

ಜಪಾನ್ ನೀತಿಯಲ್ಲಿ ಈ ಬಗೆಯ ಮಹತ್ತರ ಮಾರ್ಪಾಡಿನ ನಿಖರ ಸೂಚನೆ ದೊರೆತದ್ದು ಹದಿನಾಲ್ಕು ವರ್ಷಗಳ ಹಿಂದೆ, ಮೇ 2007ರಲ್ಲಿ ಜಪಾನೀ ಸಂಸತ್ ‘ಡಯೆಟ್’ ಮಹತ್ವಪೂರ್ಣ ಮಸೂದೆಯೊಂದನ್ನು ಕಾಯಿದೆಯಾಗಿ ಅಂಗೀಕರಿಸಿದಾಗ. ಹಿಂದಿನ ಐದೂವರೆ ದಶಕಗಳಿಂದ ಜಪಾನ್ ನಿಷ್ಠೆಯಿಂದ ಪಾಲಿಸಿಕೊಂಡು ಬಂದ ‘ಯುದ್ಧನಿರಾಕರಣೆ’ ನೀತಿಗೆ ತಿಲಾಂಜಲಿಯಿಡುವ, ಆ ಮೂಲಕ ಅದುವರೆಗೆ ತನ್ನದೇ ಯುದ್ಧಸನ್ನದ್ಧ ಸೈನ್ಯವನ್ನು ಹೊಂದಿರದ ಜಪಾನ್ ಮುಂದಿನ ದಿನಗಳಲ್ಲಿ ಅದನ್ನು ಹೊಂದಿ ತನ್ನ ಅಗಾಧ ಆರ್ಥಿಕ ಶಕ್ತಿಯನ್ನು ಸೇನಾಶಕ್ತಿಯಾಗಿ ಪರಿವರ್ತಿಸಬಹುದೆಂಬ ಸೂಚನೆ ನೀಡಿದ ಆ ಕಾಯಿದೆ ಸಹಜವಾಗಿಯೇ ಜಗತ್ತಿನ ಗಮನ ಸೆಳೆಯಿತು. ಪೂರ್ವ ಏಷ್ಯಾದ ಭೂ-ರಾಜಕೀಯ ವಾತಾವರಣದಲ್ಲಿ ಗಮನಾರ್ಹ ಬದಲಾವಣೆ ತರಹೊರಟಂತೆ ಕಂಡ ಆ ಬೆಳವಣಿಗೆ ಅದಾಗಲೇ ‘ಸೂಪರ್ಪವರ್’ ಸ್ಥಾನಕ್ಕೆ ಲಗ್ಗೆಯಿಡತೊಡಗಿದ್ದ ಚೀನಾಗೊಂದು ಎಚ್ಚರಿಕೆ ಗಂಟೆಯಾಗಿಯೂ ಕಂಡಿತು. ಜಾಗತಿಕ ಮಟ್ಟದಲ್ಲಿ ಬೃಹತ್ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದ್ದ ಚೀನಾ ಒಂದು ಕಡೆ, ಆಗಷ್ಟೇ ಅಣ್ವಸ್ತ್ರ ಹಾಗೂ ಅವುಗಳನ್ನು ಹೊತ್ತೊಯ್ಯಬಲ್ಲ ಕ್ಷಿಪಣಿಗಳನ್ನೂ ಪಡೆದುಕೊಂಡು ಅವನ್ನು ಬೇಜವಾಬ್ದಾರಿಯಿಂದ ಝುಳಪಿಸುತಿಸತೊಡಗಿದ್ದ ಉತ್ತರ ಕೊರಿಯಾ ಇನ್ನೊಂದು ಕಡೆ, ವಲಯದ ಪ್ರಮುಖ ಆರ್ಥಿಕ ಶಕ್ತಿಯಾದ ದಕ್ಷಿಣ ಕೊರಿಯಾ ಮತ್ತೊಂದು ಕಡೆ, ಅವುಗಳ ನಡುವೆಯೀಗ ಸೇನಾಶಕ್ತಿಯಾಗುವ ಹವಣಿಕೆಯಲ್ಲಿ ಜಪಾನ್! ಜಗತ್ತು ಧಿಗ್ಗನೆದ್ದು ಕೂರುವುದಕ್ಕೆ
