ಪರಿಸರಸ್ನೇಹಿ ಚುನಾವಣೆಗೆ ಜಾಲತಾಣಗಳ ಸಾಥ್; ಬಂಟಿಂಗ್ಸ್, ಬ್ಯಾನರ್‌ಮುಕ್ತ ಉದ್ಯಾನನಗರಿ

Eco
Published on

ಪ್ರಶಾಂತ ರಿಪ್ಪನ್​ಪೇಟೆ ಬೆಂಗಳೂರು

ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಕೂಡಾ ಜೋರಾಗಿದೆ. ಈ ನಡುವೆ ಚುನಾವಣೆ ಆಯೋಗವು ನೀತಿಸಂಹಿತೆಯ ಅಡಿಯಲ್ಲಿ ಹಲವು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದ್ದು, ಅದರಲ್ಲಿ ಈ ಹಿಂದೆ ಇದ್ದ ಪ್ಲಾಸ್ಟಿಕ್ ಬಂಟಿಂಗ್ಸ್ ಮತ್ತು ಬ್ಯಾನರ್‌ಗಳ ಅಳವಡಿಕೆಗೆ ಸಂಪೂರ್ಣ ನಿಷೇಧ ಹೇರಿರುವುದು ಪರಿಸರಸ್ನೇಹಿ ಚುನಾವಣೆಗೆ ಕಾರಣವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೂರಕ್ಕೆ ನೂರು ಈ ನಿಷೇಧ ಜಾರಿಯಾಗದಿದ್ದರೂ ರಾಜಧಾನಿ ಬೆಂಗಳೂರು ಮಾತ್ರ ಸಂಪೂರ್ಣ ಪರಿಸರಸ್ನೇಹಿ ಚುನಾವಣೆಗೆ ಸನ್ನದ್ಧವಾಗಿದೆ.

ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬ ಎನ್ನಲಾಗುತ್ತದೆ. ಅದರಲ್ಲೂ ದೇಶದ ಲೋಕಸಭೆ ಚುನಾವಣೆಗೆ ಹೆಚ್ಚಿನ ಮಹತ್ವವಿದೆ. ಈ ಹಬ್ಬದ ವಾತಾವರಣವನ್ನು ಮೆರಗುಗೊಳಿಸುವುದಕ್ಕೆ ಈ ಹಿಂದೆ ಬಟ್ಟೆಯ ಬ್ಯಾನರ್, ಬಂಟಿಂಗ್ಸ್, ಭಾವುಟಗಳನ್ನು ಎಲ್ಲೆಡೆ ಬಳಸಲಾಗುತ್ತಿತ್ತು. ಕಾಲ ಬದಲಾದಂತೆ ಬಟ್ಟೆಯ ಪ್ರಚಾರ ಸಾಮಾಗ್ರಿಗಳು ಪ್ಲಾಸ್ಟಿಕ್ ಸಾಮಾಗ್ರಿಗಳಾಗಿ ಬದಲಾದವು. ಈ ಹಂತದಲ್ಲಿ ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾಗಿ, ಹಲವಾರು ಕ್ರಾಂತಿಕಾರಿ ಬದಲಾವಣೆ ಮತ್ತು ಸುಧಾರಣೆಗಳನ್ನು ಜಾರಿಗೆ ತಂದ ಟಿ.ಎನ್. ಶೇಷನ್ ಅವರು ಪ್ಲಾಸ್ಟಿಕ್ ಬ್ಯಾನರ್ ಮತ್ತು ಮತ್ತು ಬಂಟಿಂಗ್ಸ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿದರು. ಕಳೆದ 25 ವರ್ಷಗಳ ಹಿಂದೆ ಆಯೋಗದಿಂದ ಈ ನಿರ್ಣಯ ಹೊರಬಿದ್ದಾಗ, ಇದು ಹೇಗೆ ಸಾಧ್ಯ ? ಎಂದು ಪ್ರಶ್ನೆ ಮಾಡಿದವರೇ ಹೆಚ್ಚು. ರಾಜಕೀಯ ಪಕ್ಷಗಳಂತೂ ಇದು ಅಸಾಧ್ಯ ಎಂದು ಹಲುಬಿದ್ದವು. ಆದರೆ ಕಾಲ ಬದಲಾದಂತೆ ಪ್ರಚಾರದ ಮಾದರಿಯೂ ಬದಲಾಯಿತು. 25 ವರ್ಷಗಳ ಹಿಂದಿನ ಆ ನಿರ್ಣಯ ಇಂದು ಸಂಪೂರ್ಣ ಲ ನೀಡಿದೆ; ಪರಿಸರಸ್ನೇಹಿ ಚುನಾವಣೆಗೆ ಕಾರಣವಾಗಿದೆ.

