

ಸಾವಿರಾರು ವರ್ಷಗಳಿಂದ ಹರಿದು ಬಂದ ವಿಪುಲವಾದ ಶ್ರೇಷ್ಠ ಜ್ಞಾನಸಂಪತ್ತುಳ್ಳ ಭಾರತೀಯ ಸನಾತನ ಸಂಸ್ಕೃತಿಯ ಇಂದಿನ ಶೋಚನೀಯ ಪರಿಸ್ಥಿತಿಗೆ ಧರ್ಮಶಿಕ್ಷಣದ ಅಭಾವವೇ ಕಾರಣ ಎಂದು ಹೇಳಬಹುದು. ಎಲ್ಲೋ ಕೆಲವರಿಗೆ ನಿಜವಾದ ಧರ್ಮಶಿಕ್ಷಣ ಅನುಷ್ಠಾನದ ತರಬೇತಿ ಸಿಗುವ ಅವಕಾಶವಿದೆ. ಆದರೆ, ಹಳ್ಳಿಹಳ್ಳಿಯಲ್ಲಿರುವ ಕೋಟ್ಯಂತರ ಜನರಿಗೆ ಹಾಗೂ ಪಟ್ಟಣದಲ್ಲಿ ಆಧುನಿಕ ಶಿಕ್ಷಣ ಪಡೆಯುತ್ತಿರುವ ಯುವಜನಾಂಗಕ್ಕೆ ಧರ್ಮಶಿಕ್ಷಣ ಕಿಂಚಿತ್ತಾದರೂ ಸಿಗುವ ಸಾಧ್ಯತೆ ಇಲ್ಲದಿರುವುದರಿಂದ ನಮ್ಮ ಜನಾಂಗ ಧರ್ಮಜ್ಞಾನ ಅನುಷ್ಠಾನ ವಿಹೀನವಾಗಿ, ಒಂದು ರೀತಿಯ ವಿಚಿತ್ರ ನಾಸ್ತಿಕತೆಯಿಂದ ತೊಳಲಾಡುತ್ತಿದೆ.
ಕುಟುಂಬ, ಶಾಲೆ, ಮಾಧ್ಯಮ, ಹಿರಿಯರಿಂದ ಮಗು ನಮ್ಮ ಸಂಸ್ಕೃತಿಯ ಪ್ರಾಥಮಿಕ ಪಾಠಗಳನ್ನು ಕಲಿಯುವಂತಾಗಬೇಕು. ಇದರಿಂದ ವಂಚಿತವಾದರೆ ಅದು ಧಾರ್ವಿುಕವಾಗಿ, ಆಧ್ಯಾತ್ಮಿಕವಾಗಿ ಅನಾಥವಾಗಿ ಬೆಳೆಯುವ ದುರಂತ ಎದುರಿಸಬೇಕಾಗುತ್ತದೆ. ಭವ್ಯವಾದ ಈ ಹಿಂದೂ ಧರ್ಮವನ್ನು ಸಮಯಪ್ರಜ್ಞೆಯಿಂದ ಕಾಲೋಚಿತವಾಗಿ ರಕ್ಷಿಸಿಕೊಳ್ಳಬೇಕಾದ ತುರ್ತಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಧರ್ಮದ ಔಚಿತ್ಯವೇನು? ಸಂಸ್ಕೃತಿಯ ಹಿರಿಮೆ ಏನು? ಆಧ್ಯಾತ್ಮಿಕ ಪರಂಪರೆ ಎಂಥದ್ದು? ಇದರ ಅನುಷ್ಠಾನ ಹೇಗೆ?- ಎಂಬುದರ ಪರಿವೆಯೇ ಇಲ್ಲದ ಅನಕ್ಷರಸ್ಥ ಬಡ ಕುಟುಂಬಗಳು ಹಾಗೂ ಇಂದಿನ ವಿದ್ಯಾವಂತ ಯುವಜನಾಂಗ ಯಾವುದೇ ಅಧ್ಯಾತ್ಮ ಮಾರ್ಗದರ್ಶನ, ಆಧಾರ, ಅವಲಂಬನೆ ಇಲ್ಲದೆ, ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.
