ಎಲ್ಲೆಲ್ಲೂ ಟೆನ್ಶನ್​ : ದೊಡ್ಡ ಸಮಸ್ಯೆಯಾಗಿ ಕಾಡುತಿದೆ ಮಾನಸಿಕ ಆರೋಗ್ಯದ ರಕ್ಷಣೆ

photo-2-68a4be1a2ba17
Published on

ಪೌಷ್ಟಿಕಾಂಶವಿಲ್ಲದ ಆಹಾರ, ಜೀವನಶೈಲಿಯಲ್ಲಿ ಬದಲಾವಣೆಯಿಂದ ದೈಹಿಕ ಕಾಯಿಲೆಗಳು ಹೆಚ್ಚುತ್ತಿದ್ದು, ವೈದ್ಯಕೀಯ ಲೋಕಕ್ಕೆ ಸವಾಲಾಗಿದೆ. ಆದರೆ, ಮಾನಸಿಕ ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಸಮಸ್ಯೆ ಇದಕ್ಕಿಂತಲೂ ಬೃಹತ್ ರೂಪ ತಳೆದಿದ್ದು, ಎಲ್ಲ ವಯೋಮಾನದವರನ್ನು ಕಾಡುತ್ತಿದೆ. ಮೆಂಟಲ್ ಹೆಲ್ತ್​ಗೆ ಆದ್ಯತೆ ನೀಡಬೇಕು ಎಂಬ ಅರಿವು ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆಯಾದರೂ, ಮಾನಸಿಕ ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಗಣನೀಯವಾಗಿ ಹೆಚ್ಚುತ್ತಿರುವುದು ಕಳವಳ ಮೂಡಿಸಿದೆ.

ಇದು ಡಿಜಿಟಲ್ ಯುಗ. ಎಲ್ಲವೂ ವೇಗವಾಗಿ ಆಗಬೇಕು ಎಂಬ ಧಾವಂತ. ಸಾವಧಾನಕ್ಕೆ ಆಸ್ಪದವಿಲ್ಲ. ವೇಗದ ಹುಚ್ಚುಕುದುರೆಯನ್ನು ಏರಿರುವ ಮನುಷ್ಯ ಈ ದಾರಿಯಲ್ಲಿ ಸ್ವಲ್ಪದೂರ ಹೋಗುತ್ತಿದ್ದಂತೆ ನಿರಾಶೆಗೊಂಡು ‘ನಿಧಾನವೇ ಪ್ರಧಾನ’ ಎಂಬ ನಂಬಿಕೆಗೆ ಮರಳುತ್ತಿದ್ದಾನೆ. ಆದರೆ, ಒತ್ತಡದ ಬದುಕು, ಸಂಬಂಧಗಳಲ್ಲಿನ ಉದ್ವಿಗ್ನತೆ ಮತ್ತು ಭಾವನಾತ್ಮಕ ಬೆಂಬಲದ ಕೊರತೆಯಿಂದ ತುಂಬ ಜನರು ‘ನಾನು ಒಂಟಿ, ಯಾವುದಕ್ಕೂ ಪ್ರಯೋಜನ ಇಲ್ಲದವನು/ಳು’ ಎಂಬ ಭಾವನೆಯಿಂದ ಬಳಲುತ್ತಿದ್ದು, ಇದೇ ಮುಂದೆ ಉದ್ವೇಗ, ಖಿನ್ನತೆ, ಆತಂಕಕ್ಕೆ ದಾರಿ ಮಾಡಿಕೊಡುತ್ತಿದೆ. ಹಾಗಾಗಿ ಜನರು ನೆಮ್ಮದಿಯ ಬದುಕನ್ನು ಅರಸುತ್ತಿದ್ದು, ಇದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಮಾನಸಿಕ ಆರೋಗ್ಯದತ್ತ ಗಮನ ನೀಡುತ್ತಿದ್ದಾರೆ. ಇದೇ ವೇಳೆ ಮೆಂಟಲ್ ಹೆಲ್ತ್ ಎಂಬುದು ದೊಡ್ಡ ಸವಾಲಾಗಿ ಬದಲಾಗುತ್ತಿದೆ ಎಂಬುದರತ್ತ ತಜ್ಞರು ಬೊಟ್ಟು ಮಾಡಿದ್ದಾರೆ.

