

ಒಬ್ಬ ರೈತ ತನ್ನ ಪತ್ನಿಯೊಡನೆ ದಾಸ್ತಾನು ಕೋಣೆಯಲ್ಲಿ ಇಟ್ಟಿದ್ದ ಭತ್ತದ ಮೂಟೆಯ ಹತ್ತಿರ ಬಂದು, ಇದರಲ್ಲಿ ಅರ್ಧದಷ್ಟನ್ನು ಅವಲಕ್ಕಿ ಮಾಡಿಸಿ, ಉಳಿದರ್ಧವನ್ನು ಬೀಜಕ್ಕೆ ಇಟ್ಟರೆ ಹೇಗೆ..? ಎಂದು ರ್ಚಚಿಸುತ್ತಿದ್ದ. ಆ ಮಾತನ್ನು ಕೇಳಿಸಿಕೊಂಡ ಎರಡು ಭತ್ತಗಳು ಮಾತಿಗಿಳಿದವು. ಯಜಮಾನ ಈಗ ಆಡಿದ ಮಾತುಗಳನ್ನು ಕೇಳಿಸಿಕೊಂಡೆಯಾ. ನಾವು ಇನ್ನು ಬಹಳ ದಿನ ಭತ್ತವಾಗಿ ಉಳಿಯಲಾರೆವು. ಅವಲಕ್ಕಿ ಅಥವಾ ಬೀಜಕ್ಕೆ ಬಿದ್ದು ಮೊಳಕೆಯೊಡೆದು ಸಸಿಯಾಗಿಬಿಡುತ್ತೇವೆ. ನಾವು ಈ ಪರಿಸ್ಥಿತಿಯಿಂದ ಹೇಗೆ ಪಾರಾಗುವುದು..? ಎಂದು ಒಂದು ಭತ್ತ ಇನ್ನೊಂದನ್ನು ಕೇಳಿತು. ಆಗ ಇನ್ನೊಂದು ಭತ್ತ ಸಾವಧಾನದಿಂದ, ‘ಹೀಗೆ ಇದ್ದರೆ ಏನು ಪ್ರಯೋಜನ..? ಜೀವನ ಸಾರ್ಥಕವಾಗಬೇಕಾದರೆ ನಾವು ರೂಪಾಂತರ ಹೊಂದಲೇಬೇಕು. ಅವಲಕ್ಕಿಯಾಗುವುದೋ, ಭತ್ತದ ಸಸಿಯಾಗುವುದೋ ಎಂದು ದೇವರೇ ನಿಶ್ಚಯಿಸಿರುತ್ತಾನೆ...’ ಎಂದಿತು.
ಈ ಮಾತಿನಿಂದ ಸಂತುಷ್ಟಗೊಳ್ಳದ ಮೊದಲನೇ ಭತ್ತ, ‘ನಾನಂತೂ ಹೀಗೆ ಇರಲು ಇಷ್ಟಪಡುತ್ತೇನೆ’ ಎಂದು ಚೀಲದ ರಂಧ್ರದಿಂದ ನುಣುಚಿ ಪಾರಾಗಿ ನೆಲದಲ್ಲಿ ಬಿದ್ದಿತು. ಮಾರನೆಯ ದಿನ ರೈತ ಅರ್ಧದಷ್ಟು ಭತ್ತವನ್ನು ಗಿರಣಿಗೆ ಕಳುಹಿಸಿ ಉಳಿದದ್ದನ್ನು ಬೀಜಕ್ಕೆ ನೆನೆಸಿದ. ನುಣುಚಿ ಬಿದ್ದ ಭತ್ತ ತಾನು ಸುರಕ್ಷಿತವಾದೆ ಎಂದು ಬೀಗಿತು. ಆದರೆ ಮಾರನೇ ದಿನ ರೈತನು ಕಸಗುಡಿಸುವಾಗ ಸಿಕ್ಕು ಕಸದ ರಾಶಿ ಸೇರಿ ಅಲ್ಲಿ ಮುಗ್ಗಲು ಹಿಡಿಯಿತು. ಇನ್ನೊಂದು ಭತ್ತವು ಬೀಜಕ್ಕೆ ಬಿದ್ದು ಸಸಿಯಾಗಿ ಗದ್ದೆಯಲ್ಲಿ ಬೆಳೆಯುತ್ತಿರುವಾಗ ಮಳೆಯಲ್ಲಿ ತೇಲುತ್ತಾ ಬಂದ ಹಾಳಾದ ಭತ್ತವು,
