

ಮಹಾನಗರವೊಂದರ ಹೊರವಲಯದ ಗ್ರಾಮದ ನಿವಾಸಿ 19 ವರ್ಷದ ಶ್ರೀಕಾಂತ್. ಪಿಯುಸಿ ಪಾಸಾದ ನಂತರ ಹತ್ತಿರದ ನಗರ ಬಡಾವಣೆಯೊಂದರಲ್ಲಿದ್ದ ಹಾರ್ಡ್ವೇರ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದ. ಅಂದು ರಾತ್ರಿ 8 ಗಂಟೆಗೆ ಅಂಗಡಿ ಮುಚ್ಚಿದ ಬಳಿಕ ಸ್ಕೂಟರ್ನಲ್ಲಿ ಮನೆಯತ್ತ ಹೊರಟ. ಆಗ ಶ್ರೀಕಾಂತ್ನ ಹಿಂದಿನಿಂದ ಬಂದ ಒಂದು ಕಾರು ಅವನ ಸ್ಕೂಟರ್ಗೆ ಗುದ್ದಿತು. ಶ್ರೀಕಾಂತ್ ಆಯತಪ್ಪಿ ಕೆಳಕ್ಕೆ ಬಿದ್ದ. ಆತ ಮೇಲೇರುವಷ್ಟರಲ್ಲಿ ಕಾರಿನಿಂದ ಕೆಳಗಿಳಿದ ನಾಲ್ಕೆ ೖದು ಜನರು ಅವನ ಬಳಿಗೆ ಬಂದರು. ನೋಡನೋಡುತ್ತಿರುವಂತೆಯೇ ಅವರು ಶ್ರೀಕಾಂತ್ನ ಬೆನ್ನಿಗೆ ಮತ್ತು ಎದೆಗೆ ಚಾಕುವಿನಿಂದ ಇರಿದು ಕಾರನ್ನು ಹತ್ತಿ ಹೊರಟು ಹೋದರು.
ಗಾಯಗೊಂಡಿದ್ದ ಶ್ರೀಕಾಂತ್ ನೋವಿನಿಂದ ಜೋರಾಗಿ ಅರಚುತ್ತ ಬಿದ್ದಿದ್ದ. ಅವನ ಪುಣ್ಯಕ್ಕೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಅವನನ್ನು ನೋಡಿ ಅವನ ಬಳಿಗೆ ಧಾವಿಸಿದ. ನಡೆದ ವಿಷಯವನ್ನು ಕೇಳಿ ತನ್ನ ಮೊಬೈಲ್ ಫೋನಿನಿಂದ ಯಾರಿಗೋ ಕರೆ ಮಾಡಿ ಸ್ಥಳಕ್ಕೆ ಕರೆಸಿದ. ಐದೇ ನಿಮಿಷಕ್ಕೆ ಅಲ್ಲಿಗೆ ಬಂದ ಅಪರಿಚಿತನ ಸ್ನೇಹಿತರು ತಮ್ಮ ಕಾರಿನಲ್ಲಿ ಶ್ರೀಕಾಂತ್ನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದರು. ಎದೆ ಮತ್ತು ಬೆನ್ನಿಗೆ ಇರಿತದ ಗಾಯಗಳು ಹೇಗಾಯಿತು ಎಂದು ವೈದ್ಯರಿಗೆ ಶ್ರೀಕಾಂತ್ ತಿಳಿಸಿದ. ಕೂಡಲೇ ಪೊಲೀಸರಿಗೆ ಕರೆ ಹೋಯಿತು. ಕಾರಿನಲ್ಲಿ ಬಂದ ಕೆಲವು ಯುವಕರು ತನ್ನ ವಾಹನಕ್ಕೆ ಹಿಂದಿನಿಂದ ಗುದ್ದಿ ತಾನು ಬಿದ್ದಾಗ ತನ್ನನ್ನು ಇರಿದರು ಎಂದಾತ ಪೊಲೀಸರಿಗೂ ಹೇಳಿದ.
