

| ಮಂಡಗದ್ದೆ ಪ್ರಕಾಶ್ಬಾಬು ಕೆ.ಆರ್.
ಮಹಿಷಾಸುರನನ್ನು ದುರ್ಗಾದೇವಿಯು ಸಂಹಾರ ಮಾಡಿದಾಗ, ಆತನ ಸೋದರಿ ಮಹಿಷಿಗೆ ಎಲ್ಲಿಲ್ಲದ ಕೋಪ ಬರುತ್ತದೆ. ತನ್ನ ಸೋದರನ ಸಾವಿಗೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿ ದೀರ್ಘಕಾಲ ತಪಸ್ಸು ಮಾಡಿ ಬ್ರಹ್ಮದೇವನನ್ನು ಒಲಿಸಿಕೊಳ್ಳುತ್ತಾಳೆ. ಶಿವ ಮತ್ತು ವಿಷ್ಣುವಿನ ಮಗನನ್ನು ಹೊರತುಪಡಿಸಿ ಯಾರಿಂದಲೂ ತನಗೆ ಸಾವು ಬರಬಾರದೆಂದು ವರವನ್ನು ಪಡೆಯುತ್ತಾಳೆ. ಪುರುಷರಿಬ್ಬರು ಮಗುವನ್ನು ಪಡೆಯಲು ಸಾಧ್ಯವಿಲ್ಲವೆಂದು ಭಾವಿಸಿದ ಮಹಿಷಿ ಎಲ್ಲರಿಗೂ ತೊಂದರೆ ಕೊಡಲು ಪ್ರಾರಂಭಿಸುತ್ತಾಳೆ.
ಮಹಿಷಿಯು ದೇವಲೋಕಕ್ಕೆ ಬಂದು ಹಾನಿ ಉಂಟು ಮಾಡಿದಾಗ ಎಲ್ಲ ದೇವತೆಗಳು ವಿಷ್ಣು ಮತ್ತು ಶಿವನ ಬಳಿ ಹೋಗುತ್ತಾರೆ. ಆ ಸಮಯದಲ್ಲಿ ವಿಷ್ಣು ಒಂದು ಉಪಾಯ ರೂಪಿಸುತ್ತಾನೆ. ಸಮುದ್ರಮಂಥನದ ವೇಳೆ ರಾಕ್ಷಸರು ಅಮೃತ ಕುಡಿಯುವುದನ್ನು ತಪ್ಪಿಸಲು ಮೋಹಿನಿ ರೂಪವನ್ನು ತಾಳಿದ್ದ ವಿಷ್ಣು ಮತ್ತೆ ಮೋಹಿನಿ ರೂಪ ತಳೆದರೆ ಆಗ ಶಿವನೊಂದಿಗಿನ ಮಿಲನದಿಂದ ದೈವಿಕ ಮಗುವನ್ನು ಪಡೆಯಬಹುದು. ಇದರಿಂದ ದುರ್ಗೆಯ ಶಕ್ತಿಯೊಂದಿಗೆ ಮಹಿಷಿಯನ್ನು ಮಣಿಸಬಹುದು ಎನ್ನುತ್ತಾನೆ.
ಹೀಗೆ ಶಿವ ಮತ್ತು ಮೋಹಿನಿಯ (ವಿಷ್ಣುವಿನ ನಾರಿ ರೂಪ) ಅಂಶದಿಂದ ಹುಟ್ಟಿದವನು ಅಯ್ಯಪ್ಪ ಸ್ವಾಮಿ. ಹಾಗಾಗಿ ಅವನು ಶಿವ ಮತ್ತು ವಿಷ್ಣುವಿನ ದೈವಿಕ ಮಗ. ಹಿಂದು ಧರ್ಮದಲ್ಲಿ ಪೂಜನೀಯವಾಗಿರುವ ಭಗವಾನ್ ವಿಷ್ಣುವಿನ ಮಗನಿಗೆ ಶಿವನು ತಂದೆ. ಅಯ್ಯಪ್ಪ ಹುಟ್ಟಿದ ಬಳಿಕ ಆತನ ಕೊರಳಿಗೆ ಬಂಗಾರದ ಮಣಿಯನ್ನು ಕಟ್ಟುತ್ತಾರೆ ಹಾಗೂ ಆತನನ್ನು ಪಂಪಾನದಿ ತೀರದಲ್ಲಿ ಬಿಡುತ್ತಾರೆ. ಮಕ್ಕಳಿಲ್ಲದ ರಾಜನೊಬ್ಬ ಈ ನದಿ ಪಕ್ಕದಲ್ಲಿ ಸಾಗುತ್ತಿದ್ದಾಗ ಮಗುವಿನ ಅಳು ಕೇಳಿಸುತ್ತದೆ. ಹುಡುಕುತ್ತಾ ಹೋಗಿ ಮಗುವನ್ನು ಎತ್ತಿಕೊಂಡು ಅರಮನೆಗೆ ಬರುತ್ತಾನೆ. ತನ್ನ ಸ್ವಂತ ಮಗನಂತೆ ಸಾಕುತ್ತಾನೆ. ಕೆಲವು ವರ್ಷಗಳ ನಂತರ ರಾಣಿ ಗರ್ಭ ಧರಿಸಿ ಮಗುವಿಗೆ ಜನ್ಮ ನೀಡುತ್ತಾಳೆ. ಆದರೆ, ರಾಜ ಮಾತ್ರ ಮಣಿಕಂಠನೇ ತನ್ನ ಉತ್ತರಾಧಿಕಾರಿ ಆಗಬೇಕೆಂದು ಬಯಸುತ್ತಾನೆ. ರಾಣಿ ತನ್ನ ಮಗನೇ ರಾಜನಾಗಬೇಕೆಂದು ಹಠ ಹಿಡಿಯುತ್ತಾಳೆ. ಮಣಿಕಂಠನನ್ನು ಕೊಲ್ಲಲು ಸಂಚು ರೂಪಿಸುತ್ತಾಳೆ. ಅದರ ಪ್ರಕಾರ, ರಾಣಿ ತನಗೆ ಅನಾರೋಗ್ಯವೆಂದು ನಟಿಸಬೇಕು, ಹುಲಿಯ ಹಾಲಿನಿಂದ ಮಾತ್ರ ರಾಣಿ ಗುಣಮುಖವಾಗಲು ಸಾಧ್ಯ ಎಂದು ವೈದ್ಯರು ಹೇಳಬೇಕು, ಮಣಿಕಂಠನು ಹುಲಿಯ ಹಾಲನ್ನು ತರಲು ಕಾಡಿಗೆ ಹೋಗಬೇಕು... ಇದು ಸಂಚು. ಎಲ್ಲವೂ ಹಾಗೆಯೇ ನಡೆಯುತ್ತದೆ. ಹುಲಿಯು ಮಣಿಕಂಠನನ್ನು ಮುಗಿಸಿಬಿಡುತ್ತದೆ ಎಂಬುದು ರಾಣಿಯ ಲೆಕ್ಕಾಚಾರವಾಗಿರುತ್ತದೆ. ಆದರೆ ಮಣಿಕಂಠನು ಹುಲಿ ಹಾಲನ್ನು ತರಲು ಕಾಡಿಗೆ ಹೋಗುವುದಕ್ಕೆ ಸಂತೋಷದಿಂದಲೇ ಸಿದ್ಧನಾಗುತ್ತಾನೆ.
ಕಾಡಿನಲ್ಲಿ ಮಣಿಕಂಠನಿಗೆ ಮಹಿಷಿ ಎದುರಾಗುತ್ತಾಳೆ. ಅವರಿಬ್ಬರ ನಡುವೆ ದೀರ್ಘ ಕಾಳಗ ನಡೆಯುತ್ತದೆ. ಕೊನೆಯಲ್ಲಿ ಮಹಿಷಿಯನ್ನು ಮಣಿಕಂಠ ಸಂಹರಿಸುತ್ತಾನೆ. ಹುಲಿಯ ಹಾಲು ತರಲು ಹೋದಾಗ ಅಲ್ಲಿ ಶಿವ ಎದುರಾಗಿ, ಮಣಿಕಂಠನ ಹುಟ್ಟಿನ ರಹಸ್ಯವನ್ನು ತಿಳಿಸುತ್ತಾನೆ. ಮಣಿಕಂಠನು ಶಬರಿಮಲೆಯಿಂದ ಹುಲಿ ಸವಾರಿ ಮಾಡಿಕೊಂಡು ಮರಳಿ ಬರುವ ಹೊತ್ತಿಗೆ ರಾಜನಿಗೆ ರಾಣಿಯ ಕಪಟ ಸಂಚು ಗೊತ್ತಾಗಿಬಿಟ್ಟಿರುತ್ತದೆ. ಆತನು ಮಣಿಕಂಠನಲ್ಲಿ ಕ್ಷಮೆ ಕೋರುತ್ತಾನೆ. ಆದರೆ ಮಣಿಕಂಠ ಅರಮನೆಯಲ್ಲಿ ಇರಲು ಒಪ್ಪಿಕೊಳ್ಳುವುದಿಲ್ಲ. ರಾಜನನ್ನು ಸಮಾಧಾನಪಡಿಸಿ, ತಾನು ‘ಅಯ್ಯಪ್ಪ’ನ ರೂಪದಲ್ಲಿ ಯಾವಾಗಲೂ ಜನರ ಒಳಿತಿಗಾಗಿ ಸಮೀಪದ ಸ್ಥಳದಲ್ಲಿ ನೆಲೆಯೂರುತ್ತೇನೆಂದು ಹೇಳುತ್ತಾನೆ. ಅವನು ನೆಲೆಯೂರಿದ ಬೆಟ್ಟದಲ್ಲಿ ದೇವಾಲಯ ನಿರ್ವಣವಾಗುತ್ತದೆ. ಇಂತಹ ಪ್ರತೀತಿ ಇರುವ ಆ ಪ್ರದೇಶಕ್ಕೆ ಈಗಲೂ ಲಕ್ಷಾಂತರ ಭಕ್ತರು ಕಠಿಣ ಹಾದಿಯನ್ನು ಸವೆಸಿ, ಭಕ್ತಿ ಭಾವದಿಂದ ಹೋಗುತ್ತಾರೆ. ಅಯ್ಯಪ್ಪ ದೇವರನ್ನು ಪೂಜಿಸಿದರೆ ಭಕ್ತರ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ, ಕಷ್ಟ-ಕಾರ್ಪಣ್ಯಗಳು ದೂರವಾಗುತ್ತವೆ ಎಂಬ ನಂಬಿಕೆ ಬೇರೂರಿದೆ.
(ಲೇಖಕರು ಅಧ್ಯಾತ್ಮ ಚಿಂತಕ, ಹವ್ಯಾಸಿ ಬರಹಗಾರ)