

ಇವತ್ತು ನಮ್ಮ ಆರ್ಥಿಕ ಸ್ಥಿತಿಗತಿಗಳಿಂದ, ಉದ್ಯಮಗಳಿಂದ ಜಗತ್ತನ್ನು ಶ್ರೀಮಂತ ಮಾಡುವುದಕ್ಕೆ ಹೊರಟಿದ್ದೇವೆ. ಇಷ್ಟಕ್ಕೂ ಹೆಚ್ಚು ಕಾರ್ಗಳು, ಬಂಗಲೆಗಳು ಇರುವುದೇ ಶ್ರೀಮಂತಿಕೆಯಾ? ನಮ್ಮ ದೇಶದಲ್ಲಿ ಎಂಥ ಅದ್ಭುತ ಆಧ್ಯಾತ್ಮಿಕ ಚಿಂತನೆ ಇದೆ. ಬುದ್ಧ ಅರಮನೆಯನ್ನು ತ್ಯಜಿಸಿ ಕಾಡಿನಲ್ಲಿ ಬದುಕಿದ. ಜೀವನದ ಬಗ್ಗೆ ಸರಳವಾಗಿ ಹೇಳಿದ. ನಮ್ಮ ಅನೇಕ ಸಾಧು-ಸಂತರು ಜೀವನದ ಬಗ್ಗೆ ಹೇಳಿದರು. ಅದರ ತಾತ್ಪರ್ಯವನ್ನು ಅರ್ಥ ಮಾಡಿಕೊಂಡರೆ, ನಾವು ಜೀವನ ನಡೆಸುವುದು ಸುಲಭವಾಗಬಹುದು.
ಪರಿಸರ ಯಾಕೆ ಹಾಳಾಗುತ್ತಿದೆ ಎಂಬ ಕುರಿತು ಸ್ಟಾನ್ಫೋರ್ಡ್ ಯೂನಿವರ್ಸಿಟಿ ಕೆಲವು ವರ್ಷಗಳ ಹಿಂದೆ ಸಂಶೋಧನೆ ನಡೆಸಿತ್ತು. ಅದರ ಪ್ರಕಾರ, ನಮ್ಮ ಬೇಡಿಕೆಗಳು ಹೆಚ್ಚಾಗಿವೆ, ಜನಸಂಖ್ಯೆ ಜಾಸ್ತಿಯಾಗಿದೆ, ಜನರಿಗೆ ಸುಲಭವಾಗಿ ದುಡ್ಡು ಮಾಡಬೇಕು ಎಂಬ ಲಾಲಸೆ ಹುಟ್ಟಿದೆ. ಈ ಮೂರು ಕಾರಣಗಳು ಪರಿಸರದ ಮೇಲೆ ಪ್ರಭಾವ ಬೀರುತ್ತಿದ್ದು, ಇದರಿಂದ ಪರಿಸರ ಬದಲಾಗಿ, ಭೂತಾಪಮಾನ ಜಾಸ್ತಿಯಾಗಿ, ಜಗತ್ತು ಹಾಳಾಗುತ್ತಿದೆ. ನಾವು ಈ ಜಗತ್ತು ಮತ್ತು ಗ್ರಹವನ್ನು ಉಳಿಸುವ ಕುರಿತು ಚಿಂತನೆ ಮಾಡಬೇಕು. ನಿಜ ಹೇಳಬೇಕೆಂದರೆ, ನಾವು ಉಳಿಸಬೇಕು ಅಂತೇನಿಲ್ಲ. ಅದು ತನ್ನಿಂತಾನೇ ಹೇಗೋ ಉಳಿಯಬಹುದು. ಆದರೆ, ಮುಖ್ಯವಾಗಿ ಮೊದಲು ನಾವು ಉಳಿಯಬೇಕು. ಪರಿಸರ ಉಳಿಸಬೇಕು ಎನ್ನುವ ಸ್ವಾರ್ಥವಿಲ್ಲದಿದ್ದರೆ ಬಹಳ ಕಷ್ಟವಾಗುತ್ತದೆ. ಹೀಗೆಯೇ ಮುಂದುವರಿದರೆ, ಮುಂದೊಂದು ದಿನ ಊಟ ಸಿಗುವುದಿಲ್ಲ, ಗಾಳಿ ಸಿಗುವುದಿಲ್ಲ, ನೀರು ಸಿಗುವುದಿಲ್ಲ. ಹಾಗಾಗಿ, ನಾವು ಬದುಕಬೇಕು, ನಮ್ಮ ಮಕ್ಕಳು-ಮೊಮ್ಮಕ್ಕಳು ಉಳಿಯಬೇಕು ಎಂದರೆ ನಾವು ವಿವೇಕಿಗಳಾಗಬೇಕು. ಇದೆಲ್ಲ ಸರಿ ಹೋಗಬೇಕು ಎಂದರೆ ಮೂರು ಜನ ತೋರಿದ ಮಾರ್ಗದಲ್ಲಿ ನಡೆಯಬೇಕು ಎಂದು ಅದೇ ಸ್ಟಾನ್ಫೋರ್ಡ್ ಯೂನಿವರ್ಸಿಟಿ ಹೇಳಿದೆ. ಮಹಾತ್ಮ ಗಾಂಧಿ, ಜರ್ಮನಿಯ ಶುಮಾಕರ್ ಮತ್ತು ಅಮೆರಿಕಾದ ಥೋರೋ ಹೇಳಿದಂತೆ ಬದುಕಿದರೆ, ಜೀವನ ಖಂಡಿತ ಸುಧಾರಿಸುತ್ತದೆ ಎಂದು ಅದು ಹೇಳಿದೆ.
ಶುಮಾಕರ್ ‘ದಿ ಸ್ಮಾಲ್ ಈಸ್ ಬ್ಯೂಟಿಫುಲ್’ ಎಂಬ ಪುಸ್ತಕ ಬರೆದಿದ್ದಾರೆ. 1973ರಲ್ಲಿ ಬಿಡುಗಡೆಯಾದ ಈ ಪುಸ್ತಕವು ಜಗತ್ತಿನಾದ್ಯಂತ ಅಪಾರ ಜನಮನ್ನಣೆ ಗಳಿಸಿದೆ. ಈ ಪುಸ್ತಕದಲ್ಲಿ, ಸಣ್ಣದಾಗಿ ವಿಚಾರ ಮಾಡುವುದು ಎಷ್ಟು ಮುಖ್ಯ ಎಂದು ಶುಮಾಕರ್ ಹೇಳಿದ್ದಾರೆ. ಏನೇ ಯೋಜನೆಗಳನ್ನು ಮಾಡಿದರೂ, ಸಣ್ಣ ಮಟ್ಟದಲ್ಲಿ ಮಾಡಿ. ಬಹಳ ದೊಡ್ಡದಕ್ಕೆ ಕೈಹಾಕಿ ನಿಮ್ಮ ಕೈತಪ್ಪಿ ಹೋಗದಂತೆ ತಡೆಯಿರಿ. ದೊಡ್ಡ ಯೋಜನೆಗಳೇ ದೊಡ್ಡ ಅಪಘಾತಕ್ಕೆ ಮತ್ತು ದೊಡ್ಡ ಸಮಸ್ಯೆಗಳಿಗೆ ಕಾರಣ ಎಂದು ಶುಮಾಕರ್ ಹೇಳುತ್ತಾರೆ. ಮನುಷ್ಯ ಅಂತಸ್ತಿನಲ್ಲಿ ದೊಡ್ಡವನಾಗಿರಲಿ, ಚಿಕ್ಕವನಾಗಿರಲಿ, ಮುಖ್ಯವಾಗಿ ಬೇಕಾಗಿರುವುದು ನೆಮ್ಮದಿ ಮತ್ತು ಸಂತೋಷ ಅಷ್ಟೇ. ಅದು ಸಿಗಬೇಕೆಂದರೆ ಮೊದಲು ಸರಳವಾಗಿ ಬದುಕುವುದಕ್ಕೆ ಕಲಿಯಬೇಕು. ದೊಡ್ಡದೊಡ್ಡದನ್ನು ಮಾಡುವುದರಿಂದ ಸಂತೋಷ, ನೆಮ್ಮದಿ, ಬುದ್ಧಿ ಎಲ್ಲವೂ ಹಾಳಾಗುತ್ತದೆ ಎಂಬುದು ಶುಮಾಕರ್ ಅಭಿಪ್ರಾಯ.