ಶ್ರೀಕಾಂತ್ನನ್ನು ಆಸ್ಪತ್ರೆಗೆ ತಂದು ಸೇರಿಸಿದ್ದ ವ್ಯಕ್ತಿಗಳು ಘಟನೆ ಹೇಗಾಯಿತೆಂದು ತಮಗೇನೂ ಗೊತ್ತಿಲ್ಲವೆಂದರು. ಕೆಲ ಸಮಯದ ನಂತರ ಶ್ರೀಕಾಂತ್ನ ತಂದೆ-ತಾಯಿ ಆಸ್ಪತ್ರೆಗೆ ಬಂದಾಗ ಪೊಲೀಸರು ಅವರನ್ನೂ ವಿಚಾರಿಸಿದರು. ‘ಶ್ರೀಕಾಂತ್ ನಮ್ಮ ಒಬ್ಬನೇ ಮಗ. ಅವನಿಗೂ ನಮಗೂ ಯಾವ ವೈರಿಯೂ ಇಲ್ಲ, ನಾವು ನಮ್ಮ ಪಾಡಿಗೆ ನಮ್ಮ ಹೊಲ ಮಾಡಿಕೊಂಡಿದ್ದೇವೆ, ಅವನೂ ಯಾರ ಜೊತೆಯೂ ಪ್ರೀತಿ-ಪ್ರೇಮವನ್ನು ಇಟ್ಟುಕೊಂಡಿಲ್ಲ. ನಾವು ಯಾರಿಂದಲೂ ಸಾಲ ಪಡೆದಿಲ್ಲ’ ಎಂದರು.
ಪೊಲೀಸರು ಭಾರೀ ಗಾಯದ ಪ್ರಕರಣ ದಾಖಲಿಸಿ ಮಾರನೆಯ ಬೆಳಗ್ಗೆ ಘಟನೆ ನಡೆದ ಸ್ಥಳಕ್ಕೆ ಹೋಗಿ ಪಂಚನಾಮೆಯನ್ನು ಮಾಡಿದರು. ಚಿಕಿತ್ಸೆ ಫಲಿಸದೆ ಶ್ರೀಕಾಂತ್ ಅಂದೇ ರಾತ್ರಿ ಆಸ್ಪತ್ರೆಯಲ್ಲಿ ಅಸುನೀಗಿದ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದರು. ಘಟನೆ ನಡೆದ ಸ್ಥಳದಿಂದ ಎರಡು ಕಿ.ಮೀ. ದೂರದಲ್ಲಿದ್ದ ಇನ್ನೊಂದು ರಸ್ತೆಯಲ್ಲಿ ಅದೇ ರಾತ್ರಿ 7.30ಕ್ಕೆ ಮಾರುತಿ ಸ್ವಿಫ್ಟ್ ಕಾರೊಂದು ನಿಂತಿತ್ತು. ಅದರ ಮುಂದೆ ನಾಲ್ಕೆ ೖದು ಯುವಕರು ನಿಂತಿದ್ದು ಅವರು ಮದ್ಯಪಾನವನ್ನು ಮಾಡುತ್ತಿದ್ದು, ಗಾಂಜಾ ಸೇವಿಸುತ್ತಿದ್ದರು, ಅವರ ಕಾರಿನ ಸ್ಟೀರಿಯೋದಲ್ಲಿ ಕಿವಿ ಗಡಚಿಕ್ಕುವ ಹಾಡುಗಳು ಕೇಳಿಬರುತ್ತಿತ್ತು ಎಂದು ಅದೇ ರಸ್ತೆಯಲ್ಲಿ ಹಾದುಹೋಗಿದ್ದ ಬೈಕ್ ಸವಾರನೊಬ್ಬ ತಿಳಿಸಿದ.
