

ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಹಿಂದೆ ಹಲವು ಮುಸ್ಲಿಂ ದೊರೆಗಳು ಹಿಂದುಗಳನ್ನು ಬಲವಂತದಿಂದ ಮತಾಂತರ ಮಾಡಿ, ಇಸ್ಲಾಂ ಧರ್ಮ ಒಪ್ಪಿಕೊಳ್ಳುವಂತೆ ಮಾಡುತ್ತಿದ್ದರು. ಇದಕ್ಕೆ ಒಪ್ಪದಿದ್ದರೆ ಘೋರ ಶೋಷಣೆ ಮಾಡಿ, ಕಾರಾಗೃಹಕ್ಕೆ ಅಟ್ಟುತ್ತಿದ್ದರು. ಹಿಂದು ಮಹಿಳೆಯರು ಮತಾಂತರವಾಗಲು ಒಪ್ಪದೆ ಪ್ರಾಣಾರ್ಪಣೆಗೈದ ನಿದರ್ಶನಗಳೂ ಇವೆ. ಆದರೆ, ಈಗಿನ ಆಧುನಿಕ ಮತ್ತು ಪ್ರಜಾಪ್ರಭುತ್ವದ ಕಾಲದಲ್ಲೂ ಮತಾಂತರದ ಕರಾಳ ಜಾಲಗಳು ಆಳವಾಗಿ ಬೇರೂರಿವುದು ಅಪಾಯಕಾರಿ.
ದೇಶದಲ್ಲಿ ಮತಾಂತರದ ಪಿಡುಗು ಹೇಗೆ ವ್ಯಾಪಕವಾಗಿ ಆವರಿಸಿಕೊಂಡಿದೆ ಎಂಬುದು ಉತ್ತರಪ್ರದೇಶದಲ್ಲಿ ಜಮಾಲುದ್ದೀನ್ ಅಲಿಯಾಸ್ ಛಂಗುರ್ ಬಾಬಾ ಮತ್ತು ಆತನ ಅನುಯಾಯಿಗಳ ಬಂಧನದ ಬಳಿಕ ಬೆಳಕಿಗೆ ಬಂದಿದೆ. ಈ ಇಡೀ ಪ್ರಕರಣ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. 25 ವರ್ಷದೊಳಗಿನ ಯುವತಿಯರು ಮತ್ತು ಯುವಕರನ್ನು ಗುರಿಯಾಗಿಸಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಈ ಜಾಲ, ಪ್ರಾಥಮಿಕ ಮಾಹಿತಿಗಳಂತೆ ಐದು ಸಾವಿರಕ್ಕೂ ಅಧಿಕ ಹಿಂದುಗಳನ್ನು ಇಸ್ಲಾಂಗೆ ಪರಿವರ್ತಿಸಿದೆ.
ಇದ್ಯಾವುದು ಸ್ವಇಚ್ಛೆಯ ಪ್ರಕರಣವಲ್ಲ. ಭಾರಿ ಮೊತ್ತದ ಹಣ, ಉತ್ತಮ ಉದ್ಯೋಗ, ವಿದೇಶ ಪ್ರಯಾಣ, ಮದುವೆ, ಐಷಾರಾಮಿ ಬದುಕು ಹೀಗೆ ವಿವಿಧ ಆಮಿಷಗಳನ್ನು ಒಡ್ಡಿ ಮತಾಂತರ ನಡೆಸಿರುವುದು ತನಿಖೆಯ ವೇಳೆ ತಿಳಿದುಬಂದಿದೆ. ಆಮಿಷಕ್ಕೆ ಒಳಗಾಗದವರನ್ನು ಬೆದರಿಸಿ ಮತಾಂತರ ಮಾಡಲಾಗಿದೆ. ಈ ಜಾಲದಲ್ಲಿ ಸಿಲುಕಿಕೊಂಡ ಯುವತಿಯರ ಪರಿಸ್ಥಿತಿಯಂತೂ ಶೋಚನೀಯ. ಮತಾಂತರವಾಗಿ, ಮುಸ್ಲಿಂ ಯುವಕರೊಂದಿಗೆ ವಿವಾಹವಾದ ಕೆಲ ದಿನಗಳಲ್ಲೇ ಬಾಳು ನರಕಸದೃಶವಾಗಿದ್ದರಿಂದ, ಭವಿಷ್ಯ ಕಾಣದಂತಾಗಿದೆ. ಈ ಪೈಕಿ ಒಬ್ಬ ಯುವತಿ ನೀಡಿದ ದೂರಿನ ಅನ್ವಯವೇ ಈಗ ಇಡೀ ಪ್ರಕರಣ ಬಯಲಿಗೆ ಬಂದಿದೆ.
