

ಲಡಾಖ್ನ ವಾಸ್ತವ ಹತೋಟಿ ರೇಖೆಯುದ್ದಕ್ಕೂ, ಮುಖ್ಯವಾಗಿ ತನ್ನ ಸೇನಾಶಕ್ತಿ ಉತ್ತಮವಾಗಿದ್ದ ಹಾಗೂ ತನಗೆ ಸಾಮರಿಕವಾಗಿ ಅನುಕೂಲಗಳಿದ್ದ ಉತ್ತರದ ದೆಪ್ಸಂಗ್ ಹಾಗೂ ಹಾಟ್ಸ್ಪ್ರಿಂಗ್ಸ್ ಮತ್ತು ದಕ್ಷಿಣದ ಪಂಗೊಂಗ್ ತ್ಸೊ ತೀರದಲ್ಲಿ ಚೀನಾ ಇಪ್ಪತ್ತರಿಂದ ಮೂವತ್ತು ಸಾವಿರ ಸೈನಿಕರನ್ನು; ಜತೆಗೆ ಯುದ್ಧೋಪಕರಣಗಳನ್ನು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಭಾರಿ ಪ್ರಮಾಣದಲ್ಲಿ ಸಜ್ಜುಗೊಳಿಸಿ ಪೂರ್ಣ ಪ್ರಮಾಣದ ಯುದ್ಧಕ್ಕೆ ತಯಾರಾಗಿ ನಿಂತಿತು. ಜಂಟಿ ಸಮರ ತಯಾರಿಯಾಗಿ ಪಶ್ಚಿಮದಲ್ಲಿ ಪಾಕಿಸ್ತಾನ ತನ್ನ ಹತೋಟಿಯಲ್ಲಿದ್ದ ಕಾಶ್ಮೀರದ ಗಡಿಯಲ್ಲಿ 30 ಸಾವಿರ ಸೈನಿಕರನ್ನು ತುರ್ತಾಗಿ ಜಮಾಯಿಸಿತು. 2019 ಫೆಬ್ರವರಿಯಲ್ಲಿ ಭಾರತೀಯ ವಾಯುಪಡೆ ಬಾಲಾಕೋಟ್ನ ಭಯೋತ್ಪಾದಕರ ತರಬೇತಿ ಶಿಬಿರದ ಮೇಲೆ ದಾಳಿಯೆಸಗಿ ಮುನ್ನೂರರಷ್ಟು ಭಯೋತ್ಪಾದಕರನ್ನೂ, ಅವರ ತರಬೇತಿದಾರರನ್ನೂ ಕೊಂದಾಗಲೂ ಇಮ್ರಾನ್ ಖಾನ್ ಸರ್ಕಾರ ಈ ಪ್ರಮಾಣದ ಯುದ್ಧತಯಾರಿ ನಡೆಸಿರಲಿಲ್ಲ ಎಂಬ ವಿಷಯವನ್ನು ಪರಿಗಣಿಸಿದರೆ ಪಾಕಿಸ್ತಾನದ ಯುದ್ಧ ತಯಾರಿ ಚೀನಾದ ಒತ್ತಡದಿಂದಲೇ ಎಂದು ಹೇಳಬಹುದು.
