

ವಿಶ್ವಸಮುದಾಯದಲ್ಲಿ ಶಾಂತಿವ್ಯವಸ್ಥೆಗಾಗಿ, ರಾಷ್ಟ್ರ-ರಾಷ್ಟ್ರಗಳ ನಡುವೆ ಸೌಹಾರ್ದ ಮೂಡಿಸುವ ದಿಶೆಯಲ್ಲಿ ಭಾರತ ಮಾನ್ಯತೆ-ಮನ್ನಣೆ ಗಳಿಸಿದೆ. ಪ್ರಪಂಚದಲ್ಲಿಯೇ ಬೃಹತ್ ಪ್ರಜಾತಂತ್ರವಾಗಿದೆ ನಮ್ಮ ಭಾರತ. ನಮ್ಮ ಜನನಾಯಕರು ಶಾಂತಿ- ಸೌಹಾರ್ದದ ತಳಹದಿಯ ಮೇಲೆ ವಿದೇಶಗಳೊಂದಿಗೆ ಮೈತ್ರಿ, ಬಾಂಧವ್ಯ ಸಾಧಿಸಿದವರು. ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪುನರುಚ್ಚರಿಸಿದಂತೆ, ‘ಸರ್ವೆಜನಾಃ ಸುಖಿನೋಭವಂತು, ಸಮಸ್ತ ಸನ್ಮಂಗಳಾನಿಭವಂತು’-ಇದು ನಮ್ಮ ರೀತಿ, ನೀತಿ, ನಡವಳಿಕೆ.
ಅಪ್ರಚೋದಿತ ದಾಳಿ: ಇಂತಹ ಆದರ್ಶ ಹಿನ್ನೆಲೆಯ ವಿದೇಶಾಂಗ ನೀತಿಗಳನ್ನು ಅನುಷ್ಠಾನಗೊಳಿಸುತ್ತಿರಬೇಕಾದರೆ ಭಾರತದ ಲಡಾಖ್ ಗಡಿಪ್ರದೇಶದಲ್ಲಿ ಯಾವ ಪ್ರಚೋದನೆಯೂ ಇಲ್ಲದ ವಾತಾವರಣದಲ್ಲಿ, ದುರ್ಬುದ್ಧಿಯಿಂದ ಭಾರತೀಯ ಯೋಧರ ಮೇಲೆ ನೆರೆರಾಷ್ಟ್ರ ಚೀನಾ ಹಲ್ಲೆ, ಆಕ್ರಮಣ ನಡೆಸಿದೆ. ಗಡಿರಕ್ಷಣೆಯ ಗುರುತರ ಕರ್ತವ್ಯದಲ್ಲಿದ್ದ 20 ಭಾರತೀಯ ಯೋಧರು ವೀರಮರಣ ಹೊಂದಿದ್ದಾರೆ. ಚೀನಾ ಸೈನಿಕರ ರಾಕ್ಷಸಿಕೃತ್ಯದಿಂದ ಭಾರತ ಕಳವಳಕ್ಕೊಳಗಾಗಿದೆ. ಇಡೀ ರಾಷ್ಟ್ರ ಒಂದಾಗಿ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿದೆ.
ಚೀನಾದೇಶದ ಅಪ್ರಚೋದಿತ ಘರ್ಷಣೆ ಮತ್ತು ದುಷ್ಕೃತ್ಯಕ್ಕೆ ವಿಶ್ವಸಮುದಾಯ ವಿರೋಧ ವ್ಯಕ್ತಪಡಿಸಿದೆ. 60 ವರ್ಷಗಳಿಗೂ ಹೆಚ್ಚುಕಾಲ ದಿಂದ ಚೀನೀನಾಯಕರು ರಾಕ್ಷಸೀ ಧೋರಣೆಯನ್ನು ಮುಂದುವರಿಸಿದ್ದಾರೆ. 1962ರಲ್ಲಿ ಹಿಮಾಲಯ ತಪ್ಪಲಿನ ಟಿಬೆಟನ್ನು ಕಬಳಿಸಿದಾಗ ಹಿರಿಯ ರಾಜತಂತ್ರಜ್ಞರೊಬ್ಬರು ಹೇಳಿದ ಮಾತು ನೆನಪಿಗೆ ಬರುತ್ತಿದೆ. ಆಗ ನಾನಿನ್ನೂ ಚಿಕ್ಕವನು. ಆದರೆ, ಅವರ ಮಾತು ಇಂದಿಗೂ ನನ್ನ ಸ್ಮೃತಿಪಟಲದಲ್ಲಿದೆ.
