

ಜೀತಪದ್ಧತಿಯನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿ ನಾಲ್ಕೂವರೆ ದಶಕಗಳು ಕಳೆದರೂ ಭಾರತದಾದ್ಯಂತ ಜೀತ ಇನ್ನೂ ಜೀವಂತವಾಗಿರುವುದು ಆಗಾಗ ವರದಿಯಾಗುತ್ತಲೇ ಇದೆ. ಅಧಿಕಾರಿಗಳು ದಾಳಿ ನಡೆಸಿ, ಜೀತದಾಳುಗಳನ್ನು ಮುಕ್ತಗೊಳಿಸುತ್ತಲೇ ಇದ್ದಾರೆ. ಹೀಗೆ ಮುಕ್ತಗೊಂಡವರ ಮುಂದಿನ ಭವಿಷ್ಯ ಏನು? ಅವರಿಗೆ ಕೆಲಸ ಕೊಡುವವರು ಯಾರು? ಕೆಲಸಕ್ಕೆ ಅಗತ್ಯವಿರುವ ತರಬೇತಿ ನೀಡುವವರು ಯಾರು? ಅವರಿಗಿರುವ ಹಕ್ಕು-ಸೌಲಭ್ಯಗಳ ಬಗ್ಗೆ ತಿಳಿಸಿಕೊಡುವವರು ಯಾರು? ಇದೆಲ್ಲದರತ್ತ ಗಮನಹರಿಸುತ್ತಿರುವ ಸಂಸ್ಥೆಯೊಂದಿದೆ. ಅದರ ಬಗೆಗಿನ ಪರಿಚಯಾತ್ಮಕ ಬರಹವಿದು.
ಜೀತದಂತಹ ಅಮಾನವೀಯ ಪದ್ಧತಿಗೆ ತಿಲಾಂಜಲಿಯನ್ನಿಡಲು ಭಾರತ ಸರ್ಕಾರ 1976ರ ಫೆ. 9ರಂದು ಕಾನೂನು ಅಂಗೀಕರಿಸಿದರೂ ಜೀತವನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ತೆಗೆದು ಹಾಕಲು ಸಾಧ್ಯವಾಗಿಲ್ಲ. ಕೆಲವು ಶ್ರೀಮಂತರು ಬಡವರಿಗೆ ಸಾಲ ನೀಡಿ ಮನೆಗಳಲ್ಲಿ ಜೀತಕ್ಕೆ ಇಟ್ಟುಕೊಂಡಿದ್ದರೆ, ದೊಡ್ಡ ಉದ್ಯಮಿಗಳು ಕಲ್ಲುಗಣಿ, ಇಟ್ಟಿಗೆಗೂಡು, ಅಕ್ಕಿಗಿರಣಿ, ತೋಟಗಳಲ್ಲಿ ಬಡಕಾರ್ವಿುಕರನ್ನು ಸಾಲಶೃಂಖಲೆಯಿಂದ ಕಟ್ಟಿಹಾಕಿದ್ದಾರೆ.
