ಸ್ವಿಮ್ಮಿಂಗ್ ನಲ್ಲಿ ಸಿಮ್ರನ್ ಸಾಧನೆ; ಕುಬ್ಜೆಯಾದರೂ ಬಿಡಲಿಲ್ಲ ಕನಸಿನ ಗುರಿ

IMG-20210512-WA0008
Published on

((ಸಣ್ಣ ಪುಟ್ಟ ನ್ಯೂನತೆಗೆ ಹೆದರಿ ಮನೆಯಲ್ಲೇ ಕೂರುವವರು ಸಾಕಷ್ಟು ಜನರಿದ್ದಾರೆ. ಆದರೆ ಅದನ್ನೆಲ್ಲ ಮೀರಿ ನಿಂತರೆ ಜೀವನ ನಿಜಕ್ಕೂ ಸ್ವರ್ಗವೇ. ಆ ರೀತಿ ಸಾಧನೆಯ ಬೆನ್ನು ಹತ್ತಿದವರು ನಮ್ಮ ನಿಮ್ಮ ಮಧ್ಯೆ ಹಲವಾರು ಜನರಿದ್ದಾರೆ. ಅಂಗಕ್ಕೆ ಅಥವಾ ಅಂದಕ್ಕೆ ಇರುವ ಕೊರತೆಯನ್ನು ಕೊರತೆಯೆಂದು ಪರಿಗಣಿಸದೆ ರಾಜ್ಯ, ರಾಷ್ಟ್ರ ಮತ್ತು ವಿಶ್ವ ಮಟ್ಟದಲ್ಲಿ ಕೀರ್ತಿ ಪತಾಕೆ ಹಾರಿಸಿದ ಹಲವರು ನಮ್ಮೊಂದಿಗಿದ್ದಾರೆ.))

| ಇಮಾಮಹುಸೇನ್ ಗೂಡುನವರ ಬೆಳಗಾವಿ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಗಾದೆ ಈ ಕ್ರೀಡಾ ಪ್ರತಿಭೆಗೆ ಅಕ್ಷರಶಃ ಅನ್ವಯಿಸುತ್ತದೆ. ಕೇವಲ 3 ಅಡಿ, 10 ಇಂಚು ಎತ್ತರ ಇರುವ ಈಕೆ ಈಜು ಸ್ಪರ್ಧೆಗಳಲ್ಲಿ ಮಿಂಚುತ್ತಿರುವುದು ಎಂತಹವರಲ್ಲೂ ಅಚ್ಚರಿ ಮೂಡಿಸುತ್ತದೆ. ಇದು ಬೆಳಗಾವಿಯ ಸಿಮ್ರನ್ ಗೌಂಡಲಕರ (18) ಯಶಸ್ಸಿನ ಕಥೆ.

ನಾನು ಕುಬ್ಜೆ. ನನ್ನಿಂದ ಏನೂ ಸಾಧಿಸಲಾಗದು’ ಎಂದು ಈಕೆ ಮನೆಯಲ್ಲಿ ಕೈಕಟ್ಟಿ ಕೂರಲಿಲ್ಲ. ಬದಲಿಗೆ, ಸಿಕ್ಕ ಅವಕಾಶಗಳನ್ನೇ ಬಳಸಿಕೊಂಡು ಇಂದು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗಳಲ್ಲಿ ಸಾಧನೆ ಮೆರೆಯುತ್ತಿದ್ದಾಳೆ. ‘ನಾನು 3ನೇ ತರಗತಿ ಓದುತ್ತಿದ್ದೆ. ಆಗ, ತರಬೇತುದಾರ ಉಮೇಶ ಕಲಘಟಗಿ ಶಾಲೆಗೆ ಬಂದಿದ್ದರು. ಈಜು ಕಲಿಯಲು ಉಳಿದ ವಿದ್ಯಾರ್ಥಿಗಳಂತೆ ನನ್ನಲ್ಲೂ ಪ್ರೇರಣೆ ತುಂಬಿದರು.

ಅಂದು ಈಜುಕೊಳಕ್ಕೆ ಇಳಿದವಳು 10 ವರ್ಷಗಳಿಂದ ನಿತ್ಯವೂ ಅಭ್ಯಾಸ ನಡೆಸುತ್ತಿದ್ದೇನೆ. ಈಜು ನನ್ನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಜತೆಗೆ, ಸಮಾಜದಲ್ಲಿ ಗೌರವ ವನ್ನೂ ತಂದುಕೊಟ್ಟಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾಳೆ ಸಿಮ್ರನ್.

