

ಮಹಿಳೆಯರ ಸಾಧನೆಯ ಪರಿಚಯವೆಂದರೆ ಸಂಬಂಧಿತ ಕ್ಷೇತ್ರದ ಚರಿತ್ರೆಯ ಪರಿಚಯವೇ. ಒಬ್ಬ ವ್ಯಕ್ತಿಯ ಜೀವನ ಚರಿತ್ರೆಯನ್ನು ಹತ್ತು ಜನ ಬರೆದರೆ, ಬರವಣಿಗೆಯ ಶೈಲಿ ಮತ್ತು ವಿಧಾನಗಳಲ್ಲಿ ವ್ಯತ್ಯಾಸವಾಗಬಹುದೇ ವಿನಾ ಸಂಗತಿಗಳಲ್ಲಿ, ನಡೆದ ಘಟನೆಗಳಲ್ಲಿ ಯಾವುದೇ ವ್ಯತ್ಯಾಸ ಕಾಣಲಾಗದು. ಹಾಗೆಯೇ ಸಾಧಕಿಯರ ಚರಿತ್ರೆಯಲ್ಲೂ ಅಂಥದೊಂದು ಪುರಾವೆ ಇಲ್ಲದೇ ಯಾವುದೇ ವ್ಯತ್ಯಾಸಗಳನ್ನು ಮಾಡಲಾಗದು. ಬಿಡಲಾಗದ ಬಿಡಬಾರದ ಅದೇ ಮೈಲುಗಲ್ಲು ಸ್ಥಾಪಿಸಿದ ಹೆಸರುಗಳು, ಅದೇ ಸಂಗತಿಗಳು, ಅದೇ ಕ್ರಮ. ವ್ಯತ್ಯಾಸ ಕಂಡರೆ ಕೆಲವು ಅಂಶಗಳಲ್ಲಿ ಮಾತ್ರ. ಒಂದೋ ಎರಡೋ ಕೃತಿ ರಚನೆಗಳೇ ದೊಡ್ಡ ಸಾಧನೆಯಾಗಿದ್ದ ಕಾಲದಿಂದಲೇ ಮಹಿಳೆಯರೂ ತಂತಮ್ಮ ಉತ್ತಮ ಕೃತಿ ರಚನೆಗಳಿಂದ ಸಾಧಕಿಯರ ಪಟ್ಟಿಯಲ್ಲಿ ಸೇರಿರುವುದನ್ನು ಬಾದಾಮಿ ಚಾಲುಕ್ಯರ ಕಾಲದಿಂದಲೇ ಕಾಣಬಹುದು. ಸಂಸ್ಕೃತ ಪಂಡಿತೆಯಾಗಿದ್ದ ಚಂದ್ರಾದಿತ್ಯನ ಪತ್ನಿ ವಿಜಯ ಭಟ್ಟಾರಿಕೆ (ವಿಜ್ಜಿಕಾ) ಬರೆದ ಕೌಮುದೀ ಮಹೋತ್ಸವ ಎಂಬ ಸಂಸ್ಕೃತದ ನಾಟಕವೇ ಮಹಿಳಾ ರಚಿತ ಪ್ರಥಮ ಕೃತಿ ಎನಿಸುತ್ತದೆ. ಇದು ಚಾಲುಕ್ಯರ ಕಾಲದ ಒಂದು ಉತ್ತಮ ಕೃತಿ ಎಂದು ಪರಿಗಣಿತವಾಗಿತ್ತೆಂದರೆ ಅದು ಮಹತ್ಸಾಧನೆಯೇ ಸರಿ. ದ್ವಾರ ಸಮುದ್ರದ ಬಲ್ಲಾಳರಾಯನ ಸಭೆಯಲ್ಲಿ ಪಂಡಿತೆಯಾಗಿದ್ದ ಕಂತಿಯು ಹನ್ನೊಂದನೆಯ ಶತಮಾನದಲ್ಲಿ (1010) ಕಾಣಬರುವ ಕನ್ನಡದ ಮೊದಲ ಕವಯತ್ರಿ. ತಿರುಪು ಪದ ಬಳಕೆ, ದತ್ತಪಾದಿ ಪದ್ಯ ರಚನೆ, ನಿರೋಷ್ಠ್ಯ (ತುಟಿ ಸೇರದ) ಪದಗಳಿಂದ ಪದರಚನೆ ಮಾಡುತ್ತಿದ್ದ ಕಂತಿಯು ಅವಧಾನ ಕಲೆಯ ಸಾಹಿತ್ಯ ರಚಿಸಿದ ಮೊದಲ ಮಹಿಳೆಯೂ ಹೌದು.