ಪೊಲೀಸರು ಸ್ಥಳೀಯ ಆರ್.ಟಿ.ಓ ಅಧಿಕಾರಿಗಳನ್ನು ಸಂರ್ಪಸಿ ಘಟನೆ ನಡೆದ 25 ಕಿ.ಮೀ ಫಾಸಲೆಯಲ್ಲಿ ವಾಸವಾಗಿರುವವರು ಯಾರಾದರೂ ಮಾರುತಿ ಸ್ವಿಫ್ಟ್ ಕಾರನ್ನು ಹೊಂದಿರುವರೋ ಎಂದು ವಿಚಾರಿಸಿದರು. ಆಗ ಇಬ್ಬರ ಹೆಸರುಗಳು ದೊರೆತವು. ಅವರ ಬಗ್ಗೆ ಸ್ಥಳೀಯರೊಡನೆ ವಿಚಾರಿಸಿದಾಗ, ಒಂದು ಮನೆಯಲ್ಲಿ ಇದ್ದವರು ನಿವೃತ್ತ ಬ್ಯಾಂಕ್ ಅಧಿಕಾರಿಯಾಗಿದ್ದು ಅವರು ಪತ್ನಿಯೊಡನೆ ವಾಸವಾಗಿದ್ದರು. ಎರಡನೆಯ ವ್ಯಕ್ತಿ ತಮಿಳುನಾಡು ಮೂಲದವನಾಗಿದ್ದು, ತೋಟದ ಮನೆಯಲ್ಲಿ ಕುಟುಂಬದೊಡನೆ ವಾಸವಾಗಿದ್ದ. ಆತನಿಗೆ 18 ವರ್ಷ ವಯಸ್ಸಿನ ಒಬ್ಬನೇ ಮಗನಿದ್ದು, ಪಿಯುಸಿ ಓದುತ್ತಿದ್ದ. ಕಾಲೇಜಿನ ಹಾಸ್ಟೆಲ್ನಲ್ಲಿ ವಾಸಮಾಡುತ್ತಿದ್ದಾನೆ ಎಂದೂ ತಿಳಿಯಿತು.
ಹದಿಹರೆಯದ ಯುವಕರೇ ಶ್ರೀಕಾಂತ್ನನ್ನು ಇರಿದಿದ್ದ ಕಾರಣ ಪೊಲೀಸರು ಆ ವಿದ್ಯಾರ್ಥಿಯ ಬಗ್ಗೆ ವಿಚಾರಿಸಲು ಅವನ ಕಾಲೇಜಿಗೆ ಹೋಗಿ ಪ್ರಾಂಶುಪಾಲರನ್ನು ಸಂರ್ಪಸಿದರು. ಆ ಯುವಕನನ್ನು ಪ್ರತೀಕ್ ಎಂದು ಗುರುತಿಸಿದ ಪ್ರಾಂಶುಪಾಲರು, ‘ನಮ್ಮ ಕಾಲೇಜಿನ ಕುಖ್ಯಾತ ರೌಡಿ ವಿದ್ಯಾರ್ಥಿಗಳಲ್ಲಿ ಪ್ರತೀಕ್ ಒಬ್ಬ. ಅವನಿಗೆ ಕಾಲೇಜಿನಿಂದ ಹೊರಹಾಕಲು ಹಲವಾರು ಬಾರಿ ನೋಟೀಸ್ ಕೊಟ್ಟಿದ್ದೇವೆ. ಆದರೆ ಆತನ ತಂದೆ ಕಾಲೇಜಿಗೆ ಸಾಕಷ್ಟು ಡೊನೇಷನ್ ಕೊಟ್ಟಿರುವ ಕಾರಣ ಆಡಳಿತ ವರ್ಗ ಅವನನ್ನು ಹೊರಹಾಕಲು ನನಗೆ ಅನುಮತಿಯನ್ನು ನೀಡಿಲ್ಲ’ ಎಂದರು. ಘಟನೆಯಾದ ದಿನ ಪ್ರತೀಕ್ ಎಲ್ಲಿದ್ದ ಎಂದು ಪೊಲೀಸರು ಅವನ ಹಾಸ್ಟೆಲ್ನಲ್ಲಿ ವಿಚಾರಿಸಿದಾಗ ಆತ ಬಹುತೇಕ ದಿನಗಳು ಹಾಸ್ಟೆಲ್ನಲ್ಲಿ ಇರದೇ ತಂದೆಯ ಕಾರಿನಲ್ಲಿ ಮೋಜು ಮಾಡಲು ಹೋಗುತ್ತಿರುತ್ತಾನೆ ಎಂದು ತಿಳಿಯಿತು. ಆ ಹಿಂದಿನ ಐದು ದಿನಗಳ ಕಾಲ ಆತ ಹಾಸ್ಟೆಲ್ನಲ್ಲಿ ಇರಲಿಲ್ಲ ಎಂದೂ ತಿಳಿಯಿತು. ಅಷ್ಟರಲ್ಲಿ ಪ್ರತೀಕ್ ಹಾಸ್ಟಲ್ಗೆ ಬಂದ. ತನ್ನ ಸಹಪಾಠಿಗಳು ತನ್ನನ್ನು ಪೊಲೀಸರಿಗೆ ತೋರಿಸುತ್ತಿದ್ದುದನ್ನು ನೋಡಿದ ಪ್ರತೀಕ್ ಓಡತೊಡಗಿದ. ಆಗ ಅವನನ್ನು ಹಿಡಿದ ಪೊಲೀಸರು ಅವನನ್ನು ತಮ್ಮೊಡನೆ ಠಾಣೆಗೆ ಕರೆದೊಯ್ದರು.
ಠಾಣೆಯಲ್ಲಿ ಎರಡೇ ನಿಮಿಷಗಳ ವಿಚಾರಣೆಯ ನಂತರ ತಾನು ಮತ್ತು ತನ್ನ ಸ್ನೇಹಿತರು ಹಾದಿಯಲ್ಲಿ ಸ್ಕೂಟರ್ ಮೇಲೆ ಹೋಗುತ್ತಿದ್ದ ಯುವಕನೊಬ್ಬನಿಗೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿ ಅವನಿಗೆ ಇರಿದಿದ್ದಾಗಿ ಪ್ರತೀಕ್ ಒಪ್ಪಿಕೊಂಡ. ‘ಕೊಲೆಯಾದ ಶ್ರೀಕಾಂತ್ನಿಗೂ ನಿನಗೂ ಪರಿಚಯವಿತ್ತೇ, ಯಾವ ಕಾರಣಕ್ಕಾಗಿ ಅವನ ಕೊಲೆ ಮಾಡಿದೆ?’ ಎಂದು ಪ್ರಶ್ನಿಸಿದಾಗ, ಪ್ರತೀಕ್ ಹೀಗೆಂದ:
‘ನನಗೆ ಗಾಂಜಾ ಸೇವನೆ ಹಾಗೂ ಮದ್ಯಪಾನ ಮಾಡುವ ಚಟವಿದೆ. ಅಂದು ರಾತ್ರಿ ನಾನು ಮತ್ತು ನನ್ನ ಸ್ನೇಹಿತರು ಒಂದು ನಿರ್ಜನ ರಸ್ತೆಗೆ ಹೋಗಿ ಅಲ್ಲಿ ಗಾಂಜಾ ಸೇವಿಸಿದೆವು. ನಂತರ ಏನಾದರೂ ಸಾಹಸವನ್ನು ಮಾಡಿ ಅದನ್ನು ನನ್ನ ಇನ್ಸಾ ್ಟಗ್ರಾಂ ಪೇಜಿನಲ್ಲಿ ಹಾಕಬೇಕೆಂಬ ಮನಸ್ಸಾಯಿತು. ನನಗೆ ಇನ್ಸಾ ್ಟಗ್ರಾಂನಲ್ಲಿ ಜಾಕಿ ಎನ್ನುವ ಹೆಸರಿನಲ್ಲಿ ಅಕೌಂಟ್ ಇದ್ದು ಹತ್ತು ಸಾವಿರ ಫಾಲೋವರ್ಗಳಿದ್ದಾರೆ. ನನಗೆ ದೊಡ್ಡ ರೌಡಿಯಾಗಿ ಎಲ್ಲರನ್ನೂ ಹೆದರಿಸಿಕೊಂಡು