ಗೊಂದಲಗಳ ಅಂಗಳವಾಗಿರುವ ಭಾರತದ ಬಾಗಿಲು

Column
Published on
ಭಾರತದ ಇತಿಹಾಸದಲ್ಲಿ ಅಫ್ಘಾನಿಸ್ತಾನ ವಹಿಸಿದಷ್ಟು ಮಹತ್ವದ ಪಾತ್ರವನ್ನು ಇನ್ನಾವ ನೆರೆನಾಡೂ ವಹಿಸಿಲ್ಲ. ಅರಬ್ಬರು ಮತ್ತು ಯುರೋಪಿಯನ್ನರ ಹೊರತಾಗಿ ಉಳಿದೆಲ್ಲ ಆಕ್ರಮಣಕಾರರೂ, ವಲಸಿಗರೂ ಈ ದೇಶಕ್ಕೆ ಬಂದದ್ದು ಅಫ್ಘಾನಿಸ್ತಾನದ ಮೂಲಕ. ಹೀಗಾಗಿ ಅಫ್ಘಾನಿಸ್ತಾನ ಇತಿಹಾಸದುದ್ದಕ್ಕೂ ಭಾರತದ ಬಾಗಿಲಿನ ಪಾತ್ರ ವಹಿಸಿದೆ. ಕ್ರಿಸ್ತ ಶಕದ ಆಚೀಚಿನ ಎರಡುಸಾವಿರ ವರ್ಷಗಳಲ್ಲಿ ಭಾರತ ಮತ್ತು ಅಫ್ಘಾನಿಸ್ತಾನಗಳೆರಡೂ ಸಾಂಸ್ಕೃತಿಕ ಹಾಗೂ ಧಾರ್ವಿುಕವಾಗಿ ಒಂದೇ ಆಗಿದ್ದವು. ಮೌರ್ಯರ ಹಾಗೂ ಕುಶಾನರ ಕಾಲದಲ್ಲಿ ಆ ದೇಶ ರಾಜಕೀಯವಾಗಿಯೂ ಭಾರತದ ಭಾಗವೇ ಆಗಿಹೋಗಿತ್ತು. ಮೊದಲಿಗೆ ಹಿಂದೂ, ನಂತರ ಬೌದ್ಧಧರ್ಮದ ನೆಲೆಯಾಗಿದ್ದ ಅಫ್ಘಾನಿಸ್ತಾನಕ್ಕೆ ಸಾವಿರದ ಮುನ್ನೂರು ವರ್ಷಗಳ ಹಿಂದೆ ಇಸ್ಲಾಮ್ ಪ್ರವೇಶಿಸಿತು. ಅಲ್ಲಿಂದಾಚೆಗೆ ಇತಿಹಾಸ ಬೇರೊಂದು ದಿಕ್ಕು ಹಿಡಿಯಿತು. ಹಿಂದೆಲ್ಲ ಉತ್ತರ ಭಾರತದ ಸಾಮ್ರಾಜ್ಯಗಳು ತಮ್ಮ ಸೇನಾಕಾರ್ಯಾಚರಣೆ, ರಾಜಕೀಯ ಒತ್ತಡಗಳ ಮೂಲಕ ಅಫ್ಘಾನಿಸ್ತಾನದ ಮೇಲೆ ಪ್ರಭಾವ ಬೀರುತ್ತಿದ್ದವು. ಆದರೆ ಯಾವಾಗ ಅಲ್ಲಿ ಇಸ್ಲಾಮ್ ಭದ್ರವಾಗಿ ನೆಲೆಯೂರಿತೋ ಅಂದಿನಿಂದ ಅಫ್ಘನ್ ಸಾಮ್ರಾಜ್ಯಗಳು ಉತ್ತರ ಭಾರತದ ಇತಿಹಾಸವನ್ನು ನಿರ್ದೇಶಿಸತೊಡಗಿದವು. 1192-1526 ನಡುವಿನ ಮೂರು ಶತಮಾನಗಳಲ್ಲಿ ಭಾರತ ಕಂಡದ್ದು ಅಫ್ಟನ್ ಮುಸ್ಲಿಂ ಸೇನಾ ಪ್ರಾಬಲ್ಯ. ಮಂಗೋಲ್-ಟರ್ಕಿಷ್ ಮಿಶ್ರರಕ್ತದ ಮೊಘಲರು ಅಫ್ಘಾನಿಸ್ತಾನದ ಮೂಲಕ ಭಾರತ ಪ್ರವೇಶಿಸಿ 1526-56ರಲ್ಲಿ ಉತ್ತರ ಭಾರತದ ಸಾರ್ವಭೌಮರಾದಾಗ ಇತಿಹಾಸದ ಚಕ್ರ ಮತ್ತೊಮ್ಮೆ ಉರುಳಿತು, ಮೊಘಲ್ ಅರಸರು ಅಫ್ಘಾನಿಸ್ತಾನದ ಹಣೆಬರಹ ಬರೆಯತೊಡಗಿದರು. ಕಾಬೂಲ್ ಸೇರಿ ಪೂರ್ವ ಅಫ್ಘಾನಿಸ್ತಾನ ಮೊಘಲ್ ಸಾಮ್ರಾಜ್ಯದ ಭಾಗವಾಗಿಹೋಯಿತು.

