ಪಾಕಿಸ್ತಾನಕ್ಕೆ ತಾಲಿಬಾನ್ ಖಾನ್ ತೋರುತ್ತಿರುವ ಹಾದಿ: ಭಾಗ-3

Imran Khan
Published on
ಕ್ರಿಕೆಟಿಗ ಇಮ್ರಾನ್ ಖಾನ್ ರಾಜಕೀಯಕ್ಕಿಳಿದು, 1996ರಲ್ಲಿ ‘ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್’ (ನ್ಯಾಯಕ್ಕಾಗಿ ಪಾಕಿಸ್ತಾನೀ ಚಳವಳಿ) ಪಕ್ಷವನ್ನು ಹುಟ್ಟುಹಾಕಿ, ಪ್ರಾರಂಭದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಪಕ್ಷದ ಗುರಿ ಎಂದು ಘೊಷಿಸಿದರೂ ಅನತಿಕಾಲದಲ್ಲೇ ಅವರು ಇಸ್ಲಾಮ್ ಮೊರೆಹೋದರು. ತಾನೊಬ್ಬ ಇಸ್ಲಾಮ್ ಕಟ್ಟಾ ಅನುಯಾಯಿ ಎಂದು ಎಲ್ಲೆಲ್ಲಿಯೂ ಘೊಷಿಸಿಕೊಳ್ಳುವುದಲ್ಲದೇ ತನ್ನೆಲ್ಲಾ ಸಾರ್ವಜನಿಕ ಭಾಷಣಗಳಲ್ಲಿ ಕುರಾನ್​ನ ಉಕ್ತಿಗಳನ್ನೂ ಸೂಫಿ ಸೂಕ್ತಿಗಳನ್ನೂ ಧಾರಾಳವಾಗಿ ತುಂಬತೊಡಗಿದರು. ಪಾಕಿಸ್ತಾನೀ ಪತ್ರಕರ್ತೆ ಮದೀಹಾ ತಹೀರ್​ರಿಗೆ ನೀಡಿದ ಸಂದರ್ಶನದಲ್ಲಿ ಪ್ರವಾದಿ ಮಹಮದ್ ತಮಗೆ ಮಾದರಿ ಎಂದು ಹೇಳಿದ್ದು ಅವರ ಇಸ್ಲಾಮ್ ನಿಷ್ಠೆ ತಾತ್ಕಾಲಿಕವಲ್ಲ ಎನ್ನುವುದನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿತು. ಅಷ್ಟಕ್ಕೇ ನಿಲ್ಲದ ಖಾನ್ ದೇಶದಲ್ಲಿ ಶರಿಯಾ ಕಾನೂನುಗಳ ಅನುಷ್ಠಾನದ ಪರವಾಗಿ ಹಾಗೂ ಪಾಕ್ ತಾಲಿಬಾನ್ ಬಗ್ಗೆ ಪ್ರೀತಿ ವ್ಯಕ್ತಪಡಿಸತೊಡಗಿದರು. ಇಲ್ಲಿ, ಖಾನ್ ಅವರನ್ನು ಸಂದರ್ಶಿಸಿದ ಇತಿಹಾಸಕಾರ ವಿಲಿಯಂ ಡ್ಯಾಲ್​ರಿಂಪಲ್ ಅವರ ಅಭಿಪ್ರಾಯ ಉಲ್ಲೇಖನೀಯ. ‘ಶರಿಯಾ ಕಾನೂನುಗಳು ಆಚರಣೆಯಲ್ಲಿರುವ ಖೈಬರ್-ಪಖ್ತೂನ್​ಖ್ವಾ ಪ್ರಾಂತ್ಯದ ಬುಡಕಟ್ಟು ಪ್ರದೇಶಗಳಲ್ಲಿ ಕಂಡುಬರುವ ಅಪರಾಧರಹಿತ ಸ್ಥಿತಿಯನ್ನು ರಾತ್ರಿಗಳಲ್ಲಿ ನ್ಯೂಯಾರ್ಕ್ ನಗರದಲ್ಲಿ ತಾಂಡವವಾಡುವ ಅರಾಜಕತೆಯ ಜತೆ ಹೋಲಿಸಿದರೆ ದೇಶಕ್ಕೆ ಶರಿಯಾ ಕಾನೂನುಗಳ ಅಗತ್ಯ ಮನದಟ್ಟಾಗುತ್ತದೆ ಎಂದು ಖಾನ್ ಅಭಿಪ್ರಾಯಪಡುತ್ತಾರೆ’ ಎಂದು ಬರೆದು ಅವರು ಖಾನ್​ರ ಒಳತೋಟಿಯನ್ನು ನಮ್ಮ ಮುಂದೆ ಅನಾವರಣಗೊಳಿಸಿದರು. ಅದನ್ನೇ ಖಾನ್ ನೇರ ಮಾತುಗಳಲ್ಲೇ ಹೇಳಲೂತೊಡಗಿದರು. 