ಓಡಾಡಬೇಕೆಂಬ ಮನಸ್ಸಿದೆ. ನಾನು ಯಾರದ್ದಾದರೂ ಕೊಲೆ ಮಾಡಿ ಅದರ ವಿಡಿಯೋವನ್ನು ಇನ್ಸಾ ್ಟಗ್ರಾಂನಲ್ಲಿ ಹಾಕಿ ಖ್ಯಾತನಾಗಬೇಕೆಂಬ ಮನಸ್ಸಾಯಿತು. ಅದರಂತೆ ಯಾರನ್ನು ಕೊಲೆ ಮಾಡಬೇಕೆಂದು ಹುಡುಕುತ್ತಿರುವಾಗ ನಿರ್ಜನ ರಸ್ತೆಯಲ್ಲಿ ಸ್ಕೂಟರ್ ನಡೆಸುತ್ತಿದ್ದ ಒಬ್ಬ ಯುವಕ ಕಣ್ಣಿಗೆ ಬಿದ್ದ. ಕಾರನ್ನು ಚಲಾಯಿಸುತ್ತಿದ್ದ ನಾನು ಆ ಸ್ಕೂಟರ್ಗೆ ಡಿಕ್ಕಿ ಹೊಡೆದೆ. ಆತ ಕೆಳಗೆ ಬಿದ್ದ ಕೂಡಲೇ ನನ್ನ ಸ್ನೇಹಿತನಿಗೆ ನನ್ನ ಮೊಬೈಲ್ ಫೋನನ್ನು ಕೊಟ್ಟು ಕಾರಿನ ಹೆಡ್ಲೈಟ್ ಬೆಳಕಿನಲ್ಲಿ ನಾನು ಮಾಡುವ ಸಾಹಸವನ್ನು ವಿಡಿಯೋ ಮಾಡಲು ಹೇಳಿದೆ. ನಂತರ ನಾನು ಕಾರು ನಿಲ್ಲಿಸಿ ಆ ಯುವಕನ ಬಳಿಗೆ ಹೋಗಿ ಅವನ ಬೆನ್ನಿಗೆ ಮತ್ತು ಎದೆಗೆ ಚಾಕುವಿನಿಂದ ಇರಿದೆ. ಈ ದೃಶ್ಯದ ವಿಡಿಯೋ ರೆಕಾರ್ಡಿಂಗ್ ನನ್ನ ಸ್ನೇಹಿತ ಮಾಡಿದ.
ಆನಂತರ ನಾವೆಲ್ಲರೂ ಕಾರಿನಲ್ಲಿ ಕುಳಿತು ಅಲ್ಲಿಂದ ಹೊರಟೆವು. ಸ್ನೇಹಿತರನ್ನು ಒಂದು ಜಾಗದಲ್ಲಿ ಬಿಟ್ಟು ನಾನು ಮನೆಗೆ ಹೋದೆ. ತಂದೆಗೆ ನಡೆದ ವಿಷಯವನ್ನು ತಿಳಿಸಿದೆ. ಅವರು ನೀನು ಇಲ್ಲಿ ಇರಬೇಡ ಚೆನ್ನೈಗೆ ಹೋಗು ಎಂದು ಹಣ ಕೊಟ್ಟರು. ಅದೇ ರಾತ್ರಿ ಟ್ಯಾಕ್ಸಿ ಮಾಡಿಕೊಂಡು ಸ್ನೇಹಿತರೊಂದಿಗೆ ಚೆನ್ನೈಗೆ ಹೋದೆ. ಸ್ವಲ್ಪ ದಿನಗಳ ನಂತರ ನನ್ನ ಬಗ್ಗೆ ಯಾರಿಗೂ ಗೊತ್ತಾಗಿಲ್ಲ, ಮನೆಗೆ ಬಾ ಎಂದು ಅಪ್ಪ ಹೇಳಿದ ಮೇರೆಗೆ ಈಗಷ್ಟೇ ಮರಳಿದ್ದೇನೆ’. ಪ್ರತೀಕ್ನ ಮೊಬೈಲ್ನಲ್ಲಿ ಶ್ರೀಕಾಂತ್ನನ್ನು ಕೊಲೆ ಮಾಡಿದ ವಿಡಿಯೋ ರೆಕಾರ್ಡಿಂಗ್ ಇತ್ತು. ಆ ವಿಡಿಯೋವನ್ನು ಪ್ರತೀಕ್ ಆ ರಾತ್ರಿ ತನ್ನ ಜತೆಗಿದ್ದ ಮೂವರು ಸ್ನೇಹಿತರು ಮತ್ತು ಇತರ ಆಪ್ತಮಿತ್ರರಿಗೆ ವಾಟ್ಸ್ಆಪ್ ಮೂಲಕ ಕಳುಹಿಸಿದ್ದ. ಇದಲ್ಲದೆ ಅವನ ಸಂಪರ್ಕ ಪಟ್ಟಿಯಲ್ಲಿ ಆ ವಲಯದ ಎಲ್ಲ ಕುಖ್ಯಾತ ರೌಡಿಗಳ ಹೆಸರುಗಳು ಇದ್ದವು. ನಂತರ ಅವನನ್ನು ಮತ್ತು ಸ್ನೇಹಿತರನ್ನು ಬಂಧಿಸಲಾಯಿತು. ಕೊಲೆಗೆ ಉಪಯೋಗಿಸಿದ ರಕ್ತಸಿಕ್ತ ಚಾಕುವನ್ನು ಎಸೆದಿರುವ ಜಾಗವನ್ನು ತೋರಿಸಿ ಠಾಣೆಗೆ ಮರಳುವಾಗ ಪ್ರತೀಕ್ ಪೊಲೀಸರಿಂದ ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸಿದ. ಆಗ ತನಿಖಾಧಿಕಾರಿ ಅವನ ಕಾಲಿಗೆ ಗುಂಡು ಹಾರಿಸಿದರು. ಅವನು ಗಾಯಗೊಂಡು ಕೆಳಗೆ ಬಿದ್ದ. ಅತನನ್ನು ಆಸ್ಪತ್ರೆಗೆ ಸೇರಿಸಲಾಯಿತು.
ಮುಂದೆ ಪ್ರತೀಕ್ನ ಜತೆಯಿದ್ದ ಮೂವರಲ್ಲದೆ ಕೊಲೆ ಪ್ರಕರಣವನ್ನು ಬಚ್ಚಿಟ್ಟ ಅವನ ತಂದೆಯನ್ನೂ ಬಂಧಿಸಿ ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ತನಿಖೆ ಮುಗಿದಿದ್ದು ಪ್ರಕರಣದ ವಿಚಾರಣೆ ನ್ಯಾಯಾಲಯದ ಮುಂದಿದೆ. ‘ನಮ್ಮ ತೀರ್ವನಗಳಿಂದಲೇ ನಮ್ಮ ಭವಿಷ್ಯವು ರೂಪಿತವಾಗುತ್ತವೆ’ ಎಂದ ಅಮೆರಿಕನ್ ಲೇಖಕ ಟೋನಿ ರಾಬಿನ್ಸ್. ಪ್ರತೀಕ್ನ ತಂದೆ ತನ್ನ ಮಗನ ಎಲ್ಲ ಕುಕೃತ್ಯಗಳನ್ನು ಸಹಿಸಿಕೊಳ್ಳಲು ತೀರ್ವನಿಸಿದ್ದರಿಂದಲೇ ಅಮಾಯಕನೊಬ್ಬನ ಸಾವಾಗಿ ಐದು ಜನರು ಜೈಲುಕಾಣುವಂತಾಯಿತು. ದಂಡ ಪ್ರಯೋಗ ಮಾಡದಿದ್ದರೆ ಮಕ್ಕಳು ಹಾಳು ಎಂಬ ಗಾದೆ ಈ ಕಾರಣಕ್ಕಾಗಿಯೇ ರೂಪಿತವಾಯಿತೇನೋ?
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)