

ಆ ಮೂಲಕ ಎಲ್ಲೆಂದರಲ್ಲಿ ವಾಯುದಾಳಿ ಎಸಗುವ ‘ಸ್ವಾತಂತ್ರ್ಯ’ವನ್ನು ಗಳಿಸಿಕೊಳ್ಳುವುದು ಮತ್ತು ಇರಾನಿ ಸುರಕ್ಷಾಪಡೆಗಳ ನಾಯಕವರ್ಗವನ್ನು ನಿಮೂಲನಗೊಳಸಿ ಆ ದೇಶದ ಪ್ರತಿಕ್ರಿಯಾ ಸಾಮರ್ಥ್ಯವನ್ನು ಮಿತಿಗೊಳಿಸುವುದು; ನಂತರ ಇರಾನಿ ಮೂಲಭೂತವಾದಿ ಸರ್ಕಾರದ ಪತನಕ್ಕಾಗಿ ಪ್ರಯತ್ನಿಸುವುದು. ಈ ಲೇಖನ ಬರೆಯುವ ಹೊತ್ತಿಗೆ ಇಸ್ರೇಲ್ ತನ್ನ ಮೊದಲ ಗುರಿಗಳನ್ನು ಬಹುಪಾಲು ಸಾಧಿಸಿಯಾಗಿದೆ. ನಾಲ್ಕು ದಿನಗಳ ವೈಮಾನಿಕ, ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳಲ್ಲಿ ಅದು ನತಾಂಝ್ , ಇಸ್ಪಹಾನ್, ಫಾದೋದಲ್ಲಿನ ಅಣು ಸಂಯಂತ್ರಗಳನ್ನು ಹಾಗೂ ಅರಾಕ್ಲ್ಲಿನ ಭಾರಜಲ ಉತ್ಪಾದನಾ ಘಟಕವನ್ನು ತೀವ್ರ ಹಾನಿಗೆ ಒಳಪಡಿಸಿದೆ.
ಜತೆಗೆ ಹನ್ನೆರಡರಿಂದ ಇಪ್ಪತ್ತು ಅಣುವಿಜ್ಞಾನಿಗಳನ್ನೂ ಹತ್ಯೆಗೈದಿದೆ. ನೆಲಮಟ್ಟದಿಂದ 382 ಅಡಿಗಳ ಆಳದಲ್ಲಿರುವ ನತಾಂಝå್ ಅಣು ಸಂಯಂತ್ರದ ಮೇಲಿನ ದಾಳಿಯಂತೂ ಅದೆಷ್ಟು ಘಾತಕವಾಗಿತ್ತೆಂದರೆ ಅಲ್ಲಿ ಯುರೇನಿಯಂ ಅನ್ನು ಅಣ್ವಸ್ತ್ರ ತಯಾರಿಕೆಯ ಮಟ್ಟಕ್ಕೆ ಸಂಸ್ಕರಿಸುವುದರಲ್ಲಿ ತೊಡಗಿದ್ದ ಹದಿನಾಲ್ಕ ಸಾವಿರದಷ್ಟು ಸೆಂಟ್ರಿಫ್ಯೂಜ್ಗಳು ಕ್ಷತಿಗೊಂಡಿವೆ ಮತ್ತು ಅಲ್ಲಿ ಅಣುವಿಕಿರಣ ಸೋರಿಕೆಯಾಗಿದೆ! ಅಂದರೆ ಇರಾನ್ನ ಅಣ್ವಸ್ತ್ರ ಕನಸು ‘ಸದ್ಯಕ್ಕೆ’ ಉರಿದುಹೋಗಿದೆ.
