ಸಂಪಾದಕೀಯ: ಸುಪ್ರೀಂ ತೀರ್ಪು ಶ್ಲಾಘನೀಯ

Supreme Court
Published on

ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬೀದಿನಾಯಿಗಳ ಸಮಸ್ಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೇಶದಲ್ಲಿ 2024 ಒಂದೇ ವರ್ಷದಲ್ಲಿ 37 ಲಕ್ಷಕ್ಕೂ ಹೆಚ್ಚು ನಾಯಿಕಡಿತ ಪ್ರಕರಣಗಳು ಮತ್ತು ರೇಬಿಸ್​ನಿಂದ 54 ಸಾವುಗಳು ವರದಿಯಾಗಿದ್ದವು. ಈ ಆಘಾತಕಾರಿ ಅಂಕಿಅಂಶಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ಈ ಸಮಸ್ಯೆಯ ಆಳ-ಅಗಲದ ಬಗ್ಗೆ ಸಾಕಷ್ಟು ದೀರ್ಘವಾಗಿ ವಿಚಾರಣೆ ನಡೆಸಿತು. ‘ಆಸ್ಪತ್ರೆ, ರೈಲು ನಿಲ್ದಾಣ, ಬಸ್ ನಿಲ್ದಾಣ, ಶಾಲಾ-ಕಾಲೇಜುಗಳಂತಹ ಸಾರ್ವಜನಿಕ ಸ್ಥಳಗಳ ಸಮೀಪ ಬೀಡುಬಿಟ್ಟಿರುವ ಬೀದಿನಾಯಿಗಳನ್ನು ತಕ್ಷಣ ಹಿಡಿದು ಅವುಗಳಿಗೆಂದೇ ನಿರ್ವಿುಸಲಾಗುವ ಆಶ್ರಯತಾಣಗಳಿಗೆ ಸಾಗಿಸಬೇಕು. ಇದಲ್ಲದೆ, ಬೀದಿನಾಯಿಗಳು ಪ್ರವೇಶಿಸಲು ಸಾಧ್ಯವಾಗದಂತೆ ಸಾರ್ವಜನಿಕ ಸ್ಥಳಗಳ ಸುತ್ತಲೂ ಬೇಲಿ ಅಥವಾ ಗೋಡೆ ನಿರ್ವಿುಸಬೇಕು. ಪ್ರಾಣಿ ಜನನ ನಿಯಂತ್ರಣ ನಿಯಮಗಳ ಅನುಸಾರ ಲಸಿಕೆ ನೀಡಿ ಸಂತಾನಶಕ್ತಿಹರಣ ಮಾಡುವುದು ಸ್ಥಳೀಯ ಸಂಸ್ಥೆಗಳ ಕರ್ತವ್ಯ. ಹಾಗೆ ಮಾಡಿದ ನಂತರವೂ ಅವುಗಳನ್ನು ಸಾರ್ವಜನಿಕ ಸ್ಥಳಗಳ ಬಳಿ ವಾಪಸ್ ತಂದು ಬಿಡಬಾರದು. ಹಾಗೆ ಬಿಟ್ಟರೆ ಸಾರ್ವಜನಿಕ ಸಂಸ್ಥೆಗಳನ್ನು ಬೀದಿನಾಯಿಮುಕ್ತಗೊಳಿಸುವ ಉದ್ದೇಶವೇ ವಿಫಲವಾದಂತೆ ಆಗುತ್ತದೆ’ ಎಂದು ಸುಪ್ರೀಂಕೋರ್ಟ್ ತನ್ನ

