ದ್ವಿರಂಗ ಸಮರಗಳ ಸಾಧಕ-ಬಾಧಕದ ಸುತ್ತಮುತ್ತ...

Column F
Published on
‘ಭಾರತ ದ್ವಿರಂಗ ಯುದ್ಧದಲ್ಲಿ ಸೆಣಸುವ ಸನ್ನಿವೇಶ ನಿರ್ಮಾಣವಾಗುತ್ತಿದೆ. ಅಂತಹ ಯುದ್ಧಕ್ಕೆ ನಾವು ತಯಾರಾಗಿಯೇ ಇದ್ದೇವೆ’. ಇಂತಹ ಹೇಳಿಕೆಗಳು ಇತ್ತೀಚೆಗೆ ಭಾರತದ ಭೂಸೇನೆ ಮತ್ತು ವಾಯಸೇನೆಯ ಮುಖ್ಯಸ್ಥರಿಂದ ಒಂದಕ್ಕಿಂತ ಹೆಚ್ಚು ಬಾರಿ ಬಂದಿವೆ. ಇಬ್ಬರ ಹೇಳಿಕೆಗಳೂ ಸೂಚಿಸುವುದು ನಮ್ಮ ಶತ್ರುರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನಗಳೆರಡೂ ಏಕಕಾಲದಲ್ಲಿ ನಮ್ಮ ಮೇಲೆ ಎರಗುವ ತಯಾರಿಯಲ್ಲಿವೆ, ಹೀಗಾಗಿ ಪಶ್ಚಿಮ ಮತ್ತು ಉತ್ತರ ಗಡಿಗಳೆರಡರಲ್ಲೂ ಏಕಕಾಲದಲ್ಲಿ ನಾವು ಹೋರಾಡಬೇಕಾಗುತ್ತದೆ ಎಂದು.

ಸ್ವಾತಂತ್ರ್ಯದೊಂದಿಗೇ ಹುಟ್ಟಿಕೊಂಡ ಪಾಕಿಸ್ತಾನಿ ಶತ್ರುತ್ವಕ್ಕೆ ಪ್ರಬಲ ಚೀನೀ ಶತ್ರುತ್ವವನ್ನೂ ಸೇರಿಸಿದ್ದು ಜವಾಹರಲಾಲ್ ನೆಹರು, ಗಡಿಯ ಕುರಿತಾಗಿ ತಮ್ಮ ಅರ್ತಾಕ ಹಾಗೂ ಅಪ್ರಾಮಾಣಿಕ ನೀತಿನಿಲುವುಗಳಿಂದ. ಇದರಿಂದ ತನ್ನ ದೇಶಕ್ಕಾಗಬಹುದಾದ ಅನುಕೂಲವನ್ನು ಮನಗಂಡದ್ದು ಅಯೂಬ್ ಖಾನ್​ರ ಸೇನಾ ಸರ್ಕಾರದಲ್ಲಿ ವಿದೇಶ ಮಂತ್ರಿಯಾಗಿದ್ದ ಝುುಲ್ಪಿಕರ್ ಆಲಿ ಭುಟ್ಟೋ. ಅಮೆರಿಕ ಎಲ್ಲ ಸನ್ನಿವೇಶಗಳಲ್ಲೂ ನಂಬಲರ್ಹ ಮಿತ್ರನಾಗಲಾರದು ಎಂದು ಶಂಕಿಸಿದ ಅವರು 1962ರ ಯುದ್ಧದಲ್ಲಿ ಭಾರತವನ್ನು ಮಣಿಸುವುದರಲ್ಲಿ ಚೀನಾ ಯಶಸ್ವಿಯಾದೊಡನೇ ಆ ದೇಶದ ಜತೆ ಸ್ನೇಹವೃದ್ಧಿಗೆ ಮುಂದಾದರು. ಪರಿಣಾಮವಾಗಿ ಜನವರಿ 1963ರಲ್ಲಿ ಎರಡೂ ದೇಶಗಳು ತಮ್ಮ ನಡುವಿನ ‘ಗಡಿ’ಯನ್ನು ನಿರ್ಧರಿಸಿ, ಆ ಬಗ್ಗೆ ಒಪ್ಪಂದ ಮಾಡಿಕೊಂಡು ದೀರ್ಘಕಾಲೀನ ಸ್ನೇಹಕ್ಕೆ ನಾಂದಿ ಹಾಡಿದವು. ಅಂದಹಾಗೆ, ಅವೆರಡರ ನಡುವಿನ ‘ಗಡಿ’ಯಾದರೂ ಯಾವುದು?