ಇನ್ನು ಇರಾನ್ನ ಸುರಕ್ಷಾ ಸಾಮರ್ಥ್ಯ ಕ್ಷತಿಗೊಂಡಿರುವುದನ್ನು ಗಮನಿಸುವುದಾದರೆ, ಅದರ ವಾಯು ಸುರಕ್ಷಾ ವ್ಯವಸ್ಥೆಯನ್ನು ಧ್ವಂಸಗೊಳಿಸಿ ಇರಾನಿ ಯುದ್ಧವಿಮಾನಗಳಿಗೆ ಗಗನಕ್ಕೇರುವ ಅವಕಾಶವೇ ಇಲ್ಲದಂತೆ ಮಾಡಿದೆ ಮತ್ತು ತನ್ನ ವಿಮಾನಗಳಿಗೆ ಇರಾನಿ ವಾಯುಪ್ರದೇಶದಲ್ಲಿ ನಿರಾತಂಕವಾಗಿ ಸಂಚರಿಸುವ ಅವಕಾಶವನ್ನು ಸಾಧಿಸಿಕೊಂಡಿದೆ; ಆ ಇರಾನಿ ಗಡಿಗಳ ಸುರಕ್ಷೆಗಾಗಿ ಇರುವ ರಾಷ್ಟ್ರೀಯ ಸೇನೆ ಮತ್ತು ಆಯತೊಲ್ಲಾ ಆಲಿ ಖಮೆನೀ ನೇತೃತ್ವದ ಇಸ್ಲಾಮಿಕ್ ಮೂಲಭೂತವಾದಿ ಸರ್ಕಾರದ ರಕ್ಷಣೆಗಾಗಿಯೇ ಇರುವ ವಿಶೇಷ ಪಡೆ ‘ಇಸ್ಲಾಮಿಕ್ ರೆವಲ್ಯೂಷನರಿ
ಗಾರ್ಡ್ಸ್’ ಕೋರ್ನ ಮುಖ್ಯಸ್ಥರೂ ಸೇರಿದಂತೆ ಇನ್ನೂರಕ್ಕೂ ಹೆಚ್ಚಿನ ಸೇನಾಧಿಕಾರಿಗಳನ್ನು ಕೊಂದಿದೆ. ಜತೆಗೆ, ನೂರಕ್ಕೂ ಅಧಿಕ ಇರಾನಿ ಸೇನಾ ಠಿಕಾಣೆಗಳನ್ನು ಇಸ್ರೇಲ್ ನಾಶಗೊಳಿಸಿದೆ. ಇವುಗಳಲ್ಲಿ ಮುಖ್ಯವಾದುದು ಈಶಾನ್ಯ ಇರಾನ್ನ ಜಝಾನ್ ಪಟ್ಟಣದಲ್ಲಿದ್ದ ಸೇನಾ ನೆಲೆ. ಅಲ್ಲಿದ್ದ ಸೈನಿಕರೊಂದಿಗೆ ಇಡೀ ಶಸ್ತ್ರ ಮತ್ತು ತೈಲ ಭಂಡಾರವೂ ಉರಿದುಹೋಗಿದೆ. ಅಗ್ನಿಯ ಜ್ವಾಲೆಗಳು ಹಲವು ಮೈಲುಗಳವರೆಗೂ ಕಾಣಿಸುತ್ತಿದ್ದವು. ಇಸ್ರೇಲ್ನ ಈ ಕೃತ್ಯಗಳಿಂದ ಇರಾನಿ ಸೇನೆ ಅದೆಷ್ಟು ಧೃತಿಗೆಟ್ಟಿದೆಯೆಂದರೆ ಅದರ ಉಪಮುಖ್ಯಸ್ಥ ಆಲಿ ಅಸ್ಘರ್ ಹೈಯಾಝಿ ಸೇರಿದಂತೆ ಹಲವರು ಸೇನಾಧಿಕಾರಿಗಳು ವಿದೇಶಗಳಲ್ಲಿ ಆಶ್ರಯಕ್ಕಾಗಿ ಪ್ರಯತ್ನಿಸತೊಡಗಿದ್ದಾರೆ!
ಅಣು ಮತ್ತು ಸೇನಾ ಸೌಲಭ್ಯಗಳ ಜತೆ ಹಲವಾರು ನಾಗರಿಕ ಸೇವಾ ವ್ಯವಸ್ಥೆಗಳೂ ಇಸ್ರೇಲಿ ದಾಳಿಗೊಳಗಾಗಿವೆ. ಈ ಪೈಕಿ ಮುಖ್ಯವಾದದ್ದು ರಾಜಧಾನಿ ತೆಹರಾನ್ನ ವಾಯವ್ಯದಲ್ಲಿರುವ ಉಪನಗರ ಶೆಹರಾನ್ನಲ್ಲಿದ್ದ ಬೃಹತ್ ತೈಲ ಸಂಗ್ರಹಾಗಾರ. ಅದರಲ್ಲಿ ಎದ್ದ ಜ್ವಾಲೆ ನನಗೆ ನೆನಪಿಸುವುದು 1980ರ ಸೆಪ್ಟೆಂಬರ್ನಲ್ಲಿ ಯುದ್ಧದ ಪ್ರಾರಂಭದ ದಿನಗಳಲ್ಲೇ ಇರಾಕಿ ದಾಳಿಗೊಳಗಾಗಿ ಹೊತ್ತಿ ಉರಿದ ಅಬದಾನ್ ನಗರದ ಬೃಹತ್ ತೈಲ ಶುದ್ಧೀಕರಣ ಕೇಂದ್ರ.
