

ನಮ್ಮ ಮನಸ್ಸುಗಳು ತಲ್ಲಣದಲ್ಲಿವೆ; ನಮಗೆ ಒಂದು ಧೈರ್ಯ ಬೇಕು. ನಮ್ಮ ನಂಬಿಕೆಗಳು ಚೆದುರಿ ಅಲ್ಲಾಡುತ್ತಿವೆ; ಮನಸ್ಸಿಗೆ ಒಂದು ನೆಲೆ ಬೇಕು. ಭವಿಷ್ಯವು ಸಂದೇಹಗಳಲ್ಲಿ ಸಿಕ್ಕಿಕೊಂಡಿದೆ; ಒಂದು ಭರವಸೆ ಬೇಕು. ಇಂತಹ ವಿವೇಕ, ಶ್ರದ್ಧೆ, ಸಮಾಧಾನಗಳು ಭಗವದ್ಗೀತೆಯಲ್ಲಿ ಸಿಗುತ್ತವೆಯೇ? ಸಿಗುತ್ತವೆ ಎಂಬುದು ಅದರ ವಾಕ್ಯಗಳಿಂದಲೇ ಸ್ಪಷ್ಟವಾಗುತ್ತದೆ ಎಂದು ತಮ್ಮ ‘ಜೀವನಧರ್ಮಯೋಗ’ ಗ್ರಂಥದಲ್ಲಿ ವಿವರಿಸಿದ್ದಾರೆ ಡಿ.ವಿ. ಗುಂಡಪ್ಪನವರು.
ಪ್ರತಿಯೊಬ್ಬ ಮನುಷ್ಯನಲ್ಲಿಯೂ ತಾನು ಚೆನ್ನಾಗಿ ಬದುಕಬೇಕು, ತನ್ನ ಬದುಕನ್ನು ಚೆನ್ನಾಗಿ ನಡೆಸಬೇಕು - ಎಂಬ ಆಸೆ ಸ್ವಾಭಾವಿಕವಾಗಿ ಇರುತ್ತದಲ್ಲವೇ? ನಮ್ಮ ಬದುಕಿನಲ್ಲಿ ಯಾವುದು ಚೆನ್ನ? ಯಾವುದು ಸೊಗಸು? ಯಾವುದು ಬೆಲೆ ಬಾಳತಕ್ಕದ್ದು? ಚೆನ್ನ ಎಂದರೆ ಏನು? ಬೆಲೆ ಗೊತ್ತು ಮಾಡುವುದು ಹೇಗೆ? ಬದುಕನ್ನು ಚೆನ್ನ ಮಾಡುವುದು ಹೇಗೆ? ಇಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕೆಂದು ಯಾರಿಗೆ ಮನಸ್ಸುಂಟೋ ಅಂಥವರು ಓದಿ ತಿಳಿದುಕೊಳ್ಳಬೇಕಾದ ಗ್ರಂಥ ಭಗವದ್ಗೀತೆ. ಅದರಲ್ಲಿ ಜೀವ ಎಂದರೆ ಏನು, ಜೀವಕ್ಕೂ ಜಗತ್ತಿಗೂ ಏನು ಸಂಬಂಧ, ಜೀವಕ್ಕೂ ದೇವರಿಗೂ ಸಂಬಂಧವೆಂಥಾದ್ದು- ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ.
