

ಬಸವಾದಿ ಶರಣರ ಕ್ರಾಂತಿಕಾರಕ ಹೆಜ್ಜೆಗಳನ್ನು ಮುಂದಿಟ್ಟುಕೊಂಡು ನಡೆಯುವ ಪ್ರಯತ್ನ ಮುಂದುವರಿದಾಗ- ನಾಸ್ತಿಕರೆಂಬ ಹಣೆಪಟ್ಟಿ ಕಟ್ಟಲಾಯಿತು. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಹಿಂದ ಚಳವಳಿಯನ್ನು ಆರಂಭಿಸಿದರು. ಬುದ್ಧ, ಬಸವ ಮತ್ತು ಅಂಬೇಡ್ಕರ ತತ್ತ್ವವನ್ನು ಆಧರಿಸಿದ ಈ ಚಳವಳಿಯನ್ನು ಬೆಂಬಲಿಸಿದೆ. ಈ ಚಳವಳಿಯಲ್ಲಿ ಧಾರ್ವಿುಕರು ಭಾಗವಹಿಸಲು ಹಿಂಜರಿಯುತ್ತಿದ್ದು, ಧೈರ್ಯವಾಗಿ ಭಾಗವಹಿಸಿ, ಚಳವಳಿಯನ್ನು ಪ್ರೋತ್ಸಾಹಿಸಲಾಯಿತು. ಮುಂದೆ ಅವರು ರಾಷ್ಟ್ರೀಯ ಪಕ್ಷವನ್ನು ಸೇರಿದರು; ಮುಖ್ಯಮಂತ್ರಿಗಳಾದರು. ಅದೇನೆಯಿದ್ದರೂ ಹೋರಾಟದ ನೇತಾರನೊಬ್ಬ, ಮುಖ್ಯಮಂತ್ರಿ ಆದದ್ದು ನನ್ನ ಬೆಂಬಲಕ್ಕೆ ಸಿಕ್ಕ ಯಶಸ್ಸು. ಲಿಂಗಾಯಿತೇತರ ಈ ಸಂಘಟನೆಯನ್ನು ಬೆಂಬಲಿಸಿದ್ದರಿಂದ ಲಿಂಗಾಯತರು ನನ್ನ ವಿರುದ್ಧ ಹರಿಹಾಯ್ದರು. ತನ್ಮೂಲಕ ಸ್ವಜಾತಿಯರ ವಿಕೋಪಕ್ಕೆ ಒಳಗಾದ ಸಂದರ್ಭ. ಸ್ವಜಾತಿಯವರ ಒಲವು ಗಳಿಸುವ ನಿಟ್ಟಿನಲ್ಲಿ ಬಿ.ಎಸ್.ಯಡಿಯೂರಪ್ಪನವರನ್ನು ಬೆಂಬಲಿಸಲಾಯಿತು. ಅರಮನೆ ಆವರಣದಲ್ಲಿ ನಡೆದಂತಹ ಮಠಾಧೀಶರ ಸಮಾವೇಶದಲ್ಲಿ ಭಾಗವಹಿಸಿ, ಸೂಕ್ತ ಅನಿಸಿಕೆ ವ್ಯಕ್ತಪಡಿಸಲಾಯಿತು. ಇದು ಸಹ ಸ್ವಜಾತಿಯ ಬೆಂಬಲಕ್ಕಾಗಿ. ಸ್ವಜಾತಿ ಮತ್ತು ಅನ್ಯಜಾತಿ ಎರಡನ್ನೂ ಸಮನ್ವಯಗೊಳಿಸಿಕೊಂಡು ಹೋಗುವುದು ಅನಿವಾರ್ಯ. ಸ್ವಜಾತಿ ಜತೆಗೆ ಸಾಗುವುದು ಸುಲಭ. ಸ್ವಜಾತಿಯನ್ನು ಒಳಗೊಂಡು ಮಾನವಪ್ರೀತಿಯೊಟ್ಟಿಗೆ ಸಾಗುವುದು ಸವಾಲಿನಿಂದ ಕೂಡಿದೆ. ಜಾತಿಯ ಒಳಗಿದ್ದು ಜಾತಿಯನ್ನು ಮೀರಿದಾಗ ವಿಶ್ವಮಾನವ. ಜಾತಿ ಮಾನವ ಹಂತಹಂತವಾಗಿ ವಿಶ್ವಮಾನವ ಆಗಬೇಕು. ಸ್ವತಂತ್ರಧರ್ಮ ಹೋರಾಟದಲ್ಲಿ ಭಾಗವಹಿಸಿದ್ದರಿಂದ ಸಮಾಜ ವಿಭಜನೆಯ ಆರೋಪ. ಈಗ ಉಭಯತರಲ್ಲೂ ಒಗ್ಗೂಡಬೇಕೆಂಬ ಭಾವನೆ ಮೂಡುತ್ತಿದೆ. ಅಂದು ವಿಭಜನೆ; ಇಂದು ಸಂಘಟನೆ. ಸಂಘಟನೆ ಮುಖಾಂತರ ಸಾಮಾಜಿಕ ಸಾಮರಸ್ಯ. ಸಾಮಾಜಿಕ ಸಾಮರಸ್ಯ ತಿಳಿದುಕೊಂಡಂತೆ ಸುಲಭವಲ್ಲ: ಏನೆಲ್ಲ ನಕಾರಾತ್ಮಕ ಧೋರಣೆಗಳು- ಕೆಲವರು ದ್ವೇಷಸಾಧನೆಯತ್ತ ಒಲವು ತೋರುತ್ತಾರೆ; ಅದನ್ನೇ ಮುಂದುವರಿಸಿಕೊಂಡು ಹೋಗಬೇಕೆನ್ನುತ್ತಾರೆ. ಇನ್ನುಕೆಲವರಿಗೆ ಪ್ರತಿಷ್ಠೆ. ಪ್ರತಿಷ್ಠೆಯನ್ನು ಮುಂದಿಟ್ಟುಕೊಂಡರೆ ಸಾಮರಸ್ಯಕ್ಕೆ ಅಡ್ಡಿ. ಸಾಮಾಜಿಕ ಸಾಮರಸ್ಯಕ್ಕೆ ಮುಂದಾದಾಗ ಕೆಲವರು ಅಸೂಯೆಪಡುವುದು ಸಹಜ.
ಸಾಮಾಜಿಕ ಸಾಮರಸ್ಯ ಸ್ಥಾಪಿಸುವತ್ತ ಪೀಠಾಧೀಶರು ಗಮನಹರಿಸಬೇಕಾದ ಅನಿವಾರ್ಯತೆ. ಸಾಮಾಜಿಕ ಸಾಮರಸ್ಯದ ಹಿಂದೆ ಯಾವುದೇ ಪಟ್ಟಭದ್ರ ಹಿತಾಸಕ್ತಿ ಇರುವುದಿಲ್ಲ. ಸರ್ವಜನಾಂಗದವರು ಒಗ್ಗೂಡ ಬೇಕೆಂಬ ಹಂಬಲವಷ್ಟೆ. ಈ ಹಿಂದೆ ಧಾರ್ವಿುಕ, ವೈದಿಕ ಮತ್ತು ಪೌರಾಣಿಕ ಚೌಕಟ್ಟಿನೊಳಗೆ ಧಾರ್ವಿುಕರ ಸಮಾವೇಶ ನಡೆದಿದೆ. 2020ರಲ್ಲಿ ಬೆಂಗಳೂರು ನಗರದಲ್ಲಿ ಬೃಹತ್ ಗಣಮೇಳ ನಡೆದು, ಇತಿಹಾಸದ ಪುಟವನ್ನು ಸೇರಿತು. ಸರ್ವ ಜನಾಂಗದವರನ್ನು ಸೇರಿಸುವ ಪ್ರಯತ್ನ: ಜಾತಿ ಮತವನ್ನು ಬೆಸೆಯುವ ಕಾರ್ಯ ಜರುಗಿತು. ಒಗ್ಗೂಡಿಸುವ ಕಾರ್ಯಕ್ಕೆ ಹೃದಯವೈಶಾಲ್ಯತೆ ಬೇಕು. ಒಗ್ಗೂಡುವಿಕೆಯೆಂದರೆ, ಒಳಗೊಳ್ಳುವಿಕೆ. ಒಳಗೊಳ್ಳುವಿಕೆಯಿಂದ ಸಮಗ್ರತೆ. ನಮ್ಮದು ಬಹುತ್ವ ಭಾರತ. ಏಕತೆಯಲ್ಲಿ ವಿಭಿನ್ನತೆ. ಅದುವೇ ಭಾರತದ ವೈವಿಧ್ಯತೆ. ಸಮಗ್ರತೆಯಲ್ಲಿ ಪರಿಪೂರ್ಣತೆ.