ಇದಕ್ಕೆ ಸಾಕ್ಷಿ ಕೇಂದ್ರ ಸರ್ಕಾರ ಆರಂಭಿಸಿರುವ ಸಹಾಯವಾಣಿ ಟೆಲಿಮಾನಸ್​ಗೆ ಸಿಗುತ್ತಿರುವ ಸ್ಪಂದನೆ. 2022ರ ಅಕ್ಟೋಬರ್ 10ರಂದು ಈ ಸಹಾಯವಾಣಿ ಆರಂಭಿಸಲಾಗಿದ್ದು, ಟೆಲಿಮಾನಸ್​ಗೆ 2022ರ ಡಿಸೆಂಬರ್ 1ರಿಂದ 2025ರ ಜುಲೈ 24ರವರೆಗೆ (966 ದಿನಗಳಲ್ಲಿ) 34 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 24.25 ಲಕ್ಷ ಕಾಲ್​ಗಳು ಬಂದಿವೆ. ಅಂದರೆ ದಿನಕ್ಕೆ ಸರಾಸರಿ 2511 ಜನರು ಮಾನಸಿಕ ಸ್ವಾಸ್ಥ್ಯ ರಕ್ಷಣೆಗೆ ಸಹಾಯ ಕೋರುತ್ತಿದ್ದಾರೆ. ಈ ಸಹಾಯವಾಣಿಯನ್ನು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ನಿರ್ವಹಿಸುತ್ತಿದೆ.

ಪ್ರಾಬ್ಲಂ ಇದೆ

ಎಲ್ಲ ವಯಸ್ಸಿನವರು ಮಾನಸಿಕ ಸಮಸ್ಯೆ ಅಥವಾ ಅಸುರಕ್ಷಿತ ಭಾವನೆಯನ್ನು ಎದುರಿಸುತ್ತಿದ್ದಾರೆ. 31ರಿಂದ 60 ವರ್ಷದ ವಯೋಮಾನದವರು ಹೆಚ್ಚಾಗಿ ಉದ್ವಿಗ್ನತೆ, ಖಿನ್ನತೆ, ಒತ್ತಡ, ಆತಂಕವನ್ನು ಎದುರಿಸುತ್ತಿದ್ದಾರೆ. 31-60 ವಯೋಮಾನದವರು ಟೆಲಿಮಾನಸ್ ಸಹಾಯವಾಣಿಗೆ ಮಾಡಿದ ಕರೆಗಳ ಸಂಖ್ಯೆ 2,86,286 (ದಿನಕ್ಕೆ ಸರಾಸರಿ 296 ಕರೆಗಳು). ನಂತರದ ಸ್ಥಾನದಲ್ಲಿದ್ದಾರೆ 19ರಿಂದ 30 ವಯೋಮಾನದವರು. ಇವರಿಂದ ಬಂದ ಕರೆಗಳು 1,98,409 (ಪ್ರತಿನಿತ್ಯ ಸರಾಸರಿ 205 ಕರೆಗಳು). 0-18 ವಯೋಮಾನದವರಿಂದ ಬಂದ ಕರೆಗಳ ಸಂಖ್ಯೆ 66,599 (ದಿನಕ್ಕೆ 69 ಕಾಲ್ಸ್) ಮತ್ತು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಂದ ಸ್ವೀಕರಿಸಿದ ಕರೆಗಳು 37,745 (ದಿನಕ್ಕೆ ಸರಾಸರಿ 39 ಕರೆ). ಉತ್ತರಪ್ರದೇಶದಿಂದ ಅತಿ ಹೆಚ್ಚು ಅಂದರೆ 4,39,164 (ದಿನಕ್ಕೆ 455 ಕರೆಗಳು) ಕರೆಗಳು ಬಂದಿದ್ದರೆ, ಅತಿ ಕಡಿಮೆ ಲಕ್ಷದ್ವೀಪದಿಂದ (722) ಬಂದಿವೆ.

ಪತ್ತೆ ಮಾಡುವುದು ಹೇಗೆ?

ಮಾನಸಿಕ ಸಮಸ್ಯೆ ಆವರಿಸಿಕೊಳ್ಳುತ್ತಿದೆ ಎಂದು ಅರಿಯಲು ಮೊದಲಿಗೆ ಸ್ವಯಂ ಅವಲೋಕನ ಅಗತ್ಯ.

ಈ ಲಕ್ಷಣಗಳನ್ನು ಪರಾಮಶಿಸಿ.