ಹೀಗೆ ಮೂರು ಸಹಸ್ರಮಾನಗಳವರೆಗೆ ಘನಿಷ್ಟ ಸಾಂಸ್ಕೃತಿಕ, ರಾಜಕೀಯ ಸಂಬಂಧಗಳನ್ನು ಹೊಂದಿದ್ದ ಈ ಎರಡು ದೇಶಗಳು ಇತಿಹಾಸದ ಒಂದು ಕ್ರೂರ ವಿಪರ್ಯಾಸದಂತೆ ಶತ್ರುಗಳಾಗಿ ಬದಲಾದದ್ದು 1996-2001ರ ನಡುವಿನ ತಾಲಿಬಾನ್ ಆಡಳಿತದಲ್ಲಿ. ಭಾರತ-ಅಫ್ಘಾನಿಸ್ತಾನಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಬಾಮಿಯನ್ ಬುದ್ಧ ವಿಗ್ರಹವನ್ನು ನಾಶ ಮಾಡುವ ಮೂಲಕ ಹಾಗೂ ರಾಜಕೀಯ ಸಂಬಂಧಗಳನ್ನು ನಮ್ಮ ಐಸಿ-814 ವಿಮಾನವನ್ನು ಅಪಹರಿಸಿ ಕಂದಹಾರಕ್ಕೆ ಕೊಂಡೊಯ್ದ ಪಾಕಿಸ್ತಾನೀ ಭಯೋತ್ಪಾದಕರಿಗೆ ಪೂರ್ಣ ಸಹಕಾರ ನೀಡುವ ಮೂಲಕ ಹಾಳುಗೆಡವಲು ತಾಲಿಬಾನ್ ಪ್ರಯತ್ನಿಸಿತು.

ತಾಲಿಬಾನ್ ಮೂಲತಃ ಒಂದು ಪಖ್ತೂನಿ ಸಂಘಟನೆ. ದಕ್ಷಿಣ ಅಫ್ಘಾನಿಸ್ತಾನ ಮತ್ತದಕ್ಕೆ ಹೊಂದಿಕೊಂಡ ಉತ್ತರ ಪಾಕಿಸ್ತಾನದಲ್ಲಿ ಬಹುಸಂಖ್ಯಾತರಾಗಿರುವ ಪಖ್ತೂನಿಗಳು ಅಥವಾ ಪಠಾಣರು ಒಂದುಕಾಲದಲ್ಲಿ ಭಾರತದ ಬಗ್ಗೆ ಸದ್ಭಾವನೆ ಹೊಂದಿದ್ದರು. ಆ ದಿನಗಳು ಇತಿಹಾಸ ಸೇರಿ ಅವರು ಭಾರತದ ಕಟ್ಟಾ ವಿರೋಧಿಗಳಾಗಿ ಬದಲಾದದ್ದು ದುರಂತ ಕಥೆ. ಅದನ್ನು ಸಂಕ್ಷಿಪ್ತವಾಗಿ ಹೀಗೆ ಸಂಗ್ರಹಿಸಬಹುದು: ಭಾರತದ ಮೇಲೆ ತಮ್ಮ ವಸಾಹತುಶಾಹೀ ಆಡಳಿತ ಹೇರುವುದರಲ್ಲಿ ಯಶಸ್ವಿಯಾದ ಬ್ರಿಟಿಷರು ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಅಫ್ಘಾನಿಸ್ತಾನದ ದಕ್ಷಿಣ ಭಾಗಗಳನ್ನು ಆಕ್ರಮಿಸಿಕೊಂಡು ತಮ್ಮ ಭಾರತ ಸಾಮ್ರಾಜ್ಯಕ್ಕೆ ಸೇರಿಸಿಕೊಂಡರು. ಎರಡೂ ದೇಶಗಳ ನಡುವೆ ಅವರು 1893ರಲ್ಲಿ ಡ್ಯೂರಾಂಡ್ ಗಡಿರೇಖೆಯನ್ನೆಳೆದಾಗ ಪಖ್ತೂನ್ ಜನತೆ ಇಬ್ಬಾಗವಾಗಿಹೋಯಿತು. ಹೀಗಾಗಿ ಎರಡೂ ಕಡೆಯ ಪಖ್ತೂನಿಗಳು ಡ್ಯೂರಾಂಡ್ ಗಡಿರೇಖೆಯನ್ನು ಒಪ್ಪಿಕೊಳ್ಳಲಿಲ್ಲ. ಸಂಖ್ಯಾಬಲದಿಂದಾಗಿ ಅಫ್ಘಾನಿಸ್ತಾನದ ಮೇಲೆ ರಾಜಕೀಯ ಹಿಡಿತ ಸ್ಥಾಪಿಸಿದ ಅಫ್ಘನ್ ಪಖ್ತೂನಿಗಳು ಡ್ಯೂರಾಂಡ್ ರೇಖೆಗೆ ವಿರೋಧವನ್ನು ಅಫ್ಘನ್ ಸರ್ಕಾರದ ಪ್ರಮುಖ ನೀತಿಯನ್ನಾಗಿ ರೂಪಿಸಿದರು. ಭಾರತದಿಂದ ಬ್ರಿಟಿಷರು ಕಾಲ್ತೆಗೆದು, ದೇಶ ಇಬ್ಭಾಗವಾಗಿ, ಪಾಕಿಸ್ತಾನ ಉದಯವಾಗಿ ಡ್ಯೂರಾಂಡ್ ರೇಖೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳ ನಡುವಿನ ಗಡಿರೇಖೆಯಾದ ನಂತರದ ಮೂರು ದಶಕಗಳಲ್ಲಿ ಪಖ್ತೂನಿ ಪ್ರದೇಶಗಳಾದ ಉತ್ತರ ಬಲೂಚಿಸ್ತಾನ ಮತ್ತು ಖೈಬರ್-ಪಖ್ತೂನ್​ಕ್ವಾ ಪ್ರಾಂತ್ಯ (ಹಿಂದಿನ ವಾಯವ್ಯ ಗಡಿನಾಡು ಪ್ರಾಂತ್ಯ) ಅಫ್ಘಾನಿಸ್ತಾನಕ್ಕೆ ಸೇರಬೇಕೆಂದು ಅಫ್ಘನ್ ಸರ್ಕಾರಗಳು ನಿರಂತರವಾಗಿ ವಾದಿಸಿದರೆ, ಪಾಕಿಸ್ತಾನೀ ಪಖ್ತೂನಿಗಳೂ ಅದಕ್ಕೆ ಸಮ್ಮತಿ-ಸಹಕಾರ ನೀಡಿ ಪಾಕಿಸ್ತಾನದಿಂದ ಹೊರಹೋಗುವ ಇಚ್ಛೆಯನ್ನು ಮತ್ತೆಮತ್ತೆ ವ್ಯಕ್ತಪಡಿಸಿದರು. ಎರಡೂ ಕಡೆಯ ಪಖ್ತೂನಿಗಳು ಭಾರತದ ಬಗ್ಗೆ ಸ್ನೇಹ-ಸದ್ಭಾವನೆ ಹೊಂದಿದ್ದರು. ಇದೆಲ್ಲವೂ ಬದಲಾದದ್ದು ತನ್ನ ಕೈಗೊಂಬೆ ಬಬ್ರಾಕ್ ಕರ್ವಲ್ ಸರ್ಕಾರವನ್ನು ಉಳಿಸಿಕೊಳ್ಳಲು ಸೋವಿಯತ್ ಯೂನಿಯನ್ 1979 ಡಿಸೆಂಬರ್​ನಲ್ಲಿ ತನ್ನ ಸೇನೆಯನ್ನು ಅಫ್ಘಾನಿಸ್ತಾನಕ್ಕೆ ನುಗ್ಗಿಸಿದಾಗ. ರಾಜತಾಂತ್ರಿಕವಾಗಿ ಪಾಕಿಸ್ತಾನ ಬುದ್ಧಿವಂತಿಕೆ ಪ್ರದರ್ಶಿಸಿದ್ದೂ, ಭಾರತ ಎಡವಿದ್ದೂ ಆಗಲೇ.

