ಅದೊಂದು ಹಬ್ಬ. ರೈತಾಪಿ ಜನರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ ಸಂಭ್ರಮ ಪಡುವ ಹಬ್ಬ. ಒಕ್ಕಲು ಮಕ್ಕಳಿಗೆ ಮಣ್ಣು ಅತ್ಯಂತ ಪವಿತ್ರವಾದುದು. ವರ್ಷಾರಂಭದಿಂದ ಒಟ್ಟು ಐದು ಬಾರಿ ಮಣ್ಣಿನ ಪೂಜೆಯನ್ನು ನೆರವೇರಿಸುವ ಸಂಪ್ರದಾಯವಿದೆ. ಆಷಾಢ, ಶ್ರಾವಣ ಮತ್ತು ಭಾದ್ರಪದ ಮಾಸಗಳಲ್ಲಿ ಈ ಮಣ್ಣು ಪೂಜೆ ಮಾಡಲಾಗುತ್ತದೆ. ಮಣ್ಣೆತ್ತು, ಗುಳ್ಳವ್ವ, ಹುತ್ತಪ್ಪ, ಗಣಪ್ಪ ಹಾಗೂ ಜೋಕುಮಾರ - ಈ ಐದೂ ಮಣ್ಣಿನಿಂದ ಮಾಡಿದ ದೈವಗಳನ್ನು ಮೂರು ಮಾಸಗಳಲ್ಲಿ ಜನರು ಪೂಜಿಸುತ್ತಾರೆ. ಕೃಷಿಕರ ಒಡನಾಡಿಯಾಗಿರುವ ದನಕರುಗಳನ್ನು ಕಾರಹುಣ್ಣಿಮೆಯಲ್ಲಿ ವಿಶೇಷವಾಗಿ ಮೈ ತೊಳೆದು, ಬಣ್ಣ ಹಚ್ಚಿ, ಸಿಂಗಾರ ಮಾಡಿ, ಹೋಳಿಗೆ, ಕಡಬು ಮುಂತಾದ ಸಿಹಿ ತಿನಿಸುಗಳನ್ನು ಮಾಡಿ ಎಡೆ ಹಿಡಿದು ಸಂಜೆಗೆ ಕರಿ ಹರಿಯುವ ಸಂಭ್ರಮ ಹೇಳತೀರದು. ದನಕರುಗಳನ್ನು ಮನಬಂದಂತೆ ಓಡಾಡಿಸುವ ಮೂಲಕ ತಿಂಗಳೊಪ್ಪತ್ತಿನಿಂದ ವಿಶ್ರಾಂತಿಗೆ ಸರಿದಿದ್ದ ಅವುಗಳನ್ನು ಮತ್ತೆ ಕೃಷಿ ಕಾಯಕಕ್ಕೆ ಸಜ್ಜು ಮಾಡುತ್ತಾರೆ.

ಕಾರ ಹುಣ್ಣಿಮೆ ಮುಗಿದ ನಂತರ ಬರುವ ಅಮಾವಾಸ್ಯೆಯೇ ಮಣ್ಣೆತ್ತಿನ ಅಮವಾಸ್ಯೆ. ಹೊಲಗಳಿಗೆ ಹೋಗಿ ಜಿಗುಟಿನಿಂದ ಕೂಡಿದ ಮಣ್ಣನ್ನು ತಂದು ಎತ್ತಿನ ಪ್ರತಿಕೃತಿಗಳನ್ನು ತಯಾರಿಸುತ್ತಾರೆ. ಇಲ್ಲವೇ ಕುಂಬಾರರ ಮನೆಗಳಿಂದಲೂ ತಯಾರಿಸಿದ ಜೋಡಿ ಎತ್ತುಗಳನ್ನು ಜೋಳ ಕಾಳು, ಹಣಕೊಟ್ಟು ತರುತ್ತಾರೆ. ಕುಂಬಾರರು ಎತ್ತುಗಳೊಂದಿಗೆ ಒಂದಿಷ್ಟು ಹಸಿ ಮಣ್ಣನ್ನೂ ಕೊಡುತ್ತಾರೆ. ಅದರಲ್ಲಿ ದನಗಳಿಗೆ ಹುಲ್ಲು ತಿನ್ನಲು ಗ್ವಾದಲಿ ಮಾಡುತ್ತಾರೆ. ಬಣ್ಣಗಳ ಬ್ಯಾಗಡಿ ಚೂರು, ಬಣ್ಣದಲ್ಲಿ ತೋಯಿಸಿದ ಜೋಳ, ಕುಸುಬಿ ಕಾಳುಗಳಿಂದ ಎತ್ತುಗಳಿಗೆ ಕೊಂಬಣಸು, ಇಣಿಗವಚ, ಜೂಲು, ತೋಡೆ, ಗಂಟೆ ಸರ ಮಾಡಿ ಸಿಂಗರಿಸುತ್ತಾರೆ. ಸಿಂಗರಿಸಿದ ಜೋಡೆತ್ತುಗಳನ್ನು ನೋಡುವುದೇ ಒಂದು ಸೊಗಸು. ನಂತರ ದೇವರ ಜಗುಲಿಯ ಮೇಲಿಟ್ಟು ಪೂಜೆಗೆ ಅಣಿಯಾಗುವ ಹೊತ್ತಿಗೆ ಮನೆಯ ಹೆಣ್ಣು ಮಕ್ಕಳು ಹೋಳಿಗೆ, ಕಡಬು ಮುಂತಾದ ಸವಿ ಸವಿ ಅಡುಗೆ ಸಿದ್ಧಪಡಿಸಿರುತ್ತಾರೆ. ಮನೆಯ ದನಕರುಗಳ ಮೈತೊಳೆದು ಪೂಜೆಗೆ ಸಿಂಗರಿಸುತ್ತಾರೆ. ಮಣ್ಣೆತ್ತುಗಳಿಗೆ ಕಾಯಿ, ಕರ್ಪರ, ಊದುಬತ್ತಿ, ಲೋಬಾನ ಹಾಕಿ ಎಡೆ ಹಿಡಿದು ಪೂಜೆ ಮಾಡುತ್ತಾರೆ. ಸಕಲ ಜೀವ ರಾಶಿಗಳಿಗೆ ಅನ್ನ ಹಾಕುವ ಭೂತಾಯಿಗೆ ಈ ಮೂಲಕ ಪೂಜೆ ಸಲ್ಲಿಸಿ ಕೃತಜ್ಞತೆ ಅರ್ಪಿಸುತ್ತಾರೆ. ಹೊಸ ಬಟ್ಟೆ ತೊಟ್ಟು ಊರಲ್ಲಿ ದೇವರುಗಳಿಗೆ ಕಾಯಿ, ಕರ್ಪರದೊಂದಿಗೆ ಹೋಗಿ ಎಡೆ ಹಿಡಿದು ಬಂದು ಒಟ್ಟಾಗಿ ಕುಳಿತು ಊಟ ಮಾಡುತ್ತಾರೆ. ಸಂಜೆ ಆರತಿ ಹಿಡಿದ ಹೆಣ್ಣುಮಕ್ಕಳು ಮನೆ ಮನೆಗೆ ತೆರಳಿ ಪೂಜಿತ ಎತ್ತುಗಳಿಗೆ ಆರತಿ ಬೆಳಗಿ ಸಂಭ್ರಮಿಸುತ್ತಾರೆ.

