

ಹತ್ತೂರು ಜಾತ್ರೆಗಿಂತ ಸುತ್ತೂರು ಜಾತ್ರೆ ನೋಡ’ ಎಂಬ ಮಾತಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಪಿಲೆಯ ದಂಡೆಯಲ್ಲಿನ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದಲ್ಲಿ ಪುಷ್ಯ ಬಹುಳ ಚತುರ್ದಶಿಯಂದು (ಜ. 23) ರಥೋತ್ಸವ ನಡೆಯಲಿದೆ. ಜನಜಾಗೃತಿಯ ಸಂಕೇತವಾಗಿ ಧಾರ್ವಿುಕ, ಕೃಷಿ, ಶಿಕ್ಷಣ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ದೇಸಿ ಪರಂಪರೆಯನ್ನು ಸಾರುವ ಸುತ್ತೂರು ಜಾತ್ರೆಯ ಸೊಬಗನ್ನು ಕಣ್ತುಂಬಿಕೊಳ್ಳಲು ಈ ಪುಣ್ಯಕ್ಷೇತ್ರಕ್ಕೆ ಭಕ್ತಸಾಗರವೇ ಹರಿದುಬರುತ್ತದೆ.
ಜ. 21ರಿಂದ ಆರಂಭಗೊಂಡಿರುವ ಜಾತ್ರಾ ಮಹೋತ್ಸವ ಆರು ದಿನಗಳ ಕಾಲ ನಡೆಯುತ್ತದೆ. ಜಾತ್ರೆಯ ವಿಶೇಷವೆಂದರೆ ರಥೋತ್ಸವ. ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸುವ ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಯನ್ನು ನೋಡುವುದೇ ಸೊಗಸು. ವಿಶೇಷವಾಗಿ ರಥೋತ್ಸವದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಭಕ್ತರು ಹಲವು ದಶಕಗಳಿಂದ ನಾಡಿನ ನಾನಾ ಮೂಲೆಗಳಿಂದ ಸಾಗರೋಪಾದಿಯಲ್ಲಿ ಆಗಮಿಸುವುದು ವಾಡಿಕೆ.
1970ರಲ್ಲಿ ನಿರ್ವಿುಸಿದ್ದ 25 ಅಡಿ ಎತ್ತರದ ರಥವೇ ಈ ತನಕ ಪ್ರತಿವರ್ಷ ಜಾತ್ರೆಯಲ್ಲಿ ಸಾಗುತ್ತಿತ್ತು. 2018ರಲ್ಲಿ ನಡೆದ ಜಾತ್ರೆಯಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಯನ್ನು ನೂತನ ರಥದಲ್ಲಿ ಪ್ರತಿಷ್ಠಾಪಿಸಿ ಸಮರ್ಪಿಸಲಾಯಿತು. ಎರಡು ವರ್ಷದ ನಂತರ ಈ ಬಾರಿ 55 ಅಡಿ ಎತ್ತರದ ಮನಮೋಹಕ ಹಾಗೂ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ನೂತನ ರಥ ಮೊದಲ ಬಾರಿ ರಾಜಬೀದಿಯಲ್ಲಿ ಸಾಗಲಿದೆ. 23ರಂದು ಬೆಳಗ್ಗೆ 10.30ಕ್ಕೆ ರಥೋತ್ಸವ ಜರುಗಲಿದ್ದು, ನೂತನ ರಥದೊಂದಿಗೆ ಹಳೆಯ ರಥವೂ ಸಾಗಲಿದೆ. ಈ ಬಾರಿ ಜೋಡಿ ರಥೋತ್ಸವವನ್ನು ನೋಡಲು ಹಿಂದಿನ ವರ್ಷಗಳಿಗಿಂತ ದುಪ್ಪಟ್ಟು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.
ನೂತನ ರಥದ ವಿಶೇಷತೆ: ಎರಡು ಕೋಟಿ ರೂ. ವೆಚ್ಚದಲ್ಲಿ ತಯಾರಾದ 55 ಅಡಿ ಎತ್ತರ, 40 ಟನ್ ತೂಕದ ನೂತನ ರಥವನ್ನು ಬೆಂಗಳೂರಿನ ರಥ ಶಿಲ್ಪಕಾರ ಬಸವರಾಜು ಬಡಿಗೇರ, ಶಿವಕುಮಾರ್ ಹಾಗೂ ಎಚ್ಚರೀಶ್ ತಂಡ ವಿನ್ಯಾಸಗೊಳಿಸಿದೆ. ಇದಕ್ಕೆ ಶ್ರೀಗಂಧ, ತೇಗ, ಮತ್ತಿ, ಹೊನ್ನೆ ಹಾಗೂ ಬನ್ನಿಮರಗಳನ್ನು ಬಳಸಲಾಗಿದೆ.