ದೇವಸ್ಥಾನಗಳ ಪಾತ್ರ: ಇಲ್ಲಿನ ಮೂಲಸಂಸ್ಕೃತಿ ಕಾಪಾಡಬೇಕಾಗಿದ್ದರೆ ದೇವಸ್ಥಾನಗಳನ್ನು ಪೂಜಾಕೈಂಕರ್ಯದ ಜೊತೆಗೆ ಸಕ್ರಿಯವಾದ ಧರ್ಮಶಿಕ್ಷಣ ಕೇಂದ್ರ ಹಾಗೂ ಸೇವಾಕೇಂದ್ರಗಳನ್ನಾಗಿ ಪರಿವರ್ತಿಸಲೇಬೇಕು. ಶಿಕ್ಷಣ, ಸಮಾಜ ಹಾಗೂ ಮಾಧ್ಯಮಗಳು ಜಾತ್ಯತೀತತೆಯ ನೆಪದಲ್ಲಿ ಸನಾತನ ಸಂಸ್ಕೃತಿಯ ಪ್ರಸಾರವನ್ನು ಕೈಗೊಳ್ಳಲು ಅಸಮರ್ಥವಾಗಿವೆ. ಸನಾತನ ಸಂಸ್ಕೃತಿಯ ಮಠಗಳು, ಸಂಸ್ಥೆಗಳು, ಆಶ್ರಮಗಳು, ಸಾಕಷ್ಟು ಸಂಖ್ಯೆಯಲ್ಲಿ ಇರದೆ ವಿರಳವಾಗಿರುವುದರಿಂದ ಧರ್ಮ, ಸಂಸ್ಕೃತಿಗಳ ಬಗ್ಗೆ ಕನಿಷ್ಠ ಪ್ರಾಥಮಿಕ ತಿಳಿವಳಿಕೆಯೂ ಕೋಟ್ಯಂತರ ಜನರನ್ನು ತಲುಪುವುದು ಅಸಾಧ್ಯವಾಗಿದೆ. ಇದನ್ನು ದೇವಾಲಯಗಳ ಮೂಲಕ ಮಾತ್ರ ಪರಿಣಾಮಕಾರಿಯಾಗಿ ಸಾಧಿಸಲು ಸಾಧ್ಯ. ಇಂತಹ ಜನರಿಗೆ ದೇವಾಲಯಗಳೇ ದಾರಿದೀಪವಾಗಬೇಕಾಗಿದೆ. ಆದ್ದರಿಂದ ದೇಶದ ಉದ್ದಗಲಕ್ಕೂ ಹರಡಿರುವ ಅಸಂಖ್ಯಾತ ದೇವಾಲಯಗಳನ್ನು ಧರ್ಮ, ಸಂಸ್ಕೃತಿಗಳ ರಕ್ಷಣೆಯ ಸೇವಾಕೇಂದ್ರಗಳಾಗಿ ಮಾರ್ಪಡಿಸುವುದು ಅನಿವಾರ್ಯ.
ದೀನರಿಗೆ ಅವಶ್ಯಕ ಸೇವಾಕಾರ್ಯಗಳನ್ನು ನರನಾರಾಯಣ ಪೂಜಾ ಭಾವದಿಂದ ಹಮ್ಮಿಕೊಂಡು ಸೇವಾಕೇಂದ್ರಗಳನ್ನಾಗಿ ಪರಿವರ್ತಿಸಲು ದೇವಾಲಯಗಳು ಪ್ರಯತ್ನಿಸಬೇಕು. ಹಾಗೂ ಧರ್ಮ ಮತ್ತು ಆಧ್ಯಾತ್ಮಿಕ ತರಬೇತಿಯನ್ನು ಕೊಡುವ ಧಾರ್ವಿುಕಶಿಕ್ಷಣ ಕೇಂದ್ರಗಳನ್ನಾಗಿ ಮಾಡಬೇಕು. ಅದಕ್ಕೆ ಆಯಾಯ ಪ್ರದೇಶದ ಹಾಗೂ ಸಮುದಾಯದ ಹಿರಿಯರು, ಚಿಂತಕರು, ಆರಾಧಕರು ಅಲ್ಲಿಯ ಆಡಳಿತ ಮಂಡಳಿ ಜತೆ ಸಮಾಲೋಚಿಸಿ ಸಹಾಯಹಸ್ತ ನೀಡಿ ಸೇವೆ ಮತ್ತು ಧರ್ಮಶಿಕ್ಷಣವನ್ನು ಜನಮನಕ್ಕೆ ತಲುಪುವಂತೆ ಮಾಡಲು ಕ್ರಿಯಾಶೀಲವಾಗಬೇಕು.