ಆಘಾತಕಾರಿ ಸಂಗತಿಯೆಂದರೆ ಮುಟ್ಟುಗೋಲು ಹಾಕಿಕೊಂಡಿರುವ ಜಮಾಲುದ್ದೀನ್ ಬ್ಯಾಂಕ್ ಖಾತೆಗಳಿಂದ ನೂರಾರು ಕೋಟಿ ರೂಪಾಯಿ ಪತ್ತೆಯಾಗಿದೆ. ಇಷ್ಟು ಹಣದ ವಹಿವಾಟು ನಡದಿದೆ ಎಂದರೆ ಇದರ ಹಿಂದೆ ಮತ್ತಷ್ಟು ದುಷ್ಟಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ ಎಂಬುದು ಸ್ಪಷ್ಟ. ಛಂಗೂರ್ ಬಾಬಾ ದೇಶದ ಹಲವೆಡೆ ದೊಡ್ಡಮಟ್ಟದಲ್ಲಿ ಮತಾಂತರ ಮಾಡಲು ವ್ಯವಸ್ಥಿತ ಜಾಲ ಹೆಣೆದಿದ್ದ. ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಇದು ಸಕ್ರಿಯವಾಗಿರುವುದು ಆತನ ಬಂಧನದ ಬಳಿಕ ಬೆಳಕಿಗೆ ಬಂದಿದೆ. ಮೂರು ಸಾವಿರಕ್ಕೂ ಅಧಿಕ ಜನರು ಇವನ ಗ್ಯಾಂಗ್ನಲ್ಲಿದ್ದು, ಲವ್ ಜಿಹಾದ್ ಮಾದರಿ ಕಾರ್ಯಾಚರಣೆ ನಡೆಸುತ್ತಿದ್ದರು. ತನ್ನ ಗ್ಯಾಂಗ್ನೊಂದಿಗೆ ಸಂವಹನ ನಡೆಸಲು ಛಂಗೂರ್ ಬಾಬಾ ಕೋಡ್ವರ್ಡ್ಗಳನ್ನು ಬಳಸುತ್ತಿದ್ದ. ತನಿಖೆಯ ವೇಳೆ ಬೆಚ್ಚಿಬೀಳಿಸುವ ಹಲವು ಅಂಶಗಳು ಹೊರಬಂದಿವೆ.
ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ಹದಿನಾಲ್ಕು ಕಡೆ ದಾಳಿ ನಡೆಸಿದೆ. ದೇಶದ ಹಲವು ರಾಜ್ಯಗಳಲ್ಲಿ ಈ ಕೃತ್ಯ ನಡೆಯುತ್ತಿದ್ದರೂ, ಗುಪ್ತಚರ ಇಲಾಖೆ ಏಕೆ ಸುಮ್ಮನಾಗಿತ್ತು? ಆಯಾ ರಾಜ್ಯ ಸರ್ಕಾರಗಳು ಮತ್ತು ಪೊಲೀಸ್ ಇಲಾಖೆ ಕೂಡ ಕಟ್ಟೆಚ್ಚರ ವಹಿಸಬೇಕು. ಬಲವಂತದ ಮತಾಂತರ ಅಕ್ಷಮ್ಯವಾಗಿದ್ದು, ಇಂಥ ಕೃತ್ಯಗಳನ್ನು ತಡೆಯಲೇ ಬೇಕು ಮತ್ತು ಇಂಥ ಗಂಭೀರ ಪ್ರಕರಣಗಳನ್ನು ರಾಜಕೀಯ ನಾಯಕರು ಮತಬ್ಯಾಂಕ್ ದೃಷ್ಟಿಯಿಂದ ನೋಡದೆ, ವಿವೇಚನೆಯಿಂದ ಕ್ರಮ ಕೈಗೊಳ್ಳಬೇಕು. ಈಗ ಲಭ್ಯವಾಗಿರುವ ಮಾಹಿತಿಗಳ ಆಧಾರದಲ್ಲಿ ಉತ್ತರಪ್ರದೇಶ ಹೊರತುಪಡಿಸಿ ಇತರ ರಾಜ್ಯಗಳು ಸೂಕ್ತ ತನಿಖೆ ಕೈಗೊಂಡು, ಇಂಥ ದುಷ್ಟಜಾಲಗಳನ್ನು ಸದೆಬಡಿಯಬೇಕು.