ಭಗವದ್ಗೀತೆ ಜೀವನಶಾಸ್ತ್ರವೂ ಹೌದು. ಗುಡಿಯಲ್ಲಿ ಮೂರ್ತಿಗೃಹ, ಮುಖಮಂಟಪ, ಪ್ರದಕ್ಷಿಣಪಥ, ಗೋಪುರ- ಇವೆಲ್ಲ ಸೇರಿರುತ್ತವೆ. ಗುಡಿಯ ಮಹಾದ್ವಾರದ ಗೋಪುರವನ್ನು ಹತ್ತಿ ಅದರ ತುಟ್ಟತುದಿಯಲ್ಲಿರುವ ಕನಕಕಲಶವನ್ನು ಮುಟ್ಟಬಲ್ಲ ಭಕ್ತರು ಒಬ್ಬರಿದ್ದರೆ, ಪ್ರದಕ್ಷಿಣೆ ಮಾಡಿ, ಮೂರ್ತಿ ದರ್ಶನ ಪಡೆದು, ಪ್ರಸಾದದಿಂದ ತೃಪ್ತರಾಗುವ ಭಕ್ತರು 999 ಮಂದಿ ಇರುತ್ತಾರೆ. ಅದರಂತೆ ಭಗವದ್ಗೀತೆಯ ಮೋಕ್ಷೋಪದೇಶದಿಂದ ಪ್ರಯೋಜನ ಪಡೆಯಬಲ್ಲವರು ಒಬ್ಬರಿದ್ದರೆ ಅದರ ಸಾಮಾನ್ಯ ಧಮೋಪದೇಶದಿಂದ ಪ್ರಯೋಜನ ಪಡೆಯಬಲ್ಲವರು 999 ಮಂದಿ ಇರುತ್ತಾರೆ. ವಿದ್ವಾಂಸರು ಮಾತ್ರವೇ ಅಲ್ಲ, ಸಾಮಾನ್ಯ ಜನರೂ; ಅನುಕೂಲದಲ್ಲಿರುವವರು ಮಾತ್ರವೇ ಅಲ್ಲ, ಕಷ್ಟನಿಷ್ಠುರಗಳಲ್ಲಿ ಒದ್ದಾಡುತ್ತಿರುವವರೂ - ಗಂಡಸರಂತೆ ಹೆಂಗಸರೂ ತಮ್ಮ ತಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಲು ಅವಶ್ಯವಾದ ತಿಳಿವಳಿಕೆ ಭಗವದ್ಗೀತೆಯಲ್ಲಿ ದೊರೆಯುತ್ತದೆ. ಪ್ರತಿಯೊಬ್ಬನಿಗೂ ಪ್ರತಿಯೊಬ್ಬಳಿಗೂ ಜೀವನದಲ್ಲಿ ಒಂದು ಗೌರವ, ಕರ್ತವ್ಯದ ವಿಷಯದಲ್ಲಿ ಒಂದು ಉತ್ಸಾಹ, ಆಪತ್ಕಾಲದಲ್ಲಿ ಧೈರ್ಯ, ಸಂಶಯ ಹುಟ್ಟಿದಾಗ ನೆಮ್ಮದಿಯನ್ನು ಉಂಟು ಮಾಡುವ ನಂಬಿಕೆ- ಇವು ಭಗವದ್ಗೀತೆಯಿಂದ ಸಿಗುವ ಸಂಪತ್ತು.
ಸಾರ್ವಕಾಲಿಕ, ಸಾರ್ವದೇಶಿಕ ದ್ರವ್ಯದ ಗಣಿ: ಭಗವದ್ಗೀತೆಯು ಅರ್ಜುನನಿಗೂ ಶ್ರೀಕೃಷ್ಣನಿಗೂ ನಡೆದ ಸಂವಾದ. ಇಬ್ಬರೂ ಯುದ್ಧರಂಗದಲ್ಲಿದ್ದಾರೆ. ಅರ್ಜುನನು ತನ್ನ ಎದುರಿಗೂ ಸುತ್ತಮುತ್ತಲೂ ಇದ್ದ ಜನಸ್ತೋಮವನ್ನು ನೋಡಿದಾಗ, ಅವನ ಮನಸ್ಸಿನಲ್ಲಿ ನೂರಾರು ಶಂಕೆಗಳೂ ಪ್ರಶ್ನೆಗಳೂ ಹುಟ್ಟುತ್ತವೆ. ಶ್ರೀಕೃಷ್ಣ ಆ ಪ್ರಶ್ನೆಗಳಿಗೆ ಉತ್ತರ ಹೇಳಹೊರಡುತ್ತಾನೆ. ಅದರ ಮೇಲೆ ಮತ್ತೆಮತ್ತೆ ಪ್ರಶ್ನೆ ಮರುಪ್ರಶ್ನೆಗಳು ಹುಟ್ಟುತ್ತವೆ. ಶ್ರೀಕೃಷ್ಣ ಅದಕ್ಕೆಲ್ಲ ಸಮಾಧಾನಗಳನ್ನು ಹೇಳುತ್ತಾನೆ. ಆಗ ಅರ್ಜುನನು ಪಟ್ಟ ಸಂಕಟ, ಅವನಿಗಿದ್ದ ಸಂದೇಹ, ತೋರಿದ ಭಯ ಅವನದು ಮಾತ್ರವಲ್ಲ, ಅಂದಿನದು ಮಾತ್ರವಲ್ಲ; ಅಂಥಾ ಧರ್ಮ ಸಂಕಟಗಳೂ ಅನಿಶ್ಚಯಗಳೂ ಭ್ರಾಂತಿಗಳೂ ಭೀತಿಗಳೂ ನಮ್ಮನ್ನೆಲ್ಲ ದಿನೇದಿನೆ ಕಾಡುತ್ತವೆ. ಮನುಷ್ಯನಿಗೆ ಅಂಥ ಜೀವನಪ್ರಶ್ನೆಗಳು ಎಲ್ಲ ಯುಗಗಳಲ್ಲಿಯೂ ಎಲ್ಲ ಕಾಲಗಳಲ್ಲಿಯೂ, ಒಂದಲ್ಲ ಇನ್ನೊಂದು ರೂಪದಲ್ಲಿ ಇದ್ದೇ ಇರುತ್ತವೆ. ಆ ಪ್ರಶ್ನೆಗಳನ್ನೆದುರಿಸಿ ಉತ್ತರ ಕೊಡುವುದರಲ್ಲೇ ಇದೆ ನಮ್ಮತನ. ಅಂಥ ಉತ್ತರಗಳಿಗೆ ಆಧಾರವನ್ನು ಒದಗಿಸುವ ದ್ರವ್ಯದ ಗಣಿ ಭಗವದ್ಗೀತೆ.
