

ಹೈದರಾಬಾದ್: ' ಭಾರತವು ನಿಜವಾಗಿಯೂ ಪಾಕಿಸ್ತಾನದ ಬಾಲಕೋಟ್ ಮೇಲೆ ವೈಮಾನಿಕ ದಾಳಿ ನಡೆಸಿದೆಯೇ? ಇದು ಯಾರಿಗೂ ಗೊತ್ತಿಲ್ಲ' ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬಾಲಕೋಟ್ ವೈಮಾನಿಕ ದಾಳಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ,
ಭಾರತವು 'ಪಾಕಿಸ್ತಾನದ ಬಳಿ ಪರಮಾಣು ಬಾಂಬ್ಗಳನ್ನು ಹೊಂದಿರುವುದರಿಂದ ಅದನ್ನು ಗೌರವಿಸಬೇಕು' ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ವಿವಾದಾಸ್ಪದ ಹೇಳಿಕೆ ನೀಡಿದ ಒಂದು ದಿನದ ನಂತರ ರೆಡ್ಡಿಯ ಈ ಹೇಳಿಕೆ ಚುನಾಚಣೆ ಸಂದರ್ಭದಲ್ಲಿ ಕಾಂಗ್ರೆಸ್ಗೆ ಮುಜುಗರ ಉಂಟುಮಾಡುವಂತಾಗಿವೆ.
40 ಕ್ಕೂ ಹೆಚ್ಚು ಸಿಆರ್ಪಿಎಫ್ ಸಿಬ್ಬಂದಿಯನ್ನು ಬಲಿತೆಗೆದುಕೊಂಡ ಪುಲ್ವಾಮಾ ದಾಳಿಯ ಮುನ್ನೆಚ್ಚರಿಕೆ ನೀಡುವಲ್ಲಿ ವಿಫಲವಾದ ಬಗ್ಗೆ ಗುಪ್ತಚರ ಬ್ಯೂರೋ (ಐಬಿ) ವಿರುದ್ಧ ರೆಡ್ಡಿ ವಾಗ್ದಾಳಿ ನಡೆಸಿದರು.
“ಮೋದಿಯವರಿಗೆ ಎಲ್ಲವೂ ರಾಜಕೀಯ, ಎಲ್ಲವೂ ಚುನಾವಣೆ ಗೆಲ್ಲುವುದೇ ಆಗಿದೆ. ಹಾಗಾಗಿ ಅವರ ಚಿಂತನೆ ದೇಶಕ್ಕೆ ಸರಿಯಿಲ್ಲ. ಮುಂದೆ ದೇಶವು ಬಿಜೆಪಿ ಇಲ್ಲದೆ, ಮೋದಿ ಇಲ್ಲದೆ ಇರಬೇಕಾಗಿದೆ. ಎಲ್ಲದಕ್ಕೂ ಜೈ ಶ್ರೀರಾಮ್ ಎಂದು ಉತ್ತರಿಸುತ್ತಾರೆ. ಪುಲ್ವಾಮಾ ಘಟನೆ ಒಂದು ಶ್ರೇಷ್ಠ ಉದಾಹರಣೆಯಾಗಿದೆ. ಅವರು ವಿಫಲರಾಗಿದ್ದಾರೆ. ಐಬಿ ಏನು ಮಾಡುತ್ತಿದೆ? ಗುಪ್ತಚರ ನೆಟ್ವರ್ಕ್ ಏನು ಮಾಡುತ್ತಿದೆ? ಪುಲ್ವಾಮಾ ಘಟನೆಯ ನಂತರ ಮೋದಿ 2019ರಲ್ಲಿ ಸರ್ಜಿಕಲ್ ಸ್ಟ್ರೈಕ್ನಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದರು”ಎಂದು ತೆಲಂಗಾಣ ಮುಖ್ಯಮಂತ್ರಿ ಹೇಳಿದರು.
ಬಿಜೆಪಿ ಪ್ರತಿಕ್ರಿಯೆ: ತೆಲಂಗಾಣ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, “ಅವರ ನಾಯಕ ರಾಹುಲ್ ಗಾಂಧಿ ಬೆಂಬಲಿಗ ಪಾಕ್ನ ಮಾಜಿ ಸಚಿವ ಫವಾದ್ ಚೌಧರಿ ಆ ದೇಶದ ಅಸೆಂಬ್ಲಿಯಲ್ಲಿ ಹೇಳಿರುವುದನ್ನು ಅವರು ನೆನಪಿಟ್ಟುಕೊಳ್ಳಬೇಕು. ಈ ಬಗ್ಗೆ ರೆಡ್ಡಿಗೆ ಯಾವುದೇ ತಿಳಿವಳಿಕೆ ಇಲ್ಲ ಅಥವಾ ಪಾಕಿಸ್ತಾನದ ಬಗ್ಗೆ ಅವರಿಗೆ ಪ್ರೀತಿ ಹುಟ್ಟಿರಬೇಕು ಎಂದು ಕಿಡಿಕಾರಿದ್ದಾರೆ.