

ಈ ಬಾರಿ ದೇಶದಲ್ಲಿ ಮುಂಗಾರಿನ ಆರಂಭದಿಂದಲೇ (ಜೂನ್ನಿಂದ) ಸರಣಿ ದುರಂತಗಳು ಸಂಭವಿಸಿದ್ದು, ಜೀವಹಾನಿ, ಆಸ್ತಿಪಾಸ್ತಿಯ ಹಾನಿ ತಲ್ಲಣ ಮೂಡಿಸಿದೆ. ಮೇಘಸ್ಪೋಟ ಮತ್ತು ಭೂಕುಸಿತ ಪ್ರಕರಣಗಳು ಒಂದರ ಹಿಂದೊಂದರಂತೆ ನಡೆಯುತ್ತಿದ್ದು, ಜನರು ದಿಕ್ಕು ಕಾಣದಂತಾಗಿದ್ದಾರೆ. ಕ್ಷಣಾರ್ಧದಲ್ಲೇ ಬದುಕು ಕೊಚ್ಚಿಕೊಂಡು ಹೋಗಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು-ಕಾಶ್ಮೀರ ರಾಜ್ಯಗಳು ಅಕ್ಷರಶಃ ತತ್ತರಿಸಿವೆ. ಪ್ರಕೃತಿಯ ರೌದ್ರಾವತಾರದ ಮುಂದೆ ಮನುಷ್ಯ ಅಸಹಾಯಕನಾಗಿದ್ದಾನೆ. ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರದಲ್ಲಿ ನೂರಾರು ಜನರು ಕಾಣೆಯಾಗಿದ್ದು, ಈವರೆಗೆ ಸುಳಿವು ದೊರೆತಿಲ್ಲ.
ನಿಜಕ್ಕೂ ಪ್ರಕೃತಿ ಮುನಿಸಿಕೊಂಡಿದೆಯೆ ಅಥವಾ ಮಾನವನ ಅತಿಯಾದ ಹಸ್ತಕ್ಷೇಪದಿಂದ ಆಪತ್ತು ಹೆಚ್ಚಿದೆಯೇ ಎಂಬ ಪ್ರಶ್ನೆಗೆ ಇನ್ನಾದರೂ ಪ್ರಾಮಾಣಿಕ ಉತ್ತರ ಕಂಡುಕೊಳ್ಳಬೇಕಿದೆ. 2024ರಲ್ಲಿ ಕೇರಳದ ವಯನಾಡಿನಲ್ಲಿ ನಡೆದ ಭೀಕರ ಭೂಕುಸಿತ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿತು. ಆದರೆ, ಈ ಬಾರಿ ಮುಂಗಾರು ಆರಂಭದಿಂದಲೇ ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯದ ರಾಜ್ಯಗಳಲ್ಲಿ ಭೂಕುಸಿತ ಪ್ರಕರಣಗಳು ಸರಣಿಯಾಗಿ ಸಂಭವಿಸುತ್ತಿದ್ದು, ಜನರ ಬದುಕನ್ನೇ ಆಪೋಶನ ತೆಗೆದುಕೊಂಡಿವೆ. ದೇಶಾದ್ಯಂತ ಈ ಬಾರಿಯ ಮುಂಗಾರು ಅವಧಿಯಲ್ಲಿ ಭೂಕುಸಿತದಿಂದ 500ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ, 1,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹತ್ತಾರು ಹಳ್ಳಿಗಳು ಅಸ್ತಿತ್ವವನ್ನೇ ಕಳೆದುಕೊಂಡಿವೆ.