ಪದಕಗಳ ಬೇಟೆ: 2015ರಲ್ಲಿ ಬೆಳಗಾವಿಯ ಜೆಎನ್​ಎಂಸಿ ಈಜುಕೊಳದಲ್ಲಿ ಜರುಗಿದ ರಾಷ್ಟ್ರಮಟ್ಟದ ಅಂಗವಿಕಲರ ಈಜು ಸ್ಪರ್ಧೆಯಲ್ಲಿ ಸಿಮ್ರನ್ 4 ಚಿನ್ನ, 1 ಬೆಳ್ಳಿ ಪದಕ ಗೆದ್ದಿದ್ದಾಳೆ. 2016ರಲ್ಲಿ ರಾಜಸ್ಥಾನದ ಜೈಪುರದಲ್ಲಿ ಜರುಗಿದ ಸ್ಪರ್ಧೆಯಲ್ಲಿ 3 ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾಳೆ. ಮಹಿಳಾ ವಿಭಾಗದಲ್ಲಿ ಬೆಸ್ಟ್ ಅಥ್ಲೀಟ್ ಗೌರವಕ್ಕೂ ಪಾತ್ರಳಾಗಿದ್ದಾಳೆ. 2017ರಲ್ಲಿ ಉದಯಪುರದಲ್ಲಿ ಜರುಗಿದ ಟೂರ್ನಿಯಲ್ಲಿ 3 ಚಿನ್ನ, 1 ಬೆಳ್ಳಿ ಪದಕ ಗಳಿಸಿದ್ದರೆ, 2021ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ 3 ಚಿನ್ನದ ಪದಕಗಳಿಗೆ ಭಾಜನಳಾಗಿದ್ದಾಳೆ. ಅಲ್ಲದೆ, 2017ರಲ್ಲಿ ಕೆನಡಾದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಕುಬ್ಜರ ಈಜು ಸ್ಪರ್ಧೆಯಲ್ಲೂ 1 ಚಿನ್ನ, 2 ಬೆಳ್ಳಿ ಪದಕ ಗಳಿಸಿ, ವಿದೇಶಿ ನೆಲದಲ್ಲೂ ಭಾರತಕ್ಕೆ ಕೀರ್ತಿ ತಂದಿದ್ದಾಳೆ.

ಬಿಕಾಂ ವ್ಯಾಸಂಗ: ಬೆಳಗಾವಿಯ ಲಿಂಗರಾಜ ಕಾಲೇಜ್​ನಲ್ಲಿ ಸಿಮ್ರನ್ ಪ್ರಥಮ ವರ್ಷ ವಾಣಿಜ್ಯ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆಯ ತಂದೆ ವಿವೇಕ ಖಾಸಗಿ ಕಾರ್ಖಾನೆ ಉದ್ಯೋಗಿ. ತಾಯಿ ವಿಶಾಖಾ ಗೃಹಿಣಿ. ಕಿರಿಯ ಸಹೋದರಿ ರಿದ್ಧಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ಗುಜರಾತ್​ನಲ್ಲಿ ತರಬೇತಿ: ಕೇಂದ್ರ ಸರ್ಕಾರ ಖೇಲೋ ಇಂಡಿಯಾ ಯೋಜನೆಯಡಿ ಸಿಮ್ರನ್​ಳನ್ನು ಆಯ್ಕೆ ಮಾಡಿದೆ. ಗುಜರಾತ್​ನ ಗಾಂಧಿನಗರದಲ್ಲಿರುವ ಸ್ಪೋರ್ಟ್್ಸ ಆಥಾರಿಟಿ ಆಫ್ ಇಂಡಿಯಾ ತರಬೇತಿ ಕೇಂದ್ರದಲ್ಲಿ ಈಕೆ ಅಭ್ಯಾಸ ನಡೆಸುತ್ತಿದ್ದಾಳೆ. ಕೋವಿಡ್ ಹಿನ್ನೆಲೆಯಲ್ಲಿ ಸದ್ಯ ತವರಿಗೆ ಮರಳಿದ್ದಾಳೆ.

ಕುಬ್ಜೆ ಎನ್ನುವ ಕಾರಣಕ್ಕೆ ನನಗೇನೂ ಕೊರಗು ಇಲ್ಲ. ಈಜು ಸ್ಪರ್ಧೆಯಲ್ಲಿ ಸಾಧನೆ ಮಾಡುವತ್ತ ಗಮನ ಹರಿಸಿದ್ದೇನೆ. ನನ್ನ ಈ ಕಿರು ಸಾಧನೆಗೆ ತರಬೇತುದಾರರು, ಹೆತ್ತವರು ಕಾರಣ. 2022ರ ಏಷ್ಯನ್ ಗೇಮ್ಸ್, 2024ರ ಪ್ಯಾರಾ ಒಲಿಂಪಿಕ್​ನಲ್ಲಿ ಭಾರತಕ್ಕೆ ಪದಕ ತರುವುದು ನನ್ನ ಮುಂದಿನ ಗುರಿ.

| ಸಿಮ್ರನ್ ಗೌಂಡಲಕರ, ಈಜುಪಟು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net