ಸಾಹಿತ್ಯ ಸಂಸ್ಕೃತಿಯ ಪ್ರಜ್ಞಾರಂಗ

VV 5
Published on

ಒಮ್ಮೆ ಪ್ರೊ. ಎಲ್.ಎಸ್. ಶೇಷಗಿರಿರಾಯರು ಮಕ್ಕಳ ವಿಶ್ವಕೋಶವೊಂದಕ್ಕೆ ಬೇಕೆಂದು ‘ಅಧ್ಯಾತ್ಮ’ ಎಂಬ ವಿಷಯದ ಕುರಿತು ಲೇಖನವನ್ನು ಬರೆದುಕೊಡಲು ಡಿವಿಜಿ ಅವರ ಬಳಿ ಕೇಳಿದ್ದರಂತೆ. ಇಷ್ಟು ಗಹನವಾದ ವಿಚಾರವನ್ನು ಮಕ್ಕಳಿಗೆ ಅರ್ಥವಾಗುವಂತೆ ಹೇಗೆ ಬರೆಯುವುದೆಂದು ಮೊದಲು ಒಪ್ಪದಿದ್ದರೂ ಸಾಕಷ್ಟು ಚರ್ಚೆಯ ಬಳಿಕ ಒಪ್ಪಿಕೊಂಡು ಡಿವಿಜಿಯವರು ಲೇಖನವನ್ನು ಸಿದ್ಧಪಡಿಸಿದರಂತೆ. ಶೇಷಗಿರಿರಾಯರು ಲೇಖನವನ್ನು ಪಡೆದುಕೊಳ್ಳಲು ಹೋದಾಗ ಡಿವಿಜಿ ಅವರು, ‘ಇಂದು ಇಲ್ಲಿಗೆ ರಂಗನಾಥಶರ್ಮರೆಂಬ ದೊಡ್ಡ ವಿದ್ವಾಂಸರು ಬರುತ್ತಾರೆ. ಒಮ್ಮೆ ಅವರಿಗೆ ತೋರಿಸಿ ಇಲ್ಲಿ ಯಾವುದೇ ಶಾಸ್ತ್ರವಿರುದ್ಧವಾದ ವಿಚಾರವಾಗಲೀ ಲೋಪವಾಗಲೀ ಇಲ್ಲವೆಂದು ಖಾತರಿ ಮಾಡಿಕೊಂಡ ಮೇಲೆ ನಿಮಗೆ ಕಳುಹಿಸಿಕೊಡುತ್ತೇನೆ’ ಎಂದು ಹೇಳಿದರಂತೆ. ಮಕ್ಕಳಿಗೆಂದು ಬರೆದ ಲೇಖನದಲ್ಲೂ ಗುಣದೋಷಗಳ ಕುರಿತು ಎಚ್ಚರವಹಿಸುವ ಸ್ವಭಾವ ಗುಂಡಪ್ಪನವರದ್ದಾದರೆ ಅವರ ಲೇಖನವನ್ನೂ ಪರಿಶೀಲಿಸುವಂತಹ ಪಾಂಡಿತ್ಯ ಶ್ರೀಯುತ ರಂಗನಾಥಶರ್ಮರದು.