ರಸ್ತೆಗಳು, ಸೇತುವೆಗಳು, ಮನೆಗಳು ದೊಡ್ಡ ಪ್ರಮಾಣದಲ್ಲಿ ನಾಶಗೊಂಡಿದ್ದು, ಹಿಮಾಲಯ ಒಡಲಿನ ರಾಜ್ಯಗಳ ಸ್ಥಿತಿಯಂತೂ ಶೋಚನೀಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಿಮಾಲಯ ಪ್ರದೇಶದ ರಾಜ್ಯಗಳಲ್ಲಿ ರಸ್ತೆ, ರೈಲು ಹಳಿ, ಸೇತುವೆ ಸೇರಿದಂತೆ ಅನೇಕ ಕಾಮಗಾರಿಗಳನ್ನು ಕೈಗೊಂಡಿರುವುದು ಪರಿಸರದ ಮೇಲೆ ಒತ್ತಡ ಸೃಷ್ಟಿಸಿದೆ. ರಿಯಲ್ ಎಸ್ಟೇಟ್ನ ಅತಿಯಾದ ಚಟುವಟಿಕೆಗಳು, ಕಾಡುಗಳ ನಾಶ, ಭೂಮಿ ಬಳಕೆಗಾಗಿ ಮಣ್ಣಿನ ಮೇಲ್ಪದರಕ್ಕೆ ಹಾನಿ ಸೇರಿದಂತೆ ಮಾನವನ ಚಟುವಟಿಕೆಗಳು ಇಂದು ಪ್ರಕೃತಿಗೂ, ಮಾನವನಿಗೂ ಕಂಟಕವಾಗಿ ಪರಿಣಮಿಸಿವೆ. ಇದೇ ಪ್ರಮಾಣದಲ್ಲಿ ಭೂಕುಸಿತಗಳು ಸಂಭವಿಸಿದರೆ ಮುಂದಿನ ದಿನಗಳು ಮತ್ತಷ್ಟು ತ್ರಾಸದಾಯಕ. ಮುನ್ನೆಚ್ಚರಿಕಾ ಕ್ರಮಗಳಿಗಾಗಿ ತಂತ್ರಜ್ಞಾನವನ್ನು ಅಳವಡಿಸಲಾಗಿದೆಯಾದರೂ, ಸಮರ್ಪಕ ಕಾರ್ಯನಿರ್ವಹಣೆ ಸಾಧ್ಯವಾಗುತ್ತಿಲ್ಲ ಅಂದರೆ ರಿಯಲ್ ಟೈಮ್ ಮುನ್ನೆಚ್ಚರಿಕೆ ದೊರೆಯುತ್ತಿಲ್ಲ. ಇದರಿಂದ ಸಾವು-ನೋವುಗಳ ಸಂಖ್ಯೆ ಹೆಚ್ಚಾಗಿದೆ.
ತಜ್ಞರು ಹೇಳುವ ಪ್ರಕಾರ ಶೇಕಡ 70ರಷ್ಟು ಭೂಕುಸಿತಗಳು ಸಂಭವಿಸಿರುವುದು ಅಭಿವೃದ್ಧಿ ಕಾರ್ಯಗಳು ನಡೆದ ಪ್ರದೇಶದಲ್ಲಿಯೇ ಎಂಬುದು ಗಮನಾರ್ಹ. ಇದಕ್ಕೆ ಅವೈಜ್ಞಾನಿಕ ಕಾಮಗಾರಿಗಳು ಪ್ರಮುಖ ಕಾರಣ. ಬೆಟ್ಟಗಳ ಮೇಲೆ ಕೃತಕ ನೀರಿನ ಕೊಳಗಳನ್ನು ನಿರ್ವಿುಸುವುದು, ರಸ್ತೆ ಮತ್ತು ಸುರಂಗ ಉತ್ಖನನ, ಕಲ್ಲುಗಣಿಗಳಲ್ಲಿ ಸ್ಪೊಟಿಸುವುದು ಇತ್ಯಾದಿ ಚಟುವಟಿಕೆಗಳಲ್ಲಿ ಭೂಮಿಯ ಸ್ಥಿರತೆಯ ಬಗ್ಗೆ ಗಮನ ಹರಿಸದಿದ್ದಾಗ, ಭೂಕುಸಿತದ ಸಾಧ್ಯತೆ ಹೆಚ್ಚು.
ಆಯಾ ಪ್ರದೇಶನ ಮಣ್ಣಿನ ಸಂರಚನೆ, ಶಿಲೆಗಳ ರಚನೆ, ಭೂಮಿಯ ಮೇಲ್ಪದರ, ಇಳಿಜಾರು ಪ್ರದೇಶ, ಮಳೆಬೀಳುವ ಪ್ರಮಾಣ, ಮಣ್ಣಿನ ಸವಕಳಿ ಪ್ರಮಾಣ ಇದೆಲ್ಲದರ ಬಗ್ಗೆ ಸೂಕ್ತ ಅಧ್ಯಯನ, ಸಂಶೋಧನೆ ನಡೆಸಿಯೇ ಅಪಾಯಕಾರಿ ಪ್ರದೇಶಗಳ ರಕ್ಷಣೆಗೆ ವಿಶೇಷ ಕ್ರಮ ಕೈಗೊಳ್ಳಬೇಕು.