ಗಾಂಧಿ ಸಹ ‘ಈ ಜಗತ್ತು ಎಲ್ಲರ ಅವಶ್ಯಕತೆಗಳನ್ನು ಪೂರೈಸುತ್ತದೆ. ಆದರೆ, ಅವರ ದುರಾಸೆಯನ್ನಲ್ಲ’ ಎಂದು ಹೇಳಿದ್ದರು. ಎಂಥ ಅದ್ಭುತವಾದ ಮಾತು. ಗಾಂಧಿ ಪರಿಸರವಾದಿಯೇನೂ ಅಲ್ಲ. ನಮ್ಮ ವಿಚಾರ, ನಡವಳಿಕೆ, ಬೇಡಿಕೆ, ಜೀವನ, ಸಂತೋಷದ ಬಗ್ಗೆ ಗಾಢವಾಗಿ ಚಿಂತನೆ ಮಾಡಿದರೆ, ಪರಿಸರ ಉಳಿಯುತ್ತದೆ. ಪರಿಸರವನ್ನು ಅಭ್ಯಾಸ ಮಾಡಿ ಉಳಿಸಬೇಕಾಗಿಲ್ಲ. ನಮ್ಮ ಮನಸ್ಥಿತಿ ಚೆನ್ನಾಗಿರಬೇಕು ಅಷ್ಟೇ. ಈ ಜಗತ್ತಿನಲ್ಲಿರುವುದು ನಾವೊಬ್ಬರೇ ಅಲ್ಲ, ಬೇರೆಯವರೂ ಇದ್ದಾರೆ, ಅವರೂ ಚೆನ್ನಾಗಿರಬೇಕು, ಅವರಿಗೂ ಬೇಡಿಕೆಗಳಿರುತ್ತವೆ, ಎಲ್ಲವೂ ನಮಗೇ ಬೇಕು ಎಂದರೆ ಅವರೇನು ಮಾಡಬೇಕು? ಎಂಬ ಬಗ್ಗೆಯೂ ಯೋಚಿಸಬೇಕು. ಹಾಗೆ ಮನುಷ್ಯನಿಗೆ, ಬೇರೆಯವರ ಹತ್ತಿರ ಎಲ್ಲವೂ ಇದೆ, ನಮ್ಮ ಹತ್ತಿರ ಏನೂ ಇಲ್ಲ ಎಂದು ಅನಿಸಿಬಿಟ್ಟರೆ ಸಹಜವಾಗಿಯೇ ಘರ್ಷಣೆಗಳು ಪ್ರಾರಂಭವಾಗುತ್ತವೆ. ಹಾಗಾಗಿ, ಶ್ರೀಮಂತಿಕೆಯನ್ನು ಕಡಿಮೆ ಮಾಡಬೇಕು.
