ಸೇವೆಯ ಪರಮ ಅದ್ಭುತ ಶಕ್ತಿಗೆ ಶರಣು!

4-681265b694655
Published on
ನಮ್ಮ ನಡುವೆಯೇ ಅಸಾಧಾರಣ ಸಾಧಕರು ಇದ್ದಾರೆ. ಅವರ ಕಾರ್ಯಗಳು ಸಮಾಜದ ಶಕ್ತಿಯನ್ನು ಹೆಚ್ಚಿಸಿವೆ. ನೊಂದವರ ಬದುಕನ್ನು ಉದ್ಧರಿಸಿವೆ. ಅದರ ಒಂದೊಂದು ಅಂಶವನ್ನಾದರೂ ಅವಲೋಕಿಸಿ ಅರ್ಥ ಮಾಡಿಕೊಂಡರೆ ಬದುಕಿನ ಉದ್ದೇಶ ಸ್ಪಷ್ಟವಾಗುತ್ತದೆ, ಸಮಾಧಾನ, ಸಾರ್ಥಕತೆ ಎಂಬುದು ನಿತ್ಯಸಂಗಾತಿಯಾಗುತ್ತದೆ. ಸಾಧಕರ ಸಾಧನಾಪಥವು ಪ್ರೇರಣೆ ಮೂಡಿಸುತ್ತದೆ.

ಒಳ್ಳೆಯ ಕರ್ಮ (ಕೆಲಸ)ಗಳನ್ನು ಹೆಚ್ಚೆಚ್ಚು ಮಾಡಿ!

ಸ್ವಾಮಿ, ನಮಗೆ ಜೀವನದಲ್ಲಿ ಒಂದಿಷ್ಟು ಸಂತೋಷ, ಸಮಾಧಾನ ಬೇಕು, ನೆಮ್ಮದಿ ಬೇಕು ಎಂದು ಕೇಳುವವರಿಗೆಲ್ಲ ನಮ್ಮ ಅಧ್ಯಾತ್ಮ ಮತ್ತು ನೈತಿಕ ಶಿಕ್ಷಣ ನೀಡುವ ಉತ್ತರ ಇದುವೇ, ಒಳ್ಳೆಯ ಕೆಲಸಗಳನ್ನು ಹೆಚ್ಚೆಚ್ಚು ಮಾಡಿ! ಆಂತರ್ಯದಲ್ಲಿ ಎಂದೂ ಬತ್ತದ ಸಂತಸದ ಸೆಲೆ ನೆಲೆಗೊಳ್ಳಬೇಕಾದರೆ, ಪ್ರತಿ ರಾತ್ರಿ ನೆಮ್ಮದಿಯ ನಿದ್ದೆ ಕಾಣಬೇಕಾದರೆ ಒಳ್ಳೆಯ ಕರ್ಮಗಳನ್ನು ಮಾಡಬೇಕು. ನಮ್ಮಲ್ಲಿ ತುಂಬ ಜನರ ಬಳಿ ನಿಖರ ಎನ್ನಬಹುದಾದ ಲೆಕ್ಕಾಚಾರ ಇರುತ್ತದೆ- ಎಷ್ಟು ದುಡ್ಡು ಸಂಪಾದಿಸಿದ್ದೇವೆ, ಎಷ್ಟು ಆಸ್ತಿ ನಮ್ಮ ಬಳಿ ಇದೆ, ಕಳೆದ ವರ್ಷಕ್ಕಿಂತ ಈ ಬಾರಿ ಚಿನ್ನ, ಬೆಳ್ಳಿಯ ಸಂಗ್ರಹ ಹೆಚ್ಚಿದೆಯೋ ಇಲ್ಲವೋ, ನಿವೃತ್ತಿ ಜೀವನಕ್ಕಾಗಿ ಏನೆಲ್ಲ ಕೂಡಿಟ್ಟಿದ್ದೇವೆ... ಹೀಗೆ ಭೌತಿಕ ಸಂಪತ್ತಿನ ಬಗ್ಗೆ ಲೆಕ್ಕ ತಪ್ಪಲು ಸಾಧ್ಯವೇ ಇಲ್ಲ. ಇದೆಲ್ಲ ಸರಿ, ಬದುಕಿನಲ್ಲಿ ಒಂದು ಹಂತದವರೆಗೆ ಬೇಕು. ಆದರೆ, ಜೀವನದಲ್ಲಿ ಎಷ್ಟು ಒಳ್ಳೆಯ ಕರ್ಮಗಳನ್ನು ಮಾಡಿದ್ದೇವೆ ಎಂಬ ಪ್ರಶ್ನೆ ಹಾಕಿಕೊಂಡರೆ ಉತ್ತರ ಸುಲಭಕ್ಕೆ ಸಿಗುವಂಥದ್ದಲ್ಲ. ಏಕೆಂದರೆ, ಒಳ್ಳೆಯದನ್ನು ಮಾಡಬೇಕು ಎಂಬ ತುಡಿತ, ಆ ನಿಟ್ಟಿನಲ್ಲಿನ ಶ್ರಮ ತುಂಬ ಅಸಾಧಾರಣ.

ಅಷ್ಟಕ್ಕೂ ನಾವು ಬದುಕಿನಲ್ಲಿ ಸುಖ-ದುಃಖಗಳನ್ನು ಅನುಭವಿಸುತ್ತಿರುವುದು ಈ ಕರ್ಮಗಳ ಲೆಕ್ಕಾಚಾರದಲ್ಲೇ. ಬೃಂದಾವನದ ಸ್ವಾಮಿ ಪ್ರೇಮಾನಂದ ಮಹಾರಾಜ್ ಈ ಬಗ್ಗೆ ಹೇಳುತ್ತ, ‘ಲೌಕಿಕ ಜಗತ್ತಿನಲ್ಲಾದರೆ ನ್ಯಾಯಾಲಯದಲ್ಲಿ ಪ್ರಕರಣ ಗೆಲ್ಲಲು ಸಾಕ್ಷ್ಯ, ಪುರಾವೆಗಳು ಬೇಕು, ಅದನ್ನು ಸಾಬೀತುಪಡಿಸಲು ಒಳ್ಳೆಯ ವಕೀಲರು ಬೇಕು. ಆದರೆ, ಮೇಲಿನ ನ್ಯಾಯಾಲಯದಲ್ಲಿ ಕುಳಿತಿರುವ ಪರಮಾತ್ಮನಿಗೆ ಇದ್ಯಾವುದೂ ಬೇಡ. ಅವನ್ನು ಮನುಷ್ಯ ಕರ್ಮಗಳನ್ನಷ್ಟೇ ಗಮನಿಸುತ್ತಾನೆ. ಕರ್ಮಗಳ ಆಧಾರದಲ್ಲಿ ನ್ಯಾಯ ನೀಡುತ್ತಾನೆ’.

ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ಸ್ವಾರ್ಥ, ಲೋಭ, ಮದ, ಮತ್ಸರಗಳೇ ತುಂಬಿ ‘ನಾನು’ ‘ನಾನು’ ಎಂಬ ಅಹಂನ ಮೇಲಾಟ ನಡೆದಿರುವಾಗ ಒಂದಿಷ್ಟು ಜನ ಭಿನ್ನಹಾದಿಯನ್ನು ತುಳಿದು ಎಲ್ಲರನ್ನೂ ಬೆರಗುಗೊಳಿಸುತ್ತಾರೆ ಮಾತ್ರವಲ್ಲ ಜೀವನ ಸಾರ್ಥಕತೆಯ ದಾರಿಯನ್ನು ದರ್ಶಿಸುತ್ತಾರೆ. ಇದಕ್ಕೆ ಸೇವೆ ಎಂಬ ಶ್ರೇಷ್ಠ ಹೆಸರು. ಈ ಸೇವೆ ಅಸಂಖ್ಯ ಬದುಕುಗಳನ್ನು ಬದಲಿಸುತ್ತದೆ, ಅಸಂಖ್ಯ ಬದುಕುಗಳನ್ನು ಕಟ್ಟಿಕೊಡುತ್ತದೆ. ಮಾನವೀಯತೆ, ಸಂವೇದನೆ,

ಅಂತಃಕರಣದ ಶಕ್ತಿಯನ್ನು ಹೆಚ್ಚಿಸುತ್ತದೆ.