ಒಟ್ಟಿನಲ್ಲಿ ನಮ್ಮೆರಡು ವೈರಿರಾಷ್ಟ್ರಗಳು ಒಟ್ಟುಗೂಡಿ ಉತ್ತರ ಲಡಾಖ್ನ ಮೇಲೆ ಏಕಕಾಲದಲ್ಲಿ ಪೂರ್ವ ಪಶ್ಚಿಮಗಳೆರಡರಿಂದಲೂ ಸಂಯೋಜಿತ ದಾಳಿಯೆಸಗುವ ತಯಾರಿಯಲ್ಲಿದ್ದವು. ಬಹುಶಃ ಅವುಗಳ ಉದ್ದೇಶ ಲಡಾಖ್ನಲ್ಲಿ ಭಾರತದ ಉತ್ತರ ಗಡಿಯನ್ನು ಕಾರಾಕೊರಂ ಪರ್ವತಶ್ರೇಣಿಯ ದಕ್ಷಿಣಕ್ಕಷ್ಟೇ ಸೀಮಿತಗೊಳಿಸುವುದಾಗಿದ್ದಿರಬಹುದು. ಹಾಗೇ ನಾದರೂ ಆಗಿದ್ದರೆ ಇಡೀ ಸಿಯಾಚಿನ್ ಗ್ಲೇಷಿಯರ್ ಪಾಕಿಸ್ತಾನದ ಕೈಗೆ ಬೀಳುತ್ತಿತ್ತು. ಜತೆಗೆ ಪಾಕ್ ಮತ್ತು ಚೀನೀ ಆಕ್ರಮಿತ ಪ್ರದೇಶಗಳೆರಡೂ ಒಂದನ್ನೊಂದು ಸಂಧಿಸುತ್ತಿದ್ದವು ಮತ್ತು ಎಲ್ಕಕ್ಕಿಂತ ಮುಖ್ಯವಾಗಿ ಕಾರಾಕೊರಂ ಕಣಿವೆ ನಮ್ಮ ಕೈ ತಪ್ಪಿಹೋಗಿ ಲಡಾಖ್ನಲ್ಲಿ ನಮ್ಮ ರಕ್ಷಣಾಸ್ಥಿತಿ ತೀವ್ರವಾಗಿ ಘಾಸಿಗೊಳಗಾಗುತ್ತಿತ್ತು. ಅದು ಲೆಹ್ನ ಬಾಗಿಲನ್ನು ಪಾಕ್ ಸೈನ್ಯಕ್ಕೆ ತೆರೆದಿಡುತ್ತಿತ್ತು. ಇದು ಪಾಕಿಸ್ತಾನ ಕಾಲು ಶತಮಾನದ ಹಿಂದೆಯೇ ಕಂಡಿದ್ದ ಕನಸು. ಆದರೆ ದೂರಗಾಮಿ ದೃಷ್ಟಿಕೋನದ ಇಂದಿರಾ ಗಾಂಧಿ ಅದಕ್ಕೆ 1984ರ ಬೇಸಿಗೆಯಲ್ಲಿ ತಣ್ಣೀರೆರಚಿದ್ದರು.
ಆದರೆ 2020ರ ಜೂನ್ನಲ್ಲಿ ಭಾರತಕ್ಕೆ ಪರಿಸ್ಥಿತಿ ಪ್ರತಿಕೂಲವಾಗಿತ್ತು. ಲಡಾಖ್ನ ಉತ್ತರದಲ್ಲಿ ಸಂಯೋಜಿತ ಕಾರ್ಯಾಚರಣೆ ನಡೆಸುವುದರ ಜತೆಗೆ ಚೀನಿ ಮತ್ತು ಪಾಕಿಸ್ತಾನಿ ಸೇನೆಗಳು ಕಾಶ್ಮೀರದ ಎರಡೂ ಹತೋಟಿ ರೇಖೆಗಳಿಗೆ ಸಮರವನ್ನು ವಿಸ್ತರಿಸಿ, ಆ ಮೂಲಕ ಭಾರತೀಯ ಸೇನೆಯನ್ನು ಎರಡು ಪರಸ್ಪರ ವಿರುದ್ಧ ದಿಕ್ಕುಗಳತ್ತ ಸೆಳೆದು ಎರಡು ಯುದ್ಧರಂಗಗಳನ್ನು ಸೃಷ್ಟಿಸುವ ಸಾಧ್ಯತೆ ಇತ್ತು. ಇದನ್ನು ಮನಗಂಡೇ ಭಾರತದ ಭೂಸೇನೆಯ ದಂಡನಾಯಕ ಜನರಲ್ ಎಂ.ಎಂ. ನರವಾಣೆ ಭಾರತ ದ್ವಿರಂಗ ಸಮರದಲ್ಲಿ ಸೆಣೆಸುವ ಸ್ಥಿತಿ ನಿರ್ವಣವಾಗುತ್ತಿದೆ ಎಂದು ದೇಶವನ್ನು ಎಚ್ಚರಿಸಿದ್ದು. ಅಪಾಯವನ್ನೆದುರಿಸಲು ಭಾರತ ಸ್ವತಃ ಸಿದ್ಧತೆಗಳನ್ನು ಮಾಡಿಕೊಂಡದ್ದಲ್ಲದೆ ಜಾಗತಿಕ ಭೂ-ಸಾಮರಿಕ ಸ್ಥಿತಿಗತಿಗಳೂ ಭಾರತಕ್ಕೆ ಅನುಕೂಲಕರವಾದದ್ದು ಗಮನಿಸಬೇಕಾದ ಅಂಶ.