ಅಂತಹ ಜ್ವಾಲೆ ನಾಲ್ಕೂವರೆ ದಶಕಗಳ ನಂತರ ಶೆಹರಾನ್ನಲ್ಲಿ ಮತ್ತೆ ಕಾಣಿಸಿಕೊಂಡಿದೆ. ಈ ಎಲ್ಲ ಕ್ರಮಗಳಿಂದ ಇಸ್ರೇಲ್ ಸಾಧಿಸಬಯಸುವ ಅಂತಿಮ ಉದ್ದೇಶ ತೆಹರಾನ್ನಲ್ಲಿರುವ ಮೂಲಭೂತವಾದಿ ಸರ್ಕಾರವನ್ನು ಕಿತ್ತೊಗೆಯುವುದಾಗಿದೆ. ದಾಳಿಗಳ ನಡುವೆಯೇ ಇರಾನಿ ಜನತೆಯನ್ನು ಉದ್ದೇಶಿಸಿ ಮಾತನಾಡಿರುವ ಇಸ್ರೇಲಿ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು, ಇರಾನಿ ಮೂಲಭೂತವಾದಿ ಧಾರ್ವಿುಕ ನಾಯಕ ಆಲಿ ಖಮೆನೀ ಮತ್ತವರ ಸಹಚರಿಗಳನ್ನು ‘ಧಾರ್ವಿುಕ ಠಕ್ಕರು’ ಎಂದು ಬಣ್ಣಿಸಿ, ಅವರ ದಬ್ಬಾಳಿಕೆಯ ವಿರುದ್ಧ ಸಿಡಿದೇಳುವಂತೆ ಇರಾನಿ ಜನತೆಗೆ ಕರೆಕೊಟ್ಟಿದ್ದಾರೆ.
ಇಂತಹ ಭಯಾನಕ ಸನ್ನಿವೇಶದಲ್ಲಿ ಏಳುವ ಪ್ರಶ್ನೆಗಳೆಂದರೆ ಇರಾನ್ ಮೇಲೆ ಈ ಬಗೆಯ ದಾಳಿಗಳನ್ನು ಎಸಗುವ, ಆ ಮೂಲಕ ಅಲ್ಲಿನ ಸರ್ಕಾರವನ್ನೇ ಕಿತ್ತೊಗೆಯುವಂತಹ ಗಂಭೀರ ಪ್ರಯತ್ನದ ಅಗತ್ಯ ಇಸ್ರೇಲ್ಗಿತ್ತೇ ಮತ್ತು ಈ ಕಾರ್ಯಾಚರಣೆಯಲ್ಲಿ ಆ ಯೆಹೂದಿ ರಾಷ್ಟ್ರ ಏಕಾಂಗಿಯಾಗಿದೆಯೇ ಎನ್ನವುದು.
ಧಾರ್ವಿುಕ ನೇತಾರ ಆಯತೊಲ್ಲಾ ರುಹೊಲ್ಲಾ ಖೊಮೇನಿ 1979ರ ಫೆಬ್ರವರಿಯಲ್ಲಿ ‘ಕ್ರಾಂತಿ’ಯೆಸಗಿ ಅರಸ ರೆಝಾ ಶಾ ಪಹ್ಲವಿಯವರನ್ನು ಪದಚ್ಯುತಗೊಳಿಸಿ ತೆಹರಾನ್ನಲ್ಲಿ ಇಸ್ಲಾಮಿಕ್ ಮೂಲಭೂತವಾದಿ ಆಡಳಿತವನ್ನು ಸ್ಥಾಪಿಸಿದರಷ್ಟೆ. ಅವರಿಗೆ ಅಂದು ಜನಬೆಂಬಲವೂ ಇದ್ದದ್ದು ನಿಜ. ರೆಝಾ ಶಾರ ನಿರಂಕುಶಾಧಿಕಾರದ ವಿರುದ್ಧ ಜನತೆ ದನಿಯೆತ್ತಿತ್ತು, ಅವರ ಮೇಲೆ ಗುಂಡು ಹಾರಿಸಲು ಅರಸ ಶಾ ನೀಡಿದ ಆಜ್ಞೆಯನ್ನು ಸೈನಿಕರು ತಿರಸ್ಕರಿಸಿದ್ದು ಅರಸೊತ್ತಿಗೆಯನ್ನು ಕಿತ್ತೊಗೆಯಲು ಇರಾನ್ ಒಟ್ಟಾರೆಯಾಗಿ ಬಯಸಿದ್ದುದರ ದ್ಯೋತಕ. ಅದು ಆ ದೇಶದ ಆಂತರಿಕ ವಿಷಯ.
