ಟೀಮ್ ಇಂಡಿಯಾ ನಾಯಕತ್ವ ಎಂಬ ಮುಳ್ಳಿನ ಸಿಂಹಾಸನ..

VIRAT KOHLI for web
Published on
ನಾಯಕತ್ವ ಎನ್ನುವುದು ಕಿರೀಟವಲ್ಲ, ಪ್ರಶಸ್ತಿಯೂ ಅಲ್ಲ, ಅದೊಂದು ಸವಾಲು. ಸಾಮರ್ಥ್ಯ ಇಲ್ಲದವರು ಆಸೆ ಪಡಬಾರದು. ಭಾರತೀಯ ಕ್ರಿಕೆಟ್​ನಲ್ಲಿ ನಾಯಕತ್ವ ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹುವಾಗಿ ಚರ್ಚೆಯಾಗುತ್ತಿರುವ ವಿಚಾರ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ವಿರಾಟ್ ಕೊಹ್ಲಿ ಭಾರತದ ಮೂರೂ ಮಾದರಿ ಕ್ರಿಕೆಟ್ ತಂಡಗಳ ನಾಯಕತ್ವ ಹೊಣೆಗಾರಿಕೆಯಿಂದ ನಿರ್ಗಮಿಸಿದ ಮೇಲೆ ಟೀಮ್ ಇಂಡಿಯಾದ ಹಾಟ್ ಸೀಟ್ ಮತ್ತಷ್ಟು ಬಿಸಿಯಾಗಿದೆ.

ಕ್ರಿಕೆಟ್ ಒಂದು ಟೀಮ್ ಗೇಮ್ ವ್ಯಕ್ತಿಗತ ಸಾಹಸಗಳನ್ನು ನೆಚ್ಚಿಕೊಂಡು ಎಲ್ಲ ಪಂದ್ಯಗಳನ್ನು ಗೆಲ್ಲಲು ಸಾಧ್ಯವಿಲ್ಲ. ಓರ್ವ ಬ್ಯಾಟರ್ ಪವಾಡಸದೃಶ ಬ್ಯಾಟಿಂಗ್ ಮೂಲಕ ಒಂದು ಪಂದ್ಯ ಗೆಲ್ಲಿಸಬಹುದು. ಆದರೆ, ಒಂದು ಸರಣಿ ಅಥವಾ ಟೂರ್ನಿ ಗೆಲ್ಲಿಸುವುದು ಸಮರ್ಥ ನಾಯಕನಿಂದ ಮಾತ್ರ ಸಾಧ್ಯ.

ಭಾರತೀಯ ಕ್ರಿಕೆಟ್ ಇವತ್ತಿನ ಈ ಶ್ರೀಮಂತ ಸ್ಥಿತಿ ತಲುಪಿರುವುದಕ್ಕೆ ಭಾರತ ತಂಡಗಳನ್ನು ಮುನ್ನಡೆಸಿದ ಧೀಮಂತ ನಾಯಕರೂ ಕಾರಣ. ಆ ಕಾಲದ ಮನ್ಸೂರ್ ಅಲಿ ಖಾನ್ ಪಟೌಡಿ, ಅಜಿತ್ ವಾಡೇಕರ್​ರಿಂದ ಸುನಿಲ್ ಗಾವಸ್ಕರ್, ಕಪಿಲ್ ದೇವ್​ವರೆಗೆ, ಸೌರವ್ ಗಂಗೂಲಿ, ಅನಿಲ್ ಕುಂಬ್ಳೆಯಿಂದ ಎಂಎಸ್ ಧೋನಿ, ವಿರಾಟ್ ಕೊಹ್ಲಿವರೆಗೆ ಭಾರತ ತಂಡದ ನಾಯಕತ್ವ ಹೊಣೆ ಹೊತ್ತ ಧೀಮಂತರು ಕ್ರಿಕೆಟ್​ನ ಘನತೆ ಹೆಚ್ಚಿಸಿದ್ದಾರೆ. ಆದರೂ, ನಾಯಕತ್ವ ಎನ್ನುವುದು ಯಾರು ಬೇಕಾದರೂ ನಿರ್ವಹಿಸಬಹುದಾದ ಕೆಲಸವಲ್ಲ. ಶ್ರೇಷ್ಠ ಬ್ಯಾಟ್ಸ್​ಮನ್​ಗಳೆಲ್ಲರೂ ಶ್ರೇಷ್ಠ ನಾಯಕರಾಗುತ್ತಾರೆ ಎನ್ನಲೂ ಸಾಧ್ಯವಿಲ್ಲ. ಉದಾಹರಣೆಗೆ ಸಚಿನ್ ತೆಂಡುಲ್ಕರ್. ಹಾಗೆಯೇ ಶ್ರೇಷ್ಠ ನಾಯಕರಾಗುವ ಛಾತಿ ಹೊಂದಿದ್ದರೂ ಕೆಲವರಿಗೆ ಅವಕಾಶವೇ ಸಿಕ್ಕಿರುವುದಿಲ್ಲ. ಆಸ್ಟ್ರೇಲಿಯಾದ ಶೇನ್ ವಾರ್ನ್ ಮತ್ತು ಆಡಂ ಗಿಲ್ಕ್ರಿಸ್ಟ್ ಬೆರಳೆಣಿಕೆ ಪಂದ್ಯಗಳಲ್ಲಿ ಹಂಗಾಮಿ ನಾಯಕರಾಗಿದ್ದು ಬಿಟ್ಟರೆ, ಪೂರ್ಣ ಪ್ರಮಾಣದ ನಾಯಕರಾಗುವ ಅವಕಾಶವೇ ದೊರೆಯಲಿಲ್ಲ. ಸ್ಟೀವ್ ವಾ, ರಿಕಿ ಪಾಂಟಿಂಗ್ ಮತ್ತು ಮೈಕೆಲ್ ಕ್ಲಾರ್ಕ್ ರೂಪದಲ್ಲಿ ಮೂವರು ಸಮರ್ಥರು ಸುದೀರ್ಘ ಕಾಲ ಆಸೀಸ್ ನಾಯಕತ್ವ ಹಂಚಿಕೊಂಡ ಪರಿಣಾಮ ಆ ಕಾಲಘಟ್ಟದ ಅನೇಕ ಆಸೀಸ್ ಆಟಗಾರರಿಗೆ ಸಮರ್ಥರಿದ್ದರೂ ನಾಯಕತ್ವವೆನ್ನುವುದು ಮರೀಚಿಕೆಯಾಯಿತು.

ಭಾರತದ ತ್ರಿವಿಕ್ರಮ ಬ್ಯಾಟರ್ ಜಿ.ಆರ್. ವಿಶ್ವನಾಥ್ 1970ರ ದಶಕದಲ್ಲಿ ಕೇವಲ 2 ಟೆಸ್ಟ್​ಗಳಲ್ಲಿ ಭಾರತದ ನಾಯಕರಾಗಿದ್ದರು. ಅವಕಾಶ ದೊರೆತಿದ್ದರೆ ಅವರು ಶ್ರೇಷ್ಠ ನಾಯಕರೆನಿಸುವ ಎಲ್ಲ ಸಾಧ್ಯತೆ ಇತ್ತು. 1983ರಲ್ಲೇ ಭಾರತಕ್ಕೆ ವಿಶ್ವ ಚಾಂಪಿಯನ್ ಪಟ್ಟ ಕೊಡಿಸಿದ ಕಪಿಲ್ ದೇವ್​ಗೆ ನಾಯಕರಾಗಿ ದೀರ್ಘಾವಧಿ ದೊರೆತಿದ್ದರೆ ಬಹುಶಃ ಸರ್ವಶ್ರೇಷ್ಠ ನಾಯಕರೆನಿಸಿಕೊಳ್ಳಲು ಬೇಕಾದ ಅಂಕಿಅಂಶಗಳನ್ನು ಕಲೆಹಾಕಿರುತ್ತಿದ್ದರು. 