ಇನ್ನು ಥೋರೋ. ಅಮೆರಿಕಾದಲ್ಲಿ ಒಂದು ಸಾವಿರ ಕಿಲೋಮೀಟರ್ ನಡೆದು ಪರಿಸರ ಜಾಗೃತಿ ಮೂಡಿಸಿದರು. ‘ನೀವು ಹೀಗೆ ನಡೆಯುತ್ತ ಹೋದರೆ, ಪರಿಸರ ಉಳಿಸುವುದು ಹೇಗೆ? ನಡೆಯುವ ಬದಲು ಕಾರಿನಲ್ಲಿ ಪ್ರಯಾಣ ಮಾಡಿ’ ಎಂದು ಹಲವರು ಅವರಿಗೆ ಸಲಹೆ ನೀಡಿದರು. ಕಾರಿನಲ್ಲಿ ಹೋದರೆ ಕಾಡೆಲ್ಲಿ ಕಾಣಿಸುತ್ತದೆ? ಹುಲ್ಲೆಲ್ಲಿ ಕಾಣಿಸುತ್ತದೆ? ಮಣ್ಣೆಲ್ಲಿ ಕಾಣಿಸುತ್ತದೆ? ಎಂದು ನಡೆದುಕೊಂಡೇ ಓಡಾಡಿದರು ಥೋರೋ. ನಡೆದು ಹೋಗುವುದರಿಂದಲೇ ಎಲ್ಲವೂ ಅರ್ಥವಾಗುವುದು ಎಂದರು. ಅವರು ಸಿಟಿ ಬಿಟ್ಟು, ಸಣ್ಣ ಹಳ್ಳಿಗೆ ಹೋಗಿ ಎರಡೆಕರೆ ಜಮೀನು ಕೊಂಡು ವ್ಯವಸಾಯ ಮಾಡಿದರು. ತಾನೇ ಮನೆ ಕಟ್ಟಿಕೊಂಡರು. ಹಣ್ಣು-ತರಕಾರಿ ಬೆಳೆದರು. ಜತೆಗೆ ಪರಿಸರ ಜಾಗೃತಿ ಮೂಡಿಸಿದರು.
ನಾನು ಮೂಲತಃ ಧಾರವಾಡದವನು. ಮುಂಚೆ ಧಾರವಾಡದಿಂದ ಎರಡು ಕಿಲೋಮೀಟರ್ ದೂರಕ್ಕೆ ಹೋದರೆ, ಅಲ್ಲಿ ಕಾಡು ಸಿಗುತ್ತಿತ್ತು. ಈಗ ದಾಂಡೇಲಿಯವರೆಗೆ ಹೋದರೂ ಸಿಗುವುದಿಲ್ಲ. ಕೆಲವು ದಶಕಗಳ ಹಿಂದೆ ಪೇಪರ್ ಮಿಲ್ಗಳು ಬಂದು ಮರಗಳನ್ನು ಕಡಿದರು. ಅದರಿಂದ ಆನೆಗಳು ಹೋದವು. ಕಾಡುಕೋಣ, ನಾಗರಹಾವು, ಹುಲ್ಲು ಎಲ್ಲವೂ ಮಾಯವಾಯಿತು. ಇವಿಷ್ಟೇ ಅಲ್ಲ, ಅದರಿಂದ ಮಣ್ಣು ಹೋಯಿತು, ಮಳೆ ಕಡಿಮೆಯಾಯಿತು. ದಾಂಡೇಲಿಯಲ್ಲೇ ಮಳೆ ಕಡಿಮೆಯಾದರೆ, ಹುಬ್ಬಳ್ಳಿ, ಧಾರವಾಡ, ಸವದತ್ತಿಗೆ ಮಳೆ ಎಲ್ಲಿಂದ ಬರಬೇಕು? ನಾನು ಧಾರವಾಡದಲ್ಲಿದ್ದಾಗ, ಸ್ನೇಹಿತರೆಲ್ಲ ಪ್ರತಿದಿನ ಕಲಿಗೇರಿಗೆ ಈಜುವುದಕ್ಕೆ ಹೋಗುತ್ತಿದ್ದೆವು. ಸ್ವಿಮ್ಮಿಂಗ್ ಮುಗಿಸಿ ಕೌಳಿ ಹಣ್ಣು