ಪಾಪಗಳ ಸಂಹಾರ ಮುಕ್ತಿಯ ಪಥಕ್ಕೆ ದ್ವಾರ

ವಿಜಯವಾಣಿ (1) (1)
Published on

| ಪ್ರದ್ಯುಮ್ನ

ವೈಕುಂಠ ಏಕಾದಶಿಯು ಭಾರತದ ಪ್ರಾಚೀನ ವ್ರತಗಳಲ್ಲಿ ಒಂದು. ರಕ್ಕಸಿಯ ಕಾಟದಿಂದ ಏಕಾದಶಿಯನ್ನು ಆಚರಿಸಲು ಆಗದೆ ವ್ರತಭ್ರಷ್ಟನಾಗಿದ್ದ ರುಕ್ಮಾಂಗದನೆಂಬ ಭಕ್ತನನ್ನು ಮಹಾವಿಷ್ಣುವು ಉದ್ಧರಿಸಿ ವೈಕುಂಠಕ್ಕೆ ಕರೆದುಕೊಂಡು ಹೋದನೆಂಬುದು ಇದಕ್ಕಿರುವ ಪೌರಾಣಿಕ ಹಿನ್ನೆಲೆ. ಈ ದಿನದಂದು ವೈಷ್ಣವ ದೇವಸ್ಥಾನಗಳಲ್ಲಿ ವಿಶೇಷವಾದ ಆಚರಣೆಗಳು ಜರುಗುತ್ತವೆ. ಈ ದಿನದಂದೇ ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಉಪದೇಶಿಸಿದ ಎನ್ನುವ ಪ್ರತೀತಿ ಇರುವ ಹಿನ್ನೆಲೆಯಲ್ಲಿ ಇದನ್ನು ಗೀತಾಜಯಂತಿ ಎಂದೂ ಆಚರಣೆ ಮಾಡುತ್ತಾರೆ.

ಭಾರತೀಯ ಋಷಿ-ಮುನಿಗಳು ಆಚರಣೆಗೆ ತಂದಿರುವ ಪ್ರತಿಯೊಂದು ಸಂಪ್ರದಾಯಗಳು ಕೂಡ ಜ್ಞಾನ-ವಿಜ್ಞಾನದ ಸಮ್ಮಿಳಿತವಾಗಿವೆ. ಪ್ರತಿ ತಿಂಗಳಿಗೆ ಎರಡು ಬಾರಿ ಬರುವ ಏಕಾದಶಿ ವ್ರತದಿಂದ ದೇಹಶುದ್ಧಿ ಜೊತೆಗೆ ಜಡತ್ವ ನಿವಾರಣೆಯಾಗಿ ಮಾನಸಿಕ ಏಕಾಗ್ರತೆ ಬರುತ್ತದೆ. ವರ್ಷಪೂರ್ತಿ ಎಲ್ಲ ಏಕಾದಶಿಗಳನ್ನು ಆಚರಿಸಲು ಸಾಧ್ಯವಾಗದವರು ಕೊನೆಪಕ್ಷ ಪುಷ್ಯಮಾಸದ ಶುಕ್ಷಪಕ್ಷದ ಧನುರ್ವಸದಲ್ಲಿ ಬರುವ ವೈಕುಂಠ ಏಕಾದಶಿಯೊಂದನ್ನಾದರೂ ಆಚರಿಸಿದಲ್ಲಿ ಪೂರ್ಣಫಲ ಪಡೆಯಬಹುದು.

ಏಕಾದಶಿಯನ್ನು ಹರಿವಾಸ ಎಂದೂ ಕರೆಯಲಾಗುತ್ತದೆ. ಉಪವಾಸ ಎಂದರೆ ಭಗವಂತನನ್ನು ಸ್ಮರಿಸುತ್ತ ಅದರ ಸಾನಿಧ್ಯದಲ್ಲಿ ವ್ರತನಿಷ್ಠವಾಗಿ ಕಳೆಯುವುದು. ಏಕಾದಶಿ ದಿನದ ಅಭಿಮಾನಿ ದೇವತೆ ಶ್ರೀವಿಷ್ಣು. ವೈಕುಂಠದ್ವಾರ ಈ ಮಹಾಸುದಿನವೇ ತೆರೆಯುತ್ತದೆ ಎಂಬ ಅಚಲವಾದ ನಂಬಿಕೆಯಿಂದಲೇ ಲಕ್ಷಾಂತರ ಭಕ್ತರು ಈ ಪವಿತ್ರದಿನದಂದು ಶ್ರೀ ಹರಿಯ ಅಂದರೆ ವಿಷ್ಣುವಿನ ದೇವಾಲಯಗಳಿಗೆ ಭೇಟಿ ನೀಡಿ ಶ್ರದ್ಧಾಭಕ್ತಿಯಿಂದ ಭಗವಂತನ ದರುಶನದ ದ್ವಾರವನ್ನು ಪ್ರವೇಶಿಸುತ್ತಾರೆ. ಹೀಗೆ ಪ್ರವೇಶಿಸಿದ್ದಲ್ಲಿ ವೈಕುಂಠದ ದ್ವಾರವನ್ನೇ ಪ್ರವೇಶಿಸಿದಂತೆ ಎಂಬ ದೃಢತೆಯಿಂದ ಸರದಿಯಲ್ಲಿ ಕಾದು ದ್ವಾರ ಪ್ರವೇಶ ಮಾಡುತ್ತಾರೆ.