ರಾಜ್ಯದ ಪಶ್ಚಿಮಘಟ್ಟ ಪ್ರದೇಶದ ಮಲೆನಾಡಿನ ನಾಲ್ಕು ಜಿಲ್ಲೆ, ಕರಾವಳಿಯ ಮೂರು ಜಿಲ್ಲೆ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಕೆಲವು ಭಾಗಗಳನ್ನು ಒಳಗೊಂಡಂತೆ ರಾಜ್ಯದ ಸುಮಾರು ಶೇಕಡ 15ರಷ್ಟು ಭೌಗೋಳಿಕ ಪ್ರದೇಶ ಭೂಕುಸಿತ ಅಪಾಯದ ವಲಯದಲ್ಲಿವೆ. ಹೀಗಾಗಿ, ಪಶ್ಚಿಮ ಘಟ್ಟಗಳಂಥ ಸೂಕ್ಷ್ಮ ಭೂಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಜೀವವೈವಿಧ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ದುರಂತಗಳಲ್ಲಿ 2025ರ ಜೂನ್ 20ರಿಂದ ಸೆ.2ರವರೆಗೆ 317 ಜನರು ಪ್ರಾಣ ಕಳೆದುಕೊಂಡಿದ್ದಾರೆ. 200ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ಒಟ್ಟು ನಷ್ಟ 2,450 ಕೋಟಿ ದಾಟಿದೆ.
ದೇವಭೂಮಿ ಉತ್ತರಾಖಂಡದಲ್ಲಿ ಈ ಬಾರಿ ಭೂಕುಸಿತ ಪ್ರಕರಣ ಗಣನೀಯವಾಗಿ ಹೆಚ್ಚಿವೆ. ಆಗಸ್ಟ್ 5ರಂದು ಧರಾಲಿ ಪ್ರದೇಶದಲ್ಲಿ ಮೂರು ಹಳ್ಳಿಗಳೇ ಕೊಚ್ಚಿಹೋಗಿವೆ. ಐವರ ಮೃತದೇಹ ಮಾತ್ರ ಪತ್ತೆಯಾಗಿದ್ದು, ನೂರಾರು ಜನರು ಕಾಣೆಯಾಗಿದ್ದಾರೆ. ಮನೆಗಳು ಮಣ್ಣಿನಲ್ಲಿ ಮುಳುಗಿವೆ. ಸಂಪರ್ಕ ರಸ್ತೆ, ಸೇತುವೆಗಳು ಕುಸಿದಿರುವುದು ಸಂಕಷ್ಟ ಹೆಚ್ಚಿಸಿದೆ. ಕೇದಾರನಾಥ ಹೆದ್ದಾರಿಯಲ್ಲಿ ಭೂಕುಸಿತವಾಗಿ ಇಬ್ಬರು ಮೃತಪಟ್ಟು, 6 ಜನರು ಗಾಯಗೊಂಡಿದ್ದಾರೆ.
ಜಮ್ಮು-ಕಾಶ್ಮೀರದಲ್ಲೂ ಸರಣಿ ದುರಂತ ಸಂಭವಿಸಿವೆ. ಭೂಕುಸಿತಗಳಿಂದ ವೈಷ್ಣೋದೇವಿಯ 32 ಯಾತ್ರಾರ್ಥಿಗಳು ಸೇರಿದಂತೆ 60ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದು, 200ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.
ಈಶಾನ್ಯ ಭಾರತದ ಅಸ್ಸಾಂ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ ರಾಜ್ಯಗಳಲ್ಲಿ 50ಕ್ಕೂ ಅಧಿಕ ಸಾವುಗಳು ಸಂಭವಿಸಿವೆ. ಮಿಜೋರಾಂಗೆ ಕೇಂದ್ರ ಸರ್ಕಾರ 1 ಸಾವಿರ ಕೋಟಿ ರೂ.ಗಳ ನೆರವು ಘೋಷಿಸಿದೆ.