‘ಟಿಬೆಟ್ ನುಂಗಿದ ಬಳಿಕ ಚೀನಾ ತನ್ನ ಆಕ್ರಮಣಕಾರಿ ಚಾಳಿಯನ್ನು ಬಿಡುವುದಿಲ್ಲ, ಹಿಮಾಲಯ ಸರಹದ್ದಿನ ಭೂಪ್ರದೇಶಗಳನ್ನೆಲ್ಲ ನುಂಗುವ ಹುನ್ನಾರ ಚೀನಾದ್ದು. ಲಡಾಖ್, ನೇಪಾಳ, ಸಿಕ್ಕಿಂ, ಭೂತಾನ್ ಮತ್ತು ಅರುಣಾಚಲಗಳನ್ನು ಕಬಳಿಸುವ ದುರಾಸೆ ಆ ರಾಷ್ಟ್ರಕ್ಕಿದೆ’. ಅವರ ಮಾತು ಸತ್ಯ. ಪ್ರಧಾನಿ ನರೇಂದ್ರ ಮೋದಿ ಯುದ್ಧೋನ್ಮಾದದಲ್ಲಿ ಇರುವ ಚೀನಾಕ್ಕೆ ಸ್ಪಷ್ಟ ಸಂದೇಶ ನೀಡಿದ್ದಾರೆ. ‘ಭಾರತ ಶಾಂತಿಪ್ರಿಯ ರಾಷ್ಟ್ರವೆನ್ನುವುದು ನಿಜ. ಆದರೆ ಕೆಣಕಿದರೆ ಸಿಂಹ’ ಎಂದು ಗರ್ಜಿಸಿದ್ದಾರೆ. ‘ಹುತಾತ್ಮರಾದ ಭಾರತೀಯ ಯೋಧರ ಬಲಿದಾನ ವ್ಯರ್ಥ ಆಗಲು ಬಿಡುವುದಿಲ್ಲ’ ಎಂದು ವಚನ ನೀಡಿದ್ದಾರೆ. ಧೈರ್ಯ, ಸಾಹಸದ ಕಹಳೆ ಊದಿ ರಾಷ್ಟ್ರದ ಜನತೆಗೆ ಸಾಮರ್ಥ್ಯ ಸಾಧನೆಯ ಕರ್ತವ್ಯಪ್ರಜ್ಞೆ ತೋರಿದ್ದಾರೆ.
ಗಾಯದ ಮೇಲೆ ಬರೆ: ವಾಸ್ತವವಾಗಿ ಇದು ಯುದ್ಧಕ್ಕೆ ಸಮಯವಲ್ಲ, ಕರೊನಾ ಹೆಮ್ಮಾರಿಯನ್ನು ಹಿಮ್ಮೆಟ್ಟಿಸುವ ಹರಸಾಹಸದಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳೂ ಕೈಜೋಡಿಸಿರುವಾಗ ಚೀನಾದ ಹೀನ ನಡವಳಿಕೆ ಸರ್ವಥಾ ಮಾನ್ಯವಲ್ಲ. ಭಾರತೀಯರ ಜೀವನ ಕರೊನಾದಿಂದ ಅಲ್ಲೋಲಕಲ್ಲೋಲವಾಗಿರುವಾಗ ಚೀನಾ ಕಾಲುಕೆರೆದು ಯುದ್ಧಸನ್ನದ್ಧವಾಗಿರುವುದನ್ನು ಕಂಡು ನಾಗರಿಕ ಜಗತ್ತು ತಲೆತಗ್ಗಿಸುವಂತಾಗಿದೆ. ಚೀನಾ ವಿರುದ್ಧ ಇಡೀ ಭಾರತ ಆಕ್ರೋಶಗೊಂಡಿದೆ. ಏತನ್ಮಧ್ಯೆ ಸಹಜ ಮತ್ತು ಅವಶ್ಯಕವೆನ್ನುವ ಬೆಳವಣಿಗೆ ನಮ್ಮೆಲ್ಲರ ಗಮನ ಸೆಳೆದಿದೆ. ಚೀನಾವಸ್ತುಗಳ ಬಹಿಷ್ಕಾರಕ್ಕೆ ದೇಶಾದ್ಯಂತ ಆಗ್ರಹಪೂರ್ವಕ ಒತ್ತಾಸೆ ಪ್ರದರ್ಶಿತವಾಗುತ್ತಿದೆ. ಈ ಮೂಲಕ ಚೀನಾಕ್ಕೆ ಬುದ್ಧಿಕಲಿಸುವ ಉತ್ಕಟ ದೇಶಾಭಿಮಾನ ಪ್ರದರ್ಶನವಾಗುತ್ತಿದೆ.