ಮಹಾಮಹೋಪಾಧ್ಯಾಯ ವಿದ್ವಾನ್ ಎನ್. ರಂಗನಾಥಶರ್ಮರ ಪಾಂಡಿತ್ಯದ ಆಯಾಮ ಬಹುಮುಖವಾದದ್ದು. ಅನೇಕ ಶಾಸ್ತ್ರಗಳಲ್ಲಿದ್ದ ಆಳವಾದ ಜ್ಞಾನ, ಅವೆಲ್ಲವುಗಳ ಆಂತರ್ಯವನ್ನು ತಿಳಿದು ಅವನ್ನು ತಮ್ಮ ಲೇಖನ-ಪ್ರವಚನ-ಅಧ್ಯಾಪನಗಳಲ್ಲಿ ಅವರು ಸರಳವಾಗಿ ತಿಳಿಸುತ್ತಿದ್ದ ಪರಿಯಂತೂ ಅಸಾಧಾರಣ. ಕೇವಲ ಸಂಸ್ಕೃತದಲ್ಲಷ್ಟೇ ಪಾಂಡಿತ್ಯವನ್ನು ಗಳಿಸಿ ಅಷ್ಟಕ್ಕೇ ಸೀಮಿತವಾಗದೆ ಕನ್ನಡಸಾಹಿತ್ಯಕ್ಕೂ ರಂಗನಾಥಶರ್ಮರು ನೀಡಿದ ಕೊಡುಗೆ ಅಪಾರ. ಇಂತಹ ಹಿರಿಯರನ್ನು ಕುರಿತು ಅನೇಕ ಹಿರಿಯರೇ ಹೇಳಿದ ಮಾತುಗಳನ್ನು ಪ್ರಸ್ತಾವಿಸುವುದು ಯುಕ್ತವಾದೀತು. ವಾಲ್ಮೀಕಿಮಹರ್ಷಿಗಳ ರಾಮಾಯಣವನ್ನು ಒಂಬತ್ತು ಸಂಪುಟಗಳಲ್ಲಿ ಅನುವಾದಿಸಿದ ಅವರನ್ನು ಕುರಿತು ಅದರ ಮುನ್ನುಡಿಯಲ್ಲಿ ಡಿವಿಜಿಯವರು ಹೇಳಿದ್ದನ್ನೇ ಉದ್ಧರಿಸುವುದಾದರೆ, ‘ಶ್ರೀರಂಗನಾಥಶರ್ಮರು ಸಂಸ್ಕೃತವ್ಯಾಕರಣಶಾಸ್ತ್ರದಲ್ಲಿ ಆಳವೂ ವಿಶಾಲವೂ ಆಗಿ ಪ್ರಮಾಣಭೂತವಾದ ಪಾಂಡಿತ್ಯವನ್ನು ಸಂಪಾದಿಸಿರುವವರು. ಅವರ ಕನ್ನಡಭಾಷಾವಿದ್ವತ್ತೆಯೂ ಅಂಥದ್ದು. ಸಾಹಿತ್ಯದಲ್ಲಿ ಅವರು ಸಹೃದಯರಾಗಿ ಶೋಧನಶೀಲರಾಗಿ ಕಾವ್ಯಮರ್ಮವನ್ನು ಕಂಡು ತೋರಿಸಬಲ್ಲರು. ಅವರು ಸದಾಚಾರನಿಷ್ಠರು, ಸರಳರು. ಒಂದು ಮಹಾಕಾವ್ಯದ ಅಂತರಂಗವನ್ನು ಅನುಭವದಿಂದ ತಿಳಿಯಬೇಕಾದರೆ ಯಾವ ಮನಃಪ್ರಸಾದವೂ ತತ್ತ್ವನಿಷ್ಠೆಗಳೂ ಪ್ರಥಮಸಿದ್ಧತೆಗಳೋ ಅವೆರಡನ್ನೂ ಅವರಲ್ಲಿ ನಾನು ಕಂಡಿದ್ದೇನೆ...’ ಎಂದು ಬರೆದಿದ್ದಾರೆ.