ಪಾಕಿಸ್ತಾನ ಮತ್ತು ಚೀನಾದ ನಡುವೆ ಭೂಸಂಪರ್ಕವೇ ಇರಲಿಲ್ಲ. ಆದರೆ 1947-48ರ ಮೊದಲ ಕಾಶ್ಮೀರ ಯುದ್ಧದಲ್ಲಿ ಪಾಕಿಸ್ತಾನ ಆಕ್ರಮಿಸಿಕೊಂಡ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶವನ್ನು ಪಾಕಿಸ್ತಾನದ ವಶದಲ್ಲೇ ಬಿಟ್ಟು ನೆಹರು 1949 ಜನವರಿ 1ರಂದು ಕದನವಿರಾಮ ಘೊಷಿಸಿದ್ದೇ ಆ ಪ್ರದೇಶದ ಮೂಲಕ ಪಾಕಿಸ್ತಾನ ಮತ್ತು ಚೀನಾದ ನಡುವೆ ಭೂಸಂಪರ್ಕವೇರ್ಪಟ್ಟಿತು. ಇಂದಿಗೂ ಅದೇ ಸ್ಥಿತಿ ಇದೆ.

ಭಾರತ ಮತ್ತು ಚೀನಾ ನಡುವಿನ ಗಡಿ ಅಧಿಕೃತವಾಗಿ ನಿರ್ಣಯವಾಗಿಲ್ಲ, ಆ ಬಗ್ಗೆ ಮಾತುಕತೆಗಳ ಅವಶ್ಯಕತೆ ಇದೆ ಎಂಬ ತನ್ನ ನಿಲುವನ್ನು ಚೀನಾ ಸಹಜವಾಗಿಯೇ ಪಾಕಿಸ್ತಾನದ ಜತೆ ಸೃಷ್ಟಿಯಾದ ‘ಗಡಿ’ಯ ಬಗೆಗೂ ತಾಳಿತು. ಭಾರತದ ವಶದಲ್ಲಿದ್ದ ಲಡಾಖ್​ನ ಅಕ್ಸಾಯ್ ಚಿನ್ ಪ್ರಸ್ಥಭೂಮಿ ತನ್ನದು ಎಂದು ವಾದಿಸುವಂತೇ ಪಾಕಿಸ್ತಾನದ ವಶಕ್ಕೆ ಹೋಗಿದ್ದ ಗಿಲ್ಗಿಟ್-ಬಾಲ್ಟಿಸ್ತಾನ್​ನ ಶಕ್ಸ್​ಗನ್ ಕಣಿವೆ ಸಹ ತನ್ನದೇ ಎಂದು ಚೀನಾ ಹೇಳತೊಡಗಿತು. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾಗಳ ನಡುವೆ ಯುದ್ಧವೂ ಆಗಿಹೋಯಿತು. ಆದರೆ ಚೀನಾ ಹಕ್ಕು ಸ್ಥಾಪಿಸಿದ ಸುಮಾರು 4,500 ಚದರ ಕಿಲೋಮೀಟರ್ ವಿಸ್ತೀರ್ಣದ ಶಕ್ಸ್​ಗನ್ ಕಣಿವೆಯನ್ನು ಪಾಕಿಸ್ತಾನ ಆ ದೇಶಕ್ಕೆ ತಣ್ಣಗೆ ಒಪ್ಪಿಸಿಬಿಟ್ಟಿತು. ಪರಿಣಾಮವಾಗಿ ‘ವಿವಾದ’ ಬಗೆಹರಿದು ಎರಡೂ ದೇಶಗಳು ಮಿತ್ರರಾಗಿಬಿಟ್ಟವು. ಬಗೆಹರಿಯುವ ಸೂಚನೆಯನ್ನೇ ನೀಡದೇ ಏರುತ್ತಾಹೋದ ಭಾರತ- ಚೀನಾ ವೈಷಮ್ಯ ತನಗೆ ಲಾಭಕರ ಎಂದು ‘ಸರಿ’ಯಾಗಿಯೇ ಲೆಕ್ಕಹಾಕಿದ ಪಾಕಿಸ್ತಾನ ಚೀನಾ ಜತೆಗಿನ ಘನಿಷ್ಟ ಸ್ನೇಹಸಂಬಂಧವನ್ನು ನಿರಂತರವಾಗಿ ಕಾಪಾಡಿಕೊಳ್ಳುವುದನ್ನು ತನ್ನ ವಿದೇಶನೀತಿಯ ಪ್ರಮುಖ ಭಾಗವನ್ನಾಗಿಸಿಕೊಂಡಿತು. ಅದರ ಪರಿಣಾಮ ಭಾರತದ ಮೇಲಾಗಿ ಈ ದೇಶ ‘ದ್ವಿರಂಗ ಯುದ್ಧ’ ಅಂದರೆ ‘ಎರಡು ರಣರಂಗಗಳ ಯುದ್ಧ’ದಲ್ಲಿ ಸೆಣಸಬೇಕಾದ ಅಪಾಯವನ್ನೆದುರಿಸಲು ಹೆಚ್ಚುಕಾಲವೇನೂ ಬೇಕಾಗಲಿಲ್ಲ.

