ಧರ್ಮದ ಹಾದಿಯಲ್ಲಿ ಮಾಡುವ ಶ್ರಮವೇ ಶಾಶ್ವತ

Untitled design (1)
Published on
ಶ್ರಮವೆಂಬುದು ನಮ್ಮ ಬದುಕಿಗೆ ಅಮೂಲ್ಯ ರತ್ನ. ಶ್ರಮವಿಲ್ಲದ ಜೀವನಕ್ಕೆ ಯಾವ ಅರ್ಥವೂ ಇಲ್ಲ. ನಮಗೆಲ್ಲ ಬದುಕಲು ಆಹಾರ, ಉಡುಗೆ, ಮನೆ ಇವೆಲ್ಲ ಬೇಕಾಗುತ್ತದೆ. ಅವೆಲ್ಲ ಬೇಕು ಎಂದು ಕನಸು ಕಂಡರೆ ಅಥವಾ ಆಸೆ ಪಟ್ಟರೆ ಅವು ನಮಗೆ ದೊರೆಯುವುದಿಲ್ಲ. ಮೂಲಭೂತ ಸೌಕರ್ಯ ಅಥವಾ ಜೀವನಕ್ಕೆ ಬೇಕಾದವುಗಳನ್ನು ಪಡೆಯಲು ಪ್ರಯತ್ನ, ಶ್ರಮ ಬೇಕೇ ಬೇಕಾಗುತ್ತದೆ. ಶ್ರಮವೆಂದರೆ ಕಷ್ಟಪಟ್ಟು ಮಾಡಿದ ಪರಿಶ್ರಮದ ಕೆಲಸ. ಸಾಧನೆಯನ್ನೇ ಪಡೆಯಬೇಕಾದರೂ ಶ್ರಮ ಅಗತ್ಯ. ಶ್ರಮವಿಲ್ಲದೆ ಯಾರೂ ಯಶಸ್ಸನ್ನು ಕಾಣಲು ಸಾಧ್ಯವಿಲ್ಲ.

ರೈತ ಉಳುಮೆ ಮಾಡಿ, ಬೀಜ ಬಿತ್ತಿ, ಗೊಬ್ಬರ, ನೀರು ಕೊಟ್ಟು, ಕಾಡುಪ್ರಾಣಿಗಳಿಂದ ಬೆಳೆ ರಕ್ಷಿಸುತ್ತ ಶ್ರಮಪಟ್ಟು ಕೆಲಸ ಮಾಡಿದಾಗ ಮಾತ್ರ ಉತ್ತಮ ಬೆಳೆ ಬರಲು ಸಾಧ್ಯ. ಹಾಗೆಯೇ ವಿದ್ಯಾರ್ಥಿಯು ತರಗತಿಯಲ್ಲಿ ಪಾಠ ಕೇಳಿ, ಹೋಂವರ್ಕ್ ಮಾಡಿಕೊಂಡು ಬೆಳಗ್ಗೆ ಬೇಗ ಎದ್ದು ಓದುತ್ತಿದ್ದರೆ ಉತ್ತಮ ಅಂಕ ಗಳಿಸಬಹುದು. ಹೀಗೆ ಎಲ್ಲರೂ ಅವರವರ ಕೆಲಸ, ಕಾರ್ಯ, ಸೇವೆಗಳಲ್ಲಿ ಶ್ರಮವಹಿಸಿದಾಗ ಮಾತ್ರ ತಕ್ಕ ಪ್ರತಿಫಲ ದೊರೆಯುವುದು. ಕೇವಲ ಶ್ರಮ ಮಾತ್ರದಿಂದಲೇ ಜೀವನ ನಡೆಯದು. ಅದಕ್ಕೆ ಪೂರಕವಾಗಿ ಕೆಲವು ಗುಣಗಳು, ಮೌಲ್ಯಗಳು ಮತ್ತು ನಂಬಿಕೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಗುರಿ ತಲುಪಲು ಸಾಧ್ಯ.

ಶ್ರಮಪಟ್ಟ ಕೂಡಲೇ ಪ್ರತಿಫಲ ಸಿಗಬೇಕೆಂದು ಆಸೆ ಪಡುವುದು ದಡ್ಡತನ. ಅದು ಮಾವಿನ ಗಿಡ ನೆಟ್ಟು ತಕ್ಷಣ ಅದರಿಂದ ಹಣ್ಣು ಬಯಸಿದಂತೆ ಆಗುತ್ತದೆ. ಮರವಾಗಿ ಬೆಳೆದು ಹೂ ಬಿಟ್ಟು, ಕಾಯಿಯಾಗಿ, ಹಣ್ಣಾಗುವವರೆಗೆ ತಾಳ್ಮೆಯನ್ನು ಹೊಂದಿರಬೇಕು. ಹಾಗೆಯೇ ನಿರಂತರತೆಯೂ ಅಷ್ಟೇ ಮುಖ್ಯ. ಗಿಡ ನೆಟ್ಟರೆ ಸಾಲದು, ಕಾಲಕಾಲಕ್ಕೆ ನೀರು, ಗೊಬ್ಬರ ನೀಡಬೇಕು. ನಿರಂತರ ಆರೈಕೆ ಮಾಡಬೇಕು. ಆಗ ಮಾತ್ರ ಫಲ ಪಡೆಯಲು ಸಾಧ್ಯ.

ಶ್ರಮದೊಂದಿಗೆ ಆತ್ಮವಿಶ್ವಾಸವಿದ್ದರೆ ಅಸಾಧ್ಯವಾದುದನ್ನು ಸಾಧಿಸಲು ಸಾಧ್ಯ ಎಂಬುದಕ್ಕೆ ಕೃತಕ ಕಾಲಿನ ಮೂಲಕ ಮೌಂಟ್ ಎವರೆಸ್ಟ್ ಏರಿದ ಅರುಣಿಮಾ ಸಿನ್ಹಾ ಉದಾಹರಣೆಯಾಗುತ್ತಾರೆ. ಕ್ರೀಡಾಪಟುವಾಗಿದ್ದ ಆಕೆ ಒಮ್ಮೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದರೋಡೆಕೋರರಿಂದ ದಾಳಿಗೆ ಒಳಗಾದರು. ಪ್ರತಿರೋಧ ವ್ಯಕ್ತಪಡಿಸಿದಾಗ ದರೋಡೆಕೋರರು ಅರುಣಿಮಾರನ್ನು ರೈಲಿನಿಂದ ಹೊರದೂಡಿದರು. ಪಕ್ಕದ ರೈಲು ಹಳಿ ಮೇಲೆ ಬೀಳುವ ಆಕೆಯ ಒಂದು ಕಾಲಿನ ಮೇಲೆ ರಾತ್ರಿಯಿಡೀ ಕೆಲವು ರೈಲುಗಳು ಹಾದು ಹೋದವು. ಹಳಿಯ ಬಳಿ ಬಿದ್ದಿದ್ದ ಆಕೆಯನ್ನು ಮರುದಿನ ಬೆಳಗ್ಗೆ ಕಂಡ ಗ್ರಾಮಸ್ಥರು ಆಸ್ಪತ್ರೆಗೆ ಸೇರಿಸಿದರು. ಅನಂತರ ಅರುಣಿಮಾ ಒಂದು ಕಾಲನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಯಿತು. ಆದರೂ ಆತ್ಮಸ್ಥೈರ್ಯದಿಂದ ಕೃತಕ ಕಾಲನ್ನು ಜೋಡಿಸಿಕೊಂಡು ಎವರೆಸ್ಟ್ ಶಿಖರ ಏರಲು ಪಣ ತೊಟ್ಟರು. ಅದಕ್ಕೂ ಮೊದಲು ಎವರೆಸ್ಟ್ ಏರಿದ ಪ್ರಥಮ ಭಾರತೀಯ ಮಹಿಳೆ ಬಚೇಂದ್ರಿ ಪಾಲ್ ಅವರನ್ನು ಭೇಟಿಯಾದರು. ಅವರು ಅರುಣಿಮಾರನ್ನು ಉದ್ದೇಶಿಸಿ ‘ನೀನು ಈಗಾಗಲೇ ಶಿಖರವನ್ನು ಏರಿಯಾಗಿದೆ. ಈಗ ಜಗತ್ತಿಗೆ ತೋರಿಸಲು ಮಾತ್ರ ಪರ್ವತ ಏರಬೇಕಾಗಿದೆ’ ಎಂದು ಹೇಳಿ ಬೆನ್ನು ತಟ್ಟಿದರು. ಆತ್ಮವಿಶ್ವಾಸ ಇದ್ದರೆ ಕೈಗೊಂಡ ಕೆಲಸ ಅರ್ಧ ಮುಗಿದಂತೆ ಎಂದು ಅನುಭವಿಗಳು ಹೇಳಿದ್ದಾರೆ. ಕೊನೆಗೂ ಕೃತಕ ಕಾಲಿನ ಮೂಲಕ ಶಿಖರ ಏರಿ ದೌರ್ಬಲ್ಯವನ್ನು ಮೆಟ್ಟಿ ನಿಂತ ಅರುಣಿಮಾ ಸಾಕಷ್ಟು ವಿಷಯಗಳಲ್ಲಿ ಯುವಜನತೆಗೆ ಪ್ರೇರಣೆಯಾಗಿದ್ದಾರೆ.

