

ಕೆಲವು ಪ್ರಾಣಿಗಳು ಜನರ ಪ್ರಾಣಹಾನಿ ಮಾಡುವಾಗ, ಬೆಳೆ ನಾಶ ಮಾಡುವುದನ್ನು ಕಂಡಾಗ ಆಕ್ರೋಶ ಮೂಡುವುದು ಸಹಜ. ರೈತರ ಸಂಕಟ ಅರ್ಥವಾಗುವಂಥದೇ. ಆದರೆ ನಿಸರ್ಗವು ಈ ಜಗತ್ತನ್ನು ಮಾನವನಿಗೆ ಮಾತ್ರ ಸೃಷ್ಟಿಸಿಲ್ಲ ಎಂಬುದನ್ನು ಅರಿತಾಗ, ಪ್ರಾಣಿ-ಮಾನವ ಸಂಘರ್ಷದ ಕಾರಣ ಮತ್ತು ಪರಿಹಾರಗಳು ಹೊಳೆಯುತ್ತ ಹೋಗುತ್ತವೆ.
ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಆತ್ಮೀಯರಾದ ರಘುನಂದನ ಭಟ್ ಅವರ ಜತೆಗೆ ಶರಾವತಿ ಕಣಿವೆಗೆ ಬೈಕ್ನಲ್ಲಿ ಸುತ್ತಾಡಲು ಹೋದ ಸಮಯ. ಶರಾವತಿ ಕೊಳ್ಳ ವೀಕ್ಷಣಾ ಸ್ಥಳದ ಸನಿಹದಲ್ಲಿ ಸಾಗುತ್ತಿದ್ದೆವು. ಕಾಡಿನಲ್ಲಿ ಯಾವುದಾದರೂ ಪ್ರಾಣಿ ಕಂಡೀತು ಎಂಬ ಆಸೆಯಿಂದ ಕಣ್ಣು-ಕಿವಿ ತೆರೆದಿತ್ತು. ರಸ್ತೆಯ ಬಲ ಭಾಗದಲ್ಲಿ ಕಡಿದಾದ ಪ್ರದೇಶ. ಅಲ್ಲಿನ ಬೈನೆ ಮರವೊಂದರ ಮೇಲೆ ಏನೋ ಸದ್ದು ಕೇಳಿದ ಹಾಗಾಯಿತು. ಬಹುಶಃ ಮಂಗ ಇರಬಹುದು ಎಂದು ಭಾವಿಸಿದೆವಾದರೂ ಕಣ್ಣ ಎದುರಿಗೆ ಬೇರೆಯದೇ ನೋಟ ರೂಪ ತಳೆದಿತ್ತು. ಹೌದು, ಅದು ಸಾಮಾನ್ಯ ಮಂಗ ಆಗಿರಲಿಲ್ಲ. ಸಿಂಹ ಬಾಲದ ಮಂಗ! ನಮ್ಮ ಅಚ್ಚರಿ ಮತ್ತು ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಅಲ್ಲದೇ ಇನ್ನೇನು? ಬಹಳ ಅಪರೂಪಕ್ಕೆ ಕಣ್ಣಿಗೆ ಬೀಳುವ ಜಾತಿ ಇದು. ಕಣ್ಣರಳಿಸಿ ನೋಡಿದರೆ ದೊಡ್ಡ ಸಿಂಗಳೀಕದ ಜತೆಗೆ ಇನ್ನೂ ಐದು ಇದ್ದವು. ಆ ಪೈಕಿ ಎರಡು ಮರಿಗಳು.
ಮೋಡ ಮುಸುಕಿದ ವಾತಾವರಣ ಆದುದರಿಂದ ಸರಿಯಾಗಿ ಫೋಟೋ ತೆಗೆಯಲು ಆಗದ ಸ್ಥಿತಿ. ಹೀಗಾಗಿ ಅವನ್ನು ನೆಟ್ಟ ನೋಟದಿಂದ ನೋಡುವುದೊಂದೇ ಮಾರ್ಗವಾಗಿತ್ತು. ಅವು ಬಹುಶಃ ಬೈನೆ ಮರದ ಹಣ್ಣು ಮತ್ತು ಕಾಯಿಗಳನ್ನು ಅರಸಿಕೊಂಡು ಅತ್ತ ಬಂದಿದ್ದವೇನೋ. ಸ್ವಲ್ಪ ಹೊತ್ತು ಅಲ್ಲಿದ್ದು ನಂತರ ಕಣಿವೆಯ ಆಳಕ್ಕೆ ಹೊರಟು ಹೋದವು.
