ಕಾಡಿನ ಕ್ರೌರ್ಯ- ಖುಷಿ

Forest
Published on

ಪುರಾತನ ಶಿಲೆಗಳು, ದಟ್ಟವಾದ ಅರಣ್ಯ, ಜಲಪಾತಗಳಂತಹ ರಮಣೀಯ ಸ್ಥಳಗಳು, ಪಶ್ಚಿಮ ಘಟ್ಟದ ಹಸಿರು ಹೊದಿಕೆ, ಅದರಲ್ಲಿ ಹಾಸುಹೊಕ್ಕಾಗಿರುವ ವನ್ಯಜೀವಿಗಳು, ಅವುಗಳ ಕುತೂಹಲಕರ ಬದುಕು... ಇವೆಲ್ಲದರ ಸಂಗಮವೇ ‘ವೈಲ್ಡ್ ಕರ್ನಾಟಕ’ ಸಾಕ್ಷ್ಯತ್ರ.

ಬೇಟೆ ಹುಡುಕುತ್ತ ಬಂದ ಹುಲಿಯನ್ನೇ ಹೆದರಿಸಿ ಪುನಃ ಕಾಡಿಗೆ ಕಳುಹಿಸಿ ಅಟ್ಟಹಾಸ ಮೆರೆದ ನೀರುನಾಯಿಗಳ ಬಗ್ಗೆ ನೀವು ಕೇಳಿದ್ದೀರಾ? ಚಿರತೆ ತನ್ನನ್ನು ಬೇಟೆ ಆಡಲು ಧಾವಿಸುತ್ತಿದ್ದು ಎಲ್ಲರೂ ಸುರಕ್ಷಿತ ಜಾಗಕ್ಕೆ ತೆರಳುವಂತೆ ವಾಚ್ ಡಾಗ್ ಥರಾ ಮರದ ತುದಿಯಲ್ಲಿ ಅವಿತು ಮುನ್ಸೂಚನೆ ನೀಡುವ ಲಂಗೂರ್​ನ ಚಾಣಾಕ್ಷತನವನ್ನು ನೀವೆಂದಾದರೂ ಗಮನಿಸಿದ್ದೀರಾ? ಇವು ಬಿಬಿಸಿಯೋ, ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ಲೋ ಅಥವಾ ಇನ್ಯಾವುದೋ ಅನಿಮೇಷನ್ ಚಿತ್ರದ್ದೋ ದೃಶ್ಯಗಳಲ್ಲ. ನಮ್ಮ ರಾಜ್ಯದ ಅರಣ್ಯದಲ್ಲೇ ಚಿತ್ರೀಕರಣಗೊಂಡ, ಮೈನವಿರೇಳಿಸುವ ರೋಚಕ ದೃಶ್ಯಗಳ ಸರಣಿ. ಆನೆ, ಲಂಗೂರ್, ಆಟರ್ಸ್, ಕರಡಿ, ಹಾರ್ನ್​ಬಿಲ್, ಕ್ರಾಬ್​ಗಳು, ಚಿರತೆ, ಬ್ಲಾಕ್ ಪ್ಯಾಂಥರ್ಸ್, ನವಿಲು, ಕಾಡು ಬೆಕ್ಕು, ಡ್ರಾಗನ್, ವಿಷಕಾರಿ ಸರ್ಪಗಳು, ನೂರಾರು ಬಗೆಯ ಕಪ್ಪೆಗಳು, ತರಹೇವಾರಿ ಜಲಚರಗಳು ಕಾಣ ಸಿಗುವ ಏಕೈಕ ಪ್ರದೇಶ ನಮ್ಮ ಕರ್ನಾಟಕ. ಅಷ್ಟು ಮಾತ್ರವಲ್ಲದೇ ಜಗತ್ತಿನ ಯಾವ ಮೂಲೆಯಲ್ಲೂ ಸಿಗದಷ್ಟು ಹುಲಿಗಳು ಬೀಡುಬಿಟ್ಟಿರುವ ತಾಣವಿದು. ಇದೇ ಜ. 17ರಂದು ಬಿಡುಗಡೆಯಾಗಿರುವ ವನ್ಯಜೀವಿಗಳ ಜೀವನ ಆಧಾರಿತ 52 ನಿಮಿಷಗಳ ಸಾಕ್ಷ್ಯಚಿತ್ರ ‘ವೈಲ್ಡ್ ಕರ್ನಾಟಕ’ ಕೇವಲ ಪ್ರಾಣಿ ಪ್ರಿಯರ ಗಮನವನ್ನು ಮಾತ್ರವಲ್ಲದೆ ಸಿನಿಪ್ರಿಯರ ಮನಸ್ಸನ್ನೂ ಸೆಳೆದಿದೆ. ರಾಜ್ಯದ ಬಹುತೇಕ ವನ್ಯಜೀವಿ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು ಡ್ರೋನ್ ಕ್ಯಾಮೆರಾ ಮೂಲಕ ಸೆರೆ ಹಿಡಿದಿರುವ ದೃಶ್ಯಗಳು ಅವಿಸ್ಮರಣೀಯವಾಗಿವೆ. ರಿಕ್ಕಿ ಕೇಜ್ ಹಿನ್ನೆಲೆ ಸಂಗೀತ ಇದರ ಪ್ಲಸ್ ಪಾಯಿಂಟ್. ಸದ್ಯ ಇದು ಕೇವಲ ಇಂಗ್ಲಿಷ್​ನಲ್ಲಿ ತೆರೆ ಕಂಡಿದೆ. ಸದ್ಯದಲ್ಲೇ ಕನ್ನಡ ಅವತರಣಿಕೆಯೂ ಬರಲಿದೆ.