ಮಾನವ ಕಳ್ಳಸಾಗಣೆಗೂ ಜೀತಕ್ಕೂ ಗತಕಾಲದಿಂದಲೂ ನಂಟು. ಹೊರ ರಾಜ್ಯಗಳಿಂದ ಕರೆ ತಂದು ಇಲ್ಲಿ ಜೀತಕ್ಕೆ ಇಡುವುದು, ಇಲ್ಲಿಯವರನ್ನು ಹೊರ ರಾಜ್ಯಕ್ಕೆ ಕರೆದೊಯ್ದು ಜೀತಕ್ಕಿಡುವುದು ನಡೆಯುತ್ತಲೇ ಇದೆ. ದಬ್ಬಾಳಿಕೆಯ ಭಯ, ಬಡತನ, ಅನಿವಾರ್ಯತೆಯಿಂದಾಗಿ ಸಾಕಷ್ಟು ಸಂತ್ರಸ್ತ ಕುಟುಂಬಗಳು ದೂರು ನೀಡಲು ಹಿಂದೇಟು ಹಾಕುತ್ತವೆ. ಒಂದು ವೇಳೆ ದೂರು ನೀಡಿದರೂ ಅಧಿಕಾರಿಗಳ ಸ್ಪಂದನೆ ಅಷ್ಟಕ್ಕಷ್ಟೆ ಎಂಬ ಆರೋಪವೂ ಇದೆ. ಅತಿ ಬಡವರನ್ನು ಕಾಡುವ ಹಣಕಾಸಿನ ಸಮಸ್ಯೆಯೇ ಜೀತ ಪದ್ಧತಿ ಇಂದಿಗೂ ಜೀವಂತವಾಗಿರಲು ಪ್ರಮುಖ ಕಾರಣ. ಕೂಲಿಕಾರ್ವಿುಕರಲ್ಲಿ ಶೇ. 37ರಷ್ಟು ಜನ ಜೀತಕ್ಕೆ ಒಳಗಾಗಿದ್ದಾರೆ ಎನ್ನುತ್ತದೆ ಒಂದು ಅಧ್ಯಯನ ವರದಿ. ಇಂತಹ ಜೀತವನ್ನು ಕೊನೆಗಾಣಿಸುವ ಸಲುವಾಗಿ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಇಂಟರ್ನ್ಯಾಷನಲ್ ಜಸ್ಟೀಸ್ ಮಿಷನ್ (ಐಜೆಎಂ) ಸೇರಿದಂತೆ ಹಲವು ಸಂಘಟನೆಗಳು ಜೀತಕ್ಕಿರುವವರನ್ನು ಪತ್ತೆ ಹಚ್ಚಿ ಮುಕ್ತಗೊಳಿಸುತ್ತಿವೆ. ಜೀತದಿಂದ ಹೊರಬಂದವರು ಹೊಸ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದುದನ್ನು ತಪ್ಪಿಸಲು ಹುಟ್ಟಿಕೊಂಡಿರುವುದೇ ‘ಉದಯೋನ್ಮುಖ’ ಸಂಘಟನೆ.
ಜೀತವಿಮುಕ್ತರೇ ಕಟ್ಟಿದ ಸಂಘಟನೆ: ಏಳು ಜಿಲ್ಲೆಗಳ ಸುಮಾರು 80 ಜನ ಜೀತವಿಮುಕ್ತರು ಮುಂದಿನ ಬದುಕು ಕಟ್ಟಿಕೊಳ್ಳುವ ಸಲುವಾಗಿ ಹಾಗೂ ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದ ಸಂಘಟಿತರಾಗಿ ರಾಮನಗರದಲ್ಲಿ 2019ರ ಡಿಸೆಂಬರ್ನಲ್ಲಿ ‘ಉದಯೋನ್ಮುಖ’ವನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ತಮ್ಮ ಬದುಕು ಕಟ್ಟಿಕೊಳ್ಳುವುದು ಮಾತ್ರವಲ್ಲ, ತಮ್ಮಂತೆ ಇನ್ನೂ ಜೀತದಲ್ಲಿರುವವರನ್ನು ಮುಕ್ತಗೊಳಿಸುವುದು ಇವರ ಉದ್ದೇಶ. ಜೀತ ವಿಮುಕ್ತರಿಗೆ ಹೊಸ ಬದುಕು ನೀಡುವುದಕ್ಕಾಗಿ ಇರುವ ಮೊದಲ ಸಂಘಟನೆ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಒಟ್ಟು 88 ಜನ ಸದಸ್ಯರಿದ್ದು, ಈ ಸಂಘಟನೆಯ ಪದಾಧಿಕಾರಿಗಳೆಲ್ಲ ಜೀತವಿಮುಕ್ತರೇ ಎಂಬುದು ವಿಶೇಷ. ಹಾಲಿ ಅಧ್ಯಕ್ಷೆ ಪಾಪಮ್ಮಕನಕಪುರದ ಇಟ್ಟಿಗೆಗೂಡಿನಿಂದ ರಕ್ಷಿಸಲ್ಪಟ್ಟವರು. ಸುಮಾರು 4 ವರ್ಷ ಅಲ್ಲಿ ಜೀತಕ್ಕಿದ್ದರು.