ಮೇರುಪ್ರತಿಭೆ ಅಕ್ಕಮಹಾದೇವಿ
ಅವ್ವಂದಿರ ಸಾಹಸಯಾತ್ರೆ
ಸಾಹಿತ್ಯದ ಕೋಟೆ ಕಟ್ಟಿದವರು
ಬೆಕ್ಕಿನ ಕಣ್ಣು, ಬೆಳ್ಳಿಮೋಡದಂತಹ ಕಾದಂಬರಿಗಳಲ್ಲಿ, ವಸ್ತು, ನಿರೂಪಣೆ ಮತ್ತು ಹೊಸ ವಿಚಾರಗಳಿಂದಾಗಿ, ಮೈಲಿಗಲ್ಲು ನೆಟ್ಟ ತ್ರಿವೇಣಿಯವರ ಹೆಸರಿಲ್ಲದೇ ಕನ್ನಡ ಸಾಹಿತ್ಯ ಚರಿತ್ರೆ ಪೂರ್ಣಗೊಳ್ಳುವುದಿಲ್ಲ. ರಾಜ್ಯದ ಜನತೆಯಲ್ಲಿ ಓದುವ ಹವ್ಯಾಸವನ್ನು ಬೆಳೆಸಿದ ಕೀರ್ತಿಗೆ ಭಾಜನರಾದವರು ಈಕೆ. ಅಶ್ವಿನಿ, ಆರ್ಯಾಂಬ ಪಟ್ಟಾಭಿ, ಜಯಲಕ್ಷ್ಮಿ, ಈಚನೂರು ಶಾಂತ, ಜಯಲಕ್ಷ್ಮಿ, ಟಿ. ಸುನಂದಮ್ಮ, ವಾಣಿ, ನೀಳಾದೇವಿ, ಅನುಪಮಾ ನಿರಂಜನ, ಮುಂತಾದವರು ಜನಮೆಚ್ಚುಗೆ ಸಾಧಿಸಿದ ಲೇಖಕಿಯರು.
ಸಂಗೀತ ಸಾಧನೆ
ಶಾಸ್ತ್ರೀಯ ಸಂಗೀತ ಮತ್ತು ನೃತ್ಯವನ್ನು ಜೊತೆಯಾಗಿಸಿ, ಉಳಿಸಿದ ನರ್ತಕಿಯರ ಪಂಗಡದಲ್ಲಿ ಮೂಗೂರು ಜೇಜಮ್ಮ, ಬೆಂಗಳೂರು ನಾಗರತ್ನಮ್ಮ, ಕೋಲಾರ ನಾಗರತ್ನಮ್ಮ ಮತ್ತು ಮೂಗೂರು ಪುಟ್ಟದೇವಮ್ಮ ಇವರ ಹೆಸರು ಖ್ಯಾತಿಯಲ್ಲಿತ್ತು. ಗಂಗೂಬಾಯಿಯವರ ತಾಯಿ ಅಂಬಾಬಾಯಿ ಹಾನಗಲ್ ಅವರೂ ನರ್ತಕಿ ಹಾಗೂ ಕರ್ನಾಟಕ ಸಂಗೀತ ಕಲಾವಿದೆ.