ಅಷ್ಟಲ್ಲದೆ ‘ಶ್ರೀವಿಷ್ಣುಪುರಾಣ, ಶ್ರೀಮದ್ಭಾಗವತ, ಅಮರಕೋಶ, ವಾಕ್ಯಪದೀಯ, ರಾಘವಾಂಕನ ಹರಿಶ್ಚಂದ್ರಚರಿತೆ, ಹದಿಬದೆಯ ಧರ್ಮ’ ಮೊದಲಾದವು ಅವರ ಅನುವಾದಿತ ಕೃತಿಗಳಲ್ಲಿ ಪ್ರಮುಖವಾದವು. ಸಂಸ್ಕೃತದಲ್ಲಿ ‘ಭಾಷಾಂತರಪಾಠಃ, ಸಂಸ್ಕೃತಂ ನಾಮ ದೈವೀವಾಕ್, ಶ್ರೀಶಂಕರಚರಿತಾಮೃತಮ್ ಕುಸುಮಾಂಜಲಿಃ, ಶ್ರೀಬಾಹುಬಲಿವಿಜಯಂ, ಏಕಚಕ್ರಂ’ ಮೊದಲಾದ ಅನೇಕ ಪುಸ್ತಕಗಳನ್ನೂ ಕಾವ್ಯನಾಟಕಗಳನ್ನೂ ಬರೆದಿದ್ದಾರೆ. ‘ಹೊಸಗನ್ನಡ ವ್ಯಾಕರಣ, ಲೌಕಿಕನ್ಯಾಯಗಳು, ವ್ಯಾಕರಣಶಾಸ್ತ್ರದ ಪರಿವಾರ, ವಾಲ್ಮೀಕಿಮುನಿಗಳ ಹಾಸ್ಯಪ್ರವೃತ್ತಿ’ ಮೊದಲಾದವು ಅವರ ಲೋಕಪ್ರಿಯವಾದ ಕನ್ನಡದ ಸ್ವತಂತ್ರ ಕೃತಿಗಳು. ಡಿವಿಜಿಯವರ ಪ್ರಸಿದ್ಧವಾದ ‘ಮರುಳಮುನಿಯನ ಕಗ್ಗ’ವನ್ನು ಸಂಪಾದಿಸಿ ಕನ್ನಡಲೋಕಕ್ಕೆ ದೊರಕಿಸಿಕೊಟ್ಟಿದ್ದೇ ರಂಗನಾಥಶರ್ಮರು. ಅವರ ಎಂಬತ್ತರ ವಯಸ್ಸಿನಲ್ಲಿ ಒಮ್ಮೆ ‘ಬಳ್ಳಿಗಳು ಮರವನ್ನು ಪ್ರದಕ್ಷಿಣಾಕಾರವಾಗಿಯೇ ಸುತ್ತಿಕೊಂಡು ಬೆಳೆಯುತ್ತವೆ’ ಎಂಬುದನ್ನು ಗಮನಿಸಿ ಅದನ್ನು ಖಚಿತಪಡಿಸಿಕೊಳ್ಳಲು ಮಲ್ಲಿಗೆ ಬಳ್ಳಿಯೊಂದನ್ನು ಅಪ್ರದಕ್ಷಿಣಾಕಾರವಾಗಿ ಕಟ್ಟಿಟ್ಟರೂ ಮುಂದೆ ಅದೂ ಪ್ರದಕ್ಷಿಣಾತ್ಮಕವಾಗಿಯೇ ಬೆಳೆದುದ್ದನ್ನು ಗಮನಿಸಿದ್ದರಂತೆ. ಅವರನ್ನು ಕುರಿತು ‘...ರಂಗನಾಥಶರ್ಮರಷ್ಟು ಅಧಿಕಪ್ರಮಾಣದಲ್ಲಿ ಮತ್ತು ಶ್ರೇಷ್ಠ ಮಟ್ಟದಲ್ಲಿ ಋಷಿಋಣಸಂದಾಯ ಮಾಡಿದವರು ಇಡೀ ದೇಶದಲ್ಲಿ ಬೆರಳೆಣಿಕೆಯಷ್ಟು ದೊರೆತಾರು. ಅಧ್ಯಯನ ಅಧ್ಯಾಪನಗಳಲ್ಲಿಯೂ ಲೇಖನ ಪ್ರವಚನಗಳಲ್ಲಿಯೂ ಅವರು ತೋರಿದ ನಿತಾಂತ ಶ್ರದ್ಧೆಯಂತೂ ಅನುಪಮವಾದುದು, ವಿರಳವಾದುದು. ಪಂಡಿತ ಸಮುದಾಯದಲ್ಲಿ ಬರವಣಿಗೆಯ ಅಭ್ಯಾಸವನ್ನು ರೂಢಿಸಿಕೊಂಡ ವಿರಳರಲ್ಲೊಬ್ಬರು ಶರ್ಮರು...’ ಎಂದು ನಾಡೋಜ ಎಸ್.ಆರ್.ರಾಮಸ್ವಾಮಿಯವರು ಬರೆದಿದ್ದಾರೆ. ‘ಹಳಗನ್ನಡವೂ ಸೇರಿದಂತೆ ಕನ್ನಡ ಸಾಹಿತ್ಯದ ಅತ್ಯುತ್ತಮವರ್ಗದ ಎಲ್ಲ ವಾಙ್ಮಯವನ್ನೂ ಬಲ್ಲ ಬಲ್ಲಿದರು ಇವರು. ಕನ್ನಡವ್ಯಾಕರಣಕ್ಕೂ ಪರಮಾಚಾರ್ಯರು. ತಮ್ಮ ಹೆಚ್ಚಿನ ಸಾಹಿತ್ಯಕೃಷಿಯನ್ನೆಲ್ಲ ಸಂಸ್ಕೃತ-ಕನ್ನಡ ಸಂಗಮವೆಂಬಂತೆ ರೂಪಿಸಿ ಅಭಿಜಾತ ಶಾಸ್ತ್ರ ಕಾವ್ಯಗಳ ಅನುವಾದ ಮತ್ತು ವ್ಯಾಖ್ಯಾನ ಪರಂಪರೆಯ ಪ್ರಶಸ್ತಪಂಕ್ತಿಗೇ ಪಾವನರೆಂಬಂತೆ ನಿಂತವರು’’ ಎಂದು ಶತಾವಧಾನಿ ಗಣೇಶ್ ಅವರು ಹೇಳುತ್ತಾರೆ. ಇಂಥ ಮೇರು ವಿದ್ವಾಂಸ ರಂಗನಾಥಶರ್ಮರ ಮೂರು ಕೃತಿಗಳು ಹಾಗೂ ಅವರ ಸಾಹಿತ್ಯಸಂಪದದ ಅಂತರ್ಜಾಲಾವೃತ್ತಿಯ ಲೋಕಾರ್ಪಣೆ ಇಂದು (ಫೆ. 9) ಬೆಂಗಳೂರಿನಲ್ಲಿ ನಡೆಯಲಿದೆ. ವೇದಿಕೆ ಕಾರ್ಯಕ್ರಮದಲ್ಲಿ ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಡಾ. ಎಸ್.ಆರ್. ಲೀಲಾ, ಡಾ. ಆರ್. ಗಣೇಶ್, ಪ್ರೊ. ಸಿ.ಎಸ್. ಯೋಗಾನಂದ , ಶಶಿಕಿರಣ್ ಬಿ.ಎನ್. ಪಾಲ್ಗೊಳ್ಳಲಿದ್ದಾರೆ.

(ಗ್ರಂಥಋಣ: ದೀಪ್ತಶೃಂಗಗಳು - ಎಸ್.ಆರ್. ರಾಮಸ್ವಾಮಿ, ಬ್ರಹ್ಮಪುರಿಯ ಭಿಕ್ಷುಕ, ವಾಣೀವಾಹನ - ಶತಾವಧಾನಿ ಡಾ. ಆರ್. ಗಣೇಶ್) ವಿದ್ವತ್ತು, ವಿನಯಗಳಿಗೆ ಹೆಸರಾದ ಮಹಾಮಹೋಪಾಧ್ಯಾಯ ವಿದ್ವಾನ್ ಎನ್. ರಂಗನಾಥಶರ್ಮರು ಕನ್ನಡ ಹಾಗೂ ಸಂಸ್ಕೃತ ಸಾರಸ್ವತಲೋಕಕ್ಕೆ ನೀಡಿದ ಕೊಡುಗೆ ಅಪಾರ. ಅವರ ಸ್ಮರಣಾರ್ಥ ಇಂದು (ಫೆ. 9) ಬೆಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ.

| ಗಣೇಶ ಕೊಪ್ಪಲತೋಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net