ಸಮಯವೇ ಜೀವನದ ಅತ್ಯಮೂಲ್ಯ ಸಂಪತ್ತು. ಹಣ ಕಳೆದುಕೊಂಡರೆ ಮತ್ತೆ ಗಳಿಸಬಹುದು, ಆದರೆ ಕಳೆದುಹೋದ ಸಮಯ ಮರಳಿ ಬರುವುದಿಲ್ಲ. ಶ್ರಮದೊಂದಿಗೆ ಸಮಯಪಾಲನೆಯೂ ಸೇರಿದಾಗ ಯಶಸ್ಸನ್ನು ಸಾಧಿಸಬಹುದು. ಇಷ್ಟಲ್ಲದೆ ಜ್ಞಾನವೆಂದರೆ ತಿಳಿವು. ಅದನ್ನು ಸರಿಯಾದ ರೀತಿಯಲ್ಲಿ ಬಳಸುವ ಸಾಮರ್ಥ್ಯವೇ ಬುದ್ಧಿ. ಶ್ರಮವೆಂದರೆ ಕಷ್ಟಪಟ್ಟು ಮಾಡಿದ ಪ್ರಯತ್ನ. ಈ ಮೂರೂ ಸೇರಿಕೊಂಡಾಗ ಮಾತ್ರ ಸಾಧನೆ ಸಾಧ್ಯ. ಉದಾಹರಣೆಗೆ, ರೈತನಿಗೆ ಬೀಜ ಬಿತ್ತಿದರೆ ಬೆಳೆ ಬರುತ್ತದೆ ಎಂಬುದು ಜ್ಞಾನ. ಯಾವ ಮಣ್ಣಿನಲ್ಲಿ, ಯಾವ ಸಮಯದಲ್ಲಿ ಬೀಜ ಬಿತ್ತಬೇಕು ಎಂಬುದು ಬುದ್ಧಿ. ಹೊಲದಲ್ಲಿ ದುಡಿದು ಬೆಳೆ ತೆಗೆಯುವುದು ಶ್ರಮ. ಜ್ಞಾನವಿಲ್ಲದೆ ಬುದ್ಧಿ ನಿಷ್ಪ್ರಯೋಜಕ, ಶ್ರಮವಿಲ್ಲದೆ ಎರಡೂ ವ್ಯರ್ಥ. ಜೀವನದಲ್ಲಿ ಜ್ಞಾನ ಮಾರ್ಗದರ್ಶಕ, ಬುದ್ಧಿ ನಿರ್ಧಾರ ಶಕ್ತಿ, ಶ್ರಮ ಸಾಧನೆಗೆ ದಾರಿ. ಈ ಮೂರೂ ಒಟ್ಟಾದಾಗಲೇ ನಿಜವಾದ ಯಶಸ್ಸು.