ನಿರುತ್ಸಾಹ: ಯಾವುದೇ ಕೆಲಸದಲ್ಲಿ ಉತ್ಸಾಹವಿಲ್ಲ. ದಿನಚರಿ ಕೂಡ ಬೋರ್ ಎನಿಸಿ, ಇದ್ಯಾವುದೂ ಬೇಡ ಎಂಬಂತಾಗುವುದು. ಮತ್ತೆ ಮತ್ತೆ ನಿದ್ದೆ ಮಾಡಬೇಕು ಇಲ್ಲವೆ ಒಂಟಿಯಾಗಿ ಇರಬೇಕು ಎಂಬ ಭಾವನೆ.

ಜನರೊಂದಿಗೆ ಬೆರೆಯದಿರುವುದು: ಕುಟುಂಬದ ಸದಸ್ಯರೊಂದಿಗೆ, ಕಚೇರಿಯಲ್ಲಿ ಸಹೋದ್ಯೋಗಿ ಗಳೊಂದಿಗೆ ಬೆರೆಯದಿರುವುದು, ಮದುವೆ, ಹುಟ್ಟುಹಬ್ಬ ಅಥವಾ ಇತರ ಸಾಮಾಜಿಕ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳುವುದು.

ಮಾತು ಕಡಿಮೆ, ಹೆಚ್ಚು ಯೋಚನೆ: ಇದ್ದಕ್ಕಿದ್ದಂತೆ ಯಾರೊಡನೆಯೂ ಮಾತನಾಡಬಾರದು ಎಂದೆನಿಸುವುದು. ಮಾತು ಕಡಿಮೆ ಮಾಡಿ, ಯೋಚನೆಯಲ್ಲಿ ಮುಳುಗುವುದು. ತಮ್ಮದೇ ಕಲ್ಪನಾಲೋಕದಲ್ಲಿ ಏನೇನೋ ಭಾವಿಸಿಕೊಳ್ಳುವುದು. ಸಣ್ಣ ಸಮಸ್ಯೆಗೂ ಹೆದರಿ, ಧೈರ್ಯಗೆಡುವುದು.

ಮಂಕಾಗಿರುವುದು: ಲವಲವಿಕೆ ಇಲ್ಲದಿರುವುದು, ನಗು-ಖುಷಿ ಇಲ್ಲದೆ ಮಂಕಾಗಿ ಯಾವುದರಲ್ಲೋ ಕಳೆದುಹೋಗುವುದು. ಸಹಜ ಭಾವನೆಗಳನ್ನೇ ಮರೆತು ಸದಾ ನಿರಾಶರಾಗಿ ಇರುವುದು.

ಆತ್ಮಹತ್ಯೆಯ ಯೋಚನೆ: ‘ಈ ಜೀವನಕ್ಕೇನು ಅರ್ಥವಿದೆ, ಬದುಕಿದ್ದು ಏನು ಸಾಧಿಸುವುದಿದೆ?’ ಅಂತ ಪ್ರಶ್ನಿಸಿಕೊಳ್ಳುತ್ತ ಆತ್ಮಹತ್ಯೆಯ ಬಗ್ಗೆ ಪದೇಪದೆ ಯೋಚಿಸುವುದು.

ಈ ಮೇಲಿನ ಯಾವುದಾದರೂ ಲಕ್ಷಣ ಕಂಡುಬಂದಲ್ಲಿ ಆಪ್ತಸಮಾಲೋಚಕರನ್ನೋ, ಮನೋ ವೈದ್ಯರನ್ನೋ ಕೂಡಲೇ ಭೇಟಿ ಮಾಡಿ, ಮುಂದಿನ ದಾರಿ ಕಂಡುಕೊಳ್ಳಬೇಕು.

46 ಕೇಂದ್ರಗಳು

ಟೆಲಿಮಾನಸ್ ಎರಡು ಸ್ತರದಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಮಟ್ಟದ ಕಾಲ್ ಸೆಂಟರ್​ಗಳಲ್ಲಿ ತರಬೇತಿ ಪಡೆದ ನುರಿತ ಕೌನ್ಸಿಲರ್​ಗಳು ಜನರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ ಅಥವಾ ಸೂಕ್ತ ಸಲಹೆ ನೀಡುತ್ತಿದ್ದಾರೆ. ಎರಡನೇ ಹಂತದ ಕಾಲ್ ಸೆಂಟರ್​ಗಳಲ್ಲಿ ಜಿಲ್ಲಾ ಮಾನಸಿಕ ಸ್ವಾಸ್ಥ್ಯ ಕಾರ್ಯಕ್ರಮದ ಹಿರಿಯ ಅಧಿಕಾರಿಗಳು ಮತ್ತು ವೈದ್ಯಕೀಯ ಕಾಲೇಜುಗಳ ಮನೋವೈದ್ಯರು ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಸಹಾಯವಾಣಿ ಹಲವು ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. 34 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಟೆಲಿಮಾನಸ್​ನ 46 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಹಾಯವಾಣಿ ಸಂಖ್ಯೆ: 1800-8914416, 14416

