ಸ್ಕಾಡಾ ತಂತ್ರಜ್ಞಾನಕ್ಕೆ ಒಲವು: ನೀರಿನ ಸಮರ್ಪಕ ಬಳಕೆಯ ಯಂತ್ರ

Skada
Published on

| ಶ್ರೀಕಾಂತ ಅಕ್ಕಿ, ಬಳ್ಳಾರಿ

ಜಲಾಶಯಗಳಲ್ಲಿ ನೀರು ಸಂಗ್ರಹವಾದರೂ ಅಸಮರ್ಪಕ ನಿರ್ವಹಣೆಯಿಂದ ರೈತರು ಯಾತನೆ ತಪ್ಪಿಲ್ಲ. ಬೆಳೆ ಬೆಳೆದರೂ ನಿಗದಿತ ಸಮಯಕ್ಕೆ ನೀರು ಬಾರದೆ ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ನಾರಾಯಣಪುರ ಜಲಾಶಯ ಮತ್ತು ವಿದೇಶಗಳ ಜಲಾಶಯಗಳಲ್ಲಿ ಅಳವಡಿಕೆಯಾಗಿರುವ ಸ್ಕಾಡಾ ತಂತ್ರಜ್ಞಾನವನ್ನು ((ಸೂಪರ್ ವೈಸಿಂಗ್ ಮತ್ತು ಡಾಟಾ ಆಕ್ವಿಜೇಷನ್) ರುಬಿಕಾನ ವಾಟರ್ ಗೇಟ್ಸ್-ಟೋಟಲ್ ಚಾನಲ್ ಕಂಟ್ರೋಲ್ ಅಂತಲೂ ಇದನ್ನು ಕರೆಯುತ್ತಾರೆ) ರಾಜ್ಯದ ಉಳಿದ ಜಲಾಶಯಗಳ ಕಾಲುವೆಗಳಿಗೆ ಅಳವಡಿಸಬೇಕೆಂಬ ಒತ್ತಾಯ ರೈತರಿಂದಲೇ ಕೇಳಿ ಬಂದಿದೆ. ಸ್ಕಾಡಾ ತಂತ್ರಜ್ಞಾನ ಅಳವಡಿಸುವಂತೆ ರೈತರೇ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿದ್ದಾರೆ.

ತುಂಗಭದ್ರಾ ಜಲಾಶಯ ನಿರ್ವಣವಾಗಿ ದಶಕಗಳೇ ಉರುಳಿದರೂ ಈ ಜಲಾಶೈ ವ್ಯಾಪ್ತಿಯ ಕೊನೆಯ ಭಾಗದ ರೈತರಿಗೆ ಇಂದಿಗೂ ನೀರು ತಲುಪಿಲ್ಲ. ಇದು ಕೇವಲ ಇದೊಂದೇ ಜಲಾಶಯದ ಕಥೆಯಲ್ಲ, ರಾಜ್ಯದ ಬಹುತೇಕ ಡ್ಯಾಂಗಳ ಪರಿಸ್ಥಿತಿ ಇದೆ ಆಗಿರುವುದರಿಂದ ಸಿರಗುಪ್ಪ ತಾಲೂಕಿನ ತಾಳೂರು ಗ್ರಾಮದ ಪಿ.ರಾಘವೇಂದ್ರ ರೆಡ್ಡಿ ಎನ್ನುವ ರೈತ, ಸ್ಕಾಡಾ ತಂತ್ರಜ್ಞಾನದ ಕುರಿತು ತಿಳಿದುಕೊಂಡು, ರಾಜ್ಯ ನೀರಾವರಿ ನಿಗಮ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಸಲ್ಲಿಸಿ, ತಂತ್ರಜ್ಞಾನ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದ್ದಾರೆ.

ಹೀಗೆಂದರೇನು?