ಆ ಬಗ್ಗೆ ಹೊರಗಿನವರಿಗೇನೂ ಬಹಿರಂಗ ತಕರಾರಿಲ್ಲ. ಆದರೆ ಪ್ರಶ್ನೆಯೆದ್ದದ್ದು ಖೊಮೇನಿ ಸರ್ಕಾರ ಹೊರಜಗತ್ತಿನೊಂದಿಗೆ ವರ್ತಿಸತೊಡಗಿದ್ದರ ಕುರಿತಾಗಿ. ತಮ್ಮ ಮೂಲಭೂತವಾದಿ ನಿಲುವುಗಳನ್ನು ಪ್ರತಿಪಾದಿಸುವ ಮತ್ತು ಅನುಷ್ಠಾನಗೊಳಿಸುವ ಹಾದಿಯಲ್ಲಿ ಖೊಮೇನಿ ಇತರೆಲ್ಲ ದೇಶಗಳನ್ನು ಶತ್ರುಗಳಂತೆ ಕಾಣತೊಡಗಿದರು ಮತ್ತು ಎಲ್ಲ ಪ್ರಮುಖ ದೇಶಗಳನ್ನೂ ತಮ್ಮದೇ ಬಗೆಯಲ್ಲಿ ಬಣ್ಣಿಸತೊಡಗಿದರು. ಅಮೆರಿಕಾವನ್ನು ‘ಮಹಾ ಸೈತಾನ’ ಎಂದು ಹೆಸರಿಸಿದ ಅವರು ಅಂದಿನ ಸೋವಿಯತ್ ಯೂನಿಯನ್ ಮತ್ತು ಕಮ್ಯೂನಿಸ್ಟ್ ಚೀನಾವನ್ನು ‘ಮನುಷ್ಯರ ತಲೆಬುರುಡೆಗಳಿಂದ ಗೋಪುರಗಳನ್ನು ಕಟ್ಟುವ ದೇಶಗಳು’ ಎಂದು ಕರೆದರು. ಕ್ರಾಂತಿಗೆ ಮೊದಲು ತಮಗೆ ಒಂದುವರ್ಷ ಆಶ್ರಯ ನೀಡಿದ್ದ ಫ್ರಾನ್ಸ್ ಅನ್ನು ಅವರು ಜರೆದದ್ದು ‘ಗೃಹಬಳಕೆಯ ವಸ್ತುಗಳಿಗಾಗಿ ತಮ್ಮನ್ನೇ ಮಾರಿಕೊಳ್ಳುವ ಗೃಹಿಣಿಯರ ದೇಶ’ ಎಂದು! ಅದು ಅಷ್ಟಕ್ಕೇ ನಿಲ್ಲಲಿಲ್ಲ. ಕೊಮೇನಿ ಇಸ್ಲಾಮಿಕ್ ಜಗತ್ತಿನ ನಾಯಕತ್ವಕ್ಕಾಗಿ ಆಸೆಪಟ್ಟರು.
ಇಸ್ಲಾಮಿಕ್ ಜಗತ್ತು ಧಾರ್ವಿುಕವಾಗಿ ಸುನ್ನಿ ಪ್ರಧಾನವಾದುದು ಮತ್ತು ಜನಾಂಗೀಯವಾಗಿ ಅರಬ್ ಪ್ರಧಾನವಾದುದು. ಹೀಗಾಗಿ ಸುನ್ನಿ ಇಸ್ಲಾಂನ ತವರು ಸುನ್ನಿ ಪ್ರಧಾನ ಸೌದಿ ಅರೇಬಿಯಾ ಮತ್ತು ಆರ್ಥಿಕವಾಗಿ ಬಲಾಢ್ಯವಾದ ಸುನ್ನಿ ಪ್ರಧಾನ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಇಸ್ಲಾಮಿಕ್ ಜಗತ್ತಿನ ನಾಯಕ ದೇಶಗಳು. ಅರಬ್ ಅಲ್ಲದ ಟರ್ಕಿ ಸಹಾ ಸುನ್ನಿ ಪಂಥಕ್ಕೇ ಸೇರಿದ್ದ ಕಾರಣ ಅದು ಸೌದಿ ನಾಯಕತ್ವವನ್ನು ಅಂದು ಒಪ್ಪಿಕೊಂಡಿತ್ತು ಮತ್ತು ಗೌರವಿಸುತ್ತಲೂ ಇತ್ತು. ಪಾಕಿಸ್ತಾನ, ಮಲೇಷ್ಯಾ, ಇಂಡೋನೇಷ್ಯಾಗಳದ್ದೂ ಅದೇ ನಿಲುವು. ಆ ಸುನ್ನಿ ದೇಶಗಳು ಶಿಯಾ ರಾಷ್ಟ್ರವಾದ ಇರಾನ್ ಅನ್ನು ನಾಯಕನನ್ನಾಗಿ ಸ್ವೀಕರಿಸಲು ಸಾಧ್ಯವೇ ಇರಲಿಲ್ಲ. ಅರಸ ರೆಝಾ ಶಾರಿಗೆ ಅಂತಹ ಕನಸೂ ಇರಲಿಲ್ಲ. ಹೀಗಾಗಿ ಅವರ ಕಾಲದಲ್ಲಿ ಇರಾನ್ ‘ಎಲ್ಲರೊಳಗೊಂದಾಗಿ’ ನೆಮ್ಮದಿಯಾಗಿಯೇ ಇತ್ತು.