ಮೊನ್ನೆ (ಏಪ್ರಿಲ್ 28) ರಾಷ್ಟ್ರಪತಿ ಭವನದಲ್ಲಿ ಪದ್ಮ ಪುರಸ್ಕಾರಗಳನ್ನು ಪ್ರದಾನಿಸಲಾಯಿತು. (ಈ ಸಮಾರಂಭದ ಇನ್ನೊಂದು ಕಂತು ನಡೆಯಬೇಕಿದೆ) ರಾಷ್ಟ್ರಪತಿ ಭವನವೆಂದರೆ ಅದೊಂದು ವೈಭವದ ಲೋಕ. ಆದರೆ ಮೊನ್ನೆ ಚಪ್ಪಲಿ ಧರಿಸದ, ಅಂಗಿ ಹಾಕಿಕೊಳ್ಳದ, ಊರುಗೋಲಿನ ಸಹಾಯದಿಂದ ನಡೆಯುವ, ಮುಖದಲ್ಲಿ ಮುಗ್ಧನಗೆಯನ್ನೇ ಆಭರಣವಾಗಿಸಿಕೊಂಡ ಸಾಧಕರನೇಕರು ಒಬ್ಬೊಬ್ಬರಾಗಿ ಪದ್ಮ ಗೌರವಕ್ಕೆ ಭಾಜನರಾಗುತ್ತಿದ್ದರೆ ಭಾರತದ ಸೇವೆಯ ಪರಂಪರೆ, ‘ನಾನು ಅಲ್ಲ ನಾವು’ ಎಂಬ ಜೀವನಮೌಲ್ಯದ ಸಾಕ್ಷಾತ್ಕಾರ ಕಣ್ಮುಂದೆ ಪಥಸಂಚಲನ ಮಾಡಿದಂತಿತ್ತು.

ಸಂವೇದನೆ ಜಾಗೃತಗೊಳ್ಳದೆ ಇಂಥ ಮಹತ್ಕಾರ್ಯಗಳು ನಡೆಯಲು ಸಾಧ್ಯವೇ ಇಲ್ಲ. ಎರಡು ಅಡಿ ಜಮೀನಿಗಾಗಿ ಕೋರ್ಟ್ ಮೆಟ್ಟಿಲು ಹತ್ತುವ ಸೋದರರು, ಆಸ್ತಿ ಕಸಿದುಕೊಂಡು ಅಪ್ಪ-ಅಮ್ಮನನ್ನೇ ಮನೆಯಿಂದ ಹೊರಹಾಕುವ ಮಕ್ಕಳು, ಸಂಪತ್ತಿನ ಆಸೆಗಾಗಿ ಕಲಹ, ಕೊಲೆಯಂಥ ಹೀನಾತಿಹೀನ ಕೃತ್ಯಗಳನ್ನು ದಿನವೂ ನೋಡುವ ಈ ಸಮಾಜದಲ್ಲೇ ತಮ್ಮ ಇಡೀ ಬದುಕನ್ನು ಮತ್ತೊಬ್ಬರ ಶ್ರೇಯೋಭಿವೃದ್ಧಿಗೆ, ಸಮಾಜದ ಅಭಿವೃದ್ಧಿಗೆ ಮೀಸಲಿಡುವ ಸಂತಸದೃಶ ಜನರಿದ್ದಾರಲ್ಲ, ಅದುವೇ ಸಮಾಜದ ಶಕ್ತಿ, ಸಮಾಜ ಸಾಗಬೇಕಾದ ದಿಕ್ಕು ಕೂಡ ಹೌದು. ಸೇವೆ ಸಮಾಜದಲ್ಲಿ ತಂದಿರುವ ಬದಲಾವಣೆಯ ಅಲೆ ದೊಡ್ಡದು. ಆದರೆ, ಇದು ಬಿಡಿ ಬಿಡಿಯಾಗಿ ಚಿತ್ರಿತವಾಗುವುದರಿಂದ ಇದರ ಒಟ್ಟಾರೆ ಪರಿಣಾಮ ಬೇಗನೆ ಅರಿವಿಗೆ ಬರುವುದಿಲ್ಲ.

