ನಗುವೆಂಬ ನಂದಾದೀಪ: ಮನೋಲ್ಲಾಸ

Smile
Published on
| ಡಾ.ವಿ.ಎಚ್.ಮೂಲಿಮನಿ

ಒಬ್ಬ ತಾಯಿ, ಅವಳಿಗೊಬ್ಬ ಮಗ. ಆ ಮಗುವಿನ ತಂದೆ ಇರಲಿಲ್ಲ. ತಾಯಿಯೇ ಕೂಲಿ ಮಾಡಿ ಮಗನನ್ನು ಬೆಳೆಸಿದ್ದಳು. ಒಂದು ದಿನ ಮಗ ಹೇಳಿದ, ‘ಅಮ್ಮಾ ನಾನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದೂರಹೋಗಬೇಕು.’ ವಿದ್ಯಾಭ್ಯಾಸಕ್ಕಾಗಿ ಹೋಗುವ ಮಗನಿಗೆ ಬೇಡವೆಂದು ಹೇಳುವುದಾದರೂ ಹೇಗೆ? ಇದೊಂದು ರೀತಿಯ ಧರ್ಮಸಂಕಟವೇ ಸರಿ. ತನಗೆ ಏನಾದರಾಗಲಿ, ಮಗ ವಿದ್ಯಾವಂತನಾಗಲಿ ಎಂದು ಒಪ್ಪಿಗೆ ಕೊಟ್ಟು ಹೇಳಿದಳು-‘ಮಗನೇ ನೀನು ವಿದ್ಯಾಭ್ಯಾಸಕ್ಕೆ ಹೋಗುತ್ತಿರುವುದು ಸಂತಸದ ಸಂಗತಿ, ಆದರೆ ನನಗೂ ನನ್ನ ಹಿರಿಯರು ಕಲಿಸಿದ ಒಂದು ಚಿಕ್ಕ ವಿದ್ಯೆ ಇದೆ. ಅದನ್ನು ಕೇಳುವಿಯಾ?’ ಮಗ ಅವಶ್ಯವಾಗಿ ಕೇಳುತ್ತೇನೆ ಎಂದ. ತಾಯಿ ಹೇಳಿದಳು, ‘ನೀನು ಬೆಳಗ್ಗೆ ನಗುನಗುತ ಏಳು, ಮಲಗುವಾಗ ನಗುನಗುತಾ ಮಲಗು, ಸಾಧ್ಯವಾದರೆ ದಿನವಿಡೀ ನಗುನಗುತಲೇ ಎಲ್ಲ ಕೆಲಸ ಮಾಡು. ಎಂದು ಯಾರೊಂದಿಗೂ ಬೇಸರದಿಂದ ನಡೆದುಕೊಳ್ಳಬೇಡ. ಎಂಥ ಸಂಕಷ್ಟದಲ್ಲಿಯೂ ನಗುನಗುತಲಿರುವುದನ್ನು ಮರೆಯಬೇಡ.’ ಮಗ ಹತ್ತಾರು ವರ್ಷ ಲೌಕಿಕ ಅಲೌಕಿಕ ಎಲ್ಲ ವಿದ್ಯೆ ಗಳಿಸಿ ಸಿರಿವಂತನೂ ಹೃದಯವಂತನೂ ಆಗಿ ಮನೆಗೆ ಬಂದ. ತನಗೆ ನಮಸ್ಕರಿಸಿ ನಗುಮೊಗದಿಂದ ಎದ್ದು ನಿಂತಾಗ ತಾಯಿಗಾದ ಆನಂದ ಅವರ್ಣನೀಯ. ‘ಹತ್ತಾರು ವರುಷಗಳಲ್ಲಿ ಏನೇನು ವಿದ್ಯೆ ಕಲಿತೆ ಮಗು?’ಎಂದು ತಾಯಿ ಕೇಳಿದಳು. ‘ಅಮ್ಮಾ ನಾನು ಏನೇನೋ ಕಲಿತೆ. ಆದರೆ ನಾನು ಕಲಿತಿದ್ದೆಲ್ಲಾ ನೀನು ಹೇಳುವ ನಗು ಎಂಬ ಎರಡು ಅಕ್ಷರಗಳಲ್ಲೇ ಅಡಗಿತ್ತು’ಎಂದ ಮಗ.