ಸೋವಿಯತ್ ಸೇನೆಯ ವಿರುದ್ಧ ವಿವಿಧ ಅಫ್ಘನ್ ಜನಾಂಗಗಳು ಯುದ್ಧ ಸಾರಿದಾಗ ಮುಂಚೂಣಿಯಲ್ಲಿದ್ದವರು ಅಫ್ಘನ್ ಪಖ್ತೂನಿಗಳು. ಅವರಿಗೆ ಪಾಕಿಸ್ತಾನಿ ಪಖ್ತೂನಿಗಳ ಸಹಾನುಭೂತಿ-ಸಹಕಾರವಿತ್ತು. ಅವರ ಪರವಾಗಿ ನಿಂತದ್ದು ಪಾಕಿಸ್ತಾನದ ಜಿಯಾ-ಉಲ್-ಹಕ್ ಸೇನಾ ಸರ್ಕಾರ. ಆ ಸಹಕಾರದ ಜತಗೆ ಅಫ್ಘನ್ ಮುಜಾಹಿದೀನ್​ಗಳಿಗೆ ಹಣ ಹಾಗೂ ಶಸ್ತ್ರಾಸ್ತ್ರಗಳನ್ನು ಪೂರೈಸಲು ಅಮೆರಿಕ ಮುಂದೆಬಂದಾಗ ಅದಕ್ಕೆ ಮಧ್ಯವರ್ತಿಯಾಗಲೂ ಪಾಕಿಸ್ತಾನ ತಯಾರಾಯಿತು.

ಹೀಗೆ ಯಾವಾಗ ಪಾಕಿಸ್ತಾನ ಅಫ್ಘನ್ ಮುಜಾಹಿದೀನ್​ಗಳ ಪರವಾಗಿ ನಿಂತಿತೋ ಆಗ ಅಫ್ಘನ್ ಪಖ್ತೂನಿಗಳು ಪಾಕಿಸ್ತಾನ-ವಿರೋಧಿ ನೀತಿಯನ್ನು ಮರೆತುಬಿಟ್ಟರು. ಹಾಗೆಯೇ ಉತ್ತರ ಪಾಕಿಸ್ತಾನದಲ್ಲಿದ್ದ ಪಖ್ತೂನಿಗಳೂ ಪಾಕಿಸ್ತಾನದ ಬಗ್ಗೆ ಮೊದಲ ಬಾರಿಗೆ ಮಮತೆ ತಳೆದರು. ಪಾಕಿಸ್ತಾನ ಹೀಗೆ ವರ್ತಿಸಿದರೆ, ಅಫ್ಘಾನಿಸ್ತಾನಕ್ಕೆ ಸೋವಿಯತ್ ಸೇನೆ ಪ್ರವೇಶಿಸಿದ ನಂತರದ ಎರಡು ವಾರಗಳಲ್ಲಿ ದೆಹಲಿಯಲ್ಲಿ ಸ್ಥಾಪನೆಗೊಂಡ ಇಂದಿರಾ ಗಾಂಧಿ ಸರ್ಕಾರ ಸೋವಿಯತ್ ಯೂನಿಯನ್ ಪರವಾಗಿ ನಿಂತಿತು. ಇದನ್ನು ಪಖ್ತೂನಿಗಳು ‘ಮಿತ್ರದ್ರೋಹ’ ಎಂದು ಬಗೆದರು. ಪರಿಣಾಮವಾಗಿ ಅವರು ಭಾರತದೊಂದಿಗೆ ಹೊಂದಿದ್ದ ಐತಿಹಾಸಿಕ ಸದ್ಭಾವನೆ ಹಾಗೂ ಮೈತ್ರಿ ಅಂತ್ಯಗೊಂಡಿತು. ಇದೊಂದು ದುರದೃಷ್ಟಕರ ಬೆಳವಣಿಗೆ. ಹಾಗೆ ನೋಡಿದರೆ ಇಂದಿರಾ ಸರ್ಕಾರದ ಮುಂದಿದ್ದ ಆಯ್ಕೆಗಳು ನಿಶ್ಚಯವಾಗಿಯೂ ಕಠಿಣವಾಗಿದ್ದವು. 