ಶಸ್ತ್ರಭಂಡಾರವನ್ನು ವೃದ್ಧಿಸಿಕೊಳ್ಳುವ ಭಾರತದ ಪ್ರಯತ್ನಗಳಿಗೆ ಅಮೆರಿಕ ಮತ್ತು ಇಸ್ರೇಲ್ ತಕ್ಷಣ ಸ್ಪಂದಿಸಿದವು. ಅವುಗಳು ಪೂರೈಸತೊಡಗಿದ ಡ್ರೋನ್ಗಳು, ಕ್ಷಿಪಣಿಗಳು ಮತ್ತು ಟ್ಯಾಂಕ್ಗಳು ಭಾರತೀಯ ರಕ್ಷಣಾಪಡೆಗಳ ಸ್ಥೈರ್ಯವನ್ನು ಗಣನೀಯವಾಗಿ ವೃದ್ಧಿಸಿದ್ದು ನಿಜ. ಇದರ ಜತೆಗೆ ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ನೇರವಾಗಿ ಭಾರತದ ಪರ ನಿಂತರೆ, ಅಗತ್ಯ ಸನ್ನಿವೇಶದಲ್ಲಿ ಅಗತ್ಯ ಸಹಕಾರವನ್ನು ಭಾರತಕ್ಕೆ ನೀಡುವ ಸೂಚನೆಯನ್ನು ಇಂಡೋನೇಷ್ಯಾ, ಥಾಯ್ಲ್ಯಾಂಡ್ ಮತ್ತು ತೈವಾನ್ಗಳು ನೀಡಿದವು. ಇಲ್ಲಿ ಎಲ್ಲಕ್ಕಿಂತಲೂ ಮುಖ್ಯವಾದದ್ದು ಭಾರತದ ಪರವಾಗಿ ಅಮೆರಿಕದ ರಕ್ಷಣಾಪಡೆಗಳು ನಿಲ್ಲಲಿವೆ ಎಂದು ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ ಜೂನ್ 26ರಂದು ಘೊಷಿಸಿದ್ದು. ತಕ್ಷಣ ಪಾಕಿಸ್ತಾನ ತನ್ನ ಯುದ್ಧತಯಾರಿ ಬಂದ್ ಮಾಡಿ ಸೈನಿಕರನ್ನು ಹತೋಟಿ ರೇಖೆಯಿಂದ ಹಿಂದಕ್ಕೆ ಕರೆಸಿಕೊಂಡಿತು, ಚೀನಾ ಜುಲೈ ಮೊದಲವಾರದಲ್ಲಿ ಶಾಂತಿ ಮಾತುಕತೆಗೆ ಬಂತು. ಭಾರತದ ಮುಂದೆ ಸೃಷ್ಟಿಯಾಗುತ್ತಿದ್ದ ದ್ವಿರಂಗ ಸಮರದ ಅಪಾಯ ದೂರವಾಯಿತು.
