ಫೇಸ್​ಬುಕ್ ಒಳಹೊಕ್ಕ ಹತ್ತರ ಹರೆಯ

Putani 2
Published on

ವಿಶಾಲವಾದ ಹೊರಜಗತ್ತಿನ ಜತೆಗೆ ಭೌತಿಕವಾಗಿ ಎಂಗೇಜ್ ಆಗಬೇಕಾದ ಮಕ್ಕಳು ಇಂದು ಸಾಮಾಜಿಕ ಜಾಲತಾಣ ಎಂಬ ಮತ್ತಿನ ಅಲೆಯಲ್ಲಿ ತೇಲುತ್ತಿದ್ದಾರೆ. ದೇಶದಲ್ಲಿ ಇಂದು ಮಕ್ಕಳ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಇದೆಯೋ ಇಲ್ಲವೋ ಆದರೆ, ಸಾಮಾಜಿಕ ಜಾಲತಾಣದಲ್ಲಿ ಒಂದು ಅಕೌಂಟ್ ಇದ್ದೇ ಇರುತ್ತದೆ. ಈ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ಸಮೀಕ್ಷೆ ನಡೆಸಿದ್ದು, ಆಘಾತಕಾರಿ ಅಂಶ ಬಯಲಾಗಿದೆ.