ಶ್ರೀವಿಷ್ಣು ಎಂಬುದಕ್ಕೆ ವಿಶೇಷ ಅರ್ಥವಿದೆ. ಹೀಗೆಂದರೆ ಎಲ್ಲವನ್ನೂ ವ್ಯಾಪಿಸಿಕೊಂಡಿರುವವನು ಮತ್ತು ಎಲ್ಲ ವಸ್ತುವಿನಲ್ಲೂ ಅಂತರ್ಗತನಾಗಿರುವವನು ಎಂದರ್ಥ. ಶ್ರೀಮನ್ನಾರಾಯಣನು ಮುಕ್ಕೋಟಿ ದೇವತೆಗಳಿಗೆ ದರ್ಶನ ಕೊಡುವ ದಿನವೂ ಆಗಿರುವುದರಿಂದ ಇದನ್ನು ‘ಮುಕ್ಕೋಟಿ ಏಕಾದಶಿ’ ಎಂದೂ ಕರೆಯುತ್ತಾರೆ.

ಈ ನಾರಾಯಣನ ಜಪವನ್ನು ನಿರಂತರ ಮಾಡುತ್ತಿದ್ದರೆ ಅಂತ್ಯದಲ್ಲಿ ವೈಕುಂಠ ಸೇರಬಹುದು ಎಂದು ವಿಷ್ಣು ಪುರಾಣದಲ್ಲಿದೆ. ಮಹಾವಿಷ್ಣುವನ್ನು ‘ನೀಲಮೇಘಶ್ಯಾಮ’ ಎಂದು ಕರೆಯುತ್ತಾರೆ. ವಿಷ್ಣುವಿಗೆ 4 ಕೈಗಳಿವೆ. ಈ ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಪದ್ಮ ಇರುವವು. ಶಂಖವು ಪಂಚಭೂತಗಳನ್ನು, ಚಕ್ರವು ಸಮಸ್ತ ಚಿತ್ತಗಳನ್ನೂ, ಗದೆಯು ಬುದ್ಧಿಯನ್ನೂ ಸೂಚಿಸಿದರೆ, ಪದ್ಮವು ಸೃಷ್ಟಿಸಲ್ಪಡುವ ಪ್ರಪಂಚದ ಸಂಕೇತ. ವಿಷ್ಣುವು ಸೃಷ್ಟಿಕರ್ತನೂ ಆಗಿರುವನು. ಧರ್ಮವು ಇಳಿಮುಖವಾಗಿ ಅಧರ್ಮವು ತಾಂಡವವಾಡುತ್ತಿರುವಾಗ ಧರ್ಮವನ್ನು ಉದ್ಧರಿಸಲು ವಿಷ್ಣುವು ದೇಹಧಾರಿಯಾಗಿ ಅವತರಿಸುತ್ತಾನೆ. ಈತನದು 10 ಅವತಾರಗಳು. ಮತ್ಸ್ಯ ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಶ್ರೀರಾಮ, ಶ್ರೀಕೃಷ್ಣ, ಬುದ್ಧ ಮತ್ತು ಕಲ್ಕಿ.

ಏಕಾದಶಿ ಎಂದರೆ ಹನ್ನೊಂದು ಎಂದರ್ಥ. 5 ಕಮೇಂದ್ರಿಯ, 5 ಜ್ಞಾನೇಂದ್ರಿಯ ಮತ್ತು ಮನಸ್ಸಿನಿಂದ ಅಂದರೆ, ಧರ್ಮ, ಕರ್ಮ, ಜ್ಞಾನಸಾಧನ ಕರಣಗಳಿಂದ ಭಗವತ್​ಚಿಂತನೆಯಲ್ಲಿ ತೊಡಗಿಕೊಳ್ಳುವ ಕ್ರಿಯೆಯೇ ‘ಏಕಾದಶಿ’. ಏಕಾದಶಿ ಎನ್ನುವ ದೇವಿ ವಿಷ್ಣುವಿನಿಂದ ಉದ್ಭವಳಾಗಿ, ‘ಮುರ’ ಎನ್ನುವ ರಾಕ್ಷಸನನ್ನು ಸಂಹರಿಸಲು ವಿಷ್ಣುವಿಗೆ ಸಹಾಯಮಾಡುತ್ತಾಳೆ. ಇದರಿಂದ ಸಂಪ್ರೀತನಾದ ವಿಷ್ಣು ಏನಾದರೂ ವರ ಕೇಳು ಎಂದಾಗ, ‘ವೈಕುಂಠ ಏಕಾದಶಿ ದಿನ ಯಾರು ನಿನ್ನನ್ನು ಪೂಜಿಸುತ್ತಾರೋ ಹಾಗೂ ಉಪವಾಸ ವ್ರತ ಮಾಡುತ್ತಾರೋ ಅವರುಗಳ ಪಾಪ ಪರಿಹರಿಸಿ ಮೋಕ್ಷವನ್ನು ಕರುಣಿಸು’ ಎಂದು ಏಕಾದಶಿ ದೇವಿ ವರವನ್ನು ಕೇಳುತ್ತಾಳೆ. ಇದಕ್ಕೆ ವಿಷ್ಣುವು ‘ಅದರಂತೆ ಆಗಲಿ’ ಎಂದು ವರವನ್ನು ನೀಡುತ್ತಾನೆ. ಉಪವಾಸದ ಸಮಯದಲ್ಲಿ ಕೆಟ್ಟ ಯೋಚನೆ, ಕೆಟ್ಟ ಕೆಲಸ ಮಾಡಬಾರದು ಹಾಗೂ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಟ್ಟಿರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net