ಈ ಸಿಂಗಳೀಕ ಇದೆಯಲ್ಲ, (ಜಿಟ್ಞಠಿಚಜ್ಝಿಛಿಛ ಞಚ್ಚಚಟ್ಠಿಛಿ) ಇವನ್ನು ವನ್ಯಜೀವಿ ತಜ್ಞರು ಅಳಿವಿನ ಅಂಚಿನಲ್ಲಿರುವ ವಿರಳ ಪ್ರಾಣಿ ಎಂದು ಹೇಳುತ್ತಾರೆ. ಶರಾವತಿ ಕೊಳ್ಳದಲ್ಲಿ ಸಿಂಗಳೀಕಗಳು ಇವೆ ಎಂದು ರಣಜಿತ್ ಡೇನಿಯಲ್ ಎಂಬ ಪಕ್ಷಿ ತಜ್ಞ 1983-84ರಲ್ಲಿ ದಾಖಲಿಸಿದ್ದರು. ಸಿಂಗಳೀಕಗಳು ಕಾಣುವುದು ಅಪರೂಪವಾಗಿದ್ದರಿಂದ ಇವು ನಾಶ ಹೊಂದಿರಬಹುದು ಎಂಬ ಸಂಶಯ ಕೂಡ ತಜ್ಞರಿಗೆ ಉಂಟಾಗಿತ್ತು. ದಕ್ಷಿಣ ಭಾರತದ ಪಶ್ಚಿಮಘಟ್ಟದ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಮಾತ್ರ ಇವು ವಾಸಿಸುವ ಶಕ್ತಿಯನ್ನು ಹೊಂದಿವೆ. ಅಂದರೆ ಅವಕ್ಕೆ ಪೂರಕ ವಾತಾವರಣ ಅಲ್ಲಿದೆ. ಉಳಿದಂತೆ ಬೇರೆ ಕಡೆಗಳಲ್ಲಿ ಇವುಗಳ ಅಸ್ತಿತ್ವ ಇಲ್ಲ ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ. ನಿತ್ಯಹರಿದ್ವರ್ಣ ಕಾಡುಗಳು ನಾಶವಾದರೆ ಸಿಂಗಳೀಕ ಸಂತತಿ ಕೂಡ ಅವಸಾನದತ್ತ ಸಾಗುತ್ತದೆ ಎಂಬುದು ತಜ್ಞರು ನೀಡುವ ಎಚ್ಚರಿಕೆ.
ಇಡೀ ದೇಹ ಕಪ್ಪು ಬಣ್ಣದಿಂದ ಕೂಡಿದ್ದು ಮುಖದ ಸುತ್ತ ಸಿಂಹದ ಹಾಗೆ ಕೇಸರ ಹೊಂದಿರುವ ವಿಶಿಷ್ಟ ಪ್ರಾಣಿ ಇದು. ಹಣ್ಣುಗಳನ್ನು ಮುಖ್ಯ ಆಹಾರವಾಗಿ ಹೊಂದಿರುವ ಈ ಸಸ್ತನಿ ಹಿಂದೊಂದು ಕಾಲದಲ್ಲಿ ದಕ್ಷಿಣ ಭಾರತದ ಮಳೆ ಕಾಡುಗಳಲ್ಲಿ ವ್ಯಾಪಕ ಸಂಖ್ಯೆಯಲ್ಲಿ ಇದ್ದವು ಎಂದು ಹೇಳಲಾಗುತ್ತದೆ. ಅರಣ್ಯ ಅತಿಕ್ರಮಣ, ಕಾಡನ್ನು ಕೃಷಿ ಭೂಮಿಯಾಗಿ ಪರಿವರ್ತಿಸುವುದು, ಬೇಟೆ ಇತ್ಯಾದಿ ಕಾರಣಗಳಿಂದಾಗಿ ಸಿಂಗಳೀಕಗಳ ಆವಾಸಸ್ಥಾನ ಕಡಿಮೆಯಾಗಿದೆ ಎಂದು ತಜ್ಞರು ಗುರುತಿಸಿದ್ದಾರೆ. ವನ್ಯಜೀವಿ ತಜ್ಞ ಡಾ. ಕೆ. ಉಲ್ಲಾಸ ಕಾರಂತ ಅವರು ಸಿಂಗಳೀಕಗಳ ಕುರಿತು ಅಧ್ಯಯನ ನಡೆಸಿದ್ದರು. ಕರ್ನಾಟಕದ ವ್ಯಾಪ್ತಿಯಲ್ಲಿ ಸಿಂಗಳೀಕಗಳ ವಾಸಕ್ಕೆ ಅನುಕೂಲಕರವಾದ ಸುಮಾರು ಒಂದು ಸಾವಿರ ಕಿಲೋಮೀಟರ್ ಅರಣ್ಯ ಪ್ರದೇಶ ಇದೆ ಎಂಬುದನ್ನು ಅವರು ದಾಖಲಿಸಿದ್ದರು. ಅವುಗಳ ಸುಮಾರು 200 ಗುಂಪುಗಳು ಇರಬಹುದು; ಸಂಖ್ಯಾತ್ಮಕವಾಗಿ ಸುಮಾರು 3,000 ಇರಬಹುದೆಂಬುದು ಅವರ ಅಧ್ಯಯನದಲ್ಲಿ ಕಂಡುಬಂದ ಅಂಶವಾಗಿತ್ತು. ಆದರೆ ಕ್ರಮೇಣ ಅವುಗಳ ಸಂಖ್ಯೆ ಕಡಿಮೆಯಾಗುತ್ತ ಬಂದಿರುವುದನ್ನು ಹಲವರು ಉಲ್ಲೇಖಿಸಿದ್ದಾರೆ. ಹೀಗಾಗಿಯೇ ಸಿಂಗಳೀಕ ಸಂತತಿ ರಕ್ಷಣೆಯ ಕುರಿತು ಆಲೋಚನೆಗಳು ನಡೆದು ಸಿಂಗಳೀಕ ಸಂರಕ್ಷಣಾ ಪ್ರದೇಶ ಘೊಷಣೆಗೆ ಸರ್ಕಾರ ಮುಂದಾಯಿತು.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಶರಾವತಿ ಕಣಿವೆ ಪ್ರದೇಶ ಹಾಗೂ ಆಗುಂಬೆ ಘಟ್ಟದ ಪ್ರದೇಶಗಳಲ್ಲಿ ಸಿಂಗಳೀಕಗಳು ನೆಲೆ ಕಂಡುಕೊಂಡಿವೆ. ಹಾಗಂತ ಅಲ್ಲಿ ಸಂಚರಿಸುವವರಿಗೆಲ್ಲ ಅವು ಕಾಣುತ್ತವೆ ಎಂದೇನಿಲ್ಲ. ಸಿಂಗಳೀಕದ ರಕ್ತ ಮತ್ತು ಮಾಂಸ ಅಸ್ತಮಾ ರೋಗಕ್ಕೆ ಉತ್ತಮ ಔಷಧ ಹಾಗೂ ಶಕ್ತಿವರ್ಧಕ ಎಂಬ ನಂಬಿಕೆ ಇರುವುದರಿಂದಾಗಿ ಅವುಗಳ ಕಳ್ಳಬೇಟೆ ಕೂಡ ಜಾಸ್ತಿಯಾಗಿದೆ. ಹೀಗಾಗಿ ಅವುಗಳ ಸಂತತಿ ಕಡಿಮೆಯಾಗುತ್ತ ಬಂದಿದೆ. ಸಾಮಾನ್ಯವಾಗಿ ಗುಂಪುಗಳಲ್ಲಿ ವಾಸಿಸುವ ಇವು ಮನುಷ್ಯರನ್ನು ಅಷ್ಟಾಗಿ ಇಷ್ಟಪಡುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಸಿಂಗಳೀಕ ಎಂದರೆ ಸ್ಥಳೀಯ ಭಾಷೆಯಲ್ಲಿ ಹೇಳುವುದಾದರೆ ‘ಸಿಂಹದಂತೆ ಇರುವ’ ಎಂಬ ಅರ್ಥವನ್ನು ಕೊಡುತ್ತದೆ. ಅದರ ಬಾಲ ಸಿಂಹದ ಹಾಗೆ ಇರುತ್ತದೆ.