ಏಕೈಕ ಶಿಯಾ ರಾಷ್ಟ್ರವಾದ ಇರಾನ್ಗೆ ಸುನ್ನಿ ಜಗತ್ತಿನಲ್ಲೂ ಬೆಂಬಲ ಗಳಿಸಿಕೊಳ್ಳಹೊರಟ ಖೊಮೇನಿ ಹಾಕಿದ ಲೆಕ್ಕಾಚಾರ ಆಗ ಅರಬ್ ಜಗತ್ತಿನಲ್ಲೇ ಮೂಲೆಗುಂಪಾಗತೊಡಗಿದ್ದ ಪ್ಯಾಲೆಸ್ತೀನೀಯರ ಪರವಾಗಿ ನಿಲ್ಲುವುದು ತನಗೆ ಅನುಕೂಲಕರವಾಗುತ್ತದೆ ಎಂದು.
ಖೊಮೇನಿ ಅಧಿಕಾರಕ್ಕೆ ಬರುವ ಹೊತ್ತಿಗಾಗಲೇ ಇಸ್ರೇಲ್ನೊಂದಿಗೆ ಸ್ನೇಹ ಸ್ಥಾಪಿಸುವಲ್ಲಿ ಈಜಿಪ್ಟ್ ದೃಢ ಹೆಜ್ಜೆ ಇಟ್ಟಾಗಿತ್ತು. ಜೋರ್ಡಾನ್ ಆ ಪ್ರಯತ್ನ ಮಾಡದಿದ್ದರೂ ಅದಕ್ಕೆ ಪ್ಯಾಲೆಸ್ತೀನಿಯನ್ನರ ಬಗ್ಗೆ ಯಾವುದೇ ಪ್ರೀತಿ ಇರಲಿಲ್ಲ. ಯಾಕೆಂದರೆ ದಶಕದ ಹಿಂದೆ ಜೋರ್ಡಾನ್ನಲ್ಲಿ ಆಶ್ರಯ ಪಡೆದಿದ್ದ ಪ್ಯಾಲೆಸ್ತೀನಿಯನ್ನರು ಆಶ್ರಯ ನೀಡಿದ್ದ ಜೋರ್ಡಾನಿಯನ್ ಅರಸರನ್ನೇ ಹತ್ಯೆಗೈದು ಆ ದೇಶವನ್ನೇ ತಮ್ಮ ಕೈವಶ ಮಾಡಿಕೊಳ್ಳಲು ಸಂಚು ಹೂಡಿದ್ದರು! 1970ರ ಸೆಪ್ಟೆಂಬರ್ನಲ್ಲಿ ಪಾಕಿಸ್ತಾನಿ ಸೇನೆಯ ನೆರವಿನಿಂದ ಕೃತಘ್ನ ಪ್ಯಾಲೆಸ್ತೀನಿಯನ್ನರನ್ನು ಸದೆಬಡಿದು ಹೊರಗಟ್ಟಿದ ಜೋರ್ಡಾನ್ ನಂತರ ಅವರ ಸಹವಾಸವೇ ಬೇಡ ಎಂದು ಸುಮ್ಮನಿತ್ತು. ಜತೆಗೆ ಪ್ಯಾಲೆಸ್ತೀನಿಯನ್ನರಿಗಾಗಿ ಇಸ್ರೇಲ್ ಜತೆ ವಿರೋಧ ಸಾಧಿಸುತ್ತಲೇ ಹೋಗುವುದು ತಮಗೆ ವ್ಯಾವಹಾರಿಕವಲ್ಲ ಎಂಬ ಅರಿವೂ ಸೌದಿ ಅರೇಬಿಯಾ ಸೇರಿ ಹಲವಾರು ಮುಸ್ಲಿಂ ದೇಶಗಳಿಗೆ ಆಗಿತ್ತು. ಖೊಮೇನಿ ಬಳಸಿಕೊಳ್ಳಲು ಯೋಚಿಸಿದ್ದು ಮುಸ್ಲಿಂ ಜಗತ್ತಿನಲ್ಲಿ ಆಗುತ್ತಿದ್ದ ಈ ಬದಲಾವಣೆಯನ್ನು.