2002ರಲ್ಲಿ ಕಾರ್ವಿುಕರ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡುತ್ತಾ ಖಾನ್ ತಾವು ತಾಲಿಬಾನ್​ನ ನ್ಯಾಯವ್ಯವಸ್ಥೆಯಿಂದ ಪ್ರಭಾವಿತರಾಗಿರುವುದಾಗಿಯೂ, ಅಧಿಕಾರಕ್ಕೆ ಬಂದರೆ ಅಂತಹದೇ ನ್ಯಾಯವ್ಯವಸ್ಥೆಯನ್ನು ಪಾಕಿಸ್ತಾನದಾದ್ಯಂತ ಜಾರಿಗೆ ತರುವುದಾಗಿಯೂ ಘೊಷಿಸಿದರು. ಆ ದಿನಗಳಲ್ಲಿ ಖೈಬರ್-ಪಖ್ತೂನ್​ಖ್ವಾ ಪ್ರಾಂತ್ಯದಲ್ಲಿ ತಾಲಿಬಾನಿಗಳು ಪಾಕ್ ಸೇನೆಯ ವಿರುದ್ಧ ನಡೆಸುತ್ತಿದ್ದ ಸಂಘರ್ಷವನ್ನು ‘ವಸಾಹತೀಕರಣದ ವಿರುದ್ಧದ ಸಮರ’ ಎಂದು ಬಣ್ಣಿಸಿದ ಖಾನ್ ಪಾಕಿಸ್ತಾನೀ ನಗರಗಳಲ್ಲಿ ತಾಲಿಬಾನಿಗಳು ತಮ್ಮ ಕಚೇರಿಗಳನ್ನು ತೆರೆಯಲು ಅವಕಾಶವಿರಬೇಕೆಂದೂ ಘೊಷಿಸಿದರು. ಅವರ ಈ ಬಗೆಯ ತಾಲಿಬಾನ್-ಪ್ರೇಮದಿಂದಾಗಿ ಅವರಿಗೆ ‘ತಾಲಿಬಾನ್ ಖಾನ್’ ಎಂಬ ಹೆಸರೇ ಬಂದುಬಿಟ್ಟಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು.

ಅಕ್ಟೋಬರ್ 2012ರಲ್ಲಿ ಮಹಿಳೆಯರ ವಿದ್ಯಾಭ್ಯಾಸಕ್ಕಾಗಿ ದನಿಯೆತ್ತಿದ್ದ ಶಾಲಾಬಾಲಕಿ ಮಲಾಲಾ ಯೂಸುಫ್​ರkಾಯ್ ಮೇಲೆ ಉಗ್ರರು ಎಸಗಿದ ದಾಳಿಯನ್ನು ಖಂಡಿಸಿದ ಇಮ್ರಾನ್ ಖಾನ್, ದಾಳಿಯ ಹಿಂದಿದ್ದ ತಾಲಿಬಾನ್ ಅನ್ನು ಖಂಡಿಸಲು ನಿರಾಕರಿಸಿದರು. ಈ ಬಗ್ಗೆ ಟೀವಿ ಚಾನಲ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಕಣ್ಣೆವೆ ಮಿಟುಕಿಸದೇ ಹೇಳಿದ್ದು ಹೀಗೆ: ‘ನಾನಿಲ್ಲಿ ಕೂತು ತಾಲಿಬಾನ್ ವಿರುದ್ಧ ದೊಡ್ಡದೊಡ್ಡ ಹೇಳಿಕೆಗಳನ್ನು ಕೊಟ್ಟರೆ ಅಲ್ಲಿ (ಗಡಿನಾಡಿನಲ್ಲಿ) ನನ್ನ ಪಕ್ಷದ ಕಾರ್ಯಕರ್ತರನ್ನು ಕಾಪಾಡುವವರಾರು?’. ತಾಲಿಬಾನ್ ಬಗ್ಗೆ ಇಮ್ರಾನ್ ಖಾನ್​ರ ಪ್ರೀತಿ ಅವಕಾಶವಾದಿ ರಾಜಕಾರಣವಿರಬಹುದೇ ಎಂಬ ಅನುಮಾನವನ್ನು ಈ ಪ್ರಕರಣ ಮೂಡಿಸಿದರೂ ಅದು ಹಾಗಲ್ಲ ಎನ್ನುವುದು ಮುಂದಿನ ಒಂದೇ ವರ್ಷದಲ್ಲಿ ಸಾಬೀತಾಯಿತು. ಅದನ್ನು ಹೇಳುವುದಕ್ಕೆ ಮೊದಲು ಆ ದಿನಗಳಲ್ಲಿನ ಪಾಕ್ ಸರ್ಕಾರ ಮತ್ತು ಸೇನೆಗಳ ಆಷಾಢಭೂತಿತನದ ಒಂದು ಪರಿಚಯವನ್ನು ಮಾಡಿಕೊಡಬೇಕು.