1996ರಲ್ಲಿ ಅಜರುದ್ದೀನ್​ರಿಂದ ನಾಯಕತ್ವ ಕಿತ್ತು ಸಚಿನ್ ತೆಂಡುಲ್ಕರ್​ಗೆ ಪಟ್ಟ ಕಟ್ಟುವ ಬದಲು ಅಥವಾ 1998ರಲ್ಲಿ ತೆಂಡುಲ್ಕರ್​ರನ್ನು ಕಿತ್ತುಹಾಕಿ ಮತ್ತೆ ಅಜರ್​ಗೆ ನಾಯಕತ್ವ ನೀಡುವ ಬದಲು ಅಜಯ್ ಜಡೇಜಾರನ್ನು ಪರಿಗಣಿಸಿದ್ದರೆ ಭಾರತೀಯ ಕ್ರಿಕೆಟ್ ಬೇರೆಯೇ ದಿಕ್ಕಿನಲ್ಲಿ ಹೊರಳುವ ಸಾಧ್ಯತೆ ಇತ್ತು. ಮೊದಲ ವಿದೇಶಿ ಕೋಚ್ ಜಾನ್ ರೈಟ್ ನೆರವಿನಿಂದ ಬಲಿಷ್ಠ ತಂಡ ಕಟ್ಟಿದ್ದ ಸೌರವ್ ಗಂಗೂಲಿ ಕೂಡ ಗ್ರೆಗ್ ಚಾಪೆಲ್ ಅಡ್ಡಿಯಾಗದೇ ಹೋಗಿದ್ದಲ್ಲಿ ನಾಯಕರಾಗಿ ಇನ್ನಷ್ಟು ಎತ್ತರಕ್ಕೇರುವ ಅವಕಾಶಗಳಿದ್ದವು. 38ನೇ ವಯಸ್ಸಿನಲ್ಲಿ ಅನಿವಾರ್ಯ ಸನ್ನಿವೇಶದಲ್ಲಿ ನಾಯಕತ್ವ ಹೊಣೆಗಾರಿಕೆ ಒಪ್ಪಿಕೊಂಡ ಅನಿಲ್ ಕುಂಬ್ಳೆಗೆ ಕೆಲವು ವರ್ಷ ಮುಂಚಿತವಾಗಿ ಆ ಜವಾಬ್ದಾರಿ ದೊರೆತಿದ್ದಲ್ಲಿ ಅವರು ಕೂಡ ನಾಯಕತ್ವದ ಹೊಸ ಯುಗ ಪರಿಚಯಿಸುವ ಸಾಧ್ಯತೆ ಇತ್ತು.

ಗಂಗೂಲಿ ಮತ್ತು ಎಂಎಸ್ ಧೋನಿಗೆ ಅವರಿಬ್ಬರ ವ್ಯಕ್ತಿಗತ ಆಟಕ್ಕಿಂತ ಅನಿವಾರ್ಯ ಸಂದರ್ಭದಲ್ಲಿ ಹೊಣೆಗಾರಿಕೆ ನೀಡಲಾಗಿತ್ತು. ಉಳಿದಂತೆ ತಂಡದ ನಂ.1 ಬ್ಯಾಟರ್​ಗೆ ನಾಯಕತ್ವವನ್ನು ನೀಡುವುದು ಬಹುತೇಕ ತಂಡಗಳ ರಿವಾಜಾಗಿ ಬಿಟ್ಟಿದೆ. ಜೋ ರೂಟ್ ಸದ್ಯ ವಿಶ್ವದ ಶ್ರೇಷ್ಠ ಬ್ಯಾಟ್ಸ್​ಮನ್. ಆದರೆ, ನಾಯಕತ್ವ ಗುಣ ಅಷ್ಟಕ್ಕಷ್ಟೇ. ಇಂಗ್ಲೆಂಡ್ ರೂಟ್ ಬದಲು ಬೇರೊಬ್ಬರಿಗೆ ನಾಯಕತ್ವ ನೀಡಿದ್ದರೆ ಮೊನ್ನೆ ಆಶಸ್​ನಲ್ಲಿ ಅಷ್ಟೊಂದು ಹೀನಾಯವಾಗಿ ಬಹುಶಃ ಸೋಲುತ್ತಿರಲಿಲ್ಲ.