ರೆಝಾ ಶಾ ಆಳ್ವಿಕೆಯಲ್ಲಿ ಇರಾನ್ ಮತ್ತು ಇಸ್ರೇಲ್ಗಳ ನಡುವೆ ವೈಮನಸ್ಯವೇನೂ ಇರಲಿಲ್ಲ. ಬದಲಿಗೆ ಎರಡೂ ದೇಶಗಳು ಅಮೆರಿಕಾ ಜತೆ ಘನಿಷ್ಠ ಸೇನಾ ಹಾಗೂ ಆರ್ಥಿಕ ಸಂಬಂಧಗಳನ್ನು ಹೊಂದಿದ್ದವು ಮತ್ತು ಆ ಕಾರಣದಿಂದಲೇ ಪ್ರಮುಖ ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ವಿಷಯಗಳ ಕುರಿತಾಗಿ ಸಹಮತ ಹೊಂದಿದ್ದವು. ಆದಾಗ್ಯೂ, ಇಸ್ರೇಲ್ ಜತೆ ಬಹಿರಂಗವಾಗಿ ಘನಿಷ್ಠ ಸಂಬಂಧಗಳನ್ನು ಬೆಳೆಸಿಕೊಂಡರೆ ಅಂದಿನ ವಾಸ್ತವಗಳಿಗೆ ಅನುಗುಣವಾಗಿ ತಾವು ಮುಸ್ಲಿಂ ಜಗತ್ತಿನ ತಿರಸ್ಕಾರಕ್ಕೊಳಗಾಗಬಹುದೆಂದು ಶಂಕಿಸಿದ ಅವರು ಇಸ್ರೇಲ್ ಜತೆ ಬಹಿರಂಗವಾಗಿ ರಾಜಕೀಯ ಸಂಬಂಧಗಳನ್ನು ಸ್ಥಾಪಿಸಲು ಹಿಂಜರಿದಿದ್ದರು. ಆದರೆ ಇರಾನ್-ಇಸ್ರೇಲ್ ಸಂಬಂಧಗಳನ್ನು ಅವರು ಬಣ್ಣಿಸುತ್ತಿದ್ದುದು ‘ಗುಪ್ತ ಪ್ರಣಯ’ (Secret love affair) ಎಂದು! ಅವರು ಇನ್ನಷ್ಟು ಕಾಲ ಅಧಿಕಾರದಲ್ಲಿ ಮುಂದುವರಿದಿದ್ದರೆ, ಒಂದೊಂದಾಗಿ ಇಸ್ರೇಲ್ನತ್ತ ಸರಿಯತೊಡಗಿದ ಅರಬ್ ದೇಶಗಳನ್ನು ನೋಡಿ ತಮ್ಮ ‘ಗುಪ್ತ ಪ್ರಣಯ’ವನ್ನು ಬಹಿರಂಗ ಸ್ನೇಹವನ್ನಾಗಿ ಪರಿವರ್ತಿಸುತ್ತಿದ್ದುರಲ್ಲಿ ಎರಡು ಮಾತಿಲ್ಲ.
ಆದರೆ ಖೊಮೇನಿಯವರ ಅಂತಾರಾಷ್ಟ್ರೀಯ ರಾಜಕಾರಣದ ಅರಿವು ಸೀಮಿತವಾಗಿತ್ತು ಮತ್ತು ಕೀರ್ತಿಯ ಆಸೆ ಅತಿಯಾಗಿತ್ತು. ಎಲ್ಲರೂ ಕೈಬಿಡುತ್ತಿದ್ದ ಪ್ಯಾಲೆಸ್ತೀನಿಯನ್ನರ ಪರವಾಗಿ ತಾನು ನಿಂತರೆ ಇಸ್ಲಾಮಿಕ್ ಜಗತ್ತು ತನ್ನನ್ನು ಆರಾಧಿಸುತ್ತೆ ಮತ್ತು ಅದರಿಂದಾಗಿ ಇಸ್ಲಾಮಿಕ್ ಜಗತ್ತಿನ ನಾಯಕತ್ವ ತನ್ನ ದೇಶಕ್ಕೆ ದಕ್ಕುತ್ತದೆ ಎಂದವರು ತಿಳಿದರು. ಇದು ಸಾಮಾನ್ಯ ಮುಸ್ಲಿಮರ ವಿಷಯದಲ್ಲಿ ನಿಜವಿರಬಹುದು, ಆದರೆ ಮುಸ್ಲಿಂ ಜಗತ್ತಿನ ರಾಜಕೀಯ ನಾಯಕರ ಮನೋಭಾವವೇ ಬೇರೆ. ಅರಸರು ಮತ್ತು ಸರ್ವಾಧಿಕಾರಿಗಳೇ ಇರುವ ಬಹುಪಾಲು ಮುಸ್ಲಿಂ ದೇಶಗಳ ವಿದೇಶನೀತಿಗಳನ್ನು ರೂಪಿಸುವುದು ರಾಜಕೀಯ ನಾಯಕತ್ವವೇ ಹೊರತು ಜನಸಾಮಾನ್ಯರಲ್ಲ.