ಶ್ರೀಮದ್ ಭಾಗವತದಲ್ಲಿ ಭಗವಾನ್ ಶ್ರೀಕೃಷ್ಣ ಹೇಳಿದಂತೆ-
ಅಥ ಮಾಂ ಸರ್ವಭೂತೇಷು ಭೂತಾತ್ಮಾನಂ ಕೃತಾಲಯಂ |
ಅರ್ಹಯೇತ್ ದಾನಮಾನಭ್ಯಾಂ ಮೈತ್ತ್ರಾ ್ಯ ಅಭಿನ್ನೇನ ಚಕ್ಷುಷಾ ||
‘ನಾನು ಸಕಲ ಜೀವರಾಶಿಗಳ ಅಂತರಾತ್ಮನಾಗಿ ನೆಲೆಸಿರುತ್ತೇನೆ. ಆದ್ದರಿಂದ ನನ್ನನ್ನು ದಾನ, ಆದರ, ಮಿತ್ರಭಾವದಿಂದ ಮತ್ತು ತಾರತಮ್ಯವಿಲ್ಲದ ದೃಷ್ಟಿಕೋನದಿಂದ ಆರಾಧಿಸಬೇಕು’.
ಸಂಸ್ಕಾರ ಕೇಂದ್ರಗಳಾಗಿ ರೂಪುಗೊಳ್ಳಲಿ: ದೇವಸ್ಥಾನಗಳನ್ನು ಈ ಧಾರ್ವಿುಕಶಿಕ್ಷಣ ಪ್ರಸಾರಕಾರ್ಯದ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು. ಪೂಜಾವಿಧಿವಿಧಾನಗಳಿಗೆ ಯಾವ ಅಡ್ಡಿಯೂ ಆಗದಂತೆ ಈ ಸಾಮಾಜಿಕ ಸೇವೆ ನಡೆಸುವುದು ಸೂಕ್ತ.
1. ನರನಾರಾಯಣ ಸೇವಾದಳ
2. ಧರ್ಮಶಿಕ್ಷಣ ಪ್ರಸಾರ ಕೇಂದ್ರ
ದೇವಸ್ಥಾನದ ಆರ್ಥಿಕ ಉತ್ಪತ್ತಿಯ ನಿರ್ದಿಷ್ಟ ಭಾಗವನ್ನು ಈ ಮೇಲ್ಕಂಡ ಎರಡು ಉದ್ದೇಶಗಳಿಗೆ ವಿನಿಯೋಗಿಸಬೇಕು. ದೇವಸ್ಥಾನದಲ್ಲಿ ಸಂಗ್ರಹಿತವಾದ ನಿಧಿಯಿಂದ ಜನಸಾಮಾನ್ಯರ ಆರೋಗ್ಯ, ಮಕ್ಕಳ ಶಿಕ್ಷಣ, ವಸತಿ ಸೌಕರ್ಯಕ್ಕೆ ಸಹಾಯ ಮುಂತಾದುವನ್ನು ನೀಡಬೇಕು. ಜೊತೆಗೆ, ಮೇಲ್ಕಂಡ ಸೇವಾ ಉದ್ದೇಶಗಳಿಗಾಗಿ ಹಣವನ್ನು ಪ್ರತ್ಯೇಕವಾಗಿ ಶ್ರದ್ಧಾವಂತ ಭಕ್ತರಿಂದ ಸಂಗ್ರಹಿಸಬೇಕು.
ಆಸಕ್ತ ಸಾಧುಸಂತರು, ಸ್ಥಳೀಯ ಸಮರ್ಥ ಶಿಕ್ಷಕರು, ಆರಾಧಕರು ಹಾಗೂ ಸಮಾಜಸೇವಕರನ್ನು ಒಳಗೊಂಡ ಒಂದು ತರಬೇತಿ ಕಾರ್ಯಕ್ರಮವನ್ನು ನಿಯೋಜಿಸಬೇಕು. ಈ ಕಾರ್ಯಕ್ರಮದ ಮೂಲಕ ಕಾರ್ಯಕರ್ತರನ್ನು, ಸ್ವಯಂಸೇವಕರನ್ನು ತರಬೇತುಗೊಳಿಸುವ ಸೀಮಿತ ಅವಧಿಯ ಕಾರ್ಯಾಗಾರವನ್ನು ಸತತವಾಗಿ ಅಲ್ಲಲ್ಲಿ ಅನುಕೂಲಗಳಿರುವ ದೇವಸ್ಥಾನಗಳಲ್ಲಿ ಏರ್ಪಡಿಸಬೇಕು.
