ಅಸೂಯೆ ತಂದ ಸಂಕಟ: ಆ ಕ್ಷಣ ಅಂಕಣ...

Aa Kshana
Published on
ನಗರವೊಂದರಲ್ಲಿ ಬಡ್ಡಿ ವ್ಯವಹಾರ ಮಾಡಿಕೊಂಡಿದ್ದ 35 ವರ್ಷದ ಪ್ರಕಾಶ್​ನಿಗೆ 28 ವಯಸ್ಸಿನ ಪತ್ನಿ ಜಮುನಾಳ ಸೌಂದರ್ಯದ ಬಗ್ಗೆ ಬಹಳ ಹೆಮ್ಮೆ. ಗರ್ಭ ಧರಿಸಿದರೆ ಅವಳ ಮೈಮಾಟ ಹಾಗೂ ರೂಪ ಹಾಳಾಗುವುದೆಂದು ಭಾವಿಸಿ ಆತ ಸೂಕ್ತ ಕುಟುಂಬ ಯೋಜನಾ ಕ್ರಮಗಳನ್ನು ತೆಗೆದುಕೊಂಡಿದ್ದ. ಜಮುನಾ ಪುರುಷರೊಂದಿಗೆ ಮಾತನಾಡಲೇ ಕೂಡದು ಎಂಬ ನಿಬಂಧನೆ ಹಾಕಿದ್ದ ಪ್ರಕಾಶ್ ಮನೆಯಲ್ಲಿ ಪುರುಷ ಕೆಲಸಗಾರರನ್ನು ನೇಮಿಸುತ್ತಿರಲಿಲ್ಲ. ಜಮುನಾ ಹೊರಗೆ ಹೋಗಬೇಕಾದರೆ ಅವನೊಡನೆಯೇ ಹೋಗಬೇಕಾಗಿತ್ತು. ಇದಲ್ಲದೆ ಆತ ಮನೆಯೊಳಗೆ ಕ್ಯಾಮರಾಗಳನ್ನು ಅಳವಡಿಸಿ ತನ್ನ ಮೊಬೈಲ್ ಫೋನ್ ಮೂಲಕವೇ ಮನೆಯಲ್ಲೇನಾಗುತ್ತಿದೆಯೆಂದು ಗಮನಿಸುತ್ತಿದ್ದ.

ಏತನ್ಮಧ್ಯೆ ಜಮುನಾಳ ತಂಗಿ ಸುಗುಣಾ, ಸುಭಾಷ್ ಎನ್ನುವವನನ್ನು ಲಗ್ನವಾಗಿ ಜಮುನಾಳಿದ್ದ ನಗರಕ್ಕೇ ವಾಸಿಸಲು ಬಂದಳು. ಸುಭಾಷ್ ಜಮುನಾಳ ಕಾಲೇಜಿನಲ್ಲಿಯೇ ಓದಿದ್ದು ಬಾಲ್ಯದಿಂದಲೂ ಪರಿಚಯವಿದ್ದ ಕಾರಣ, ಕಡೆಗೂ ತನ್ನ ಏಕಾಂತತೆ ಮತ್ತು ಏಕತಾನತೆಯನ್ನು ಕಳೆಯಲು ತಂಗಿ ಹಾಗೂ ಮೈದುನನ ಕಂಪನಿ ದೊರೆಯುತ್ತದೆ ಎಂದು ಆಕೆ ಸಂತಸಗೊಂಡಳು. ಕಾಲಕ್ರಮೇಣ ಅಕ್ಕ-ತಂಗಿಯರು ಒಬ್ಬರೊಬ್ಬರ ಮನೆಗಳಿಗೆ ಹೋಗತೊಡಗಿದರು. ಆದರೆ ಪತ್ನಿ ಮನೆಯಿಂದ ಹೊರಗೆ ಹೋಗುವುದನ್ನು ಇಷ್ಟಪಡದಿದ್ದ ಪ್ರಕಾಶ್ ಅವಳಿಗೆ ಹೊರಗೆ ಹೋಗದಿರಲು ಹೇಳಿದಾಗ ಗಂಡಹೆಂಡಿರ ಮಧ್ಯೆ ಜಗಳವಾಯಿತು.

‘ನೀನು ನಿನ್ನ ತಂಗಿಯ ಗಂಡನೊಡನೆ ಚೆಲ್ಲಾಟವಾಡುತ್ತಿರುವುದನ್ನು ಗಮನಿಸುತ್ತಿದ್ದೇನೆ. ಇನ್ನು ಮುಂದೆ ನಿನ್ನ ತಂಗಿ ಮತ್ತು ಸುಭಾಷ್ ನಮ್ಮ ಮನೆಗೆ ಬರಕೂಡದು ಮತ್ತು ನೀನೂ ಅವರ ಮನೆಗೆ ಹೋಗಕೂಡದು’ ಎಂದ ಪ್ರಕಾಶ್. ಸ್ವಂತ ಸೋದರಿಯನ್ನು ಮನೆಗೆ ಬರಬೇಡ ಎಂದು ಹೇಗೆ ಹೇಳಲಿ ಎಂದು ಜಮುನಾ ಕೇಳಿದಾಗ ಕೋಪಗೊಂಡ ಪ್ರಕಾಶ್, ‘ನೀನು ಹೇಳದಿದ್ದರೆ ನಾನೇ ಹೇಳುವೆ’ ಎಂದ. ಮುಂದೆ ಸುಭಾಷ್ ಪತ್ನಿಯೊಡನೆ ಅವರ ಮನೆಗೆ ಬಂದಾಗ, ‘ಇನ್ನು ಮೇಲೆ ನೀವು ಸುಖಾಸುಮ್ಮನೆ ನಮ್ಮ ಮನೆಗೆ ಬರಬಾರದು. ಬರುವ ಮುನ್ನ ನನ್ನ ಅನುಮತಿ ಪಡೆಯಬೇಕು’ ಎಂದ.

ಬೇಸರಗೊಂಡ ಸುಭಾಷ್ ಅಂದಿನಿಂದ ಅವರ ಮನೆಗೆ ಬರುವುದನ್ನೇ ನಿಲ್ಲಿಸಿದ. ಜಮುನಾಗೆ ತೀರಾ ಬೇಸರವಾಯಿತು. ‘ನನ್ನ ಮೇಲೆ 24 ಗಂಟೆಗಳ ನಿಗಾ ಇಟ್ಟಿರುವ ನಿನಗೆ ಸಂದೇಹ ಹೇಗೆ ಬಂದಿತು? ನಮ್ಮ ಮದುವೆಯಾದಾಗಿನಿಂದ ನಾನು ಬೇರಾವುದೇ ಪುರುಷನ ಜತೆಗೆ ಸಂಪರ್ಕವಿಟ್ಟಿಲ್ಲ ಎಂದು ತಿಳಿದಿಲ್ಲವೇ’ ಎಂದಳು. ಸಂಶಯ ಸ್ವಭಾವದ ಪತಿ ಬದಲಾಗುವುದಿಲ್ಲ ಎಂದು ತಿಳಿದಿದ್ದ ಕಾರಣ ಆಕೆ ಗಂಡನ ಅಪ್ಪಣೆಯನ್ನು ಪಾಲಿಸುತ್ತ ಹೊರಗೆ ಹೋಗದೇ ಮನೆಯಲ್ಲೇ ಟಿವಿ ನೋಡುತ್ತ ಕಾಲಕಳೆಯುತ್ತಿದ್ದಳು.

ಒಂದು ದಿನ ಪ್ರಕಾಶ್ ‘ಜೋಗ ಜಲಪಾತ ನೋಡಲು ಹೋಗೋಣ. ಮನೆಯೊಳಗೇ ಇದ್ದು ನಿನಗೂ ಬೇಸರವಾಗಿರಬೇಕು’ ಎಂದಾಗ ಜಮುನಾ ಆಶ್ಚರ್ಯಗೊಂಡರೂ ಸಂತಸದಿಂದಲೇ ಒಪ್ಪಿದಳು. ಇಬ್ಬರೂ ಕಾರಿನಲ್ಲಿ ಹೋದರು. ಪ್ರವಾಸಿಗರು ವೀಕ್ಷಿಸುವ ಜಾಗದಿಂದ ಜಲಪಾತ ನೋಡಿದ ಬಳಿಕ ನೀರು ಮೇಲಿನಿಂದ ಪ್ರಪಾತಕ್ಕೆ ಧುಮುಕುವ ಜಾಗದಲ್ಲಿ ಸಿನಿಮಾವೊಂದನ್ನು ತೆಗೆದಿದ್ದನ್ನು ನೆನಪಿಸಿ ಅದನ್ನು ನೋಡಲು ಜಮುನಾಳನ್ನು ಅಲ್ಲಿಗೆ ಕರೆದೊಯ್ದ. ಆ ಜಾಗವು ಎತ್ತರದ ಪ್ರದೇಶದಲ್ಲಿದ್ದ ಕಾರಣ ಜಮುನಾ ತನಗೆ ತಲೆ ತಿರುಗಿದ ಹಾಗಾಗುತ್ತಿದೆ ಎಂದು ಹೇಳಿ ಮೇಲಕ್ಕೇರಲಿಲ್ಲ. ಪ್ರಕಾಶ್ ಬೇಸರದಿಂದ ತಾನೊಬ್ಬನೇ ಜಲಪಾತದ ಮೇಲ್ಭಾಗವನ್ನು ನೋಡಿಕೊಂಡು ಬಂದ.