ಮಧುರ ಕಂಠ
ಹಾಡಲು ಅವಕಾಶ ಮಾಡಿಕೊಡುತ್ತಿದ್ದ, ತೆರೆಮರೆಯ ಆಕಾಶವಾಣಿಯಲ್ಲಿ ಹಾಡುವ ಮೂಲಕ ಬೆಳಕಿಗೆ ಬಂದವರು ಅನೇಕರು. ನೀಲಮ್ಮಕಡಾಂಬಿ, ಚೊಕ್ಕಮ್ಮ, ಪಾಪಾ ಚೂಡಾಮಣಿ, 50-60ರ ದಶಕದಲ್ಲಿ ಹೀಗೆ ಮಿಂಚಿದ ಮೊದಲಿಗರು. ಸೀತಾ ಮುಲ್ಕಿ, ತಾರಾಬಾಯಿ ಗದಗಕರ್, ಗುಲಾಬಿಬಾಯಿ ಬಿಜಾಪುರಕರ್ ಮರಾಠಿ ಭಾವಗೀತೆಗಳ ಮಟ್ಟುಗಳಲ್ಲೆ ಕನ್ನಡದ ಭಾವಗೀತೆಗಳನ್ನು, ಮುಂಬಯಿ ಆಕಾಶವಾಣಿಯಿಂದ ಹಾಡಿದ ಮೊದಲಿಗರಲ್ಲಿ ಕೆಲವರು. 1952ರಲ್ಲಿ ಕೆ.ಎಸ್.ನ. ಅವರ ಕವಿತೆಗಳನ್ನು ಮೊದಲ ಧ್ವನಿಮುದ್ರಿಕೆಯಾಗಿಸಿದವರು ಜಯವಂತಿದೇವಿ ಹಿರೇಬೆಟ್ರವರು. ಅಗಣಿತ ಗೀತೆಗಳನ್ನು ಹಾಡಿರುವ ಅನುರಾಧಾ ಧಾರೇಶ್ವರ್ ಮತ್ತು ಉಷಾ ಖಾಡಿಲ್ಕರ್ ಕನ್ನಡಿಗರ ಮನಗೆದ್ದವರು. ಶ್ಯಾಮಲಾ ಭಾವೆ, ಲಲಿತಾ ಉದಯಶಂಕರ್, ಗಂಗೂಬಾಯಿ ಮತ್ತು ಕೃಷ್ಣಾ ಹಾನಗಲ್ ಅವರು ಕರ್ನಾಟಕ ಸಂಗೀತದೊಂದಿಗೆ, ಹಿಂದೂಸ್ಥಾನಿ ಪದ್ಧತಿಯನ್ನು ಸೇರಿಸಿ ಇಲ್ಲಿಯ ಕ್ಷೇತ್ರವನ್ನು ಸಮೃದ್ಧಗೊಳಿಸಿದವರು. ಅಮೀರ್ಬಾಯಿ ಕರ್ನಾಟಕಿ ಅನೇಕ ಸಿನಿಮಾಗಳಲ್ಲಿ ಹಾಡಿ ಹೆಸರಾದ ಮಧುರ ಗಾಯಕಿ. ‘ಉಡುಗಣವೇಷ್ಠಿತ’ ಹಾಡಿನಿಂದ ಕನ್ನಡ ಮನಗಳಲ್ಲಿ ನೆಲೆಸಿರುವ, ಎಚ್.ಆರ್. ಲೀಲಾವತಿ ಸುಗಮ ಸಂಗೀತದ ಮಹಿಳಾ ಹರಿಕಾರರು, ಸಂಗೀತ-ಸಂಯೋಜಕಿ, ಕ್ಯಾಸೆಟ್, ಸಿ.ಡಿ. ಸಿನಿಮಾಗಳ ಹಿನ್ನೆಲೆ ಗಾಯಕಿ. ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯ ಅಧ್ಯಕ್ಷೆಯಾಗಿ ನಿಸ್ವಾರ್ಥದಿಂದ ದುಡಿದವರು. ಈಗಲೂ ಸದ್ದಿಲ್ಲದೇ ಸಂಗೀತ-ಸಾಹಿತ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮೇರು ಸಾಧಕಿ. ಇವರ ಈ ಹಾಡು ಮಾಸ್ಕೋ ರೇಡಿಯೋದಿಂದ ಪ್ರಸಾರಗೊಂಡಿರುವುದು ಉಲ್ಲೇಖನೀಯ.
