ದೈವತ್ವದ ಸಾಕ್ಷಾತ್ಕಾರವೇ ಜೀವನದ ಪರಮಗುರಿ ‘ಮಹಾಶಯ ನೀವು ದೇವರನ್ನು ಕಂಡಿದ್ದೀರಾ?’

asddas
Published on
‘ಮಹಾಶಯ ನೀವು ದೇವರನ್ನು ಕಂಡಿದ್ದೀರಾ?’

ಇದೊಂದು ಅದ್ಭುತ ಪ್ರಶ್ನೆ. ಈ ಪ್ರಶ್ನೆ ಎಲ್ಲರನ್ನೂ ಕಾಡುವುದಿಲ್ಲ. ಇದೊಂದು ಪ್ರಸ್ತುತ ಪ್ರಶ್ನೆಯೆಂತಲೂ ಎಲ್ಲರಿಗೂ ಅನ್ನಿಸುವುದಿಲ್ಲ. ಆದರೆ ಇದರಷ್ಟು ಪ್ರಸ್ತುತ, ಅರ್ಥಪೂರ್ಣ ಮತ್ತು ಅದ್ಭುತ ಪ್ರಶ್ನೆ ಯಾವುದೂ ಇಲ್ಲ. ಒಂದು ಸಮಾಜದ ಸ್ವಾಸ್ಥ್ಯ, ಸಾಮರ್ಥ್ಯ, ಆಳ ಮತ್ತು ಅರ್ಥಗಳು ನಿಂತಿರುವುದೇ ಅದು ಎಷ್ಟು ಜನರಲ್ಲಿ ಪ್ರಾಮಾಣಿಕವಾಗಿ ಈ ಪ್ರಶ್ನೆಯನ್ನು ಸೃಜಿಸಬಲ್ಲದು ಎನ್ನುವ ಆಧಾರದಮೇಲೆ. ಈ ಸೂಕ್ಷಗಳನ್ನು ಅರಿಯದವರು ಸಮಾಜಗಳನ್ನು ಕಟ್ಟಲೂ ಆರರು; ಸಾಮಾಜಿಕ ಚಿಂತನೆಗಳಲ್ಲಿ ಪ್ರಬುದ್ಧತೆಯನ್ನೂ ತರಲಾರರು. ಇತಿಹಾಸದ ಪುಟಗಳು ಸ್ಪಷ್ಟವಾಗಿ ಈ ವಿಷಯವನ್ನು ಸಾರುತ್ತಿದ್ದರೂ ನಮ್ಮ ಧೋರಣೆಗಳಲ್ಲಿ ಬದಲಾವಣೆ ಬರುತ್ತಿದೆ ಅಂತೇನೂ ನನಗೆ ಅನ್ನಿಸುವುದಿಲ್ಲ. ಜರ್ಮನ್ ತತ್ತ್ವಜ್ಞ Fredrick Hegal ಹೇಳುವಂತೆ, "The one lesson we learn from history is that we don't learn any lesson' ಎನ್ನುವುದು ಕಣ್ಣಿಗೆ ರಾಚುವಂತಿದೆ. ವಿಜ್ಞಾನದ ಬಹುತೇಕ ವಿದ್ಯಾರ್ಥಿಗಳಲ್ಲಂತೂ ನಾಸ್ತಿಕತೆಯೇ ವಿಜ್ಞಾನ ಎನ್ನುವಷ್ಟು ಅಜ್ಞಾನದ ಆರಾಧಕರಿದ್ದಾರೆ. ನನ್ನ ಸ್ನೇಹಿತನೊಬ್ಬ ಹೇಳುತ್ತಿದ್ದ "Physics (Hons) ತೆಗೆದುಕೊಂಡಮೇಲೆ ನಾನು ನಾಸ್ತಿಕನಾದೆ’ ಎಂದು.