ಆತ್ಮನಿರ್ಭರತೆಗೆ ಸದವಕಾಶ: ಇತ್ತೀಚೆಗೆ ಪ್ರಧಾನಮಂತ್ರಿ ಮೋದಿಯವರು ಹೇಳಿದ ಮಾತಿಗೆ ಭಾರತೀಯರು ಶಕ್ತಿ ತುಂಬುತ್ತಿದ್ದಾರೆ. ಮತ್ತೊಂದು ಸತ್ಯದರ್ಶನವೆಂದರೆ, ಮೋದಿಯವರ ಆತ್ಮನಿರ್ಭರತೆ ಮಾತು ಅಂದು ಗಾಂಧೀಜಿ ಉಪದೇಶಿಸಿದ ಸ್ವದೇಶಿ ಆಂದೋಲನದ ಉತ್ತರಾರ್ಧವಾಗಿದೆ. ‘ನಮ್ಮ ಶ್ರಮಜೀವಿಗಳು ಭಾರತದಲ್ಲಿಯೇ ಉತ್ಪಾದಿಸಿದ ವಸ್ತುಗಳನ್ನು ಬಳಸಿ, ವಿದೇಶಿ ವ್ಯಾಮೋಹ ತ್ಯೆಜಿಸಿ’ ಎಂದಿದ್ದರು ಗಾಂಧಿ. ಮೋದಿ ಈ ಮಾತಿಗೆ ಜೀವತುಂಬಿದ್ದಾರೆ. ನೆರೆರಾಷ್ಟ್ರಗಳ ಸಮರ ಕುಟಿಲ ನೀತಿಯಿಂದ ಭಾರತ ಕಳವಳಕ್ಕೆ ಈಡಾಗಿರುವುದೇನೋ ನಿಜ. ಈ ಯುದ್ಧ ನಮ್ಮಯೋಧರಿಗೆ ಬಿಟ್ಟಿದ್ದು ಅಂತ ಸುಮ್ಮನಾಗುವುದು ಬೇಡ. ಹಾಗಾದರೆ ಪ್ರಜೆಗಳಾಗಿ ನಮ್ಮ ಕರ್ತವ್ಯ ಮತ್ತು ಸಿದ್ಧತೆ ಏನು?
ಈ ಪ್ರಶ್ನೆಗೆ ಪ್ರಧಾನಿ ಮೋದಿ ನೀಡಿರುವ ಸಮಂಜಸ ಉತ್ತರವೇ ‘ಆತ್ಮನಿರ್ಭರತೆ’. ಮೋದಿಯವರಿಂದ ಸಮಯೋಚಿತ ಸಲಹೆ: ಚೀನೀಯರನ್ನು ಹಿಮ್ಮೆಟ್ಟಿಸಲು ನಾವು ಗಡಿಗಳಿಗೆ ಹೋಗಬೇಕಾದುದಿಲ್ಲ. ಸ್ವದೇಶಿ ಉತ್ಪನ್ನಗಳ ದಿನಬಳಕೆ ಮೂಲಕ ಶತ್ರುವನ್ನು ಗೆಲ್ಲಲು ನಮಗೆಲ್ಲರಿಗೂ ಅವಕಾಶವಿದೆ. ಗ್ರಾಮೋತ್ಪನ್ನಗಳ ಸ್ಥಿತಿಗತಿ ಕುರಿತು ಹೇಳಬಯಸುತ್ತೇನೆ. ಉದಾಹರಣೆಗೆ, ಊದಿನಕಡ್ಡಿ (ಅಗರಬತ್ತಿ). ದೇಶದ ಸಣ್ಣ ಪುಟ್ಟ ನಗರ, ಗ್ರಾಮಗಳಲ್ಲಿ ಗೃಹಿಣಿಯರು ಸಂಸಾರದ ವೆಚ್ಚ ತೂಗಿಸಲು ಊದಿನಕಡ್ಡಿ ಹೊಸೆದು, ಒಣಗಿಸಿ, ವ್ಯಾಪಾರ ಮಾಡಿ ಬದುಕು ಸಾಗಿಸುತ್ತಾರೆ. ನೂರಾರು ಮಂದಿ ಬಡಜನರ ಈ ದುಡಿಮೆ ಗೃಹಕೈಗಾರಿಕೆಯಾಗಿ ಬೆಳೆದಿದೆ. ನಮ್ಮಲ್ಲಿ ತಯಾರಾಗುವ ಅಗರಬತ್ತಿ ಗುಣಮಟ್ಟದಲ್ಲಿ ಉತ್ತಮವಾದದ್ದೇ. ಯಾವುದೇ ದೇಶದಿಂದ ನಮ್ಮಲ್ಲಿಗೆ ಆಮದಾಗಿ ಬರುವ ಸುಗಂಧಕಡ್ಡಿಗಿಂತ ಕಡಿಮೆಯೇನಿಲ್ಲ. ಆದರೆ ಒಣಪ್ರತಿಷ್ಠೆ, ಶ್ರೀಮಂತಿಕೆಯ ಅಹಂಕಾರ ಮತ್ತು ಜಾಹೀರಾತಿನ ಪ್ರಭಾವದಿಂದ ಭಾರತ ಪ್ರತಿ ವರ್ಷ ಸರಾಸರಿ 800 ಕೋಟಿ ರೂಪಾಯಿಗಳ ಊದುಬತ್ತಿಯನ್ನು ವಿನಾಕಾರಣ ತರಿಸಿಕೊಳ್ಳುತ್ತಿದೆ. ಇದು ನಮಗೆ ಭಾರಿ ನಷ್ಟ. ಬರೀ ಊದುಬತ್ತಿಗೆ ಅನ್ವಯಿಸುವ ಮಾತಲ್ಲ ಇದು. ದೇಶದ ಉದ್ದಗಲಕ್ಕೂ ಭಾರತದ ಆರ್ಥಿಕ ಸದೃಢತೆ ಮತ್ತು ಉದ್ಯೋಗಾವಕಾಶ ವಿಸ್ತರಣೆಗೆ ಆಸರೆಯಾಗಿ ಬೆಳೆಯಬಹುದಾಗಿದ್ದ ಗೃಹಕೈಗಾರಿಕೆಗಳು ಬಳಕೆದಾರರ ಅವಕೃಪೆಯಿಂದ ನೆಲಕಚ್ಚಿವೆ. ಇದನ್ನೇ ಮೋದಿಯವರು ‘ಲೋಕಲ್’ ಎಂದಿದ್ದಾರೆ.
ನಾನು ಈಗ ಮಂತ್ರಿ ಇರಬಹುದು, ಆದರೂ ನಾನೊಬ್ಬ ಮಧ್ಯಮವರ್ಗದ ಭಾರತೀಯ ನಾಗರಿಕ. ಇಂದಿನ ದಿನಮಾನದಲ್ಲಿ ದೇಶದ ಆರ್ಥಿಕತೆಗೆ ಮಧ್ಯಮ ವರ್ಗದ ಗ್ರಾಹಕರ ಅಭಿರುಚಿ ಮೌಲ್ಯಾಧಾರವಾಗಿದೆ. ಭಾರತದ 135 ಕೋಟಿ ಜನಸಂಖ್ಯೆಯಲ್ಲಿ 35 ಕೋಟಿ ಮಧ್ಯಮ ವರ್ಗದವರಿದ್ದಾರೆ. ನಮ್ಮ ದೇಶ ಇಂದು ದಿನನಿತ್ಯದ ಬಳಕೆಗಾಗಿ ಚೀನಾ ರಾಷ್ಟ್ರವೊಂದರಿಂದಲೇ -ಠಿ; 6.8 ಲಕ್ಷ ಕೋಟಿ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ನಮ್ಮಿಂದ ಚೀನಾಕ್ಕೆ ರಫ್ತಿನ ಪ್ರಮಾಣ ಕೇವಲ -ಠಿ; 1.7 ಲಕ್ಷ ಕೋಟಿ ಮಾತ್ರ.
ಭಾರತ ಪ್ರತಿವರ್ಷ 48 ದಶಲಕ್ಷ ಕೋಟಿ ಮೌಲ್ಯದ ವಿದೇಶಿ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ನಮ್ಮ ರಫ್ತಿನ ಮೊತ್ತ ಕೇವಲ 33 ದಶಲಕ್ಷ ಕೋಟಿ. ಒಟ್ಟು ಆಮದಿನಲ್ಲಿ ಚೀನಾದ ಪಾಲು ಶೇಕಡ 14ರಷ್ಟಿದೆ, ಚೀನಾದಲ್ಲಿ ತಯಾರಾದ ದಿನಬಳಕೆ ವಸ್ತುಗಳು ಎಲ್ಲ ಕ್ಷೇತ್ರಗಳಲ್ಲಿಯೂ ತುಂಬಿ ತುಳುಕಲು ಇದೇ ಕಾರಣ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳುವಂತೆ ‘ನಾವು ಚೀನಾದಿಂದ ಆಮದಾಗುತ್ತಿರುವ ಅನಾವಶ್ಯಕ ಹಾಗೂ ಐಶಾರಾಮಿ ವಸ್ತುಗಳನ್ನು ಬಳಕೆ ಮಾಡುವುದನ್ನು ನಿಲ್ಲಿಸಬೇಕಾಗಿದೆ’.