ಪಾಕ್ ತಾಲಿಬಾನಿಗಳು ಸೇನೆಯೊಂದಿಗೆ ಸಶಸ್ತ್ರ ಸಂಘರ್ಷಕ್ಕಿಳಿದಾಗ ಅದನ್ನು ಭಾರತದ ತಲೆಗೆ ಕಟ್ಟಿ ಜಗತ್ತನ್ನು ಅಡ್ಡದಾರಿಗೆಳೆಯಲು ಪಾಕಿಸ್ತಾನೀ ಸೇನೆ ಮತ್ತು ಸರ್ಕಾರಗಳು ಪ್ರಯತ್ನಿಸಿದವು. ಮೃತಪಟ್ಟ ಹಾಗೂ ಸೆರೆಸಿಕ್ಕ ಪಾಕ್ ತಾಲಿಬಾನಿಗಳಲ್ಲಿ ಹೆಚ್ಚಿನವರು ಸುನ್ನತಿ ಮಾಡಿಸಿಕೊಂಡಿಲ್ಲ ಎಂಬುದನ್ನು ಕಂಡುಹಿಡಿದ ಪಾಕ್ ಸೇನೆ ಅವರೆಲ್ಲರೂ ಹಿಂದೂಗಳು, ಮಾರುವೇಷದ ಭಾರತೀಯ ಸೈನಿಕರು ಎಂದು ಪ್ರಚಾರ ಮಾಡಿತು. ಭಾರತದ ವಿರುದ್ಧ ತಾನು ಎಸಗುತ್ತಿದ್ದ ಕುಕೃತ್ಯಗಳನ್ನು ಮುಚ್ಚಿಟ್ಟು, ಭಾರತವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ತನಗೊಂದು ಪುರಾವೆ ಸಿಕ್ಕಿತೆಂದು ಪಾಕ್ ಸರ್ಕಾರಕ್ಕೆ ಹಿಗ್ಗೋಹಿಗ್ಗು. ಆದರೆ ಅವುಗಳ ಸುಳ್ಳು ಕೆಲವೇ ದಿನಗಳಲ್ಲಿ ಬಯಲಾಯಿತು. ಗಡಿನಾಡು ಪ್ರಾಂತ್ಯದಲ್ಲಿನ ಬುಡಕಟ್ಟು ಜನಾಂಗಗಳು ವಿವಿಧ ಕಾರಣಗಳಿಂದಾಗಿ ಸುನ್ನತಿ ನಿಯಮವನ್ನು ಕಡ್ಡಾಯವಾಗಿ ಪಾಲಿಸುವುದಿಲ್ಲ. ಇದು ಇಂದು ನಿನ್ನೆಯದಲ್ಲ. ಶತಮಾನಗಳಿಂದಲೂ ಹೀಗೆಯೇ. ಈ ವಿಷಯವನ್ನು ಪಾಕ್ ಮಾಧ್ಯಮಗಳೇ ದೊಡ್ಡದಾಗಿ ಪ್ರಚಾರ ಮಾಡಿದೊಡನೆ ಪಾಕ್ ಸೇನೆ ಮತ್ತು ಸರ್ಕಾರ ಇಂಗು ತಿಂದ ಮಂಗನಂತಾದವು. ಅವೆರಡೂ ತಾವು ಆಳುತ್ತಿರುವ ಜನರ ರೀತಿರಿವಾಜುಗಳನ್ನೇ ಸರಿಯಾಗಿ ಅರಿತಿಲ್ಲ ಅಂದರೆ ತಂತಮ್ಮ ಸ್ಥಾನಗಳಿಗೆ ಅವೆರಡೂ ಅದೆಷ್ಟು ಅನರ್ಹ!