ಆದೇಶದಲ್ಲಿ ತಿಳಿಸಿದೆ. ಈ ದಿಸೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು 8 ವಾರಗಳೊಳಗೆ ವರದಿ ಸಲ್ಲಿಸಬೇಕು ಎಂದೂ ನ್ಯಾಯಮೂರ್ತಿ ವಿಕ್ರಮ್ಾಥ್, ನ್ಯಾಯಮೂರ್ತಿ ಸಂದೀಪ್ ಮೆಹ್ತ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರನ್ನು ಒಳಗೊಂಡ ವಿಶೇಷ ಪೀಠ ತಾಕೀತು ಮಾಡಿದೆ. ಇದಲ್ಲದೆ, ಬೀಡಾಡಿ ದನಗಳು ಹಾಗೂ ಇತರ ಪ್ರಾಣಿಗಳು ಸಾರ್ವಜನಿಕ ರಸ್ತೆ, ಹೆದ್ದಾರಿ, ಎಕ್ಸ್​ಪ್ರೆಸ್​ವೇಗಳಲ್ಲಿ ಹೆಚ್ಚುತ್ತಿರುವುದನ್ನೂ ನ್ಯಾಯಪೀಠ ಪ್ರಸ್ತಾಪಿಸಿದೆ. ಹೆದ್ದಾರಿ ಮತ್ತು ಪ್ರಮುಖ ರಸ್ತೆಗಳಿಂದ ಅಂಥ ಪ್ರಾಣಿಗಳನ್ನು ತೆರವುಗೊಳಿಸಲು ಜಂಟಿ ಮತ್ತು ಸಂಘಟಿತ ಕಾರ್ಯåಚರಣೆಯನ್ನು ತಕ್ಷಣವೇ ಕೈಗೊಳ್ಳಬೇಕು. ಆ ಪ್ರಾಣಿಗಳನ್ನು ಗೋಶಾಲೆ ಅಥವಾ ನಿರ್ದಿಷ್ಟ ಆಶ್ರಯದಾಣಗಳಿಗೆ ಸ್ಥಳಾಂತರಿಸಬೇಕು ಎಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶಿಸಿದೆ.

ದೇಶದಲ್ಲಿ ಒಂದು ಅಂದಾಜಿನ ಪ್ರಕಾರ 8 ಕೋಟಿ ಬೀದಿನಾಯಿಗಳಿದ್ದು, ಆಶ್ರಯತಾಣಗಳ ಕೊರತೆ, ತ್ಯಾಜ್ಯ ನಿರ್ವಹಣೆಯ ಸಮಸ್ಯೆ ಮತ್ತು ಪ್ರಾಣಿಜನನ ನಿಯಂತ್ರಣ ಕಾರ್ಯಕ್ರಮದ ನಿಧಾನಗತಿಯ ಅನುಷ್ಠಾನದಿಂದಾಗಿ ಸಮಸ್ಯೆ ಉಲ್ಬಣಿಸಿದೆ. ರಾಜ್ಯ ಸರ್ಕಾರಗಳು ಸುಪ್ರೀಂಕೋರ್ಟ್​ನ ಈ ತೀರ್ಪನ್ನು ಕೇವಲ ಕಾಗದಕ್ಕೆ ಮೇಲೆ ಸೀಮಿತಗೊಳಿಸದೆ, ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು. ಬೀದಿನಾಯಿಗಳಿಗೆ ಜನನ ನಿಯಂತ್ರಣ ಲಸಿಕೆ ಹಾಕುವುದು, ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಸುಧಾರಣೆ, ಆಶ್ರಯತಾಣಗಳ ಸಂಖ್ಯೆ ಏರಿಕೆ, ಎನ್​ಜಿಒಗಳು- ಸ್ಥಳೀಯ ಸಂಘಟನೆಗಳ ಜತೆಗಿನ ಸಹಭಾಗಿತ್ವ ಹೆಚ್ಚಳ, ಜನಜಾಗೃತಿ ಅಭಿಯಾನ, ಕಡಿತ ಪ್ರಕರಣಗಳ ಸಮಯೋಚಿತ ನಿರ್ವಹಣೆ, ರೇಬಿಸ್ ಲಸಿಕೆಯ ಲಭ್ಯತೆ ಖಾತ್ರಿಪಡಿಸುವುದು ಮುಂತಾದ ಕ್ರಮಗಳನ್ನು ರಾಜ್ಯ ಸರ್ಕಾರಗಳು ಕೈಗೊಳ್ಳಬೇಕು. ಆಗ ಮಾತ್ರ ಸಮಸ್ಯೆ ನಿಜವಾದ ಅರ್ಥದಲ್ಲಿ ಪರಿಹಾರವಾಗಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net