ನ್ಯೂಟನ್ನನ ಚಲನೆಯ ನಿಯಮಗಳನ್ನು ಅಥವಾ ಐನಸ್ಟೀನರ ಸಾಪೇಕ್ಷವಾದ ವನ್ನು ಆಳವಾಗಿ ಗ್ರಹಿಸಿ ತನ್ನ ಆಸ್ತಿಕವಾದವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವುದರ ಬದಲು ನಾಸ್ತಿಕತೆಗೆ ಜಾರಿದ್ದು ತಲರ್ಸ³ ಅಧ್ಯಯನದ ಕೊರತೆ ಅಥವಾ ವಿಶ್ಲೇಷಣಾ ಸಾಮರ್ಥ್ಯದ ಕೊರತೆ ಮಾತ್ರ. ಇಲ್ಲಿ ಬೋಧಕರ ಜವಾಬ್ದಾರಿ ಬಹಳಷ್ಟು ಇದೆ. ವಿಷಯ ಮಂಡನೆಗೆ ಸೀಮಿತವಾಗಿ ತತ್ತ್ವವೊಂದರ ಎಲ್ಲ ಆಯಾಮಗಳ ಸಮಗ್ರ ವಿಶ್ಲೇಷಣೆ ನಡೆಯದಿದ್ದಲ್ಲಿ ಶಿಕ್ಷಣ ಎನ್ನುವುದು ಮಾಹಿತಿ ಆಗುತ್ತದೆಯೇ ಹೊರತು ಜ್ಞಾನದ ಪೌರುಷ, ಗಾಂಭೀರ್ಯಗಳು ಅದಕ್ಕೆ ಬರುವುದಿಲ್ಲ. ಈಗ ಆಗುತ್ತಿರುವುದು ಹಾಗೆಯೇ. ಹೀಗಾಗಿ ಬುದ್ಧಿ ಮತ್ತು ಹೃದಯಗಳ ವಿಕಸನದ ಕೊರತೆ ಸತ್ತ್ವಹೀನತೆಯಲ್ಲಿ ಪರಿಣಮಿಸಿ ಶಿಕ್ಷಿತ ವರ್ಗ ಅಸಹಾಯಕ ವರ್ಗವಾಗಿದೆ.

ಪಾಶ್ಚಾತ್ಯರ ಸಭೆಯೊಂದರಲ್ಲಿ ದೇವರು, ಧರ್ಮ ಗಳ ಕುರಿತ ಉಪನ್ಯಾಸದ ಸಂದರ್ಭ. ಸಭಿಕರರಲ್ಲೊಬ್ಬ ‘ಸ್ವಾಮೀಜಿ, ಈ ವಿಷಯಗಳೆಲ್ಲ ನಿಜಕ್ಕೂ ಪ್ರಸ್ತುತವೇ? ಇದನ್ನೆಲ್ಲ ತಿಳಿಯಬೇಕಾದ ಅವಶ್ಯಕತೆ ಏನಿದೆ?’ ಎಂದು ಕೇಳಿದ. ವಿವೇಕಾನಂದರು, ‘ನಿನ್ನ ವೃತ್ತಿಯೇನು?’ ಎಂದು ಕೇಳಿದರು. ‘ಖಗೋಲ ಶಾಸ್ತ್ರಜ್ಞ’. ಸ್ವಾಮೀಜಿ ಮುಂದುವರಿದರು- ‘ನೀನು ಮನೆಯ ತಾರಸಿ ಮೇಲೆ ದೂರದರ್ಶಕ ಸ್ಥಾಪಿಸಿ ಒಂದು ರಾತ್ರಿ ಆಕಾಶಕಾಯಗಳ ಕಡೆಗೆ ಗಂಭೀರವಾಗಿ ದೃಷ್ಟಿಯನ್ನಿಟ್ಟು ಅದರಲ್ಲಿ ಮುಳುಗಿದ್ದೀಯೆ ಎಂದು ಭಾವಿಸು. ನಿನ್ನ ಐದು ವರ್ಷದ ಮಗ ಬಂದು ಅಪ್ಪ ಏನು ಮಾಡುತ್ತಿದ್ದೀಯಾ? ಎಂದು ಕೇಳಿದ ಎಂದಿಟ್ಟುಕೋ. ಅಲ್ಲಿ ಕಾಣುವ ನಕ್ಷತ್ರ ಇದೆಯಲ್ಲ, ಅದನ್ನು ಅಧ್ಯಯನ ಮಾಡುತ್ತಿದ್ದೇನೆ ಎನ್ನುವೆ. ಹಾಗೆ ಮಾಡುವುದರಿಂದ ನಿನಗೆ ಚಾಕಲೇಟ್ ಸಿಗುವುದೇ ಎಂದು ಪ್ರಶ್ನಿಸುತ್ತಾನೆ. ನೀನು ನಕ್ಕು, ಇಲ್ಲ ಮಗು ಎನ್ನುತ್ತಿಯೇ. ಅವನು ಹುಸಿ ಮನಸಿನಿಂದ ಹಾಗಾದರೆ ಅದರಿಂದ ಏನು ಪ್ರಯೋಜನ, ಬಾ ಕೆಳಗೆ ಹೋಗಿ ಚಾಕಲೇಟ್ ತಿನ್ನೋಣ ಎನ್ನುತ್ತಾನೆ; ನಿನಗೇನೆನ್ನಿಸುತ್ತದೆ? ನೋಡು ಸಮಾಜದಲ್ಲಿ ಚಾಕಲೇಟ್ ತಿನ್ನುವ ಜನರೂ ಇದ್ದಾರೆ. ಅದಕ್ಕೊಂದಕ್ಕೇ ಅರ್ಥವಿರುವುದು ಎಂದವರು ಭಾವಿಸಬಹುದು. ಬಹುಸಂಖ್ಯೆಯ ಜನ ಅವರೇ ಇರಬಹುದು. ಆದರೆ ಅದಕ್ಕಿಂತ ಮೇಲ್ಮಟ್ಟದ, ಕೇವಲ ಊಟ, ನಿದ್ರೆ, ಮೈಥುನ, ಹಣ, ಅಧಿಕಾರಗಳನ್ನು ಮೀರಿದ ಸತ್ಯಾನ್ವೇಷಕರು ಇರುತ್ತಾರೆ. ಅವರಿಗಾಗಿ ಈ ದೇವರು, ಧರ್ಮ, ಇತ್ಯಾದಿ...’ ಎಂದರು. ಸ್ವಾಮೀಜಿಯವರ ಮಾತಿನಲ್ಲಿ, ನಮ್ಮ ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಸಿಗುತ್ತವೆ.

ವ್ಯಕ್ತಿಯ ಬುದ್ಧಿ, ಪ್ರಬುದ್ಧತೆ ತಲುಪಿದಾಗ ಅವನ ಮನಸ್ಸಿನಲ್ಲಿ ಏಳುವ ಪ್ರಶ್ನೆಯೇ ‘ಜಗತ್ತಿನಲ್ಲಿ ನಡೆಯುವ ಈ ಘಟನೆಗಳ ಹಿಂದಿನ ಕಾರಣವೇನು?’ ಎಂದು ತಿಳಿಯಲೆತ್ನಿಸುವುದು. ಆಗ ಅನಿವಾರ್ಯವಾಗಿ ಅವನು ಸಂತನೋ, ವಿಜ್ಞಾನಿಯೋ ಆಗುವುದೇ ನಿಜ. ಮಾನವ ಇತಿಹಾಸದಲ್ಲಿ ಪ್ರಬಲ ಸತ್ಯಾನ್ವೇಷಿಗಳು ಇವರೇ. ಇವರ ಅನ್ವೇಷಣೆಗಳೇ ಇಂದು ನಮ್ಮೆಲ್ಲರ ಜೀವನಕ್ಕೆ ಅರ್ಥವನ್ನು ಕೊಟ್ಟಿರುವುದು. ವಿಜ್ಞಾನ ಸಾಧನವನ್ನು ನಿರ್ವಿುಸಿದರೆ ಅಧ್ಯಾತ್ಮ ಸಿದ್ಧಿಯನ್ನು ತರುತ್ತದೆ. ಆಂಶಿಕ ಜ್ಞಾನ ಉಳ್ಳವರು ಮಾತ್ರ ವಿಜ್ಞಾನ ಮತ್ತು ಧರ್ಮಗಳನ್ನು ಪ್ರತ್ಯೇಕ ಇಲ್ಲವೆ ವಿರೋಧ ಎಂದು ಭಾವಿಸುತ್ತಾರೆ. ಆದರೆ ಅದು ಹಾಗಲ್ಲ, ಅವು ಎರಡೂ ಪೂರಕ. ಎರಡು ಕ್ಷೇತ್ರಗಳಲ್ಲಿಯೂ ಮೂಲವಸ್ತುವನ್ನು ಹುಡುಕು ವುದೇ ಪ್ರಧಾನ ಉದ್ದೇಶ. ಕಳೆದ ಒಂದು ಶತಮಾನದಿಂದ ವಿಜ್ಞಾನದ ಏಕಮೇವ ಗುರಿ ಮೂಲವಸ್ತು ಯಾವುದು ಎಂದು ತಿಳಿಯುವುದರ ಕಡೆಯೇ. ಈಗ ಅದು ಬಂದು ನಿಂತಿರುವುದು ಬಿಗ್ ಬ್ಯಾಂಗ್​ನ ಹೊಸ್ತಿಲಲ್ಲಿ. ಈ ಅನ್ವೇಷಣೆಗಳ ಎರಡು ವಾಹಿನಿಗಳೇ ಸಾಪೇಕ್ಷವಾದ ಮತ್ತು ಕ್ವಾಂಟಮ್ ವಿಜ್ಞಾನ.