| ದೇವರಾಜ್ ಕನಕಪುರ

ಟಿಕ್​ಟಾಕ್, ಮೋಜೋ, ಇನ್​ಸ್ಟಾಗ್ರಾಂ ರೀಲ್ಸ್​ಗಳ ಬಳಕೆ ಹೆಚ್ಚಾಗಿರುವುದರಿಂದ ಮಕ್ಕಳು ವಿವಿಧ ವಿಡಿಯೋ ಮಾಡಲು, ಹಾಸ್ಯದ ವಿಡಿಯೋಗಳನ್ನು ನೋಡಲು ಮೊಬೈಲ್ ಬಳಕೆ ಮಾಡುತ್ತಲೇ ‘ಸೋಷಿಯಲ್ ಮೀಡಿಯಾ’ ಅನ್ನೋ ಜಾಲದಲ್ಲಿ ಸಿಕ್ಕಿಬಿದ್ದಿದ್ದಾರೆ. ಇದು ಮೊದಲಿಗೆ ಮುದ ನೀಡಲಿದ್ದು, ಅತಿ ಹೆಚ್ಚು ಬಳಕೆಯಿಂದ ಲೆಕ್ಕವಿಲ್ಲದಷ್ಟು ಮಂದಿ ಪ್ರಾಣವನ್ನೇ ಬಿಟ್ಟಿದ್ದಾರೆ. ಬಹುತೇಕ ಮಕ್ಕಳಿಗೆ ಇದ್ಯಾವುದರ ಪರಿವೇ ಇಲ್ಲ. ಪುಟ್ಟ ಮಕ್ಕಳೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಅಂಶ ಹೊಸ ಆತಂಕ ಸೃಷ್ಟಿಸಿದೆ. ದೇಶದಲ್ಲಿ ಇಂದು ಮಕ್ಕಳ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಇದೆಯೋ ಇಲ್ಲವೋ ಆದರೆ, ಸಾಮಾಜಿಕ ಜಾಲತಾಣದಲ್ಲಿ ಒಂದು ಅಕೌಂಟ್ ಇದ್ದೇ ಇರುತ್ತದೆ. ಈ ಕುರಿತು ಸಮೀಕ್ಷೆ ನಡೆಸಿದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೇ ವರದಿ ಕಂಡು ಇದು ನಿಯಮ ಮೀರಿದ್ದು ಎಂದು ಕಳವಳ ವ್ಯಕ್ತಪಡಿಸಿದೆ. ಕಾನೂನಿನ ಪ್ರಕಾರ ಫೇಸ್​ಬುಕ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣ ಬಳಸಲು ಯಾವುದೇ ವ್ಯಕ್ತಿಗೆ ಕನಿಷ್ಠ 13 ವರ್ಷ ತುಂಬಿರಬೇಕು. ಆದರೆ, 10 ವರ್ಷದೊಳಗಿನ ಮಕ್ಕಳ ಪೈಕಿ ಶೇ. 36.8 ಮಂದಿ ಫೇಸ್​ಬುಕ್, ಶೇ. 24.3 ಮಕ್ಕಳು ಇನ್​ಸ್ಟಾಗ್ರಾಂ ಅಕೌಂಟ್ ಹೊಂದಿದ್ದಾರೆ! ಆಯೋಗವು 3,400 ಶಾಲಾ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಿತ್ತು. ಇದರಲ್ಲಿ 10ರಿಂದ 17 ವಯಸ್ಸಿನ ಶೇ. 42.9 ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಖಾತೆಯನ್ನು ಹೊಂದಿರುವುದು ಬಹಿರಂಗವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮಕ್ಕಳಿಗೆ ಆಶ್ಲೀಲ ಮತ್ತು ಕೌರ್ಯ ತುಂಬಿದ ವಿಷಯಗಳು ಹೆಚ್ಚು ಆಕರ್ಷಣೆ ಮಾಡುತ್ತಿದೆ. ಹಾಗಾಗಿ ಪ್ರತಿ ಮಕ್ಕಳು ಪ್ರತ್ಯೇಕ ಅಕೌಂಟ್ ಹೊಂದುವತ್ತ ಆಸಕ್ತಿ ವಹಿಸುತ್ತಿದ್ದಾರಂತೆ. ಚಾಟಿಂಗ್​ಗಾಗಿ ಜಾಲತಾಣವನ್ನ ಹೆಚ್ಚಾಗಿ ಬಳಸುತ್ತಿದ್ದಾರೆ ಎಂದಿರುವ ಆಯೋಗ, ಆನ್​ಲೈನ್ ಶಿಕ್ಷಣದ ನೆಪದಲ್ಲಿ ಶೇ. 94.8 ಮಕ್ಕಳ ಕೈಯಲ್ಲಿ ಮೊಬೈಲ್ ಫೋನ್ ಇದೆ. ಈ ವೇಳೆ ಹೆಚ್ಚು ದುರ್ಬಳಕೆ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಶೇ. 13ರಷ್ಟು ಮಕ್ಕಳು ವ್ಯಾಸಂಗದ ಸಮಯದಲ್ಲೂ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಶೇ.23.3 ಮಕ್ಕಳು ಪದೇಪದೆ ಮೊಬೈಲ್ ನೋಡುತ್ತಲೇ ಇರುತ್ತಾರೆ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಏಕಾಗ್ರತೆಯ ಕೊರತೆ ಉಂಟಾಗುತ್ತಿದೆ. ಅಲ್ಲದೆ, ಓದುವಾಗಲೂ ಮೊಬೈಲ್ ಬಳಸುವವರ ಸಂಖ್ಯೆ ಪ್ರತಿ ನಿತ್ಯ ಹೆಚ್ಚಾಗುತ್ತಿದೆ ಎಂದು ಆಯೋಗ ಹೇಳಿದೆ.

