

ಅದು ಮಲೆನಾಡಿನ ಒಂದು ಹಳ್ಳಿ. ಶಾಲಾ ಕಾರ್ಯಕ್ರಮಕ್ಕಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲಾಗುತ್ತಿತ್ತು. ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಿ ಶಿಕ್ಷಕರು ಮತ್ತು ಶಾಲಾ ಸಮಿತಿಯವರು ಆರ್ಥಿಕ ಸಹಕಾರಕ್ಕೆ ಮನವಿ ಮಾಡುತ್ತಿದ್ದರು. ವಠಾರದ ಒಂದು ಮನೆಯಲ್ಲಿ ವೃದ್ಧ ದಂಪತಿ ವಾಸಿಸುತ್ತಿದ್ದರು. ಬಡತನದ ಜತೆಗೆ ತೀವ್ರ ಅನಾರೋಗ್ಯ. ಔಷಧೋಪಚಾರದ ಖರ್ಚು ಕೂಡ ಅವರಿಗೆ ಕಷ್ಟಕರ ಜೀವನವನ್ನು ತಂದೊಡ್ಡಿತ್ತು. ಸಂಕಷ್ಟದಲ್ಲಿರುವ ಕುಟುಂಬದಿಂದ ಶಾಲೆಗಾಗಿ ಆರ್ಥಿಕ ಸಹಕಾರ ಪಡೆಯುವುದು ಸೂಕ್ತವಲ್ಲವೆಂಬ ಸದುದ್ದೇಶದಿಂದ ಅವರ ಬಳಿ ಯಾವುದೇ ಹಣಕಾಸನ್ನು ಕೇಳದೆ, ಶಾಲಾ ಕಾರ್ಯಕ್ರಮಕ್ಕೆ ಆಹ್ವಾನಿಸಿ ಶಿಕ್ಷಕರ ತಂಡ ವಾಪಸು ಹೊರಡಲು ಅಣಿಯಾದರು. ಮನೆಯ ತಾತ ಮನೆಯೊಳಗೆ ನಡೆದರು.
ಮನೆಯ ಮುಂದಿನ ಹಳ್ಳಿಯ ಸೊಗಡಿನ ಬೇಲಿ ದಾಟುತ್ತಿದ್ದಂತೆ ಆ ವೃದ್ಧರು ಶಿಕ್ಷಕರನ್ನು ಕೂಗಿ ಕರೆದರು. ಮುನ್ನೂರು ರೂಪಾಯಿಗಳನ್ನು ಕೈಗಿಟ್ಟು ‘ಇಂದೋ ನಾಳೆಯೋ ಈ ಭೂಮಿಯ ಋಣ ತೀರಿಸಿ ಮಣ್ಣಾಗುವ ನನಗೆ ನನ್ನ ಸಂತೋಷ, ಔಷಧಗಳ ಖರ್ಚು ವೆಚ್ಚ ಯಾವುದೂ ಮುಖ್ಯವಾಗದು. ಮುಂದೆ ಬದುಕಿ ಬಾಳುವ ಮಕ್ಕಳ ಸಂತೋಷಕ್ಕೆ ನನ್ನ ಕೈಲಾದ ಕಿರು ಕಾಣಿಕೆ ನೀಡುವುದು ನನಗೆ ಹೆಚ್ಚು ತೃಪ್ತಿ ನೀಡುತ್ತದೆ’ ಎಂದರು. ಹಿರಿಯರ ನಿಷ್ಕಲ್ಮಶ ಮಾತು ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿತು.
ಕೋಟಿಗಟ್ಟಲೆ ಬೆಲೆ ಬಾಳುವ ಆಸ್ತಿ, ಎಂದೂ ಕರಗದ ಖಜಾನೆಯಂತೆ ಹಣ ಸಂಪಾದನೆ ನಮ್ಮದಾಗಿದ್ದರೂ ಮತ್ತಷ್ಟು ಬೇಕು ಎಂದು ಕೂಡಿಡುವ ಮನಸ್ಸಿನ ಜನರು ಇಂದಿನ ಕಾಲಘಟ್ಟದಲ್ಲಿ ಸಾಮಾನ್ಯವಾಗಿದ್ದಾರೆ. ಇಂತಹುದರಲ್ಲಿ ಅಳಿದು ಹೋಗುವ ಈ ದೇಹಕ್ಕೆ ಆರೈಕೆ ಮಾಡುವುದಕ್ಕಿಂತ ಮುಂದಿನ ಪೀಳಿಗೆಯ ಮಕ್ಕಳು ಸಂತಸದಿಂದರಲಿ ಎಂದು ಆಶಿಸುವ ಹಿರಿಯ ಚೇತನಗಳು ಕಿರಿಯ ತಲೆಮಾರಿಗೆ ಮಾದರಿಯಾಗಿ ನಿಲ್ಲುತ್ತಾರೆ. ಬಡತನ ಎಂಬುದು ಕೇವಲ ಜೀವನ ನಿರ್ವಹಣೆಗೆ ಮಾತ್ರ ಅಡ್ಡಿಯಾಗಬಲ್ಲುದು. ಆದರೆ ದಾನ ಮಾಡುವ ಮನಸ್ಸಿಗೆ ಬಡತನ ಎಂದೂ ಅಡ್ಡಿಯಾಗದು.
