'ಎನ್​ಡಿಎ ಭಾಗವಾಗಿಯೇ ಇರ್ತೇವೆ': ಚಂದ್ರಬಾಬು ನಾಯ್ಡು

babu
Published on

ಅಮರಾವತಿ​: ಎನ್​ಡಿಎ ಭಾಗವಾಗಿಯೇ ನಾವು ಇರುತ್ತೇವೆ. ಇಂದು(ಜೂ.5) ಸಂಜೆ ದೆಹಲಿಯಲ್ಲಿ ನಡೆಯುವ ಎನ್​ಡಿಎ ಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಂಡು ಅಲ್ಲಿಯೇ ನಮ್ಮ ಒಪ್ಪಿಗೆ ಪತ್ರವನ್ನು ಸಹ ಕೊಡುತ್ತೇವೆ ಎಂದು ತೆಲುಗು ದೇಶಂ ಪಕ್ಷ(ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ತಿಳಿಸಿದರು.

ಚುನಾವಣೆಯಲ್ಲಿ ಭಾರಿ ಬಹುಮತ ಗಳಿಸಿದ ಬಳಿಕ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ, ಟಿಡಿಪಿ ಮತ್ತು ಜನಸೇನಾ ಒಟ್ಟಿಗೆ ಸೇರಿಯೇ ಚುನಾವಣೆ ಎದುರಿಸಿದ್ದೇವೆ. ಮುಂದೆಯೂ ಒಟ್ಟಿಗೆ ಇರುತ್ತೇವೆ. ಆಂಧ್ರ ಪ್ರದೇಶದ ಅಭಿವೃದ್ಧಿ, ತೆಲುಗರು ತಲೆ ಎತ್ತಿ ನಿಲ್ಲುವಂತೆ ಮಾಡುವುದೇ ನನ್ನ ಧ್ಯೇಯ. ನನಗೆ ಯಾವ ಅಧಿಕಾರದ ಲಾಲಸೆಯೂ ಇಲ್ಲ ಎಂದು ಹೇಳಿದರು.

ಚುನಾವಣೆಯಲ್ಲಿ ಮೈತ್ರಿಕೂಟದ ಅಭೂತಪೂರ್ವ ಗೆಲುವಿಗಾಗಿ ರಾಜ್ಯದ ಜನತೆಗೆ ತಲೆಬಾಗುತ್ತೇನೆ. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಐದು ವರ್ಷಗಳ ಕಾಲ ಆಡಳಿತ ನಡೆಸಿದ ವೈಎಸ್​ಆರ್​ ಪಕ್ಷದ ಜಗನ್​ ಆಡಳಿತ ನಡೆಸಿದ ಈ ರೀತಿಯ ಸರ್ಕಾರವನ್ನು ನೋಡಿರಲಿಲ್ಲ ಎಂದರು.

ವೈಎಸ್​ಆರ್​ ಆಡಳಿತದಲ್ಲಿ ಎಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಗಳು ಹೇಗೆ ನಲುಗಿ ಹೋಗಿವೆ ಎಂಬುದನ್ನು ನಾವು ನೋಡಿದ್ದೇವೆ. ಜನರನ್ನು ಗೆಲ್ಲಿಸಬೇಕು.ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ನಿಲ್ಲಿಸುವುದೇ ನಮ್ಮ ಧ್ಯೇಯ. ಮುಂದಿನ ಪೀಳಿಗೆಗಾಗಿ ನಾವು ಮುನ್ನಡೆದಿದ್ದೇವೆ. ರಾಜಕೀಯದಲ್ಲಿ ಯಾರೂ ಶಾಶ್ವತರಲ್ಲ. ದೇಶ, ಪ್ರಜಾಪ್ರಭುತ್ವ ಮತ್ತು ಪಕ್ಷಗಳು ಶಾಶ್ವತ. ಪಕ್ಷಗಳಾದರೆ ಸರಿಯಾಗಿ ಕೆಲಸ ಮಾಡಬೇಕು. ಇದೊಂದು ಐತಿಹಾಸಿಕ ಚುನಾವಣೆ. ಇಂತಹ ಚುನಾವಣೆಯನ್ನು ನಾವು ನೋಡಿಲ್ಲ. ಅಕ್ಕಪಕ್ಕದ ರಾಜ್ಯಗಳಲ್ಲಿ ಕೂಲಿ ಕೆಲಸ ಮಾಡಿದವರು ಕೂಡ ರಾಜ್ಯಕ್ಕೆ ಬಂದು ಮತ ಚಲಾಯಿಸಿದರು. ಅವರ ಋಣ ತೀರಿಸಬೇಕಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net