ಜಾತಿ, ಮತ, ಪಂಥ ಮೊದಲಾದ ಸಂಕೀರ್ಣತೆಯನ್ನು ಮೀರಿ ಸಾಮಾಜಿಕ ಸಾಮರಸ್ಯವನ್ನು ಸಾಧಿಸಬೇಕಾಗಿದೆ. ವಿಶ್ವಮಾನವ ಪ್ರಜ್ಞೆ ಜಾಗೃತ ಆಗಬೇಕಿದೆ. ಜಾತಿ ಪ್ರಜ್ಞೆ ಇದೆ; ವಿಶ್ವಮಾನವ ಪ್ರಜ್ಞೆಯನ್ನು ಸಾರಬೇಕಿದೆ. ಧಾರ್ವಿುಕರು, ಸಂತರು, ಶರಣರು, ವಿಶ್ವಮಾನವತ್ವದ ಪ್ರೇರಕರು; ಪ್ರಸಾರಕರು. ಜಾತಿ-ಜನಾಂಗದ ಜಂಜಡದಲ್ಲಿ ಸಿಲುಕಿರುವ ಮಾನವ ಪ್ರಪಂಚದಲ್ಲಿ ವಿಶ್ವಮಾನವ ಪ್ರಜ್ಞೆಯನ್ನು ಜಾಗೃತಪಡಿಸುವುದು ಮತ್ತು ಅವರೊಂದಿಗೆ ಸಾಗುವುದು ಸಮಕಾಲೀನ ಸಂದರ್ಭದ ಹೊಣೆಗಾರಿಕೆ ಆಗಿದೆ. ಬೌದ್ಧಿಕ ಚಿಂತನೆ ಜಾಗೃತವಾದಲ್ಲಿ ಎಂಥದೇ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಬಹುದು. ಇಲ್ಲವಾದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿಗೆ ಜರ್ಜರಿತರಾಗುವ ಸಂದರ್ಭ. ಬೌದ್ಧಿಕ ಜಾಗೃತಿಯು ಸಾಮಾಜಿಕ ಹಾಗೂ ವೈಯಕ್ತಿಕ ಸಂವರ್ಧನೆ ಉಂಟು ಮಾಡುತ್ತದೆ. ಬೌದ್ಧಿಕತೆಯಲ್ಲಿ ಸ್ಪಷ್ಟತೆ ಇದೆ; ಸ್ಪಷ್ಟತೆಯಲ್ಲಿ ಬೌದ್ಧಿಕತೆ ಎದ್ದು ಕಾಣುತ್ತದೆ. ಅಸ್ಪಷ್ಟತೆಯಿಂದಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ಅಸಮರ್ಥತೆ. ಸಮರ್ಥವಾಗಿ ನಿಭಾಯಿಸುವಲ್ಲಿ ಬೌದ್ಧಿಕತೆಯ ಬೆಂಬಲ. ಸಂತರು-ಶರಣರ ಎರಡು ಶ್ವಾಸಕೋಶಗಳೆಂದರೆ, ಬದ್ಧತೆ ಮತ್ತು ಪ್ರಬುದ್ಧತೆ. ಅದರಿಂದಾಗಿ ಅವರು ಎಲ್ಲದನ್ನು ಸಾಧಿಸುವರು: ನಿರಾತಂಕವಾಗಿ ಸಾಗುವರು.
