ಅವಕಾಶ ವಂಚಿತರ ಅಭ್ಯುದಯದ ವೇದಿಕೆ: ತಪಸ್ @10

Tapas
Published on

| ರಾಜೇಶ್ ಪದ್ಮಾರ್ ಬೆಂಗಳೂರು

ವೃತ್ತಿ ಶಿಕ್ಷಣದ ವಿಚಾರ ಬಂದಾಗ ಬಹುತೇಕ ವಿದ್ಯಾರ್ಥಿಗಳು ಮತ್ತು ಪಾಲಕರ ಆಯ್ಕೆ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕ್ಷೇತ್ರ. ಆದರೆ ಐಐಟಿ ಮತ್ತು ಇತರೆ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದು ಸುಲಭವಲ್ಲ. ವಿಶೇಷವಾಗಿ ಗ್ರಾಮೀಣ ಮತ್ತು ಬಡವರಲ್ಲಿ ಪ್ರತಿಭೆ ಇದ್ದರೂ ಇವೆಲ್ಲ ಗಗನ ಕುಸುಮ. ಇಂತಹ ಸ್ಥಿತಿಯಲ್ಲಿ ಕರ್ನಾಟಕದ ಬಡ ಮಧ್ಯಮವರ್ಗದ ಪ್ರತಿಭಾವಂತರು ಐಐಟಿ / ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕೆ ಅನುಕೂಲ ಕಲ್ಪಿಸಿದ್ದು ರಾಷ್ಟ್ರೋತ್ಥಾನ ಪರಿಷತ್. ಇದಕ್ಕಾಗಿ ತಪಸ್ / ಸಾಧನಾ ಎಂಬ ಎರಡು ಪ್ರಕಲ್ಪಗಳನ್ನು ಅದು ಪರಿಚಯಿಸಿದೆ. ಇವು ಸಂಪೂರ್ಣ ಉಚಿತ ಯೋಜನೆಗಳು. ಇವುಗಳ ಮೂಲಕ ಮಕ್ಕಳಿಗೆ ಕೇವಲ ಪಠ್ಯಕ್ರಮದ ಶಿಕ್ಷಣ ಮಾತ್ರವಲ್ಲದೆ, ಜೀವನಕ್ಕೆ ಅಗತ್ಯವಾದ ಸಂಸ್ಕಾರವನ್ನು ಕೂಡ ಪರಿಷತ್ ಕಲಿಸುತ್ತಿದೆ. ಗ್ರಾಮೀಣ ಪ್ರದೇಶದ 10ನೇ ಓದುತ್ತಿರುವ ಬಡ ಪ್ರತಿಭಾವಂತ ಮಕ್ಕಳನ್ನು ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಿ ಎರಡು ವರ್ಷಗಳ ಪಿ.ಯು. ಶಿಕ್ಷಣದೊಂದಿಗೆ ಐಐಟಿ-ಜೆಇಇ / ನೀಟ್ ಪ್ರವೇಶ ಪರೀಕ್ಷೆಗೆ ತರಬೇತಿ ನೀಡಿ ಅವರ ಭವಿಷ್ಯ ರೂಪಿಸುವಲ್ಲಿ ರಾಷ್ಟ್ರೆೊತ್ಥಾನ ಪರಿಷತ್​ನ ಈ ಉಪಕ್ರಮಗಳು ವಿಶೇಷ ಪಾತ್ರ ನಿರ್ವಹಿಸುತ್ತಿವೆ. ರಾಜ್ಯದ ಆರ್ಥಿಕ ದುರ್ಬಲ ವರ್ಗದ 10ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭಾವಂತ ಗಂಡು ಹಾಗೂ ಹೆಣ್ಣು ಮಕ್ಕಳನ್ನು ಆಯ್ಕೆ ಮಾಡಿ ಅವರಿಗೆ ಉಚಿತ ಪಿ.ಯು.ಸಿ. ಶಿಕ್ಷಣದ ಜತೆಗೆ IIT-JEE (ಗಂಡು ಮಕ್ಕಳಿಗೆ) NEET, CET, KVPY(ಹೆಣ್ಣು ಮಕ್ಕಳಿಗೆ) ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಗೊಳಿಸುವುದು. ಈ ಶಿಕ್ಷಣ ಸಂಪೂರ್ಣ ಉಚಿತವಾಗಿದ್ದು ವಸತಿ, ಭೋಜನ, ಕಾಲೇಜು ಶುಲ್ಕ, ಅಧ್ಯಯನ ಸಾಮಗ್ರಿ, ತರಬೇತಿ ಎಲ್ಲವನ್ನೂ ತಪಸ್ / ಸಾಧನಾ ವಹಿಸಿಕೊಳ್ಳುತ್ತದೆ. ರಾಜ್ಯದ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ಬೇಸ್ ಈ ಮಕ್ಕಳಿಗೆ IIT-JEE ಗೆ ಪ್ರಶಿಕ್ಷಣ ನೀಡಲಿದೆ. ಸಮಾಜದ ಈ ರೀತಿಯ ಮಕ್ಕಳೂ ಸಹ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಬಹುದು, ಜ್ಞಾನ ಯಾರ ಸ್ವತ್ತೂ ಅಲ್ಲ, ಬಡವರ ಜ್ಞಾನಕ್ಕೂ ಬೆಲೆಯಿದೆ. ಬಡವರೂ ಸಹ ಹಣ ಇರುವ ಜನರಂತೆಯೇ ಶಿಕ್ಷಣ ಪಡೆಯಬಹುದು ಎಂಬುದನ್ನು ಈ ಪ್ರಕಲ್ಪಗಳು ಸಮಾಜಕ್ಕೆ ತೋರಿಸಿವೆ.