ಈ ರೀತಿಯ ತರಬೇತಿಗಳನ್ನು ಎಲ್ಲ ವರ್ಗದ ಸ್ತ್ರೀಯರಿಗೂ ಏರ್ಪಡಿಸಬೇಕು. ಎಲ್ಲ ಸಮುದಾಯದವರಿಗೂ ಈ ಧಾರ್ವಿುಕ ಶಿಕ್ಷಣ ಪ್ರಸಾರ ಕಾರ್ಯಕ್ರಮದಲ್ಲಿ ಮುಕ್ತ ಅವಕಾಶವಿರಬೇಕು.
ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುವ ಮುಖ್ಯ ವಿಚಾರ-ಸಂದೇಶಗಳನ್ನು ಪಠ್ಯವನ್ನಾಗಿಸಿ, ಆ ಅವಶ್ಯಕ ವಿಚಾರಗಳು ಸಮಸ್ತ ಜನಮಾನಸವನ್ನು ತಲುಪುವಂತೆ ಮಾಡಬೇಕು. ಉದಾಹರಣೆಗೆ, ನಿತ್ಯ ಅನುಷ್ಠಾನ, ಗೀತೆ-ಉಪನಿಷತ್ತುಗಳ ಸಂದೇಶ, ರಾಮಾಯಣ, ಮಹಾಭಾರತ, ಭಾಗವತಗಳ ಸಂಕ್ಷಿಪ್ತ ಪರಿಚಯ. ಪೂಜಾಪಾರಾಯಣ, ವಿಧಾನಗಳ ಸರಳ ಕ್ರಮ ಮತ್ತು ಅರ್ಥ. ಷೋಡಶ ಸಂಸ್ಕಾರಗಳ ಅರ್ಥ. ಸಂತಶ್ರೇಷ್ಠರ ಜೀವನ ಮತ್ತು ಸಂದೇಶ, ಶರಣರ ವಚನಗಳು, ದಾಸರ ಕೀರ್ತನೆಗಳು ಇತ್ಯಾದಿ. ಪ್ರಾಥಮಿಕ, ಧಾರ್ವಿುಕ ವಿಚಾರಗಳನ್ನು ಜನರು ಕಲಿತ ನಂತರ ಅವರಿಗೆ ಪ್ರಮಾಣಪತ್ರಗಳನ್ನು ನೀಡಿ ಪ್ರೋತ್ಸಾಹಿಸಬೇಕು.
ಸೇವಾಕ್ಷೇತ್ರಗಳಾಗಿ ದೇವಸ್ಥಾನಗಳು: ದೇವಸ್ಥಾನಗಳು ತಮ್ಮದೇ ಅನುಯಾಯಿಗಳಿಗೆ ಅಡೆತಡೆಯಿಲ್ಲದೆ ಆಕ್ಷೇಪವಿಲ್ಲದೆ ಧರ್ಮಶಿಕ್ಷಣ ಕೊಡಲು ಸಾಧ್ಯ. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಈ ಧರ್ಮಶಿಕ್ಷಣ ಕಾರ್ಯವನ್ನು ದೇವಾಲಯಗಳ ಮೂಲಕ ತೀವ್ರಗತಿಯಿಂದ ಕ್ರಮಬದ್ಧವಾಗಿ, ಸಂಘಟನಾ ಕೌಶಲದಿಂದ ಪರಿಣಾಮಕಾರಿಯಾಗಿ ಮಾಡಬೇಕು.