ಸಂಘದ ಉದ್ದೇಶಗಳೇನು?: ಜೀತಕಾರ್ವಿುಕ ಪದ್ಧತಿಯನ್ನು ನಿಮೂಲನೆ ಮಾಡುವುದೇ ಇದರ ಉದ್ದೇಶ. ಜೀತವಿಮುಕ್ತರು ಸರ್ಕಾರದಿಂದ ಪುನರ್ವಸತಿ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗುವಂತೆ ಸಹಾಯ ಮಾಡುತ್ತದೆ. ಇದಕ್ಕೆ ಅವಶ್ಯಕತೆ ಇರುವ ಸಂಪರ್ಕಗಳನ್ನು ಶೋಧಿಸುತ್ತದೆ. ಬಿಡುಗಡೆಯಾದ ಜೀತಕಾರ್ವಿುಕರನ್ನು ಇತರರಿಗೆ ಸಹಾಯ ಮಾಡುವ ನಾಯಕರನ್ನಾಗಿ ರೂಪುಗೊಳಿಸುವುದಲ್ಲದೆ, ಅವರ ಮಕ್ಕಳಿಗೆ ಶಿಕ್ಷಣ ಕೊಡಿಸುವುದಕ್ಕೂ ಇದು ವೇದಿಕೆಯಾಗಿದೆ. ಜೀತ ಪದ್ಧತಿಯ ಬಗ್ಗೆ ಜನಜಾಗೃತಿ ಮೂಡಿಸುವುದು, ಕಳ್ಳಸಾಗಣೆ ಜಾಲದಿಂದ ಆರ್ಥಿಕ ದುರ್ಬಲರನ್ನು ರಕ್ಷಿಸುವುದು, ಸಮುದಾಯದ ಕಣ್ಗಾವಲಾಗಿ ಕಾರ್ಯ ನಿರ್ವಹಿಸುವುದು ಕೂಡ ಇದರ ಇತರ ಉದ್ದೇಶಗಳು.
ಏನಿದು ಕಾನೂನು: ಸಾಲ ಕೊಟ್ಟು ಜೀತಕ್ಕೆ ಇಟ್ಟುಕೊಳ್ಳುವ ಅಮಾನವೀಯ ಪದ್ಧತಿಯನ್ನು ಕೊನೆಗಾಣಿಸಲು ಕೇಂದ್ರ ಸರ್ಕಾರ 1976ರ ಫೆಬ್ರವರಿ 9ರಂದು ಸಂಸತ್ತಿನಲ್ಲಿ ಜೀತ ವಿಮುಕ್ತಿ ವಿಧೇಯಕವನ್ನು ಅಂಗೀಕರಿಸಿತು. ಅಂದಿನಿಂದ ಕಾನೂನು ಜಾರಿಗೆ ಬಂದಿದೆ. ಇದರ ಪ್ರಕಾರ ಜೀತಕ್ಕೆ ಇಟ್ಟುಕೊಳ್ಳುವವರಿಗೆ 3 ವರ್ಷಗಳತನಕ ಕಾರಾಗೃಹ ಶಿಕ್ಷೆ ಹಾಗೂ 2000 ರೂ.ಗಳ ದಂಡ ವಿಧಿಸುವ ಅವಕಾಶ ಇದೆ. ಸಾಲ ಮರುಪಾವತಿಯ ಅಗತ್ಯವಿಲ್ಲ; ದಾವೆಗಳಿದ್ದರೆ ಅವು ವಜಾ ಆಗುತ್ತವೆ; ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದರೆ ಕೂಡಲೇ ತೆರವು ಮಾಡಿಸಲಾಗುತ್ತದೆ; ಬಂಧನದಲ್ಲಿಟ್ಟಿದ್ದರೆ ಬಿಡುಗಡೆಗೊಳಿಸಲು ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಆದರೆ ಇದು ನಿರೀಕ್ಷಿಸಿದಷ್ಟು ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ.