ಅತ್ಯಾಧುನಿಕ 4ಕೆ ತಂತ್ರಜ್ಞಾನ ಬಳಸಿ, ಸಾಕಷ್ಟು ದೃಶ್ಯಗಳನ್ನು ಡ್ರೋನ್ ಕ್ಯಾಮೆರಾದಲ್ಲಿ ಚಿತ್ರಿಸಲಾಗಿದೆ. ಘೊರ್ಪಡೆ ಒಡೆತನದ ಸ್ಮೈಓರ್ ಕೂಡ ಸಹಾಯ ಮಾಡಿದೆ. ಸಾಕ್ಷ್ಯತ್ರಕ್ಕೆ ಅಂದಾಜು 6 ಕೋಟಿ ರೂ. ವೆಚ್ಚವಾಗಿದೆ. ಪ್ರದರ್ಶನದಿಂದ ಬರುವ ಲಾಭವನ್ನು ಟೈಗರ್ ಫೌಂಡೇಷನ್​ಗೆ ನೀಡಲಿದ್ದೇವೆ. | ಅಮೋಘ ವರ್ಷ ನಿರ್ದೇಶಕ

ಎಲ್ಲೆಲ್ಲಿ ಚಿತ್ರೀಕರಣ?

ನಾಗರಹೊಳೆ, ಬಂಡೀಪುರ, ಕಬಿನಿ, ಭದ್ರಾವತಿ, ಪಶ್ಚಿಮ ಘಟ್ಟಗಳು, ನೇತ್ರಾಣಿ, ಹೊಸಪೇಟೆ ಹೀಗೆ ಹತ್ತಾರು ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಮಹಿಳೆಯರು ಸೇರಿದಂತೆ 25 ಮಂದಿ ಸತತ 4 ವರ್ಷ ಕಾಡಿನೊಳಗೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಒಟ್ಟು 400 ತಾಸುಗಳಷ್ಟು ದೀರ್ಘ ಚಿತ್ರೀಕರಣ ಆಗಿತ್ತು. ಅದನ್ನು ಎಡಿಟ್ ಮಾಡಿ 52 ನಿಮಿಷಕ್ಕೆ ಇಳಿಸುವುದು ನಿಜಕ್ಕೂ ಸವಾಲಾಗಿತ್ತು. ರೋಚಕತೆಗೆ ಭಂಗ ಬರದಂತೆ ಎಡಿಟ್ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ಕನ್ನಡ ಅವತರಣಿಕೆ ಶೀಘ್ರ