ಅನಂತ ಚಿಂತೆಗಳು ನಮ್ಮ ಪಾಡು: ನಮ್ಮ ಪೂರ್ವಿಕರಿಗೆ -ನೂರಿನ್ನೂರು ವರ್ಷಗಳ ಹಿಂದಿನವರಿಗೆ- ಇಹಜೀವನದ ಕಷ್ಟ ನಮಗಿರುವಷ್ಟು ದೊಡ್ಡದಾಗಿರಲಿಲ್ಲ. ಆಗಿನ ಮುಖ್ಯ ಜೀವಿಕಾವೃತ್ತಿ ಭೂವ್ಯವಸಾಯ. ಮಳೆ ಬೆಳೆ ಸರಿಯಾಗಿ ನಡೆಯುತ್ತಿದ್ದರೆ ಅವರಿಗೆ ಬೇರೆ ಏನೂ ಬೇಕಿರಲಿಲ್ಲ. ತಮ್ಮ ತಂದೆ ತಾತಂದಿರು ಬಾಳಿದಂತೆ ಬಾಳಿಕೊಂಡು ನೆಮ್ಮದಿಯೇ ಸುಖಸಮಸ್ತವೆಂದು ಭಾವಿಸಿದ್ದವರು ಅವರು. ಆದ್ದರಿಂದ ಅವರಿಗೆ ಇಹವು ಅತಿಭಾರವೆನಿಸದೆ ಸಹ್ಯವಾಗಿತ್ತು. ಇಂದಿನ ನಾವು ಹೊರಬೇಕಾಗಿರುವ ಹೊರೆ ಇಹಜೀವನದ್ದು. ಅನ್ನವಸ್ತ್ರ ಸಂಪಾದನೆ, ಉದ್ಯೋಗಾವಕಾಶ, ಕೇಳೋಣ ಕೀಳೋಣಗಳು, ಸಾಲ ಸುಲಿಗೆಗಳು, ಎಡೆಬಿಡದ ದುಡಿತ, ಬಿಡುವಿಲ್ಲದ ಹಾರಾಟ, ಆಚಾರಕ್ಷೇಶ, ವಿಮತಘರ್ಷಣೆ, ವರ್ಣ ಸಾಂಕರ್ಯ- ಈ ಅನಂತ ಚಿಂತೆಗಳು ನಮ್ಮ ಪಾಡು. ಅಂದಂದಿನ ಸಂಸಾರಭಾರ ಅಂದಂದಿಗೆ ಸಾಕಾಗಿದೆ. ಇಂಥದ್ದರಲ್ಲಿ ಭಗವದ್ಗೀತೆ ನಮ್ಮ ಸಹಾಯಕ್ಕೆ ಬರುತ್ತದೆ.
ಸಂವಾದಕ್ಕೆ ಕಾಲವ್ಯವಧಾನವಿತ್ತೆ?: ಇಡೀ ಭಗವದ್ಗೀತೆಯು ಮಿತ್ರಸಂಭಾಷಣೆಯ ರೀತಿಯಲ್ಲಿದೆ. ಯುದ್ಧರಂಗದಲ್ಲಿ, ರಣೋತ್ಸಾಹಿಗಳಾದ ಶತ್ರುಸೈನ್ಯಗಳ ನಡುವೆ ಕೃಷ್ಣಾರ್ಜುನರು ನಿಂತು ಹೀಗೆ ಸಾವಕಾಶವಾಗಿ ಚರ್ಚೆ-ಸಂವಾದ ನಡೆಸಿದರೆಂಬುದು ಸಂಭಾವ್ಯವೆ ಎಂದು ಕೇಳುವವರಿದ್ದಾರೆ. ಇಲ್ಲಿ ಗಮನಿಸಬೇಕಾದದ್ದು ಆಗಿನ ಯುದ್ಧನಿಯಮಾವಳಿ. ಆಗ ಯುದ್ಧವೆಂದರೆ ಯಾರೋ ಯಾರನ್ನೋ ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಕೊಲ್ಲುವುದಾಗಿರಲಿಲ್ಲ. ಯುದ್ಧಕ್ಕೆ ಸ್ಥಾನನಿಯಮವೂ ವೇಳಾನಿಯಮವೂ ಅರ್ಹ-ಅನರ್ಹ ನಿಯಮವೂ ಇತ್ತು. ಆ ನಿಯಮಗಳನ್ನು ಉಭಯ ಪಕ್ಷಗಳವರೂ ಅಂಗೀಕರಿಸಿದ್ದರು. ಒಬ್ಬರನ್ನೊಬ್ಬರು ಸಮೀಪಿಸಿದ ಕೂಡಲೇ ಯುದ್ಧಾರಂಭ ಆಗುತ್ತಿರಲಿಲ್ಲ. ಇಬ್ಬರೂ ಸಕಾಲವೆಂದು ಒಪ್ಪುವವರೆಗೂ ಯಾರಿಗೂ ಅಪಾಯಭಯ ಇರಲಿಲ್ಲ. ಕೃಷ್ಣಾರ್ಜುನ ಸಂವಾದ ಮುಗಿದ ಮೇಲೂ ಕಾಲವ್ಯವಧಾನವಿತ್ತು! ಯುದ್ಧಾರಂಭಕ್ಕೆ ಮುಂಚೆ ಧರ್ಮರಾಯ ರಥದಿಂದಿಳಿದು ಪಾದಚಾರಿಯಾಗಿ ಭೀಷ್ಮಾದಿ ಗುರುಜನರ ಬಳಿ ಹೋಗಿ ಯುದ್ಧ ನಿಶ್ಚಯವನ್ನು ಬಿನ್ನಯಿಸಿ ಆಶೀರ್ವಾದ ಬೇಡಿದ. ಶ್ರೀಕೃಷ್ಣನು ಕರ್ಣನನ್ನು ಮತ್ತೊಮ್ಮೆ ಪಾಂಡವ ಸಹಾಯಕ್ಕಾಗಿ ಕರೆದು ನೋಡಿದ. ಧರ್ಮರಾಯನು ತನ್ನ ಪಕ್ಷಕ್ಕೆ ಬರಲಿಚ್ಛಿಸುವವರು ಯಾರಾದರೂ ಇದ್ದರೆ ಬರಬೇಕೆಂದ ಬೇಡಿದ. ಇಷ್ಟೆಲ್ಲ ನಡೆದ ತರುವಾಯ ಪ್ರಾರಂಭವಾದದ್ದು ಯುದ್ಧ. ಯಾರಾದರೂ ದುಡುಕುವ ಭಯ ಯಾರಿಗೂ ಇರಲಿಲ್ಲ. ಎಲ್ಲ ಸಾವಧಾನವಾಗಿ ನಡೆಯಿತು. ಕೃಷ್ಣಾರ್ಜುನರಿಗೆ ಬೇಕಾದಷ್ಟು ಕಾಲವ್ಯವಧಾನವಿತ್ತು.