ಸಮಾಜ, ವ್ಯವಸ್ಥೆಯಲ್ಲಿನ ಕೊರತೆಗಳನ್ನು ನಾವು ಪ್ರತಿನಿತ್ಯ ನೋಡುತ್ತೇವೆ, ಗೊಣಗುತ್ತೇವೆ. ಕೆಲವರು ಸರ್ಕಾರದ ವಿರುದ್ಧ ರೋಷಾವೇಷ ಹೊರಹಾಕುತ್ತಾರೆ, ‘ನಾವು ತೆರಿಗೆ ಕಟ್ಟುತ್ತಿಲ್ಲವೆ? ಸರ್ಕಾರವೇ ಎಲ್ಲ ಮಾಡಲಿ’ ಎಂದು ಬಯಸುತ್ತಾರೆ. ಇನ್ನೊಂದಿಷ್ಟು ಜನರು ಸಮಾಜದ ಕೊರತೆಯನ್ನು ನಿವಾರಿಸಲು ತಾನು ಏನು ಮಾಡಬಹುದು ಎಂದು ಯೋಚಿಸಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಾರೆ.

2025ನೇ ಸಾಲಿನ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿರುವ ಮಧ್ಯಪ್ರದೇಶದ ವಿನಾಯಕ ಲೋಹಾನಿ ಐಐಟಿ ಖರಗಪುರ ಮತ್ತು ಐಐಎಂ ಕೋಲ್ಕತ್ತದ ಮಾಜಿ ವಿದ್ಯಾರ್ಥಿ. 2003ರಲ್ಲಿ ಇವರ ಸಹಪಾಠಿಗಳೆಲ್ಲ ಕಾಪೋರೇಟ್ ಲೋಕದಲ್ಲಿ ವೃತ್ತಿ ಬದುಕು ಆರಂಭಿಸಿದರೆ, ಇವರು ಸಮಾಜದಲ್ಲಿನ ಕೊರತೆಗಳಿಗೆ ಪರಿಹಾರ ಹುಡುಕಲು ಹೊರಟರು. ‘ಪರಿವಾರ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಉಚಿತವಾಗಿ ತರಬೇತಿ ಆರಂಭಿಸಿದರು. ಪಶ್ಚಿಮ ಬಂಗಾಳ, ಉತ್ತರ ಪ್ರದೇಶದಲ್ಲಿ ಇವರ ಕೇಂದ್ರಗಳಲ್ಲಿ ತರಬೇತಿ ಪಡೆದುಕೊಂಡ ಬಡ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳಲ್ಲಿದ್ದಾರೆ. ಆ ವಿದ್ಯಾರ್ಥಿಗಳು ತಾವು ನಡೆದುಬಂದ ದಾರಿಯನ್ನು ಮರೆತಿಲ್ಲ. ಹಾಗಾಗಿ, ಸಮಾಜಮುಖಿ ಕಾರ್ಯಗಳಿಗಾಗಿ ಲೋಹಾನಿಯವರ ಜೊತೆ ಕೈಜೋಡಿಸಿದ್ದಾರೆ.