ರಾಷ್ಟ್ರವೊಂದು ಏಕಕಾಲದಲ್ಲಿ ಎರಡು ಶತ್ರುರಾಷ್ಟ್ರಗಳ ಜತೆ ಸೆಣಸುವುದು ಹೊಸದೇನಲ್ಲ, ಅದರಲ್ಲಿ ಜಯಿಸುವುದೂ ಅಸಾಧ್ಯವೇನಲ್ಲ. ಇದಕ್ಕೆ ಉದಾಹರಣೆಗಳು ಆಧುನಿಕ ಇತಿಹಾಸದಲ್ಲೇ ದೊರೆಯುತ್ತವೆ. 1869-71ರ ‘ಪೆಸಿಫಿಕ್ ಯುದ್ಧ’ದಲ್ಲಿ ಪೆರು ಮತ್ತು ಬೊಲಿವಿಯಾಗಳೆರಡನ್ನೂ ಮಣಿಸುವುದರಲ್ಲಿ ಚಿಲಿ ಯಶಸ್ವಿಯಾಗಿ ಅವುಗಳ ನೆಲವನ್ನು ಆಕ್ರಮಿಸಿಕೊಂಡದ್ದು, ಕಳೆದ ಶತಮಾನದಲ್ಲಿ ಇಸ್ರೇಲ್ ಒಂದಲ್ಲ ಮೂರು ಬಾರಿ ಅಂತಹ ಸಾಧನೆ ಮಾಡಿದ್ದು ಇತಿಹಾಸದಲ್ಲಿ ದಾಖಲಾಗಿವೆ.

ಇಸ್ರೇಲ್​ನ ಸಾಧನೆ ಚಿಲಿಯದಕ್ಕಿಂತಲೂ ಹಲವು ಪಟ್ಟು ಅತಿಶಯವಾದದ್ದು. ಚಿಲಿಯ ವಿರೋಧಿಗಳೆರಡೂ ಇದ್ದದ್ದು ಉತ್ತರ ದಿಸೆಯಲ್ಲಿ. ಹೀಗಾಗಿ ಚಿಲಿಯ ಸೇನಾಶಕ್ತಿ ಎರಡು ವಿಭಿನ್ನ ದಿಕ್ಕುಗಳಲ್ಲಿ ಹರಿದುಹೋಗದೇ ಒಂದೇ ದಿಕ್ಕಿನಲ್ಲಿ ಕೇಂದ್ರೀಕೃತವಾಯಿತು. ಅದರ ಭೂಸೇನೆ ಆಂತೊಫಗಸ್ತಾ ಬಂದರೂ ಸೇರಿದಂತೆ ಪೆಸಿಫಿಕ್ ಸಾಗರ ಮತ್ತು ಆಂಡೀಸ್ ಪರ್ವತಶ್ರೇಣಿಗಳ ನಡುವಿನ ಬೊಲಿವಿಯಾದ ನೆಲವನ್ನೆಲ್ಲ ಕಸಿದುಕೊಂಡು ಆ ದೇಶವನ್ನು ಸಮುದ್ರತೀರವಿಲ್ಲದ ದೇಶವನ್ನಾಗಿ ಮಾಡಿ ಬಿಟ್ಟಿತು. ಅದೇ ಸಮಯದಲ್ಲಿ ಚಿಲಿಯ ನೌಕಾಸೇನೆ ಪೆಸಿಫಿಕ್ ತೀರದಲ್ಲಿ ಉತ್ತರಕ್ಕೆ ಸಾಗಿ, ಬೊಲಿವಿಯಾದ ನೆಲದಾಚೆಗೆ ದಕ್ಷಿಣ ಪೆರುವಿನಲ್ಲಿ ಹೊಸದೊಂದು ರಣಾಂಗಣವನ್ನು ಸೃಷ್ಟಿಸಿ ಆ ದೇಶದ ಇಕೀಕ್, ಪೀಸಾಗ್ವಾ ಮತ್ತು ಅರೀಚಾ ಬಂದರುಗಳನ್ನು ಆಕ್ರಮಿಸಿಕೊಂಡಿತು. ಇಲ್ಲಿ ಚಿಲಿಗೆ ಅನುಕೂಲವಾದದ್ದು ಎರಡೂ ಶತ್ರುರಾಷ್ಟ್ರಗಳು ಒಂದೇ ದಿಕ್ಕಿನಲ್ಲಿದ್ದದ್ದು ಮತ್ತು ಆ ಕಾರಣದಿಂದಾಗಿಯೇ ಆ ದೇಶದ ಭೂಸೇನೆ ಹಾಗೂ ನೌಕಾಸೇನೆಗಳು ಸಮನ್ವಯಿತ ಕಾರ್ಯಾಚರಣೆ ನಡೆಸಲು ಅವಕಾಶವಾದದ್ದು.