ಒಬ್ಬೊಬ್ಬರಿಗೂ ಒಂದೊಂದು ರೀತಿಯ ಉಪದೇಶ
ಮನುಷ್ಯರು ತಮ್ಮ ತಮ್ಮ ಪೂರ್ವಜನ್ಮ ಕರ್ಮ ಪರಿಪಾಕವನ್ನು ಅನುಸರಿಸಿ ಬುದ್ಧಿಶಕ್ತಿಯಲ್ಲಿ, ಇಷ್ಟ ಅಭಿರುಚಿಗಳಲ್ಲಿ, ವಿದ್ಯೆಯಲ್ಲಿ, ಗುಣಸಂಪತ್ತಿನಲ್ಲಿ, ವೈರಾಗ್ಯ ಯೋಗ್ಯತೆಯಲ್ಲಿ ಬೇರೆ ಬೇರೆ ರೀತಿಯವರಾಗಿ ಬೇರೆ ಬೇರೆ ಅಂತಸ್ತುಗಳವರಾಗಿರುತ್ತಾರೆ. ಈ ಯೋಗ್ಯತಾ ಭೇದಗಳೂ ಇಷ್ಟಾನಿಷ್ಟ ಭೇದಗಳೂ ಸ್ವಭಾವಸಿದ್ಧವಾದವು. ಆದ್ದರಿಂದ ಉಪದೇಶಗಳೂ ಸಾಧನ ಕ್ರಮಗಳೂ ಒಬ್ಬೊಬ್ಬರಿಗೆ ಒಂದೊಂದು ವಿಧವಾಗಿರಬೇಕಾಗುತ್ತದೆ. ಲಕ್ಷಣಗಳು ಒಟ್ಟಿನಲ್ಲಿ ಒಂದೇ ಎಂದು ತೋರಿದರೂ ಉಪಲಕ್ಷಣಗಳು ಭಿನ್ನಭಿನ್ನವಾಗಿರುತ್ತವೆ. ನಾನಾ ಪ್ರಕಾರಗಳಾದ ಜೀವರಾಶಿಗಳಲ್ಲಿ ಪ್ರತಿಯೊಂದು ಜೀವಿಗೂ ಅದರ ಯೋಗ್ಯತೆಗೆ ತಕ್ಕ ಶ್ರೇಯೋಮಾರ್ಗವೂ ಪ್ರತ್ಯೇಕವಾಗಿರುತ್ತದೆ. ವೈದ್ಯ ಶಾಸ್ತ್ರದ ಉದ್ದೇಶ ಒಂದು; ಆರೋಗ್ಯವೆಂಬ ದೇಹಸ್ಥಿತಿ ಒಂದು. ಆದರೆ ಅನಾರೋಗ್ಯಕಾರಣಗಳು ನಾಲ್ಕಾರು; ರೋಗರೂಪಗಳು ನಾಲ್ಕಾರು. ಆದ್ದರಿಂದ ಚಿಕಿತ್ಸೆ ಪಥ್ಯಗಳ ವಿಧಾನಗಳ ನಾಲ್ಕಾರು. ಕಣ್ಣುಬೇನೆಗೆ ಶುಂಠಿ ಮೆಣಸು ಆಗದು; ಅಜೀರ್ಣಕ್ಕೆ ಪಟಿಕದ ದ್ರಾವಕ ಆಗದು, ದೇಹದೌರ್ಬಲ್ಯವನ್ನು ನೋಡಿ ಔಷಧ; ಜೀವದೌರ್ಬಲ್ಯವನ್ನು ನೋಡಿ ಉಪದೇಶ.
ಭಗವದ್ಗೀತೆಯ ಅನುವರ್ತನೆಯಿಂದ ಜೀವಿಗೆ ಜಗದ್ಭಾರವು ಲಘುವಾಗುತ್ತದೆ. ತತ್ವವಿವೇಕದಿಂದ ನಾನಾ ಲೋಕವಸ್ತುಗಳ ಯಥಾರ್ಥಯೋಗ್ಯತೆ ಮನಸ್ಸಿಗೆ ಗೊತ್ತಾಗಿ ಅವುಗಳ ಮೌಲ್ಯ ತಾರತಮ್ಯವು ನಿರ್ಣೀತವಾಗುತ್ತದೆ. ಅದೇ ಮೋಹಭ್ರಾಂತಿ ನಿವಾರಣೆ. ಜೀವನದ ಅರ್ಥವೇನು, ಪರಮಾರ್ಥ ಯಾವುದು, ಕರ್ತವ್ಯ-ಅಕರ್ತವ್ಯಗಳು ಎಂಥವು - ಇವೇ ಮೊದಲಾದ ಪ್ರಶ್ನೆಗಳು ಬಗೆಹರಿಯುತ್ತವೆ. ನಿರ್ಮಲ ಜೀವಿತ ಧರ್ಮಮಾರ್ಗ ಕಾಣಬರುತ್ತದೆ. ಆಗ ಮನಃಪ್ರಸನ್ನತೆ; ಜೀವನದ ಕಷ್ಟ ಸಂಕಟಗಳ ಪರಿಹಾರ; ಆಗಲೇ ಶಾಂತಿ.