ಕೆಲದಿನಗಳ ನಂತರ ಜಮುನಾಳ ಸಹಪಾಠಿ ಮೋಹನ್ ಅವಳ ಮನೆಗೆ ಬಂದ. ಅವರಿಬ್ಬರು ಮಾತನಾಡುತ್ತ ಕುಳಿತಿದ್ದಾಗ ಏಕಾಏಕಿ ಮನೆಗೆ ಬಂದ ಪ್ರಕಾಶ್ ‘ನನ್ನ ಹೆಂಡತಿ ಒಬ್ಬಳೇ ಇರುವಾಗ ನೀನೇಕೆ ಇಲ್ಲಿಗೆ ಬಂದೆ’ ಎಂದು ಗದರಿ ಮೋಹನನನ್ನು ಮನೆಯಿಂದ ಹೊರಗಟ್ಟಿದ. ಜಮುನಾಳನ್ನು ಬೈದು ಕೋಲಿನಿಂದ ಥಳಿಸಿದ. ಮಾರನೆಯ ದಿನ ‘ನನ್ನದು ತಪ್ಪಾಯಿತು, ಕ್ಷಮಿಸು. ಅಚಾತುರ್ಯದಿಂದ ಹಲ್ಲೆ ಮಾಡಿದೆ. ನೀನು ಬೇರೆ ಪುರುಷನೊಡನೆ ಮಾತನಾಡುವುದನ್ನು ನೋಡಲು ನನಗೆ ಸಹಿಸಲು ಆಗುವುದಿಲ್ಲ’ ಎಂದು ಕ್ಷಮೆ ಕೋರಿದ. ಗಂಡ ಬದಲಾಗುವ ಸ್ವಭಾವದವನಲ್ಲವೆಂದು ಜಮುನಾ ಸುಮ್ಮನಾದಳು.

ತಾನು ಅವಳನ್ನು ನೋಯಿಸಿದ ತಪ್ಪಿಗೆ ಪರಿಹಾರವೆಂದು ಪ್ರಕಾಶ್ ಮಾರನೆಯ ದಿನ ಅವಳನ್ನು ವನ್ಯಧಾಮಕ್ಕೆ ಪ್ರವಾಸಕ್ಕೆ ಕರೆದುಕೊಂಡು ಹೋದ. ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ, ನಾವು ಇನ್ನೂ ದೂರ ಹೋಗಬೇಕಾಗಿದೆ, ಇಲ್ಲೇ ರಸ್ತೆಯ ಪಕ್ಕದಲ್ಲಿ ಮೂತ್ರ ವಿಸರ್ಜಿಸು ಎಂದು ಕಾರನ್ನು ನಿಲ್ಲಿಸಿದ. ಆಕೆ ರಸ್ತೆಯ ಪಕ್ಕದ ಪೊದೆಯೊಂದಕ್ಕೆ ಹೋಗಿ ವಾಪಸಾಗುವಾಗ ಪ್ರಕಾಶ್ ಕಾರನ್ನು ಇದ್ದಕ್ಕಿದ್ದಂತೆ ಚಾಲೂ ಮಾಡಿ ವೇಗವಾಗಿ ಜಮುನಾಳತ್ತ ನುಗ್ಗಿಸಿದ. ಕಡೇ ಗಳಿಗೆಯಲ್ಲಿ ಇದನ್ನು ಕಂಡ ಜಮುನಾ ಪಕ್ಕಕ್ಕೆ ಸರಿದಳು. ಇಲ್ಲವಾದಲ್ಲಿ ಕಾರಿನ ಚಕ್ರದಡಿ ಸಿಲುಕಬೇಕಾಗಿತ್ತು. ‘ಕ್ಲಚ್ ಸಮಸ್ಯೆಯಿಂದಾಗಿ ಕಾರು ನಿಯಂತ್ರಣಕ್ಕೆ ಬರದೇ ನಿನ್ನತ್ತಲೇ ನುಗ್ಗಿತು. ದೇವರ ದಯೆ, ನಿನಗೇನೂ ಆಗಲಿಲ್ಲ’ ಎಂದು ಪ್ರಕಾಶ್ ಅವಳನ್ನು ಸಮಾಧಾನಪಡಿಸಿದ. ಎರಡು ದಿನಗಳ ನಂತರ ಊರಿಗೆ ವಾಪಸಾದರು.