ಈ ಬೆಳವಣಿಗೆಗೆ ಕಾರಣ ಚೀನಾದ ನೀತಿಗಳು ಶಾಂತಿಕಂಟಕ ಮತ್ತು ಅವುಗಳಿಂದ ತಮ್ಮ ಹಿತಾಸಕ್ತಿಗಳಿಗೂ ಅಪಾಯವಿದೆ ಎಂದು ಅಮೆರಿಕ ಮತ್ತದರ ಈ ವಲಯದ ಮಿತ್ರದೇಶಗಳು ಮನಗಂಡಿದ್ದು. ಭಾರತ ಮತ್ತು ಚೀನಾಗಳ ನಡುವಿನ ಸಂಘರ್ಷ ತನ್ನ ಹಿತಾಸಕ್ತಿಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಇತ್ತೀಚಿನವರೆಗೂ ವಲಯದಾಚೆಗಿನ ಯಾವ ದೇಶವೂ ಭಾವಿಸುತ್ತಿರಲಿಲ್ಲ. ಈ ಸ್ಥಿತಿಗೆ ನಾವು ಭಾರತವನ್ನೇ ದೂಷಿಸಬೇಕಾಗುತ್ತದೆ. 1950ರ ದಶಕದಲ್ಲಿ ಸೋವಿಯತ್ ಯೂನಿಯನ್ ಮತ್ತು ಚೀನಾಗಳಿಗೆ ವಿರುದ್ಧವಾಗಿ ಏಷ್ಯಾದಲ್ಲಿ ಸೇನಾ ಕೂಟ ಕಟ್ಟಲು ಐಸೆನ್ಹೋವರ್ ಸರ್ಕಾರ ಹೊರಟಾಗ ಅದರಲ್ಲಿ ಭಾರತವನ್ನು ಸಹಭಾಗಿಯಾಗಿಸಿಕೊಳ್ಳಲು ಮನಸ್ಸು ಮಾಡಿತ್ತು. ಈ ಬಗ್ಗೆ ಭಾರತದ ಮನವೊಲಿಸಲು ವಿದೇಶಾಂಗ ಕಾರ್ಯದರ್ಶಿ ಜಾನ್ ಫಾಸ್ಟರ್ ಡಲೆಸ್ ಖುದ್ದಾಗಿ ಪ್ರಯತ್ನಿಸಿದ್ದರು. ಉದ್ದೇಶಿತ ‘ಸೌತ್ ಈಸ್ಟ್ ಏಷ್ಯಾ ಟ್ರೀಟಿ ಆರ್ಗನೈಜೇಸನ್’ (ಸಿಯಾಟೋ) ಸಂಘಟನೆಗೆ ಸೇರಿದರೆ ಭಾರತದ ರಕ್ಷಣೆಯ ಜವಾಬ್ದಾಗಿ ಆ ಸೇನಾ ಕೂಟದ್ದಾಗುತ್ತದೆ, ಅಂದರೆ ವಾಸ್ತವದಲ್ಲಿ ಅಮೆರಿಕದ್ದಾಗುತ್ತದೆ ಎನ್ನುವುದು ಅವರ ಮಾತಿನ ತಿರುಳಾಗಿತ್ತು. ಆದರೆ ಪ್ರಧಾನಿ ನೆಹರು ಅದನ್ನು ತಿರಸ್ಕರಿಸಿದರು. ಒಂದು ವೇಳೆ ಭಾರತ ಅಂದು ಅಮೆರಿಕದ ಜತೆಗೂಡಿದ್ದರೆ ಭಾರತಕ್ಕೆ ಎರಡು ರೀತಿಯ ಸಾಮರಿಕ ಅನುಕೂಲತೆಗಳು ಒದಗುತ್ತಿದ್ದವು. ಒಂದು- ಪಾಕಿಸ್ತಾನದ ಜತೆಗಿನ ವಿವಾದದಲ್ಲಿ ಭಾರತಕ್ಕೆ ಅಮೆರಿಕ ಮತ್ತದರ ಮಿತ್ರದೇಶಗಳ ರಾಜತಾಂತ್ರಿಕ ಬೆಂಬಲ ದೊರೆಯುತ್ತಿತ್ತು ಮತ್ತು ಅಷ್ಟರ ಮಟ್ಟಿಗೆ ಭಾರತದ ಕೈ ಮೇಲಾಗುತ್ತಿತ್ತು. ಎರಡು- ಭಾರತದ ಪರವಾಗಿ ಅಮೆರಿಕ ನಿಂತರೆ ಚೀನಾ ಗಡಿತಂಟೆಯನ್ನು ಉಲ್ಬಣಗೊಳಿಸುವ ಧೈರ್ಯ ಮಾಡುತ್ತಿರಲಿಲ್ಲ. ಆ ದಿನಗಲ್ಲಿ ಅಮೆರಿಕ ಬೆಂಬಲಕ್ಕೆ ನಿಂತ ಯಾವ ದೇಶದ ಮೇಲೂ ಚೀನಾ ಉದ್ಧಟತನ ಪ್ರದರ್ಶಿಸಲು ಹೋಗುತ್ತಿರಲಿಲ್ಲ. 1958ರಲ್ಲಿ ತೈವಾನ್ಗೆ ಸೇರಿದ, ತನ್ನ ತೀರಕ್ಕೆ ಹತ್ತಿರದಲ್ಲಿದ್ದ ಕ್ವಿಮೋಯ್ ಹಾಗೂ ಮತ್ಸು ದ್ವೀಪಗಳನ್ನು ಆಕ್ರಮಿಸಿಕೊಳ್ಳಲು ಚೀನಾ ಮುಂದಾದಾಗ ಅಣ್ವಸ್ತ್ರ ಪ್ರಯೋಗಿಸುವುದಾಗಿ ಅಧ್ಯಕ್ಷ ಐಸೆನ್ಹೋವರ್ ಬೆದರಿಕೆ ಒಡ್ಡಿದ ಪ್ರಕರಣವನ್ನು ನೆನಪಿಸಿಕೊಳ್ಳಿ. ಹೆದರಿದ ಮಾವೋ ಜೆದಾಂಗ್ ಸದ್ದಿಲ್ಲದೆ ತಮ್ಮ ಸೇನೆಯನ್ನು ಹಿಂದಕ್ಕೆ ತೆಗೆದುಕೊಂಡರು. ಭಾರತದ ವಿಷಯದಲ್ಲೂ ಅದೇ ಆಗುತ್ತಿದ್ದುದು ನಿಶ್ಚಿತ. ಆದರೆ ಬೆಳ್ಳಿತಟ್ಟೆಯಲ್ಲಿ ಬಂದ ಅವಕಾಶವನ್ನು ನೆಹರು ಹಾಳುಮಾಡಿಕೊಂಡರು. ಅವರ ಅವಾಸ್ತವಿಕ ನಡೆಗಳು ಅಷ್ಟಕ್ಕೇ ನಿಲ್ಲಲಿಲ್ಲ. ಅಲಿಪ್ತ ನೀತಿಯ ಮುಖವಾಡದ ಹಿಂದೆ ನೆಹರು ಸೋವಿಯತ್ ಬೆಂಬಲಕ್ಕೆ ನಿಂತರು. ಹೀಗಾಗಿ ಅಮೆರಿಕ ಮತ್ತದರ ಮಿತ್ರದೇಶಗಳು ಭಾರತದಿಂದ ದೂರದೂರ ಸರಿದವು. ಜತೆಗೆ, 1960ರ ದಶಕದಲ್ಲಿ ಮಾಸ್ಕೋ ಮತ್ತು ಬೀಜಿಂಗ್ ನಡುವೆ ವೈಷಮ್ಯ ಉಲ್ಬಣಗೊಳ್ಳತೊಡಗಿದಾಗ, ಜಾಗತಿಕವಾಗಿ ಸೋವಿಯತ್ ಶಕ್ತಿ ಮತ್ತು ಪ್ರಭಾವವನ್ನು ಕುಂದಿಸಲು ಒಂದು ಹಂತದವರೆಗೆ ಚೀನಾವನ್ನು ಬೆಂಬಲಿಸುವುದು ಅಗತ್ಯ ಎಂದು ಅಮೆರಿಕ ಮತ್ತದರ ಮಿತ್ರದೇಶಗಳು ಅರಿತವು. ಅಮೆರಿಕ, ಅದರ ಬೆನ್ನಲ್ಲೇ ಕೆನಡಾ ಬೀಜಿಂಗ್ ಜತೆ ಸ್ನೇಹಸಂಬಂಧಕ್ಕೆ ನಾಂದಿ ಹಾಡಿದ್ದೇ ಪಶ್ಚಿಮ ಯುರೋಪಿಯನ್ ದೇಶಗಳ ಜತೆ ಜಪಾನ್, ಆಸ್ಟ್ರೇಲಿಯಾ ಮತ್ತವುಗಳ ಆಗ್ನೇಯ ಏಷ್ಯಾದ ಮಿತ್ರದೇಶಗಳಲ್ಲೇ ಚೀನಾವನ್ನು ಅಪ್ಪಿಕೊಳ್ಳಲು ಸಾಲುಗಟ್ಟಿ ನಿಂತವು. ಪರಿಣಾಮವಾಗಿ ಭಾರತ ಅವೆಲ್ಲವುಗಳಿಂದಲೂ ಇನ್ನಷ್ಟು ದೂರಕ್ಕೆ ದೂಡಲ್ಪಟ್ಟಿತು. 