ಕ್ವಾಂಟಮ್ ವಿಜ್ಞಾನ, ಪ್ರಜ್ಞಾಶಾಸ್ತ್ರ ಮತ್ತು ಸೃಷ್ಟಿಶಾಸ್ತ್ರಗಳ ಕುರಿತ ಅನೇಕ ಜನಪ್ರಿಯ ಪುಸ್ತಕಗಳ ಅಮೆರಿಕನ್ ಲೇಖಕ, ಪ್ರೊ.ಜಾಕ್ ಸರ್ಫಾಟಿ ಒಂದೆಡೆ ಹೀಗೆ ಹೇಳುತ್ತಾರೆ, suspect that General Relativity and Quantum theory are two complimentary aspects of a deeper theory that will involve a kind of consciousness. The cosmic consciousness or the Mahat of Sankhya philosophy of the Hindus is the basis of entire creation ಎಂದು. ಆದರೆ ಬಾಹ್ಯಶೋಧನೆಯ ದಾರಿಯಲ್ಲೇ ಹೊರಟ ವೇದಕಾಲದ ಋಷಿಗಳು ಬೇಗನೆ ಕಂಡುಕೊಂಡಿದ್ದು ಈ ಮಾರ್ಗವು ಮೂಲವನ್ನು ಕೊಡಲಾರದು, ಅದರ ಕ್ಷೇತ್ರ ಆಂತರಿಕ ಎಂದು. ಈ ಆಂತರಿಕ ಸೆಲೆಯ ಮೂಲವನ್ನೇ ದೇವರು ಎನ್ನುವುದು. ಇಡೀ ವಿಶ್ವದ ಅಂತಿಮ ಗುರಿಯೂ ದೇವರೇ.

ತೈತರಿಯ ಉಪನಿಷತ್ತು ‘ಯಾವುದರಿಂದ ಎಲ್ಲವೂ ಬಂದಿದೆಯೋ, ಯಾವುದರಲ್ಲಿ ಎಲ್ಲವೂ ನೆಲೆಸಿರುವುದೋ, ಯಾವುದರಲ್ಲಿ ಎಲ್ಲವೂ ಕೊನೆಗೊಳ್ಳುವುದೋ, ಅದರ ಬಗ್ಗೆ ಜಿಜ್ಞಾಸೆ ಮಾಡೋಣ; ಅದೇ ಬ್ರಹ್ಮ’ ಎಂದು ಸಂಶಯಕ್ಕೆಡೆಯಿಲ್ಲದಂತೆ ಸ್ಪಷ್ಟವಾಗಿ ಘೊಷಿಸುತ್ತಿದೆ. ಈ ಬ್ರಹ್ಮ (ಚಲನಶೀಲ)ವೇ ದೇವರು ಅಥವಾ ಸೃಷ್ಟಿಮೂಲ. ಇದನ್ನೇ ಯೋಗ, ‘ಪರಮಾತ್ಮ’ ಎಂದು ಕರೆದರೆ ಪುರಾಣ ‘ಭಗವಾನ್’ ಎನ್ನುತ್ತದೆ. ಈ ಆದಿ ಮತ್ತು ಅಂತ್ಯಗಳ ನಡುವಿನ ಪ್ರಕ್ರಿಯೆಯೇ ವಿಕಾಸವಾದ! ಆದ್ದರಿಂದ ದೇವರು ಎಂದರೇನು ಎನ್ನುವ ಪ್ರಶ್ನೆ ಆಧ್ಯಾತ್ಮಿಕತೆಯಿಂದ ಹೆಚ್ಚಾಗಿ ವಿಕಾಸವಾದಕ್ಕೆ ಸಂಬಂಧಿಸಿದ್ದು. ದೇವರ ಬಗೆಗಿನ ಜ್ಞಾನ, ಪರಿಚಯ ಮತ್ತು ಮೂಲ ಹಾಗೂ ಗುರಿಗಳ ನಡುವಿನ ಸಾಮ್ಯತೆ ಮತ್ತು ಇವರೆಡರ ನಡುವಿನ ಈ ವಿಷಯಗಳ ಠ್ಟಿಚ್ಞಠಜಿಠಿಜಿಟ್ಞ ಕಡೆಗೆ ನಮಗೆ ಇರಬೇಕಾದ ಧೋರಣೆ ಏನು? ಎನ್ನುವ ವಿಷಯಗಳಿಗಿಂತಲೂ ಪ್ರಸ್ತುತ ಮತ್ತು ಗಂಭೀರ ವಿಚಾರ ಮತ್ತೊಂದಿಲ್ಲ. ದೇವರ ಬಗೆಗಿನ ಜ್ಞಾನವಿಲ್ಲದೆ ಮನುಷ್ಯನನ್ನು ಎತ್ತರಿಸುವ ಯಾವ ವಿಜ್ಞಾನವೂ ಸ್ಪಷ್ಟತೆಯನ್ನು ಕಂಡಿರುವುದಿಲ್ಲ. ಪೊ›ಫೆಸರ್ ಮ್ಯಾಕ್ಸ್ ಮುಲ್ಲರ್ ಒಂದು ಕಡೆ ದಾಖಲಿಸುತ್ತಾರೆ, ಭಾರತೀಯ ತತ್ತ್ವಜ್ಞನೊಬ್ಬ ಸಾಕ್ರೇಟಿಸನನ್ನು ಭೇಟಿ ಮಾಡಿದ. ಮಾತಿನ ನಡುವೆ ಸಾಕ್ರೇಟಿಸ್- ‘ನಿಮ್ಮ ಗಮನವೆಲ್ಲ ದೇವರಕಡೆಗೆ, ಆದರೆ ನಮ್ಮ ಗಮನ, ಮನುಷ್ಯನೆಡೆಗೆ’ ಎನ್ನುತ್ತಾನೆ. ಭಾರತೀಯ ತತ್ತ್ವಜ್ಞ, ‘ದೇವರನ್ನು ತಿಳಿಯದೆ ಮನುಷ್ಯನನ್ನು ತಿಳಿಯಲು ಹೇಗೆ ಸಾಧ್ಯ?’ ಎನ್ನುತ್ತಾನೆ. ಇಲ್ಲಿ ಯಾವ ಮಾನವತಾವಾದವೂ ಪ್ರಧಾನವಾಗಿ ನಿಂತಿರುವುದೇ ದೈವತ್ವದ ಮೇಲೆ ಎನ್ನುವುದು ಸ್ಪಷ್ಟವಾಗುತ್ತದೆ. ಆದ್ದರಿಂದ ವಿಕಾಸದ ಪ್ರಯಾಣ ಮಾನವತೆಯಾದರೆ, ಅದರ ಗುರಿ ದೇವನಾಗುವುದು. ದೇವನನ್ನು ಕಂಡವನು ಮಾನವ ಜನ್ಮದ ಎಲ್ಲ ಮಜಲುಗಳನ್ನು ಸಂಪೂರ್ಣವಾಗಿ ಅರಿತವನು; ಅವೆಲ್ಲದರ ಮೇಲೆ, ಸಂಪೂರ್ಣವಾಗಿ ನಿಯಂತ್ರಣ ಹೊಂದಿರುವವನು ಕೂಡ. ಆದ್ದರಿಂದ ಮನುಷ್ಯನನ್ನು ಕಟ್ಟಲು, ಜನಾಂಗಗಳನ್ನು ಕಟ್ಟಲು ದೈವತ್ವಕ್ಕಿಂತ ಪರಿಣಾಮಕಾರಿಯಾದ ಸಮರ್ಥವಾದ ವಿಧಾನ ಮತ್ತಾವುದೂ ಇಲ್ಲ. ದೈವತ್ವವನ್ನು ಸಾಧಿಸಿದವರು ಮಾನುಷ ಜನಾಂಗಕ್ಕೆ ಮಾಡಿರುವ ಸೇವೆ ವಿಶಿಷ್ಟವಾದದ್ದು.