ಐಯುಸಿಎನ್ (ಖಜಛಿ ಐಠಿಛ್ಟಿ್ಞಠಿಜಿಟ್ಞಚ್ಝ ಖ್ಞಿಜಿಟ್ಞ ್ಛ್ಟ ಇಟ್ಞಠಛ್ಟಿಡಚಠಿಜಿಟ್ಞ ಟ್ಛ ಘಚಠ್ಠಿ್ಟ) ವರದಿ ಪ್ರಕಾರ 2003ರ ಹೊತ್ತಿಗೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಅರಣ್ಯ ಪ್ರದೇಶಗಳಲ್ಲಿ ಸುಮಾರು ಮೂರರಿಂದ ಮೂರೂವರೆ ಸಾವಿರ ಸಿಂಗಳೀಕಗಳು ಇರಬಹುದೆಂದು ಅಂದಾಜಿಸಲಾಗಿತ್ತು. ಅವು ಸಾಮಾನ್ಯವಾಗಿ ಇರುವ ಪ್ರದೇಶಗಳಲ್ಲಿ ಕೇರಳದ ಸೈಲೆಂಟ್ ವ್ಯಾಲಿ ಕೂಡ ಒಂದು. 1993-96 ಅವಧಿಯಲ್ಲಿ ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್ ವ್ಯಾಪ್ತಿಯಲ್ಲಿ ಸಿಂಗಳೀಕಗಳ 14 ಗುಂಪುಗಳನ್ನು ಗುರುತಿಸಲಾಗಿತ್ತು. ಕೇರಳದಲ್ಲಿ 1977ರಿಂದ 80ರವರೆಗಿನ ಅವಧಿಯಲ್ಲಿ ನಡೆದ ಸೇವ್ ಸೈಲೆಂಟ್ ವ್ಯಾಲಿ ಅಭಿಯಾನದಲ್ಲಿ ಸಿಂಗಳೀಕ ಸಂತತಿ ರಕ್ಷಣೆ ಕೂಡ ಒಂದು ಮುಖ್ಯ ವಿಷಯವಾಗಿತ್ತು. ತಮಿಳುನಾಡಿನ ತೇನಿ ಜಿಲ್ಲೆಯಲ್ಲಿ 2007ರಲ್ಲಿ ನಡೆದ ಅಧ್ಯಯನದಲ್ಲಿ ಸುಮಾರು 250 ಸಿಂಗಳೀಕಗಳು ಇರುವುದನ್ನು ಗುರುತಿಸಲಾಗಿತ್ತು. ಆದರೆ ಆ ಪ್ರದೇಶದಲ್ಲಿ ಅದುವರೆಗೆ ಸಿಂಗಳೀಕಗಳು ಕಂಡುಬಂದಿರಲಿಲ್ಲವಾದ್ದರಿಂದ ಈ ಅಧ್ಯಯನವು ಆಶಾದಾಯಕ ಅಂಶವನ್ನು ಹೊರಗೆಡಹಿತ್ತು; ಪರಿಸರ ಪ್ರಿಯರಲ್ಲಿ ಸಂತಸ ತಂದಿತ್ತು.