ಡಿ.ವಿ.ಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಮಾರ್ವಿುಕವಾಗಿ ಹೇಳುತ್ತಾರೆ.

ನಗುವೊಂದು ರಸಪಾಕವಳುವೊಂದು ರಸಪಾಕ|

ನಗುವಾತ್ಮ ಪರಿಮಳದ ಪಸರಿಸುವ ಕುಸುಮ||

ದುಗುಡವಾತ್ಮರ ಕಡೆದು ಸತ್ವವೆತ್ತುವ ಮಂತು|

ಬಗೆದೆರೆಡನುಂ ಭಜಿಸು ಮಂಕುತಿಮ್ಮ||

ನಗು ಒಂದು ರಸಪಾಕವಾದರೆ ಅಳುವೊಂದು ರಸಪಾಕ. ನಗುವು ಆತ್ಮದ ಸುಗಂಧ ಸೂಸುವ ಹೂವಾಗಿದೆ. ಅಳುವು ಆತ್ಮವನ್ನು ಕಡೆದು ಸತ್ವಗುಣ ಉಂಟುಮಾಡುವ ಕಡೆಗೋಲು. ಆ ಕಾರಣ ನಗು-ಅಳುಗಳೆರಡನ್ನೂ ಸ್ವೀಕರಿಸೋಣ.

ನಮಗೆ ಅದೆಷ್ಟೋ ಜನರು ಪದೆಪದೆ ಕಾಣಸಿಗುವುದಾದರೂ ನಾವು ಪರಿಚಯವಿಲ್ಲದವರಂತೆ ಇದ್ದು ಬಿಡುತ್ತೇವೆ. ಅದೇ ನಾವು ಒಂದು ಸಣ್ಣ ನಗುಬೀರಿದರೆ ಮುಂದೆ ಪರಿಚಿತರಾಗಬಹುದು. ನಗುವಿಗೆ ಭಾಷೆ ಇಲ್ಲ. ಅದೊಂದು ಬಾಂಧವ್ಯದ ಕೊಂಡಿ. ಆದ್ದರಿಂದ ಮೊಗದಲ್ಲೊಂದು ನಗುವಿರಲಿ. ಅದು ಅಳಿಯದ ಬಾಂಧವ್ಯದ ಸೇತುವೆಯಾಗಲಿ. ನಗು ಬದುಕಿಗೆ ದಾರಿದೀಪ, ಅಭಿವೃದ್ಧಿಗೆ ಆಶಾದೀಪ ಸಾಧನೆಗೆ ಸ್ಪೂರ್ತಿದೀಪ ಎಂದು ಟಿ.ಪಿ.ಕೈಲಾಸಂ ಹೇಳುತ್ತಾರೆ. ‘ನಗೆಯಲ್ಲುಂಟು ದೀರ್ಘಾಯಸ್ಸಿನ ಗುಟ್ಟು. ಹಾಸ್ಯವೇ ವರಗಳಲ್ಲಿ ಅತ್ಯಂತ ಸವಿಯಾದುದು ನಗು’ ಎಂದವರು ಸರದಾರ ವಲ್ಲಭಭಾಯಿ ಪಟೇಲ. ವೈ.ಎಂ.ಎನ್ ಮೂರ್ತಿ ಹೇಳುತ್ತಾರೆ, ‘ನಗುವು ನಂದಾದೀಪವಾಗಿರಲಿ, ಕೋಪವು ನಂದಿದ ದೀಪವಾಗಿರಲಿ.’ ಅತ್ಯಂತ ಒಳ್ಳೆಯ ಔಷಧಿ ಎಂದರೆ ನಗು. ವಿಸ್ಮಯವೆಂದರೆ ಇವೆಲ್ಲವೂ ದುಡ್ಡಿಲ್ಲದೆ ಸುಲಭವಾಗಿ ಸಿಗುವಂಥದು. ನಗುವುದೇ ಸ್ವರ್ಗ, ಅಳುವುದೇ ನರಕ.

(ಲೇಖಕರು ನಿವೃತ್ತ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net