2016ರಲ್ಲಿ ‘ಪರಿವಾರ’ದ ಕಾರ್ಯ ಮಧ್ಯಪ್ರದೇಶಕ್ಕೆ ವಿಸ್ತಾರವಾಯಿತು. ಅಲ್ಲಿ ಲೋಹಾನಿ ಅವರಿಗೆ ಕಂಡಿದ್ದು ಆರೋಗ್ಯ ಸೌಲಭ್ಯಗಳ ಕೊರತೆ. ಹಾಗಾಗಿ, ಒಂದೊಂದೇ ಜಿಲ್ಲೆಯಂತೆ 23 ಜಿಲ್ಲೆಗಳಲ್ಲಿ ಆಂಬುಲೆನ್ಸ್ ಸೇವೆ ಆರಂಭಿಸಿದ್ದಾರೆ. 23 ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ 93 ಆಂಬುಲೆನ್ಸ್​ಗಳು 3 ಲಕ್ಷಕ್ಕೂ ಅಧಿಕ ರೋಗಿಗಳ ಜೀವವನ್ನು ಉಳಿಸಿವೆ. 36 ಜಿಲ್ಲೆಗಳಲ್ಲಿ 5,700ಕ್ಕೂ ಅಧಿಕ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸಿದ್ದಾರೆ. ಈ ಶಿಬಿರಗಳಲ್ಲಿ 6.48 ಲಕ್ಷ ಜನರು ಚಿಕಿತ್ಸೆ ಪಡೆದಿದ್ದಾರೆ. 72 ಸಾವಿರ ಉಚಿತ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ಹಳ್ಳಿಯವರು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೂ ಚಿಕಿತ್ಸೆ ಪಡೆಯಲು ಪೇಟೆಗೆ ಬರುವಂಥ ಸ್ಥಿತಿ. ಇದನ್ನು ತಪ್ಪಿಸಬೇಕು ಎಂದು ಸಂಕಲ್ಪಿಸಿ 8 ಜಿಲ್ಲೆಗಳ 982 ಗ್ರಾಮಗಳಲ್ಲಿ 21 ಸಂಚಾರಿ ಕ್ಲಿನಿಕ್​ಗಳನ್ನು ನಡೆಸುತ್ತಿದ್ದಾರೆ. ಸಂಸ್ಥೆಯ ಚಟುವಟಿಕೆಗಳನ್ನು ಇತರ ರಾಜ್ಯಗಳಿಗೂ ವಿಸ್ತರಿಸುವ ಉದ್ದೇಶ ಹೊಂದಿದ್ದಾರೆ. ಇಷ್ಟೆಲ್ಲ ಮಾಡಿಯೂ ಲೋಹಾನಿ, ‘ಒಬ್ಬ ಉಚ್ಚಶಿಕ್ಷಿತನಾಗಿ ಸಮಾಜದ ಕೊರತೆ ನಿವಾರಿಸುವುದು, ಜನರ ಜೀವನಮಟ್ಟ ಸುಧಾರಿಸುವುದು ನನ್ನ ಕರ್ತವ್ಯ. ಅದನ್ನಷ್ಟೇ ಮಾಡಿದ್ದೇನೆ’ ಎಂದು ಸರಳತೆಯಿಂದ ಹೇಳುತ್ತಾರೆ.

ಪ್ರಖರ ಪ್ರವಚನಗಳಿಂದ ಹೆಸರುವಾಸಿಯಾಗಿರುವ ಸಾಧಿ್ವ ಋತಂಬರಾ ಅವರ ಅಧ್ಯಾತ್ಮ ಲೋಕವೇ ವಿಶಾಲವಾಗಿದೆ. ಭಕ್ತರು ‘ದೀದೀ ಮಾ’ ಎಂದೇ ಕರೆಯುವ ಸಾಧಿ್ವ ಋತಂಬರಾ ಅವರಿಗೆ ಈ ಬಾರಿಯ ಪದ್ಮಭೂಷಣ ಗೌರವ ಸಂದಿದೆ. ಭಾರತದ ಅಧ್ಯಾತ್ಮನಗರಿ ಬೃಂದಾವನದಿಂದ ಸ್ವಲ್ಪ ದೂರದಲ್ಲೇ ವಾತ್ಸಲ್ಯ ಗ್ರಾಮವನ್ನು ಇವರು ಸ್ಥಾಪಿಸಿದ್ದಾರೆ. ‘ಕೃಷ್ಣನ ಭೂಮಿಯಲ್ಲಿ ಯಾರೂ ಅನಾಥರಾಗಿ ಇರಬಾರದು’ ಎಂಬ ಉದ್ದೇಶಕ್ಕಾಗಿ ವಾತ್ಸಲ್ಯ ಗ್ರಾಮ ಸ್ಥಾಪಿಸಿದ್ದು, ಇಲ್ಲಿ ಅನಾಥ ಮಕ್ಕಳಿಗೆ ಶಿಕ್ಷಣ, ವಸತಿ, ಸಂಸ್ಕಾರ, ಪರಿತ್ಯಕ್ತ ಮಹಿಳೆಯರಿಗೆ ಆಶ್ರಯ, ಕೌಶಲ ತರಬೇತಿ, ವೃದ್ಧರಿಗೆ ಎಲ್ಲ ಬಗೆಯ ನೆರವು ನೀಡಲಾಗುತ್ತದೆ. ಎಂಟು ವರ್ಷದ ಮಕ್ಕಳಿಂದ ಹಿಡಿದು 80 ವರ್ಷದ ವಯೋವೃದ್ಧರವರೆಗೂ ನೂರಾರು ಜನರು ವಾತ್ಸಲ್ಯ ಗ್ರಾಮದಲ್ಲಿ ಹೊಸ ಬದುಕನ್ನು ಕಟ್ಟಿಕೊಂಡಿದ್ದಾರೆ. ‘ನಮಗೆ ಯಾರೂ ಇಲ್ಲ’ ಎಂಬ ಅನಾಥಭಾವ ಶಾಶ್ವತವಾಗಿ ಮರೆಯಾಗಿದೆ, ನಗು ಅರಳಿದೆ. ಸೇವೆ ಎಂಬುದು ಹೇಗೆ ದುಃಖಗಳನ್ನು ನಿವಾರಿಸುತ್ತದೆ, ನಲಿವನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಇದಕ್ಕಿಂತ ಜ್ವಲಂತ ನಿದರ್ಶನ ಬೇಕೆ?

ನಮ್ಮ ಕರ್ನಾಟಕದವರೇ ಆದ, ಅದರಲ್ಲೂ ಹಿಂದುಳಿದ ಕಲ್ಯಾಣ ಕರ್ನಾಟಕದ ಕಲಬುರಗಿಯಿಂದ ಬಂದ ಡಾ.ವಿಜಯಲಕ್ಷ್ಮೀ ದೇಶಮಾನೆಯವರು ಪದ್ಮಶ್ರೀ ಗೌರವ ಸ್ವೀಕರಿಸಿದಾಗ, ಅಲ್ಲಿ ಕಡು ಬಡತನ, ನೋವು ದಾರುಣ ಸೋಲನ್ನು ಕಂಡಿದ್ದವು. ಅಸಾಧಾರಣ ಛಲ, ಶ್ರಮ, ಇಚ್ಛಾಶಕ್ತಿಗೆ ಗೆಲುವು ದೊರಕಿತ್ತು. ಖ್ಯಾತ ವೈದ್ಯರಾಗಿ, (ಕೆಲ ಅವಧಿಯವರೆಗೆ ನಿರ್ದೇಶಕರಾಗಿ) ಕಿದ್ವಾಯಿಯಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ ಅವರು ಸಾವಿರಾರು ಕ್ಯಾನ್ಸರ್ ರೋಗಿಗಳ ಪ್ರಾಣ ಉಳಿಸಿದ್ದಾರೆ. ಅವರು ಸರ್ಜರಿಯಲ್ಲಿ ಪರಿಣತರು. ಹಾಗಾಗಿ, ವೃತ್ತಿಗೆ, ರೋಗಿಗಳಿಗೆ ತೊಂದರೆಯಾಗಬಾರದು ಎಂದು ವೈವಾಹಿಕ ಬದುಕಿನಿಂದ ದೂರವೇ ಉಳಿದ ಶ್ರೇಷ್ಠ ಸಮರ್ಪಣೆ ಅವರದ್ದು. ರೋಗಿಗಳಲ್ಲೇ ಶ್ರೀಕೃಷ್ಣನನ್ನು ಕಾಣುತ್ತ ಉಪಚರಿಸಿದರು.