ಹಾಗೆ ನೋಡಿದರೆ, ದಕ್ಷಿಣ ಆಫ್ರಿಕಾ ತಂಡ ಮೊದಲಿನಿಂದಲೂ ನಾಯಕತ್ವ ವಿಚಾರದಲ್ಲಿ ಪ್ರಯೋಗಗಳಿಗೆ ಆದ್ಯತೆ ನೀಡುತ್ತ ಬಂದಿದೆ. ತಂಡ ಗ್ರೇಮ್ ಸ್ಮಿತ್​ಗೆ ನಾಯಕತ್ವ ಕಟ್ಟಿದ ಸಂದರ್ಭದಲ್ಲಿ ಅವರು ವಿಶ್ವ ಕ್ರಿಕೆಟ್​ಗೆ ಬಹುತೇಕ ಅನಾಮಧೇಯರಾಗಿದ್ದರು. ತಂಡದ ಹಾಲಿ ಟೆಸ್ಟ್ ನಾಯಕ ಡೀನ್ ಎಲ್ಗರ್ ಮತ್ತು ಏಕದಿನ ನಾಯಕ ಟೆಂಬ ಬವುಮ ಕೂಡ ಬ್ಯಾಟ್ಸ್​ಮನ್​ಗಳಾಗಿ ವಿಶ್ವದ ಎದುರು ಪ್ರವರ್ಧಮಾನಕ್ಕೆ ಬರುವ ಮುನ್ನವೇ ನಾಯಕರಾಗಿಬಿಟ್ಟಿದ್ದರು! ಇಂಥ ಪ್ರಯೋಗಗಳನ್ನು ಭಾರತದಲ್ಲಿ ನಿರೀಕ್ಷಿಸುವುದು ಕಷ್ಟ.

ವಿರಾಟ್ ಕೊಹ್ಲಿ ನಾಯಕತ್ವ ತೊರೆದ ನಂತರ ಏಕದಿನ ಮತ್ತು ಟಿ20 ತಂಡಗಳಿಗೆ ನಾಯಕರಾಗಿ ರೋಹಿತ್ ಶರ್ಮ ಈಗಾಗಲೇ ನೇಮಕಗೊಂಡಿದ್ದಾರೆ. ಸದ್ಯ ಅವರು ಗಾಯಾಳುವಾಗಿ ವಿಶ್ರಾಂತಿಯಲ್ಲಿದ್ದರೂ ವೆಸ್ಟ್ ಇಂಡೀಸ್ ವಿರುದ್ಧದ ತವರಿನ ಸರಣಿ ಹೊತ್ತಿಗೆ ತಂಡಕ್ಕೆ ಮರಳುತ್ತಾರೆ. ಆದರೆ, ಟೆಸ್ಟ್ ನಾಯಕ ಯಾರೆಂಬ ಸಸ್ಪೆನ್ಸ್ ಮುಂದುವರಿದಿದೆ.

ಇತ್ತೀಚೆಗೆ ಜೊಹಾನ್ಸ್​ಬರ್ಗ್ ಟೆಸ್ಟ್​ನಲ್ಲಿ ವಿರಾಟ್ ಕೊಹ್ಲಿ ಬೆನ್ನುನೋವು ಎಂದು ವಿಶ್ರಾಂತಿ ಪಡೆದಾಗ ಕೆ.ಎಲ್. ರಾಹುಲ್ ನಾಯಕರಾಗಿ ತಂಡ ಮುನ್ನಡೆಸುವ ಅವಕಾಶ ಪಡೆದರು. ಸದ್ಯ ಏಕದಿನ ಸರಣಿಯಲ್ಲೂ ಅವರೇ ನಾಯಕ. ಓರ್ವ ಕನ್ನಡಿಗ ಭಾರತ ತಂಡದ ನಾಯಕ ಎನ್ನುವುದು ಹೆಮ್ಮೆಯ ವಿಷಯವೇ ಆದರೂ, 2ನೇ ಟೆಸ್ಟ್ ಮತ್ತು ಮೊದಲ ಏಕದಿನದಲ್ಲಿ ರಾಹುಲ್​ರ ನಾಯಕತ್ವ ನಿಭಾವಣೆಯಲ್ಲಿ ಹೆಮ್ಮೆಪಡುವಂಥ ಅಂಶಗಳೇನಿರಲಿಲ್ಲ. ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸತತ 2 ವರ್ಷ ನಾಯಕರಾಗಿದ್ದರೂ ಅವರಿಂದ ಯಾವುದೇ ಚಮತ್ಕಾರ ಸಾಧ್ಯವಾಗಿರಲಿಲ್ಲ. ರಾಹುಲ್ ಬ್ಯಾಟರ್ ಆಗಿ ರನ್ ಗುಡ್ಡೆ ಹಾಕಿದರೂ, ನಾಯಕರಾಗಿ ತಂಡವನ್ನು 6ನೇ ಸ್ಥಾನಕ್ಕಿಂತ ಮೇಲೆತ್ತುವುದು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ ಭಾರತದ ನಾಯಕರಾಗಿದ್ದಾಗ ತಂತ್ರಗಾರಿಕೆಯಲ್ಲಿ ಅಷ್ಟೇನೂ ವಿಶೇಷತೆ ತೋರದಿದ್ದರೂ, ಅವರ ಆಕ್ರಮಣಶೀಲ ಉಪಸ್ಥಿತಿಯೇ ಎದುರಾಳಿಗಳ ಮನೋಬಲವನ್ನು ಕುಗ್ಗಿಸುತ್ತಿತ್ತು. ಎಂಎಸ್ ಧೋನಿ ಮೈದಾನದಲ್ಲಿ ಚಮತ್ಕಾರಿಕ ನಿರ್ಧಾರಗಳ ಮೂಲಕ ಪಂದ್ಯಗಳ ದಿಕ್ಕುದೆಸೆ ಬದಲಿಸಿಬಿಡುತ್ತಿದ್ದರು.