‘ನಾನು ಅಂದು ಇದ್ದ ಹಾಗೆ ಇರಲು ಹಠ ತೊಟ್ಟೆ. ಆದರೆ ಬದಲಾವಣೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ನಿನ್ನ ಮಾತು ಕೇಳಿದ್ದರೆ ಸದ್ಗತಿಯಾದರೂ ದೊರೆಯುತ್ತಿತ್ತು. ಬದುಕು ಅರ್ಥಪೂರ್ಣವಾಗುತ್ತಿತ್ತು’ ಎಂದಿತು. ಆಗ ಮೊದಲನೇ ಭತ್ತ.. ’ಗೆಳೆಯಾ ಬೇಸರಿಸದಿರು.. ನಿನ್ನ ಬದುಕು ಹೀಗೆ ಆಗಬೇಕು ಎಂದು ನಿನ್ನ ಹಣೆಯಲ್ಲಿ ಬರೆದಿತ್ತು. ಹಣೆಬರೆಹ ತಪ್ಪಿಸಲಾಗದು. ನೀನು ಹಾಳಾದೆ’ ಎಂದು ಬೇಸರಿಸಬೇಡ. ಇಲ್ಲಿರುವ ಗಿಡಗಳಿಗೆ ಕಣದಷ್ಟಾದರು ಸತ್ವ ನೀಡುವ ಪುಣ್ಯ ನಿನ್ನದಾಗಿದೆ’ ಎಂದು ಸಮಾ ಧಾನಿಸಿತು. ಬಯಕೆ ಬೀಜವ ಬಿತ್ತಿ ಜತನದಲಿ ನೀರೆರೆದು/ ನಯವಾಗಿ ಲಾಲಿಸುತ ಅನುದಿನವು ಪೊರೆದು/ ಜಯದ ಫಲ ದೊರೆಯದಿರೆ ಮರುಗದಿರು ಮನವೆ/ ಆಯ ವ್ಯಯದ ಹೊಣೆ ದೇವರಿಗೆ ಬಿಡಲು ಗೆಲುವೆ ನಾನು ಯಾವಾಗಲೂ ಹೀಗೆ ಇರುತ್ತೇನೆ ಎಂದುಕೊಂಡರೂ ಕಾಲ ನಮ್ಮನ್ನು ಹಾಗೆ ಇರಲು ಬಿಡುವುದಿಲ್ಲ. ನಿರೀಕ್ಷೆ ಮಾಡದ ಪರಿಸ್ಥಿತಿಗಳು ಎದುರಾಗುತ್ತವೆ. ನಾವು ಅಂದುಕೊಂಡದ್ದನ್ನು ಸಾಧಿಸಲು ನಮ್ಮ ಹಠ, ನಿರಂತರ ಪ್ರಯತ್ನದ ಜತೆಗೆ ದೇವರ ಅನುಗ್ರಹವೂ ಬೇಕು. ಪ್ರಯತ್ನ ಮಾಡಿ ಫಲಾಫಲಗಳನ್ನು ಭಗವಂತನಿಗೆ ಬಿಡಬೇಕು ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳಿದ್ದಾನೆ. ಈ ಹಿತೋಕ್ತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮಲ್ಲಿ ನಕಾರಾತ್ಮಕ ಭಾವನೆಗಳು ದೂರವಾಗಿ ಶಾಂತಿ ನೆಲೆಸುತ್ತದೆ.
(ಲೇಖಕರು ಹವ್ಯಾಸಿ ಬರಹಗಾರರು)