ಐದೇ ವರ್ಷದಲ್ಲಿ 3 ಪಟ್ಟು ಹೆಚ್ಚಳ

ಮಾನಸಿಕ ಸಮಸ್ಯೆ ಎದುರಿಸುತ್ತಿರುವ ರೋಗಿಗಳ ಸಂಖ್ಯೆ ಕಳೆದ ಐದು ವರ್ಷಗಳಲ್ಲೇ ಮೂರು ಪಟ್ಟು ಹೆಚ್ಚಳಗೊಂಡಿದೆ ಎಂದಿರುವ ತಜ್ಞರು ಆಫ್ತಸಮಾಲೋಚಕರು ಮತ್ತು ಮನೋವೈದ್ಯರ ಸೇವೆ ಮಹಾನಗರ ಮತ್ತು ಎರಡನೇ ಹಂತದ ನಗರಗಳಿಗೆ ಮಾತ್ರ ಲಭ್ಯವಾಗುತ್ತಿದ್ದು, ಇದನ್ನು ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸಬೇಕಿದೆ. ಗ್ರಾಮೀಣಿಗರು ಈಗಲೂ ಮಾನಸಿಕ ಸಮಸ್ಯೆಗಳನ್ನು ಹಂಚಿಕೊಳ್ಳುವಲ್ಲಿ ಹಿಂದೇಟು ಹಾಕುತ್ತಾರೆ. ಹಾಗಾಗಿ, ಕೆಲವೊಮ್ಮೆ ಸಣ್ಣಪುಟ್ಟ ಕಾರಣಕ್ಕೆ ಆತ್ಮಹತ್ಯೆಯಂಥ ಕಠಿಣ ನಿರ್ಧಾರ ಕೈಗೊಳ್ಳುತ್ತಾರೆ. ಮಾನಸಿಕ ಸಮಸ್ಯೆ ಹೇಳಿಕೊಳ್ಳುವುದು ಅವಮಾನವಲ್ಲ, ಬದಲಿಗೆ ಅದು ಮನಸ್ಸನ್ನು ನಿರಾಳವಾಗಿಸಿ ಮುಂದಿನ ಬದುಕಿಗೆ ಶಕ್ತಿ ತುಂಬುತ್ತದೆ. ಈ ಅರಿವನ್ನು ಗ್ರಾಮೀಣ ಪ್ರದೇಶದಲ್ಲಿ ಮತ್ತು ಯುವಸಮೂಹದಲ್ಲಿ ಹರಡಬೇಕಿದೆ ಎನ್ನುವ ತಜ್ಞರು ಈ ನಿಟ್ಟಿನಲ್ಲಿ ನಮ್ಮ ದೇಶದಲ್ಲಿ ಸಾಕಷ್ಟು ಕೆಲಸಗಳಾಗಬೇಕಿದೆ ಎನ್ನುತ್ತಾರೆೆ. ಬಹುತೇಕ ಮಾನಸಿಕ ಕಾಯಿಲೆಗಳು 15ರಿಂದ 25 ವಯೋಮಾನದವರಲ್ಲಿ ಕಂಡುಬರುತ್ತವೆ. ಈ ವಯೋಮಾನದ ತರುಣರು ದೇಶಕ್ಕೆ ದೊಡ್ಡ ಮಾನವ ಸಂಪನ್ಮೂಲ. ಆದ್ದರಿಂದ ಮಾನಸಿಕ ಆರೋಗ್ಯಕ್ಕೆ ಆದ್ಯತೆ ಸಿಕ್ಕರೆ, ಯುವಸಮೂಹ ಆರಂಭಿಕ ಹಂತದಲ್ಲೇ ಈ ಬಗೆಯ ಸಮಸ್ಯೆಗಳಿಂದ ಮುಕ್ತರಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೀತಿ ಜಾರಿಗೆ ಬರಲಿ

ಮಾನಸಿಕ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಸೂಕ್ತನೀತಿ ರೂಪಿಸಿ, ಜಾರಿಗೆ ತರಲು ಇದು ಸಕಾಲ ಎನ್ನುತ್ತಾರೆ ತಜ್ಞರು.