ಆದರೆ ಇಸ್ರೇಲ್​ನ ವಿರೋಧಿಗಳು ಪಶ್ಚಿಮದ ಸಮುದ್ರತೀರದ ಹೊರತಾಗಿ ಉಳಿದೆಲ್ಲ ದಿಕ್ಕುಗಳಲ್ಲೂ ಇದ್ದರು ಮತ್ತು ಏಕಕಾಲದಲ್ಲಿ ಆ ಎಲ್ಲ ದಿಕ್ಕುಗಳಿಂದಲೂ ಮೂರು ಸಲ ಆಕ್ರಮಣವೆಸಗಿದರು. 1948ರ ಮೊದಲ ಯುದ್ಧದಲ್ಲಿ ಉತ್ತರದ ಸಿರಿಯಾ, ದಕ್ಷಿಣದ ಈಜಿಪ್ಟ್ ಮತ್ತು ಪೂರ್ವದ ಜೋರ್ಡಾನ್ ಸೇನೆಗಳನ್ನು ತನ್ನ ನೆಲದಿಂದ ಹೊರಗಟ್ಟಿ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿಕೊಂಡ ಇಸ್ರೇಲ್ 1967ರ ಎರಡನೆಯ ಯುದ್ಧದಲ್ಲಿ ಆ ಮೂರೂ ದೇಶಗಳಿಗೆ ಸೇರಿದ ಗಡಿ ಪ್ರದೇಶಗಳನ್ನೇ ವಶಕ್ಕೆ ತೆಗೆದುಕೊಂಡಿತು ಮತ್ತು ಹಾಗೆ ತಾನು ಗಳಿಸಿದ್ದೆಲ್ಲವನ್ನೂ ಉಳಿಸಿಕೊಳ್ಳುವುದರಲ್ಲಿ 1974ರ ಮೂರನೆಯ ಯುದ್ಧದಲ್ಲಿ ಯಶಸ್ವಿಯಾಯಿತು. ಆಮೇಲೆ ಇಸ್ರೇಲನ್ನು ಕೆಣಕುವ ಧೈರ್ಯವನ್ನು ಆ ಮೂರೂ ದೇಶಗಳು ಮತ್ತೊಮ್ಮೆ ಮಾಡಲಿಲ್ಲ. ಶಾಂತಿಯ ಜಪ ಮಾಡಿ, ತಾವು ಯುದ್ಧದಲ್ಲಿ ಕಳೆದುಕೊಂಡಿದೆಲ್ಲವನ್ನೂ ಮಾತುಕತೆಯ ಮೇಜಿನಲ್ಲಿ ಹಿಂದಕ್ಕೆ ಪಡೆದುಕೊಂಡವು.

ಹೀಗೆ ಎರಡು ರಣರಂಗಗಳ ಮತ್ತು ಬಹು ರಂಗಗಳ ಯುದ್ಧಗಳಲ್ಲಿ ಸಾಹಸ ಮೆರೆಯುವುದಕ್ಕೆ ಕ್ರಮವಾಗಿ ಚಿಲಿ ಮತ್ತು ಇಸ್ರೇಲ್ ಉದಾಹರಣೆಗಳಾದರೆ ಅದಕ್ಕೆ ವಿರುದ್ಧವಾದ, ದೊಡ್ಡದೂ ಆದ, ಉದಾಹರಣೆಯೂ ಒಂದಿದೆ.