ಸಾಧನಾ ಪಥ: ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಗಾದೆಯಂತೆ ನಮ್ಮ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳಿಗೆ ಕಾಲೇಜು ಶಿಕ್ಷಣ ದೊರೆಯುವುದೇ ದುರ್ಲಭ. ಅಂತಹ ಪರಸ್ಥಿತಿಯಲ್ಲಿ ಅವರು ವೈದ್ಯಳಾಗುವ ಕನಸು ಕಾಣುವುದು ಅಷ್ಟು ಸುಲಭ ಕಾರ್ಯವಲ್ಲ. ಸಾಧನಾ - ಪ್ರಕಲ್ಪದ ಮೂಲಕ ಇಂತಹ ಪ್ರತಿಭೆ ಇರುವ ಮಕ್ಕಳಿಗೆ ಅವರ ಕನಸು ನನಸಾಗುವಂತೆ ಮಾಡಿದೆ. ಸಾಧನಾ ಪ್ರಕಲ್ಪವು 2017 ರಲ್ಲಿ ಪ್ರಾರಂಭವಾಗಿ 3 ತಂಡಗಳು ಹೊರಬಂದಿದೆ. 2 ತಂಡದ 12 ವಿದ್ಯಾರ್ಥಿನಿಯರು ರಾಜ್ಯದ ವಿವಿಧ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಪಡೆದು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ.