ಇದನ್ನು ಅರಿಯುವುದರಲ್ಲಿ ಖೊಮೇನಿ ಸೋತರು. ಅವರ ಉತ್ತರಾಧಿಕಾರಿ ಆಲಿ ಖಮೆನೀ ಅದೇ ಮನಸ್ಥಿತಿಯವರಾಗಿದ್ದರು ಮತ್ತು ಅದರಿಂದ ಇನ್ನೂ ಹೊರಬರಲಾಗದ ಸ್ಥಿತಿಯಲ್ಲಿ ಅವರಿದ್ದಾರೆ. ಹೀಗಾಗಿ ಸುನ್ನಿ ಪ್ಯಾಲೆಸ್ತೀನಿಯನ್ನರ ಪರವಾಗಿ ನಿಂತ ಶಿಯಾ ಇರಾನ್ಗೆ ಅದು ಶಿಯಾ ಎನ್ನುವ ಕಾರಣದಿಂದಲೇ ಸುನ್ನಿ ಪ್ರಧಾನ ಮುಸ್ಲಿಂ ಜಗತ್ತಿನಲ್ಲಿ ಪ್ರಾಧಾನ್ಯ ಸಿಗಲಿಲ್ಲ. ಈ ವಾಸ್ತವ ಎದೆಗೆ ಅಪ್ಪಳಿಸಿದರೂ ಖೊಮೇನಿಯ ಶಿಷ್ಯ ಖಮೇನಿ ಇನ್ನೂ ವಿವೇಕ ಗಳಿಸಿಕೊಂಡಿಲ್ಲ. ಬದಲಿಗೆ ತಮ್ಮ ಇಸ್ರೇಲ್-ವಿರೋಧವನ್ನು ದಿನಗಳೆದಂತೆ ಹೊಸಹೊಸ ಮಜಲಿಗೆ ಕೊಂಡೊಯ್ಯುತ್ತಿದ್ದಾರೆ. ಅದಕ್ಕಾಗಿ ಅಣ್ವಸ್ತ್ರಗಳನ್ನು ಗಳಿಸಿಕೊಂಡು ಆ ಯೆಹೂದಿ ರಾಷ್ಟ್ರವನ್ನು ‘ಇಲ್ಲ’ವಾಗಿಸುವ ಕನಸನ್ನು ಅವರೂ, ಅವರ ಸಹವರ್ತಿಗಳೂ ಕಾಣುತ್ತಲೇ ಇದ್ದಾರೆ.
ಇರಾನಿ ನಾಯಕತ್ವದ ಈ ನೀತಿ ಇಸ್ರೇಲ್ಗೆ ಸಹ್ಯವೆನಿಸದಿರುವುದು ಸಹಜ. ಒಂದುಕಾಲದಲ್ಲಿ ಅದು ಸುತ್ತಲಿನ ಎಲ್ಲ ಅರಬ್ ದೇಶಗಳಿಂದ ತನ್ನ ಅಸ್ತಿತ್ವಕ್ಕೇ ಅಪಾಯವನ್ನು ಎದುರಿಸಿದ್ದು ನಿಜ, ಅದರಿಂದ ಪಾರಾಗಿಬಂದದ್ದೂ ನಿಜ. ಆದರೆ ಸುನ್ನಿ ಅರಬ್ ದೇಶಗಳೇ ತನ್ನ ಜತೆ ಸ್ನೇಹ, ಸಹಬಾಳ್ವೆ ಬಯಸುವಂತಹ ದಿನಗಳು ಬಂದು ನೆಮ್ಮದಿ ಉಂಟುಮಾಡುತ್ತಿದ್ದಂತೇ ಅರಬ್ ಅಲ್ಲದ, ಸುನ್ನಿ ಅಲ್ಲದ ಇರಾನ್ ಪ್ಯಾಲೆಸ್ತೀನಿಯನ್ನರ ಪರವಾಗಿ ನಿಂತು ತನಗೆ ಹೊಸ ಶತ್ರುವಾಗಿ ಬೆಳೆದು, ಹಿಂದಿನ ಯಾವ ಶತ್ರುಗಳೂ ಹೊಂದಿಲ್ಲದಿದ್ದ ಅಣ್ವಸ್ತ್ರವನ್ನು ಗಳಿಸಿಕೊಂಡು ಮೈಮೇಲೆರುಗುವುದನ್ನು ಆ ಯೆಹೂದಿ ರಾಷಸ್ಟ್ರ ಹೇಗಾದರೂ ಸಹಿಸಿಕೊಳ್ಳುತ್ತದೆ? ಅದರ ಪರಿಣಾಮವೇ ಇಂದು ಇರಾನ್ ತಲುಪಿರುವ ಸ್ಥಿತಿ.