ಎರಡನೆಯ ಮಹಾಯುದ್ಧದ ಪ್ರಾರಂಭದ ತಿಂಗಳುಗಳಲ್ಲಿ ಜರ್ಮನಿ ಪಶ್ಚಿಮ ರಣರಂಗದಲ್ಲಿ ಒಂದಾದಮೇಲೊಂದು ಜಯಭೇರಿ ಬಾರಿಸುತ್ತ ಸಾಗಿತ್ತು. ಬೆಲ್ಜಿಯಂ, ಫ್ರಾನ್ಸ್, ನೆದರ್​ಲ್ಯಾಂಡ್​ಗಳನ್ನು ನಿರಾಯಾಸವಾಗಿ ಕೈವಶ ಮಾಡಿಕೊಂಡ ಜರ್ಮನಿ ಜುಲೈ 1940- ಜೂನ್ 1941ರ ನಡುವೆ ಬ್ರಿಟನ್ ಮೇಲೆ ಮಾರಕ ವಾಯುದಾಳಿ ‘ಡೈ ಲುಫ್ತ್​ಸ್ಕಾ್ಲಕ್ಟ್ ಉಮ್ ಇಂಗ್ಲ್ಯಾಂಡ್’ (ಬ್ಯಾಟ್ಲ್ ಆಫ್ ಬ್ರಿಟನ್) ಮತ್ತು ಭಯಾನಕ ರಾತ್ರಿ ವಾಯುದಾಳಿ ‘ಬ್ಲಿಟ್ಜ್ ಆರಂಭಿಸಿದಾಗ ಆ ‘ಕಡಲ ರಾಣಿ’ಯ ಕಥೆ ಇನ್ನು ಮುಗಿಯಿತು ಎಂದೇ ಬಹುಪಾಲು ಜಗತ್ತು ತಿಳಿಯಿತು. ಅದಾಗಿಯೇಹೋಗುತ್ತಿತ್ತು, ತನ್ನ ಪಾಡಿಗೆ ತಾನಿದ್ದ ಸೋವಿಯತ್ ಯೂನಿಯನ್ ಮೇಲೆ ಆಕ್ರಮಣವೆಸಗುವ ತಲೆಕೆಟ್ಟ ನಿರ್ಧಾರವನ್ನು ಜರ್ಮನ್ ಸರ್ವಾಧಿಕಾರಿ ಅಡಾಲ್ಪ ಹಿಟ್ಲರ್ ತೆಗೆದುಕೊಳ್ಳದೇ ಹೋಗಿದ್ದರೆ!

1941 ಜೂನ್ 22 ರಂದು ಜರ್ಮನಿಯ ಭೂಸೇನೆ ಆರಂಭಿಸಿದ ‘ಆಪರೇಷನ್ ಬಾರ್ಬರೋಸಾ’ಗೆ ಮೊದಮೊದಲು ಕಮ್ಯೂನಿಸ್ಟ್ ದೈತ್ಯ ತತ್ತರಿಸಿತೇನೋ ನಿಜ. ಆದರೆ ಆಗ ಸೋವಿಯತ್ ಸರ್ವಾಧಿಕಾರಿ ಜೋಸೆಫ್ ಸ್ಟಾಲಿನ್​ನೊಳಗಿದ್ದ ಯುದ್ಧನಿಪುಣ ಮೇಲೆದ್ದ. ‘ಈ ಅನಿರೀಕ್ಷಿತ ಯುದ್ಧಕ್ಕೆ ಯಾವ ತಯಾರಿಯನ್ನೂ ನಾವು ಮಾಡಿಕೊಂಡಿಲ್ಲ. ಈ ಸ್ಥಿತಿಯಲ್ಲಿ ಬಲಾಢ್ಯ ಶತ್ರುವನ್ನೆದುರಿಸುವುದು ಆತ್ಮಹತ್ಯೀಯ. ಹಿಂದಕ್ಕೆ ಬನ್ನಿ. ನಮ್ಮಲ್ಲಿ ವಿಶಾಲ ನೆಲವಿದೆ, ಶತ್ರು ಎಷ್ಟು ಬೇಕಾದರೂ ಒಳಬರಲಿ. ತನ್ನ ಮೂಲನೆಲೆಯಿಂದ ಆತ ದೂರ ಬಂದಷ್ಟೂ ಆತನ ಶಕ್ತಿ ಕುಂದುತ್ತ ಹೋಗುತ್ತದೆ. ಅಷ್ಟರೊಳಗೆ ನಾವು ಶಕ್ತಿಗೂಡಿಸಿಕೊಂಡು ಅವನನ್ನು ನಮ್ಮ ನೆಲದೊಳಗೇ ಸುತ್ತುವರಿದು ಚಚ್ಚೋಣ’ ಎಂದು ತನ್ನ ಸೇನೆಗೆ ಹೇಳಿದ ಸ್ಟಾಲಿನ್ ವಿಶ್ವ ಇತಿಹಾಸದಲ್ಲಿ ಅಭೂತಪೂರ್ವವೆನಿಸುವ ಮಟ್ಟಿಗಿನ ರಣತಯಾರಿ ಮಾಡಿದ. ಜರ್ಮನ್ ಆಕ್ರಮಣಕಾರಿ ಸೇನೆಯ ವಿರುದ್ಧ ರಷ್ಯನ್ನರು ‘ವೆಲಿಕಾಯಾ ಓತೆಚೆಸ್ತ್​ವೆನ್ನಾಯ ವೋಯ್ನಾ’ (ಮಹಾ ದೇಶಾಭಿಮಾನಿ ಯುದ್ಧ) ಆರಂಭಿಸಿ ಜರ್ಮನ್ ಸೇನೆಯನ್ನು ಕಟ್ಟಿಹಾಕಿಬಿಟ್ಟರು. ಸ್ಟಾಲಿನ್​ಗ್ರಾದ್ ಬಳಿ ರಷ್ಯನ್ನರಿಗೆ ಜರ್ಮನ್ನರು ಮಣಿದಾಗ ಅದು ಎರಡನೆಯ ಮಹಾಯುದ್ಧದಲ್ಲಿ ಜರ್ಮನಿ ಅನುಭವಿಸಿದ ಮೊದಲ ನಿರ್ಣಾಯಕ ಸೋಲು. ಮುಂದುವರಿದ ರಷ್ಯನ್ನರು ಮಾಸ್ಕೋ ಮತ್ತು ಲೆನಿನ್​ಗ್ರಾದ್ ನಗರಗಳ ಹೊರವಲಯದಲ್ಲೂ ಜರ್ಮನ್ನರನ್ನು ಬಡಿದು ಹಿಂದಕ್ಕಟ್ಟಿದರು. ಜರ್ಮನ್ ಸೇನಾಶಕ್ತಿ ಮೇಲೆ ಹೀಗೆ ರಷ್ಯನ್ ಒತ್ತಡ ಹೆಚ್ಚುತ್ತ ಹೋದಂತೆ ಬ್ರಿಟನ್​ಗೆ ಉಸಿರು ತೆಗೆದುಕೊಳ್ಳುವ ಅವಕಾಶ ಸಿಕ್ಕಿತು. ಜತೆಗೆ ಜಪಾನ್​ನ ಮೂರ್ಖತನದಿಂದಾಗಿ ಅಮೆರಿಕ ಸಹಾ ಯುದ್ಧರಂಗ ಪ್ರವೇಶಿಸಿದ್ದು ಬ್ರಿಟನ್​ಗೆ ಮರುಜೀವ ನೀಡಿತ್ತು. ಹೀಗೆ ಪೂರ್ವ-ಪಶ್ಚಿಮಗಳೆರಡರಲ್ಲೂ ಏಕಕಾಲದಲ್ಲಿ ರಣರಂಗಗಳನ್ನು ಸೃಷ್ಟಿಕೊಂಡದ್ದೇ ಅಂತಿಮವಾಗಿ ಜರ್ಮನಿಗೆ ಮುಳುವಾಯಿತು. ಆದದ್ದೆಲ್ಲ ಒಳ್ಳೆಯದಕ್ಕೇ ಬಿಡಿ. ಕ್ರೂರಿ ನಾಜಿಗಳು ಇಡೀ ಯುರೋಪನ್ನು ಪದಾಕ್ರಾಂತಗೊಳಿಸಿಕೊಂಡು, ಉಳಿದ ಜಗತ್ತಿನ ಮೇಲೂ ದೊಡ್ಡದಾಗಿ ಹಿಡಿತ ಸ್ಥಾಪಿಸಿಕೊಂಡುಬಿಟ್ಟಿದ್ದರೆ ಮನುಕುಲ ಇನ್ನೆಷ್ಟು ದುರ್ದೆಸೆಗೆ ಸಿಲುಕಿಹೋಗುತ್ತಿತ್ತೋ.

