

ಭಾರತ ಮಾತ್ರವಲ್ಲ ವಿಶ್ವದ ಎಲ್ಲ ರಾಷ್ಟ್ರಗಳು ಜನರ ಜೀವನಮಟ್ಟವನ್ನು ಎತ್ತರಿಸಲು ವಿವಿಧ ಯೋಜನೆಗಳನ್ನು ಹಾಕಿಕೊಳ್ಳುತ್ತಿವೆ. ಆದರೆ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಆದಾಯ ಗಳಿಸಲು ಜನರು ಮಾಡುವ ಚಟುವಟಿಕೆಗಳು ಪ್ರಾದೇಶಿಕ ಹಾಗೂ ಜಾಗತಿಕವಾಗಿ ಪರಿಸರ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದು ಆತಂಕದ ವಿಷಯ. ಅಭಿವೃದ್ಧಿಯ ನೆಪದಲ್ಲಿ ಪರಿಸರದ ಹಾನಿಯನ್ನು ತಪ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಭಾರೀ ಅನಾಹುತ ಖಂಡಿತ.
2015ರಲ್ಲಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಒಟ್ಟಾಗಿ ಜಗತ್ತಿನ ಆರ್ಥಿಕ, ಸಾಮಾಜಿಕ ಮತ್ತು ಪರಿಸರಗಳ ಸುಸ್ಥಿರ ಅಭಿವೃದ್ಧಿಗಾಗಿ 17 ಪ್ರಮುಖ ಜಾಗತಿಕ ಉದ್ದೇಶಗಳನ್ನು ಅಳವಡಿಸಿಕೊಂಡಿದ್ದು 2030ರ ವೇಳೆಗೆ ಅದನ್ನು ಸಾಧಿಸುವ ಗುರಿಯನ್ನು ಹೊಂದಿವೆ. ಇದು ಬಡತನ ನಿಮೂಲನೆ, ಜೀವನಮಟ್ಟದ ಸುಧಾರಣೆ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯ, ಶಿಕ್ಷಣ, ಮೂಲ ಅವಶ್ಯಕತೆಗಳ ಪೂರೈಕೆ ಹಾಗೂ ಪರಿಸರ ಸಂರಕ್ಷಣೆಯಂತಹ ಮೂಲ ಉದ್ದೇಶಗಳನ್ನು ಹೊಂದಿವೆ. ಸುಸ್ಥಿರ ಅಭಿವೃದ್ಧಿಯ ಮುಖ್ಯಗುರಿ, ಇಂದಿನ ಮತ್ತು ಭವಿಷ್ಯದ ಪೀಳಿಗೆಗಳ ಸಮೃದ್ಧಿಯನ್ನು ಸಮತೋಲನ ಗೊಳಿಸುವುದಾಗಿದೆ. ಸುಸ್ಥಿರ ಅಭಿವೃದ್ಧಿಯು ಆರ್ಥಿಕ, ಪರಿಸರ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಜಂಟಿಯಾಗಿ ಪರಿಹರಿಸುವ ಮೂಲಕ ಆರೋಗ್ಯಕರ ಸಮುದಾಯವನ್ನು ಅಭಿವೃದ್ಧಿಪಡಿಸಲು ದೀರ್ಘಕಾಲೀನ, ಸಮಗ್ರ ವಿಧಾನವನ್ನು ಒಳಗೊಂಡಿರುವ ಕಲ್ಪನೆಯಾಗಿದೆ. ಇದು ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಮತ್ತು ವಿವೇಚನಾರಹಿತವಾದ ಬಳಕೆಯನ್ನು ತಪ್ಪಿಸುತ್ತದೆ. ಸುಸ್ಥಿರ ಅಭಿವೃದ್ಧಿ ಪರಿಸರಸ್ನೇಹಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮತ್ತು ಬಳಸುವ ವಿಧಾನಗಳನ್ನು ಪ್ರೋತ್ಸಾಹಿಸುತ್ತದೆ. ಸುಸ್ಥಿರ ಅಭಿವೃದ್ಧಿಯ ಪ್ರಮುಖ ಅಂಶಗಳಾದ ಸಾಮಾಜಿಕ ಪ್ರಗತಿ ಮತ್ತು ಸಮಾನತೆ, ಪರಿಸರ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸ್ಥಿರ ಆರ್ಥಿಕ ಬೆಳವಣಿಗೆಗಳನ್ನು ಸಾಧಿಸಲು ಸರ್ಕಾರ ಹಾಗೂ ಜನರ ಶ್ರಮದ ಅಗತ್ಯವಿದೆ. ಪ್ರತಿಯೊಬ್ಬರಿಗೂ ಆರೋಗ್ಯಕರ, ಸ್ವಚ್ಛ ಮತ್ತು ಸುರಕ್ಷಿತ ಪರಿಸರವನ್ನು ಹೊಂದುವ ಹಕ್ಕಿದೆ. ಪರಿಸರ ಮಾಲಿನ್ಯ, ಬಡತನ, ಕಳಪೆ ವಸತಿ ಮತ್ತು ನಿರುದ್ಯೋಗವನ್ನು ಕಡಿಮೆ ಮಾಡುವ ಮೂಲಕ ಇದನ್ನು ಸಾಧಿಸಬಹುದು. ಇಂದಿನ ಪೀಳಿಗೆ ಮತ್ತು ಭವಿಷ್ಯದ ಪೀಳಿಗೆಗಳಲ್ಲಿ ಯಾರಿಗೂ ಅನ್ಯಾಯವಾಗದಂತಹ ಅಭಿವೃದ್ಧಿ ಇಂದಿನ ಅಗತ್ಯವಾಗಿದೆ.
ಸುಸ್ಥಿರ ಅಭಿವೃದ್ಧಿಗಾಗಿ ಜಲ ಸಂಪನ್ಮೂಲಗಳನ್ನು ಸಂರಕ್ಷಿಸಿ ಸಮರ್ಥವಾಗಿ ಬಳಸಿಕೊಳ್ಳಬೇಕು. ಸುಸ್ಥಿರ ಅರಣ್ಯಕ್ಕಾಗಿ, ಕಾಡು ಮರ, ಗುಡ್ಡ-ಬೆಟ್ಟಗಳ ನಾಶವನ್ನು ತಡೆಯಬೇಕು. ಸುಸ್ಥಿರ ಕೃಷಿ ಹಾಗೂ ಆಹಾರಕ್ಕಾಗಿ ಮಣ್ಣಿನ ಮಾಲಿನ್ಯ ಹಾಗೂ ಗುಣಮಟ್ಟದ ಅವನತಿಯನ್ನ ತಡೆಯಬೇಕು. ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಲು ಅಮೂಲ್ಯವಾದ ಜೀವವೈವಿಧ್ಯವನ್ನು ಉಳಿಸಿಕೊಳ್ಳಬೇಕು.
| ವಿದ್ಯಾ ಅಮ್ಮಣ್ಣಾಯ ಪ್ರಾಧ್ಯಾಪಕರು, ಕಾಪು