ಮರುದಿನ ಮಕ್ಕಳು ಮಣ್ಣಿನ ಎತ್ತುಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ಎತ್ತಿನ ಕಾಲು ಮುರಿದು ತಟ್ಟೆಯಲ್ಲಿ ಇಟ್ಟುಕೊಂಡು ಮನೆ ಮನೆಗೆ ತೆರಳಿ ‘‘ಎಂಟೆತ್ತಿನ್ಯಾಗ ಒಂದ ಕುಂಟೆತ್ತ ಬಂದೈತಿ, ಜ್ವಾಳಾ ನೀಡ್ರಿ...’ ಎಂದು ರಾಗವಾಗಿ ಹೇಳುತ್ತ ತಿರುಗುತ್ತಾರೆ. ಮನೆಯವರು ಜೋಳ, ಗೋದಿ, ಸಜ್ಜೆ, ಅಕ್ಕಿ, ಹಣ ನೀಡಿ ಕಳಿಸುತ್ತಾರೆ. ಸಂಗ್ರಹಿಸಿದ ದವಸ ಧಾನ್ಯಗಳನ್ನು ಊರ ಅಂಗಡಿಗೆ ಹಾಕಿ ಪಂಚಫಳಾರ, ಊದಬತ್ತಿ, ಕುಂಕುಮ, ವಿಭೂತಿ, ತೆಂಗಿನಕಾಯಿ, ಬೆಲ್ಲ, ಚುರಮುರಿ ಖರೀದಿಸುತ್ತಾರೆ. ಎತ್ತುಗಳನ್ನು ತೆಗೆದುಕೊಂಡು ಹೊಳೆ, ಕೆರೆ, ಹಳ್ಳದ ದಂಡೆಗೆ ಹೋಗಿ ಅಲ್ಲಿ ಎಲ್ಲ ಮಣ್ಣೆತ್ತುಗಳಿಗೆ ಮುಖ ತೊಳೆದು ವಿಭೂತಿ, ಕುಂಕುಮ ಹಚ್ಚಿ ಊದುಬತ್ತಿ ಬೆಳಗಿ ಪಂಚಫಳಾರ ಹಾಕಿ, ಕಾಯಿ ಒಡೆದು, ಕಾಲು ಮುಗಿದು ಊರ ಸಮೃದ್ಧಿಗೆ ಬೇಡಿಕೊಂಡು ಮಣ್ಣೆತ್ತುಗಳನ್ನು ಹೊಳೆಗೆ ಬಿಡುತ್ತಾರೆ. ನಂತರ ದಾರಿಯಲ್ಲಿ ಸಿಕ್ಕವರಿಗೆ ಫಳಾರ ಹಂಚುತ್ತಾರೆ. ಇದು ಹಳ್ಳಿಯ ಮಕ್ಕಳ ಮಣ್ಣೆತ್ತಿನ ಅಮವಾಸ್ಯೆಯ ಸಂಭ್ರಮ. ಭೂತಾಯಿಗೆ ರೈತಾಪಿ ಜನ ಮಳೆ ಬೆಳೆ ಚೆನ್ನಾಗಿ ಆಗಲೆಂದು ಕೃಷಿ ವರ್ಷಾರಂಭದಲ್ಲಿ ಬೇಡಿಕೊಳ್ಳುವ ಹಬ್ಬವಾಗಿದೆ.

ಅರಳೆಲೆ ಬಸವನ ಪೂಜೆ: ಉತ್ತರ ಕರ್ನಾಟಕದಲ್ಲಿ ಜ್ಯೇಷ್ಠ ಬಹುಳ ಅಮವಾಸ್ಯೆಗೆ ಮಣ್ಣೆತ್ತಿನ ಅಮಾವಾಸ್ಯೆ ಎಂದು ಕರೆಯುತ್ತಾರೆ. ಹಳ್ಳಿಯ ಹೆಣ್ಣು ಮಕ್ಕಳು ಅರಳೆಲೆ ಬಸವನನ್ನು ಎಲೆಯ ಮಂಟಪದಲ್ಲಿ ಸಿಂಗಾರ ಮಾಡಿ ಊರ ಮಠದಲ್ಲಿಟ್ಟು ಪೂಜೆ ಮಾಡಿ ಹಾಡು ಹೇಳುತ್ತಾರೆ. ಒಟ್ಟಿನಲ್ಲಿ ಈ ಹಬ್ಬದ ಮೂಲ ಆಶಯವೇ ಮಳೆ ಚೆನ್ನಾಗಿ ಆಗಿ ರೈತರ ಮುಖದಲ್ಲಿ ಮಂದಹಾಸ ಮೂಡುವಂತಾಗಲಿ ಎನ್ನುವುದು. ಯಾಂತ್ರಿಕ ಬದುಕಿನಲ್ಲಿ ನಮ್ಮ ಪೀಳಿಗೆಯ ಮಕ್ಕಳಿಗೆ ಹಬ್ಬದ ಪರಿಕಲ್ಪನೆ ತಿಳಿಯುವುದು ಅವಶ್ಯಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net