ಏಕಕಾಲದಲ್ಲಿ ಎರಡು ರಣರಂಗಗಳಲ್ಲಿ ಸೆಣಸುವ ಸಾಧಕಬಾಧಕಗಳ ಕೆಲ ಉದಾಹರಣೆಗಳಿವು. ಹಾಗೆ ನೋಡಿದರೆ ಅಂತಹ ಸನ್ನಿವೇಶಗಳು ಭಾರತಕ್ಕೂ ಎದುರಾದದ್ದಿದೆ. 1965ರ ಯುದ್ಧದಲ್ಲಿ ಪಾಕಿಸ್ತಾನದ ಪರವಾಗಿ ಯುದ್ಧಕ್ಕಿಳಿಯುವ ಬೆದರಿಕೆಯನ್ನು ಚೀನಾ ಒಡ್ಡಿತ್ತೇನೋ ಸರಿ. ಆದರೆ ಅದು ಕೇವಲ ಹುಸಿ ಬೆದರಿಕೆಯಷ್ಟೇ. ಗಡಿಗಳನ್ನು ತನಗನುಕೂಲವಾಗುವಂತೆ ಚೀನಾ 1962ರ ಯುದ್ಧದಲ್ಲೇ ಬದಲಾಯಿಸಿಕೊಂಡಿದ್ದರಿಂದ ಭಾರತದೊಂದಿಗೆ ಮತ್ತೊಂದು ಯುದ್ಧ ನಡೆಸುವ ಅಗತ್ಯ ಅಂದು ಅದಕ್ಕಿರಲಿಲ್ಲ. ಹೊಸ ಮಿತ್ರ ಪಾಕಿಸ್ತಾನಕ್ಕೆ ಅನುಕೂಲವಾಗಲೆಂದು ಭಾರತವನ್ನು ಬೆದರಿಸಿತ್ತಷ್ಟೇ. ಭಾರತ ನಿಜಕ್ಕೂ ಗಾಬರಿಗೊಂಡು ಪರ್ವತ ಯುದ್ಧದಲ್ಲಿ ಪರಿಣಿತವಾಗಿದ್ದ ತನ್ನ ಸೇನೆಯ ದೊಡ್ಡ ಭಾಗವನ್ನು ಕಾಶ್ಮೀರದಿಂದ ಚೀನಾ ಗಡಿಗೆ ವರ್ಗಾಯಿಸಿದ್ದರೆ, ಚೀನೀ ಗಡಿಯಲ್ಲಿ ನಮ್ಮ ಸೇನೆ ವ್ಯರ್ಥವಾಗಿ ಕಾಲ ಕಳೆಯುವಂತಾಗಿದ್ದರೆ, ಅತ್ತ ಕಾಶ್ಮೀರವನ್ನು ಆಕ್ರಮಿಸಿಕೊಳ್ಳಲು ಪಾಕ್ ಸೇನೆಗೆ ಮುಕ್ತ ಅವಕಾಶ ಸಿಕ್ಕಿ ಅವೆರಡೂ ಶತ್ರುದೇಶಗಳ ಹುನ್ನಾರ ಯಶಸ್ವಿಯಾಗುತ್ತಿತ್ತು. ಆದರೆ ವಿವೇಕಿ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಆ ಸಂಚಿಗೆ ಬಲಿಬೀಳಲಿಲ್ಲ.