ನಿವೃತ್ತಿಯ ನಂತರ ಬದುಕಿಗೆ ಸಾರ್ಥಕತೆಯ ಇನ್ನೊಂದು ಆಯಾಮವನ್ನು ನೀಡಿ, ಬೆಂಗಳೂರು ಬಸವನಗುಡಿಯ ಅಬಲಾಶ್ರಮ ಅಧ್ಯಕ್ಷರಾಗಿ ಸೇವಾ ಬದುಕಿಗೆ ಮತ್ತೊಂದು ಗರಿ ಮೂಡಿಸಿದ್ದಾರೆ. ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಶುಲ್ಕ ತುಂಬಲು ಹಣ ಇಲ್ಲದಂಥ ಬಡತನದ ಸ್ಥಿತಿಯಿಂದ ಬಂದು ಹೆಜ್ಜೆಹೆಜ್ಜೆಗೂ ಸವಾಲುಗಳನ್ನು ಸೋಲಿಸಿದವರು ಡಾ.ದೇಶಮಾನೆ. ವೈದ್ಯಕೀಯ ಶುಲ್ಕ ತುಂಬಲು ತಾಯಿಯ ಮಂಗಳಸೂತ್ರವನ್ನು ಅಡವಿಟ್ಟ ಘಟನೆಯನ್ನು ಮರೆಯದ್ದರಿಂದಲೇ ಅವರಿಗೆ ಬಡವರ ಕಷ್ಟಗಳು ಬೇಗ ಅರ್ಥವಾಗುತ್ತವೆ. ಹಾಗಾಗಿ, ಆ ನೋವಿಗೆ ಸ್ಪಂದಿಸುತ್ತಾರೆ, ಸಾಂತ್ವನಿಸುತ್ತಾರೆ. ‘ಕಷ್ಟಗಳು ಬಂದಾಗ ಅದನ್ನು ಒಟ್ಟಾಗಿ ಹಿಮ್ಮೆಟ್ಟಿಸಿದೆವು. ಅದುವೇ ನಮಗೆ ಮುಂದೆ ಸಾಗಲು ದಾರಿ ಸೃಷ್ಟಿಸಿತು’ ಎನ್ನುವ ದೇಶಮಾನೆಯವರ ನಿಸ್ವಾರ್ಥ ಸೇವೆಯೇ ಸ್ಪೂರ್ತಿ ಮೂಡಿಸುವಂಥದ್ದು. ಕಲಬುರಗಿಯಿಂದ ಕಿದ್ವಾಯಿವರೆಗಿನ ಅವರ ಜೀವನ ಪಯಣ ಬದುಕಿನ ಹಲವು ಮೌಲ್ಯಗಳನ್ನು ಒಳಗೊಂಡಿದೆ. ಹಾಗಾಗಿಯೇ, ಅವರು ಪದ್ಮಶ್ರೀ ಗೌರವವನ್ನು ಹುಟ್ಟೂರಾದ ಕಲಬುರಗಿ ಮತ್ತು ಅಲ್ಲಿಯ ಜನರಿಗೆ ಸಮರ್ಪಿಸಿದ್ದಾರೆ.