ಸನಾತನ ಸಂಸ್ಕೃತಿಯ ಜ್ಞಾನ ಮತ್ತು ಸಂಸ್ಕಾರವನ್ನು ಗ್ರಾಮಾಂತರ ಜನರಿಗೆ ಅವರವರ ಮಾತೃಭಾಷೆಯಲ್ಲಿ ಮಾಧ್ಯಮಗಳ ಮೂಲಕ ಕ್ರಮಬದ್ಧವಾಗಿ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇನ್ನು ಮುಂದೆ ಹೊಸ ದೇವಸ್ಥಾನಗಳನ್ನು ನಿರ್ಮಾಣ ಮಾಡುವಾಗ ಸಾಂಪ್ರದಾಯಿಕ ಪೂಜೆಯ ಜೊತೆಗೆ ಧರ್ಮಶಿಕ್ಷಣ, ದೀನದಲಿತರ ಸೇವೆ ಮುಂತಾದ ಆಯಾಮಗಳನ್ನೊಳಗೊಂಡ ಒಂದು ಹೊಸ ಆಂದೋಲನವನ್ನು ಪ್ರಾರಂಭ ಮಾಡಬೇಕು. ಇದನ್ನು Neo Temple Movement ಎಂದು ಕರೆಯಬಹುದು. ಈ ಆಂದೋಲನ ಸಂಸ್ಕೃತಿ ಪುನರುತ್ಥಾನ ಮಾಡುವಂತೆ ಆಗಬೇಕು.
ಸ್ವಾಮೀಜಿ, ಸಾಧುಸಂತರಲ್ಲಿ ನಿವೇದನೆ: ನಮ್ಮ ಸಂಸ್ಕೃತಿಗೆ ಸೇರಿದ ಶೇಕಡ 50 ರಿಂದ 60ರಷ್ಟು ಗ್ರಾಮಾಂತರ ಮತ್ತು ಪಟ್ಟಣದಲ್ಲಿರುವ ಧರ್ಮಶಿಕ್ಷಣದಿಂದ ವಂಚಿತರಾದ, ಇತರ ಪ್ರಭಾವಗಳಿಗೆ ಮಾರುಹೋಗಿ ಸನಾತನ ಸಂಸ್ಕೃತಿಯಿಂದ ದೂರ ಹೋಗುವ ಜನರಿಗೆ, ಸತತವಾಗಿ ಆಧ್ಯಾತ್ಮಿಕ ಭಾವಧಾರೆಯನ್ನು ನೀಡಿ ಅವರನ್ನು ರಾಷ್ಟ್ರದ ಸನಾತನ ಮುಖ್ಯವಾಹಿನಿಯಲ್ಲಿ ಬೇರೂರಿರುವಂತೆ ಮಾಡುವುದು ಅವಶ್ಯಕ.
ಎಲ್ಲ ಸಂಪ್ರದಾಯಗಳ, ಎಲ್ಲ ಜಾತಿ, ಕುಲ-ಗೋತ್ರಗಳ ಮತ್ತು ಗ್ರಾಮಾಂತರ ಹಾಗೂ ನಗರ ಪ್ರದೇಶಗಳ ಜನರನ್ನು ಒಗ್ಗೂಡಿಸುವ ಮತ್ತು ಸಾಂಸ್ಕೃತಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಜಾಗೃತಗೊಳಿಸುವ ದೀರ್ಘಾವಧಿ ಯೋಜನೆಯ ಅವಶ್ಯಕತೆ ಇದೆ. ದೇವಸ್ಥಾನಗಳು ಎಚ್ಚೆತ್ತುಕೊಂಡರೆ ಧರ್ಮಜಾಗೃತಿಯ ಕಾರ್ಯ ಕಠಿಣವೇನಲ್ಲ.
ಶ್ರೀರಾಮಕೃಷ್ಣ ಪರಮಹಂಸರು ಬೋಧಿಸುವ ಸರಳ ನಾರದೀಯ ಭಕ್ತಿ, ವಿವೇಕಾನಂದರು ಬೋಧಿಸುವ ಒಳ್ಳೆಯತನ ಹಾಗೂ ಶ್ರೀಶಾರದಾ ಮಾತೆಯವರ ಕ್ರಿಯಾಶೀಲತೆ- ಈ ಮೂರನ್ನೂ ಒಳಗೊಂಡ ಧರ್ವಚರಣೆಯನ್ನು ನಾವು ಬೋಧಿಸಬೇಕಾಗಿದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ, ‘ನಾವು ಪರಿಶುದ್ಧರಾಗಿರುವುದು ಮತ್ತು ಇತರರಿಗೆ ಒಳ್ಳೆಯದನ್ನು ಮಾಡುವುದು’ ಇದೇ ಧರ್ವನುಷ್ಠಾನದ ಮೂಲಮಂತ್ರವಾಗಬೇಕು.
(ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)