

| ದೇವರಾಜ್ ಕನಕಪುರ ಬೆಂಗಳೂರು
ಕರೊನಾದಿಂದಾಗಿ ರಾಜ್ಯದಲ್ಲಿ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳು ಮುಖ ಮಾಡುತ್ತಿದ್ದು, ವಿದ್ಯಾರ್ಥಿಗಳ ಅನುಗುಣವಾಗಿ ಶಿಕ್ಷಕರು ಇಲ್ಲದೆ ಇರುವುದು ಗುಣಮಟ್ಟ ಶಿಕ್ಷಣಕ್ಕೆ ಧಕ್ಕೆ ತಂದಂತಾಗಿದೆ. ರಾಜ್ಯದಲ್ಲಿ 36 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದೆ. ಒಂದು ಕಡೆ ರಾಜ್ಯ ಸರ್ಕಾರ ಭರ್ತಿಗೂ ಗಮನ ಹರಿಸಿಲ್ಲ. ಮತ್ತೊಂದು ಕಡೆ ತಾತ್ಕಾಲಿಕವಾಗಿ ವಿದ್ಯಾರ್ಥಿಗಳ ಅನುಗುಣವಾಗಿ ಅತಿಥಿ ಉಪನ್ಯಾಸಕರ ನೇಮಕಕ್ಕೂ ಸರ್ಕಾರ ಒಪ್ಪಿಗೆ ಸೂಚಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.
2021 ಫೆಬ್ರವರಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು 3,473 ಅತಿಥಿ ಶಿಕ್ಷಕರ ನೇಮಕಕ್ಕೆ ಅಕವಾಶ ನೀಡಿತ್ತು. ಆನಂತರ ರಾಜ್ಯದಲ್ಲಿ ಕರೊನಾ ಎರಡನೇ ಅಲೆ ಕಾಲಿಟ್ಟ ಪರಿಣಾಮ ಭೌತಿಕ ತರಗತಿಗಳು ರದ್ದಾದವು. ಈ 3,473 ಹುದ್ದೆಗಳ ಪೈಕಿ ಎಷ್ಟು ಹುದ್ದೆಗಳು ಭರ್ತಿಯಾಗಿವೆ ಎಂಬ ಮಾಹಿತಿ ಶಿಕ್ಷಣ ಇಲಾಖೆಯ ಬಳಿ ಇಲ್ಲ. ಈ ಮೂರು ಸಾವಿರ ಹುದ್ದೆಗಳನ್ನು ಕಳೆದ 2019-20ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದ ಅಂಕಿ-ಅಂಶಗಳ ಆಧಾರದ ಮೇಲೆ ಭರ್ತಿಗೆ ಮಂಜೂರಾತಿ ನೀಡಿದೆ.
2021-22ನೇ ಸಾಲಿನಲ್ಲಿ ಸರ್ಕಾರಿ ಶಾಲೆಯಲ್ಲಿ 42,47,736 ವಿದ್ಯಾರ್ಥಿಗಳು ಹಾಗೂ ಖಾಸಗಿ ಶಾಲೆಯಲ್ಲಿ 36,65,314 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ 6 ಲಕ್ಷ ವಿದ್ಯಾರ್ಥಿಗಳ ಅಂತರ ಇದೆ. 2019-20ರಲ್ಲಿ ಸರ್ಕಾರಿ ಶಾಲೆಯಲ್ಲಿ 49,73,140 ವಿದ್ಯಾರ್ಥಿಗಳು ದಾಖಲಾಗಿದ್ದರು. ಈ ಬಾರಿ ಪ್ರವೇಶಕ್ಕೆ ಆಗಸ್ಟ್ 31ರವರೆಗೆ ಅವಕಾಶ ಇದೆ. ಇನ್ನೂ ಸಾಕಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯುವ ನಿರೀಕ್ಷೆ ಇದೆ.
ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಂಜೂರಾದ 1,91,529 ಹುದ್ದೆಗಳ ಪೈಕಿ 1,59,732 ಹುದ್ದೆಗಳು ಭರ್ತಿಯಾಗಿದ್ದು, 31,238 ಹುದ್ದೆಗಳು ಖಾಲಿ ಇವೆ. ಪ್ರೌಢಶಾಲೆಗಳಲ್ಲಿ 39,983 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, 5 ಸಾವಿರ ಹುದ್ದೆಗಳು ಖಾಲಿ ಇವೆ. ರಾಜ್ಯದಲ್ಲಿರುವ 50,066 ಸರ್ಕಾರಿ ಶಾಲೆಗಳಲ್ಲಿ 2.20 ಲಕ್ಷ ಶಿಕ್ಷಕರು ಕರ್ತವ್ಯನಿರ್ವಹಿಸುತ್ತಿದ್ದಾರೆ.
ಅತಿಥಿ ಶಿಕ್ಷಕರು: ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸುವ ಉದ್ದೇಶದಿಂದ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುತ್ತದೆ. ಪ್ರೌಢಶಾಲೆಯಲ್ಲಿ 3 ಸಾವಿರ ಶಿಕ್ಷಕರ ನೇಮಕ್ಕೆ ಅವಕಾಶ ಕಲ್ಪಿಸಿತ್ತು. ಪ್ರತಿ ತಿಂಗಳು ಇವರಿಗೆ ಗೌರವ ಸಂಭಾವನೆಯಾಗಿ 8 ಸಾವಿರ ರೂ. ನೀಡಲಾಗುತ್ತಿತ್ತು. ಕರೊನಾ ಹಿನ್ನೆಲೆಯಲ್ಲಿ ಭೌತಿಕ ತರಗತಿಗಳು ನಡೆಯದೆ, ಇರುವುದರಿಂದ ಅವರಿಗೆ ಕೆಲಸ ಇಲ್ಲದಂತಾಗಿದೆ.
ಶಾಲೆಗಳು ಭೌತಿಕವಾಗಿ ಆರಂಭವಾದ ಮೇಲೆ ಹೊಸ ಪ್ರಸ್ತಾವನೆ ಸಲ್ಲಿಸಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಶಾಲೆ ಆರಂಭಕ್ಕೆ ಸರ್ಕಾರದ ಅನುಮತಿ ಕಾಯುತ್ತಿದ್ದೇವೆ.
| ಕೃಷ್ಣಾಜಿ ಎಸ್. ಕರೀಚಣ್ಣನವರ್ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ
ನಮ್ಮ ಶಾಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ 200 ಮಕ್ಕಳು ಹೆಚ್ಚು ಪ್ರವೇಶ ಪಡೆದಿದ್ದಾರೆ. ಶಿಕ್ಷಕರು ಸಂಖ್ಯೆ ಕಡಿಮೆ ಇದೆ. ಹೊಸದಾಗಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು. ಇದಕ್ಕೆ ಶಿಕ್ಷಣ ಇಲಾಖೆ ಇನ್ನು ಅನುಮತಿ ನೀಡುವುದು ಬಾಕಿ ಇದೆ.
| ಹೆಸರು ಹೇಳಲಿಚ್ಛಿಸದ ಶಿಕ್ಷಕರು ಮಂಗಳೂರು