

ಕೋವಿಡ್ ಪರಿಣಾಮ ಕಳೆದ ಒಂದೂವರೆ ವರ್ಷದಿಂದ ಗ್ರಾಮೀಣ ಪ್ರದೇಶಗಳ ಲಕ್ಷಗಟ್ಟಲೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅನಿಶ್ಚಿತತೆಯಿಂದ ಕೂಡಿದೆ. ಹತ್ತು ಹಲವು ಸಮಸ್ಯೆಗಳ ಬಲೆಯಲ್ಲಿ ಸಿಲುಕಿ ಹಳ್ಳಿಗಾಡಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತ ಬಂದಿದ್ದಾರೆ. ಈ ಕರೊನಾ ಮಹಾಮಾರಿ ಸಮಾಜದ ಹಲವು ಕ್ಷೇತ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದರೂ ಶಿಕ್ಷಣ ಕ್ಷೇತ್ರದ ಮೇಲೆ ಪ್ರತಿನಿತ್ಯ ಬೀರುತ್ತಿರುವ ಪರಿಣಾಮ ಮಾತ್ರ ಅಪಾರ. ಶಿಕ್ಷಣದ ಮೂಲ ಉದ್ದೇಶ ಸಾಮಾಜೀಕರಣ. ಅಂದರೆ ಮಕ್ಕಳೆಲ್ಲರೂ ಒಟ್ಟಿಗೆ ಕುಳಿತು ಆಟ-ಪಾಠಗಳಲ್ಲಿ ತೊಡಗಿಸಿಕೊಂಡು ಗುರು-ಶಿಷ್ಯರೆಲ್ಲರೂ ಮುಖಾಮುಖಿಯಾಗಿ ಕಲಿಕೆಯಲ್ಲಿ ಸಂತೋಷದಾಯಕವಾಗಿ ತೊಡಗಿಸಿಕೊಂಡಾಗ ಆ ಕಲಿಕೆ ಹೆಚ್ಚು ಮನದಟ್ಟು ಹಾಗೂ ಸದೃಢವಾಗುತ್ತದೆ.
ಆದರೆ ಕಳೆದ ಒಂದೂವರೆ ವರ್ಷದಿಂದ ನಮ್ಮ ಶಾಲಾ ಮಕ್ಕಳು ಭೌತಿಕ ತರಗತಿಗಳಿಂದ ವಂಚಿತರಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ನಗರ ಪ್ರದೇಶದಲ್ಲಿನ ಕೆಲವು ಪ್ರತಿಷ್ಠಿತ ಶಾಲೆಗಳಲ್ಲಿ ಆನ್ಲೈನ್ ಶಿಕ್ಷಣ ನಡೆಯುತ್ತಿದ್ದು, ಇದರಿಂದ ಆ ಮಕ್ಕಳು ಶಿಕ್ಷಣದ ಕಡೆಗೆ ಕೊಂಚ ಮುಖ ಮಾಡಿದ್ದರೂ ಎಲ್ಲ ಮಕ್ಕಳು ಸತ್ವಪೂರ್ಣ ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಕಷ್ಟಸಾಧ್ಯ. ಆದರೆ ಗ್ರಾಮೀಣ ಪ್ರದೇಶದ ಮಕ್ಕಳು ಭೌತಿಕ ಹಾಗೂ ಆನ್ಲೈನ್ ಕಲಿಕೆಯಿಂದ ದೂರವಿರುವುದರಿಂದ ಕಲಿಕೆ ಕುಂಠಿತವಾಗಿದೆ. ಹೀಗಾಗಿ ಸರ್ಕಾರ ಕರೊನಾ ಕಡಿಮೆ ಹಾಗೂ ಕರೊನಾ ಇಲ್ಲದಿರುವ ಗ್ರಾಮೀಣ ಪ್ರದೇಶಗಳಲ್ಲಿ ಹಲವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಭೌತಿಕ ತರಗತಿಗಳನ್ನು ಆರಂಭಿಸಬೇಕು. ಈ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು.
| ಹರಳಹಳ್ಳಿ ಪುಟ್ಟರಾಜು ಪಾಂಡವಪುರ