ಮತಹಬ್ಬಕ್ಕೆ ಜಾಲತಾಣದಲ್ಲಿ ತೋರಣ

ಚುನಾವಣೆಯಲ್ಲಿ ಎಲ್ಲಕ್ಕಿಂತ ದೊಡ್ಡ ಭಾಗ ಪ್ರಚಾರಕಾರ್ಯ. ಪ್ರಚಾರಕ್ಕಾಗಿ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ವಿವಿಧ ವ್ಯವಸ್ಥೆಗಳನ್ನು ಅವಲಂಬಿಸಿರುತ್ತವೆ. ಬ್ಯಾನರ್, ಪಕ್ಷದ ಚಿಹ್ನೆಯುಳ್ಳ ಧ್ವಜ, ಬಂಟಿಂಗ್ಸ್‌ಗಳನ್ನು ಎಲ್ಲೆಡೆ ಕಟ್ಟುವುದು, ಮೈಕ್ ಮೂಲಕ ದಿನಪೂರ್ತಿ ಅನೌನ್ಸ್ ಮಾಡುವುದು ಹಳೇಯ ಪದ್ಧತಿಗಳು. ಆದರೆ ಈಗ ಪ್ರಚಾರಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳು ವೇದಿಕೆಗಳಾಗಿರುವುದು ಹೊಸ ಟ್ರೆಂಡ್. ಹೇಳಿಕೆ, ಟೀಕೆ, ಭಾಷಣ, ಜಾಹೀರಾತು ಎಲ್ಲವನ್ನು ಸಾಮಾಜಿಕ ಜಾಲತಾಣದ ಮೂಲಕ ಮಾಡಲಾಗುತ್ತಿದೆ. ಯೂಟ್ಯೂಬ್, ಫೇಸ್‌ಬುಕ್, ಎಕ್ಸ್, ಇನ್ಸ್ಟಾಗಳ ಮೂಲಕ ಪ್ರಚಾರ ಕಾರ್ಯ ಜೋರಾಗಿದೆ. ಪ್ರತಿಯೊಂದು ರಾಜಕೀಯ ಪಕ್ಷ ಮತ್ತು ನಾಯಕರು ಪ್ರತ್ಯೇಕ ಯೂಟ್ಯೂಬ್, ಫೇಸ್‌ಬುಕ್ ಖಾತೆಯ ಮೂಲಕ ತಮ್ಮ ಕಾರ್ಯಕ್ರಮದ ನೇರಪ್ರಸಾರಕ್ಕೆ ವ್ಯವಸ್ಥೆ ಕಲ್ಪಿಸಿಕೊಂಡಿವೆ. ಈ ಬೆಳವಣಿಗೆಯಿಂದ ಪರಿಸರಕ್ಕೆ ಆಗುತ್ತಿದ್ದ ಹಾನಿಯನ್ನು ತಡೆಗಟ್ಟಲು ಸಾಧ್ಯವಾಗಿದ್ದು ಸಮಾಧಾನದ ಸಂಗತಿ.

ಖರ್ಚುವೆಚ್ಚದ ಮೇಲೆ ಹದ್ದಿನ ಕಣ್ಣು

ಪ್ಲಾಸ್ಟಿಕ್ ಪ್ರಚಾರ ಸಾಮಾಗ್ರಿಗಳನ್ನು ಸಂಪೂರ್ಣವಾಗಿ ನಿಷೇಧಿಸಿರುವ ಚುನಾವಣಾ ಆಯೋಗ, ಪೇಪರ್ ಕರಪತ್ರ ಮತ್ತಿತರ ಪರಿಸರಸ್ನೇಹಿ ಚುನಾವಣಾ ಪ್ರಚಾರ ಸಾಮಾಗ್ರಿಗಳ ಬಳಕೆಯ ವಿಷಯದಲ್ಲೂ ಮಾರ್ಗಸೂಚಿಯನ್ನು ನೀಡಿದೆ. ಪ್ರತಿಯೊಂದು ಖರ್ಚನ್ನು ಅಭ್ಯರ್ಥಿಗೆ ನಿಗದಿಪಡಿಸಿರುವ ಖರ್ಚಿನಿಂದಲೇ ತೋರಿಸಬೇಕಾಗಿದ್ದು, ಕರಪತ್ರ ಮತ್ತಿತರ ವಸ್ತುಗಳ ಮುದ್ರಣಕ್ಕೂ ಮುನ್ನ ಆಯೋಗದ ಅನುಮತಿ ಪಡೆಯಬೇಕಾದ್ದು ಕಡ್ಡಾಯ. ಮಾತ್ರವಲ್ಲ ಮುದ್ರಣ ಮಾಡಿಕೊಡುವ ಪ್ರಿಂಟಿಂಗ್ ಪ್ರೆಸ್ ಮತ್ತು ಡಿಜಿಟಲ್ ಮುದ್ರಣ ಸಂಸ್ಥೆಗಳು ಕೂಡಾ ಆಯೋಗದ ಅನುಮತಿ ಪಡೆಯಬೇಕು. ಹಾಗೂ ಮುದ್ರಿಸುವ ಸಾಮಾಗ್ರಿಯ ಪೂರ್ಣ ವಿವರವನ್ನು ಆಯೋಗಕ್ಕೆ ನೀಡಬೇಕು. ಈ ನಿಯಮವನ್ನು ಮೀರಿ ನಡೆದುಕೊಂಡಲ್ಲಿ ಅಭ್ಯರ್ಥಿ ಹಾಗೂ ಮುದ್ರಕರ ವಿರುದ್ಧ ಕ್ರಮಕೈಗೊಳ್ಳಲು ಅವಕಾಶವಿದೆ ಎಂದು ಆಯೋಗದ ಹಿರಿಯ ಅಧಿಕಾರಿಯೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.

ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ತಮ್ಮ ಚುನಾವಣಾ ಪ್ರಚಾರದಲ್ಲಿ ಪ್ಲಾಸ್ಟಿಕ್, ಥರ್ಮಕೋಲ್ ಮತ್ತಿತರ ಪರಿಸರಕ್ಕೆ ಹಾನಿಯಾಗುವ ವಸ್ತುಗಳನ್ನು ಬಳಸುವುದಕ್ಕೆ ಚುನಾವಣಾ ಆಯೋಗ ನಿಷೇಧ ಹೇರಿದ್ದು ಒಳ್ಳೆಯ ಸಂಗತಿ. ಸಾಮಾಜಿಕ ಜಾಲತಾಣವು ಚುನಾವಣ ಪ್ರಚಾರಕ್ಕೆ ಹೆಚ್ಚು ಬಳಕೆ ಆಗುತ್ತಿರುವುದರಿಂದ ಇದು ಸಾಧ್ಯವಾಗಿದೆ. ನಮ್ಮ ಬೆಂಗಳೂರು ನಗರದ ಪರಿಸರಕ್ಕೆ ಇದೊಂದು ದೊಡ್ಡ ಕೊಡುಗೆ. ಜೊತೆಗೆ ಚುನಾವಣೆಯ ದಿವಸ ಪೋಲಿಂಗ್ ಅಧಿಕಾರಿಗಳು ಮತ್ತು ಏಜೆಂಟರುಗಳಿಗೆ ಸರಬರಾಜು ಮಾಡುವ ಆಹಾರವನ್ನು ಸಾಧ್ಯವಾದಷ್ಟು ಪ್ಲಾಸ್ಟಿಕ್ ರಹಿತ ಪೊಟ್ಟಣದಲ್ಲಿ ಬಳಸಲು ಕ್ರಮ ವಹಿಸಿದರೆ ಒಳಿತು. - ಎಂ.ಲೋಕೇಶ್, ವಕೀಲರು
ಪ್ರಕೃತಿ ಎಂದರೆ ದೇವರ ಸ್ವರೂಪ. ಪರಿಸರವನ್ನು ಹಾಳು ಮಾಡುವ ಯಾವುದೇ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಚುನಾವಣೆ ನೆಪದಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿರುವ ಚುನಾವಣಾ ಆಯೋಗದ ಕ್ರಮ ಸ್ವಾಗತಾರ್ಹ. ಬೆಂಗಳೂರಿನಂತಹ ಮಹಾನಗರದಲ್ಲಿ ಒಂದು ಕೋಟಿಗೂ ಮೀರಿ ಜನಸಂಖ್ಯೆ ಇದ್ದು, ಇಲ್ಲಿನ ಜನರ ಹಿತದೃಷ್ಟಿಯಿಂದ ಪರಿಸರವನ್ನು ಕಾಪಾಡುವ ಅವಶ್ಯಕತೆ ಇದೆ. ಆ ಕಾರ್ಯಕ್ಕೆ ಪರಿಸರಸ್ನೇಹಿ ಚುನಾವಣೆಯು ನಾಂದಿಯಾಗಲಿ. -ವನಜಾಕ್ಷಮ್ಮ, ಯೋಗ ಶಿಕ್ಷಕರು, ನಾಗರಭಾವಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net