ಒಂದು ದಿನ ಸುಭಾಷ್ ಜರೂರು ಕೆಲಸದ ನಿಮಿತ್ತ ಜಮುನಾಳ ಮನೆಗೆ ಬರಬೇಕಾಯಿತು. ಆತ ಬಂದದ್ದನ್ನು ತನ್ನ ಮೊಬೈಲಿನಲ್ಲಿ ಅಳವಡಿಸಿದ್ದ ಆಪ್ ಮೂಲಕ ಕಂಡ ಪ್ರಕಾಶ್ ಐದೇ ನಿಮಿಷಗಳಲ್ಲಿ ಮನೆಗೆ ವಾಪಸಾಗಿ, ‘ನಾನಿಲ್ಲದಾಗ ನನ್ನ ಪತ್ನಿಯನ್ನು ಬಲೆಗೆ ಹಾಕಿಕೊಳ್ಳಲು ಬಂದಿರುವೆಯಾ’ ಎಂದು ಬೈದಾಗ ಸಿಟ್ಟಿಗೆದ್ದ ಸುಭಾಷ್ ಅಲ್ಲಿಂದ ಹೊರಟುಹೋದ. ಅದೇ ರಾತ್ರಿ ಜಮುನಾ ಮಲಗಿದ್ದಾಗ ಪ್ರಕಾಶ್ ಬೆಡ್​ರೂಮಿನ ಕಿಟಕಿಗೆ ಸೀರೆಯೊಂದನ್ನು ಬಿಗಿದ. ಜಮುನಾಳನ್ನು ಉಸಿರುಗಟ್ಟಿಸಿ ಕೊಲೆಮಾಡಿ ಆನಂತರ ಶವವನ್ನು ಫ್ಯಾನಿಗೆ ಕಟ್ಟಿದ್ದ ಸೀರೆಗೆ ನೇತುಹಾಕಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಳೆಂದು ಬಿಂಬಿಸಹೊರಟಿದ್ದ.