2013ರಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಮತ್ತು ಪ್ರಾಂತೀಯ ಶಾಸನಸಭೆಗಳಿಗೆ ಚುನಾವಣೆಗಳು ನಡೆದಾಗ ಖೈಬರ್-ಪಖ್ತೂನ್​ಖ್ವಾ ಪ್ರಾಂತ್ಯದಲ್ಲಿ ಬಹುಮತ ಗಳಿಸಿದ್ದು ಇಮ್ರಾನ್ ಖಾನ್​ರ ತೆಹ್ರೀಕ್-ಎ-ಇನ್ಸಾಫ್ ಪಕ್ಷ. ಅದರ ನಾಯಕ ಪರ್ವೆಜ್ ಖಟಕ್ ಮುಖ್ಯಮಂತ್ರಿಯಾಗಿ ಸರ್ಕಾರ ರಚಿಸುತ್ತಿದ್ದಂತೇ ಪ್ರಾಂತ್ಯದಲ್ಲಿ ಇಸ್ಲಾಮೀಕರಣ ಅಧಿಕೃತವಾಗಿಯೇ ಆರಂಭವಾಗಿ ಶರಿಯಾ ಹಂತಹಂತವಾಗಿ ಜಾರಿಗೊಳ್ಳತೊಡಗಿತು. ಅಂದರೆ ಅಫ್ಘನ್ ಗಡಿಗೆ ಹೊಂದಿಕೊಂಡ ಮತ್ತು ಪಾಕಿಸ್ತಾನೀ ಪಖ್ತೂನ್ ಜನತೆಯ ಆವಾಸಸ್ಥಾನವಾದ ಖೈಬರ್-ಪಖ್ತೂನ್​ಖ್ವಾ ಅಧಿಕೃತವಾಗಿಯೇ ತಾಲಿಬಾನೀಕರಣಗೊಳ್ಳತೊಡಗಿತು. ಐದು ವರ್ಷಗಳ ನಂತರ ಜುಲೈ 2018ರಲ್ಲಿ ನಡೆದ ಚುನಾವಣೆಗಳಲ್ಲಿ

ತೆಹ್ರೀಕ್-ಎ-ಇನ್ಸಾಫ್ ಮತ್ತೆ ಪ್ರಾಂತ್ಯದಲ್ಲಿ ಅಧಿಕಾರ ಉಳಿಸಿಕೊಂಡದ್ದಷ್ಟೇ ಅಲ್ಲ ರಾಷ್ಟ್ರೀಯ ಸಂಸತ್ತಿನಲ್ಲೂ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸೇನೆಯ ಬೆಂಬಲದಿಂದ ಸರ್ಕಾರ ರಚಿಸಿತು, ತಾಲಿಬಾನ್ ಖಾನ್ ಈಗ ಪಾಕಿಸ್ತಾನದ ಪ್ರಧಾನಮಂತ್ರಿ! ಖೈಬರ್-ಪಖ್ತೂನ್​ಖ್ವಾ ಪ್ರಾಂತ್ಯದಲ್ಲಿ ತಾಲಿಬಾನೀಕರಣ ಆರಂಭಿಸಿದ ಪರ್ವೆಜ್ ಖಟಕ್ ಈಗ ಪಾಕಿಸ್ತಾನದ ರಕ್ಷಣಾ ಮಂತ್ರಿ! ಪಾಕಿಸ್ತಾನವೀಗ ಇಡಿಯಾಗಿ ತಾಲಿಬಾನೀಕರಣಗೊಳ್ಳುವ ಹೊಸ್ತಿಲಲ್ಲಿ ನಿಂತಿದೆ. ಪಾಕ್ ಸೇನೆ, ಐಎಸ್​ಐ, ಅದರ ಕೈಗೂಸುಗಳಾದ ಹಲವು ಹತ್ತು ಭಯೋತ್ಪಾದಕ ಸಂಘಟನೆಗಳ ಅದೆಷ್ಟೋ ವರ್ಷಗಳ ಕರಾಳ ಕನಸು ಸಾಕಾರಗೊಳ್ಳುತ್ತಿದೆ. ಮೂರೂಮುಕ್ಕಾಲು ಕೋಟಿ ಜನಸಂಖ್ಯೆಯ ಅಫ್ಘಾನಿಸ್ತಾನ ತಾಲಿಬಾನೀಕರಣಗೊಳ್ಳುವುದಕ್ಕಿಂತಲೂ ಇಪ್ಪತ್ತೊಂದೂಮುಕ್ಕಾಲು ಕೋಟಿ ಜನಸಂಖ್ಯೆಯ ಪಾಕಿಸ್ತಾನ ತಾಲಿಬಾನೀಕರಣಗೊಳ್ಳುವುದು ಹೆಚ್ಚು ಅಪಾಯಕಾರಿ ಎನ್ನುವ ಸತ್ಯದ ಹಲವು ಮುಖಗಳನ್ನು ಈಗ ನೋಡೋಣ.