1971ರಿಂದೀಚೆಗೆ ‘ಅಣುಪ್ರಸರಣ ನಿಷೇದ ಒಪ್ಪಂದ’ (NPT) ಹೊರತಾಗಿ ಬೇರೆಲ್ಲ ವಿಷಯಗಳಲ್ಲೂ, ಎಲ್ಲ ಸಂದರ್ಭಗಳಲ್ಲೂ ಭಾರತಕ್ಕೆ ಬೆಂಬಲವಾಗಿ ನಿಂತಿದ್ದ ಸೋವಿಯತ್ ಯೂನಿಯನ್ ಅನ್ನು ಕೈಬಿಡುವುದು ಭಾರತಕ್ಕೆ ಸಾಧ್ಯವಿರಲಿಲ್ಲ. ಹಾಗೆಯೇ ಪಾಕಿಸ್ತಾನದ ಮಗ್ಗಲು ಮುಳ್ಳಾಗಿದ್ದ, ನಮಗೆ ಮಿತ್ರರಾಗಿದ್ದ ಪಖ್ತೂನಿಗಳ ವಿಶ್ವಾಸವನ್ನು ಕಳೆದುಕೊಳ್ಳುವುದೂ ಉಚಿತವಾಗಿರಲಿಲ್ಲ. ಸಾರಾಸಗಟಾಗಿ ಸೋವಿಯತ್ ಪರವಾಗುವುದರ ಬದಲು ಅಫ್ಘಾನಿಸ್ತಾನದಿಂದ ಸೋವಿಯತ್ ಸೇನೆ ಹಂತಹಂತವಾಗಿ ವಾಪಸಾಗುವಂತೆ, ಕಾಬೂಲ್​ನಲ್ಲಿ ಸ್ಥಾಪಿತವಾಗುವ ಯಾವುದೇ ಪಖ್ತೂನ್ ಬಹುಸಂಖ್ಯಾತ ಸರ್ಕಾರ ಸೋವಿಯತ್-ವಿರೋಧಿ ಚಟುವಟಿಕೆಗಳಲ್ಲಿ ತೊಡಗದಂತೆ ಮನವೊಲಿಸಲು ಭಾರತ ರಾಜತಾಂತ್ರಿಕ ಪ್ರಯತ್ನಗಳನ್ನು ಕೈಗೊಳ್ಳಬಹುದಾಗಿತ್ತು, ಪಖ್ತೂನಿಗಳು ಹಾಗೂ ರಷ್ಯನ್ನರು ಇಬ್ಬರೊಡನೆಯೂ ಉತ್ತಮ ಸಂಬಂಧಗಳನ್ನು ಹೊಂದಿದ್ದ ಭಾರತಕ್ಕೆ ಇಬ್ಬರ ನಡುವೆ ಮಧ್ಯಸ್ತಿಕೆ ವಹಿಸಿ ಸಂಧಾನಕಾರ್ಯ ನಡೆಸುವುದು ಸಾಧ್ಯವೂ ಇತ್ತು. ಆದರೇಕೋ ನಮ್ಮ ನಾಯಕರು ಮತ್ತು ರಾಜತಂತ್ರಜ್ಞರು ಆ ದಿಕ್ಕಿನಲ್ಲಿ ಆಲೋಚಿಸಲಿಲ್ಲ.

ಪರಿಣಾಮವಾಗಿ ಮುಜಾಹಿದೀನ್​ಗಳ ಬೆಂಬಲಕ್ಕೆ ನಿಂತ ಪಾಕಿಸ್ತಾನ ಪಖ್ತೂನಿಗಳ ಮೈತ್ರಿಯನ್ನು ಗಳಿಸುವುದರಲ್ಲಿ ಯಶಸ್ವಿಯಾಯಿತು, ಅದಕ್ಕೆ ವಿರುದ್ಧವಾಗಿ ಸೋವಿಯತ್ ಪರ ನಿಂತು ನಾವು ಪಖ್ತೂನಿಗಳ ವಿರೋಧವನ್ನು ಶಾಶ್ವತವಾಗಿ ಕಟ್ಟಿಕೊಂಡೆವು. ನಾವು ಬೆಂಬಲಿಸಿದ ಸೋವಿಯತ್ ಯೂನಿಯನ್ ಈಗ ಇಲ್ಲ. ಆದರೆ ಪಖ್ತೂನಿಗಳು ಇನ್ನೂ ಇದ್ದಾರೆ ಹಾಗೂ ಅವರು ತಾಲಿಬಾನ್ ರೂಪ ತಳೆದು ನಮ್ಮನ್ನು ದ್ವೇಷಿಸುತ್ತಿದ್ದಾರೆ.