ಭಾರತ ಏಕಕಾಲದಲ್ಲಿ ಎರಡು ರಣರಂಗಗಳಲ್ಲಿ ಸೆಣಸುವ ಅಪಾಯ ನಿಜವಾಗಿಯೂ ಇದ್ದದ್ದು 1971ರಲ್ಲಿ. ಆದರೆ ಅದನ್ನು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಮಾನೆಕ್​ಷಾ ಮತ್ತು ಪ್ರಧಾನಿ ಇಂದಿರಾ ಗಾಂಧಿ ಮೊದಲೇ ಮನಗಂಡು ಚಾಣಾಕ್ಷತೆಯಿಂದ ರಣತಂತ್ರ ರೂಪಿಸಿದರು. ಬಾಂಗ್ಲಾದೇಶವನ್ನು ವಿಮೋಚನೆಗೊಳಿಸಲು ಜೂನ್ ತಿಂಗಳಲ್ಲೇ ಯುದ್ಧ ಆರಂಭಿಸಬೇಕೆಂದು ಇಂದಿರಾ ಬಯಸಿದಾಗ ಮಾನೆಕ್​ಷಾ ಸಮ್ಮತಿಸಲಿಲ್ಲ. ಬೇಸಿಗೆಯ ಯುದ್ಧ ನಮಗನುಕೂಲವಲ್ಲ ಎನ್ನಲು ಅವರು ಕೊಟ್ಟ ಎರಡು ಕಾರಣಗಳಲ್ಲೊಂದು ಚೀನಾದಿಂದ ಬರಬಹುದಾದ ಅಪಾಯ. ಹಿಮಾಲಯದ ಕಣಿವೆಗಳು ಹಿಮಮುಕ್ತವಾಗಿದ್ದು ಚೀನೀ ಸೈನಿಕರು ಮತ್ತು ಸೇನಾವಾಹನಗಳ ಸಂಚಾರಕ್ಕೆ ಅವಕಾಶ ಒದಗಿಸುವುದರಿಂದ 1962ರಲ್ಲಿ ಮಾಡಿದಂತೆ ಅವರು ನಮ್ಮ ಎಲ್ಲೆಯೊಳಗೆ ಸುಲಭವಾಗಿ ನುಗ್ಗಿಬರಬಹುದು ಮತ್ತು ಎರಡು ರಣರಂಗಗಳ ಯುದ್ಧದಲ್ಲಿ ಸೆಣಸುವಂತೆ ನಮ್ಮ ಮೇಲೆ ಒತ್ತಡ ಹೇರಿ, ಯುದ್ಧದ ಗತಿ ಪಾಕಿಸ್ತಾನಕ್ಕೆ ಅನುಕೂಲವಾಗಿ ತಿರುಗುವಂತೆ ಮಾಡಬಹುದು ಎಂಬ ಮಾನೆಕ್​ಷಾರ ತರ್ಕವನ್ನು ಇಂದಿರಾ ಒಪ್ಪಿಕೊಂಡರು. ಇಬ್ಬರೂ ಸಮಾಲೋಚಿಸಿ, ಚಳಿಗಾಲದಲ್ಲಿ ಕಣಿವೆಮಾರ್ಗಗಳೆಲ್ಲವೂ ಹಿಮದಿಂದ ಮುಚ್ಚಿಹೋದಾಗ ಯುದ್ಧ ಆರಂಭಿಸಿದರೆ, ಕೈಕೈ ಹಿಸುಕಿಕೊಂಡು ಖಾಲಿ ಬೆದರಿಕೆಗಳನ್ನು ಒಡ್ಡುವುದರ ಹೊರತಾಗಿ ಬೇರೇನೂ ಮಾಡಲು ಚೀನೀಯರಿಗೆ ಅವಕಾಶವಿರುವುದಿಲ್ಲ, ಪಾಕಿಸ್ತಾನವನ್ನು ಹೇಗೆ ಬೇಕಾದರೂ ಶಿಕ್ಷಿಸಲು ನಾವು ಸ್ವತಂತ್ರರಿರುತ್ತೇವೆ ಎಂದು ಲೆಕ್ಕಹಾಕಿ, ಅದರಂತೆ ರಣತಂತ್ರ ರೂಪಿಸಿದರು. ಪರಿಣಾಮ ನಿಮಗೆ ಗೊತ್ತೇ ಇದೆ.

ಈ ಹಿನ್ನೆಲೆಯಲ್ಲಿ, ಎರಡು ರಣರಂಗಗಳಲ್ಲಿ ಸೆಣಸುವ ಅಪಾಯವನ್ನು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಬೆಳವಣಿಗೆಗಳು ಭಾರತದ ಮುಂದೆ ನಿರ್ವಿುಸುತ್ತಿರುವಂತೆ ಇಂದು ಕಾಣುತ್ತಿದೆ. ಇದರ ಜತೆಗೆ, ಅಂತಹದೊಂದು ಸ್ಥಿತಿ ನಿರ್ವಣವಾದರೆ ನಮ್ಮ ಶತ್ರುಗಳೂ ಎರಡು ಅಥವಾ ಅದಕ್ಕೂ ಹೆಚ್ಚಿನ ರಣರಂಗಗಳಲ್ಲಿ ಹೆಣಗಾಡುವ ಒತ್ತಡಕ್ಕೊಳಗಾಗುತ್ತವೆ ಎಂಬ ವಿಷಯವನ್ನೂ ಮುಂದಿನವಾರ ವಿವರವಾಗಿ ವಿಶ್ಲೇಷಿಸೋಣ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net