ಇಸ್ಲಾಮೀ ಆಡಳಿತಕ್ಕೆ ಒಳಗಾದ ಈ 1300 ವರ್ಷಗಳಲ್ಲಿ ಅಫ್ಘಾನಿಸ್ತಾನ ಹಲವು ಬಗೆಗಳಲ್ಲಿ ತಾಲಿಬಾನೀಕರಣಗೊಂಡೇ ಇದೆ. ಆ ಹೆಸರು ಮಾತ್ರ ಹೊಸದು ಅಷ್ಟೇ. ಅಲ್ಲಿನ ಮುಸ್ಲಿಂ ಅರಸರು ಇಸ್ಲಾಮಿಕ್ ಕಾನೂನುಗಳನ್ನು ಕಟ್ಟುನಿಟ್ಟಾಗಿಯೇ ಜಾರಿಗೊಳಿಸಿದ್ದರು. ಮಹಿಳೆಯರಿಗೆ ಶಿಕ್ಷಣ ಇರಲೇ ಇಲ್ಲ. ಶಿಕ್ಷಣ ಇಲ್ಲವೆಂದಮೇಲೆ ಸಾರ್ವಜನಿಕ ಉದ್ಯೋಗಗಳೂ ಅವರಿಗೆ ದೂರವೇ. ದ್ವಿತೀಯ ಮಹಾಯುದ್ಧಾನಂತರದ ದಿನಗಳಲ್ಲಿ ದೇಶ ಆಧುನಿಕತೆಗೆ ಅಷ್ಟಿಷ್ಟು ತೆರೆದುಕೊಂಡರೂ. ಮಹಿಳೆಯರ ಸ್ಥಿತಿಯಲ್ಲೇನೂ ಬದಲಾವಣೆ ಆಗಲಿಲ್ಲ. ನಿಜವಾದ ಬದಲಾವಣೆ ಕಾಣತೊಡಗಿದ್ದು 1978-89ರ ಕಮ್ಯೂನಿಸ್ಟ್ ಆಡಳಿತ ಕಾಲದಲ್ಲಿ. ನಾಸ್ತಿಕ ಸೋವಿಯೆತ್ ಕಮ್ಯೂನಿಸ್ಟರ ಮೇಲ್ವಿಚಾರಣೆಯಲ್ಲಿ ಆಧುನಿಕ ಶಿಕ್ಷಣ ವ್ಯವಸ್ಥೆ, ಮಹಿಳಾ ಶಿಕ್ಷಣ ಮುಂತಾದ ಹಲವು ಸುಧಾರಣಾಪ್ರಕ್ರಿಯೆಗಳು ಜಾರಿಗೊಂಡರೂ ನಿಲ್ಲದ ವ್ಯಾಪಕ ಅಂತರ್ಯುದ್ಧದಿಂದಾಗಿ ಅವ್ಯಾವುವೂ ಪರಿಣಾಮಕಾರಿಯಾಗಿ, ಸಾರ್ವತ್ರಿಕವಾಗಿ ಜಾರಿಗೊಳ್ಳಲಾಗಲಿಲ್ಲ. 1996-2001ರ ನಡುವಿನ ತಾಲಿಬಾನ್ ಆಡಳಿತಕಾಲದಲ್ಲಿ ಅದೆಲ್ಲವೂ ನಿಂತುಹೋಗಿ ದೇಶ ಹಿಮ್ಮುಖವಾಗಿ ಚಲಿಸತೊಡಗಿದರೂ ಆ ಅನುಭವ ಅಫ್ಘನ್ನರಿಗೆ ಹೊಸದೇನೂ ಆಗಿರಲಿಲ್ಲ. ಆದರೆ ಎಲ್ಲೆಡೆಗೂ ಹರಡತೊಡಗಿದ ಜಾಗತಿಕ ವಿದ್ಯುನ್ಮಾನ ಮಾಧ್ಯಮಗಳ ಬಿಡುಗಣ್ಣುಗಳು ಮತ್ತು ವಾಚಾಳಿ ನಾಲಿಗೆಗಳಿಂದಾಗಿ ಅದು ಜಗತ್ತಿನೆಲ್ಲೆಡೆ ಸುದ್ದಿಯಾಗತೊಡಗಿತಷ್ಟೇ. ಹಾಗೆ ನೋಡಿದರೆ ಮಹಿಳಾ ಶಿಕ್ಷಣ ಕ್ಷೇತ್ರದಲ್ಲಿ ಅಫ್ಘಾನಿಸ್ತಾನ ಅಭೂತಪೂರ್ವ ಸಾಧನೆ ಕಂಡದ್ದು ಅಮೆರಿಕನ್ ಸೇನೆ ಅಲ್ಲಿದ್ದ ದಿನಗಳಲ್ಲಿ. 2001ರ ಅಂತ್ಯದಲ್ಲಿ ಹಮೀದ್ ಕರ್ಜಾಯ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸರಿಸುಮಾರು ಶೂನ್ಯದಲ್ಲಿದ್ದ ಮಹಿಳಾ ಶಿಕ್ಷಣ ತಿಂಗಳ ಹಿಂದೆ ಅಧ್ಯಕ್ಷ ಆಶ್ರಫ್ ಘಾನಿ ದೇಶ ತೊರೆದು ಓಡಿಹೋಗುವ ಹೊತ್ತಿಗೆ 28%ಗೇರಿತ್ತು! ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಕ್ಷೇತ್ರಗಳಷ್ಟೇ ಅಲ್ಲ, ಪೊಲೀಸ್ ಇಲಾಖೆಯಲ್ಲೂ ಮಹಿಳೆಯರು ನೌಕರಿ ಮಾಡತೊಡಗಿದ್ದರು!