ಈ ಸಾಧಕರ ಬದುಕನ್ನು ಅವಲೋಕಿಸಿದಾಗ, ಅವರೆಲ್ಲ ತಮ್ಮದೇ ದೊಡ್ಡ ಕಷ್ಟ ಎಂದು ಭಾವಿಸಿ, ಲಕ್ಷ್ಮಣರೇಖೆ ಹಾಕಿಕೊಳ್ಳಲಿಲ್ಲ. ಮುಖ್ಯವಾಗಿ, ಸಮಾಜದಲ್ಲಿ ಬದಲಾವಣೆ ತರಬೇಕು ಎಂಬ ತುಡಿತ, ಜನರ ಬಗೆಗಿದ್ದ ಕಾಳಜಿ, ಇತರರ ಸಂತೋಷದಲ್ಲಿ ಕಾಣುವ ಸಾರ್ಥಕತೆ ಅವರನ್ನು ಇತರರಿಗಿಂತ ಭಿನ್ನವಾಗಿಸಿ, ಇಂದು ಸಾಧಕರ ಸಾಲಿನಲ್ಲಿ ತಂದುನಿಲ್ಲಿಸಿವೆ. ಇಂಥವರ ಕಾರ್ಯ ಮತ್ತು ಬದುಕಿನಿಂದ ಪ್ರೇರಣೆ ಪಡೆದು ಸತ್ಕರ್ಮಗಳ ಸಂಖ್ಯೆ ಹೆಚ್ಚಬೇಕಿದೆ.

ಸಮಾಜದಲ್ಲಿ ನೋವು, ಬವಣೆ ಇದ್ದದ್ದೇ. ಆದರೆ, ಆ ಕಣ್ಣೀರನ್ನು ಒರೆಸುವ, ಹೆಗಲುಕೊಟ್ಟು ನಡೆಯುವವರ ಸಂಖ್ಯೆ ಹೆಚ್ಚಬೇಕಿದೆ. ಅಷ್ಟಕ್ಕೂ, ಸೇವೆ ಎಂದರೆ ದೊಡ್ಡ ಸಂಸ್ಥೆಯನ್ನು ಸ್ಥಾಪಿಸಿ, ಬೃಹತಾದ ಕಾರ್ಯವೇ ಮಾಡಬೇಕು ಅಂತೇನಲ್ಲ. ಸಾಮರ್ಥ್ಯ ಉಳ್ಳವರು ಖಂಡಿತ ಮಾಡಲಿ. ಆದರೆ, ಹಸಿದವರಿಗೆ ಒಂದು ಊಟ ನೀಡುವುದು, ಚಳಿ-ಬಿಸಿಲಿಂದ ಬಳಲುತ್ತಿರುವವರಿಗೆ ಕೈಲಾದ ಸಹಾಯ ಮಾಡುವುದು, ಸಹ ಮಾನವಜೀವಿಗಳೊಂದಿಗೆ ಪ್ರೇಮದಿಂದ ವ್ಯವಹರಿಸುವುದು, ಕಡೆಯ ಪಕ್ಷ ಬರೀ ನಮಗಾಗಿ ಬದುಕುವುದಕ್ಕಿಂತ ಸ್ವಾರ್ಥದ ಚೌಕಟ್ಟನ್ನು ದಾಟಿ, ಒಂದಿಷ್ಟು ಜನರ ಮುಖದಲ್ಲಿ ನಗು ಅರಳಿಸುವುದು... ಇದೆಲ್ಲ ಸೇವೆಯೇ, ಸತ್ಕರ್ಮವೇ. ಈ ಪಥದಲ್ಲಿ ಸಾಗುವವರ ಸಂಖ್ಯೆ ಹೆಚ್ಚಾದಷ್ಟು, ಸಾತ್ವಿಕ ಶಕ್ತಿ ಬೆಳೆಯುತ್ತದೆ, ನೋವುಗಳು ಮರೆಯಾಗಿ, ಸಮಾಧಾನ ನೆಲೆಸುತ್ತದೆ. ಇಂಥ ಮಾನವೀಯ ಧರ್ಮ ಈಗಿನ ಜರೂರು. ಇದು ಎಲ್ಲ ವಿಕಾರಗಳನ್ನು ನಾಶ ಮಾಡಬಲ್ಲದು. ನಮ್ಮ ಸತ್ಕರ್ಮಗಳ ಸಂಖ್ಯೆಯನ್ನೂ ಹೆಚ್ಚಿಸಬಲ್ಲದು (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net