ಮನೆಮಾತಾದ ಗಾಯಕಿಯರು
ಸಂಶೋಧನೆಗೂ ಸೈ
ವಿಶ್ವವಿದ್ಯಾಲಯಗಳಲ್ಲಿ ಸಂಗೀತ ಒಂದು ವಿಷಯವಾದ ಮೇಲೆ ಅನೇಕಾನೇಕರು ಸಂಶೋಧನೆಗೂ ತೊಡಗಿದರು. ಇವರಲ್ಲಿ ಪದ್ಮಾಮೂರ್ತಿ, ಜಯಶ್ರೀ, ಸುಶೀಲಾ, ಸುಮಾ ಸುಧೀಂದ್ರ, ಟಿ.ಎಸ್. ಸತ್ಯವತಿ, ಸುಕನ್ಯಾ ಪ್ರಭಾಕರ್ ಇವರುಗಳ ಹೆಸರು ಮೇಲ್ಪಂಕ್ತಿಯಲ್ಲಿದೆ. ಟಿ.ಎಸ್. ಸತ್ಯವತಿಯವರು ಉತ್ತಮ ವಿಮರ್ಶಕಿ, ವಾಗ್ಮಿ ಮತ್ತು ಶಿಕ್ಷಕಿಯೂ ಆಗಿ ಖ್ಯಾತರು. ಜಿ. ಚನ್ನಮ್ಮನವರು ವಿಶ್ವವಿದ್ಯಾಲಯದಲ್ಲಿ ಉತ್ತಮ ಸಂಗೀತ-ಬೋಧಕಿಯಾಗಿ ಪ್ರಸಿದ್ಧರಾಗಿದ್ದ ಹಳೆಯ ತಲೆಮಾರಿನ ಗಾಯಕಿ. ಶಾಸ್ತ್ರೀಯ, ಸುಗಮ ಸಂಗೀತ, ಫ್ಯೂಶನ್ ಮ್ಯೂಸಿಕ್, ಜಾನಪದ, ಯಕ್ಷಗಾನ, ಸಂಶೋಧನೆ, ಪತ್ರಿಕಾ-ವಿಮರ್ಶೆ, ಸಂಗೀತ-ಶಿಕ್ಷಣ, ದೂರದರ್ಶನ, ಧ್ವನಿ-ಮುದ್ರಿಕೆ, ಗಮಕ, ಕಥಾ-ಕೀರ್ತನ, ಇತ್ಯಾದಿ ಸಂಗೀತದ ಸರ್ವಮಾರ್ಗಗಳಲ್ಲಿಯೂ ಅನೇಕ ಮಹಿಳೆಯರು ತಮ್ಮನ್ನು ತೊಡಗಿಸಿಕೊಂಡು, ಸಂಗೀತಕ್ಷೇತ್ರದ ವ್ಯಾಪ್ತಿಯನ್ನು ಹಿಗ್ಗಿಸುತ್ತಿರುವುದು ಗಮನಾರ್ಹ ಸಂಗತಿ. ಸಾಹಿತ್ಯ ಕ್ಷೇತ್ರದ ವಿವಿಧ ಪ್ರಕಾರಗಳಲ್ಲಿ ಹಾಗೂ ಸಂಗೀತ ಕ್ಷೇತ್ರದ ಹಲವು ವಿಭಾಗಗಳಲ್ಲಿ ವಿವಿಧ ರೀತಿಯಲ್ಲಿ ತಮ್ಮನ್ನೇ ಸಮರ್ಪಿಸಿಕೊಂಡಿರುವವರನ್ನು ಗಮನಿಸಿದರೆ, ಮಹಿಳೆಯರ ಸಾಧನೆ ಹಾಗೂ ಕೊಡುಗೆ ಅಪಾರವಾಗಿದೆ, ಮೌಲ್ಯಯುತವಾಗಿದೆ.
ವಿಜಯಲಕ್ಷ್ಮಿ ಕೆ.ಎಂ. (ಲೇಖಕರು ಕನ್ನಡದ ಕಥೆಗಾರ್ತಿ)