ಇತಿಹಾಸದ ಉದ್ದಕ್ಕೂ ಸ್ಪೂರ್ತಿಯ ಸೆಲೆ ಅವರೇ. ಸ್ಪೂರ್ತಿ ಮನುಷ್ಯನಿಗೆ ಮರುಜನ್ಮವನ್ನೇ ಕೊಡಬಲ್ಲದು. ವಾಲ್ಮೀಕಿ, ವಿಶ್ವಾಮಿತ್ರ, ವೇಮನ, ಇತ್ಯಾದಿಗಳ ಪರಿವರ್ತನೆಗಳು ನಮ್ಮನ್ನು ಅವಾಕ್ಕಾಗಿಸುತ್ತವೆ. ಆದ್ದರಿಂದಲೇ ಮನುಷ್ಯನ ಕುರಿತ ಸಾವಿರಾರು ವರ್ಷಗಳ ಅಧ್ಯಯನ ಪೂರೈಸಿದ ಸನಾತನ ಋಷಿಗಳು ಪ್ರತಿ ವ್ಯಕ್ತಿಯ ಮುಂದೆ ಇಟ್ಟ ಪ್ರಧಾನ ಗುರಿಯೇ ದೈವತ್ವವನ್ನು ಅರಸುವುದು. ಇದೇ ನಿಟ್ಟಿನಲ್ಲಿ ತನಗೇ ಗೊತ್ತಿಲ್ಲದೆ ಸಾಗುತ್ತಿರುವ ವಿಜ್ಞಾನಿ ಕೂಡ ಮಾನವಸೇವೆಯ ಪ್ರಕ್ರಿಯೆಯಲ್ಲಿ ಹಿಂದೆಯೇನೂ ಬಿದ್ದಿಲ್ಲ.

ಈ ಚಿಂತನೆಗಳ ಹಿನ್ನೆಲೆಯಲ್ಲೇ ನಾವು ನರೇಂದ್ರ ಮತ್ತು ಶ್ರೀರಾಮಕೃಷ್ಣರ ಪ್ರಥಮ ಭೇಟಿಯನ್ನು ವಿಶ್ಲೇಷಿಸಬೇಕು. ಅದು 1881ರ ನವೆಂಬರ್ ತಿಂಗಳು. ಪೂರ್ವಸಂಸ್ಕಾರಗಳ ಫಲದಿಂದಾಗಿಯೋ ಮನೆಯಲ್ಲಿನ ತೀವ್ರ ಆಧ್ಯಾತ್ಮಿಕ ವಾತಾವರಣ ಪರಿಣಾಮವಾಗಿಯೋ ನರೇಂದ್ರನಾಥನಲ್ಲಿ ದೇವರನ್ನು ಕಾಣಬೇಕೆಂಬ ಬೆಂಕಿ ಜ್ವಾಲಾಮುಖಿಯಂತೆ ಆವರಿಸಿಕೊಂಡಿತ್ತು. ಅಂದಿನ ಬ್ರಹ್ಮ ಸಮಾಜದ ಮುಖ್ಯಸ್ಥರಾದ ಮಹರ್ಷಿ ದೇವೇಂದ್ರನಾಥ ಠಾಕೂರರಿಂದ ಹಿಡಿದು ಖ್ಯಾತಿವೆತ್ತ ಒಬ್ಬೊಬ್ಬರನ್ನೂ ಅವನು ಕೇಳುತ್ತಿದ್ದುದು, ‘ನೀವು ದೇವರನ್ನು ಕಂಡಿದ್ದೀರಾ’ ಎಂದು. ಎಲ್ಲೂ ಉತ್ತರ ಬಾರದೆ ನಿರಾಶನಾಗಿದ್ದಾಗ ಸಂಬಂಧಿ ರಾಮಚಂದ್ರ ದತ್ತ ‘ನಿನಗೆ ದೇವರು ಬೇಕಾದರೆ ಅಲ್ಲಿ ಇಲ್ಲಿ ಏಕೆ ಅಲೆಯುವೆ, ನೇರವಾಗಿ ದಕ್ಷಿಣೇಶ್ವರದ ಶ್ರೀರಾಮಕೃಷ್ಣರ ಬಳಿ ಹೋಗು’ ಎಂದ. ಕೆಲ ಗೆಳೆಯರ ಒಡಗೂಡಿ ಒಂದು ಬೆಳಗ್ಗೆ ದಕ್ಷಿಣೇಶ್ವರಕ್ಕೆ ಧಾವಿಸಿದ ನರೇಂದ್ರ ಶ್ರೀರಾಮಕೃಷ್ಣರ ಬಳಿ ಸಾರಿ ನೇರವಾಗಿ ಮುಂದೆ ಇಟ್ಟ ಪ್ರಶ್ನೆ ‘ಮಹಾಶಯರೇ ನೀವು ದೇವರನ್ನು ಕಂಡಿದ್ದೀರಾ?’ ಎಂದು. ಬಾಣದಂತೆ ಬಂತು ಉತ್ತರ, ‘ಹೌದು, ಕಂಡಿದ್ದೇನೆ, ಈಗ ನಿನ್ನನ್ನು ಕಾಣುತ್ತಿರುವೆ ನೋಡು, ಇದಕ್ಕಿಂತಲೂ ಸ್ಪಷ್ಟವಾಗಿ ಕಂಡಿದ್ದೇನೆ, ಬೇಕಿದ್ದರೆ ನಿನಗೂ ತೋರಿಸುತ್ತೇನೆ. ಆದರೆ ಮಗು ದೇವರು ಯಾರಿಗೆ ಬೇಕಿದೆ ಹೇಳು? ಜನರು ಹೆಂಡತಿ-ಮಕ್ಕಳು, ಹಣ-ಆಸ್ತಿಗಾಗಿ ಕೊಡಗಟ್ಟಲೆ ಕಣ್ಣೀರು ಸುರಿಸುತ್ತಾರೆ; ಆದರೆ ದೇವರಿಗಾಗಿ ಅಳುವವರು ಯಾರಿದ್ದಾರೆ ಹೇಳು? ದೇವರಿಗಾಗಿ ಪ್ರಾಮಾಣಿಕವಾಗಿ ಅತ್ತದ್ದೇ ಆದರೆ ಅವನು ದರುಶನ ಕೊಟ್ಟೆ ಕೊಡುತ್ತಾನೆ’.

ಕೇವಲ ಮಾತಾಗಿ ಉಳಿಯಲಿಲ್ಲ ಈ ನುಡಿ. ಶ್ರೀರಾಮಕೃಷ್ಣರು ನರೇಂದ್ರನಿಗೆ ದೇವರನ್ನು ನೋಡುವ ಆ ಅನುಭವವನ್ನು ಸವಿದು ಆನಂದಿಸುವ ಎಲ್ಲ ರಾಜಮಾರ್ಗಗಳಲ್ಲೂ ತಮ್ಮೊಡನೆ ಕರೆದೊಯ್ದರು. ಸಾಕಾರ, ನಿರಾಕಾರ, ಸಗುಣ, ನಿರ್ಗಣಗಳೆಲ್ಲ ಇಚ್ಛಾಮಾತ್ರದಿಂದ ನರೇಂದ್ರನಿಗೆ ಸಿಗುವಂತಾಯಿತು. ಆದರೆ ಅವನು ಹುಟ್ಟಿದ್ದು ತಾನು ಮಾತ್ರ ಅವನ್ನು ಸವಿಯಲಲ್ಲ. ಆದ್ದರಿಂದ ತಮ್ಮ ಕೊನೆಗಾಲದಲ್ಲಿ ಶ್ರೀರಾಮಕೃಷ್ಣರು ತಮ್ಮಲ್ಲಿನ ಅಪಾರ ಆಧ್ಯಾತ್ಮಿಕ ವಾರಿಧಿಯನ್ನೇ ನರೇಂದ್ರನಿಗೆ ವರ್ಗಾಯಿಸಿ ಅದನ್ನು ಜಗತ್ತಿಗೆ ಹಂಚುವಂತೆ ಮಾಡಿದರು. ಆ ವಾರಿಧಿಯ ಒಂದು ಹನಿಯನ್ನು ಸವಿದವರೂ ಮುಕ್ತರಾಗಿ ಹೋಗುತ್ತಿದ್ದುದನ್ನು ಶ್ರೀಶಾರದಾ ದೇವಿಯವರು ತಮ್ಮ ದರ್ಶನವೊಂದರಲ್ಲಿ ಸ್ಪಷ್ಟವಾಗಿ ಕಂಡರು. ದೇವರನ್ನು ಕಾಣ ಹೊರಟ ಕೆಲ ವ್ಯಕ್ತಿಗಳು ಜಗತ್ತಿನ ಇತಿಹಾಸವನ್ನೇ ಬದಲಿಸಿದ ಪರಿ ಹೀಗೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net