ಆನ್​ಲೈನ್ ಕ್ಲಾಸ್​ಗಾಗಿ ಪ್ರತ್ಯೇಕ ಮೊಬೈಲ್

ಕರೊನಾ ಹಿನ್ನೆಲೆಯಲ್ಲಿ ಒಂದೂವರೆ ವರ್ಷದಿಂದ ಆನ್​ಲೈನ್ ತರಗತಿ ನಡೆಯುತ್ತಿದೆ. ವ್ಯಾಸಂಗಕ್ಕೆ ಅನುಕೂಲವಾಗಲೆಂದು ಪಾಲಕರು ಮಕ್ಕಳಿಗೆ ಪ್ರತ್ಯೇಕ ಸ್ಮಾರ್ಟ್ ಫೋನ್ ಖರೀದಿಸಿ ಕೊಟ್ಟಿದ್ದಾರೆ. ಇದರಿಂದ ಕ್ಲಾಸ್ ಮುಗಿದ ಮೇಲೂ ಮಕ್ಕಳು ಮೊಬೈಲ್ ಬಳಕೆ ಮಾಡುತ್ತಾ ಆನ್​ಲೈನ್ ಗೇಮಿಂಗ್, ಇನ್​ಸ್ಟಾ ರೀಲ್ಸ್, ಮೋಜೋಗಳತ್ತ ವಾಲುತ್ತಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಲೀಕ್

ಇನ್​ಸ್ಟಾಗ್ರಾಂ ಮೂಲಕ ಹುಡುಗನೊಬ್ಬನನ್ನು ಫ್ರೆಂಡ್ ಮಾಡಿಕೊಂಡಿದ್ದ ಬೆಂಗಳೂರು ನಗರದ ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಆತನಿಗೆ ತನ್ನ ಬೆತ್ತಲೆ ವಿಡಿಯೋ ಕಳುಹಿಸಿದ್ದಳು. ಇದನ್ನೇ ಬಂಡವಾಳ ಮಾಡಿಕೊಂಡ ಹುಡುಗ, ಬೆತ್ತಲೆ ದೃಶ್ಯವನ್ನು ಲೀಕ್ ಮಾಡುವೆ ಎಂದು ವಿದ್ಯಾರ್ಥಿನಿಗೆ ಹೆದರಿಸಿ ಪದೇಪದೆ ಹಣ ವಸೂಲಿ ಮಾಡುತ್ತಿದ್ದ. ಕೊನೆಗೆ ಅವನ ಹಿಂಸೆ ಸಹಿಸಲಾರದೆ ನಡೆದಿದ್ದೆಲ್ಲವನ್ನೂ ಆಕೆ ತನ್ನ ತಂದೆ ಬಳಿ ಹೇಳಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ತನಿಖೆ ಕೈಗೊಂಡ ಪೊಲೀಸರ ಕೈಗೆ ಆ ಹುಡುಗ ಸಿಕ್ಕಿಬಿದ್ದಿದ್ದ.

ಬಾಯ್ಸ್​ ಲಾಕರ್ ರೂಮ್​ನ ಪಾಠ

ದೆಹಲಿಯ ಕೆಲ ಪ್ರತಿಷ್ಠಿತ ಖಾಸಗಿ ಶಾಲಾ ಮಕ್ಕಳು ಇನ್​ಸ್ಟಾಗ್ರಾಂನಲ್ಲಿ ಬಾಯ್್ಸ ಲಾಕರ್ ರೂಮ್ ಎಂಬ ಗ್ರೂಪ್ ಕ್ರಿಯೇಟ್ ಮಾಡಿ ತನ್ನ ಸಹಪಾಠಿ ಯನ್ನೇ ಗ್ಯಾಂಗ್ ರೇಪ್ ಮಾಡಲು ಯೋಜನೆ ರೂಪಿಸಿದ್ದ ಆಘಾತಕಾರಿ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಈ ಕೃತ್ಯಕ್ಕೆ ಯೋಜನೆ ರೂಪಿಸಿಕೊಂಡಿದ್ದವರೆಲ್ಲ 15 ವರ್ಷದೊಳಗಿನ ಮಕ್ಕಳು. ಈ ಸಂಬಂಧ ಗ್ರೂಪ್ ಅಡ್ಮಿನ್ ಅನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಶಾಲೆಯ ಮಕ್ಕಳು ಅದೇ ಶಾಲೆಯ ವಿದ್ಯಾರ್ಥಿನಿಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿರುವುದು, ಎಲ್ಲರೂ ಸೇರಿ ಗ್ಯಾಂಗ್ ರೇಪ್​ಗೆ ಯೋಜನೆ ರೂಪಿಸಿದ್ದು ಬಹಿರಂಗವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net