ಅಮೆರಿಕ ನೇತೃತ್ವದ ನ್ಯಾಟೋ ಸೇನೆ ಅಫ್ಘಾನಿಸ್ತಾನದಿಂದ ಕಾಲುತೆಗೆಯುತ್ತಿರುವ ಈ ಸಂದರ್ಭದಲ್ಲಿ ಆ ನತದೃಷ್ಟ ದೇಶದ ಮೇಲೆ ಮತ್ತೊಮ್ಮೆ ತಾಲಿಬಾನ್ ಕರಿನೆರಳು ಕವಿಯುವ ಸೂಚನೆಗಳು ದಟ್ಟವಾಗಿವೆ. ತಾವು ಹಿಡಿತ ಸ್ಥಾಪಿಸಿರುವ ಪ್ರದೇಶಗಳಲ್ಲಿ ತಾಲಿಬಾನಿಗಳು ವರ್ತಿಸುತ್ತಿರುವ ಬಗೆಯನ್ನು ನೋಡಿದರೆ 1996-2001ರ ಕರಾಳ ದಿನಗಳು ಮತ್ತೆ ಬರಲಿವೆಯೆಂಬ ಆತಂಕ ಸಹಜವಾಗಿಯೇ ಮೂಡುತ್ತದೆ. ಶಿಕ್ಷಣ, ಅಭಿವ್ಯಕ್ತಿ ಸ್ವಾತಂತ್ರ್ಯ, ಮಾನವ ಹಕ್ಕುಗಳು ಹಾಗೂ ಮಹಿಳಾ ಸ್ವಾತಂತ್ರ್ಯಗಳಿಗೆ ಸಂಬಂಧಿಸಿದಂತೆ ಕಳೆದೆರಡು ದಶಕಗಳಲ್ಲಿ ಅಫ್ಘನ್ನರು ಗಳಿಸಿದ್ದೆಲ್ಲವೂ ಮಣ್ಣು ಸೇರಲಿವೆ. ಹೀಗೆ ತಾಲಿಬಾನ್​ನ ಮರುಉತ್ಕರ್ಷದಿಂದ ಅತಿ ಹೆಚ್ಚು ಹಾನಿಗೊಳಗಾಗುವವರ ಪಟ್ಟಿಯಲ್ಲಿ ಅಫ್ಘನ್ ಜನತೆ ಮೊದಲ ಸ್ಥಾನದಲ್ಲಿದ್ದರೆ ನಂತರದ ಸ್ಥಾನ ಭಾರತದ್ದು. 2003ರಿಂದೀಚೆಗೆ ಅಫ್ಘಾನಿಸ್ತಾನದ ಜತೆ ಭಾರತದ ಸಂಬಂಧಗಳು ದಿನದಿನಕ್ಕೂ ಉತ್ತಮಗೊಳ್ಳುತ್ತ ಘನಿಷ್ಟಗೊಳ್ಳುತ್ತ ಸಾಗಿದ್ದವು. ಎರಡೂವರೆ ದಶಕಗಳ ಅಂತಃಕಲಹ, ಅರಾಜಕತೆ ಹಾಗೂ ಯುದ್ಧಗಳಿಂದ ನಲುಗಿಹೋಗಿದ್ದ ಅಫ್ಘಾನಿಸ್ತಾನವನ್ನು ಪುನರ್ನಿಮಿಸಲು ಹಮೀದ್ ಕರ್ಜಾಯ್ ಮತ್ತು ಅಶ್ರಫ್ ಘನಿ ಸರ್ಕಾರಗಳ ಬೆನ್ನಿಗೆ ಭಾರತ ನಿಂತಿತ್ತು. ಇದುವರೆಗೆ ಅಫ್ಘಾನಿಸ್ತಾನದ ಪುನರ್ನಿಮಾಣಕ್ಕಾಗಿ ಭಾರತ ಮೂರು ಬಿಲಿಯನ್ ಡಾಲರ್​ಗಳ ಅಗಾಧ ಮೊತ್ತವನ್ನು ವ್ಯಯಿಸಿದೆ. ಕಾಬೂಲ್​ನಲ್ಲಿ ಭವ್ಯ ಪಾರ್ಲಿಮೆಂಟ್ ಭವನ, ದೇಶಾದ್ಯಂತ ಹಲವಾರು ಸರ್ಕಾರಿ ಕಚೇರಿಕಟ್ಟಡಗಳು, ಅಣೆಕಟ್ಟೆಗಳು, ಶಾಲಾ-ಕಾಲೇಜುಗಳು, ಆಸ್ಪತ್ರೆಗಳು ಹಾಗೂ ರಸ್ತೆಗಳನ್ನು ಭಾರತ ನಿರ್ವಿುಸಿದೆ. ಅವೆಲ್ಲವನ್ನೂ ಭಾರತ ನಿರ್ವಿುಸಿದ್ದು ಅಫ್ಘನ್ ಜನತೆಯ ಉಪಯೋಗಕ್ಕಾಗಿ. ಆದರೆ ಅವೆಲ್ಲವೂ ಸಾಮಾನ್ಯ ಅಫ್ಘನ್ನರ ಕೈತಪ್ಪಿ ತಾಲಿಬಾನ್ ಧಾರ್ವಿುಕ ಸರ್ವಾಧಿಕಾರದಲ್ಲಿ ಅದರ ಕಾರ್ಯಕರ್ತರ ಉಪಯೋಗಕ್ಕಷ್ಟೇ ಸೀಮಿತವಾಗುವ ಸಾಧ್ಯತೆಗಳು ಕಾಣಬರುತ್ತಿವೆ. ಶಾಲೆಗಳಂತೂ ಸಂಪೂರ್ಣವಾಗಿ ಮುಚ್ಚಿಹೋಗಬಹುದು.

