

ಫೋಟೋಕಾಪಿ ಮಾಡಿಕೊಡುವ ಯಂತ್ರಗಳನ್ನು ನಿರ್ವಿುಸುವ ಜೆರಾಕ್ಸ್ ಸಂಸ್ಥೆ ಎಷ್ಟರ ಮಟ್ಟಿಗೆ ಜನಪ್ರಿಯವೆಂದರೆ ನಾವು ಫೋಟೋಕಾಪಿ ಮಾಡುವ ಪ್ರಕ್ರಿಯೆಯನ್ನು ಜೆರಾಕ್ಸ್ ಮಾಡುವುದು ಎಂದೇ ಗುರುತಿಸುತ್ತೇವೆ. ಹಾಗೆಯೇ, ಗೂಗಲ್ ಸಂಸ್ಥೆಯ ಸರ್ಚ್ ಇಂಜನ್ ಬಳಸಿ ಮಾಹಿತಿ ಹುಡುಕಿಕೊಳ್ಳುವ ಕೆಲಸ ‘ಗೂಗಲ್ ಮಾಡುವುದು’ ಎಂದೇ ನಮಗೆಲ್ಲ ಪರಿಚಿತವಾಗಿದೆ.
ಇದೇ ಮಟ್ಟದ ಜನಪ್ರಿಯತೆ ಗಳಿಸಿಕೊಂಡಿರುವ ತಂತ್ರಾಂಶಗಳಲ್ಲಿ ಇನ್ನೊಂದು ಪ್ರಮುಖ ಹೆಸರು ಅಡೋಬಿ ಫೋಟೋಷಾಪ್. ಚಿತ್ರಗಳನ್ನು ನಮಗೆ ಬೇಕಾದಂತೆ ಬದಲಿಸಲು ಅನುವು ಮಾಡಿಕೊಡುವ ಈ ತಂತ್ರಾಂಶ ಮಾರುಕಟ್ಟೆಗೆ ಬಂದು ಇದೀಗ ಮೂವತ್ತು ವರ್ಷ. ಮೂರು ದಶಕಗಳ ಅವಧಿಯಲ್ಲಿ ಈ ತಂತ್ರಾಂಶ ಗಳಿಸಿಕೊಂಡಿರುವ ಜನಪ್ರಿಯತೆ ಎಷ್ಟರಮಟ್ಟದ್ದು ಎಂದರೆ ಕಂಪ್ಯೂಟರ್ ಸಹಾಯದಿಂದ ಚಿತ್ರಗಳನ್ನು ಬದಲಿಸುವ ಕೆಲಸವನ್ನು ‘ಫೋಟೋಷಾಪ್ ಮಾಡುವುದು’ ಅಥವಾ ‘ಫೋಟೋಷಾಪಿಂಗ್’ ಎಂದೇ ಗುರುತಿಸಲಾಗುತ್ತದೆ. ಅತ್ಯಂತ ಉತ್ಕೃಷ್ಟ ಗುಣಮಟ್ಟದ ಚಿತ್ರಗಳನ್ನು ಸೃಷ್ಟಿಸುವುದು ಹಾಗೂ ಈಗಾಗಲೇ ಇರುವ ಚಿತ್ರಗಳನ್ನು ಸುಳಿವೇ ಸಿಗದಂತೆ ಬದಲಿಸಿಬಿಡುವುದನ್ನು ಫೋಟೋಷಾಪ್ ಸಾಧ್ಯವಾಗಿಸಿದೆ.
ಫೋಟೋಷಾಪ್ ತಂತ್ರಾಂಶವನ್ನು ಥಾಮಸ್ ಮತ್ತು ಜಾನ್ ನಾಲ್ ಎಂಬ ಸಹೋದರರು 1988ರಲ್ಲಿ ರೂಪಿಸಿದರು. ಮೊದಲಿಗೆ ಈ ತಂತ್ರಾಂಶ ಮ್ಯಾಕ್ (ಆಪಲ್) ಕಂಪ್ಯೂಟರುಗಳಲ್ಲಷ್ಟೇ ಕೆಲಸಮಾಡುತ್ತಿತ್ತು. ಕೆಲ ಸಮಯದ ನಂತರ ಅಡೋಬಿ ಸಂಸ್ಥೆ ಈ ತಂತ್ರಾಂಶವನ್ನು ಕೊಂಡಾಗ ಫೋಟೋಷಾಪ್ ಹೆಸರಿನ ಹಿಂದಕ್ಕೆ ಅಡೋಬಿ ಸಂಸ್ಥೆಯ ಹೆಸರೂ ಸೇರಿಕೊಂಡು ಸಾಫ್ಟ್ವೇರ್ ಪ್ರಪಂಚದ ಅತ್ಯಂತ ಜನಪ್ರಿಯ ನಾಮಧೇಯವೊಂದು ಸೃಷ್ಟಿಯಾಯಿತು. ಅಡೋಬಿ ಫೋಟೋಷಾಪ್ನ ಮೊದಲ ಆವೃತ್ತಿ ಮಾರುಕಟ್ಟೆಗೆ ಬಂದಿದ್ದು 1990ರ ಫೆಬ್ರುವರಿ ತಿಂಗಳಿನಲ್ಲಿ.
ಅಲ್ಲಿಂದ ಮುಂದೆ ನಡೆದದ್ದೆಲ್ಲ ಇತಿಹಾಸವೇ. ಚಿತ್ರವಿನ್ಯಾಸಕರಿಗೆ ಈ ತಂತ್ರಾಂಶದ ಅಪಾರ ಸಾಧ್ಯತೆಗಳು ಅರಿವಾಗುತ್ತಿದ್ದಂತೆ ಅವರು ಹೆಚ್ಚಿನ ಸಂಖ್ಯೆಯಲ್ಲಿ ಫೋಟೋಷಾಪ್ ಬಳಕೆದಾರರಾದರು. ವಿಂಡೋಸ್ ಜನಪ್ರಿಯತೆ ಹೆಚ್ಚಿದಂತೆ ಫೋಟೋಷಾಪ್ನ ವಿಂಡೋಸ್ ಆವೃತ್ತಿಯೂ ಬಂತು. ಫೋಟೋಷಾಪ್ ಬಳಸುವುದು ಕಷ್ಟ ಎಂಬ ದೂರುಗಳ ನಡುವೆಯೂ ಅದರ ಸಾಧ್ಯತೆಗಳು ಲಕ್ಷಾಂತರ ಜನರ ಮನಗೆದ್ದಿವೆ.
ಚಿತ್ರಗಳ ವಿಷಯಕ್ಕೆ ಬಂದರೆ ಈಗಂತೂ ಫೋಟೋಷಾಪ್ನಲ್ಲಿ ಏನೇನು ಸಾಧ್ಯ ಎನ್ನುವುದಕ್ಕಿಂತ ಏನೇನು ಸಾಧ್ಯವಿಲ್ಲ ಎಂದು ಹುಡುಕುವುದೇ ಸುಲಭವೇನೋ. ಯಾವುದೋ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ಸಾಧಾರಣ ಚಿತ್ರವೂ ಫೋಟೋಷಾಪ್ ಪರಿಣತರ ಕೈಚಳಕದಿಂದ ಅದ್ಭುತ ಕಲಾಕೃತಿಯಾಗಿ ಬದಲಾಗಬಲ್ಲದು. ಬಣ್ಣ-ಕುಂಚಗಳನ್ನೆಲ್ಲ ಬಿಟ್ಟು ಫೋಟೋಷಾಪ್ (ಮತ್ತು ಅದರಂತಹ ಇನ್ನಿತರ ಕೆಲ ತಂತ್ರಾಂಶಗಳ) ಸಹಾಯದಿಂದ ಕಲೆಯ ಸೃಷ್ಟಿ ಮಾಡುವ ಡಿಜಿಟಲ್ ಆರ್ಟ್ ಎಂಬ ಕ್ಷೇತ್ರವೇ ರೂಪುಗೊಂಡಿದೆ.
ಡೆಸ್ಕ್ಟಾಪ್-ಲ್ಯಾಪ್ಟಾಪ್ ಕಂಪ್ಯೂಟರುಗಳ ಪರಿಮಿತಿಯನ್ನು ದಾಟಿ ಹೊರಬಂದಿರುವ ಫೋಟೋಷಾಪ್ ಈಗ ಸ್ಮಾರ್ಟ್ಫೋನುಗಳಲ್ಲೂ ಬಳಕೆಗೆ ಸಿಗುತ್ತಿದೆ. ಒಂದೇ ಬಾರಿ ದುಬಾರಿ ಶುಲ್ಕ ಕೊಟ್ಟು ಡೌನ್ಲೋಡ್ ಮಾಡಿಕೊಳ್ಳುವ ಬದಲು ತಿಂಗಳಿಗೆ ಇಷ್ಟೆಂದು ಶುಲ್ಕ ನೀಡಿ ಕ್ಲೌಡ್ ತಂತ್ರಜ್ಞಾನದ ಮೂಲಕ ಈ ತಂತ್ರಾಂಶವನ್ನು ಬಳಸುವುದು ಕೂಡ ಸಾಧ್ಯವಾಗಿದೆ.
ಕಲಾವಿದರ ಕ್ರಿಯಾಶೀಲತೆಯನ್ನು, ಕಲ್ಪನೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಫೋಟೋಷಾಪ್ ತಂತ್ರಾಂಶದ ಬಗ್ಗೆ ದೂರುಗಳೂ ಇಲ್ಲದಿಲ್ಲ. ಡಿಜಿಟಲ್ ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಸುಳ್ಳು ಸುದ್ದಿ, ಅರ್ಥಾತ್ ಫೇಕ್ ನ್ಯೂಸ್ ಹಾವಳಿ ಬೆಳೆಯುವಲ್ಲಿ ಈ ತಂತ್ರಾಂಶದ ಪಾತ್ರವೂ ಮಹತ್ವದ್ದು ಎನ್ನುವುದು ಇಂತಹ ದೂರುಗಳಲ್ಲೊಂದು. ಅಡೋಬಿ ಸಂಸ್ಥೆ ಅಥವಾ ಫೋಟೋಷಾಪ್ ತಂತ್ರಾಂಶದ ವತಿಯಿಂದಲೇನೂ ಸುಳ್ಳು ಸುದ್ದಿಗಳು ಹರಡುತ್ತಿಲ್ಲ, ಸರಿ.
ಆದರೆ ಚಿತ್ರಗಳನ್ನು ಬೇಕಾದಂತೆ ಬದಲಿಸುವುದನ್ನು ಸುಲಭವಾಗಿಸಿರುವ ಈ ತಂತ್ರಾಂಶವನ್ನು ಸುಳ್ಳು ಸುದ್ದಿ ಹರಡುವ ಬಹಳಷ್ಟು ಮಂದಿ ಬಳಸುತ್ತಿದ್ದಾರೆ ಮತ್ತು ತಮ್ಮ ಕಲ್ಪನೆ ಹಾಗೂ ಫೋಟೋಷಾಪ್ನ ಸಾಧ್ಯತೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನುವುದಂತೂ ನಿಜವೇ. ಏಳು ಹೆಡೆಯ ನಾಗರಹಾವು ಸಿಕ್ಕಿದೆ ಎನ್ನುವಂತಹ, ತುಲನಾತ್ಮಕವಾಗಿ ನಿರಪಾಯಕಾರಿಯಾದ ಸೃಷ್ಟಿಗಳಿಂದ ಪ್ರಾರಂಭಿಸಿ ತಮಗೆ ಆಗದವರ ಮಾನಹಾನಿ ಮಾಡಲೆಂದೇ ಸೃಷ್ಟಿಸಲಾಗುವ ಚಿತ್ರಗಳವರೆಗೆ ಫೋಟೋಷಾಪ್ನ ದುರುಪಯೋಗ ವ್ಯಾಪಕವಾಗಿ ನಡೆದಿದೆ.
ನಮ್ಮ ಪುಣ್ಯ, ಫೋಟೋಷಾಪ್ನ ವಿಶೇಷ ಸಾಮರ್ಥ್ಯ ಫೋಟೋಗಳನ್ನು ಚೆಂದಗಾಣಿಸುವುದಕ್ಕೆ, ಬೇಕಾದಂತೆ ಬದಲಿಸಿಕೊಳ್ಳುವುದಕ್ಕೆ ಮಾತ್ರವೇ ಸೀಮಿತವಾಗಿತ್ತು. ಆದರೆ ಈಗ, ಫೋಟೋಷಾಪ್ ಮಾರುಕಟ್ಟೆಗೆ ಬಂದು ಮೂವತ್ತು ವರ್ಷಗಳಾದ ಹೊತ್ತಿನಲ್ಲಿ, ವೀಡಿಯೋಗಳನ್ನೂ ನಮಗೆ ಬೇಕಾದಂತೆ ತಿರುಚಲು ಸಾಧ್ಯವಾಗಿಸುವ ತಂತ್ರಜ್ಞಾನ ಬೆಳೆಯುತ್ತಿದೆ. ಮುಂದಿನ ಮೂವತ್ತು ವರ್ಷಗಳಲ್ಲಿ ಪರಿಸ್ಥಿತಿ ಇನ್ನೂ ಹೇಗೆಲ್ಲ ಬದಲಾಗಿಬಿಡುತ್ತದೋ, ಆ ಸಮಯವೇ ಹೇಳಬೇಕು!