ವ್ಯಕ್ತಿತ್ವ ಗಟ್ಟಿಗೊಳ್ಳಲು ಪ್ರಾಮಾಣಿಕತೆಯೂ ಅಗತ್ಯ. ಮೋಸ, ಅಸತ್ಯದಿಂದ ದೂರವುಳಿಯಬೇಕು. ನಿಷ್ಠೆ, ಬದ್ಧತೆಯಿಂದ ಕೆಲಸಕ್ಕೆ ಪ್ರಾಮುಖ್ಯ ನೀಡಬೇಕು. ಪ್ರಾಮಾಣಿಕ, ನಿಷ್ಠಾವಂತ ವ್ಯಕ್ತಿ ನಂಬಿಕೆಗೆ ಪಾತ್ರನಾಗುತ್ತಾನೆ. ಅವನ ಸಾಧನೆ ಶಾಶ್ವತವಾಗುತ್ತದೆ. ಬದುಕಿನಲ್ಲಿ ಸುಖ ಇರುವಂತೆ ಕಷ್ಟಗಳೂ ಇರುತ್ತವೆ. ಸಾಧನೆಗೆ ಸುಲಭದ ದಾರಿ ಇಲ್ಲ. ಅನೇಕ ಬಾರಿ ಕಷ್ಟ, ವೈಫಲ್ಯ ಎದುರಾಗುತ್ತವೆ. ಆಗ ಸಹನೆ, ತಾಳ್ಮೆ ಅಗತ್ಯ. ಸಹನೆ ಎಂದರೆ ಕಷ್ಟವನ್ನು ತಾಳುವ ಶಕ್ತಿ; ತಾಳ್ಮೆ ಎಂದರೆ ಸಮಯ ಬರುವವರೆಗೆ ನಿರೀಕ್ಷೆ ಮಾಡುವ ಸಾಮರ್ಥ್ಯ. ಹೂವಿಗೆ ಹಣ್ಣಾಗಲು ಸಮಯ ಬೇಕಾದಂತೆ, ಶ್ರಮಕ್ಕೂ ಫಲ ಸಿಗಲು ತಾಳ್ಮೆ ಬೇಕು. ಪ್ರಾಮಾಣಿಕತೆ, ನಿಷ್ಠೆ, ಸಹನೆ ಮತ್ತು ತಾಳ್ಮೆಯ ಜೊತೆಗೆ ಶ್ರಮ ಸೇರಿದಾಗ ಮಾತ್ರ ವ್ಯಕ್ತಿತ್ವ ಸಮೃದ್ಧವಾಗುತ್ತದೆ. ನಾವು ಮಾಡುವ ಶ್ರಮ ಸಣ್ಣದಾಗಿರಲಿ, ದೊಡ್ಡದಾಗಿರಲಿ ಅದು ಮತ್ತೊಬ್ಬರಿಗೆ ಪೂರಕವಾಗಿರಬೇಕೇ ಹೊರತು ಮಾರಕವಾಗಬಾರದು. ಶ್ರಮವು ಧರ್ಮದಿಂದ ಕೂಡಿದಾಗ ಮಾತ್ರ ಶ್ರಮಕ್ಕೂ, ಧರ್ಮಕ್ಕೂ ಬೆಲೆ.

ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಕರ್ಮದ ಬಗ್ಗೆ ತಿಳಿಸಿರುವುದು ಅರ್ಥಪೂರ್ಣವಾಗಿದೆ.

ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ |

ಮಾ ಕರ್ಮಫಲಹೇತುರ್ಭರ್ವ ತೇ ಸಂಗೋಸ್ತ್ವಕರ್ಮಣಿ ||

ನಮಗೆ ಕೆಲಸ ಮಾಡುವ ಹಕ್ಕು ಮಾತ್ರ ಇದೆ, ಅದರ ಫಲದ ಮೇಲೆ ಹಕ್ಕಿಲ್ಲ. ಫಲವನ್ನು ಬಯಸಿ ಕೆಲಸ ಮಾಡಬಾರದು. ಆಲಸ್ಯದಿಂದ ಇರಬಾರದು. ಕೆಲಸದ ಫಲಾಫಲವನ್ನು ಭಗವಂತನಿಗೆ ಬಿಡಬೇಕು.

ಕರ್ಮವು ಧರ್ಮದ ಪರವಿದ್ದಾಗ ಮಾತ್ರ ಕರ್ಮಕ್ಕೆ ಯಶಸ್ಸು, ಕೀರ್ತಿ ದೊರೆಯುವುದು. ಮಾಡಿದ ಶ್ರಮಕ್ಕೂ ಬೆಲೆ ಸಿಗುತ್ತದೆ. ಅಧರ್ಮದ ಪರ ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಕೊನೆಗೆ ಅದಕ್ಕೆ ಪರಾಜಯ ನಿಶ್ಚಿತ. ಜೀವನದಲ್ಲಿ ಶ್ರಮ, ಧರ್ಮ ಎರಡೂ ಅವಿಭಾಜ್ಯ. ಶ್ರಮವಿಲ್ಲದೆ ಸಾಧನೆ ಸಾಧ್ಯವಿಲ್ಲ, ಧರ್ಮವಿಲ್ಲದೆ ಆ ಸಾಧನೆ ಶಾಶ್ವತವಾಗುವುದಿಲ್ಲ. ಧರ್ಮ ಎಂದರೆ ನಿಷ್ಠೆ, ಸತ್ಯ, ನೀತಿ, ನ್ಯಾಯ. ಅಧರ್ಮ ಎಂದರೆ ಸುಳ್ಳು, ಲಾಲಸೆ, ಅನ್ಯಾಯ, ಅಹಂಕಾರ. ಧರ್ಮಕ್ಕೆ ಶ್ರಮ ಸೇರಿದಾಗ ಅದು ಶಕ್ತಿಯಾಗಿ, ಶ್ರೇಷ್ಠ ಸಾಧನೆಗೆ ದಾರಿ ಮಾಡುತ್ತದೆ. ಅಧರ್ಮಕ್ಕೆ ಶ್ರಮ ಸೇರಿದರೂ ಅಂತಿಮವಾಗಿ ಅದು ಸೋಲನ್ನು ಅನುಭವಿಸುತ್ತದೆ.