ತಪಸ್​ಗೆ ದಶಕದ ಸಂಭ್ರಮ: ತಪಸ್ 2012 ರಲ್ಲಿ ಪ್ರಾರಂಭವಾಗಿ 10 ವರ್ಷ ಪೂರ್ಣಗೊಳಿಸಿದೆ. ಇದುವರೆಗೆ 290 ವಿದ್ಯಾರ್ಥಿಗಳ ಒಟ್ಟು 8 ತಂಡಗಳಿಗೆ ಇದರ ಪ್ರಯೋಜನ ಲಭಿಸಿದೆ. ಈ ಪೈಕಿ 23 ವಿದ್ಯಾರ್ಥಿಗಳು ದೇಶದ 7 ವಿವಿಧ ಐಐಟಿಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. 54 ವಿದ್ಯಾರ್ಥಿಗಳು ಕರ್ನಾಟಕದ ಸುರತ್ಕಲ್​ನಲ್ಲಿರುವ ಎನ್​ಐಟಿಯಲ್ಲಿ ಪ್ರವೇಶ ಪಡೆದು ಉನ್ನತ ವ್ಯಾಸಂಗ ಮುಂದುವರಿಸಿದ್ದಾರೆ. ಉಳಿದವರು ಬೆಂಗಳೂರಿನ ಪ್ರತಿಷ್ಠಿತ RVCE, PESIT, BMS, MSRIT ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಅರ್ಜಿ ಆಹ್ವಾನ: ರಾಷ್ಟ್ರೋತ್ಥಾನ ಪರಿಷತ್ ಗ್ರಾಮೀಣ ಪ್ರದೇಶದ ಬಡ, ಪ್ರತಿಭಾವಂತ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆಗಳಾದ ತಪಸ್ PU + IIT-JEE (ಹುಡುಗರಿಗೆ ಮಾತ್ರ), ಸಾಧನಾ-1 & PU + NEET – CET ಮತ್ತು ಸಾಧನಾ-2 PU + B.Sc., Integrated B.Ed., (ಹುಡುಗಿಯರಿಗೆ ಮಾತ್ರ) ಪ್ರಕಲ್ಪಗಳ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.

ಯಾರು ಅರ್ಜಿ ಸಲ್ಲಿಸಬಹುದು?: ಪ್ರಸ್ತುತ 10ನೇ ತರಗತಿ ಓದುತ್ತಿರುವ, ಕುಟುಂಬದ ವಾರ್ಷಿಕ ಆದಾಯ ರೂ.2 ಲಕ್ಷಕ್ಕೂ ಮೀರಿರದ ವಿದ್ಯಾರ್ಥಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನ:15.12.2021, ಅರ್ಜಿಯನ್ನು ಆನ್​ಲೈನ್ (www.tapassaadhana.org)ನಲ್ಲೇ ಸಲ್ಲಿಸಬೇಕು. ಪರೀಕ್ಷಾ ಕೇಂದ್ರಗಳ ವಿವರ ಡಿಸೆಂಬರ್ 2ನೇ ವಾರ ವೆಬ್​ಸೈಟ್​ನಲ್ಲಿ ಪ್ರಕಟವಾಗಲಿದೆ. ಪ್ರವೇಶ ಪರೀಕ್ಷೆ ಡಿ.25ಕ್ಕೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕ: 9481201144 / 9844602529 / 9448284615

ಪ್ರಕಲ್ಪಗಳ ಚಿಂತನಾ ಬುನಾದಿ: ಅರ್ಥಪೂರ್ಣವಾದ ಶಿಕ್ಷಣವೇ ಉತ್ತಮ ಭವಿಷ್ಯಕ್ಕೆ ಹೂಡಿಕೆ. ಹೆಚ್ಚಿನ ಬುದ್ಧಿಮತ್ತೆಯ ಯುವಜನರನ್ನು ಗುರುತಿಸಿ ಅವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ನಮಗೆ ಸಾಧ್ಯವಾದಲ್ಲಿ ಅವರು ಇತರರಿಗೆ ಪ್ರೇರಣೆಯನ್ನು ನೀಡಬಹುದು. ಇದರಿಂದ ರಾಷ್ಟ್ರದ ಸಮೃದ್ಧಿ ಚಾಲನೆಯನ್ನು ಪಡೆಯುತ್ತದೆ. ಈ ರೀತಿಯಲ್ಲಿ ವ್ಯಕ್ತಿ, ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಚಾಲನೆ ನೀಡಲು ಶಿಕ್ಷಣ ಒಂದು ಶಕ್ತಿಶಾಲಿ ಸಾಧನವಾಗಿದೆ. ಈ ತಳಹದಿಯ ಮೇಲೆ ಈ ಯೋಜನೆಗಳನ್ನು ರೂಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net