1971ರಲ್ಲಿ ಅವೆಲ್ಲವೂ ಸಾರಾಸಗಟಾಗಿ ಪಾಕಿಸ್ತಾನದ ಪರ ನಿಂತವು. ಚೀನಾದ ಮಾತು ಕೇಳಿ ಭಾರತವನ್ನು ಬೆದರಿಸಲು ಅಮೆರಿಕ ತನ್ನ ಸೆವೆನ್ತ್ ಫ್ಲೀಟ್ ಅನ್ನು ಬಂಗಾಳ ಕೊಲ್ಲಿಗೆ ಕಳುಹಿಸಿತು. ಹನ್ನೆರಡು ವರ್ಷಗಳ ನಂತರ 1982ರಲ್ಲಿ ವಿಯೆಟ್ನಾಂ ಮತ್ತದರ ಬೆನ್ನಿಗೆ ನಿಂತ ಸೋವಿಯತ್ ಯೂನಿಯನ್ ಕಂಪೂಚಿಯಾದಲ್ಲಿ ಸ್ಥಾಪಿಸಿದ್ದ ಹೆಂಗ್ ಸಾಮ್ರಿನ್ ಸರ್ಕಾರವನ್ನು ಇಂದಿರಾ ಸರ್ಕಾರ ಮಾನ್ಯ ಮಾಡಿದಾಗ ಇಡೀ ಪಶ್ಚಿಮ ಜಗತ್ತು ಮತ್ತದರ ಪೂರ್ವದ ಸಹಯೋಗಿಗಳು ಭಾರತದ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದಲ್ಲದೆ ಪುಟ್ಟ ಮಲೇಷ್ಯಾ ದೊಡ್ಡ ದನಿಯಲ್ಲಿ ಭಾರತವನ್ನು ನಿಂದಿಸಿ, ‘ಬುದ್ಧಿಮಾತು’ ಹೇಳಹೊರಟಿತ್ತು ಎಂಬ ವಾಸ್ತವ ರಾಜತಾಂತ್ರಿಕವಾಗಿ ಭಾರತ ಅದೆಷ್ಟು ಹೀನಾಯ ಸ್ಥಿತಿಯಲ್ಲಿತ್ತು ಎನ್ನುವುದರ ಬಗ್ಗೆ ಸಂಪುಟಗಟ್ಟಲೆ ಹೇಳುತ್ತದೆ.
ಶೀತಲ ಸಮರ ಅಂತ್ಯಗೊಂಡು ಸೋವಿಯತ್ ಯೂನಿಯನ್ ಕುಸಿದಾದ ಮೇಲೆ ಭಾರತ ಗತ್ಯಂತರವಿಲ್ಲದೆ ಅಮೆರಿಕದತ್ತ ತಿರುಗಿತು. ಆದಾಗ್ಯೂ, ಆರ್ಥಿಕ ವಿಷಯಗಳು ಮುಂಚೂಣಿಗೆ ಬಂದು ಅಮೆರಿಕ ಮತ್ತದರ ಮಿತ್ರದೇಶಗಳು ಚೀನಾವನ್ನೇ ಓಲೈಸುವುದು ಮುಂದುವರಿದ ಕಾರಣ ಭಾರತ ಜಾಗತಿಕ ರಾಜಕೀಯ-ಆರ್ಥಿಕ ರಂಗದಲ್ಲಿ ಮುಂಚೂಣಿಗೆ ಬರಲಾಗಲೇ ಇಲ್ಲ. ಮುಂದಿನ ಕಾಲು ಶತಮಾನದಲ್ಲಿ ಜಾಗತಿಕ ಭೂ-ಸಾಮರಿಕ, ಭೂ-ಆರ್ಥಿಕ ವಾಸ್ತವಗಳು ಏರುಪೇರಾಗಿ ಹಿಂದಿನ ಸೋವಿಯತ್ ಯೂನಿಯನ್ನ ಸ್ಥಾನದಲ್ಲಿ ಚೀನಾ ಮಹಾಶಕ್ತಿಯಾಗಿ ಬೆಳೆದು ನಿಂತಿತು, ಹೊಸ ಶೀತಲ ಸಮರ ಆರಂಭವಾಯಿತು. ಅದೃಷ್ಟವಶಾತ್ ಇಂದು ಭಾರತ ಜಾಗತಿಕ ರಾಜಕಾರಣದಲ್ಲಿ ತನ್ನ ಸ್ಥಾನವನ್ನು ಸರಿಯಾಗಿ ಗುರುತಿಸಿಕೊಂಡಿದೆ. ಪರಿಣಾಮವಾಗಿ ಭಾರತದ ಸುರಕ್ಷಾ ಹಿತಾಸಕ್ತಿಗಳು ತಮ್ಮವೂ ಸಹ ಎಂದು ಅಮೆರಿಕ, ಬ್ರಿಟನ್, ಫ್ರಾನ್ಸ್, ಜಪಾನ್, ಆಸ್ಟ್ರೇಲಿಯಾ, ತೈವಾನ್ ಮತ್ತು ಆಗ್ನೇಯ ಏಷ್ಯಾದ ಹಲವಾರು ದೇಶಗಳು ಭಾವಿಸತೊಡಗಿವೆ. ಎಂದೋ ಆಗಬೇಕಾಗಿದ್ದದ್ದು ಇದು.