ಇನ್ನೇನು ಬೇಕು?: ಈ ಬೆಳವಣಿಗೆಗಳ ಮಹತ್ವವನ್ನು ಅರಿಯಬೇಕಾದರೆ ನಮಗೆ ಸ್ವಲ್ಪ ಇತಿಹಾಸದ ಪರಿಚಯ ಅಗತ್ಯ. 1868ರಲ್ಲಿ ಮೈಜಿ ಮುತ್ಸುಹಿತೋ ಆರಂಭಿಸಿದ ಸುಧಾರಣೆಗಳ ಪರಿಣಾಮವಾಗಿ ಶತಮಾನಗಳಿಂದ ತನ್ನ ಚಿಪ್ಪಿನೊಳಗೇ ಅಡಗಿದ್ದ ಜಪಾನ್ ಮೈಕೊಡವಿ ಎದ್ದುನಿಂತಾಗ ಆ ಘಟನೆಯನ್ನು ಯುರೋಪಿಯನ್ ವಸಾಹತುಶಾಹಿಗಳ ಅಟ್ಟಹಾಸದಿಂದ ತುಂಬಿಹೋಗಿದ್ದ ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಯಾರೂ ತೀವ್ರವಾಗಿ ಪರಿಗಣಿಸಲಿಲ್ಲ. ಆದರೆ ಮುಂದಿನ ಕಾಲು ಶತಮಾನದಲ್ಲಿ ಚೀನಾವನ್ನು ಸೋಲಿಸಿ, ಕೊರಿಯಾ ಪರ್ಯಾಯದ್ವೀಪದ ಮೇಲೆ ಜಪಾನ್ ತನ್ನ ಹತೋಟಿ ಸ್ಥಾಪಿಸಿದಾಗ ಜಗತ್ತು ಇತ್ತ ತಿರುಗಿ ನೋಡುವಂತಾಯಿತು. 1904-5ರ ಐತಿಹಾಸಿಕ ರಷ್ಯಾ-ಜಪಾನ್ ಸಮರದಲ್ಲಿ ಬಲಾಢ್ಯ ರಷ್ಯಾವನ್ನು ಪುಟ್ಟ ಜಪಾನ್ ಮಣಿಸಿದಾಗ ವಿಶ್ವ ರಾಜಕಾರಣದಲ್ಲಿ ಹೊಸದೊಂದು ಶಕ್ತಿಯ ಉದಯದ ಸ್ಪಷ್ಟ ಸಂಕೇತ ಸಿಕ್ಕಿತು, ‘ಉದಯಸೂರ್ಯನ ನಾಡು’ ಒಂದು ಬೃಹತ್ ಸೇನಾಶಕ್ತಿಯಾಗಿ ಉದಯಿಸಿತ್ತು. ಆ ನಂತರ ನಾಲ್ಕು ದಶಕಗಳ ಕಾಲ ಸೇನಾಶಕ್ತಿ ಹಾಗೂ ಯುದ್ಧೋತ್ಸಾಹ ಜಪಾನೀ ವಿದೇಶನೀತಿಯ ಅವಿಭಾಜ್ಯ ಅಂಗಗಳಾಗಿ ಹೋದವು. ಆ ದಿನಗಳ ಜಪಾನೀ ಇತಿಹಾಸದ ಪುಟಗಳಲ್ಲಿ ತುಂಬಿರುವುದು ಬರೀ ಯುದ್ಧ, ಯುದ್ಧ ಮತ್ತು ಯುದ್ಧ.
ಯುದ್ಧಕೋರ ನಾಯಕರುಗಳ ಹಿಡಿತಕ್ಕೆ ಸಿಕ್ಕಿಹೋದ ಜಪಾನ್ ಮೂವತ್ತರ ದಶಕದಲ್ಲಿ ಅಂತಃಕಲಹದಲ್ಲಿ ಬೇಯುತ್ತಿದ್ದ ಚೀನಾದ ಮೇಲೆ ಆಕ್ರಮಣವೆಸಗಿ ಮಂಚೂರಿಯಾ ಸೇರಿದಂತೆ ಇಡೀ ಪೂರ್ವ ಚೀನಾವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಆ ದಿನಗಳಲ್ಲಿ ಜಪಾನೀ ಸೈನಿಕರು ಚೀನೀಯರ ಮೇಲೆ ಎಸಗಿದ ಅಮಾನವೀಯ ಕೃತ್ಯಗಳು ವಿಶ್ವ ಇತಿಹಾಸದ ಒಂದು ಕಪು್ಪಕಲೆ. ಆ ನಂತರ ಜಪಾನ್ ಪಶ್ಚಿಮದ ಇಟಲಿ ಮತ್ತು ಜರ್ಮನಿಗಳ ಜತೆ ಸೇರಿಕೊಂಡು ಪೂರ್ವ ಹಾಗೂ ಆಗ್ನೇಯ ಏಷ್ಯಾದಲ್ಲಿದ್ದ ಯುರೋಪಿಯನ್ ವಸಾಹತುಗಳ ಮೇಲೆ ಯಶಸ್ವಿಯಾಗಿ ಆಕ್ರಮಣವೆಸಗಿ, ವಿಯಟ್ನಾಂನಿಂದ ಹಿಡಿದು ಬರ್ವದವರೆಗಿನ ಇಡೀ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಅದರ ಮುಂದೆ ಫ್ರೆಂಚ್, ಡಚ್ ಮತ್ತು ಬ್ರಿಟಿಷ್ ವಸಾಹತುಶಾಹಿ ಸೇನೆಗಳು ತರಗೆಲೆಗಳಂತೆ ತೂರಿಹೋದವು. ಆದರೆ 1941 ಡಿಸೆಂಬರ್ 7ರಂದು ಅಮೆರಿಕದ ಪರ್ಲ್ ಹಾರ್ಬರ್ ನೆಲೆ ಮೇಲೆ ವಾಯುದಾಳಿ ನಡೆಸಿದಾಗ ತನ್ನ ಅರ್ಧ ಶತಮಾನದ ಯುದ್ಧ ಇತಿಹಾಸದಲ್ಲಿ ಮೊದಲ ಬಾರಿಗೆ ತನಗೆ ಸರಿಸಮನಾದ ವೈರಿಯ ದರ್ಶನ ಜಪಾನಿಗಾಯಿತು. ಆನಂತರದ ನಾಲ್ಕು ವರ್ಷಗಳ ಭೀಷಣ ಕಾಳಗ ಕೊನೆಯಾದದ್ದು ಹಿರೋಷಿಮಾ ಮತ್ತು ನಾಗಸಾಕಿ ನಗರಗಳು ಅಣುಬಾಂಬ್ಗಳಿಗೆ ಆಹುತಿಯಾಗುವುದರ ಮೂಲಕ. ನಂತರದ ಐದು ವರ್ಷಗಳ ಕಾಲ ಜಪಾನ್ ಅಮೆರಿಕದ ಮಿಲಿಟರಿ ಆಡಳಿತದಲ್ಲಿ ಸಿಲುಕಿಹೋಯಿತು. ಈ ಐದು ವರ್ಷಗಳಲ್ಲಿ ಜಪಾನಿನ ಯುದ್ಧಕೋರ ಮನೋಭಾವವನ್ನೇ ಬೇರುಸಹಿತ ಕಿತ್ತೊಗೆಯಲು ಅಮೆರಿಕ ವ್ಯವಸ್ಥಿತವಾಗಿ ಪ್ರಯತ್ನಿಸಿತು. ಅರ್ಧ ಶತಮಾನದವರೆಗೆ ಸರಿಸುಮಾರು ಅವ್ಯಾಹತವಾಗಿ ಸಾಗಿದ ಯುದ್ಧಗಳು ಹಾಗೂ ಅವುಗಳಿಂದಾಗಿ ನಾಡು ಅನುಭವಿಸಿದ ಕಷ್ಟಕಾರ್ಪಣ್ಯಗಳಿಂದಾಗಿ ರೋಸಿಹೋಗಿದ್ದ ಜಪಾನೀ ಜನತೆಯ ಬೆಂಬಲದ ಪರಿಣಾಮವಾಗಿ ಅಮೆರಿಕದ ಕಾರ್ಯಕ್ರಮ ಯಶಸ್ವಿಯಾಯಿತು. 1950ರ ದಶಕದ ಆರಂಭದಲ್ಲಿ ಸ್ವತಂತ್ರ ನಾಡಾಗಿ ಉದಯಿಸಿದ ಜಪಾನ್ ಯುದ್ಧನಿರಾಕರಣೆಯನ್ನು ತನ್ನ ಸಂವಿಧಾನದಲ್ಲೇ ಅಳವಡಿಸಿಕೊಂಡು ಇತರ ದೇಶಗಳಿಗೆ ಮಾದರಿಯಾಯಿತು.
ಇದು ಜಪಾನಿನ ‘ಸಂವಿಧಾನಾತ್ಮಕ ಶಾಂತಿವಾದ’ ಉಗಮಿಸಿದ ಬಗೆ. ಈ ‘ಸಂವಿಧಾನಾತ್ಮಕ ಯುದ್ಧನಿರಾಕರಣೆ’ಯಿಂದ ವಾಸ್ತವವಾಗಿ ಜಪಾನಿಗಾದ ಲಾಭ ಅಗಾಧ. ತನ್ನೆಲ್ಲ ರಕ್ಷಣಾಜವಾಬ್ದಾರಿಗಳನ್ನು ಅಮೆರಿಕ ಹೊತ್ತುಕೊಂಡದ್ದರಿಂದಾಗಿ ತಾನು ಸೇನೆಯನ್ನು ಕಟ್ಟುವುದಕ್ಕಾಗಿನ ಹಾಗೂ ಅದನ್ನು ಸಾಕುವುದಕ್ಕಾಗಿನ ಪೂರ್ಣ ವೆಚ್ಚಗಳನ್ನು ಭರಿಸುವ ಅಗತ್ಯ ಜಪಾನಿಗಿರಲಿಲ್ಲ. ಇದರಿಂದಾಗಿ ಉಳಿತಾಯವಾದ ಭಾರೀ ಮೊತ್ತವನ್ನು ಜಪಾನ್ ತನ್ನ ಆರ್ಥಿಕ ಅಭ್ಯುದಯಕ್ಕಾಗಿ ಬಳಸಿಕೊಂಡಿತು. ಹೀಗಾಗಿಯೇ ಯುದ್ಧದಲ್ಲಿ ಸೋತು ಸುಣ್ಣವಾಗಿ ಮಲಗಿದ್ದ ಜಪಾನ್ ಕ್ಷಿಪ್ರ ಕಾಲದಲ್ಲೇ ಬೃಹತ್ ಆರ್ಥಿಕ ಶಕ್ತಿಯಾಗಿ ಬೆಳೆದು ಅಮೆರಿಕಕ್ಕೇ ಸಡ್ಡು ಹೊಡೆಯುವಂತಾದದ್ದು. ಅಮೆರಿಕ ಜತೆ ಸೇನಾಸಹಯೋಗಕ್ಕಿಳಿದರೆ ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ತಾನೂ ನಂಬಿ, ಜನತೆಯನ್ನೂ ನಂಬಿಸಲು ಹೆಣಗುತ್ತಿದ್ದ ಅಂದಿನ ಭಾರತೀಯ ನಾಯಕತ್ವಕ್ಕೆ ಇದೊಂದು ಪಾಠವಾಗಬಹುದಿತ್ತು. ಆದರೆ ಪಾಠ ಕಲಿಯಲು ನಮ್ಮ ರಾಜಕೀಯ ನೇತಾರರು ತಯಾರಿರಲಿಲ್ಲ. ಅದೊಂದು ಬೇರೆಯೇ ಕಥೆ ಬಿಡಿ.
ಪರಂಪರಾಗತ ಶತ್ರುವಾದ ಚೀನಾ ಹಾಗೂ ಇತ್ತೀಚೆಗೆ ಪ್ರಬಲ ಶತ್ರುವಾಗಿ ಮಾರ್ಪಟ್ಟಿದ್ದ ರಷ್ಯಾ/ಸೋವಿಯತ್ ಯೂನಿಯನ್ಗಳಿಂದ ಜಪಾನನ್ನು ರಕ್ಷಿಸುವ ಜವಾಬ್ದಾರಿಯನ್ನು ಅಮೆರಿಕ ನಿಸ್ವಾರ್ಥಮನದಿಂದೇನೂ ಹೊತ್ತುಕೊಳ್ಳಲಿಲ್ಲ.
ಎರಡನೇ ಮಹಾಯುದ್ಧ ಅಂತ್ಯವಾದ ಎರಡೇ ತಿಂಗಳಲ್ಲಿ ಅಮೆರಿಕ ಮತ್ತು ಸೋವಿಯತ್ ಯೂನಿಯನ್ ನಡುವಿನ ಯುದ್ಧಕಾಲದ ಹನಿಮೂನ್ ಹಳಸಿಹೋಗಿ ಶೀತಲಸಮರ ಆರಂಭವಾಗಿತ್ತು. ಆಯಕಟ್ಟಿನ ಡಾರ್ಡನಲ್ಸ್ ಮತ್ತು ಬಾಸ್ಪೊರಸ್ ಕಡೆ ರಷಿಯನ್ನರು ಮುಂದೊತ್ತಿ ಬರುವುದನ್ನೂ, ತನ್ಮೂಲಕ ಪೂರ್ವ ಮೆಡಿಟರೇನಿಯನ್ ಮತ್ತು ಸುಯೆಜ್ ಮೇಲೆ ಮಾಸ್ಕೋ ಸಾಧಿಸಬಯಸಿದ ಹತೋಟಿಯನ್ನೂ ತಡೆಗಟ್ಟಲು ಅಮೆರಿಕ ಅಧ್ಯಕ್ಷ ಹ್ಯಾರಿ ಟ್ರೂಮನ್ ಭಾರಿ ಯೋಜನೆಗಳನ್ನೇ ತಯಾರಿಸಿದ್ದರು. 1949ರ ಆದಿಭಾಗದಲ್ಲಿ ಆ ಯೋಜನೆ ಪೂರ್ಣರೂಪ ತಳೆದಾಗ ಯುರೋಪಿನಲ್ಲಿ ಅಮೆರಿಕ ನೇತೃತ್ವದ ಸೋವಿಯತ್-ವಿರೋಧಿ ‘ನ್ಯಾಟೋ’ ಅಸ್ತಿತ್ವಕ್ಕೆ ಬಂದು ಮಾಸ್ಕೋದ ಭೌಗೋಳಿಕ ಹಾಗೂ ಸೈದ್ಧಾಂತಿಕ ಮುಂದೊತ್ತುವಿಕೆಗೆ ಸಂಪೂರ್ಣ ಕಡಿವಾಣ ಬಿತ್ತು. ಅಂತಹದೇ ಸೋವಿಯತ್-ವಿರೋಧಿ ಕಾರ್ಯಕ್ರಮವನ್ನು ಏಷ್ಯಾದಲ್ಲೂ ಯಶಸ್ವಿಯಾಗಿ ರೂಪಿಸಲು ಅಮೆರಿಕ ಮೊದಲು ಚೀನಾದ ಸಹಕಾರ ಬಯಸಿತು. ಆದರೆ ಆ ದೇಶದಲ್ಲಿ 1949ರ ಅಕ್ಟೋಬರ್ನಲ್ಲಿ ಅಮೆರಿಕ ಬೆಂಬಲಿತ ಚಿಯಾಂಗ್ ಕೈ ಷೆಕ್ ಸೋತು ಸೋವಿಯತ್ ಬೆಂಬಲಿತ ಮಾವೋ ಜೆಡಾಂಗ್ ನೇತೃತ್ವದ ಕಮ್ಯೂನಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಅಮೆರಿಕದ ಯೋಜನೆ ತಲೆಕೆಳಕಾಯಿತು. ಸೋವಿಯತ್ ಯೂನಿಯನ್ ಮತ್ತು ಚೀನಾಗಳೆರಡೂ ಒಟ್ಟುಗೂಡಿ ಕಮ್ಯೂನಿಸ್ಟ್ ಸಿದ್ಧಾಂತವನ್ನು ಏಷ್ಯಾದ ಉದ್ದಗಲಕ್ಕೂ ಹರಡುವ ಸಾಧ್ಯತೆ ಕಂಡು ದಿಕ್ಕೆಟ್ಟ ಅಮೆರಿಕ ಆಗ ತಿರುಗಿದ್ದು ಭಾರತದ ಕಡೆ. ಆದರೆ ಅಲಿಪ್ತನೀತಿಯ ಮಂತ್ರ ಪಠಿಸುತ್ತಿದ್ದ ನಮ್ಮ ಪಂಡಿತ ನೆಹರು ಅಮೆರಿಕದತ್ತ ಬೆನ್ನು ತಿರುಗಿಸಿದರು. ಆಗ ಅಮೆರಿಕಕ್ಕೆ ಉಳಿದ ದಾರಿ ಒಂದೇ- ತನ್ನದೇ ಮಿಲಿಟರಿ ಆಡಳಿತದಲ್ಲಿದ್ದ ಜಪಾನನ್ನು ತನಗೆ ಅನುಕೂಲವಾಗಿ ವರ್ತಿಸುವಂತೆ ಮಾಡುವುದು! ಜಪಾನಿನ ರಕ್ಷಣೆ ಜವಾಬ್ದಾರಿಯನ್ನು ತಾನು ಹೊತ್ತುಕೊಳ್ಳುವ ಈ ಯೋಜನೆ ಮೂಲಕ ಅಮೆರಿಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದುರುಳಿಸಿತು. ಒಂದು- ತನಗೆ ಅಗತ್ಯವಾದ ಸೇನಾನೆಲೆಗಳನ್ನು ಜಪಾನಿನಲ್ಲಿ ಪಡೆದುಕೊಳ್ಳುವುದು. ಎರಡು- ಜಪಾನ್ ಸ್ವಂತ ಸೇನೆ ಹೊಂದಿ ಮುಂದೊಂದು ದಿನ ಏಷ್ಯಾ-ಫೆಸಿಫಿಕ್ ವಲಯದಲ್ಲಿ ತನಗೇ ಕಂಟಕವಾಗುವುದನ್ನು ತಡೆಗಟ್ಟುವುದು.
ಒಟ್ಟಿನಲ್ಲಿ ಈ ಯೋಜನೆಯಿಂದ ಅಮೆರಿಕ ಹಾಗೂ ಜಪಾನ್ಗಳೆರಡಕ್ಕೂ ಅವು ಬಯಸಿದ್ದು ಸಿಕ್ಕಿತು. ಜಪಾನ್ ಮತ್ತು ದಕ್ಷಿಣ ಕೊರಿಯಾಗಳಲ್ಲಿ ಭದ್ರವಾಗಿ ನೆಲೆಯೂರುವುದರ ಮೂಲಕ ಅಮೆರಿಕ ಪೂರ್ವ ಏಷ್ಯಾದಲ್ಲಿ ಸೋವಿಯತ್ ಯೂನಿಯನ್ ಮತ್ತು ಚೀನಾಗಳ ಕಾರ್ಯಕ್ರಮಗಳನ್ನು ನಿಷ್ಪಲಗೊಳಿಸಿತು. ರಕ್ಷಣೆಗಾಗಿ ಅಗಾಧ ವೆಚ್ಚ ಮಾಡುವುದರಿಂದ ತಪ್ಪಿಸಿಕೊಂಡ ಜಪಾನ್ ಅದೇ ಹಣವನ್ನು ಆರ್ಥಿಕ ಬೆಳವಣಿಗೆಗೆ ವಿನಿಯೋಗಿಸಿತು.
ಈ ವ್ಯವಸ್ಥೆಯನ್ನು ಬಹುಪಾಲು ಜಪಾನೀಯರು ಸ್ವಾಗತಿಸುತ್ತಾರೆ. ತಮ್ಮ ನಾಡು ಹೀಗೇ ಒಂದು ಬೃಹತ್ ಆರ್ಥಿಕ ಶಕ್ತಿಯಾಗಷ್ಟೇ ಉಳಿಯುವುದರಲ್ಲಿ ಶ್ರೇಯಸ್ಸಿದೆ ಎಂದವರು ಬಯಸುತ್ತಾರೆ. ಮತ್ತೆ ತನ್ನದೇ ಸೇನೆಯನ್ನು ಜಪಾನ್ ಹೊಂದಿದರೆ ಮುಂದೊಂದು ದಿನ ಅದು ಭಾರಿ ಯುದ್ಧಗಳಿಗೆ ಕಾರಣವಾಗಿ ಆರ್ಥಿಕ ಸಂಪತ್ತು ದುರುಪಯೋಗವಾಗುವ ಭಯ ಅವರಿಗಿದೆ. ಹೀಗಾಗಿಯೇ ಮೇ 2007ರ ಸಂವಿಧಾನದ ಪರಿಷ್ಕರಣೆ ಬಗೆಗಿನ ಮಸೂದೆಯನ್ನು ಸಂಸತ್ ಅಂಗೀಕರಿಸಿದಾಗ ಅದನ್ನು ವಿರೋಧಿಸಿ ಜಪಾನೀಯರು ವಿವಿಧ ನಗರಗಳಲ್ಲಿ ಮೆರವಣಿಗೆ ನಡೆಸಿದರು. ಆದರೆ ಜಪಾನ್ ಒಂದು ಸೇನಾಶಕ್ತಿಯಾಗಿ ಬೆಳೆಯಬೇಕೆಂದು ಬಯಸುವವರ ಗುಂಪೂ ಇದೆ.
1950ರ ದಶಕದ ಕೊರಿಯನ್ ಯುದ್ಧದಿಂದ ಹಿಡಿದು 2003ರಲ್ಲಿ ಆರಂಭವಾದ ಇರಾಕ್ ಸಮರದವರೆಗೆ ಎಲ್ಲದರಲ್ಲಿಯೂ ಜಪಾನ್ ಅಮೆರಿಕ ಹೇಳಿದಂತೆ ಕೇಳಿಕೊಂಡು ಕೇವಲ ಅಸೈನಿಕ ಚಿಲ್ಲರೆ ಕೆಲಸಗಳಿಗೆ ತನ್ನ ಸಾಮರ್ಥ್ಯವನ್ನು ಸೀಮಿತಗೊಳಿಸಿಕೊಂಡಿರುವುದು ಇವರಿಗೆ ಇಷ್ಟವಾಗುತ್ತಿಲ್ಲ. ಜಪಾನ್ ತನ್ನದೇ ಸೇನೆಯನ್ನು ಹೊಂದಿರಬೇಕು ಹಾಗೂ ಅದನ್ನು ಅಮೆರಿಕ ಹಸ್ತಕ್ಷೇಪವಿಲ್ಲದೆ ತನಗೆ ಯುಕ್ತವೆನಿಸಿದಂತೆ ಉಪಯೋಗಿಸಬೇಕೆಂದು ಇವರು ಆಶಿಸುತ್ತಾರೆ. ಈ ಆಶಯಗಳಿಗೆ 2017ರಲ್ಲಿ ಮತ್ತೆ ಪ್ರಧಾನಮಂತ್ರಿಯಾದ ಶಿಂಜೋ ಅಬೆ ಸ್ಪಂದಿಸುತ್ತಿದ್ದು ಗಮನಿಸಬೇಕಾದ ಸಂಗತಿ.
2012ರಿಂದೀಚೆಗೆ ಪೂರ್ವ ಚೀನಾ ಸಮುದ್ರದಲ್ಲಿನ ಸೆಂಕಾಕು ದ್ವೀಪಗಳಿಗೆ ಸಂಬಂಧಿಸಿದಂತೆ ಚೀನಾ ಋಣಾತ್ಮಕ ಚಟುವಟಿಕೆಗಳನ್ನು ವಿಸ್ತರಿಸತೊಡಗಿದೆ. ಆ ಮೂಲಕ ಆ ದ್ವೀಪಗಳ ಮೇಲೆ ಜಪಾನೀ ಸಾರ್ವಭೌಮತ್ವಕ್ಕೆ ಮತ್ತೆ ಮತ್ತೆ ಸವಾಲೊಡ್ಡತೊಡಗಿದ್ದು ಸಾಮಾನ್ಯ ಜಪಾನೀಯರಿಗೆ ಸಹ್ಯನೆನಿಸುತ್ತಿಲ್ಲ. ಚೀನೀ ಕೃತ್ಯಗಳಿಗೆ ಸರ್ಕಾರ ಸಮರ್ಥವಾಗಿ ಪ್ರತಿಕ್ರಿಯಿಸಬೇಕೆಂದು ಅವರು ಬಯಸುತ್ತಾರೆ ಹಾಗೂ ಚೀನಾದ ವಿಸ್ತರಣಾವಾದಿ ನೀತಿಗಳಿಂದ ಹಾನಿಗೊಳಗಾಗುತ್ತಿರುವ ಇತರ ದೇಶಗಳ ಜತೆ ಜಪಾನ್ ಸಹಯೋಗ ಏರ್ಪಡಿಸಿಕೊಳ್ಳಬೇಕೆಂದೂ ಆವರು ನಿರೀಕ್ಷಿಸುತ್ತಾರೆ. ಅಬೇಯವರ ಕೈಗಳನ್ನು ಬಲಪಡಿಸಿದ್ದು ಇದು. ಪರಿಣಾಮವಾಗಿ, ಡೊಕ್ಲಾಂ ಬಿಕ್ಕಟ್ಟಿನ ಸಂದರ್ಭದಲ್ಲಿ ಅಬೆ ಸರ್ಕಾರ ಬಹಿರಂಗವಾಗಿಯೇ ಭಾರತದ ಪರ ನಿಂತಿತು. ಕರೊನಾ ಸಂಕಟ ಆರಂಭವಾದ ಮೇಲಂತೂ ಚೀನೀ ಆರ್ಥಿಕ ಸಾಮರ್ಥ್ಯವನ್ನೂ, ಆ ಮೂಲಕ ಅದರ ವಿಸ್ತರಣಾ ಮನೋಭಾವನ್ನೂ ಕುಗ್ಗಿಸುವ ಯೋಜನೆ ಹಾಕಿಕೊಂಡ ಅಬೆ ಸರ್ಕಾರ, ಚೀನಾದಿಂದ ಹೊರಬರುವ ಜಪಾನೀ ಕೈಗಾರಿಕೋದ್ಯಮಿಗಳು ತಮ್ಮ ಕಾರ್ಖಾನೆಗಳನ್ನು ಜಪಾನ್ನಲ್ಲಿ ಅಥವಾ ಭಾರತ ಮತ್ತು ವಿಯೆಟ್ನಾಂಗಳಂಥ ಇತರ ಮಿತ್ರದೇಶಗಳಲ್ಲಿ ಮರುಸ್ಥಾಪಿಸಲು ಎಲ್ಲ ಬಗೆಯ ಸಹಕಾರ ನೀಡುವುದಾಗಿ ಘೊಷಿಸಿತು. ಅದಕ್ಕಾಗಿ ಅಬೆ ಸರ್ಕಾರ ಎರಡು ಟ್ರಿಲಿಯನ್ ಡಾಲರ್ಗಳನ್ನು ಮೀಸಲಾಗಿಟ್ಟದ್ದು, ಈ ವಿಷಯದಲ್ಲಿ ಅದರ ದೃಢ ನಿರ್ಧಾರದ ದ್ಯೋತಕ. ಈ ನೀತಿ ಕಳೆದೊಂದು ವರ್ಷದಲ್ಲಿ ಮತ್ತಷ್ಟು ಬಲಗೊಂಡಿದೆ ಮತ್ತು ಅಡಿಗಡಿಗೆ ಬಹಿರಂಗವಾಗಿ ವ್ಯಕ್ತಗೊಳ್ಳುತ್ತಲೂ ಇದೆ. ಕಳೆದ ವರ್ಷ ಲಡಾಖ್ನಲ್ಲಿ ಚೀನೀ ಸೇನೆ ದುರಾಕ್ರಮಣವೆಸಗಿದಾಗ ಜಪಾನ್ ಭಾರತದ ಪರ ದೊಡ್ಡದಾಗಿ ದನಿಯೆತ್ತಿದ್ದನ್ನು ಇಲ್ಲಿ ವಿಶೇಷವಾಗಿ ನೆನಪಿಸಿಕೊಳ್ಳಬಹುದು. ಅಬೆಯವರ ನೀತಿಗಳನ್ನು ಅವರ ಉತ್ತರಾಧಿಕಾರಿ ಯೋಶಿಹಿದೆ ಸುಗಾ ಮೂಂದುವರಿಸುತ್ತಿದ್ದಾರೆ. ಪರಿಣಾಮವಾಗಿ ಜಪಾನ್, ಅಮೆರಿಕ, ಭಾರತ ಮತ್ತು ಆಸ್ಟ್ರೇಲಿಯಾಗಳ ನಡುವಿನ ‘ಕ್ವಾಡ್’ ಸಹಕಾರ ಯೋಜನೆ ವಿಸ್ತಾರವಾಗುತ್ತಿದೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)