ರಥದಲ್ಲಿ 108 ಶಿವಲಿಂಗಗಳನ್ನು ಕೆತ್ತಲಾಗಿದೆ. ಹತ್ತು ನಂದಿ ತಲೆಗಳಿವೆ. ಅಷ್ಟ ದಿಕ್ಕುಗಳಲ್ಲಿ ಸರ್ಪ, ಅಷ್ಟದಿಗ್ಗಜಗಳಿವೆ. ರಥದ ಮುಂಭಾಗದಲ್ಲಿ ಶ್ರೀಮಠದ ಗುರುಪರಂಪರೆ ಹಾಗೂ ಶ್ರೀ ಮಲೆಮಹದೇಶ್ವರರ ಶಿಲ್ಪವನ್ನು ಕೆತ್ತಲಾಗಿದೆ. ಹಿಂಭಾಗದಲ್ಲಿ ಸದ್ಯೋಜಾತ, ವಾಮದೇವ, ಅಘೊರ, ತತ್ಪುರುಷ, ಈಶಾನ, ಕಾರ್ತಿಕೇಯ ಮೂರ್ತಿಗಳಿವೆ. ಬಲಭಾಗದಲ್ಲಿ ಬ್ರಹ್ಮ-ಸರಸ್ವತಿ, ವಿಷ್ಣು-ಲಕ್ಷ್ಮೀ, ಶಿವ-ಪಾರ್ವತಿಯರ ಮೂರ್ತಿಗಳಿವೆ. ಎಡಭಾಗದಲ್ಲಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ, ಎಡೆಯೂರು ಸಿದ್ಧಲಿಂಗೇಶ್ವರ ಮೂರ್ತಿಗಳನ್ನು ಕೆತ್ತಲಾಗಿದೆ. ರಥಕ್ಕೆ ಕಬ್ಬಿಣದ ಗೋಪುರ ನಿರ್ಮಾಣ ಮಾಡಲಾಗಿದೆ. ಆಂಧ್ರಪ್ರದೇಶದ ಅದೋನಿಯ ಗುಂಡಾಚಾರಿ ಚಿನ್ನದ ಲೇಪನವಿರುವ ಕಳಶ, ಹಿತ್ತಾಳೆ ಡೂಮ್ ಗಂಟೆಗಳು, ನಾಲ್ಕು ದಿಕ್ಕಲ್ಲಿ ಪಂಚಲೋಹ ಮೂರ್ತಿಗಳನ್ನು ಅಳವಡಿಸಲಾಗಿದೆ. ರಥದ ಚಕ್ರವನ್ನು ಆಧುನಿಕ ತಂತ್ರಜ್ಞಾನ ಬಳಸಿಕೊಂಡು 35 ಡಿಗ್ರಿ ಕೋನಕ್ಕೆ ತಿರುಗುವಂತೆ ಕಬ್ಬಿಣದ ಆಕ್ಸೆಲ್, ಗಾಲಿ ಅಲ್ಲದೆ ಬ್ರೇಕ್ ಹಾಗೂ ಟರ್ನಿಂಗ್ ಮಾಡುವ ವೈಶಿಷ್ಟ್ಯಗಳನ್ನು ಹೊಂದಿದೆ.
ಜನಪದ ಕಲೆಗಳ ಅನಾವರಣ: ರಥಗಳಿಗೆ ಕಳಶಾರೋಹಣ, ಫಲ ಪುಷ್ಪಾಲಂಕಾರ, ವರ್ಣಾಲಂಕಾರಿಕ ಬಟ್ಟೆಗಳಿಂದ ಸಿಂಗರಿಸಿ ಶಿವಯೋಗಿಗಳ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. 21 ಕುಶಾಲತೋಪು ಸಿಡಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ದೊರೆಯುತ್ತದೆ. ಕರ್ತೃ ಗದ್ದುಗೆಯ ಮುಂಭಾಗದಿಂದ ಹೊರಡುವ ರಥೋತ್ಸವ ಸುತ್ತೂರಿನ ರಾಜಬೀದಿಯಲ್ಲಿ ಸಾಗಿ ಊರೊಳಗಿನ ದೊಡ್ಡಮ್ಮತಾಯಿ ದೇವಾಲಯ ವೃತ್ತ ತಲುಪುತ್ತದೆ. ರಥವನ್ನು ಅಶ್ವಾರೋಹಿ ತಂಡ ಹಿಂಬಾಲಿಸುತ್ತದೆ. ಹೊರರಾಜ್ಯ ಸೇರಿದಂತೆ ನಾಡಿನ ನಾನಾ ಮೂಲೆಗಳಿಂದ ಆಗಮಿಸುವ ಇಪ್ಪತ್ತು ಪ್ರಕಾರಗಳ ಐವತ್ತಕ್ಕೂ ಹೆಚ್ಚು ಜನಪದ ಕಲಾತಂಡಗಳ ಪ್ರದರ್ಶನವು ರಥೋತ್ಸವಕ್ಕೆ ಮೆರುಗು ನೀಡುತ್ತವೆ. ಮಹಾರಾಷ್ಟ್ರದ ಜಾನಪಥಕ್, ತಮಿಳುನಾಡಿನ ಕೋಲಾಟಂ, ಕರಗಟ್ಟಂ ಹಾಗೂ ಕಾವಡಿಯಾಟಂ, ರಾಜ್ಯದ ಗೊರವರ ಕುಣಿತ, ಪಟದ ಕುಣಿತ, ವೀರಮಕ್ಕಳ ಕುಣಿತ, ಧಾರವಾಡದ ಚನ್ನಯ್ಯ ಕಡ್ಲಿಮರ್ ತಂಡದ ದಾನಪಟ್ಟಿ, ಜಾಂಜ್ ಮೇಳ, ಸ್ಯಾಕ್ಸೋಫೋನ್ ವಾದನ, ಮರಗಾಲು ಕುಣಿತ ಸೇರಿದಂತೆ ಜನಪದ ಕಲೆ ಮೇಳೈಸುವುದು ರಥೋತ್ಸವದ ವಿಶೇಷತೆ.
| ಪ್ರತಾಪ್ ಟಿ.ಕೋಡಿನರಸೀಪುರ, ನಂಜನಗೂಡು