ಈಗ ಪಾಕಿಸ್ತಾನದತ್ತ ಹೊರಳೋಣ. ಭಾರತದ ಭಾಗವೇ ಆಗಿದ್ದ ಪಾಕಿಸ್ತಾನ ವಸಾಹತುಶಾಹಿ ಕಾಲದಲ್ಲಿ ಆಧುನಿಕ ಶಿಕ್ಷಣವ್ಯವಸ್ಥೆಯನ್ನು ಕಂಡಿತ್ತು, ಸಿಂಧ್ ಮತ್ತು ಪಂಜಾಬ್​ಗಳು ಅದರ ಫಲವನ್ನೂ ಅನುಭವಿಸಿದ್ದವು. ಬ್ರಿಟಿಷ್ ಸರ್ಕಾರ ಜಾರಿಗೊಳಿಸಿದ್ದ ಶಿಕ್ಷಣ ಕ್ರಮ ಸೆಕ್ಯುಲರ್ ಸಹ ಆಗಿತ್ತು. ಪರಿಣಾಮವಾಗಿ ಸ್ವಾತಂತ್ರಾ್ಯನಂತರವೂ 1956ರವರೆಗೂ ರಾಮಾಯಣ ಮತ್ತು ಮಹಾಭಾರತ ಪಾಕ್ ಪಠ್ಯಪುಸ್ತಕಗಳಲ್ಲಿ ಸ್ಥಾನ ಪಡೆದಿದ್ದವು. ಜಿಯಾ-ಉಲ್-ಹಖ್​ರ ಉಗ್ರ ಇಸ್ಲಾಮೀಕರಣ ಕಾಲದಲ್ಲೂ ಮಹಿಳೆಯರ ಶಿಕ್ಷಣಕ್ಕೆ ಧಕ್ಕೆಯಾಗಲಿಲ್ಲ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಪಾಕ್ ಮಹಿಳೆಯರು ಛಾಪು ಮೂಡಿಸಿದ್ದರು. ಮಹಿಳಾ ಪ್ರಧಾನಿಯನ್ನು ಪಡೆದುಕೊಂಡ ಮೊಟ್ಟಮೊದಲ ಮುಸ್ಲಿಂ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಪಾಕಿಸ್ತಾನ 33 ವರ್ಷಗಳ ಹಿಂದೆಯೇ ಪಾತ್ರವಾಯಿತು. ಆದರೆ ಇಂದು ಖೈಬರ್-ಪಖ್ತೂನ್​ಖ್ವಾ ಪ್ರಾಂತ್ಯದಲ್ಲಿ ಮಹಿಳೆಯರು ಹಕ್ಕುಗಳನ್ನು ಹಂತಹಂತವಾಗಿ ಕಳೆದುಕೊಳ್ಳುತ್ತಿದ್ದಾರೆ. ಅದೇ ಪರಿಸ್ಥಿತಿ ರಾಷ್ಟ್ರವಿಡೀ ಹರಡಬಹುದೆಂಬ ಆತಂಕ ಸಹಜವಾಗಿಯೇ ಮೂಡಿದೆ. ಧಾರ್ವಿುಕ ನಾಯಕರು ಮತ್ತು ಭಯೋತ್ಪಾದನಾ ಸಂಘಟನೆಗಳು ಮಹಿಳೆಯರನ್ನು ಮೂಲೆಗೊತ್ತಲು, ಶರಿಯಾವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ತಾಲಿಬಾನ್ ಖಾನ್ ಸರ್ಕಾರ ಇಲ್ಲಿಯವರೆಗೆ ಪೂರ್ಣವಾಗಿ ಮಣಿದಿಲ್ಲ ಅಂದರೆ ಅದು ಹೊರಜಗತ್ತಿನ ಕೆಂಗಣ್ಣಿಗೆ ಗುರಿಯಾಗಬಾರದು, ಆ ಮೂಲಕ ಆರ್ಥಿಕ ಸಹಾಯವನ್ನು ಕಳೆದುಕೊಳ್ಳಬಾರದು ಎಂಬ ಎಚ್ಚರಿಕೆಯಿಂದ ಮಾತ್ರ. ಇದೆಷ್ಟು ದಿನದವರೆಗೆ? ಒಂದು ಕಾಲದಲ್ಲಿ ಭಾರತದಂತೇ ಉದಾರವಾಗಿದ್ದ ಪಾಕ್ ಸಮಾಜ ಇಂದು ಧರ್ವಂಧವಾಗುವ ಹಾದಿಯಲ್ಲಿದೆ. ಒಂದು ಹಂತಕ್ಕೆ ಪ್ರಮುಖ ವಿದೇಶಗಳು ಇದನ್ನು ಗುರುತಿಸಿಯೇ ಇವೆ. ಜಾಗತಿಕ ‘ಭಯೋತ್ಪಾದನೆಯ ಕಾರ್ಖಾನೆ’ ಎಂಬ ಕುಪ್ರಸಿದ್ಧಿಗೆ ಪಾಕಿಸ್ತಾನ ಎಂದೋ ಪಾತ್ರವಾಗಿದ್ದರೂ, ಅದನ್ನು ಒಂದು ಮಿತಿಯನ್ನು ದಾಟಿ ಶಿಕ್ಷಿಸಲು ಹೋದರೆ ಮೂಲಭೂತವಾದದತ್ತ ಅದರ ಜಾರುವಿಕೆ ತೀವ್ರವಾಗಬಹುದೆಂಬ ಆತಂಕದಿಂದಲೇ ಅಮೆರಿಕಾ ಮತ್ತು ಯೂರೋಪಿಯನ್ ಯೂನಿಯನ್ ಪಾಕಿಸ್ತಾನದ ಜತೆ ವ್ಯವಹಾರಗಳನ್ನು ಪೂರ್ಣವಾಗಿ ನಿಲ್ಲಿಸದೇ ಒಂದು ಮಿತಿಯಲ್ಲಿ ಮುಂದುವರಿಸಿಕೊಂಡು ಹೋಗುತ್ತಿವೆ. ಪಾಕಿಸ್ತಾನವನ್ನು ನಿರಂತರವಾಗಿ ಮಾತಾಡಿಸುತ್ತಾ ಅದು ಕೋಮಾಗೆ ಜಾರದಂತೆ ನೋಡಿಕೊಳ್ಳಬೇಕಾಗಿದೆ ಎನ್ನುವ ಎಚ್ಚರಿಕೆಯ ನಡೆ ಅವುಗಳದು. ಅಫ್ಘಾನಿಸ್ತಾನಕ್ಕಿಂತ ಹತ್ತಿರಹತ್ತಿರ ಆರುಪಟ್ಟು ಹೆಚ್ಚು ಜನಸಂಖ್ಯೆಯ, ಅಫ್ಘಾನಿಸ್ತಾನದ ಒಟ್ಟು ಜನಸಂಖ್ಯೆಯಷ್ಟೇ ಮೂಲಭೂತವಾದಿಗಳಿರಬಹುದಾದ, ಅಣ್ವಸ್ತ್ರಗಳನ್ನು ಹೊಂದಿದ ಪಾಕಿಸ್ತಾನ ಇಸ್ಲಾಮಿಕ್ ಮೂಲಭೂತವಾದದ ಕಪಿಮುಷ್ಟಿಗೆ ಸಿಲುಕಿಹೋದರೆ ಅದರಿಂದ ಜಗತ್ತಿಗೆ ತಟ್ಟಬಹುದಾದ ಅಪಾಯ ಊಹಿಸಲಸದಳ ಎಂಬ ಅವುಗಳ ಆತಂಕ ಅರ್ಥವಾಗುವಂತಹದ್ದೇ. ಮುಖ್ಯವಾಗಿ ನಾವು ಭಾರತೀಯರು ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು.

ಪ್ರಸಕ್ತ ಅಫ್ಘಾನಿಸ್ತಾನದಲ್ಲೂ ಅಪಾಯಕಾರಿಯಾಗಿರುವುದು ಪಾಕ್ ಪರವಾದ ಉಗ್ರರು, ನಿಜವಾದ ತಾಲಿಬಾನ್ ಅಲ್ಲ, ಹಿಂದಿದ್ದಷ್ಟು ಉಗ್ರ ಮೂಲಭೂತವಾದವನ್ನು ಅಫ್ಘನ್ ತಾಲಿಬಾನ್ ಈಗ ಪ್ರದರ್ಶಿಸುತ್ತಿಲ್ಲ. ಇನ್ನು ಮುಂದೆ ಮಹಿಳೆಯರಿಗೆ ಶಿಕ್ಷಣ ಇಲ್ಲ, ದೇಶದಲ್ಲಿ ಮಾರಣಹೋಮವಾಗಲಿದೆ ಎಂದು ಹರಕುಬಾಯಿಯ ಮಾಧ್ಯಮಗಳು ಕೂಗುತ್ತಿರುವಾಗಲೇ ತಾಲಿಬಾನ್ ತಾನು ಕಾಬೂಲ್​ನಲ್ಲಿ ಅಧಿಕಾರ ಕೈವಶ ಮಾಡಿಕೊಂಡ ಮೊದಲನೇ ವಾರದಲ್ಲೇ ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಆಹ್ವಾನಿಸಿದೆ, ಎರಡನೆಯ ವಾರದಲ್ಲಿ ಶಾಲೆಗಳನ್ನು ತೆರೆದಿದೆ, ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡತೊಡಗಿದೆ. ಸಹವಿದ್ಯಾಭ್ಯಾಸ ಇಲ್ಲ ಎನ್ನುವುದು ಈ ಗಳಿಗೆಯಲ್ಲಿ ಮುಖ್ಯವಲ್ಲ. ಹೆಣ್ಣುಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ ಮತ್ತು ಗಂಡುಮಕ್ಕಳ ಶಾಲೆಗಳಲ್ಲಿ ಅಧ್ಯಾಪಕಿಯರು ಪಾಠ ಹೇಳತೊಡಗಿದ್ದಾರೆ ಎನ್ನುವುದು ನಾವು ಗುರುತಿಸಿ ಗೌರವಿಸಬೇಕಾದ ಮಹತ್ತರ ಬೆಳವಣಿಗೆ.