ಇದೊಂದು ಸುಧಾರಿತ ತಂತ್ರಜ್ಞಾನವಾಗಿದ್ದು, ಸೂಪರ್ ವೈಸಿಂಗ್ ಮತ್ತು ಡಾಟಾ ಆಕ್ವಿಜೇಷನ್ ರೂಪದಲ್ಲಿ ಆನ್​ಲೈನ್ ಮೂಲಕ ನಡೆಯುತ್ತದೆ. ಅಣೆಕಟ್ಟಿನಲ್ಲಿ ಕೇಂದ್ರ ಕಚೇರಿ ತೆರೆದು ಕಂಪ್ಯೂಟರ್ ಆಪರೇಟರ್ ಮೂಲಕ ಕಾರ್ಯ ನಿರ್ವಹಣೆ ನಡೆಯಲಿದೆ. ಜಲಾಶಯಗಳ ಕಿರು ಕಾಲುವೆ ಅಥವಾ ಮುಖ್ಯ ಕಾಲುವೆಗಳ ಡಿಸ್ಟ್ರಿಬ್ಯೂಟರ್ ಪಾಯಿಂಟ್​ಗಳ ತೂಬುಗಳಲ್ಲಿ ಈ ತಂತ್ರಜ್ಞಾನ ಅಳವಡಿಸಬೇಕು. ಇದರಿಂದ ಕಾಲುವೆಗಳಲ್ಲಿ ನೀರು ಎಷ್ಟಿದೆ? ಎಲ್ಲಿಯವರೆಗೆ ತಲುಪಿದೆ ? ಕೊನೆಯ ಭಾಗಕ್ಕೂ ನೀರು ತಲುಪಿದೆಯೋ.. ಇಲ್ಲವೋ ಎಂಬುದನ್ನು ಪತ್ತೆ ಮಾಡಬಹುದು. ಇದೆಲ್ಲ ಸೋಲಾರ್ ಸಿಸಿ ಕ್ಯಾಮರಾದಡಿ ನಿರ್ವಹಣೆಯಾಗುತ್ತದೆ. ಆಸ್ಟ್ರೇಲಿಯಾ ದೇಶದಲ್ಲಿ ಈ ತಂತ್ರಜ್ಞಾನ ಅಳವಡಿಕೆಯಾಗಿದೆ. ಇದರಿಂದ ಅಲ್ಲಿನ ರೈತರ ಸಮಸ್ಯೆ ನೀಗಿದೆ. ಖಾಸಗಿ ಕಂಪನಿಗಳಿಗೆ ಟೆಂಡರ್ ಕರೆಯುವ ಮೂಲಕ ರಾಜ್ಯದ ನಾರಾಯಣಪುರ ಜಲಾಶಯದಲ್ಲೂ ಈ ತಂತ್ರಜ್ಞಾನ ಅಳವಡಿಸುವ ಕಾರ್ಯ ಪ್ರಾರಂಭವಾಗಿದೆ.

ರಾಜ್ಯದ ತುಂಗಭದ್ರಾ ಸೇರಿದಂತೆ ಉಳಿದ ಜಲಾಶಯಗಳ ಕಾಲುವೆಗಳಿಗೆ ಸ್ಕಾಡಾ ಸುಧಾರಿತ ತಂತ್ರಜ್ಞಾನ ಅಳವಡಿಸಿದರೆ ರೈತರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ನಾರಾಯಣಪುರ ಜಲಾಶಯದ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದು, ತಂತ್ರಜ್ಞಾನ ಅಳವಡಿಸುತ್ತಿದ್ದಾರೆ. ಉಳಿದ ಜಲಾಶಯಗಳ ಕಾಲುವೆಗಳಿಗೂ ತಂತ್ರಜ್ಞಾನ ಅಳವಡಿಸುವುದಕ್ಕೆ ಸರ್ಕಾರ ಮುಂದಾಗಬೇಕು. | ಹೆಸರು ಹೇಳಲಿಚ್ಛಿಸದ ನಿವೃತ್ತ ಎಇಇ, ತುಂಗಭದ್ರಾ ಬೋರ್ಡ್ ಸರ್ಕಾರವೇ ಇಚ್ಛಾಶಕ್ತಿ ವಹಿಸಿ ಸ್ಕಾಡಾ ಸುಧಾರಿತ ತಂತ್ರಜ್ಞಾನ ಅಳವಡಿಸಬೇಕು. ಒಂದು ವೇಳೆ ಜಲ ಸಂಪನ್ಮೂಲ ಇಲಾಖೆಯಲ್ಲಿ ಅನುದಾನದ ಕೊರತೆಯಿದ್ದರೆ ಕಾಲುವೆ ವ್ಯಾಪ್ತಿಯ ಆಯಾ ಸ್ಥಳೀಯ ಶಾಸಕರ ಅನುದಾನದಲ್ಲಿ ಅಳವಡಿಸಬಹುದು. | ಪಿ.ರಾಘವೇಂದ್ರ ರೆಡ್ಡಿ ತಾಳೂರು ಗ್ರಾಮ, ಬಳ್ಳಾರಿ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net