ತಮಿಳುನಾಡಿನ ತಿರುನೆಲ್ವೇಲಿ, ದಿಂಡಿಗಲ್ ಮತ್ತು ಕೊಯಮತ್ತೂರು ಜಿಲ್ಲೆಗಳ ಕೆಲ ವಿರಳ ಪ್ರದೇಶಗಳಲ್ಲಿ ಸಿಂಗಳೀಕಗಳು ಇರುವುದನ್ನು ಗುರುತಿಸಲಾಗಿದೆ. ತಮಿಳುನಾಡಿನಲ್ಲಿ ಸಿಂಗಳೀಕ ಸಂರಕ್ಷಣೆ ಉದ್ದೇಶದಿಂದ ಎತ್ತರದ ಮರಗಳ ಮೇಲೆ ತೂಗುಸೇತುವೆ ರೀತಿ ಮಾಡಿ ಸಿಂಗಳೀಕಗಳು ಕೆಳಗೆ ಬರದ ಹಾಗೆ ಮಾಡುವ ಯತ್ನಗಳು ಸಹ ನಡೆದಿವೆ. ಅವು ಕೆಳಗೆ ಬಂದು ಅಪಾಯಕ್ಕೆ ಸಿಲುಕಬಾರದು ಎಂಬುದು ಇದರ ಉದ್ದೇಶ. ಸಿಂಗಳೀಕಗಳು ಸಾಮಾನ್ಯವಾಗಿ ಗುಂಪುಗಳಲ್ಲಿ, ಎತ್ತರದ ಮರಗಳ ಮೇಲೆ ವಾಸಿಸುವ ರೂಢಿ ಹೊಂದಿವೆ. ಮನುಷ್ಯರನ್ನು ಕಂಡರೆ ಇವಕ್ಕೆ ನಾಚಿಕೆ. ಅಂದರೆ ಮಾನವನ ಸಹವಾಸವನ್ನು ಅವು ಇಷ್ಟಪಡುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಬಹುಶಃ ಮಾನವನ ಸಹವಾಸ ಅಪಾಯಕ್ಕೆ ಆಹ್ವಾನ ಎಂಬುದು ಅವುಗಳ ಲೆಕ್ಕಾಚಾರವಾಗಿರಬಹುದು!
ಈ ಪ್ರಾಣಿಯ ರಕ್ಷಣೆ ಉದ್ದೇಶದಿಂದ ನಮ್ಮ ಶರಾವತಿ ಕಣಿವೆ ಪ್ರದೇಶದಲ್ಲಿ ಕೆಲ ಭಾಗಗಳನ್ನು ಗುರುತಿಸಲಾಗಿದ್ದು ಸಿಂಗಳೀಕ ಸಂರಕ್ಷಣಾ ಪ್ರದೇಶ ಎಂದು ಬೋರ್ಡ್ ಹಾಕಲಾಗಿದೆ. ಅದೃಷ್ಟ ಇದ್ದವರಿಗೆ ಸಿಂಗಳೀಕ ದರ್ಶನ ಆದರೂ ಆದೀತು. ಮೊದಲೇ ಹೇಳಿದಂತೆ, ಸಿಂಗಳೀಕಗಳ ವಾಸಸ್ಥಾನಗಳಲ್ಲಿ ಆಗುಂಬೆ ಘಾಟಿ ಸಹ ಪ್ರಮುಖವಾದುದು. ಈ ಘಟ್ಟ ಬಲು ಘಾಟಿಯೇ ಸರಿ.
ಹೆಚ್ಚು ಮಳೆಯ ಕಾರಣಕ್ಕೆ ದಕ್ಷಿಣದ ಚಿರಾಪುಂಜಿ ಎಂದೇ ಕರೆಯಲ್ಪಡುವ ಈ ಪ್ರದೇಶ, ನಿಸರ್ಗ ಸೌಂದರ್ಯದ ನೆಲೆವೀಡು. ಇಲ್ಲಿನ ರಸ್ತೆಯಲ್ಲಿ ವಾಹನ ಚಾಲನೆ ಥ್ರಿಲ್ ಕೊಡುತ್ತದೆ. ತುಸು ಎಚ್ಚರ ತಪ್ಪಿದರೆ ಅಷ್ಟೇ ಅಪಾಯಕರ ಕೂಡ. ಒಂದು ಕಡೆ ನೂರಾರು ಅಡಿ ಆಳದ ಕಣಿವೆ. ಇನ್ನೊಂದು ಕಡೆ ಎತ್ತರದ ಬೆಟ್ಟ ಸಾಲು. ಅಂದಹಾಗೆ ಇದು ಕಾಳಿಂಗ ಸರ್ಪಗಳು ಹೆಚ್ಚು ಇರುವ ಪ್ರದೇಶ ಸಹ. ಇಲ್ಲಿನ ರಸ್ತೆ ಹಾವಿನ ನಡಿಗೆಯ ಹಾಗೆ ಅಂಕುಡೊಂಕು.