ಸಮಾಜವೇನೋ ಸಮಗ್ರತೆಯೊಟ್ಟಿಗೆ ಸಾಗಬೇಕೆನ್ನುತ್ತದೆ. ರಾಜಕಾರಣ ಜಾತಿ- ಜಾತಿಗಳ ನಡುವಿನ ಬಾಂಧವ್ಯವನ್ನು ಕೆಡಿಸಲು ಮುಂದಾಗುತ್ತದೆ. ಒಡೆದು ಆಳುವ ನೀತಿ. ಅದರಿಂದಾಗಿ ಸಾಮಾಜಿಕ ಸಾಮರಸ್ಯಕ್ಕೆ ಪೆಟ್ಟು. ಸಾಮಾಜಿಕ ಸಾಮರಸ್ಯ ಕದಡಿದ ಸಂದರ್ಭವೆಂದರೆ ಒಳಮೀಸಲಾತಿ ಮತ್ತು ಜನಗಣತಿ. ಜನಗಣತಿ ವೈಜ್ಞಾನಿಕವಾಗಿ ನಡೆದರೆ ತೊಂದರೆಯಿಲ್ಲ. ಬಲಿಷ್ಠ ಸಮುದಾಯಗಳ ಶಕ್ತಿಯನ್ನು ಕುಂದಿಸುವಲ್ಲಿ, ಜನಗಣತಿಯಂಥ ಪ್ರಕ್ರಿಯೆಗೆ ರಾಜಕಾರಣ ಮೆತ್ತಿಕೊಂಡಿರುವುದು ದುರದೃಷ್ಟಕರ. ಈ ಕಾರಣಕ್ಕಾಗಿ ರಾಜ್ಯ ರಾಜಕಾರಣದಲ್ಲಿ ಗೊಂದಲಗಳು ಸೃಷ್ಟಿ ಆಗಿವೆ. ಜಾತಿವಾರು ಜನಗಣತಿ ವಿಷಯ ಈಗ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ.
ಜನಗಣತಿಯಂಥ ಸೂಕ್ಷ್ಮ ವಿಚಾರವು ಸಾಮಾಜಿಕ ಸಾಮರಸ್ಯ ಕದಡಬಾರದು. ಸೂಕ್ತರೀತಿಯಲ್ಲಿ ಜನಗಣತಿ ನಡೆದರೆ ಯಾವ ಅಭ್ಯಂತರವಿಲ್ಲ. ಅದರ ಮುಖಾಂತರ ಕೆಲ ಸಮುದಾಯಗಳನ್ನು ಸದೆ ಬಡಿಯಲು ಮುಂದಾದರೆ, ಸುಮ್ಮನೆ ಕೂಡ್ರಲು ಸಾಧ್ಯವಿಲ್ಲ. ಎಲ್ಲ ಸಮುದಾಯಗಳು ಕೂಡಿಕೊಂಡು ಅದನ್ನು ವಿರೋಧಿಸಬೇಕಾಗುತ್ತದೆ. ತನ್ಮೂಲಕ ಸಮಾಜ ಸಂಘಟಿತವಾಗಿ ಹೋರಾಡಬೇಕಾಗುತ್ತದೆ. ಸಮಾಜದ ಅಭಿವೃದ್ಧಿಗಾಗಿ ಸ್ವಾಮಿಗಳು ಮತ್ತು ಮಠಗಳು. ಸಮಾಜದ ಪ್ರಗತಿಯನ್ನು ಮುಂದಿಟ್ಟುಕೊಂಡು ಪ್ರತಿಷ್ಠೆ ಮತ್ತು ಅಸಹನೆಯನ್ನು ಬಿಟ್ಟುಕೊಟ್ಟು ಒಂದಾಗಬೇಕಾಗುತ್ತದೆ; ಸಂಘಟನೆ ಪ್ರದರ್ಶಿಸಬೇಕಾಗುತ್ತದೆ. ಅಂಥ ಸಂದರ್ಭ ಬಂದಾಗ, ಒಗ್ಗೂಡಿ ಎದುರಿಸಬೇಕಾಗುತ್ತದೆ. ಈಗಿನಿಂದಲೇ ಈ ಬಗ್ಗೆ ಸಿದ್ಧತೆ ನಡೆಯಲಿ. ಸಂಪರ್ಕ ಏರ್ಪಡುವಂತಾಗಲಿ.
(ಲೇಖಕರು ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಪೀಠಾಧೀಶರು)