

ಅದರಲ್ಲೂ ಟರ್ಕಿಯನ್ನಾಳುತ್ತಿದ್ದ ದೊರೆ ಮೊದಲನೆಯ ಅಹ್ಮದ್ ತನ್ನ ಸಾಮ್ರಾಜ್ಯಶಾಹಿಯನ್ನು ವಿಸ್ತರಿಸಲು ಹಪಹಪಿಸುತ್ತಿದ್ದ ಕಾಲ. ಜೊತೆಗೆ ಯಾರು ಈ ನೆಲದಲ್ಲಿ ಹೆಚ್ಚಿನ ಧಾರ್ವಿುಕ ವಸಾಹತು ಸ್ಥಾಪಿಸುತ್ತಾರೋ ಅವರೇ ಅರಬ್ಬರ ನಾಡಿನ ಅನಭಿಷಕ್ತ ಧಾರ್ವಿುಕ ಮುಖಂಡನೂ ಆಗುತ್ತಾನೆ ಎನ್ನುವುದರಲ್ಲಿ ಸಂಶಯವೇ ಇರದ ಕುದಿಯುವ ಬಿಂದು ಮೇಲೇರಿದ್ದ ಶತಮಾನದಾರಂಭ ಅದು. ಅದನ್ನು ಜಗತ್ತು 1609 ರಿಂದ 1617ರ ಕಾಲಾವಾಧಿಯೆಂದು ಸ್ಪಷ್ಟವಾಗಿ ನೆನಪಿಡಲು ಹಾಗೊಂದು ಧಾರ್ವಿುಕ ಜಗತ್ತಿನ ಅತಿದೊಡ್ಡ ಪ್ರಾರ್ಥನಾ ಮಂದಿರ ತಲೆ ಎತ್ತಿದ್ದೇ ಆಗ.
ಬಿಡಿ, ಅದರ ನಂತರದಲ್ಲಿ ಅದು ನಾಲ್ಕಾರು ಬಾರಿ ಧರಾಶಾಯಿಯಾಗಿಯೂ ಮತ್ತೆ ಮತ್ತೆ ಮೇಲೆದ್ದು ನಿಂತಿದೆ. ಆ ಮಾತು ಬೇರೆ. ಆದರೆ ಅದರ ಅಟೊಮನ್ ತುರ್ಕರ ಶೈಲಿ ಎಂದೇ ಹೆಸರಾಗಿರುವ ವಾಸ್ತುಶಿಲ್ಪದಿಂದಲೂ ಮೂಲರೂಪದಿಂದಲೂ ಭಿನ್ನವಾಗಿ ನಿಲ್ಲದೆ ಮತ್ತೆ ಮತ್ತೆ ತಲೆ ಎತ್ತಿ, ಜಗತ್ತಿನ ಪ್ರವಾಸಿಗರನ್ನು ಅದರಲ್ಲೂ ಅರಬ್ ಜಗತ್ತಿನ ಸಂಪೂರ್ಣ ಮುಸ್ಲಿಂ ಜಗತ್ತನ್ನ ಕರೆದುಕೊಳ್ಳುವ ಅದು ಇತಿಹಾಸದಿಂದ ಇವತ್ತಿನವರೆಗೂ ಗುರುತಿಸಿಕೊಂಡಿದ್ದು ‘ನೀಲಿ ಮಸೀದಿ’ ಎಂದೇ.
ಕಾರಣ ಒಂದು ಲಕ್ಷ ಜನರು ಏಕಕಾಲಕ್ಕೆ ಪ್ರಾರ್ಥನೆ ಸಲ್ಲಿಸುವಂತೆ ಅವಕಾಶ ಕಲ್ಪಿಸುವ, ಜೊತೆಗೆ ಎಲ್ಲಿಂದ ನೋಡಿದರೂ ಇಸ್ತಾಂಬುಲ್ನ ಕೇಂದ್ರ ಟ್ರೈಗ್ರಿಸ್ ನದಿಯ ಭಾಗ ಕಾಣಿಸುವಂತೆ, ಎಲ್ಲೆಡೆಗೆ ತನ್ನ ಮುಖ ತೆರೆದುಕೊಳ್ಳುತ್ತ ಯಾವ ಕೋನದಿಂದ ನೋಡಿದರೂ ಅದೇ ಮುಖ ಎನ್ನುವಂತೆ ಗೋಚರಿಸಲು ನಿರ್ವಿುಸಿದ ವಿನ್ಯಾಸದಿಂದ.
ಇಜಾನಿಕ್ ಕಲಾಕೃತಿಗಳ ಈ ಮಸೀದಿ ಸಂಪೂರ್ಣ ನೀಲಿಮಯವಾಗಿರುವುದೇ ಇದಕ್ಕೆ ನೀಲಿ ಮಸೀದಿ ಎಂಬ ಅನ್ವರ್ಥ ನಾಮಮೇ ಜಾಗತಿಕ ಪ್ರಸಿದ್ಧಿಗೂ ಬಂತು. ಹಾಗೆ ನೋಡಿದರೆ ಇದೇ ಇಸ್ತಾಂಬುಲ್ನಲ್ಲಿ ಸ್ವಚ್ಛತೆ, ಆತಿಥ್ಯ ಮತ್ತು ಹೊಸ ಹೊಸ ನಾವಿನ್ಯತೆ ಮೂಲಕ ಪ್ರವಾಸಿಗರು ಮತ್ತು ಧಾರ್ವಿುಕ ಶ್ರದ್ಧಾಳುಗಳನ್ನು ಆಕರ್ಷಿಸುವ ಇನ್ನು ಕೆಲವು ಮಸೀದಿಗಳಿವೆ. ಇವನ್ನೆಲ್ಲ ಸೇರಿ ಪ್ರಮುಖ ಪಂಚ ಮಸೀದಿ ಎನ್ನುತ್ತಾರಾದರೂ ನೀಲಿ ಮಸೀದಿ ಪಡೆದ ಪ್ರಸಿದ್ಧಿ ಅವಕ್ಕೆ ದಕ್ಕಿಲ್ಲ. ಅದರಲ್ಲೂ ಅದಾನ್ನಲ್ಲಿರುವ ಸಬಾನ್ಸಿ ಮಸೀದಿ, ಮರ್ಸಿನ್ನ ಮುಗ್ಧಾತ್ ಮಸೀದಿ, ಉಸುಕ್ಡಾರ್ನ ಕ್ಯಾಮ್ಲಿಕಾ ಮಸೀದಿ ಹಾಗೂ ಹಸಿರು ಮಸೀದಿ ಎಂದೇ ಹೆಸರಾಗಿರುವ ಅರ್ನಾಟಿಕ್ನ ಮಸೀದಿ ಉಳಿದ ಪ್ರಮುಖ ಮಸೀದಿಗಳು. ಆದರೆ ಇಸ್ತಾಂಬುಲ್ ನೀಲಿ ಮಸೀದಿ ನಂತರ ಹೆಚ್ಚಿನ ಧಾರ್ವಿುಕ ಪ್ರವಾಸಿಗರು ಈ ಉಳಿದವನ್ನೂ ಭೇಟಿ ಮಾಡುವ ಮೂಲಕ ಐದೂ ಕ್ಷೇತ್ರಗಳನ್ನು ದರ್ಶನ ಮಾಡುವುದು ವಾಡಿಕೆ.
ನಾನು ಇಸ್ತಾಂಬುಲ್ನಲ್ಲಿದ್ದಾಗ ‘ಒಟೋಗಾರ’ದ ಕಡೆಯಿಂದಲೇ ಯಾವಾಗಲೂ ಪ್ರವಾಸ ಕೈಗೊಳ್ಳುತ್ತಿದ್ದೆ. ಹಾಗಾಗಿ ಅದು ಇಸ್ತಾಂಬುಲ್ ಬಸ್ಸ್ಟಾ್ಯಂಡ್ ಎನ್ನಿ ಅಥವಾ ಟ್ರಾಮ್ ಎನ್ನಿ. ಎರಡಕ್ಕೂ ಸಿದ್ಧ ಮತ್ತು ಯಾವಾಗಲೂ ಲಭ್ಯ ಇದು. ಹಾಗಾಗಿ ಅಲ್ಲಿನ ಉಲ್ಟಾ ನಕ್ಷೆಯನ್ನು ನನಗೆ ಬೇಕಾದಂತೆ ತಿರುಗಿಸಿಕೊಳ್ಳುತ್ತ ಒಟೋಗಾರ್ನಿಂದ ಹತ್ತಿದರೆ ನೇರವಾಗಿ ಅದು ಐದು ನಿಮಿಷದ ನಡಿಗೆ ಬೇಡುವ ‘ಗಾಯ್ರೇಟೆಪ್’ ಎನ್ನುವ ನಿಲ್ದಾಣಕ್ಕೆ ಇಳಿಸುವ ನೇರ ಟ್ರಾಮ್ ಇದರ ಒಂದೆರಡು ಟ್ರಿಪ್ಪು ನಿಮಗೆ ಸರಳ ಮತ್ತು ಚೆಂದದ ಪ್ರಮುಖ ಇಸ್ತಾಂಬುಲ್ ಪರಿಚಯಿಸಿಬಿಡುತ್ತದೆ.
ಒಟೋಗಾರ್ ಒಂದು ತುದಿಯಾದರೆ ಈ ಗಾಯ್ರೇಟೆಪ್ ಇನ್ನೊಂದು ತುದಿ. ಹಾಗಾಗಿ ನಾನು ತಪ್ಪದೆ ಈ ಟ್ರಾಮ್ ಬಳಸುತ್ತಿದ್ದೆ. ಬೇರೆಡೆ ಹೋಗುವಾಗಲೂ ಇದರಲ್ಲಿ ಎಲ್ಲಿ ಬೇಕೋ ಅಲ್ಲಿಳಿದು ಅಲ್ಲಿಂದ ನಮ್ಮ ರಿಕ್ಷಾ ಮಾದರಿಯ ವಾಹನ ಬಳಕೆ. ಅದರಲ್ಲೂ ಪ್ರವಾಸಿಗರಾಗಿ ಹೋಗುವವರಿಗೆ ಒಂದು ಗೊತ್ತಿರಬೇಕು. ಈ ಟ್ರಾಮ್ ಅತಿ ಹೆಚ್ಚು ಕೇಂದ್ರಗಳನ್ನು ಬಳಸಿ ಹೋಗುವುದರಿಂದ ಸಹಜ ಇಸ್ತಾಂಬುಲ್ ದರ್ಶನ ಕೇವಲ ನಾಲ್ಕು ಟರ್ಕೀಶ್ ಲಿರಾದಲ್ಲಿ ಮುಗಿದು ಹೋಗುತ್ತದೆ. ಓಟೋಗಾರ್ನ ಆಟಾಟುರ್ಕ್ನಿಂದ ಹೊರಡುವ ಟ್ರಾಮ್ ‘ದಾವುತ್ಪಾಸಾ’ ಮೂಲಕ ದೂರ ದೂರಕ್ಕೆ ನಿಲುಗಡೆ ಕೊಡುತ್ತ ಬಂದರೆ, ಒಮ್ಮೆ ದಾವುತ್ಪಾಸಾ ದಾಟಿತೋ ಅನಾಮತ್ತು 26 ಕೇಂದ್ರಗಳಲ್ಲಿ ಪ್ರತಿ ಎರಡೆರಡು ನಿಮಿಷಕ್ಕೊಮ್ಮೆ ನಿಲುಗಡೆ ಕೊಡುತ್ತದೆ. ಅದೂ ರಮಣೀಯ ಬೀದಿ ಮತ್ತು ನಗರ ಕೇಂದ್ರಗಳ ಮೂಲಕ ಸಾಗಿ ಗಾಯ್ರೇಟೆಪ್ ತಲುಪುತ್ತದಲ್ಲ. ಮುಕ್ಕಾಲು ಗಂಟೆಯ ಪಯಣ ಕೇವಲ ನಾಲ್ಕೇ ಟಿ.ಎಲ್.ನಲ್ಲಿ ಮುಗಿದು ಹೋಗುತ್ತದೆ.
ಅಷ್ಟೆಕೆ ಈ ಟ್ರಾಮ್ ‘ದೇವುತ್ಪಾಸಾ’ ಮಾತ್ರವಲ್ಲ ಮಧ್ಯೆ ‘ಆಯೆಝ್ಗಾ’ ಎಂಬ ಕೇಂದ್ರದಲ್ಲಿ ಇಳಿಸುತ್ತದೆ, ಅದು ಪ್ರಮುಖ ಮಾರುಕಟ್ಟೆಯ ಕೇಂದ್ರ. (ಅಂದಹಾಗೆ ಹೀಗೆ ಆಫ್ಬೀಟ್ ಪ್ರವಾಸದ ಚೆಂದವೆಂದರೆ ಇದು) ಬೇರಾವುದೇ ವಾಹನವೇ ಪ್ರವೇಶ ಮಾಡದ ಜಾಗದಲ್ಲೂ ಇದು ನುಸುಳುವುದರಿಂದ ಆ ನಗರ ದರ್ಶನಕ್ಕಾದರೂ ಈ (M1ಅ) ನಂಬರ್ನ ಟ್ರಾಮ್ ಹತ್ತಲೇಬೇಕು. ಇವುಗಳ ಮಧ್ಯದಲ್ಲಿ ದಕ್ಕುವ ಟೊಪ್ಕಾಪಿ, ಸೆಹ್ಲಿಟಿಕ್, ಅಯಾನ್ ಸರಾಯನಂತಹ ಪ್ರದೇಶಗಳು ಸಾರ್ವಜನಿಕ ಪ್ರದೇಶದಿಂದ, ವಾಹನ ಪ್ರವೇಶದಿಂದಲೂ ಹೊರತಾದಂಥವು. ಆದರೆ ಪುರಾತನ ವಾಸ್ತುಶಿಲ್ಪದ ಕಟ್ಟಡಗಳ ಈ ನೆಲ ನಿಮ್ಮನ್ನು ಕೂತಲ್ಲಿಂದ ನಿಧಾನಗತಿಯ ಟ್ರಾಮ್ಲ್ಲಿ ಫೋಟೋ ಕ್ಲಿಕ್ಕಿಸುತ್ತಲೇ ಇರುವಂತೆ ಮಾಡುತ್ತದೆ. ಮನೆ ಮತ್ತು ಕಟ್ಟಡ ತುದಿಗಳು, ಸೇರಿದಂತೆ ಇಲ್ಲಿನ ಟ್ರಾಮ್ ಪಕ್ಕದ ರಸ್ತೆಗಳೂ ಶಿಲ್ಪಾವರಣದ್ದು.
ಇಸ್ತಾಂಬುಲ್ ಸ್ಥಳೀಯವಾಗಿ ಕನಿಷ್ಠ ಎರಡು ದಿನಗಳನ್ನು ಬೇಡುವ ಪ್ರವಾಸ. ಆದರೆ ಲೋಕಲ್ ಟೂರ್ ಆಪರೇಟರ್ಗಳು ಇಲ್ಲೂ ಬಾಕಿ ಕಡೆಗಳಂತೆ ಅವರದ್ದೇ ಆದ ಶೈಲಿಯಲ್ಲಿ ಸ್ಥಳಾವಕಾಶ ಮಾಡುತ್ತಾರಾದರೂ, ಭಾರತೀಯ ಆಪರಟೇರ್ಗಳಂತೆ ಅಂಗಡಿ ಮುಂಗ್ಗಟ್ಟಿಗೆ ನಿಲ್ಲಿಸಿ ಖರೀದಿಸುವ ಒತ್ತಾಯಕ್ಕೆ ಒಯ್ಯುವ ಇರಾದೆ ಇದ್ದಿದ್ದು ಎಲ್ಲೂ ಕಾಣಲಿಲ್ಲ. ಭಾರತೀಯ ಹೆಚ್ಚಿನ ಟೂರ್ ಆಪರೇಟರ್ಗಳ ಸೆಟ್ಅಪ್ ಎಂದರೆ, ಪ್ರವಾಸ ಆರಂಭವಾಗುವ ಮೊದಲೇ ಅಂಗಡಿಗೆ ನುಗ್ಗಿಸಿ ಸಮಯ ಹಾಳು ಮಾಡುವುದರಿಂದ ಹಿಡಿದು, ಆಯ್ದ ಹೋಟೆಲ್ಗಳಲ್ಲೇ ದುಬಾರಿ ದರದ ಊಟದಲ್ಲಿ ಹಣ ಪೀಕುವ ಚಾಳಿ.
ಮೂಲತಃ ನಾಲ್ಕು ಬಾರಿ ಪುನರುತ್ಥಾನಗೊಂಡ ಈ ನೀಲಿ ಮಸೀದಿಯ ಈಗಿನ ಕಟ್ಟಡ 1913ರ ಹೊತ್ತಿಗೆ ಸಂಪೂರ್ಣ ಭಸ್ಮವಾಗಿ ಮೇಲೆದ್ದು ನಿಂತ ಭವನ. ಅದಕ್ಕೂ ಮೊದಲೊಮ್ಮೆ 1883ರಲ್ಲೇ ಇದು ಪುನರುತ್ಥಾನಗೊಂಡಿತ್ತಾದರೂ ಅದರ ಯಾವುದೇ ಛಾಯೆಗಳು ಈಗ ಉಳಿದಿಲ್ಲ. ಏನಿದ್ದರೂ ಹೀಗೆಯೇ ಇತ್ತು ಎನ್ನುವ ಹಾಗೆ, ಮೂಲ ಚಿತ್ರಣಕ್ಕೆ ಭಂಗ ಬಾರದಂತೆ ಮತ್ತದೆ ಒಟ್ಟೊಮನ್ ತುರ್ಕರ ಶೈಲಿಗೆ ಮರಳಿದ ಶಿಲ್ಪಿಗಳು ಈಗಲೂ ಅದೇ ಹಳೆಯ ಭವ್ಯತೆಯನ್ನೇ ಅಲ್ಲಿ ಉಳಿಸಿದ್ದಾರೆ. ಅನಾಮತ್ತು 240 ಹೆಚ್ಚು ಕಿಟಕಿಗಳು, ಇಪ್ಪತ್ತಾರು ದ್ವಾರಗಳು ಮತ್ತು ಮಧ್ಯದಲ್ಲಿ ಕಂಭವೇ ಇಲ್ಲದ ದೊಡ್ಡ ಗುಮ್ಮಟ ಪಕ್ಕದಲ್ಲಿನ ನಾಲ್ಕು ಮರಿ ಗುಮ್ಮಟಗಳ ಮೇಲೆ ಭಾರ ಹಾಕಿ ನಿಂತಿದೆ. ಒಟ್ಟೂ ಆರೆಂಟು ಗುಮ್ಮಟಗಳಿಗೆ ಆಧಾರಿತ ಕಂಭಗಳು ಚಿತ್ತಾರದಲ್ಲಿ ಗೊತ್ತೇ ಆಗುವುದಿಲ್ಲ.
ಇದರ ಯಾವುದೇ ಕೋನದಿಂದ ನೋಡಿದರೂ ಒಂದೇ ರೀತಿ ಕಾಣುವಂತೆ ಮಾಡಲು ಸುತ್ತಲೂ ಆರು ಮಿನಾರ್ಗಳ ಕೊಡುಗೆ ದೊಡ್ಡದು. ಮಿನಾರ್ಗಳು, ಗುಮ್ಮಟದ ಒಳಭಾಗಗಳೂ, ಪ್ರತಿ ಕಿಟಕಿಯ ಕಮಾನುಗಳು ಹೀಗೆ ಎಲ್ಲೂ ಬಿಡದೆ ಕಲೆಗಾರಿಕೆಯ ನೈಪುಣ್ಯ ಮೆರೆಯಲಾಗಿದೆ. 1985ರಲ್ಲಿ ಇದು ಯುನೆಸ್ಕೊ ಪಟ್ಟಿಗೆ ಸೇರುವುದರೊಂದಿಗೆ ನೀಲಿ ಮಾಸ್ಕ್ ಎಂದೇ ಖ್ಯಾತಿಯ ಪ್ರಾರ್ಥನಾ ಮಂದಿರ ಹೆಚ್ಚಿನ ಪ್ರವಾಸಿಗರಿಗೆ ತೆರೆದುಕೊಂಡಿತು. ಸ್ಥಳೀಯ ವಾಲಂಟಿಯರ್ಗಳು ನಮಗೆ ನೀಡುವ ಸೇವೆ ಅನನ್ಯ. ಬಿಸಿನೀರು, ಸ್ಥಳೀಯ ಹಣ್ಣು, ಆದರಾತಿಥ್ಯ ಮತ್ತು ಒಳಭಾಗದ ದರ್ಶನಕ್ಕೆ ಎಲ್ಲೆಲ್ಲೂ ಲಭ್ಯವಿದ್ದು ದೊಡ್ಡ ವಿಸ್ಮಯ ಎಂದರೆ ನಮ್ಮಲ್ಲಿ ನೂರು ಜನ ಸೇರಿದರೆ ಸಂತೆಯಾಗುವ ಗೌಜಿ ಇದ್ದರೆ, ಇಲ್ಲಿ ಪ್ರತಿ ಕ್ಷಣ ಹತ್ತು ಸಾವಿರ ಜನರಿರುತ್ತಾರಾದರೂ ಅಕ್ಷರಶಃ ಧ್ಯಾನದ ಮೌನ ನಮ್ಮನ್ನಾಳುತ್ತದೆ. ಕೇವಲ ಹೆಚ್ಚೆಂದರೆ ಕ್ಯಾಮೆರಾ ಶಬ್ದ ನಮ್ಮನ್ನು ಅಲುಗಾಡಿಸಿತು.
ನಗರ ಕೇಂದ್ರದಲ್ಲಿ ರಾತ್ರಿಯ ಊಟೋಪಚಾರ ಎಲ್ಲ ಖ್ಯಾತ ಇಸ್ತಾಂಬುಲ್ ಸ್ಟ್ರೀಟ್ ಪ್ಲೇ ನಲ್ಲಿ ಮಾಡುವುದೆಂದು ನೋಡಿಕೊಂಡಿದ್ದೇನಲ್ಲ. ಅಲ್ಲಿಗೆ ಹೋದರೆ ಅದು ಅಕ್ಷರಶಃ ನಮ್ಮ ಹೋಟೆಲ್ ಮಾದರಿಯದ್ದೇ ಹೊರಾವರಣ ಜಾತ್ರೆ. ಎಲ್ಲಿ ಕೂತರೂ ನಿಂತರೂ ದುಂಬಾಲು ಬೀಳುವ ಹೋಟೆಲ್ ಸಹಾಯಕರು. ಚಿತ್ತಾಕರ್ಷಕ ಹೊರಾವರಣದ ಹೋಟೆಲ್ಗಳಲ್ಲಿ ಎಲ್ಲಿ ಕೂತರೂ ಅದ್ಭುತ ರಾತ್ರಿಯ ಇಸ್ತಾಂಬುಲ್ ಝುಗಮಗಿಸುತ್ತದೆ. ಮಾಂಸಾಹಾರಿಗಳಿಗೆ ಇದು ವಿಶೇಷ. ಬಿಯರ್ಗೂ ನೀರಿಗೂ ವ್ಯತ್ಯಾಸ ಇಲ್ಲ. ಆದರೆ ಬೆಲೆ ಆಕರ್ಷಕ. ನಮ್ಮಲ್ಲಿ ಮುಟ್ಟಿದ್ದರೆ ಮುನ್ನೂರು ರೂ. ದಾಟುವ ಬಿಯರು ಇಲ್ಲಿ ಒಬ್ಬಾತ ನಾಲ್ಕಾರು ಮಗ್ ಕುಡಿದರೂ ನೂರು ದಾಟುವುದಿಲ್ಲ. ಹಾಗಾಗಿ ಕಾಮನ್ ಪಾನೀಯದ ತರಹ ಬಿಯರ್ ಇಲ್ಲಿ ಹರಿಯುತ್ತಿರುತ್ತದೆ.
ಕಲಾಕೃತಿ ಮತ್ತು ವಾಸ್ತುಶಿಲ್ಪದ ದೃಷ್ಟಿಯಿಂದ ಆಕರ್ಷಿಸುವ ನೀಲಿ ಮಸೀದಿ ಒಳಗೂ ಹೊರಗೂ ಎಸ್ಕಲೇಟರ್ ಸೇರಿದಂತೆ ಸಂಪೂರ್ಣ ನಗರದ ಯಾವ ಮೂಲೆಯಿಂದಲೂ ಎದ್ದು ಕಾಣುವಂತೆ ತಲೆಎತ್ತಿ ನಿಲ್ಲಿಸಲಾದ ವಿಶಿಷ್ಟ ಭವನ.
(ಲೇಖಕರು ಕತೆಗಾರರು)