ಹವಾಮಾನ ಬದಲಾವಣೆ, ತಾಪಮಾನ ಏರಿಕೆ. ಕಾಡುಗಳ ನಾಶ.
ಅವೈಜ್ಞಾನಿಕ ಯೋಜನೆ, ಕಾಮಗಾರಿಗಳು.
ಮೂಲಸೌಕರ್ಯದ ಹೆಸರಲ್ಲಿ ಪ್ರಕೃತಿ ಸಂರಚನೆಯಲ್ಲಿ ಅತಿಯಾದ ಹಸ್ತಕ್ಷೇಪ.
ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಅಸಮರ್ಪಕ ಚಟುವಟಿಕೆ.
ಪರಿಸರ ಸೂಕ್ಷ್ಮ ಪ್ರದೇಶಗಳ ರಕ್ಷಣೆಗೆ ಸರ್ಕಾರಗಳ ನಿರ್ಲಕ್ಷ್ಯ
ಪರಿಸರಸೂಕ್ಷ್ಮ ಪ್ರದೇಶಗಳನ್ನು ಹಾಗೆಯೇ ಕಾಪಾಡಿಕೊಳ್ಳಬೇಕು.
ಪರಿಸರಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಕಡಿಮೆಗೊಳಿಸಬಾರದು.
ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆ, ಕ್ವಾರಿ, ಮರ ಕಡಿಯುವಂಥ ಪರಿಸರ ವಿರೋಧಿ ಚಟುವಟಿಕೆ ತಡೆಯಬೇಕು ಮತ್ತು ವಾಣಿಜ್ಯ ಚಟುವಟಿಕೆಯನ್ನು ಸಹ ನಿಷೇಧಿಸಬೇಕು.
ಮಣ್ಣಿನ ಸವಕಳಿ ತಡೆಯಬೇಕು. ಇಳಿಜಾರು ಪ್ರದೇಶ ಅಸ್ಥಿರಗೊಳಿಸಬಾರದು.
ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಹೆಸರಿನಲ್ಲಿ ಬೇಕಾಬಿಟ್ಟಿ ಯೋಜನೆಗಳನ್ನು ಕೈಗೊಳ್ಳಬಾರದು.
ಅಪಾಯಕಾರಿ ಸ್ಥಳಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ಮನವೊಲಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸಂಬಂಧಿಸಿದ ರಾಜ್ಯ ಸರ್ಕಾರಗಳು ಮುಂದಾಗಬೇಕು.
ಸುಸ್ಥಿರ ಅಭಿವೃದ್ಧಿಯ ಗುರಿಯನ್ನೇ ಮರೆತಿರುವುದು ಈ ಸಮಸ್ಯೆಯ ಉಲ್ಬಣಕ್ಕೆ ಕಾರಣ. ಒಂದು ಭೂಪ್ರದೇಶದಲ್ಲಿರುವ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವುದು, ಸುಸ್ಥಿರವಾದ ಬಳಕೆಯನ್ನು ಪ್ರೋತ್ಸಾಹಿಸುವುದು, ಮಣ್ಣಿನ ಸವಕಳಿ ತಡೆಯುವುದು ಸೇರಿದಂತೆ ಜೀವವೈವಿಧ್ಯ ರಕ್ಷಣೆಗೂ ಆದ್ಯ ಗಮನ ನೀಡಬೇಕಿದೆ. ಆದರೆ, ವಿಪರ್ಯಾಸವೆಂದರೆ ಯಾವುದೇ ರಾಜಕೀಯ ಪಕ್ಷದ ಚುನಾವಣಾ ಪ್ರಣಾಳಿಕೆಗಳು ಸುಸ್ಥಿರ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ, ಹಸಿರು ಹೆಚ್ಚಿಸುವ ಆಶ್ವಾಸನೆ ನೀಡುವುದಿಲ್ಲ, ನೆಲ-ಜಲ ಸಂರಕ್ಷಣೆಗೆ ಆದ್ಯತೆ ನೀಡುವುದಿಲ್ಲ. ಪರಿಣಾಮ ಸುಸ್ಥಿರ ಅಭಿವೃದ್ಧಿ ಕನಸಾಗಿಯೇ ಉಳಿದಿದ್ದು, ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಶೋಷಣೆ ನಡೆಯುತ್ತಿದೆ. ಇನ್ನಾದರೂ, ಎಚ್ಚೆತ್ತುಕೊಂಡು ಪ್ರಕೃತಿಯ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಮತ್ತು ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಂದೋಲನದ ರೂಪದಲ್ಲಿ ನಡೆಯಬೇಕಿದೆ. ಪ್ರಕೃತಿಯನ್ನು ಶೋಷಿಸಿದರೆ ವಿನಾಶ ಕಟ್ಟಿಟ್ಟ ಬುತ್ತಿ.