ಭಾರತ ತಂಡ ಹಾಗೂ ಚೆನ್ನೈ ಸೂಪರ್ಕಿಂಗ್ಸ್ ತಂಡಗಳ ನಾಯಕರಾಗಿ ಧೋನಿಯ ಚಮತ್ಕಾರಿಕ ನಿರ್ಧಾರಗಳ ಬಗ್ಗೆಯೇ ಒಂದು ಪಿಎಚ್.ಡಿ ಮಾಡಬಹುದು. ಆದರೆ, ರಾಹುಲ್ ಇಂಥ ವರ್ಚಸ್ಸು ಬೆಳೆಸಿಕೊಳ್ಳಬೇಕಿದೆ. ದಕ್ಷಿಣ ಆಫ್ರಿಕಾದ ಇಬ್ಬರು ಅನನುಭವಿ ಬ್ಯಾಟರ್​ಗಳು ಭಾರತದ ಖ್ಯಾತನಾಮ ಬೌಲರ್​ಗಳ ದಾಳಿಗೆ ಸ್ವಲ್ಪವೂ ಅಂಜದೆ, ಅಳುಕದೆ ಲೀಲಾಜಾಲವಾಗಿ ರನ್ ಬಾಚುತ್ತ ತಲಾ 2ನೇ ಏಕದಿನ ಶತಕ ದಾಖಲಿಸುತ್ತಿದ್ದಾಗ ಅವರಿಬ್ಬರನ್ನು ವಿಚಲಿತಗೊಳಿಸಿ, ಜತೆಯಾಟ ಮುರಿಯಲು, ವಿಕೆಟ್ ಕಬಳಿಸಲು ರಾಹುಲ್ ಬಳಿ ಯಾವ ಯುಕ್ತಿಯೂ ಇರಲಿಲ್ಲ. ಬೌಲರ್​ಗಳ ಎಸೆತದಲ್ಲಾಗಲೀ, ಬಾಡಿ ಲಾಂಗ್ವೇಜ್​ನಲ್ಲಾಗಲೀ, ಫೀಲ್ಡಿಂಗ್ ನಿಯೋಜನೆಯಲ್ಲಾಗಲೀ ಆಕ್ರಮಣಕಾರಿ ನಡೆ ಕಾಣಲೇ ಇಲ್ಲ. ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಲಭ್ಯರಿಲ್ಲದ ಕಾರಣ ವೆಂಕಟೇಶ ಅಯ್ಯರ್​ರನ್ನು ಆಲ್ರೌಂಡರ್ ಎಂದು ಆಡಿಸಲಾಗಿತ್ತು. ಆದರೆ, ಅವರಿಗೆ ಒಂದು ಓವರ್ ಬೌಲಿಂಗ್ ಕೂಡ ನೀಡಲಿಲ್ಲ. ಅವರ ಬೌಲಿಂಗ್ ಮೇಲೆ ನಂಬಿಕೆ ಇಲ್ಲದಿದ್ದ ಮೇಲೆ ಪಂದ್ಯದಲ್ಲಿ ಅವರನ್ನು ಆಡಿಸಿದ್ದಾದರೂ ಏಕೆ? ಅವರ ಬದಲು ತಜ್ಞ ಬ್ಯಾಟ್ಸ್​ಮನ್ ಸೂರ್ಯಕುಮಾರ್ ಯಾದವ್​ರನ್ನೇ ಆಡಿಸಬಹುದಿತ್ತಲ್ಲ?