ಅಫ್ಘಾನಿಸ್ತಾನದಲ್ಲಿ ಈಗ ಜನವಿರೋಧಿಯಾಗಿರುವುದು ತಾಲಿಬಾನ್ ಅಲ್ಲ, ಬದಲಾಗಿ ಪಾಕ್ ಕೈಗೊಂಬೆಯಾಗಿರುವ ಹಖ್ಖಾನಿಗಳು. 1980ರ ದಶಕದಲ್ಲಿ ಸಿಐಎ ಏಜೆಂಟ್​ಗಳಾಗಿದ್ದ ಇವರು ನಂತರ ತಾಲಿಬಾನ್ ಜತೆ ಸೇರಿಕೊಂಡು ಒರಿಜಿನಲ್ ತಾಲಿಬಾನ್​ಗಳಿಗಿಂತಲೂ ಉಗ್ರ ಮೂಲಭೂತವಾದಿಗಳಾಗಿಹೋಗಿದ್ದಾರೆ. ಕಳೆದ 20 ವರ್ಷಗಳಲ್ಲಿ ಅಫ್ಘಾನಿಸ್ತಾನದಲ್ಲಿ ಅತ್ಯುಗ್ರ ಎನ್ನಬಹುದಾದ ಭಯೋತ್ಪಾದನಾ ಕೃತ್ಯಗಳನ್ನು ಎಸಗಿರುವವರು ಈ ಹಖ್ಖಾನಿಗಳು. ಇಂದು ಉದಾರವಾದಿ ಮುಲ್ಲಾ ಅಬ್ದುಲ್ ಘಾನಿ ಬರದರ್ ಪ್ರಧಾನಮಂತ್ರಿಯಾಗದಂತೆ ತಡೆಯುವಲ್ಲಿ ಹಖ್ಖಾನಿಗಳು ಯಶಸ್ವಿಯಾಗಿದ್ದಾರೆ. ಪ್ರಬಲ ಗೃಹ ಇಲಾಖೆಯ ಜತೆ ಇನ್ನೂ ಹಲವು ಇಲಾಖೆಗಳನ್ನು ಕೈವಶ ಮಾಡಿಕೊಂಡಿದ್ದಾರೆ. ಪ್ರದರ್ಶನಗಳನ್ನು ನಿರ್ಬಂಧಿಸುವ, ಮಾಧ್ಯಮಗಳ ಕೈಗಳನ್ನು ಕಟ್ಟಿಹಾಕುವ ತೀರ್ವನಗಳನ್ನು ತೆಗೆದುಕೊಂಡಿರುವುದು ಸಿರಾಜುದ್ದೀನ್ ಹಖ್ಝಾನಿ ನೇತೃತ್ವದ ಗೃಹ ಇಲಾಖೆ. ಹಖ್ಖಾನಿಗಳು ಇದೆಲ್ಲವನ್ನೂ ಮಾಡುತ್ತಿರುವುದು ಪಾಕ್ ಸರ್ಕಾರ ಮತ್ತು ಸೇನೆಯ ಆದೇಶದ ಮೇರೆಗೆ. ಇದೆಲ್ಲದರ ಅರ್ಥ ಪಾಕಿಸ್ತಾನ ತಾಲಿಬಾನೀಕರಣಗೊಳ್ಳುವ ವೇಗ ಹಖ್ಖಾನಿಗಳು ಅಫ್ಘಾನಿಸ್ತಾನವನ್ನು ಉಗ್ರ ಮೂಲಭೂತವಾದಿಯಾಗಿಸುವ ವೇಗವನ್ನು ನಿರ್ಧರಿಸುತ್ತದೆ. ಇದು ಇಂದಿನ ವಾಸ್ತವ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net