ಶಿಕ್ಷೆಯಾಗಿರುವುದು ಕಡಿಮೆ: ಜೀತಕ್ಕೆ ಇಟ್ಟುಕೊಂಡವರಿಗೆ ಶಿಕ್ಷೆಯಾಗಿರುವ ಉದಾಹರಣೆಗಳು ಕಡಿಮೆ ಇವೆ. ರಾಜ್ಯದಲ್ಲಿಯೇ 400ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೂ ನಾಲ್ಕೈದು ಪ್ರಕರಣಗಳಲ್ಲಿ ಮಾತ್ರ ಇದುವರೆಗೂ ಶಿಕ್ಷೆ ಪ್ರಕಟವಾಗಿದೆ.
ನಡೆಯಬೇಕಿದೆ ಸಮೀಕ್ಷೆ: ಜೀತಪದ್ಧತಿ ಕುರಿತಂತೆ 2016ರ ನಂತರ ಸಮೀಕ್ಷೆಯೇ ನಡೆದಿಲ್ಲ. ನೋಡಲ್ ಏಜೆನ್ಸಿಯಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ 2016ರಲ್ಲಿ ರಾಜ್ಯದಲ್ಲಿ 1600 ಜನ ಜೀತಕಾರ್ವಿುಕರು ಮಾತ್ರ ಇದ್ದಾರೆ ಎಂಬ ಮಾಹಿತಿ ನೀಡುತ್ತದೆ. ಆದರೆ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿಯೇ ಶೋಷಣೆಗೆ ಒಳಗಾದ ಸುಮಾರು 5 ಲಕ್ಷ ಜನ ಕಾರ್ವಿುಕರಿದ್ದಾರೆ ಎಂದು ಐಜೆಎಂ ಸಂಸ್ಥೆ ಗುರುತಿಸಿದೆ. ಜೀತ ವಿಮುಕ್ತಿ ಕಾನೂನು ಬಂದ ನಂತರ 1976ರಿಂದ ಇಲ್ಲಿಯತನಕ ರಾಜ್ಯದಲ್ಲಿ 66 ಸಾವಿರ ಜನ ವಿಮುಕ್ತಿ ಹೊಂದಿದ್ದಾರೆ. ಇನ್ನೂ ಜೀತಗಾರರು ಇರುವುದರಿಂದ ಬೀದಿನಾಟಕ, ದೃಶ್ಯಮಾಧ್ಯಮ, ಪತ್ರಿಕೆ, ರೇಡಿಯೋಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಯಾವ ಪ್ರಮಾಣದಲ್ಲಿ ಆಗಬೇಕೋ ಆ ಪ್ರಮಾಣದಲ್ಲಿ ಆಗುತ್ತಿಲ್ಲ.
ಬದಲಾಗಿದೆ ಜೀತ ಪದ್ಧತಿ: ಜೀತಪದ್ಧತಿ ವ್ಯವಸ್ಥೆ ಈಗ ಬದಲಾಗಿದೆ. ಮಾನವ ಕಳ್ಳಸಾಗಣೆ ಇದರೊಂದಿಗೆ ತಳಕು ಹಾಕಿಕೊಂಡಿದೆ. ಇದು ಜೀತಗಾರರ ಸಂಖ್ಯೆ ಹೆಚ್ಚಲು ಕಾರಣವೂ ಆಗಿದೆ. ಆದ್ದರಿಂದಲೇ ಕಾನೂನು ಬಲ ಪಡಿಸುವ ಅಗತ್ಯವೇನೂ ಇಲ್ಲ. ಮಾನವ ಕಳ್ಳಸಾಗಣೆ ಹಾಗೂ ಜೀತ ವಿಮುಕ್ತಿ ಎರಡನ್ನೂ ಸೇರಿಸಿ ಮೊಕದ್ದಮೆ ದಾಖಲಿಸಿದರೆ ಸಾಕು. ಮಾನವ ಕಳ್ಳಸಾಗಣೆಯಲ್ಲಿ 7ರಿಂದ 10 ವರ್ಷದತನಕ ಕಾರಾಗೃಹ ಶಿಕ್ಷೆ ನೀಡಲು ಅವಕಾಶ ಇದೆ. ಜೀತಕ್ಕೆ ಇಟ್ಟುಕೊಳ್ಳುವುದು ಸಂಘಟಿತ ಅಪರಾಧ ಎಂದು ಹೇಳುತ್ತಾರೆ ಇಂಡಿಯನ್ ಜಸ್ಟೀಸ್ ಮಿಷನ್ನ ಸಹ ನಿರ್ದೇಶಕ ವಿಲಿಯಮ್ ಕ್ರಿಸ್ಟೋಪರ್.