ಈ ಹೊಸ ಬೆಳವಣಿಗೆಗಳ ಪರಿಣಾಮವಾಗಿ ಇಂದು ಭಾರತ-ಚೀನಾ ಗಡಿಯಲ್ಲಿ ಏನು ನಡೆದರೂ ಜಗತ್ತಿನ ಕಣ್ಣು ಸರಕ್ಕನೆ ಅತ್ತ ಹೊರಳುತ್ತದೆ. ಹಿಮಾಲಯ ಗಡಿಯಲ್ಲಿ ಭಾರತವೇನಾದರೂ ಹಿಮ್ಮೆಟ್ಟಿದರೆ ಪಶ್ಚಿಮ ಪೆಸಿಫಿಕ್ ವಲಯದಲ್ಲಿ ಚೀನಾದ ಹುಮ್ಮಸ್ಸು ಏರಿ, ತಮಗೆ ಗಂಡಾಂತರ ವಕ್ಕರಿಸುತ್ತದೆ ಎಂದು ಈ ದೇಶಗಳು ತಿಳಿಯತೊಡಗಿವೆ. ಇಂತಹ ಸನ್ನಿವೇಶದಲ್ಲಿ ಚೀನಾ ಮತ್ತು ಪಾಕಿಸ್ತಾನಗಳೆರಡೂ ಜತೆಗೂಡಿ ಜಾಗತಿಕ ಶಾಂತಿಕಂಟಕ ಯೋಜನೆಗಳನ್ನು ರೂಪಿಸುತ್ತಿರುವುದು ಅವು ವಾಸ್ತವಪ್ರಜ್ಞೆ ಕಳೆದುಕೊಂಡಿವೆ ಎನ್ನುವುದರ ದ್ಯೋತಕ.
ಟರ್ಕಿ ಮತ್ತು ಇರಾನ್ ಜತೆಗೂಡಿ ಸೌದಿ ನಾಯಕತ್ವದ ಇಸ್ಲಾಮಿಕ್ ಜಗತ್ತನ್ನು ಒಡೆಯಲು ಪ್ರಯತ್ನಿಸಿ ಬಹುಪಾಲು ಅರಬ್ ಜಗತ್ತಿನ ವಿಶ್ವಾಸ ಕಳೆದುಕೊಂಡ ಬೆನ್ನಲ್ಲೇ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮೇಲುಗೈ ಸಾಧಿಸಲು ಅವಕಾಶ ಮಾಡಿಕೊಟ್ಟು ಪಶ್ಚಿಮ ಜಗತ್ತಿನ ವಿರೋಧವನ್ನು ಪಾಕಿಸ್ತಾನ ಇಂದು ಕಟ್ಟಿಕೊಂಡಿದೆ. ಅದೇ ಸಮಯದಲ್ಲಿ ಜಗತ್ತನ್ನು ಕರೊನಾ ಸಂಕಟಕ್ಕೆ ಸಿಲುಕಿಸಿ, ತಾನು ಅಗ್ರ ಜಾಗತಿಕ ಆರ್ಥಿಕ ಹಾಗೂ ಸೇನಾ ಶಕ್ತಿಯಾಗಿ ನಿಲ್ಲಲು ಹವಣಿಸಿದ ಚೀನಾ ಕೂಡ ಬೆರಳೆಣಿಕೆಯ ದೇಶಗಳ ಹೊರತಾಗಿ ಇಡೀ ಜಗತ್ತಿನ ವಿಶ್ವಾಸವನ್ನು ಕಳೆದುಕೊಂಡಿದೆ. ಇಂತಹ ಸ್ಥಿತಿಯಲ್ಲಿ ಇವೆರಡೂ ಭಾರತದ ವಿರುದ್ಧ ದ್ವಿರಂಗ ಸಮರಕ್ಕೆ ಸಿದ್ಧವಾಗುತ್ತಿರುವ ಸೂಚನೆ ನೀಡುತ್ತಿವೆ. ಈ ‘ಹೊಸ’ ಅಪಾಯವನ್ನು ಇದೇ ಅಕ್ಟೋಬರ್ 3ರಂದು ಜನರಲ್ ನರವಾಣೆ ಪುನರುಚ್ಚರಿಸಿದ್ದಾರೆ. ಅವರ ಮಾತನ್ನು ಇತ್ತೀಚೆಗಷ್ಟೇ ವಾಯುದಳದ ಮುಖ್ಯಸ್ಥ ವಿ. ಆರ್. ಚೌಧರಿ ಪುನರುಚ್ಚರಿಸಿದ್ದಾರೆ.
ಆರೇಳು ತಿಂಗಳುಗಳ ‘ಮೌನ’ದ ನಂತರ ಪಾಕಿಸ್ತಾನ ಕಾಶ್ಮೀರದೊಳಗೆ ತನ್ನ ಹಸ್ತಕ್ಷೇಪವನ್ನು ಏಕಾಏಕಿ ಅಧಿಕಗೊಳಿಸಿದೆ. ಜತೆಗೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕೈಲಿತ್ತು ಭಯೋತ್ಪಾದಕರನ್ನು ನಿಯಂತ್ರಣ ರೇಖೆಯೀಚೆಗೆ ಕಳುಹಿಸಿದೆ. ಪರಿಣಾಮವಾಗಿ ಕಳೆದ ಎರಡು ವಾರಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಹನ್ನೊಂದು ನಾಗರಿಕರಲ್ಲದೆ ನಿಯಂತ್ರಣ ರೇಖೆಯಲ್ಲಿ ಇಬ್ಬರು ಜಾಯಿಂಟ್ ಕಮಿಷನ್ಡ್ ಆಫೀಸರ್ಸ್ ಸೇರಿದಂತೆ ಒಂಬತ್ತು ಯೋಧರನ್ನು ಭಾರತ ಕಳೆದುಕೊಂಡಿದೆ. ಅತ್ತ ಚೀನಾ ಲಡಾಖ್ನ ಹೊರಗೆ ಭಾರತವನ್ನು ಪ್ರಚೋದಿಸಲು ಕಳೆದೊಂದು ತಿಂಗಳಲ್ಲಿ ಮತ್ತೆಮತ್ತೆ ಪ್ರಯತ್ನಿಸಿದೆ ಮತ್ತು ಆ ಪ್ರಚೋದನೆಯ ವಿಧಾನಗಳನ್ನು ಅಚ್ಚರಿಗೊಳಿಸುವ ಬಗೆಯಲ್ಲಿ ಬದಲಾಯಿಸಿದೆ. ಜತೆಗೆ ಹಿಮಾಲಯದ ಗಡಿಯುದ್ದಕ್ಕೂ ಅಭೂತಪೂರ್ವ ಸಮರಸಿದ್ಧತೆಯಲ್ಲಿ ತೊಡಗಿದೆ. ಈ ದ್ವಿರಂಗ ಸಮರದ ಪ್ರಚೋದನೆಗಳಿಗೆ ಭಾರತದ ಪ್ರತಿಕ್ರಿಯೆ ಏನು ಮತ್ತು ಎರಡೂ ಕಡೆಯ ಬಲಾಬಲಗಳ ಸಮೀಕ್ಷೆ ಮುಂದಿನವಾರ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)