ಪರಿಸ್ಥಿತಿಯ ಗಂಭೀರತೆಯನ್ನು ಗುರುತಿಸಿ ಭಾರತ ಹೇರಾತ್ ಮತ್ತು ಮಜಾರ್-ಎ-ಶರೀಫ್​ಗಳಲ್ಲಿನ ತನ್ನ ಉಪರಾಯಭಾರ ಕಚೇರಿಗಳನ್ನು ಈಗಾಗಲೇ ಮುಚ್ಚಿಬಿಟ್ಟಿದೆ ಹಾಗೂ ಕಂದಹಾರ್​ನಲ್ಲಿನ ಕಚೇರಿಯಿಂದ ತನ್ನೆಲ್ಲ ರಾಜತಂತ್ರಜ್ಞರು ಮತ್ತು ಅಧಿಕಾರಿಗಳೆಲ್ಲರನ್ನೂ ಹಿಂದಕ್ಕೆ ಕರೆಸಿಕೊಂಡಿದೆ. ಆ ಕಚೇರಿಯೀಗ ಸ್ಥಳೀಯರಿಂದ ನಿರ್ವಹಿಸಲ್ಪಡುತ್ತಿದೆ. ಇದರರ್ಥ ಅಫ್ಘಾನಿಸ್ತಾನದಲ್ಲಿ ತನ್ನ ಭವಿಷ್ಯ ಮಂಕಾಗಿದೆ ಎಂದು ಭಾರತಕ್ಕೆ ಮನವರಿಕೆಯಾಗಿದೆ ಎಂದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾರತ ಏಕಾಏಕಿ ಈ ತೀರ್ವನಕ್ಕೆ ಬಂದಿಲ್ಲ ಮತ್ತು ಈ ತೀರ್ವನದ ಹಿಂದೆ ತಾಲಿಬಾನೇತರ ಕಾರಣಗಳೂ ಇವೆ ಎನ್ನುವುದು.

ತಾನು ಅಫ್ಘಾನಿಸ್ತಾನದಿಂದ ಹೊರನಡೆಯುವ ನಿರ್ಧಾರವನ್ನು ಅಮೆರಿಕ ತಳೆಯುತ್ತಿದ್ದಂತೇ ತಾಲಿಬಾನ್ ಜತೆ ಸಂಪರ್ಕ ಸಾಧಿಸುವ ಸಲಹೆಯನ್ನದು ಭಾರತಕ್ಕೆ ನೀಡಿತು. ಅದರಂತೆ ಕಳೆದ ಸೆಪ್ಟೆಂಬರ್​ನಲ್ಲೇ ಭಾರತ ಅಫ್ಘನ್ ಶಾಂತಿ ಮಾತುಕತೆಗಳಲ್ಲಿ ಭಾಗವಹಿಸತೊಡಗಿತು. ಜತೆಗೆ ಇದೇ ಜೂನ್​ನಲ್ಲಿ ವಿದೇಶ ಮಂತ್ರಿ ಎಸ್ ಜೈಶಂಕರ್ ದೋಹಾದಲ್ಲಿ ತಾಲಿಬಾನಿ ನಾಯಕರ ಜತೆ ರಹಸ್ಯ ಮಾತುಕತೆ ನಡೆಸಿದರೆಂದು ವರದಿಯಾಗಿತ್ತು. ತಾಲಿಬಾನಿ ನಾಯಕರು ಪರೋಕ್ಷವಾಗಿ ಸಮರ್ಥಿಸಿದ ಆ ವರದಿಗಳನ್ನು ಭಾರತ ನಿರಾಕರಿಸಿದೆ. ಭಾರತದ ನಿರಾಕರಣೆಗೆ ಕಾರಣಗಳಿವೆ.

ತಾಲಿಬಾನ್ ಅಧಿಕೃತ ಮಾತುಕತೆಗಳಲ್ಲಿ ತನ್ನನ್ನು ‘ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ್’ ಎಂದು ಕರೆದುಕೊಂಡರೂ ಅದಕ್ಕೆ ಇತರ ದೇಶಗಳಿರಲಿ ಇಸ್ಲಾಮಿಕ್ ಜಗತ್ತಿನಲ್ಲೇ ಮಾನ್ಯತೆ ಇಲ್ಲ. ಹೊರಜಗತ್ತು ಅದನ್ನು ನೋಡುವುದು ಭಯೋತ್ಪಾದಕ ಸಂಘಟನೆಯೆಂದೇ. ಇಂತಹ ಸನ್ನಿವೇಶದಲ್ಲಿ ಭಾರತ ತಾಲಿಬಾನ್ ಜತೆ ಬಹಿರಂಗವಾಗಿ ಮಾತುಕತೆ ನಡೆಸಿದರೆ ಆ ಭಯೋತ್ಪಾದಕ ಸಂಘಟನೆಗೆ ಅಧಿಕೃತ ರಾಜಕೀಯ ಪಕ್ಷದ ಸ್ಥಾನಮಾನ ದೊರೆಯುವುದಕ್ಕೆ ಸಹಕಾರಿಯಾಗುತ್ತದೆ ಮತ್ತು ಅಧಿಕೃತ ಅಶ್ರಫ್ ಘನಿ ಸರ್ಕಾರ ರಾಜತಾಂತ್ರಿಕವಾಗಿ ಅಷ್ಟೇ ಬಲಹೀನವಾಗುತ್ತದೆ. ಇದು ಸದ್ಯಕ್ಕೆ ಉಚಿತವೆನಿಸುವುದಿಲ್ಲ. ತಾಲಿಬಾನ್ ಮತ್ತು ಭಾರತದ ನಡುವೆ ‘ಸದ್ಯಕ್ಕೆ’ ತುಸುಮಟ್ಟಿಗಿನ ಹೊಂದಾಣಿಕೆಯಿದ್ದರೂ ಭಾರತದ ಆತಂಕಕ್ಕಿರುವುದು ಬೇರೆಯೇ ಕಾರಣಗಳು.