ಇದಕ್ಕೆ ಮಹಾಭಾರತ ಯುದ್ಧವೇ ದೊಡ್ಡ ಸಾಕ್ಷಿ. ಕೌರವರ ಸಂಖ್ಯೆ ಹೆಚ್ಚಿತ್ತು. ಅವರ ಸೈನ್ಯ ಬಲಿಷ್ಠವಾಗಿತ್ತು. ಹಾಗೆಯೇ ದುರ್ಯೋಧನನೊಂದಿಗೆ ಭೀಷ್ಮ, ದ್ರೋಣ, ಕರ್ಣ, ಶಕ್ತಿಶಾಲಿ ವೀರರಿದ್ದರು. ಆದರೆ ಅವರಲ್ಲಿ ಅಹಂಕಾರ, ದ್ವೇಷ, ಅಧರ್ಮವಿತ್ತು. ಕೌರವರು ತಮ್ಮ ಶಕ್ತಿಯನ್ನು ಧರ್ಮದ ಮಾರ್ಗದಲ್ಲಿ ಬಳಸದೆ, ಅನ್ಯಾಯದ ಮಾರ್ಗದಲ್ಲಿ ಬಳಸಿದರು. ಪಾಂಡವರ ಹಕ್ಕನ್ನು ದಮನಿಸಲು ಪ್ರಯತ್ನಿಸಿದರು. ಸಭೆಯಲ್ಲೇ ದ್ರೌಪದಿಯನ್ನು ಅವಮಾನಿಸಿದರು. ಜೂಜಿನಲ್ಲಿ ಮೋಸ ಮಾಡಿದರು. ಕೊನೆಗೆ ಐದು ಗ್ರಾಮಗಳಲ್ಲ, ಒಂದಿಂಚು ಭೂಮಿಯನ್ನೂ ಕೊಡುವುದಿಲ್ಲ ಎಂದು ಹೇಳಿ ಪಾಂಡವರನ್ನು ಹೊರಹಾಕಿದರು. ಆದರೆ ಪಾಂಡವರು ಧರ್ಮಮಾರ್ಗದಲ್ಲಿ ನಡೆಯುತ್ತಿದ್ದರು. ಅವರಿಗೆ ಕಷ್ಟ ಎದುರಾದರೂ ಧರ್ಮ ಹಾಗೂ ಶ್ರಮವನ್ನು ಬಿಡಲಿಲ್ಲ. ಅರಣ್ಯವಾಸ ಮಾಡಿದರು. ಆಹಾರ, ನಿದ್ರೆಗಳಿಲ್ಲದೆ ಬಳಲಿದರು. ಸಂಧಾನಕ್ಕೂ ಯತ್ನಿಸಿ ವಿಫಲರಾದರು. ಕೊನೆಗೆ ಅನಿವಾರ್ಯವಾಗಿ ಅಧರ್ಮದ ವಿರುದ್ಧ ಹೋರಾಡುವ ಪರಿಸ್ಥಿತಿ ನಿರ್ವಣವಾಯಿತು. ಶ್ರೀಕೃಷ್ಣನ ಮಾರ್ಗದರ್ಶನದಲ್ಲಿ ಪಾಂಡವರು ಶ್ರಮವನ್ನು ಧರ್ಮದ ಪರವಾಗಿ ಬಳಸಿದರು.