ರಿಷಬ್ ಪಂತ್ ನಾಯಕರಾಗಲಿ ಎಂದು ಸುನಿಲ್ ಗಾವಸ್ಕರ್​ರಂಥ ಹಿರಿಯರು ಹೇಳುತ್ತಿದ್ದಾರೆ. ಆದರೆ, ಅದೊಂದು ದೊಡ್ಡ ಗ್ಯಾಂಬಲ್. ಏಕೆಂದರೆ, ಪಂತ್, ಧೋನಿ ಅಲ್ಲ. ಕೇಪ್​ಟೌನ್ ಟೆಸ್ಟ್​ನಲ್ಲಿ ಅವರು ಆಡಿದಂಥ ವಿಧ್ವಂಸಕ ಶತಕದ ಇನಿಂಗ್ಸ್ ಅವರ ಟ್ರೇಡ್ ಮಾರ್ಕ್. ಆದರೆ, ಅಂಥ ಒಂದು ಇನಿಂಗ್ಸ್ ನಡುವೆ ಅವರು ಹತ್ತು ಬಾರಿ ಬೇಜವಾಬ್ದಾರಿ ಹೊಡೆತಕ್ಕೆ ಔಟಾಗಿರುತ್ತಾರೆ. ನಾಯಕರಾಗಿ ಕೂಡ ಐಪಿಎಲ್​ನಲ್ಲಿ ಡೆಲ್ಲಿ ಡೇರ್​ಡೆವಿಲ್ಸ್ ತಂಡವನ್ನು ಮುನ್ನಡೆಸುವಾಗ ವಿಶೇಷವೇನೂ ಕಂಡಿಲ್ಲ. ಹಾಗೆ ನೋಡಿದರೆ, ಮೊದಲ ಏಕದಿನದಲ್ಲಿ ರಿಷಬ್ ಸ್ವಲ್ಪ ಜವಾಬ್ದಾರಿಯಿಂದ ಆಡಿದ್ದರೆ ಭಾರತವನ್ನು ಗೆಲ್ಲಿಸುವುದು ಸಾಧ್ಯವಿತ್ತು. ಆಫ್ರಿಕಾ ಪರ 4ನೇ ವಿಕೆಟ್​ಗೆ 200ಕ್ಕೂಅಧಿಕ ರನ್ ಜೊತೆಯಾಟದಲ್ಲಿ ಟೆಂಬ ಬವುಮ ಮತ್ತು ಡುಶೇನ್ ತೋರಿದ ಸಂಯಮವನ್ನು ಭಾರತದ ಪರ 4ನೇ ವಿಕೆಟ್​ಗೆ ರಿಷಬ್ ಮತ್ತು ಶ್ರೇಯಸ್ ಅಯ್ಯರ್ ಪ್ರದರ್ಶಿಸಿದ್ದರೆ ಫಲಿತಾಂಶವೇ ಬೇರೆ ಆಗಿರುತ್ತಿತ್ತು. 2002ರಲ್ಲಿ ಇಂಥದ್ದೇ ಸನ್ನಿವೇಶದಲ್ಲಿ ಯುವರಾಜ್ ಸಿಂಗ್ ಮತ್ತು ಮೊಹಮ್ಮದ್ ಕೈಫ್ ಭಾರತಕ್ಕೆ ನ್ಯಾಟ್​ವೆಸ್ಟ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. ರಿಷಬ್ ಹೊರತು ಪಡಿಸಿದರೆ, ಜಸ್​ಪ್ರೀತ್ ಬುಮ್ರಾ ಹೆಸರು ಕೂಡ ನಾಯಕತ್ವಕ್ಕೆ ಚರ್ಚೆಯಲ್ಲಿದೆ. ಸದ್ಯ ಅವರು ಏಕದಿನ ಸರಣಿಗೂ ಉಪನಾಯಕ. ಆದರೆ, ಅವರ ನಾಯಕತ್ವ ಕೌಶಲ ಇನ್ನಷ್ಟೇ ಬೆಳಕಿಗೆ ಬರಬೇಕು.