ಒಟ್ಟಿನಲ್ಲಿ ತನ್ನದಲ್ಲದ ವಿಷಯವನ್ನು ಮೈಮೇಲೆಳೆದುಕೊಂಡು, ತನ್ನವರಿಲ್ಲದ ಹಾಗೂ ತನಗೆ ಬೆಲೆಯಿಲ್ಲದ ನೆಲಕ್ಕೆ ಕಾಲಿಟ್ಟು, ತನ್ನದಲ್ಲದ ಕಾಳಗದಲ್ಲಿ ಕತ್ತಿ ಬೀಸಿ ಇರಾನ್ ಇಂದು ಮೈತುಂಬ ರಕ್ತ ಹರಿಸಿಕೊಳ್ಳುತ್ತಿದೆ. ಇದನ್ನು ನೋಡಿದರೆ ನನಗೆ ನೆನಪಾಗುವುದು ನಮ್ಮ ಅನುಭವಿ ಹಳ್ಳಿಗರು ಹೇಳುವ ‘‘ಸುಮ್ಮನಿರಲಾರದ ಕೋಡಗ ‘ಅದೇನನ್ನೋ’ ಕೆರೆದುಕೊಂಡು ಹುಣ್ಣು ಮಾಡಿಕೊಂಡಂತೆ’ ಎಂಬ ಗಾದೆ.
ಅಣ್ವಸ್ತ್ರ ಯೋಜನೆಯನ್ನು ಕೈಬಿಡುವ ಒಪ್ಪಂದಕ್ಕೆ ಬರಲು ಇರಾನ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ತಿಂಗಳ ಗಡುವನ್ನು ಏಪ್ರಿಲ್ 12ರಂದು ನೀಡಿದ್ದರು, ತಪ್ಪಿದರೆ ದಾಳಿಯೆಸಗುವುದಾಗಿಯೂ ಹೆದರಿಸಿದ್ದರು. ಆ ಗಡುವು ಮುಗಿದ ಬೆಳಗ್ಗೆಯೇ ಆ ಶಿಯಾ ದೇಶದ ಮೇಲೆ ಇಸ್ರೇಲ್ ದಾಳಿಯೆಸಗಿರುವುದು ಪಶ್ಚಿಮ ಏಷ್ಯಾದಲ್ಲಿ ಆರಂಭವಾಗಿರುವ ರುದ್ರನಾಟಕದ ನಿರ್ದೇಶಕ ಅಧ್ಯಕ್ಷ ಟ್ರಂಪ್ ಎನ್ನುವುದನ್ನು ಸೂಚಿಸುತ್ತದೆ.
ಜತೆಗೆ, ದಕ್ಷಿಣ ಚೀನಾ ಸಮುದ್ರದಲ್ಲಿದ್ದ ಅಮೆರಿಕಾದ ಯುದ್ಧನೌಕೆ ಯುಎಸ್ಎಸ್ ನಿಮಿಟ್ಜ್ ಅರಬ್ಬಿ ಸಮುದ್ರದತ್ತ ಹೊರಟಿರುವುದು ಮತ್ತು ಅಧ್ಯಕ್ಷ ಟ್ರಂಪ್ ಕೆನಡಾದಲ್ಲಿ ಆರಂಭವಾದ ಜಿ-7 ಸಮಾವೇಶವನ್ನು ತೊರೆದು ವಾಷಿಂಗ್ಟನ್ಗೆ ದೌಡಾಯಿಸಿರುವುದು ನಿರ್ದೇಶಕನೇ ಪಾತ್ರಧಾರಿಯಾಗುವ, ನಾಟಕ ಕ್ಲೈಮ್ಯಾಕ್ಸ್ಗೇರುವ ಸೂಚನೆಯನ್ನೂ ನೀಡುತ್ತಿದೆ. ಹತಾಶ ಇರಾನ್ ತನ್ನ ಬತ್ತಳಿಕೆಯಲ್ಲಿರುವ ಕೊನೆಯ ಅಸ್ತ್ರ ಹಾಮುಜ್ ಜಲಸಂಧಿಯನ್ನು ಬಂದ್ ಮಾಡುವ ಬೆದರಿಕೆಯೊಡ್ಡಿದೆ. ಹಾಗೇನಾದರೂ ಮಾಡಿದರೆ ಅದರಿಂದ ಜಗತ್ತಿನೊಡನೆ ತೈಲವ್ಯಾಪಾರದ ಏಕೈಕ ಮಾರ್ಗವನ್ನು ಕಳೆದುಕೊಳ್ಳುವುದು ಅರಬ್ ದೇಶಗಳಾದ ಇರಾಕ್, ಕುವೈತ್, ಕತಾರ್, ಬಹರೈನ್ ಮತ್ತು ಯುಎಇ. ಅಲ್ಲಿಗೆ ಅರಬ್ ಜಗತ್ತಿನಲ್ಲಿ ಇರಾನ್ಗೆ ಉಳಿದಿರಬಹುದಾದ ಚೂರುಪಾರು ಮರುಕವೂ ಸಮುದ್ರದಲ್ಲಿ ತೊಳೆದುಹೋಗುತ್ತದೆ. ನನಗೆ ಗಾದೆಯ ಕೋಡಗ ಮತ್ತೆ ನೆನಪಾಗುತ್ತಿದೆ. (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)