ತಿನ್ನುವುದಕ್ಕೆ ಕಾಡಿಗೆ ಹೋಗುತ್ತಿದ್ದೆವು. ಕೌಳಿ ಹಣ್ಣು, ನೇರಳೆ ಹಣ್ಣು, ಪೇರಲೆ, ಪರಂಗಿ ಹಣ್ಣು ಇವೆಲ್ಲ ತಿಂದೇ ಬೆಳೆದವರು ನಾವು. ಇವತ್ತು ಕೌಳಿ ಹಣ್ಣು ಸಿಗಬೇಕೆಂದರೆ, 40-50 ಕಿಲೋಮೀಟರ್ ದೂರ ಸಾಗಬೇಕು. ಅಲ್ಲೆಲ್ಲ ಮನೆಗಳನ್ನು ಕಟ್ಟಿಬಿಟ್ಟಿದ್ದಾರೆ. ನಮ್ಮ ಕೆರೆಗಳನ್ನು, ನದಿಗಳನ್ನು, ಹೊಂಡಗಳನ್ನು, ಬಾವಿಗಳನ್ನು ಉಳಿಸಿ, ವ್ಯವಸಾಯ ಮಾಡಿದ್ದರೆ, ನಾವು ಬಹಳ ಸುಸ್ಥಿರವಾಗಿ ಇರುತ್ತಿದ್ದೆವು. ಅದನ್ನು ಬಿಟ್ಟು ನಾವು ಸಿಟಿಗಳನ್ನು ಕಟ್ಟಿದೆವು. ಸಾವಿರಾರು ಕಿಲೋಮೀಟರ್ಗಳ ರಸ್ತೆಗಳನ್ನು ಮಾಡಿದೆವು. ಕಾಡನ್ನು ನಾಶ ಮಾಡಿ, ಅದರ ಮೇಲೆ ನಾಗರಿಕತೆಯನ್ನು ಕಟ್ಟುತ್ತಿದ್ದೇವೆ. ಮುಂದೆ ನೀರು ಸಿಗಲಿಲ್ಲ ಎಂದರೆ, ಎಷ್ಟು ದುಡ್ಡು ಇದ್ದರೆ ಏನು ಪ್ರಯೋಜನ? ಎಷ್ಟು ದುಡ್ಡು ಕೊಟ್ಟರೂ ಏನೂ ಸಿಗುವುದಿಲ್ಲವೆಂದರೆ, ಈ ಶ್ರೀಮಂತಿಕೆ ಯಾಕೆ?
ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಚಿಸಬೇಕು. ನಮ್ಮ ಅಗತ್ಯಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಆರ್ಥಿಕತೆ ಹುಟ್ಟಿದ್ದೇ ಪರಿಸರದಿಂದ. ಪರಿಸರದ ಮೇಲೆ ಆರ್ಥಿಕತೆ ನಿಂತಿದೆ. ಹಾಗಾಗಿ, ಅದನ್ನು ಕ್ಷೀಣಿಸುವುದಕ್ಕೆ ಬಿಡಬಾರದು. ಸುಸ್ಥಿರವಾಗಿ ಇಡುವುದಕ್ಕೆ ಪ್ರಯತ್ನ ಮಾಡಬೇಕು. ಅದು ಸಾಧ್ಯವಾಗಬೇಕೆಂದರೆ, ನಮ್ಮ ಜೀವನ ಬಹಳ ಸರಳವಾಗಿರಬೇಕು. Simple Life always Leads to a Beautiful Life ಅಂತ ಹೇಳುವುದು ಇದೇ ಕಾರಣಕ್ಕೆ.
(ಲೇಖಕರು ಖ್ಯಾತ ನಟ ಮತ್ತು ಪರಿಸರವಾದಿ)