ವಿಮುಕ್ತರಿಗೆ ಏನೇನು ಸೌಲಭ್ಯಗಳಿವೆ?: ಆರ್ಡಿಪಿಆರ್ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ಜೀತ ವಿಮುಕ್ತರನ್ನು ಗುರುತಿಸಿ ನೋಂದಾಯಿಸಿ ಬಡವರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಬಿಡುಗಡೆ ಪ್ರಮಾಣ ಪತ್ರ, ತಕ್ಷಣ 20 ಸಾವಿರ ರೂ. ನೆರವು, ನರೇಗಾ ಯೋಜನೆಯಲ್ಲಿ ಕೂಲಿ, ಮನೆ, ಕೌಶಲ್ಯ ತರಬೇತಿ ಹೀಗೆ ವಿವಿಧ ಸೌಲಭ್ಯಗಳನ್ನು ನೀಡಬೇಕಾಗುತ್ತದೆ.
ಜೀತ ಪದ್ಧತಿ ಜೀವಂತ ಇರಬಾರದು: ಪಾಪಮ್ಮ
# ಉದಯೋನ್ಮುಖ ಸಂಘಟನೆ ಕಟ್ಟಿದ್ದರ ಉದ್ದೇಶವೇನು?
# ಏನೇನು ಯೋಜನೆಗಳನ್ನು ಹಮ್ಮಿಕೊಂಡಿದ್ದೀರಿ?
- ಸಂಘ ಈಗಷ್ಟೇ ಆರಂಭವಾಗಿದೆ. ಇನ್ನೂ ಬೆಳೆಯಬೇಕಾಗಿದೆ. ಜೀತದಿಂದ ಹೊರಬಂದವರ ಮಕ್ಕಳನ್ನು ಶಾಲೆಗೆ ಸೇರಿಸಬೇಕಾಗಿದೆ. ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ.
# ಸರ್ಕಾರದಿಂದ ಏನೇನು ಸವಲತ್ತು ಸಿಗುತ್ತದೆ?
- ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ 2 ಎಕರೆ ಜಮೀನು, ಮನೆ, ಪಡಿತರ ಚೀಟಿ, ಆಧಾರ್ ಕಾರ್ಡ್, ಪಿಂಚಣಿ ಹೀಗೆ ವಿವಿಧ ಸೌಲಭ್ಯಗಳಿವೆ. ಅವುಗಳನ್ನು ಸಂಘಟಿತರಾಗಿ ಪಡೆಯಬೇಕಾಗಿದೆ.
# ರಾಜ್ಯದಲ್ಲಿ ಎಷ್ಟು ಜನ ವಿಮುಕ್ತಿ ಪಡೆದಿದ್ದಾರೆ, ಇನ್ನೂ ಎಷ್ಟು ಜನ ಜೀತಕ್ಕೆ ಇರಬಹುದು?
- ಈಗ ನಮ್ಮ ಸಂಘದಲ್ಲಿ 88 ಜನರಿದ್ದೇವೆ. ರಾಜ್ಯಾದ್ಯಂತ ಸುಮಾರು 4000 ಜನ ವಿಮುಕ್ತಿಗೊಂಡವರು ಇರಬಹುದು. ಇನ್ನೂ ಎಷ್ಟು ಜನ ಜೀತಕ್ಕಿದ್ದಾರೆ ಎಂಬುದು ಸಮೀಕ್ಷೆ ಮಾಡಿದರೆ ಗೊತ್ತಾಗುತ್ತದೆ.
| ರುದ್ರಣ್ಣ ಹರ್ತಿಕೋಟೆ