ಮಹಾಭಾರತ ಯುದ್ಧದಲ್ಲಿ ಕೌರವರ ಸೈನ್ಯ ದೊಡ್ಡದಾಗಿದ್ದರೂ, ಅವರ ಶ್ರಮ ಅಧರ್ಮದ ಪರವಾಗಿದ್ದುದ್ದರಿಂದ ಫಲ ದೊರೆಯಲಿಲ್ಲ. ಯುದ್ಧದ ಆರಂಭದಲ್ಲಿ ಕೌರವರು ಬಲಿಷ್ಠರಂತೆ ಕಾಣಿಸಿದರೂ, ಅವರ ಅಹಂಕಾರ ಮತ್ತು ಅನ್ಯಾಯ ಕೊನೆಗೆ ಅವರ ಸೋಲಿಗೆ ಕಾರಣವಾಯಿತು. ಪಾಂಡವರು ಧರ್ಮದ ಪರವಾಗಿದ್ದು, ಶ್ರಮವನ್ನು ನ್ಯಾಯಕ್ಕಾಗಿ ಹೂಡಿದ್ದರು. ಅವರಿಗಿದ್ದ ಆಂತರಿಕ ಶಕ್ತಿ, ತಾಳ್ಮೆ, ಧೈರ್ಯ ಹಾಗೂ ಕೃಷ್ಣನ ನೀತಿಜ್ಞಾನದಿಂದ ಕೊನೆಗೆ ಪಾಂಡವರು ಜಯಶಾಲಿಗಳಾದರು. ಧರ್ಮದ ಪರವಾಗಿ ಮಾಡಿದ ಶ್ರಮ ಶಾಶ್ವತ ಜಯ ತರುತ್ತದೆ ಎಂಬುದು ಇದರರ್ಥ. ಹಾಗೆಯೇ ಕಷ್ಟ, ವೈಫಲ್ಯ ಬಂದರೂ ಧರ್ಮವನ್ನು ಬಿಟ್ಟುಬಿಡಬಾರದು.

ಇದು ಎಲ್ಲ ಕಾಲಕ್ಕೂ ಅನ್ವಯವಾಗುತ್ತದೆ. ವಿದ್ಯಾರ್ಥಿಯೊಬ್ಬ ಸತ್ಯ, ಪ್ರಾಮಾಣಿಕತೆಯಿಂದ ತನ್ನ ಶ್ರಮವನ್ನು ವಿನಿಯೋಗಿಸಿದರೆ ಆತ ನಿಜವಾದ ಜ್ಞಾನ ಪಡೆಯುತ್ತಾನೆ. ವ್ಯಾಪಾರಿ ನಿಷ್ಠೆಯಿಂದ ಶ್ರಮಿಸಿದರೆ ಅವನ ಸಂಪತ್ತು ವೃದ್ಧಿಯಾಗುವುದು. ಸುಳ್ಳು, ಮೋಸ, ಅಕ್ರಮದ ಮಾರ್ಗದಲ್ಲಿ ಶ್ರಮಿಸಿದರೆ ಅದು ಕೆಲಕಾಲ ಲಾಭ ತರುವುದಾದರೂ, ಅಂತಿಮವಾಗಿ ಅವಮಾನ ಮತ್ತು ಸೋಲಿಗೆ ಕಾರಣವಾಗುತ್ತದೆ. ಶ್ರಮವಿಲ್ಲದ ಸಾಧನೆ ಕನಸಿನಂತೆ ಅಸ್ಥಿರ. ನಿರಂತರ ಪರಿಶ್ರಮ, ಸಹನೆ, ನಂಬಿಕೆ ಇವು ಯಶಸ್ಸಿನ ಮೂಲಸಾಧನಗಳು. ಯತ್ನವೇ ಫಲದಾಯಕ ಎಂಬ ನಂಬಿಕೆ ಇಟ್ಟುಕೊಂಡು ಶ್ರಮಿಸಿದವನು ಜೀವನದಲ್ಲಿ ಖಂಡಿತ ಸಾಧನೆ ಕಾಣುತ್ತಾನೆ. ಶ್ರಮದೊಂದಿಗೆ ಇತರ ಸದ್ಗುಣಗಳನ್ನು ಮೆಟ್ಟಿಲನ್ನಾಗಿಸಿಕೊಂಡು ಮುನ್ನಡೆದರೆ ಬದುಕಿನಲ್ಲಿ ಯಶಸ್ಸನ್ನು ಕಾಣಲು ಸಾಧ್ಯ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net