ಅಷ್ಟರಲ್ಲಿ ಎಚ್ಚೆತ್ತ ಜಮುನಾ ‘ಏನು ಮಾಡುತ್ತಿದ್ದೀರಿ?’ ಎಂದು ಕೇಳಿದಾಗ ಗಾಬರಿಯಾದ ಪ್ರಕಾಶ್ ಅಲ್ಲೇ ಇದ್ದ ಹೂದಾನಿಯಿಂದ ಅವಳ ತಲೆಗೆ ಹೊಡೆದದ್ದಲ್ಲದೇ ಸ್ಕೂ › ಡ್ರೈವರ್​ನಿಂದ ಅವಳ ಕುತ್ತಿಗೆಯನ್ನು ಚುಚ್ಚಿ ಕೊಂದ. ಯಾರೋ ಕಳ್ಳರು ಮನೆಗೆ ನುಗ್ಗಿ ಜಮುನಾಳನ್ನು ಕೊಂದರೆಂದು ಪೊಲೀಸರು ತಿಳಿಯಲೆಂದು ಮನೆಯಲ್ಲಿದ್ದ ಕೆಲವು ಆಭರಣಗಳನ್ನು ತೆಗೆದುಕೊಂಡು ಹೊರಟುಹೋದ. ಮಾರನೆಯ ಬೆಳಗ್ಗೆ ತಾನೇ ಪೊಲೀಸ್ ಕಂಟ್ರೋಲ್ ರೂಂಗೆ ಫೋನ್ ಮಾಡಿ ತಾನು ಬೇರೆ ಊರಿನಲ್ಲಿರುವುದಾಗಿಯೂ ಎಷ್ಟೇ ಪ್ರಯತ್ನಿಸಿದರೂ ಪತ್ನಿ ಫೋನ್ ಸ್ವೀಕರಿಸುತ್ತಿಲ್ಲವೆಂದೂ ದೂರು ನೀಡಿದ. ಮುಂಬಾಗಿಲು ತೆರೆದಿದ್ದ ಕಾರಣ ಮನೆಯನ್ನು ಸುಲಭವಾಗಿ ಪ್ರವೇಶಿಸಿದ ಪೊಲೀಸರು ಸ್ವಾಭಾವಿಕವಾಗಿಯೇ ಯಾರೋ ಕಳ್ಳತನ ಮಾಡಲು ಬಂದು ಕೊಲೆ ಮಾಡಿರಬಹುದು ಎಂದು ಶಂಕಿಸಿದರು. ಆದರೆ ಫ್ಯಾನ್​ಗೆ ಕಟ್ಟಿದ್ದ ಸೀರೆಯನ್ನು ಕಂಡಾಗ ಅವರಿಗೆ ಸಂಶಯ ಮೂಡಿತು. ಪೊಲೀಸರು ಪ್ರಕಾಶ್​ನನ್ನು ಕರೆಸಿ ವಿಚಾರಿಸಿದಾಗ ಆತ ತನಗೇನೂ ತಿಳಿಯದಂತೆ ನಟಿಸಿದ. ಅಷ್ಟರಲ್ಲಿ ಅಲ್ಲಿಗೆ ಬಂದ ಸುಗುಣಾ ಮತ್ತು ಸುಭಾಷ್ ತಮಗೆ ಪ್ರಕಾಶ್​ನ ಮೇಲೆಯೇ ಸಂಶಯವಿರುವುದಾಗಿ ತಿಳಿಸಿದರು. ಕೊಲೆಯಾಗಿದ್ದ ಕೋಣೆಯಲ್ಲಿ ಪ್ರಕಾಶ್ ಹಾಗೂ ಜಮುನಾರಿಬ್ಬರದಲ್ಲದೆ ಬೇರಾವ ಬೆರಳಚ್ಚು ಗುರುತುಗಳೂ ಇರದಿದ್ದಾಗ ಪ್ರಕಾಶ್​ನನ್ನು ತೀವ್ರವಾಗಿ ವಿಚಾರಣೆ ನಡೆಸಲಾಯಿತು. ಆತ ಹೀಗೆಂದ: ‘ಜಮುನಾ ಬೇರೆ ಯಾವ ಪುರುಷನೊಡನೆ ಮಾತನಾಡಿದರೂ ನನಗೆ ಅಸೂಯೆಯಾಗುತ್ತಿದ್ದುದಲ್ಲದೆ ಆಕೆ ಇನ್ನೊಬ್ಬರ ಜತೆಗೆ ಸಂಬಂಧ ಹೊಂದಿದ್ದಾಳೆಂಬ ಸಂಶಯ ಮೂಡುತ್ತಿತ್ತು. ಜಮುನಾ ಸುಭಾಷನ ಜತೆಗೆ ಅನೈತಿಕ ಸಂಬಂಧವಿರಿಸಿಕೊಂಡಿದ್ದಾಳೆಂದು ಅನುಮಾನವಿತ್ತು. ಹೀಗಾಗಿಯೇ ಅವಳ ಕೊಲೆ ಮಾಡುವ ಪ್ರಯತ್ನ ಮಾಡಿದೆ. ನಾವು ಜೋಗ ಜಲಪಾತಕ್ಕೆ ಹೋದಾಗ ಕನ್ನಡ ಸಿನಿಮಾವೊಂದರಲ್ಲಿ ಮಾಡಿದಂತೆ ಅವಳನ್ನು ಪ್ರಪಾತಕ್ಕೆ ನೂಕಿ ಕಾಲು ಜಾರಿ ಬಿದ್ದಳೆಂದು ಹೇಳಬೇಕೆಂಬ ಯತ್ನ ಮಾಡಿದೆ. ಅದು ಸಫಲವಾಗಲಿಲ್ಲ. ನಂತರ ಕಾರನ್ನು ಹರಿಸಿ ಯಾವುದೋ ಕಾರು ಅವಳಿಗೆ ಡಿಕ್ಕಿ ಹೊಡೆದು ಪರಾರಿಯಾಯಿತೆಂದು ಬಿಂಬಿಸಲು ಹೊರಟೆ. ಅದೂ ಸಫಲವಾಗಲಿಲ್ಲ. ಕಡೆಗೆ ಅವಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಶವವನ್ನು ಫ್ಯಾನಿಗೆ ನೇತುಹಾಕಿ ಆತ್ಮಹತ್ಯೆಮಾಡಿಕೊಂಡಳೆಂದು ಬಿಂಬಿಸುವ ಪ್ರಯತ್ನ ಮಾಡಿದೆ. ಆದರೆ ಉಸಿರುಗಟ್ಟಿಸುವ ಮೊದಲೇ ಆಕೆ ಎಚ್ಚರಗೊಂಡಾಗ ಅವಳ ತಲೆ ಜಜ್ಜಿ, ಸ್ಕೂ › ಡ್ರೖೆವರಿನಿಂದ ತಿವಿದು ಕೊಲೆ ಮಾಡಿದೆ. ಅವೆರಡನ್ನೂ ನನ್ನ ರಕ್ತಸಿಕ್ತವಾಗಿದ್ದ ಬಟ್ಟೆಗಳ ಜತೆಗೆ ಪರ್ವತಪ್ರದೇಶದಲ್ಲೆಸೆದೆ. ಆನಂತರ ದೇವಸ್ಥಾನವೊಂದಕ್ಕೆ ಹೋಗಿ ಪ್ರಾಯಶ್ಚಿತ್ತವಾಗಿ ತಲೆ ಬೋಳಿಸಿಕೊಂಡೆ. ಅಲ್ಲಿಂದಲೇ ಕಂಟ್ರೋಲ್ ರೂಮ್ೂ ಫೋನ್ ಮಾಡಿದೆ. ನಾನು ಸಿನಿಮಾ ಮತ್ತು ವಿಡಿಯೋಗಳನ್ನು ನೋಡಿ ಕೊಲೆ ಹೇಗೆ ಮಾಡಬೇಕೆಂದು ಕಲಿತೆ’ ಎಂದ.