ದಾನ ಮಾಡುವುದು ಕರ್ತವ್ಯವೆಂದು ತಿಳಿದು ಶ್ರದ್ಧೆಯಿಂದ ಸಂದರ್ಭಾನುಸಾರವಾಗಿ, ಯೋಗ್ಯ ಕಾಲಗಳಲ್ಲಿ ಪ್ರತ್ಯುಪಕಾರವನ್ನು ಬಯಸದೇ ಸತ್ಪಾತ್ರನಲ್ಲಿ ಮಾಡುವ ದಾನವು ಸಾತ್ತಿ್ವಕ ದಾನವೆನಿಸುತ್ತದೆ. ಈ ರೀತಿಯಲ್ಲಿ ಕೊಡುವ ದಾನವು ಸದ್ವಿನಿಯೋಗ ಆದಾಗ ಕೊಟ್ಟ ದಾನವು ಪರಿಪೂರ್ಣತೆಯನ್ನು ಪಡೆಯುತ್ತದೆ. ಆತ್ಮ ತೃಪ್ತಿಯಿಂದ ದಾನ ನೀಡಬೇಕು. ಒಳ್ಳೆಯ ಮನಸ್ಸಿನಿಂದ ನೀಡಬೇಕು. ಪೀಡೆ ತೊಲಗಿತು ಎಂಬ ಮನೋಭಾವ ಇರದೆ ನನ್ನಿಂದಾದಷ್ಟು ನಾನು ಮಾಡಿದೆ ಎಂಬ ವಿಶಾಲ ಮನಸ್ಸು ನಮ್ಮದಾಗಿರಬೇಕು. ಸಹಾಯ ಕೇಳಿ ಬಂದ ಕೈಯನ್ನು ಬರಿಗೈಯಲ್ಲಿ ಮರಳಿಸಬಾರದು. ಇದ್ದದ್ದರಲ್ಲಿ ಒಳ್ಳೆಯದನ್ನು ಕೊಟ್ಟು ಅವರ ಮನಸ್ಸನ್ನು ಸಂತೃಪ್ತಿಗೊಳಿಸಬೇಕು. ಆಗ ಮಾತ್ರ ದಾನ ನೀಡಿದ ಕೈ ಎಂದೂ ಬರಿದಾಗದೆ ಅಕ್ಷಯವಾಗುತ್ತದೆ.
ತಿರಿದು ತಂದಾದರೂ | ಕರೆದು ಜಂಗಮಕ್ಕಿಕ್ಕು |
ಪರಿಣಾಮವಕ್ಕು ಪದವಕ್ಕು, ಕೈಲಾಸ |
ನೆರೆಮನೆಯಕ್ಕು ಸರ್ವಜ್ಞ ||
ಎಂಬ ಸರ್ವಜ್ಞನ ವಚನದ ಸಾಲುಗಳಂತೆ, ತಾನು ತಿರಿದು ತಂದಿದ್ದರೂ ಪರ ವಾಗಿಲ್ಲ, ಜಂಗಮರನ್ನು ಕರೆತಂದು ಉಣಬಡಿಸುವದರಿಂದ ಅವನಿಗೆ ಕೈಲಾಸವೆಂದರೆ ನೆರಮನೆಯಷ್ಟು ಸಮೀಪವಾಗುವುದು. ಆಂತರ್ಯದ ಸಂತೋಷಕ್ಕಾಗಿ ನಮ್ಮ ಕೈಲಾದಷ್ಟನ್ನು ಮನದುಂಬಿ ದಾನ ಮಾಡುವ ಮನಸ್ಸನ್ನು ನಮ್ಮದಾಗಿಸಿಕೊಳ್ಳೋಣ.
(ಲೇಖಕರು ಶಿಕ್ಷಕಿ ಮತ್ತು ಹವ್ಯಾಸಿ ಬರಹಗಾರರು)