ಇನ್ನೊಂದು ತಿಂಗಳಲ್ಲಿ ವೈಲ್ಡ್ ಕರ್ನಾಟಕ ಕನ್ನಡ ಭಾಷೆಯಲ್ಲಿಯೂ ತೆರೆ ಕಾಣಲಿದ್ದು, ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ ಪ್ರದರ್ಶನ ಕಾಣಲಿದೆ. ಅದಕ್ಕಾಗಿ ನಟ-ನಿರ್ದೇಶಕ ರಿಷಭ್ ಶೆಟ್ಟಿ ಸಹಾಯ ಮಾಡುತ್ತಿದ್ದಾರೆ. ಹಿನ್ನೆಲೆ ಧ್ವನಿಗಾಗಿ ನಟ ಅನಂತ್​ನಾಗ್​ರನ್ನು ಸಂರ್ಪಸಿದ್ದೇವೆ. ಅವರು ಒಪ್ಪುವ ನಿರೀಕ್ಷೆ ಇದೆ ಎನ್ನುತ್ತಾರೆ ಕಲ್ಯಾಣ್ ವರ್ವ.

ದೃಶ್ಯಕ್ಕಾಗಿ ಕಾಯುವ ತಪಸ್ಸು

ವನ್ಯಜೀವಿಗಳ ಒಂದೊಂದು ದೃಶ್ಯದ ಚಿತ್ರೀಕರಣಕ್ಕೂ ಕೆಲವೊಮ್ಮೆ ದಿನಗಟ್ಟಲೆ, ವಾರಗಟ್ಟಲೆ ಕಾಯಬೇಕಾಗುತ್ತದೆ. ವೈಲ್ಡ್ ಕರ್ನಾಟಕ ತಂಡಕ್ಕೂ ಹೀಗಾಗಿದೆ. ಕೆಲವು ದೃಶ್ಯ ಸೆರೆಹಿಡಿಯಲು ತಿಂಗಳುಗಟ್ಟಲೆ ಕಾಯಬೇಕಾಯಿತು. ಒಮ್ಮೆಯಂತೂ ಹಾವಿನ ಚಲನವಲನ ಚಿತ್ರೀಕರಿಸಲು ಮಳೆಗಾಲದವರೆಗೂ ಕಾದ ಕೆಲ ಉದಾಹರಣೆಗಳಿವೆ. ಆನೆಗಳು ಈ ತಂಡವನ್ನು ಸುಸ್ತು ಮಾಡಿದ್ದಷ್ಟು ಇನ್ಯಾವ ಪ್ರಾಣಿಗಳೂ ಮಾಡಿಲ್ಲ. ಆನೆಗಳ ಹಿಂಡು ಚಿತ್ರೀಕರಿಸಲು ಹೆಚ್ಚು ಸಮಯ ಹಿಡಿಯಿತು. ಕಾಡುಬೆಕ್ಕು- ಹಾವಿನ ಸಂಭಾಷಣೆಯನ್ನು ಈ ತಂಡದ ಪೂಜಾ ರಾಥೋಡ್ ಸೆರೆ ಹಿಡಿದಿದ್ದಾರೆ.

ನೇತ್ರಾಣಿಯಲ್ಲಿ ಅಂಡರ್ ವಾಟರ್ ಶೂಟ್​ಗೆಂದೇ ಒಂದು ವಾರ ಸ್ಕೂಬಾ ಡೈವಿಂಗ್ ತರಬೇತಿ ಪಡೆದೆ. ಯಾರ ಕಣ್ಣಿಗೂ ಕಾಣದ ಜಲಚರಗಳು ನಮ್ಮ ನೇತ್ರಾಣಿಯಲ್ಲಿ ಇರುವುದನ್ನು ಕಂಡು ನಿಜಕ್ಕೂ ಆಶ್ಚರ್ಯವಾಯಿತು. ಇವುಗಳ ಮುಂದೆ ಮನುಷ್ಯ ಎಷ್ಟು ಸಣ್ಣವನು ಅನಿಸಿತು. | ಕಲ್ಯಾಣ್ ವರ್ಮ ನಿರ್ದೇಶಕ

| ಪವನ್ ವಸಿಷ್ಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net