ಪೊಲೀಸರು ಅವನೊಡನೆ ಆ ಪರ್ವತ ಪ್ರದೇಶಕ್ಕೆ ಹೋಗಿ ನೋಡಿದಾಗ ಬಟ್ಟೆಗಳಾಗಲೀ, ಆಯುಧಗಳಾಗಲೀ ಸಿಗಲಿಲ್ಲ. ಆದರೆ ಮನೆಯಲ್ಲಿ ಹೆಂಡತಿಯ ಚಲನವಲನ ಗಮನಿಸಲು ಪ್ರಕಾಶ್ ಅಳವಡಿಸಿದ್ದ ಕ್ಯಾಮರಾದಲ್ಲಿ ಕೃತ್ಯ ದಾಖಲಾಗಿತ್ತು. ತೀರಾ ಚಾಲಾಕಿತನ ಮಾಡಲು ಹೊರಟು ಪ್ರಕಾಶ್ ಸುಲಭದಲ್ಲಿ ಸಿಕ್ಕಿಬಿದ್ದ. ಅವನನ್ನು ಬಂಧಿಸಿ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ವಿಚಾರಣೆ ಇನ್ನೂ ನಡೆದಿಲ್ಲ. ಇಡೀ ಪ್ರಕರಣ ಸಾಂಧರ್ಬಿಕ ಸಾಕ್ಷ್ಯಗಳ ಮೇಲೆ ಅವಲಂಬಿತವಾಗಿದೆ.

‘ಸಾವು ಅಸೂಯೆಯ ಹಾಗೂ ಸ್ವಾಮಿತ್ವದ ಪ್ರೇಮದ ರೂಪದಲ್ಲಿ ಜೀವನವನ್ನು ಬಿಗಿದಪ್ಪುತ್ತದೆ’ ಎಂದು ‘ಲೈಫ್ ಆಫ್ ಪೈ’ ಕಾದಂಬರಿಯಲ್ಲಿ ಯಾನ್ ಮಾರ್ಟೆಲ್ ಬರೆದಂತೆ ಸುಂದರ ಜೀವನದ ಆಸೆಹೊಂದಿದ್ದ ಸುಂದರಿ ಜಮುನಾ, ಪ್ರಕಾಶ್​ನ ಅಪನಂಬಿಕೆಯ ಫಲವಾಗಿ ಕೊಲೆಗೀಡಾದದ್ದು ದುರ್ದೈವ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net