ಏಪ್ರಿಲ್-ಜೂನ್​ನಲ್ಲಿ ಲಷ್ಕರ್-ಇ-ತೋಯ್ಬಾ, ಜೈಷ್-ಎ-ಮೊಹಮ್ಮದ್, ಲಷ್ಕರ್-ಎ-ಜಾಂಗ್ವಿ ಮುಂತಾದ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳ ಹತ್ತುಸಾವಿರ ಭಯೋತ್ಪಾಕರು ಅಫ್ಘಾನಿಸ್ತಾನವನ್ನು ಪ್ರವೇಶಿಸಿದ್ದಾರೆ. ಪಾಕಿಸ್ತಾನದ ಕುಖ್ಯಾತ ‘ಐಎಸ್​ಐ’ನ ಅಡಿಯಲ್ಲಿ ಕೆಲಸ ಮಾಡುವ ಇವರ ಉದ್ದೇಶ ಅಫ್ಘಾನಿಸ್ತಾನದಲ್ಲಿ ಭಾರತೀಯರ ಜೀವಕ್ಕೆ ಅಪಾಯವೊಡ್ಡುವುದು ಮತ್ತು ಭಾರತದ ಹಿತಾಸಕ್ತಿಗಳಿಗೆ ಧಕ್ಕೆಯೊದಗಿಸುವುದು. ಈಗಿರುವ ಅರಾಜಕ ಪರಿಸ್ಥಿತಿಯಲ್ಲಿ ಇವರ ಕುಕೃತ್ಯಗಳನ್ನು ತಡೆಯುವುದು ತಾಲಿಬಾನ್​ಗೂ ಸಾಧ್ಯವಾಗಲಾರದು. ಅಲ್ಲದೆ, ತಮ್ಮ ಕೃತ್ಯಗಳಿಗೆ ತಾಲಿಬಾನ್ ಬೆಂಬಲವಿದೆ ಎಂದು ಹೇಳಲು ಇವರು ತಾಲಿಬಾನ್ ಭಾರತದ ವಿರುದ್ಧ ಜಿಹಾದ್​ಗೆ ತಯಾರಾಗಿದೆ, ‘ಘಜ್ವಾ-ಎ-ಹಿಂದ್’ ಆರಂಭವಾಗಲಿದೆ ಎಂದೆಲ್ಲ ಸುಳ್ಳು ಸುದ್ಧಿಗಳನ್ನು ಸಾಮಾಜಿಕ ಜಾಲತಾಣಗಳಲ್ಲದೆ ಪಾಕ್ ಮಾಧ್ಯಮಗಳ ಮೂಲಕವೇ ಹರಡತೊಡಗಿದ್ದರು! ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಅಫ್ಘಾನಿಸ್ತಾನದಲ್ಲಿ ಭಾರತಕ್ಕೆ ತಾಲಿಬಾನ್​ಗಿಂತಲೂ ಹೆಚ್ಚು ಅಪಾಯಕರವಾಗಿರುವುದು ಪಾಕ್ ಭಯೋತ್ಪಾದಕರು. ಜತೆಗೆ ಅಧಿಕಾರ ದಕ್ಕಿದರೆ ತಾಲಿಬಾನ್ ಹೇಗೆ ಬದಲಾಗುತ್ತದೆಂದು ಹೇಳಲಾಗುವುದಿಲ್ಲ. ಹೀಗಾಗಿ ಭಾರತ ತನ್ನ ಕ್ಷೇಮವನ್ನು ತಾನು ನೋಡಿಕೊಳ್ಳಬೇಕಾದ್ದು ಉಚಿತವೇ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net