ಮತ್ತೊಂದು ಉದಾಹರಣೆ ನಮ್ಮ ಪ್ರಮುಖ ವಾಣಿಜ್ಯ ಉತ್ಪನ್ನ ರೇಷ್ಮೆ. ವಿಶ್ವಮಟ್ಟದ ರೇಷ್ಮೆಯನ್ನು ಭಾರತೀಯ ಪ್ರಜೆ ಕಣ್ಣೆತ್ತಿ ನೋಡುತ್ತಿಲ್ಲ. ಇಲ್ಲಸಲ್ಲದ ಹೋಲಿಕೆ ಮತ್ತು ಜಾಹೀರಾತಿನ ದಾರಿತಪ್ಪಿಸುವಿಕೆಯಿಂದಾಗಿ ಚೀನಾದ ಕೃತಕ ರೇಷ್ಮೆ ಭಾರತೀಯ ರೇಷ್ಮೆ ಉದ್ಯಮವನ್ನು ಸಂಕಷ್ಟದ ಸ್ಥಿತಿಗೆ ನೂಕಿದೆ. ನಮ್ಮ ಗ್ರಾಹಕರ ಪ್ರತಿಷ್ಠೆಯನ್ನು ತೃಪ್ತಿಪಡಿಸಲು ಭಾರತವು ಚೀನಾಕ್ಕೆ ಪ್ರತಿವರ್ಷ ಕನಿಷ್ಠ 800 ಕೋಟಿ ಹಣ ಸುರಿಯುತ್ತಿದೆ. ಕರ್ನಾಟಕ ಮತ್ತು ಪಶ್ಚಿಮ ಬಂಗಾಳದ ರೇಷ್ಮೆ ಇಂದಿಗೂ ವಿಶ್ವಮಟ್ಟದಲ್ಲಿ ನಂಬರ್ 1. ಇದೇ ಕಾರಣಕ್ಕಾಗಿ ವಿದೇಶಿ ವ್ಯಾಮೋಹ ಬೇಡವೆಂದು ರಾಷ್ಟ್ರೀಯ ಆಂದೋಲನ ನಡೆಸಿ ಮೋದಿಯವರು ಸ್ವದೇಶಿ ಸ್ವಾಭಿಮಾನಕ್ಕೆ ಶಕ್ತಿ ತುಂಬುತ್ತಿದ್ದಾರೆ. ಆತ್ಮನಿರ್ಭರತೆಯ ಪ್ರತೀಕವಾಗಿ ಮೋದಿ ಅನುಷ್ಠಾನಕ್ಕೆ ತಂದಿರುವ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಇದಕ್ಕೊಂದು ಉದಾಹರಣೆ.
ಚೀನಾ ದುರಾಕ್ರಮಣ ಮತ್ತು ಕರೊನಾ ಹೆಮ್ಮಾರಿಯ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಲು ಸ್ವದೇಶಿ ಅಸ್ತ್ರಕ್ಕಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ. ಗಾಂಧೀಜಿ ಮತ್ತು ಪ್ರಧಾನಮಂತ್ರಿ ಮೋದಿ ಆರ್ಥಿಕ ಸ್ವಾವಲಂಬನೆಗೆ ಹಾದಿ ಹಾಕಿಕೊಟ್ಟಿದ್ದಾರೆ. ನಮ್ಮಲ್ಲಿ ತಯಾರಾಗುವ ಸ್ವದೇಶಿವಸ್ತುಗಳ ಬಗೆಗೆ ಒಲವು ಮತ್ತು ದಿನಬಳಕೆಯ ಸಂಕಲ್ಪದಿಂದ ನಾವು ರಾಮರಾಜ್ಯ ಕಟ್ಟಬಹುದಾಗಿದೆ. ಗಾಂಧೀಜಿಯ ಕನಸು ನನಸು ಮಾಡಿ, ಮೋದಿಯವರ ಕೈಬಲಪಡಿಸಲು ಇದು ಸುಸಮಯ. ಬನ್ನಿ ರಾಷ್ಟ್ರವನ್ನು ಕಟ್ಟೋಣ, ಬೆಳೆಸೋಣ.
(ಲೇಖಕರು ರಾಜ್ಯದ ಉಪ ಮುಖ್ಯಮಂತ್ರಿ)