ಹಾಗಾದರೆ ಸದ್ಯದ ಪರಿಸ್ಥಿತಿಯಲ್ಲಿ ಟೆಸ್ಟ್ ನಾಯಕತ್ವಕ್ಕೆ ಸೂಕ್ತರು ಯಾರು? ಅಜಿಂಕ್ಯ ರಹಾನೆ ಫಾಮರ್್​ನಲ್ಲಿ ಇದ್ದಿದ್ದರೆ ಬೇರೊಬ್ಬರನ್ನು ಹುಡುಕುವ ಅಗತ್ಯವೇ ಇರುತ್ತಿರಲಿಲ್ಲ. ಹೀಗಿರುವಾಗ ರೋಹಿತ್ ಶರ್ಮ ಅವರಿಗೆ ಪೂರ್ಣ ನಾಯಕತ್ವ ವಹಿಸುವ ಬಗ್ಗೆ ಬಿಸಿಸಿಐ ವಿಚಾರ ಮಾಡುವುದರಲ್ಲಿ ತಪ್ಪೇನಿಲ್ಲ. ಅವರಿಗೆ 34 ವರ್ಷ ಆಗಿದೆ ಎನ್ನುವುದು ನಿರಾಕರಣೆಗೆ ಕಾರಣವಾಗಬಾರದು. ಏಕೆಂದರೆ, ಕುಂಬ್ಳೆಗೆ 38ನೇ ವಯಸ್ಸಿನಲ್ಲಿ ಪಟ್ಟ ಕಟ್ಟಲಿಲ್ಲವೇ? ರೋಹಿತ್​ರೇ ಯಾಕೆ ಎಂಬುದಕ್ಕೂ ಕೆಲವು ಕಾರಣಗಳಿವೆ. ಅವರು ಈಗಾಗಲೇ ವಿವಿಧ ಮಾದರಿಯಲ್ಲಿ, ವಿವಿಧ ಮಟ್ಟದಲ್ಲಿ ನಾಯಕತ್ವದ ಸವಾಲು ಯಶಸ್ವಿಯಾಗಿ ಎದುರಿಸಿದ್ದಾರೆ. ಟೆಸ್ಟ್ ನಾಯಕತ್ವಕ್ಕೆ ಐಪಿಎಲ್ ಮಾನದಂಡ ಅಲ್ಲವಾದರೂ, ಅವರು ಐಪಿಎಲ್​ನ ಅತ್ಯಂತ ಯಶಸ್ವಿ ನಾಯಕ ಎನ್ನುವುದನ್ನು ಮರೆಯಬಾರದು. ಒಂದು ತಂಡವನ್ನು ತಂಡವಾಗಿ ಜತೆಯಲ್ಲಿ ಮುನ್ನಡೆಸುವ ನೈಪುಣ್ಯ ಅವರಿಗೆ ಕರಗತವಾಗಿದೆ.

ಯಾವುದೇ ನಾಯಕ ಯಶಸ್ವಿ ಆಗಬೇಕಾದರೆ, ಕೋಚ್ ಜತೆ ತಾಳಮೇಳ ಅತ್ಯಗತ್ಯ. ಗಂಗೂಲಿಗೆ ಜಾನ್ ರೈಟ್, ಧೋನಿಗೆ ಗ್ಯಾರಿ ಕರ್ಸ್ಟನ್ ಮತ್ತು ಕೊಹ್ಲಿಗೆ ರವಿಶಾಸ್ತ್ರಿ ರೂಪದಲ್ಲಿ ಇಚ್ಛೆ ಅರಿತು ನಡೆವ ಕೋಚ್ ದೊರಕಿದ್ದರಿಂದಲೇ ಯಶಸ್ಸಿನ ಮೆಟ್ಟಿಲೇರುವುದು ಸುಲಭವಾಯಿತು. ಇದೀಗ ಹೊಸ ಕೋಚ್ ರಾಹುಲ್ ದ್ರಾವಿಡ್ ಜೊತೆಗೂ ಅದೇ ಕೆಮಿಸ್ಟ್ರಿ ಸಾಧ್ಯವಾಗುವಂಥ ನಾಯಕನ ಅಗತ್ಯವಿದೆ. ಒಟ್ಟಿನಲ್ಲಿ ನಾಯಕನಾದವನು ತನ್ನ ಆಟಗಾರರ ಹೃದಯದಲ್ಲಿ ಮತ್ತು ಎದುರಾಳಿ ಆಟಗಾರರ ಮನಸ್ಸಿನಲ್ಲಿ ಸ್ಥಾನ ಪಡೆದರೆ ಯಶಸ್ವಿಯಾದಂತೆ. ಅಂಥ ನಾಯಕನ ನೇಮಕ ಬೇಗನೆ ಆಗಬೇಕಿದೆ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net