ಕೇರಳದ 14 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿರುವ 123 ಹಳ್ಳಿಗಳ ವ್ಯಾಪ್ತಿಯ 13,108 ಚದರ ಕಿಲೋಮೀಟರ್ ಭೂಪ್ರದೇಶವನ್ನು ಪರಿಸರಸೂಕ್ಷ್ಮ ಭೂಪ್ರದೇಶವಾಗಿ ಪರಿಗಣಿಸಬೇಕು ಎಂದು ಕಸ್ತೂರಿ ರಂಗನ್ ವರದಿ ಶಿಫಾರಸು ನೀಡಿತ್ತು. ಈ 123 ಹಳ್ಳಿಗಳ ಪೈಕಿ 60 ಹಳ್ಳಿಗಳು ಇಡುಕ್ಕಿ ಮತ್ತು ವಯನಾಡ್ ಜಿಲ್ಲಾ ವ್ಯಾಪ್ತಿಯಲ್ಲಿವೆ ಎಂಬುದು ಗಮನಾರ್ಹ. ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯವು ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಈವರೆಗೆ ಐದು ಬಾರಿ ಕರಡು ಅಧಿಸೂಚನೆ ಪ್ರಕಟಿಸಿ, ಆಕ್ಷೇಪಗಳನ್ನು ಆಹ್ವಾನಿಸಿದೆ. ಆದರೆ, ಪ್ರತಿ ಬಾರಿಯೂ ಪ್ರತಿಭಟನೆ ಮತ್ತು ರಾಜಕೀಯ ಮೇಲಾಟಗಳು ನಡೆದು ವರದಿ ಜಾರಿ ನನೆಗುದಿಗೆ ಬಿದ್ದಿದೆ. ಪೊ›. ಮಾಧವ ಗಾಡ್ಗೀಳ್ ಮತ್ತು ಡಾ. ಕೆ. ಕಸ್ತೂರಿರಂಗನ್ ವರದಿಗಳನ್ನು ಕೇರಳ ಸರ್ಕಾರ ವಿರೋಧಿಸಿಕೊಂಡೇ ಬಂದಿದೆ ಮತ್ತು ಕೇಂದ್ರದ ಮೇಲೆ ಒತ್ತಡ ಹೇರಿ ಪರಿಸರಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಕಡಿಮೆಗೊಳಿಸಿದೆ. ಪರಿಸರಸೂಕ್ಷ್ಮ ಪ್ರದೇಶದಲ್ಲಿ ದಟ್ಟ ಜನವಸತಿ ಇದ್ದು, 123 ಹಳ್ಳಿಗಳ ಸಾವಿರಾರು ಕುಟುಂಬಗಳನ್ನು ಸ್ಥಳಾಂತರ ಮಾಡಿ, ಪುನರ್ವಸತಿ ಕಲ್ಪಿಸಬೇಕಾಗುತ್ತದೆ ಎಂಬ ಸಬೂಬು ನೀಡುತ್ತಿರುವ ಕೇರಳ ಸರ್ಕಾರ, ವಯನಾಡಿನ 102.6 ಚದರ ಕಿ.ಮೀ. ಪ್ರದೇಶವು ತೀವ್ರ ಭೂಕೂಸಿತದ ಅಪಾಯದಲ್ಲಿದೆ ಎಂಬ ವಾಸ್ತವವನ್ನು ನಿರ್ಲಕ್ಷಿಸಿಕೊಂಡೇ ಬಂದಿದೆ.