ಈಚೆಗೆ ಆಗುಂಬೆ ಘಾಟಿಯಲ್ಲಿ ಬರುವಾಗ ಒಂದು ಅಪರೂಪದ ದೃಶ್ಯ ಕಾದಿದೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಆಗುಂಬೆ ಘಟ್ಟ ಏರುತ್ತ ಸುಮಾರು ದೂರ ಬಂದಾಗ ರಸ್ತೆ ಪಕ್ಕದಲ್ಲಿ ಸಿಂಗಳೀಕ ದರ್ಶನ ನೀಡಬೇಕೆ! ಹಿಂದೆ ಶರಾವತಿ ಕಣಿವೆ ಪ್ರದೇಶದಲ್ಲಿ ನೋಡಿದ್ದುದರಿಂದ ಮೊದಲ ನೋಟಕ್ಕೇ ಇದು ಸಿಂಗಳೀಕ ಎಂದು ಗೊತ್ತಾಗಿ ಹೋಯಿತು. ಅಯಾಚಿತವಾಗಿ ಕಾಲು ಬ್ರೇಕ್ ಅನ್ನು ತುಳಿದಿತ್ತು. ರಸ್ತೆ ಪಕ್ಕದಲ್ಲೇ ಕೈ ಅಳತೆ ದೂರದಲ್ಲಿ ನಾಲ್ಕಾರು ಸಿಂಗಳೀಕಗಳು! ಥಟ್ಟನೆ ಮೊಬೈಲ್ ಮೂಲಕ ಫೋಟೋ ತೆಗೆಯಲು ಪತ್ನಿಗೆ ಹೇಳಿದೆ. ಅಷ್ಟರಲ್ಲಿ ಒಂದು ಸಿಂಗಳೀಕವಂತೂ ಕಾರಿನ ಕನ್ನಡಿ ಮೇಲೇ ಜಿಗಿದು ಕೂತಿತು. ಬಹುಶಃ ತಿಂಡಿ ಕೊಡುತ್ತಾರೆ ಎಂಬ ನಿರೀಕ್ಷೆ ಇರಬೇಕು.
ಅಷ್ಟರಲ್ಲಿ ಇನ್ನೂ ನಾಲ್ಕಾರು ಸಿಂಗಳೀಕಗಳು ಕುಣಿಕುಣಿದು ಅತ್ತ ಬಂದವು. ಒಂದಂತೂ ಎರಡೂ ಕಾಲು ಮೇಲೆತ್ತಿ ಡಾನ್ಸ್ ಭಂಗಿ ತೋರಿತು. ಫೋಟೋ ತೆಗೆಯುವುದನ್ನು ಮರೆತು ಇವುಗಳ ವೈಭವ ನೋಡುವುದೇ ಕೆಲಸವಾಯಿತು. ಅಷ್ಟರಲ್ಲಿ ಹಿಂದಿನಿಂದ ವಾಹನಗಳ ಸಾಲು... ಮತ್ತೆ ಮತ್ತೆ ತಿರುಗಿ ನೋಡುತ್ತ ಒಲ್ಲದ ಮನಸ್ಸಿನಿಂದಲೇ ಮುಂದೆ ತೆರಳಬೇಕಾಯಿತು. ಎರಡು ವಿಶಿಷ್ಟ ಪ್ರದೇಶಗಳಲ್ಲಿ ವಿಶಿಷ್ಟ ಪ್ರಾಣಿಯನ್ನು ಕಂಡ ಭಾಗ್ಯ ಜೀವನದಲ್ಲಿ ಮರೆಯಲಾಗದ ಅನುಭವ. ಫೋಟೋಗೆ ಪೋಸ್ ಕೊಡುವ ರೀತಿಯಲ್ಲಿ ಕಾಲುಗಳನ್ನು ಎತ್ತರಿಸಿ ನಿಂತ ಆ ಚಿತ್ರ ಚಿತ್ತದಲ್ಲಿ ಹೆಪ್ಪುಗಟ್ಟಿ ನಿಂತಿದೆ. ಈ ಭಾಗ್ಯ ಒದಗಿಸಿದ ಸಿಂಗಳೀಕಗಳಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ!
ಕಾಡದಾರಿಯಲ್ಲಿ ಪ್ರಾಣಿಗಳ ದರ್ಶನ ಖುಷಿ ಕೊಡುತ್ತದೆ ನಿಜ. ಆದರೆ ಅವುಗಳ ಪರಿಸ್ಥಿತಿ ನೆನೆದಾಗ ಬೇಸರ ಸಹ ಆಗುತ್ತದೆ. ಕೆಲವು ಪ್ರಾಣಿಗಳು ಜನರ ಪ್ರಾಣಹಾನಿ ಮಾಡುವಾಗ, ಬೆಳೆ ನಾಶ ಮಾಡುವುದನ್ನು ಕಂಡಾಗ ಅವುಗಳ ಬಗ್ಗೆ ಆಕ್ರೋಶ ಮೂಡುವುದು ಸಹಜ. ಪ್ರಾಣಿ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಿ ಎಂದು ಸರ್ಕಾರದ ಮೇಲೆ ಒತ್ತಡ ಬೀಳುತ್ತದೆ. ರೈತರ ಸಂಕಟ-ಅಸಹಾಯಕತೆ ಅರ್ಥವಾಗುವಂಥದೇ. ಆದರೆ ನಿಸರ್ಗವು ಈ ಜಗತ್ತನ್ನು ಮಾನವನಿಗೆ ಮಾತ್ರ ಸೃಷ್ಟಿಸಿಲ್ಲ. ಈ ಜಗತ್ತಿನ ಮೇಲೆ, ಪ್ರಕೃತಿಯ ಮೇಲೆ ಎಲ್ಲರಿಗೂ ಹಕ್ಕು ಇದೆ ಎಂಬುದನ್ನು ಅರಿತಾಗ, ಪ್ರಾಣಿ- ಮಾನವ ಸಂಘರ್ಷದ ಕಾರಣ ಮತ್ತು ಪರಿಹಾರಗಳು ಹೊಳೆಯುತ್ತ ಹೋಗುತ್ತವೆ.
ಕೊನೇ ಮಾತು: ಸಿಂಗಳೀಕದ ಗುಂಗಿನಲ್ಲಿ ಇರುವಾಗಲೇ ಯಾಕೋ ಅರ್ಜುನನ ನೆನಪಾಯಿತು. ಎಂಥ ಭವ್ಯ ನಿಲುವು! ಎಂಥ ಗಂಭೀರ ನಡಿಗೆ! ಚಿನ್ನದ ಅಂಬಾರಿ ಮೇಲೆ ಆಸೀನಳಾದ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಸಾಗಿದ ಭಾಗ್ಯವಿಶೇಷ ಅರ್ಜುನನದು. ಮೈಸೂರು ದಸರೆಯಲ್ಲಿ ಅರ್ಜುನನದೇ ಒಂದು ವಿಶಿಷ್ಟ ಅಧ್ಯಾಯ. ಅಂತಹ ಆನೆಗೆ ಎಂತಹ ಸಾವು ಬಂತು... ಅಂತಹ ದೈತ್ಯದೇಹಿ ಆನೆ ಕೆಲವೇ ಕ್ಷಣಗಳಲ್ಲಿ ಗತಪ್ರಾಣವಾಗಿ ಬಿದ್ದ ಆ ಚಿತ್ರ ನೆನೆದರೆ ಈಗಲೂ ಮನದಲ್ಲಿ ವಿಷಾದದ ತರಂಗಗಳು ಏಳುತ್ತವೆ. ಅಂಬಾರಿ ಹೊತ್ತ ಅರ್ಜುನನ ಚಿತ್ರ ಕನ್ನಡಿಗರ ಮನದಲ್ಲಿ ಚಿರಸ್ಥಾಯಿ. ಅರ್ಜುನ ಮತ್ತೆ ಹುಟ್ಟಿ ಬಾ ಎಂದು ಆಶಿಸಬಹುದಷ್ಟೆ!