ಪರಿಹಾರ

ಮಾನಸಿಕ ಕಾಯಿಲೆ ಸೃಷ್ಟಿಸುವ ಕಿರಿಕಿರಿ, ಹಿಂಸೆ ಅಷ್ಟಿಷ್ಟಲ್ಲ. ಇದನ್ನು ಎದುರಿಸಲು ಒಂದಿಷ್ಟು ಸಿದ್ಧತೆ ಬೇಕೇ ಬೇಕು.

ಮುಕ್ತವಾಗಿ ಮಾತನಾಡಿ: ನಿಮ್ಮ ಭಾವನೆಗಳನ್ನು ಗೌರವಿಸುವ ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮ ಇವರೊಂದಿಗೆ ಯಾರ ಬಳಿಯಾದರೂ ಸಮಸ್ಯೆಯನ್ನು ಮುಕ್ತವಾಗಿ ಹಂಚಿಕೊಳ್ಳಿ. ‘ನನಗೆ ಭಾವನಾತ್ಮಕ ಬೆಂಬಲದ ಅಗತ್ಯವಿದೆ. ನೀವು ನನ್ನ ಜತೆ ಇರಿ’ ಅಂತ ಹೇಳಿದರೆ, ಕುಟುಂಬ ಸದಸ್ಯರಿಗೂ ನಿಮ್ಮ ಸ್ಥಿತಿ ಮನದಟ್ಟಾಗಿ, ಸ್ಪಂದಿಸುತ್ತಾರೆ. ಕುಟುಂಬದಲ್ಲೇ ಸಮಸ್ಯೆಗಳಿದ್ದರೆ ನಂಬಿಕಸ್ಥ ಸ್ನೇಹಿತ/ಸ್ನೇಹಿತೆ ಬಳಿ ಮನಸ್ಸು ಬಿಚ್ಚಿ ಮಾತನಾಡಿ.

ದಿನಚರಿಯಿಂದ ಆಚೆ ಬನ್ನಿ: ಕೆಲವೊಮ್ಮೆ ಪ್ರತಿನಿತ್ಯದ ರೂಟಿನ್ ಕೆಲಸವೂ ಜಡತ್ವ ಮತ್ತು ಏಕತಾನತೆಯನ್ನು ಸೃಷ್ಟಿಸುತ್ತದೆ. ಸಣ್ಣ ಬ್ರೇಕ್ ಪಡೆದು ನಿಮಗೆ ಖುಷಿ ಸಿಗುವ ಚಟುವಟಿಕೆಯಲ್ಲಿ ತೊಡಗಿ. ಪ್ರವಾಸ, ಅಧ್ಯಯನ, ಸಂಗೀತ ಕೇಳುವುದು, ಸಿನಿಮಾ ವೀಕ್ಷಣೆ ಹೀಗೆ ಯಾವುದರಲ್ಲಿ ಸಂತಸ ಸಿಗುತ್ತದೋ ಅದರಲ್ಲಿ ತೊಡಗಿ. ಮನಸ್ಸು ಒಮ್ಮೆ ಚೇತೋಹಾರಿಯಾದರೆ ಚಿಂತೆ ದೂರವಾಗುತ್ತದೆ.

ಜನರೊಂದಿಗೆ ಬೆರೆಯಿರಿ: ತುಂಬ ಜನರು ಒಂಟಿಯಾಗಿ ಉಳಿದು ಖಿನ್ನತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅದನ್ನು ಬಿಟ್ಟು ಜನರೊಂದಿಗೆ ಬೆರೆಯಬೇಕು. ಹಳೆಯ ಸ್ನೇಹಿತರು, ಕುಟುಂಬ ಸದಸ್ಯರು, ಸಹೋದ್ಯೋಗಿಗಳೊಂದಿಗೆ ಕ್ವಾಲಿಟಿ ಸಮಯ ಕಳೆಯುವುದು ಅಗತ್ಯ.

ಭೇಟಿ ಮಾಡಿ: ಮನೋವೈದ್ಯರನ್ನು, ಆಪ್ತ ಸಮಾಲೋಚಕರನ್ನು ಕಾಣಲು ಹಿಂಜರಿಯಬೇಡಿ. ಅವರು ನೀಡುವ ಸಲಹೆಗಳನ್ನು ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳುತ್ತ ಸಾಗಿದರೆ, ಹಂತ-ಹಂತವಾಗಿ ಮಾನಸಿಕ ಸಮಸ್ಯೆಯಿಂದ ಹೊರ ಬಂದು ಖುಷಿಯಾಗಿ ಬದುಕಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net